ಪ್ರಕಟಿಸಿದ್ದು ದಿನಾಂಕ Jan 7, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ – ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ…ನೀನೇನು ಯೋಚನೆ ಮಾಡಬೇಡ’ ಅಂದೆ…
’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ – ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ…
ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು ಇಟ್ಕೊಂಡ್ ಬರಕ್ಕೇ ಆಗತ್ತಾ? ನಾವೇ ಹೆಸರಿಡೋದು…ಹಿಂದೆ ಎಲ್ಲ ’ಲೈಲಾ’ ಬಂದಿದ್ಳು ನೆನಪಿದೆಯಾ?’ ಅಂದೆ…
’ಹೌದಾ…ಲೈಲಾ ಬಂದ್ರೆ ಮಜನೂ ಬರಲಿಲ್ವಾ?’ ಎಂದು ಕೇಳಿದಾಗ, ಅಮ್ಮನ ಮಾತಿಗೆ ನಾನು ಗೊಳ್ಳೆಂದು ನಕ್ಕೆನಾದರೂ, ’ಮಜನೂ’ ಯಾಕೆ ಬರಲಿಲ್ಲ ಅಥವಾ ಯಾಕೆ ಮಜನೂ ಮುಂದೇನೂ ಬರೋದಿಲ್ಲ ಅಂತ ಗೊತ್ತಿರಲಿಲ್ಲ…

ಇತ್ತ ಕಡೆ ’ಸ್ಯಾಂಡಿ’ ಅಮೇರಿಕದ ಪೂರ್ವ ಭಾಗದಲ್ಲಿ ಅನಾಹುತವನ್ನು ಮಾಡ್ತಿದ್ರೆ,
ಕೀಟಲೆ ಕೋರರು, “’ಸ್ಯಾಂಡಿ’ ನಮ್ಮ ’ಸಂಧ್ಯ’ನಾ ಇಲ್ಲ ’ಸಂದೀಪ’ನಾ?” ಅಂತ ಫ಼ೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿ, ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ನಡುವೆ ಭಯಂಕರ ಬಿಕ್ಕಟ್ಟನ್ನೇ ಸೃಷ್ಟಿಸಿಬಿಟ್ಟರು…
’ಸ್ಯಾಂಡಿ’ – ’ ಸಂಧ್ಯಾ”ನೇ ಅಂತ ಹೆಂಡತಿಯೊಂದಿಗೆ ವಾಗ್ವಾದ ಮಾಡಿದ ಗಂಡ ಉಪವಾಸ ಬೀಳಬೇಕಾಯ್ತು ಅಂತ ಅನ್ನೋದು ಮತ್ತೊಂದು ಫ಼ೇಸ್ ಬುಕ್ ಕಥೆ…

ಅದೇನೆ ಇರಲಿ, ನನ್ನ ಹೆಂಡತಿ ಕೂಡ, ’ತುಂಬಾ ಮೋಸ…ಹರಿಕೇನ್ ಗೆಲ್ಲಾ ಹುಡುಗೀರ್ ಹೆಸರೇ ಯಾಕಿಡ್ಬೇಕು – ಕಟ್ರೀನಾ ಅಂತೆ…ಲೈಲಾ ಅಂತೆ…ನೀಲಂ ಅಂತೆ…’ ಎಂದಾಗ ನಾನು ಸುಮ್ಮನೆ ಇರದೆ ’ಅಷ್ಟೂ ಗೊತ್ತಾಗಲ್ವೇನೆ ಯಾಕೆ ಹುಡುಗೀರ್ ಹೆಸರಿಡ್ತಾರೆ ಅಂತ?’ ಎಂದು ಹೇಳ್ಬಿಟ್ಟೆ…ಅವತ್ತು ನನ್ನ ಪಾಡು ಯಾಕೆ ಕೇಳ್ತೀರಾ!
ನನ್ನ ಪಾಡು ಏನೇ ಆದ್ರೂ, ನನ್ನ ಹೆಂಡತಿ ಸ್ಯಾಂಡಿ ಹುಡುಗಿನೇ ಅಂತ ಒಪ್ಕೊಂಡ್ಳಲ್ಲಾ ಅಂತ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡ್ಕೊಂಡಿದ್ದೆ!!!

