ಅರಿವಿನ ಅಲೆಗಳು

ನಿಮ್ಮ ಲೇಖನಗಳನ್ನು [email protected] ಗೆ ಕಳುಹಿಸಿ
Navigation Menu

ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಹೀಗೆ ಹತ್ತಾರು ವಿಷಯಗಳನ್ನು ಕನ್ನಡದಲ್ಲಿ ಬರೆಯಬಹುದು

ನೀವೂ ಪ್ರಯತ್ನಿಸಿ ಹಾಗೂ ನಿಮ್ಮ ಜ್ಞಾನದ ಹರಿವನ್ನು ಇತರರೊಡನೆ ಹಂಚಿಕೊಳ್ಳಿ...

೨೦೧೩ ಗಣರಾಜ್ಯೋತ್ಸವ – ಅಲೆ ೧೨ – ಅಣುವಿಕಿರಣ ಎಂಬ ಕತ್ತಿಯ ಅಲುಗಿನ ಅಂಚು

Posted on Jan 14, 2013 in 2013, ale3 | 0 comments

ಅಣುಶಕ್ತಿ, ಅದರ ಉತ್ಪಾದನೆ ಮತ್ತು ಅದರಿಂದ ಆಗಬಹುದಾದ ವಿನಾಶದ ಬಗ್ಗೆ, ೨-೨-೨೦೧೩ ರಿಂದ ೩-೨-೨೦೧೩ ಫೆಬ್ರವರಿವರೆಗೆ ನೆಡೆದ ಯುರೇನಿಯಂ ಫಿಲಂ ಫೆಸ್ಟಿವಲ್ ನಮಗೆ ಜ್ಞಾನವನ್ನು ಹಾಗೂ ಮುನ್ನೆಚ್ಚರಿಕೆಯನ್ನು ನೀಡಿತು. ಇದರಲ್ಲಿ ಸುಮಾರು ಐವತ್ತು ಸಾಕ್ಷಚಿತ್ರಗಳನ್ನು ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಪ್ರದರ್ಶಿಸಲಾಯಿತು.

ಭಾರತ ದೇಶದಲ್ಲಿ ಹೆಚ್ಚಾಗಿ ನಾವೀಗ ಅಣುಶಕ್ತಿಯ ಮೇಲೆ ಅವಲಂಭಿತರಾಗುತ್ತಿರುವುದರಿಂದ, ಅಣುಶಕ್ತಿಗೆ ಬೇಕಿರುವ ಯುರೇನಿಯಂ ಮೈನಿಂಗ್ ನಲ್ಲಿ ಸರ್ಕಾರ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಇಡೀ ದೇಶದಲ್ಲಿ ಅತ್ಯಧಿಕ ಯುರೇನಿಯಂ ಮೈನಿಂಗ್ ನೆಡೆಯುತ್ತಿರುವುದು ಜಾರ್ಕಂಡ್‌ನ ‘ಜಾದೂಗೋಡ’ ಎಂಬ ಎಕೈಕ ಪ್ರದೇಶದಲ್ಲಿ.

