ಯಾವುದೂ ಇಲ್ಲದಿರುವಾಗಲೂ ಎಲ್ಲವೂ ಸರಿಯಾಗಿರುವುದು

ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ತಮ್ಮದೊಂದು ಭಾಷಣದಲ್ಲಿ ಮಹಾಭಾರತದ ಪ್ರಸಂಗವೊಂದನ್ನು ಉಲ್ಲೇಖಿಸಿದ್ದರು. ಮಹಾಭಾರತದ ಯಾವ ಭಾಗದಲ್ಲಿ ಈ ಪ್ರಸಂಗವಿದೆ ಎಂಬುದು ನನಗೀಗ ನೆನಪಿಲ್ಲ. ತೋಳ್ಪಾಡಿಯವರ ಮಾತುಗಳ ಒಟ್ಟು ಸಾರಾಂಶ ಹೀಗಿತ್ತು. ಧರ್ಮವೆಂದರೆ ಏನು ಎಂಬುದಕ್ಕೆ ಉತ್ತರಿಸುತ್ತಾ ಹೋಗುವ ಧರ್ಮರಾಯ ತನ್ನ ಕಾಲದಲ್ಲಿದ್ದ ನೀತಿ, ನಿಯಮಗಳನ್ನೆಲ್ಲಾ ಉಲ್ಲೇಖಿಸಿ ಇದರಂತೆ ನಡೆಯುವುದು ಧರ್ಮ ಎನ್ನುತ್ತಾನೆ. ಆದರೆ ಅವನು ತನ್ನ ಮಾತನ್ನು ಅಷ್ಟಕ್ಕೇ ನಿಲ್ಲಿಸಿದರೆ ಈ ನೀತಿ, ನಿಯಮಗಳ ಅಗತ್ಯವೇ ಇಲ್ಲದಿದ್ದ ಕಾಲವನ್ನು ನೆನಪಿಸಿಕೊಂಡು ಆ ಸ್ಥಿತಿಯನ್ನು ನಿಜವಾದ ಧರ್ಮ ಎನ್ನುತ್ತಾನೆ.

ವಿಧಿ-ನಿಷೇಧಗಳು, ನೀತಿ-ನಿಯಮಗಳನ್ನು ರೂಪಿಸಿ ಒಂದು ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಯನ್ನು ನಾವು ಆಧುನಿಕ ಎಂದು ಭಾವಿಸಿದ್ದೇವೆ. ವಾಸ್ತವದಲ್ಲಿ ಇದೊಂದು ದೌರ್ಬಲ್ಯ. ವಿವೇಕವುಳ್ಳ ಮನುಷ್ಯ ಸಹಜವಾಗಿ-ಮನುಷ್ಯ ಸಹಜವಾಗಿ- ಬದುಕಿಬಿಟ್ಟರೆ ಯಾವ ನೀತಿ, ನಿಯಮ, ವಿಧಿ, ನಿಷೇಧಗಳ ಅಗತ್ಯವಿರುವುದಿಲ್ಲ. ಮಾನವನ ‘ಸಹಜ’ ಗುಣ ಮರೆಯಾಗುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಬದುಕಿಗೆ ನೀತಿ, ನಿಯಮ, ವಿಧಿ, ನಿಷೇಧಗಳೆಲ್ಲಾ ಅಗತ್ಯವಾಗಿಬಿಡುತ್ತವೆ. ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಯ ನಿಜವಾದ ಅರ್ಥ ‘ಹೀಗೆಯೇ ಇರಬೇಕು’ ಎಂಬ ನಿಯಮಗಳಿಲ್ಲದ ಸಂದರ್ಭದಲ್ಲಿಯೂ ಎಲ್ಲವೂ ಸರಿಯಾಗಿರುವುದು. ಹೀಗೆ ಹೇಳಿದ ಕ್ಷಣವೇ ಇದೆಲ್ಲಾ ಅತಿ ಆದರ್ಶದ ಮಾತುಗಳು ಎಂಬ ಟೀಕೆ ಕೇಳಿಬರುತ್ತದೆ. ಇದೇ ಟೀಕೆಯನ್ನು ಸ್ವಲ್ಪ ಮೃದುಗೊಳಿಸಿ ಇನ್ನು ಕೆಲವರು ‘ಇದು ಪ್ರಾಯೋಗಿಕವಲ್ಲ’ ಎನ್ನುತ್ತಾರೆ. ಒಂದು ಬಗೆಯಲ್ಲಿ ಗಾಂಧೀ ಆರ್ಥಿಕತೆಯನ್ನು ಯಾವತ್ತೂ ಪ್ರಯೋಗಿಸದೆ ಅದು ಪ್ರಾಯೋಗಿಕವಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಭಾರತೀಯ ನೀತಿ ನಿರೂಪಕ ನಿಲುವು. ಅಥವಾ ವಿಧಿ-ನಿಷೇಧಗಳು, ನೀತಿ-ನಿಯಮಗಳೊಳಗೇ ಬದುಕುವುದು ಅಭ್ಯಾಸವಾಗಿ ಅದಿಲ್ಲದೆ ಬದುಕಿಲ್ಲ ಎಂಬ ಬಾವಿಯ ಕಪ್ಪೆಯಂಥ ಮನಸ್ಥಿತಿ.