ಇಷ್ಟೆಲ್ಲಾ ಓದಿದ ಹೆಣ್ಣು ಮಕ್ಕಳು ಈಗಾಗಲೇ ನನ್ನ ಮೇಲೆ ಮೂರನೇ ಮಹಾ ಯುದ್ಧಕ್ಕೆ ಸಿದ್ಧರಾಗ್ತಿರಬಹುದು, ಹಾಗಾಗಿ ಮುಖ್ಯವಾದ ವಿಷಯ ಮೊದಲೇ ಹೇಳಿ ಬಿಡ್ತೀನಿ…
ಎಲ್ಲಾ ಹರಿಕೇನ್ ಗಳೂ/ಸೈಕ್ಲೋನ್‍ಗಳೂ, ಹೆಣ್ಣು ಮಕ್ಕಳ ಹೆಸರು ಇಟ್ಕೊಂಡಿರಲ್ಲ…ಮುಂದೆ ’ಆಕಾಶ’ ನೂ ಬರ್ತಾನೆ ’ಸಾಗರ್’ ಕೂಡ ಬರ್ತಾನೆ ಆದ್ರೆ ಸದ್ಯಕ್ಕಲ್ಲ …ಆದ್ರೆ ’ಮಜನೂ’ ಬರೋದು ಮಾತ್ರ ತುಂಬಾನೇ ಡೌಟು…

“ಅದೇನು ಅಷ್ಟೊಂದು ಕಾನ್ಫಿಡೆನ್ಸ್ ನಿಂದ ಹೇಳ್ತಿದೀರಾ?” ಅಂತೀರಾ? ಅದಕ್ಕೆ ಕಾರಣ ಇದೆ…

ಪ್ರತಿಯೊಂದು ಸೈಕ್ಲೋನ್ ಬರೋದಕ್ಕೂ ಮುಂಚೇನೆ ಮುಂದೆ ಏನು ಬರತ್ತೇ ಅನ್ನೋದನ್ನ ಮೊದಲೇ ನಿರ್ಧಾರ ಮಾಡಿ ಆಗಿರತ್ತೆ…ಇದು ಏನಪ್ಪಾ ಇದು ಅಂತ ತಲೆ ಕೆರ್ಕೋ ಬೇಡಿ…
ನಮ್ಮ ’ಪ್ರಭವ’, ’ವಿಭವ’ ಅಂತ ಅರವತ್ತು ಸಂವತ್ಸರಗಳ ಹೆಸರಿದೆಯಲ್ಲಾ, ಅದೇ ರೀತಿ…