ಭಾರತದ ಎಲ್ಲ ರಾಜ್ಯಗಳು ಅಣುಶಕ್ತಿಯನ್ನು ಮತ್ತು ಅದರ ಉಪಯೋಗಗಳನ್ನು ಪಡೆದುಕೊಳ್ಳುತ್ತಿವೆ, ಆದರೆ ಕರ್ನಾಟಕ ಒಂದು ಹೆಜ್ಜೆ ಮುಂದೆ ಹೋಗಿ, ಯುರೇನಿಯಂ ಗಣಿಗಾರಿಕೆಯನ್ನು ಯಾದಗಿರಿಜಿಲ್ಲೆಯ ಶಹಾಪುರ ತಾಲ್ಲೂಖಿನ ಗೋಗಿ ಎಂಬಲ್ಲಿ ಪ್ರಾರಂಭಿಸಲು ಯೋಚಿಸುತ್ತಿದೆ. ಜೊತೆಗೆ ಮೈಸೂರಿನ ಹುಣಸೂರಿನ ಬಳಿ ಗೋಗಿಯಲ್ಲಿ ತೆಗೆದ ಅದಿರಿನ ಗುಣಮಟ್ಟ ವೃದ್ದಿ ಮಾಡುವ ಘಟಕ ಕೂಡ ನೆಲದಡಿಯಲ್ಲಿದ್ದು, ಕಣ್ಣಿಗೆ ಕಾಣದ್ದು ಮತ್ತು ಇದರಿಂದ ಉತ್ಪತ್ತಿಯಾದ ಯುರೇನಿಯಂ ಕೈಗಾದಲ್ಲಿ ವಿದ್ಯುತ್ ಶಕ್ತಿಯಾಗಿ ಮಾರ್ಪಡುತ್ತದೆ. ನಂತರದ ಹಂತದಲ್ಲಿ ಕೊನೆಗೆ ಉಳಿಯುವ ತ್ಯಾಜ್ಯ ಕೋಲಾರದ ಮತ್ತ್ಯಾವುದೋ ಪ್ರದೇಶದಲ್ಲಿ ಬರಿದು ಮಾಡುವ ಆಲೋಚನೆ ನೆಡೆಯುತ್ತಿದೆ. ಅಣುಶಕ್ತಿಯ ಗಣಿಗಾರಿಕೆ ಒಂದೇ ಹತ್ತಾರು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ವಿಶ್ವದ ಹಲವೆಡೆ ಸಾಬೀತಾಗಿದ್ದರೂ, ನಮ್ಮ ಕರ್ನಾಟಕದಲ್ಲಿ ಇದರ ಮುಂದಿನ ಹಂತದ ಬಳಕೆ ಮತ್ತು ತ್ಯಾಜ್ಯವೂ ಸೇರಿ ಮತ್ತೆಷ್ಟು ಅನಾಹುತಗಳಿಗೆ ನಾವು ತುತ್ತಾಗಬಹುದು ಎಂಬುದನ್ನು ಸ್ವಲ್ಪ ಅಲೋಚಿಸ ಬೇಕಿದೆ.