ಸ್ವಾತಂತ್ರ್ಯದ ಮುಂಜಾವಿನಲ್ಲಿ ಹೊರಬರುತ್ತಿರುವ ಈ ಕೃತಿಯ ಬರೆಹಗಳೆಲ್ಲವೂ ತಂತ್ರಜ್ಞಾನದ ಸಂದರ್ಭದಲ್ಲಿ ಸ್ವಾತಂತ್ರ್ಯದ ಸ್ವರೂಪವನ್ನು ನಿರ್ವಚಿಸಿ ಅದರ ಪ್ರಾಯೋಗಿಕತೆಯನ್ನೂ ವಿವರಿಸುತ್ತಿವೆ. ಸ್ವಾತಂತ್ರ್ಯ ದಿನವನ್ನು ಮುಂದಿಟ್ಟುಕೊಂಡು ಹದಿನಾಲ್ಕು ದಿನಗಳ ಕಾಲ ಹದಿನಾಲ್ಕು ಮಂದಿ ಗೆಳೆಯರು ಮಾಡಿರುವ ಈ ಪ್ರಯತ್ನ ಹಲವು ಕಾರಣಕ್ಕೆ ವಿಶಿಷ್ಟ. ಬಹುಶಃ ಕನ್ನಡದಲ್ಲಿ ನಡೆಯುತ್ತಿರುವ ಈ ಬಗೆಯ ಮೊದಲ ಪ್ರಯೋಗ. ಹಾಗೆಯೇ ಈಗ ನಿಮ್ಮ ಕೈಯಲ್ಲಿರುವುದು ಪ್ರಾಯಶಃ ಕನ್ನಡದ ಮೊದಲ ಇ-ಪುಸ್ತಕ. ಇದಕ್ಕೂ ಮೊದಲು ಕನ್ನಡದಲ್ಲಿ ಇ-ಪುಸ್ತಕ ಇತ್ತು. ಆದರೆ ಅದು ನಿಜ ಅರ್ಥದ ಇ-ಪುಸ್ತಕವಾಗಿರಲಿಲ್ಲ. ಮುದ್ರಿತ ಪುಸ್ತಕವೊಂದರ ಪಿಡಿಎಫ್ ಆವೃತ್ತಿಯಷ್ಟೇ ಆಗಿತ್ತು. ಅದು ‘ಇ-ಪಠ್ಯ’ವಾಗಿರಲಿಲ್ಲ. ಈ ಕಾರಣದಿಂದ ‘ಅರಿವಿನ ಅಲೆಗಳು’ ಕನ್ನಡದ ಮೊದಲ ಇ-ಪಠ್ಯವಿರುವ ಇ-ಪುಸ್ತಕವಾಗುತ್ತದೆ.

ಅಲೆಗಳು ನಿಯತವಾಗಿ ಒಂದರ ಹಿಂದೊಂದರಂತೆ ದಡದತ್ತ ಧಾವಿಸುತ್ತವೆ. ಅರವಿಂದ, ಶಿವು, ಪವಿತ್ರ ಮತ್ತು ರವಿ ಈ ಅಲೆಗಳನ್ನು ಇನಿಷಿಯೇಟ್ ಮಾಡಲು ಅಗತ್ಯವಿರುವ ಮೂಲಸೌಕರ್ಯವನ್ನು ಸ್ಥಾಪಿಸಿ ಮೊದಲ ಅಲೆಗಳನ್ನು ಸೃಷ್ಟಿಸಿದರೆ ಉಳಿದವರು ಅಲೆಗಳ ವಿಸ್ತಾರವನ್ನು ಹೆಚ್ಚಿಸಿದ್ದಾರೆ. ಈ ಬರೆಹವನ್ನು ನೀವು ಓದುತ್ತಿದ್ದೀರಿ ಎಂದಾದರೆ ಅಲೆ ದಡ ಸೇರುವ ಕ್ರಿಯೆಯೂ ಆರಂಭಗೊಂಡಿದೆ ಎಂದರ್ಥ. ಈ ಅರಿವಿನ ಅಲೆಗಳನ್ನು ಸೃಷ್ಟಿಸಿರುವವರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರ್ಥ. ಅಲೆಗಳು ದಡ ಸೇರುವ ಕ್ರಿಯೆಗೊಂದು ನಿಯತತೆ ಇದೆ. ಅಲೆ ಅಪ್ಪಳಿಸುವುದಕ್ಕಾಗಿ, ಅಲೆ ಬಂದು ನೇವರಿಸುವುದಕ್ಕಾಗಿ ಕಾಯುತ್ತಿರುವ ಅಂಚು ಜ್ಞಾನ ಸಮುದ್ರದ ಆಳದಲ್ಲಿರುವ ರಹಸ್ಯಗಳಿಗಾಗಿ ಕಾಯುತ್ತಿರುತ್ತದೆ. ಅಂಚಿನ ಕಾಯುವಿಕೆಯನ್ನು ಅಸಹನೀಯಗೊಳಿಸದೆ ಅಲೆಗಳ ವೇಗವನ್ನು ವರ್ಧಿಸುವ ಜವಾಬ್ದಾರಿಯನ್ನು ಅರಿವಿನ ಅಲೆಗಳ ಗೆಳೆಯರು ತಾವೇ ತಾವಾಗಿ ತೆಗೆದುಕೊಂಡಿದ್ದಾರೆ. ಸ್ವಾತಂತ್ರ್ಯ ಈ ಮುಂಜಾವಿನಲ್ಲಿ ನನ್ನನ್ನು ಬರೆಯಲು ಹಚ್ಚಿದ ಈ ಗೆಳೆಯರು ತಮ್ಮ ಮುಂದಿನ ಬರಹಗಳಿಗಾಗಿ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಯ ತನಕ ಕಾಯಿಸುವುದಿಲ್ಲ ಎಂಬ ಭರವಸೆ ನನ್ನದು.

ಎನ್. ಎ. ಎಂ. ಇಸ್ಮಾಯಿಲ್
ಹಿರಿಯ ಪತ್ರಕರ್ತರು