“ರೀ, ಸಾಕು ಸುಮ್ನೆ ಬುರಡೆ ಬಿಡಬೇಡಿ, ನಾವು ಚಿಕ್ಕವರಾಗಿದ್ದಾಗ ಇದು ಯಾವ ಹೆಸ್ರೂ ಕೇಳೇ ಇರಲಿಲ್ಲ…ಪ್ರಭವ-ವಿಭವ ಅಂತೇ…ಆ ರೀತಿ ಇದ್ದಿದ್ರೆ ನಮ್ಮ ಅಪ್ಪನೋ ತಾತನೋ ಹೇಳ್ತಿದ್ರು ಅಲ್ವಾ” ಅಂತ ಅಂದ್ರಾ?
ಅದಕ್ಕೂ ಕಾರಣ ಇದೆ…ನಮ್ಮ ಭಾರತದಲ್ಲಿ ಸೈಕ್ಲೋನ್ ಹೆಸರಿಡುವ ಪ್ರತೀತಿ ಶುರುವಾಗಿದ್ದು ೨೦೦೪ರಲ್ಲಿ…
ಮೊದಲು ಬಂದಿದ್ದು ’ಒನಿಲ್’ ಆಮೇಲೆ ’ಅಗ್ನಿ’ ಆದರೆ ನೀವು ಎಲ್ಲ ಹೆಸರೂ ಕೇಳಿರಬೇಕು ಅಂತ ಏನು ಇಲ್ಲ…
ಯಾಕೇ ಅಂದ್ರೆ ಪ್ರತಿ ವರ್ಷ ಹತ್ತಾರು ಸೈಕ್ಲೋನ್ ಗಳೂ ಹರಿಕೇನ್ ಗಳೂ ಬಂದು ಹೋಗ್ತಾ ಇರತ್ತೆ…ದಿನ ಪತ್ರಿಕೆಯಲ್ಲಿ ಬರೋದು ಏನಿದ್ರೂ ನಮ್ಮ ನಿತ್ಯ-ಜೀವನಕ್ಕೆ ತಟ್ಟುವಂತಹವುಗಳು ಮಾತ್ರ…
ಹಾಗಾಗಿ ’ಲೈಲಾ’ ’ಕಟ್ರೀನಾ’ ’ಐರೀನ್’ ಗಳ ನೆನಪು ನಮಲ್ಲಿ ಹೆಚ್ಚು ಕಾಲ ಉಳಿಯುತ್ತೆ…

’ಅದು ಸರಿ, ನಮ್ಮ ಬಾಲಿವುಡ್ ನಲ್ಲಿ ಕಟ್ರೀನಾ ಈಗಾಗ್ಲೇ ಇದಾಳೆ, ಸೈಕ್ಲೋನ್ ಕಟ್ರೀನಾ ಬೇಡ’ ಅಂದ್ರಾ?
ತಥಾಸ್ತು! ನಮ್ಮ ದೇಶಕ್ಕೆ ಕಟ್ರೀನಾ ’ಶಾಪ’ ತಟ್ಟಲ್ಲ ಬಿಡಿ!

“ಏನ್ರೀ ಈಗ ತಾನೆ ಲಿಸ್ಟ್ ಇದೇ ಅಂದ್ರೀ, ಈಗ ಕಟ್ರೀನಾ ಬರಲ್ಲ ಅಂತೀರಾ? ಸುಮ್ನೆ ತಲೇ ಕೇಡಿಸ್ಬೇಡ್ರೀ” ಅಂದ್ರಾ?
ಅದು ಹಾಗಲ್ಲ ಕಣ್ರೀ, ನಮ್ಮ ಭೂಮಿಯಲ್ಲಿರೋ ಬೇರೆ ಬೇರೆ ಸಾಗರ/ಸಮುದ್ರಗಳನ್ನು ವಿವಿಧ ಪ್ರಾಂತ್ಯಗಳಾಗಿ ವಿಂಗಡನೆ ಮಾಡಿದ್ದಾರೆ…
ಪ್ರತಿಯೊಂದು ಪ್ರಾಂತ್ಯದಲ್ಲೂ ಸೈಕ್ಲೋನ್/ಹರಿಕೇನ್ ಗಳ ಒಂದು ಪಟ್ಟಿ ಇರತ್ತೆ, ಹಾಗಾಗಿ ’ಕಟ್ರೀನಾ’ ಶಾಪ ಏನಿದ್ರೂ ಅಟ್ಲಾಂಟಿಕ್ ಪ್ರದೇಶಕ್ಕೇ ಸೀಮಿತ…ನಮ್ಮ ನೀಲಂ ನೃತ್ಯ ಏನಿದ್ರೂ ಹಿಂದೂ ಮಹಾ ಸಾಗರದಲ್ಲಿ ಮಾತ್ರ!

