ನಾಡಿನ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ತಂತ್ರಜ್ಞಾನ ಕುರಿತ ಲೇಖನಗಳನ್ನು ಆಗಾಗ ಬರೆಯುತ್ತಿದ್ದೆ. ಅವುಗಳ ಪೈಕಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳೂ ಇದ್ದವು. ಈ ಕುರಿತು ನನ್ನೊಂದಿಗೆ ಒಮ್ಮೆ ವ್ಯಂಗ್ಯವಾಗಿ ಮಾತಾಡಿದ ಖ್ಯಾತ ಪತ್ರಕರ್ತರೊಬ್ಬರು, ಆರೋಗ್ಯ ವಿಷಯ ಬರೆಯೋದಕ್ಕೆ ನೀವೇನು ಡಾಕ್ಟರಾ? ಎಂದಿದ್ದರು.

ಬಾಹ್ಯಾಕಾಶದ ಬಗ್ಗೆ ನೀವು ಬರೆದಿದ್ದೀರಲ್ಲ, ನೀವೇನು ಅಲ್ಲಿಗೆ ಹೋಗಿದ್ದಿರಾ? ಎಂದು ನಾನು ಮರುಪ್ರಶ್ನಿಸಿದ್ದೆ.

ನನ್ನ ಈ ಮರು ಸವಾಲು ಆ ಪತ್ರಿಕೆಯಲ್ಲಿ ನಾನು ಬರೆಯಬಹುದಾಗಿದ್ದ ಹಲವಾರು ಅವಕಾಶಗಳನ್ನು ಕಸಿದುಕೊಂಡಿತಾದರೂ, ತಕ್ಕ ಉತ್ತರ ಕೊಟ್ಟ ತೃಪ್ತಿ ಈಗಲೂ ನನ್ನಲ್ಲಿದೆ.

‘ಅರಿವಿನ ಅಲೆಗಳು’ ಪುಸ್ತಕ ಓದುತ್ತಿದ್ದಾಗ, ನನ್ನಂತೆ ಯೋಚಿಸಿರುವ ಹಲವಾರು ಜನರನ್ನು ಇಲ್ಲಿ ಒಟ್ಟೊಟ್ಟಿಗೇ ನೋಡಿ, ಓದಿ ಸಂತಸವಾಯಿತು.

ಏಕೆಂದರೆ, ಸಮುದಾಯದ ಅಭಿವೃದ್ಧಿಗಾಗಿರುವ ಪ್ರತಿಯೊಂದರ ಬಳಕೆ, ಅಭಿವೃದ್ಧಿ ಮತ್ತು ಹಂಚಿಕೆ ಮುಕ್ತವಾಗಿರಬೇಕೆಂಬ ಪರಿಕಲ್ಪನೆ ಇಲ್ಲಿದೆ. ವೈದ್ಯಕೀಯದ ಬಗ್ಗೆ ವೈದ್ಯನೊಬ್ಬ ಮಾತ್ರ ಬರೆಯಬೇಕು, ತಂತ್ರಜ್ಞಾನದ ಕುರಿತು ತಾಂತ್ರಿಕ ವಿದ್ಯಾರ್ಥಿ, ಕೃಷಿಯ ಬಗ್ಗೆ ರೈತ ಎಂಬೆಲ್ಲ ಧೋರಣೆಗಳು ಪುರೋಹಿತಶಾಹಿ ಯೋಚನೆಯ ಸಂಕೇತವಾಗುತ್ತವೆ. ಅಂಥ ಯೋಚನಾಧಾಟಿಯನ್ನು ಮೀರಿನಿಂತ ಈ ಲೇಖನಗಳು ವಿಷಯವೊಂದನ್ನು ಸರಳವಾಗಿ ತಿಳಿಸುವ ಮತ್ತು ಓದುವ ಖುಷಿ ನೀಡುತ್ತವೆ.

ಪಪ್ಪಿ ಲಿನಕ್ಸ್ ಕುರಿತು ಬರೆದ ಪ್ರಶಾಂತ್ ಜ.ಚಿ; ಹಿತ್ತಲಗಿಡದ ಮಹತ್ವ ಬರೆದ ಲಾವಣ್ಯ; ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ತಿಳಿಸಿರುವ ಮೊದ್ಮಣಿ ಮಂಜುನಾಥ್; ಬ್ಲಾಗಿನ ಬಾಗಿಲು ತೆರೆದ ಸುಹಾಸ್; ಹಾವುರಾಣಿಯ ಅನಿಲ್ ರಮೇಶ್; ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ ಬರೆದ ಮಂಸೋರೆ, ವಿಕಿಪೀಡಿಯ ಕುರಿತು ಬರೆದಿರುವ ಹರೀಶ್, ಎಚ್.ಟಿ.ಎಂ.ಎಲ್.ನ ಸುನೀಲ್ ಜಯಪ್ರಕಾಶ್, ಹ್ಯಾಕಿಂಗ್ ಮಾಡಿರುವ ಶ್ರೀಧರ ಟಿ.ಎಸ್. ಮತ್ತು ಕಲಿಕೆ ಮತ್ತು ಫಾಸ್ ಕುರಿತು ಬರೆದಿರುವ ಶಂಕರ ಪ್ರಸಾದ್ ನನಗೆ ಗೊತ್ತಿರುವಂತೆ ಮೂಲತಃ ಬರಹಗಾರರಲ್ಲ. ತಮ್ಮ ಮೆಚ್ಚಿನ ವಿಷಯಗಳ ಕುರಿತ ಅವರ ಆಸಕ್ತಿ ಮತ್ತು ತಿಳಿವಳಿಕೆ, ಅವರೊಳಗಿನ ಬರಹಗಾರನನ್ನು ಎಚ್ಚರಿಸಿದೆ. ಅದರ ಫಲ ನಿಮ್ಮ ಮುಂದಿದೆ. ಅದರಲ್ಲೂ ಶ್ರೀಧರ್ ಟಿ.ಎಸ್. ಅವರ ಸಾಧನೆ ಮನತಟ್ಟುತ್ತದೆ. ಬಾಹ್ಯ ದೃಷ್ಟಿ ಇಲ್ಲದಿದ್ದರೂ ಅವರ ಆಸಕ್ತಿ ನಮ್ಮ ಮನಸ್ಸುಗಳನ್ನು ಹ್ಯಾಕ್ ಮಾಡುತ್ತದೆ. ಅರಿವಿನ ಅಲೆಗಳು ಎಂಬ ಪದ ಬಳಕೆಯ ಜೀವಂತ ಮಾದರಿಯಂತಿದ್ದಾರೆ ಶ್ರೀಧರ್.

ಉತ್ತಮವಾಗಿದ್ದೆಲ್ಲ ಮುಕ್ತವಾಗಿರಲಿ, ಮೆಚ್ಚುವಂತಿರಲಿ ಎಂಬ ಆಶಯದೊಂದಿಗೆ ಅರಿವಿನ ಅಲೆಗಳು ದೂರದ ತೀರಗಳನ್ನೂ ನಿರಂತರವಾಗಿ ತಾಕುವಂತಾಗಲಿ. ಸಂಚಯ ತಂಡದ ಶ್ರಮ ಮತ್ತು ಆಸಕ್ತಿ ಹೊಸ ಅರಿವನ್ನು ಹುಟ್ಟುಹಾಕುವಂತಾಗಲಿ.

ಚಾಮರಾಜ ಸವಡಿ
ಹಿರಿಯ ಪತ್ರಕರ್ತರು