“ಬುದ್ದಾ ವೀಪ್ಸ್ ಇನ್ ಜಾದೂಗೋಡಾ” (Budda Weeps in Jadugoda) ಸಿನಿಮಾ, ಯುರೇನಿಯಂ ಅಂತರರಾಷ್ಟ್ರಿಯ ಸಿನಿಮೋತ್ಸವದಲ್ಲಿ ಜಾದೂಗೋಡಾದಲ್ಲಿ ಭಾರತದ ಯುರೇನಿಯಂ ಗಣಿಗಾರಿಕೆಯ ಹಿಂದಿನ ಚಿತ್ರಣವನ್ನು ಎಲ್ಲರ ಮುಂದೆ ತೆರೆದಿಟ್ಟಿತು. ಜಾದೂಗೋಡಾದ ಗಣಿಗಾರಿಕೆಯ ಹಿಂದಿನ ಅನೈತಿಕತೆಗಳು, ಅದು ತಂದೊಡ್ಡುತ್ತಿರುವ ಶ್ವಾಸಕೋಶದ ಕ್ಯಾನ್ಸರ್, ಥೈರಾಯ್ಡ್ ಗ್ರಂಥಿ, ರಕ್ತ, ಮೂಳೆ ಮತ್ತು ಹುಟ್ಟಿನಿಂದಲೇ ಬರುವ ಅನೇಕ ಕಾಯಿಲೆಗಳ ಅಂದರೆ ಕೈಕಾಲುಗಳೇ ಇಲ್ಲದಿರುವ ಮಗುವಿನ ಜನನಗಳು ಕಂಡು ಬಂದಿರುವುದು, ಈ ಪ್ರದೇಶದಲ್ಲಿರುವ ಗರ್ಭಿಣಿ ಸ್ರೀಯರ ಭ್ರೂಣದ ಮೇಲಾಗುತ್ತಿರುವ ಪರಿಣಾಮಗಳು, ಪಶು, ಪಕ್ಷಿಗಳ ಮೇಲೆ, ಇಲ್ಲಿನ ಕಾಡುಗಳ ಜೊತೆಗೆ ಪರಿಸರ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ನೋಡುಗರ ಮುಂದಿರಿಸಲಾಯ್ತು. ಇದೆಲ್ಲದರ ಹಿಂದಿರುವ ಸಂಸ್ಥೆಗಳು ಜಾದೂಗೋಡಾದಲ್ಲಿನ ಗಣಿಗಾರಿಕೆಯಿಂದ ಯಾವುದೇ ಹಾನಿ ಇಲ್ಲ ಎಂದು ಹೇಳುತ್ತಿರುವುದರ ಹಿಂದಿನ ಸತ್ಯಾಂಶವನ್ನು ಬಿಚ್ಚಿಡುತ್ತಾ, ಆರೋಗ್ಯ ಕೇಂದ್ರಗಳು ಹಾಗೂ ಹಣಕಾಸಿನ ಯಾವುದೇ ರೀತಿಯ ಸಹಾಯವನ್ನು ಸುತ್ತಮುತ್ತಲಿನ ಜನರಿಗೆ ನೀಡದೆ ಅವರ ಜೀವನವನ್ನು ಅಸಮತೋಲನದ ತಳಹದಿಗೆ ತಳ್ಳಿರುವುದನ್ನು ಈ ಸಿನೆಮಾ ತೋರಿಸಿತು. ಈ ಪರಿಸ್ಥಿತಿ ಕರ್ನಾಟಕದ ಗೋಗಿಯಲ್ಲಿಯೂ ಮತ್ತೊಂದು ಜಾದೂಗೋಡ ಸೃಷ್ಟಿಸಬಹುದಲ್ಲವೇ?

ಎರಡು ದಿನಗಳ ಯುರೇನಿಯಂ ಅಂತರರಾಷ್ಟ್ರೀಯ ಸಿನಿಮೋತ್ಸವ ವಿರಳವಾದ ಸಾಕ್ಷ್ಯಚಿತ್ರಗಳನ್ನೂ, ಸಿನಿಮಾಗಳನ್ನೂ ಜನರಿಗೆ ಪರಿಚಯಿಸುತ್ತಾ, ಯುರೇನಿಯಂ ಮೈನಿಂಗ್, ಅದರ ಅಭಿವೃದ್ದಿಯ ಹಂತಗಳು, ಉಪಯೋಗಗಳು, ಅಪಾಯಗಳು, ದುರುಪಯೋಗಗಳು ಹೀಗೆ ಹತ್ತಾರು ವಿಷಯಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿಚಾರಗಳನ್ನು ಮಂಡಿಸಿತು. ನ್ಯೂಕ್ಲಿಯರ್ ತ್ಯಾಜ್ಯ ವಿಸರ್ಜನೆಯೇ ಅಣುಶಕ್ತಿ ಉಪಯೋಗದ ಅತಿದೊಡ್ಡ ತೊಂದರೆಯಾಗುತ್ತಿರುವುದನ್ನು ಬಿಂಬಿಸಲಾಯ್ತು. ನ್ಯೂಕ್ಲಿಯರ್ ಥರ್ಮಲ್ ಪ್ಲಾಂಟ್ (ಅಣು ಉಷ್ಣಶಕ್ತಿ ಕೇಂದ್ರ)ಗಳ ಉಪಯೋಗದಿಂದ ಆಗುವ ಪ್ರಯೋಜನಕ್ಕಿಂತ ಹೆಚ್ಚು ಖರ್ಚಿನ ಹೊರೆ ನಮ್ಮ ಮೇಲೆ ಬೀಳುತ್ತಿದೆ ಎಂಬುದು ಕೂಡ ಗಮನಿಸಬೇಕಾದ ಅಂಶ.

