ಜಗತ್ತಿನ ಎಲ್ಲ ಮಾನವರು ಪರಸ್ಪರ ಒಳಿತಿಗಾಗಿ ತಮ್ಮ ಜ್ಞಾನದ ಅರಿವನ್ನು ಬೇರೆಯವರೊಡನೆ ಹಂಚಿಕೊಳ್ಳುತ್ತಾ, ಅದನ್ನು ಮುಂದಿನ ಪೀಳಿಗೆಯ ಸ್ವಾವಲಂಬನೆಗಾಗಿ, ಉದ್ಧಾರಕ್ಕಾಗಿ, ಹೊಸ ಆವಿಷ್ಕಾರ ಹಾಗೂ ಅನ್ವೇಷಣೆಗಳಿಗೆ ಬಳಸಲು, ಅಧ್ಯಯನ ನಡೆಸಲು ಮತ್ತು ಅದರಿಂದ ಸಂಪಾದಿಸಿದ/ಸೃಷ್ಟಿಸಿದ ಹೊಸತನ್ನು ಮತ್ತೆ ಇತರರೊಡನೆ ಹಂಚಿಕೊಳ್ಳಲು ಸಾಧ್ಯವಾಗಿಸುವುದೇ ನಿಜವಾದ ಸ್ವಾತಂತ್ರ್ಯ..

ಅರಿವಿನ ಅಲೆಗಳು ತನ್ನ ಎರಡನೆ ವರ್ಷದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಈ ಅಂಶವನ್ನು ಮತ್ತೆ ಎತ್ತಿ ಹಿಡಿದಿದೆ. ಸಂಚಯದ ತಂಡ ಎಂದಿನಂತೆ ಹೊಸ ಲೇಖಕ/ಲೇಖಕಿಯರನ್ನು ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಬರೆಯಲು ಪ್ರೇರೇಪಿಸಿದೆ. ಹೀಗೆ ಸಮುದಾಯದ ಮುಖೇನ ಸಂಪಾದಿಸಿದ, ಕನ್ನಡದ ೧೦ ಹೊಸ ಅರಿವಿನ ಅಲೆಗಳ ಹರಿವು ನಿಮ್ಮ ಮುಂದಿದೆ. ಸಾಮಾನ್ಯನಿಗೆ ಜ್ಞಾನದ ಅರಿವನ್ನು ತಲುಪಿಸುವ ನಮ್ಮ ಈ ಕಾರ್ಯದಲ್ಲಿ ಬೆಂಬಲಿಸಿ, ಭಾಗವಹಿಸಿದ ಎಲ್ಲರಿಗೂ ನಮ್ಮ ತಂಡ ಧನ್ಯವಾದಗಳನ್ನು ಅರ್ಪಿಸುತ್ತದೆ. ಪರಿಸರ, ತಂತ್ರಜ್ಞಾನ, ಸಮಾಜ, ಸ್ವತಂತ್ರತೆ, ಸಮುದಾಯ, ವರ್ಚುಯಲ್ ಜಗತ್ತು, ಕಲೆ, ಇತಿಹಾಸ ಹೀಗೆ ಹೊಸ ವಿಷಯಗಳು ನಿಮ್ಮ ಗಣಕದ ಪರದೆಯ ಮೇಲೆ

ಸಂಚಯದ ಅರಿವಿನ ಅಲೆಗಳತಂಡದ ಈ ವರ್ಷದ ಇ-ಪುಸ್ತಕಕ್ಕೆ ಮುನ್ನುಡಿ ಬರೆದವರು ಪತ್ರಕರ್ತ ಚಾಮರಾಜ ಸವಡಿ. ಅರಿವನ್ನು ಹಲವಾರು ದಾರಿಗಳ ಮೂಲಕ ಸರಿಯಾದ ವ್ಯಕ್ತಿಗಳಿಗೆ ಸೇರಲು ಮಾಡುವುದು ಹೇಗೆ? ಪತ್ರಿಕೆ, ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮ ಹೀಗೆ ಹಲವಾರು ವಿಷಯಗಳ ಸುತ್ತಲೇ, ಕೆಲಸ ಮಾಡುತ್ತ, ತಂತ್ರಜ್ಞಾನದ ಬಳಕೆ ಇತ್ಯಾದಿಗಳ ಬಗ್ಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತಾ, ತಮ್ಮ ಅನುಭವಗಳನ್ನು, ಆಸಕ್ತಿಗಳನ್ನು ಹಂಚಿಕೊಳ್ಳುವ ಇವರು, ೨೦೧೨ರ ಅರಿವಿನ ಅಲೆಗಳನ್ನು ಎಲ್ಲರಿಗೆ ಪರಿಚಯಿಸಿದ್ದಾರೆ. ಹೊಸ ಲೇಖಕರನ್ನು ಉತ್ತೇಜಿಸುವ, ಹೊಸ ಪ್ರಯೋಗಗಳನ್ನು ಸ್ವಾಗತಿಸುವ ಇವರ ಉತ್ಸಾಹಕ್ಕೆ ನಾವು ಆಭಾರಿ.