ಈ ಹೆಸರಿಡೋ ಪದ್ಧತಿ ಮೊದಲು ಶುರುವಾಗಿದ್ದು ಆಕಸ್ಮಿಕವಾಗಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ “ಅಂತ್ಜೆ” ಎಂಬ ಒಂದು ಪ್ರಸಿದ್ಧ ಹಡಗು ಹರಿಕೇನ್ ನಿಂದ ಮುಳಿಗಿದಾಗ…ಆಗ ಜನ “ಅಂತ್ಜೆ” ಹರಿಕೇನ್ ಎಂದು ಕರೆಯಲು ಆರಂಭಿಸಿದರಂತೆ…

ನಂತರ ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಪ್ರತಿಯೊಂದು ಹರಿಕೇನ್‍ಗೂ ಹೆಸರಿಡಲು ಆರಂಭಿಸಿದರಂತೆ…
ಮೊದ-ಮೊದಲಿಗೆ ಬರೀ ಹುಡುಗಿಯರ ಹೆಸರೇ ಇತ್ತಂತೆ…ಇದಾದ ಮೇಲೆ ಹವಾಮಾನ ಕೇಂದ್ರದಲ್ಲಿದ್ದವರಿಗೆ ಉಪವಾಸವೇ ಗತಿಯಾಯ್ತೇನೋ ೧೯೭೯ರಲ್ಲಿ ಹುಡುಗರ ಹೆಸರನ್ನೂ ಸೇರಿಸಿದರಂತೆ…ಈಗ ಅಟ್ಲಾಂಟಿಕ್ ಸಾಗರದಲ್ಲಿ ಹುಟ್ಟುವ ಹರಿಕೇನ್ ಗಳಿಗೆ ಹುಡುಗಿಯರ ಮತ್ತು ಹುಡುಗರ ಹೆಸರನ್ನು ಒಂದಾದಮೇಲೆ ಮತ್ತೊಂದು ಬರುವಂತೆ ಬದಲಾಯಿಸಿದ್ದಾರೆ…

ಈಗ ಪ್ರಪಂಚದಲ್ಲಿರುವ ವಿಭಾಗಳು ಇವು:
೧. ಕೆರಿಬಿಯನ್, ಮೆಕ್ಸಿಕೋ ಮತ್ತು ಉತ್ತರ ಅಟ್ಲಾಂಟಿಕ್ ವಿಭಾಗ
೨. ಈಶಾನ್ಯ ಪೆಸಿಫಿಕ್ ವಿಭಾಗ
೩. ಉತ್ತರ-ಮಧ್ಯ ಪೆಸಿಫಿಕ್ ವಿಭಾಗ
೪. ವಾಯುವ್ಯ ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಭಾಗ
೫. ಆಸ್ಟ್ರೇಲಿಯಾ ವಿಭಾಗ
೬. ನಾಡಿಸ್ ವಿಭಾಗ (ದಕ್ಷಿಣ ಪೆಸಿಫಿಕ್‍ನ ಕೆಲವು ಭಾಗಗಳು)
೭. ಪೋರ‍್ಟ್ ಮೋರ್ಸ್‍ಬಯ್ ವಿಭಾಗ
೮. ಜಕಾರ್ತಾ ವಿಭಾಗ
೯. ಉತ್ತರ ಹಿಂದೂ ಮಹಾಸಾಗರ ವಿಭಾಗ
೧೦.ನೈರುತ್ಯ ಹಿಂದೂ ಮಹಾ ಸಾಗರ ವಿಭಾಗ

ಪ್ರತಿಯೊಂದು ವಿಭಾಗದ ಹವಾಮಾನಕ್ಕೂ ಒಂದು ಮುಖ್ಯ ಕಚೇರಿಯಿದ್ದು, ಉತ್ತರ ಹಿಂದೂ ಮಹಾಸಾಗರ ವಿಭಾಗಕ್ಕೆ ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ…
ಈ ವಿಭಾಗದ ಸೈಕ್ಲೋನ್‍ಗಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕ, ಮಾಲ್ಡೀವ್ಸ್, ಮ್ಯಾನ್‍ಮಾರ್, ಥೈಲಾಂಡ್ ಮತ್ತು ಓಮನ್ ದೇಶದವರು ಸೇರಿ ಹೆಸರಿಟ್ಟಿದ್ದಾರೆ.