ಅಣುಶಕ್ತಿಯ ಉತ್ಪಾದನೆಯ ಮೊದಲ ಹಂತ, ಗಣಿಗಾರಿಕೆಯಿಂದ ಅದರ ತ್ಯಾಜ್ಯ ನಿರ್ವಹಣೆಯವರೆಗೆ ತೀಕ್ಷ್ಣ ಅಣು ವಿಕಿರಣ ಸೋರಿಕೆಯಿಂದ ನಾವು ಮತ್ತೊಂದು ಮಹಾ ವಿಪತ್ತಿಗೆ ಗುರಿಯಾಗುತ್ತಲೇ ಇದ್ದೇವೆ.

ಲೇಖಕ: ಡಾ. ಗುರುಪ್ರಸಾದ್ ಬೆಂಗಳೂರು, ಕನ್ನಡಕ್ಕೆ ಓಂಶಿವಪ್ರಕಾಶ್ ಎಚ್.ಎಲ್

ಹವ್ಯಾಸ, ಕೆಲಸ ಎರಡೂ ನನ್ನ ನೆಚ್ಚಿನ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಖುಷಿ ಕೊಡುವ ಕೆಲಸಗಳು. ಮೂಲತ: ಬೆಂಗಳೂರಿನವನೇ ಆದ ನಾನು ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ನನ್ನ ಅರಿವಿನ ಒಂದಷ್ಟು ಭಾಗವನ್ನು ಕನ್ನಡಿಗರೊಂದಿಗೆ ಲಿನಕ್ಸಾಯಣದ ಮೂಲಕ ಹಂಚಿಕೊಳ್ಳುತ್ತೇನೆ. ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ದಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ. ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನು ಹೆಣೆಯುವುದು ಇತ್ಯಾದಿ.. ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತೇನೆಂಬ ನಂಬಿಕೆಯಿಲ್ಲ, ಆದರೂ ಒಂದಿಷ್ಟು ಮಂದಿಗಾದರೂ ಒಳ್ಳೆಯ ಮಾಹಿತಿ ಒದಗಿಸಬಲ್ಲೆ ಎಂಬ ನಂಬಿಕೆಯಿದೆ.

Read More

ಗಣರಾಜ್ಯೋತ್ಸವ – ಅಲೆ ೧೧ – RFId-NFC ತಳುಕು ಬಳುಕಿನ ಲೋಕ – ಭಾಗ ೨

Posted on Jan 13, 2013 in 2013, ale3 | 0 comments

ಎನ್.ಎಫ್.ಸಿ(NFC)

NFC ಎಂದರೆ Near Field Communication. ಇದು RFId ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿತವಾಗಿದ್ದೂ, ಅದನ್ನು ಮುಂದಿನ ಘಟ್ಟಕ್ಕೆ ಕೊಂಡೊಯ್ಯುತ್ತದೆ. ಇದು ಬಹುಮುಖ್ಯವಾಗಿ ಸ್ಮಾರ್ಟ್ ಫೋನ್ ಗಳ ಅಂಗವಾಗಿದ್ದೂ, 2014ರ ವೇಳೆಗೆ ಶೇಕಡ 50 ರಷ್ಟು ಸ್ಮಾರ್ಟ್ ಫೋನ್ ಗಳು NFC ತಂತ್ರಜ್ಞಾನ ಹೊಂದಿರುತ್ತವೆ ಎಂಬುದು ಕೆಲವು ತಜ್ಞರ ಅಭಿಪ್ರಾಯ.

NFC ತಂತ್ರಜ್ಞಾನವು ಕುಟುಕುವ ಕಾರ್ಯದಿಂದ ಆರಂಭಗೊಳ್ಳುತ್ತದೆ . NFC ತಳುಕು ಹೊಂದಿರುವ ಕಾರಿನ ಕಿಟುಕಿಗೆ ಫೋನ್ ನಿಂದ ಕುಟುಕಿದರೆ ಬಾಗಿಲು ತೆರೆದುಕೊಳ್ಳುತ್ತದೆ . ನಂತರ ಫೋನನ್ನು ಕೇಂದ್ರವೊಂದರಲ್ಲಿ ಸ್ಥಾಪಿಸಿದರೆ, ಫೋನ್ ನಿಂದ ಹಾಡುಗಳು,ವೀಡಿಯೋಗಳು ಕಾರಿನ ಪ್ಲೇಯರ್ ಗೆ ವರ್ಗವಾಗುತ್ತವೆ . ಅಲ್ಲದೆ ಸೀಟಿನ, ಕಿಟುಕಿಗಳ ಏರಿಳಿತಗಳ ಆದ್ಯತೆಗಳು, ಅಕೌಂಟ್ ಮಾರ್ಪಾಟುಗಳು, ಪ್ರೊಫೈಲ್ ಗಳಾಗಿ ಉಳಿಸಿರಲಾಗುತ್ತದೆ . ಅಂತೆಯೇ ಎಲ್ಲವೂ ಮಾರ್ಪಟುಗೊಳ್ಳುತ್ತವೆ. ಬೇರೊಬ್ಬರು ತಮ್ಮ ಫೋನನ್ನು ಅಲ್ಲಿ ಸ್ಥಾಪಿಸಿದರೆ ಅವರ ಆದ್ಯತೆಗಳಂತೆ ಎಲ್ಲವೂ ಬದಲಾಗುತ್ತವೆ . ಇಂತಹ ಒಂದು ಕಾರನ್ನು ಹ್ಯುಂದಾಯ್ (Hyundai) ಸಂಸ್ಥೆಯು ಪ್ರದರ್ಶಿಸಿದೆ .(ಈ ರೀತಿಯ ಓದು/ಬರೆ ಬಳಕೆಗೆ Data Emulation ಎಂದು ಹೆಸರು )

RFIdಗಿಂತ ಒಂದು ಹೆಜ್ಜೆ ಮುಂದೆ ಅಥವಾ ಮುಂದಿನ ಹೆಜ್ಜೆ:
ಈ ಕಾರ್ಯವನ್ನು RFId ಯಿಂದಲೇ ಸಾಧಿಸಬಹುದು . RF ತಳುಕಿನ ಬದಲು NFC ತಳುಕನ್ನು ಹಾಗು RF ಓದುಗದ ಬದಲು NFC ಓದುಗವನ್ನು ಅಳವಡಿಸಲಾಗಿದೆ . ಆದರೆ ಫೋನ್ ಗಳಲ್ಲಿ NFC ಸೌಲಭ್ಯ ದೊರೆಯುವುದರಿಂದ ಹೆಚ್ಚಿನ ಅನುಕೂಲಗಳಿವೆ. ಆದರೆ ಇಷ್ಟೇ ಇವೆರಡರ ನಡುವೆ ಇರುವ ವ್ಯತ್ಯಾಸವಲ್ಲ . RFId ಪ್ರಕಾರದಲ್ಲಿ ತಳುಕುಗಳಿಂದ ಮಾಹಿತಿಯನ್ನು ಓದು/ಬರೆ ಮಾಡಬಹುದು ಅಷ್ಟೇ.ಇದು ಒಂದು ವಿಧದಲ್ಲಿ ಏಕಮುಖ ಕಮ್ಯುನಿಕೇಷನ್ ಆಗಿಬಿಡುತ್ತದೆ. ಇದಕ್ಕೆ ಎದುರಾಗಿ NFC ಯಲ್ಲಿ ತಳುಕುಗಳನ್ನು ಪ್ರೊಗ್ರಾಮ್ ಮಾಡಬಹುದು . ಆ ತಳುಕುಗಳನ್ನು ಓದಿದ ಫೋನ್ ಗಳಲ್ಲಿ ಕೆಲ settings ಬದಲಾವನೆಯನ್ನೋ , ಇಲ್ಲವೇ ಯಾವುದಾದರೂ appನ್ನು invoke ಮಾಡಬಹುದು.

RFIdಯಿಂದ ಸಾಧ್ಯವಾಗದ NFCಯ ಮತ್ತೊಂದು ಉಪಯೋಗವೆಂದರೆ peer to peer transfer . ಎರಡು ಫೋನ್ ಗಳು ಪರಸ್ಪರ ಕುಟುಕಿನಿಂದ ಹಾಡುಗಳು,ವೀಡಿಯೋಗಳು ಇತ್ಯಾದಿ ಡಾಟಾ ಹಂಚಿಕೊಳ್ಳಬಹುದು. ಬ್ಲೂಟೂತ್ ನಂತೆ pair ಆಗುವ ಈ ಫೋನ್ ಗಳಲ್ಲಿ ಒಟ್ಟಾಗಿ multi-player ಆಟಗಳನ್ನು ಕೂಡ ಆಡಬಹುದು .

RFId-NFC ಜೊತೆಯಾಟ:
NFC ಮುಖಾಂತರ ಹಣದ ಪಾವತೀಕರಣ ಮಾಡಬಹುದು . ಐರ್ಲ್ಯಾಂಡಿನ Ticket Friend ಎಂಬ ಸಂಸ್ಥೆಯು ಸಿನಿಮಾ ಟಿಕೆಟ್ ಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಿದೆ. ಕಾಯ್ದಿರಿಸಿದ ಸೀಟುಗಳ ಮಾಹಿತಿಯನ್ನು ಫೋನ್ ನಲ್ಲಿ ಉಳಿಸಿರಲಾಗುತ್ತದೆ . ಚಿತ್ರಮಂದಿರದಲ್ಲಿ NFC ಓದುಗನ ಎದುರು ಫೋನ್ ತಂದರೆ , ಅದರಲ್ಲಿರುವ ಟಿಕೆಟ್ಟಿನ ಮಾಹಿತಿ ಪರಿಶೀಲಿಸಿ, ಒಳಗೆ ಹೋಗಲು ಸಮ್ಮತಿ ಕೊಡುತ್ತದೆ . NFC ಹೊಂದಿರುವ ಫೋನ್ ಗಳು ವಿರಳವಾದ ಕಾರಣ ಅದನ್ನು ಹೊಂದಿರದ ಬಳಕೆದಾರರಿಗೆ RFId ಕಾರ್ಡ್ ನೀಡಲಾಗುತ್ತದೆ . ಇದನ್ನು ಕೂಡ ಓದುವ ಸಾಮರ್ಥ್ಯವುಳ್ಳ NFC ಓದುಗವು ಪರಿಶೀಲನೆ ಮಾಡಿ ಸಮ್ಮತಿ ಕೊಡುತ್ತದೆ. ಅಲ್ಲಿಗೆ RFId ಹಾಗು NFC ತಂತ್ರಜ್ಞಾನಗಳನ್ನು ಕೆಲವು ಕಡೆ ಅದಲು ಬದಲಾಗಿ ಬಳಸಬಹುದು.

ತೊಂದರೆಗಳು/ಅಪಾಯಗಳು:
RFIdಯಿಂದ ಎಷ್ಟು ಅನುಕೂಲಗಳು ಇವೆಯೋ ಅಷ್ಟೇ ಅಪಾಯಗಳೂ ಇವೆ. ಇದರಿಂದ ಆರೋಗ್ಯದ ಮೇಲೆ ಅಥವಾ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ , ಆದರೆ ಬಳಕೆದಾರರಿಗೆ ಸಂಬಂಧ ಪಟ್ಟ ಕೆಲ ವೈಯಕ್ತಿಕ ಸಂಗತಿಗಳನ್ನು ಯಾರು ಬೇಕಾದರೂ ಸುಲಭವಾಗಿ ಪಡೆದುಕೊಳ್ಳುವಂತೆ ಆಗಿಬಿಡುತ್ತದೆ . ಸದಸ್ಯತ್ವ ಸೂಚಿಸುವ ಕಾರ್ಡೊಂದನ್ನು ಜೇಬಿನಲ್ಲಿಟ್ಟುಕೊಂಡು ಹೋಗುತ್ತಿದ್ದಾಗ , ಯಾರಾದರೂ ಓದುಗವನ್ನು ಹೊಂದಿದ್ದರೆ ನಮಗೆ ಅರಿವಿಗೇ ಬಾರದಂತೆ ನಮ್ಮ ಕಾರ್ಡನ್ನು ಓದಿಬಿಡಬಹುದು. ಇನ್ನು ಪಾವತಿ ಮಾಡಲು ಬಳಸುವ ಕಾರ್ಡಾದರೆ , ನಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿದೆ. ಇನ್ನು ಮಳಿಗೆಗಳಿಂದ ವಸ್ತುಗಳನ್ನು ಮನೆಗೆ ತಂದಾಗ, RFId ತಳುಕುಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಇದರಿಂದ ನಮ್ಮ ಮೇಲೆ ಗೂಢಚರ್ಯವನ್ನು ಮಾಡಬಹುದು. 2003ರಲ್ಲಿ ಕ್ಯಾಲಿಫೋರ್ನಿಯಾದ ಸೆನೇಟರ್ ಡೆಬ್ರಾ ಬವೆನ್ ರವರು “ಒಂದು ದಿನ ನಿಮ್ಮ ಒಳಉಡುಪುಗಳು ನಿಮ್ಮ ಚಲನ ವಲನಗಳ ಬಗ್ಗೆ ಯಾರಿಗೋ ಮಾಹಿತಿ ರವಾನಿಸುತ್ತಿವೆ ಎಂದು ತಿಳಿದರೆ , ನಿಮಗೆ ಹೇಗೆನಿಸುತ್ತದೆ?’ ಎಂದು ಕೇಳಿದ ಪ್ರಶ್ನೆ ಉಲ್ಲೇಖಿಸಲೇ ಬೇಕಾದದ್ದು.

ವಿರೋಧಗಳು:
250ಡಾಲರುಗಳ ಉಪಕರಣದೊಂದಿಗೆ ಯಾವ RFId ತಳುಕನ್ನು ಬೇಕಾದರೂ ಓದಬಹುದು ಎಂದು ಕ್ರಿಸ್ ಪೆಗೆಟ್ ಎಂಬುವವರು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಎಷ್ಟೋ ಸಂಸ್ಥೆಗಳು ಹೇಗೆ ಬಳಕೆದಾರರ ಮಾಹಿತಿಯನ್ನು ಹೆಚ್ಚು ಸುರಕ್ಷಿತವಾಗಿಸಬಹುದು ಎಂದು ಸಂಶೋಧಿಸಿ RFId ವಿನ್ಯಾಸಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎಷ್ಟು ಸುರಕ್ಷಿತಪಡಿಸಿದರೂ , ಸಂಪೂರ್ಣವಾಗಿ ಬಳಕೆದಾರರ ವ್ಯಕ್ತಿತ್ವವನ್ನು ಕಾಪಾಡಲಾಗದು . ಅದಕ್ಕಾಗಿಯೆ ಎಷ್ಟೊಂದು ಸಂಘ ಸಂಸ್ಥೆಗಳು RFId ತಂತ್ರಜ್ಞಾನವನ್ನು ವಿರೋಧಿಸುತ್ತಿವೆ . ಗ್ರಾಹಕ ಗೌಪ್ಯತಾ (Consumer Privacy) ನಿಪುಣರಾದ ಕ್ಯಾಥರೀನ್ ಆಲ್ಬ್ರೆಟ್ ಹಾಗು ಲಿಜ್ ಮೆಕ್ ಲನ್ ಟೈರ್ ಇದನ್ನು ವಿರೋಧಿಸುತ್ತಿರುವ ಪ್ರಮುಖರು. ಇವರು ತಮ್ಮ ಪುಸ್ತಕ SpyChips: How Major Corporations and Government Plan to Track Your Every Move ದಲ್ಲಿ ಹೇಗೆ ಸರ್ಕಾರಗಳು ಹಾಗು ದೊಡ್ಡ ಸಂಸ್ಥೆಗಳು ಪ್ರತಿಯೊಬ್ಬರ ಚಲನ ವಲನಗಳನ್ನು ಸಮ್ಮತಿಯೇ ಇಲ್ಲದೆ ಪಡೆದುಕೊಳ್ಳಬಹುದು ಹಾಗು ಹೇಗೆ ಇದರಿಂದ ನಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇವೆ ಎಂದು ವಿವರಿಸಿದ್ದಾರೆ . ಈ ರೀತಿಯ ಉಲ್ಲಂಘನೆಗಳು, ಆಗಬಹುದಾದ ಅನಾಹುತಗಳ ಬಗ್ಗೆ ತಿಳಿಯಲು www.spychips.com ಗೆ ಭೇಟಿ ನೀಡಬಹುದು.

ಎಲ್ಲ ತಂತ್ರಜ್ಞಾನಗಳಂತೆ ಇದೂ ಬಳಕೆ ದುರ್ಬಳಕೆಗಳ ತಕ್ಕಡಿಯಲ್ಲಿದೆ. ನಮ್ಮ ಕೆಲಸ ಕಾರ್ಯಗಳನ್ನು ಸುಗಮಗೊಳಿಸಲು ತಂತ್ರಜ್ಞಾನ ಮುಖೇನ ಜನಿಸಿ , ನಮ್ಮನ್ನು ಅಜ್ನಾನದಲ್ಲಿಡುವ ಸರ್ಕಾರಗಳ ,ದೊಡ್ಡ ಕಾರ್ಪೊರೇಷನ್ ಗಳ ಕುತಂತ್ರದಲ್ಲಿ ಅವಸಾನ ಹೊಂದುವಂತಾಗಿದೆ. ಸಮಾಜಗಳ ಸಾಫಲ್ಯತೆ ನಾಗರೀಕತೆಯಲ್ಲೋ ? ಇಲ್ಲವೇ ಆಧುನಿಕ ಸೌಕರ್ಯದಲ್ಲೋ ? ಎಂಬ ಪ್ರಶ್ನೆ ಉದ್ಭವಿಸದಂತೆ ಜ್ಞಾನದೊಂದಿಗೆ ಜವಾಬ್ದಾರಿಯನ್ನೂ, ವಿಜ್ಞಾನದೊಂದಿಗೆ ವಿವೇಚನೆಯನ್ನೂ ನಿಭಾಯಿಸಿಕೊಂಡು ಹೋದರೆ ಅದುವೇ ತಂತ್ರಜ್ಞಾನದ ಸರಿಯಾದ ಸದ್ಬಳಕೆ.

ಲೇಖಕ: ಶ್ರವಣ್ ಕುಲಕರ್ಣಿ

೨೦೧೧ರಲ್ಲಿ B.E ಪದವಿ ಹೊಂದಿ , embedded ಹಾಗು android developmentನಲ್ಲಿ ಅನುಭವ. ಸಾಹಿತ್ಯ ಹಾಗು ನಾಟಕಗಳಲ್ಲಿ ಆಸಕ್ತಿ. ಮುಕ್ತ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಒಲವು .ಸಂಧೀಲ್ ಸಮಾರಾಧನೆ ಎಂಬ ತಂಡದ ಮೂಲಕ ಕಿರುಚಿತ್ರಗಳ ನಿರ್ಮಾಣ ವಾರಾಂತ್ಯದ ಹವ್ಯಾಸಿ ಚಟುವಟಿಕೆ.

Read More