ಪ್ರತಿಯೊಂದು ಸಂಚಿಕೆಗೂ ಅದರದ್ದೇ ಒಂದು ಸುಂದರ ಮುಖಪುಟ, ಅದಕ್ಕೆ ಬಲನೀಡುವ ಛಾಯಾಚಿತ್ರಗಳು, ಆ ಛಾಯಚಿತ್ರಗಳಿಗೆ ಡಿಜಿಟಲ್ ತಂತ್ರಜ್ಞಾನದಲ್ಲೊಂದಿಷ್ಟು ಚಮತ್ಕಾರದ ಮಂತ್ರ. ಇವೆಲ್ಲ ಅರಿವಿನ ಅಲೆಗಳ ಮೂಲ ಉದ್ದೇಶವನ್ನು ಸುಲಭವಾಗಿ ಚಿತ್ರದ ಮೂಲಕ ತಿಳಿಸಲು ಸಾಧ್ಯವಾಗಿಸಿವೆ. ಪವಿತ್ರ ತೆಗೆದ ಚಿತ್ರಗಳಿಗೆ ಮೂರ್ತರೂಪ ಕೊಟ್ಟಿರುವ ಮಂಸೋರೆಯ ಕೈಚಳಕ ಈಗಾಗಲೇ ನಿಮ್ಮ ಮುಂದಿದೆ.

ಇವರಿಬ್ಬರ ಕೊಡುಗೆ ಓದುಗರಿಗೂ ಮೆಚ್ಚುಗೆ ಆಗುತ್ತದೆ ಎಂದು ನಂಬುತ್ತೇವೆ. ಜೊತೆಗೆ ಸಂಚಿಕೆಯ ಎಲ್ಲ ಲೇಖನಗಳನ್ನು ಮತ್ತೆ ಮತ್ತೆ ತಿದ್ದಿ ತೀಡಿದ್ದು ಪವಿತ್ರ. ತಪ್ಪುಗಳೇನಾದರೂ ನುಸುಳಿದ್ದಲ್ಲಿ, ಅವುಗಳನ್ನು ಮತ್ತೆ ಕಂಡು ಹಿಡಿಯುವ ನಿಮ್ಮ ತಾಳ್ಮೆಗೆ ಧನ್ಯವಾದ.

ಇದೇ ಸಂದರ್ಭದಲ್ಲಿ, ಅರಿವಿನ ಅಲೆಗಳನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್ಗಳಲ್ಲಿ ಕೂಡ ಓದಲು ಸುಲಭವಾಗುವಂತೆ ಆಂಡ್ರಾಯ್ಡ್ ನಲ್ಲಿ ಲಭ್ಯವಾಗಿಸುವ ಕೆಲಸ ನಡೆದಿದೆ. ೨೦೧೨ರ ಸಂಚಿಕೆ ಈಗಾಗಲೇ ಗೂಗಲ್ ಪ್ಲೇನಲ್ಲಿ ಲಭ್ಯವಿದ್ದು, ೨೦೧೨ರ ಈ ಹೊಸ ಆವೃತ್ತಿ ಕೂಡ ನಿಮ್ಮ ಆಂಡ್ರಾಯ್ಡ್ ಫೋನ್ ಹೊಕ್ಕಲು ಇನ್ನು ಹೆಚ್ಚು ಸಮಯ ಬೇಕಿಲ್ಲ ಎಂದು ತಿಳಿಸಲು ಹರ್ಷಿಸುತ್ತೇವೆ.

ಕಳೆದ ವರ್ಷದ ಲೇಖನಗಳ ಜೊತೆಗೆ, ಈ ವರ್ಷದ ಲೇಖನಗಳನ್ನು ಪ್ರಕಟವಾದ ತಕ್ಷಣ ಓದಿ, ಇತರರೊಡನೆ ಹಂಚಿಕೊಳ್ಳುತ್ತಾ, ಪ್ರತಿಕ್ರಿಯೆಗಳನ್ನು ನೀಡಿದ ಎಲ್ಲ ಓದುಗರಿಗೆ ನಮ್ಮ ತಂಡ ಧನ್ಯವಾದಗಳು. ಓದುಗರು, ಬರೀ ಓದುಗರಾಗದೆ ಮುಂದಿನ ದಿನಗಳಲ್ಲಿ ಅರಿವಿನ ಅಲೆಗಳ ಹರಿವಿಗೆ ತಮ್ಮ ಕೊಡುಗೆಯನ್ನೂ ನೀಡಬೇಕೆಂದು ಕೋರುತ್ತೇವೆ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಮೂಲಕ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ, ಅಧ್ಯಯನ, ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಲು ಪ್ರೇರೇಪಿಸುವ ಸಮುದಾಯದ ಎಲ್ಲರಿಗೂ ಈ ವರ್ಷದ ಈ ಸಂಚಿಕೆ ಸಮರ್ಪಿತ.

ಎಂದಿನಂತೆ ಅರಿವಿನ ಅಲೆಗಳು ಕ್ರಿಯೇಟೀವ್ ಕಾಮನ್ಸ್ ನಡಿಯಲ್ಲಿ ಮುಕ್ತವಾಗಿ ಹಂಚಿಕೆಗೆ ಲಭ್ಯವಿದೆ. ನಮ್ಮ ತಂಡದ ಕಾರ್ಯಗಳೊಂದಿಗೆ ಕೈ ಜೋಡಿಸಲು ನಮಗೊಂದು ಮಿಂಚಂಚೆ ಕಳಿಸಲು ಮರೆಯಬೇಡಿ.

ಓಂಶಿವಪ್ರಕಾಶ್ ಎಚ್.ಎಲ್

ಸಂಪಾದಕರು, ಅರಿವಿನ ಅಲೆಗಳು ತಂಡ, ಸಂಚಯ