ಈ ಪಟ್ಟಿ ಇಲ್ಲಿದೆ:

ಭಾರತೀಯ ಹವಾಮಾನ ಇಲಾಖೆ ಜನತೆಗೆ ಹೊಸ ಹೆಸರನ್ನು ಸೂಚಿಸಬಹುದಾದ ಅವಕಾಶ ಕೊಡುತ್ತದೆಯಾದರೂ, ೨೦೦೪ರಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಸದ್ಯದಲ್ಲಿ ಬದಲಾಯಿಸುವುದು ಅನುಮಾನ…ಹಾಗಾಗಿ, ಸೈಕ್ಲೋನ್ ಲೈಲಾ-’ಸೈಕ್ಲೋನ್’ ಮಜನೂನ ಸದ್ಯಕ್ಕಂತೂ ಸೇರೋಕಾಗೋದಿಲ್ಲ…!

ಇವೆಲ್ಲಾ ವಿಷಯ ಓದಿ ನಿಮಗೆ ಇನ್ನೂ ಸಮಾಧಾನ ಆಗಲಿಲ್ಲವಾದಲ್ಲಿ, ಹೆಚ್ಚಿನ ವಿಷಯಗಳಿಗೆ ಇಲ್ಲಿ ಚಿಟಕಿಸಿ:
http://www.wmo.int/pages/prog/www/tcp/Storm-naming.html

ಇಷ್ಟೆಲ್ಲ ಕಥೆ ಹೇಳಿದ್ದಾಯ್ತು, ಮುಖ್ಯವಾದ ವಿಷಯ ಹೇಳೋದ್ದನ್ನೇ ಮರೆತಿದ್ದೇ…
ಸ್ಯಾಂಡಿ – ಸಂಧ್ಯಾನೇ ಅಂತ ಕನ್ಫರ್ಮ್ ಆಯ್ತು ಯಾಕೇ ಅಂದ್ರೆ ಅವಳ ಹಿಂದೆ ಬಂದಿದ್ದು ರಾಫಲ್ ಮುಂದೆ ಬರೋವ್ನು ಟೋನಿ…! :-)

ಹೆಚ್ಚಿನ ಮಾಹಿತಿಗೆ:
http://www.wmo.int
ಚಿತ್ರ ಕೃಪೆ: http://www.imd.gov.in/
ಸ್ಯಾಂಡಿ ಚಿತ್ರಕೃಪೆ: http://www.telegraph.co.uk

ಲೇಖಕ: ಶ್ರೀನಿವಾಸ್ ಪ. ಶೇ.

ಹುಟ್ಟಿದ್ದು, ಬೆಳೆದದ್ದು, ಓದಿದ್ದು ಬೆಂಗಳೂರಲ್ಲಿ. ಸುಮಾರು ಹನ್ನೆರಡು ವರ್ಷದಿಂದ ಹಲವಾರು ನೆಟ್‍ವರ್ಕಿಂಗ್ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ ಅನುಭವ. ಈಗ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಪ್ರಮುಖ ನೆಟ್‍ ವರ್ಕಿಂಗ್ ಸಂಸ್ಥೆಯೊಂದಕ್ಕೆ ಕೆಲಸ ಮಾಡುತ್ತಿರುವರು. ಪ್ರವಾಸ, ಚಾರಣ, ಛಾಯಾಗ್ರಹಣ, ವ್ಯಂಗ್ಯಚಿತ್ರಕಲೆ, ಸಣ್ಣ ಕಥೆ-ಹಾಡು-ಕವನ-ಚುಟುಕಗಳನ್ನು ಬರೆಯುವ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ.