ಪ್ರಕಟಿಸಿದ್ದು ದಿನಾಂಕ Jan 2, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು.

ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಹಕ್ಕಿಗಳು ಕೆಲವಾದರೆ, ಊರಾಚೆಗಿನ ತೋಪುಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿ ವಾಸಿಸುವ ಪಕ್ಷಿಗಳು ಹಲವಾರು. ಅವುಗಳ ಬಣ್ಣ, ಆಕಾರ, ದನಿ, ಸ್ವಭಾವ, ನೆಲೆ, ಆಹಾರ, ಗೂಡುಕಟ್ಟುವ ಹಾಗೂ ಮರಿಗಳನ್ನು ಸಾಕುವ ವಿಧಾನ ಸಹ ವೈವಿಧ್ಯಮಯ.

’ಪಕ್ಷಿ ವೀಕ್ಷಣೆ’ ಕುತೂಹಲಕಾರಿಯಾದ, ಹೆಚ್ಚು ದುಬಾರಿಯಲ್ಲದ, ಪರಿಸರದ ಬಗ್ಗೆ, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು, ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹವ್ಯಾಸ. ಇದನ್ನು ಒಂದು ಅಧ್ಯಯನ ಎಂದು ಹೇಳಲೂಬಹುದು. ಪಕ್ಷಿ ವೀಕ್ಷಣೆಗೆ ಬೇಕಾಗುವ ವಸ್ತುಗಳು ಸಹ ತೀರಾ ಸಾಮಾನ್ಯವಾದುವು. ಒಂದು ನೋಟ್ ಪುಸ್ತಕ, ಲೇಖನಿ, ದುರ್ಬೀನು ಹಾಗೂ ಅತ್ಯಂತ ಮುಖ್ಯವಾಗಿ ತಾಳ್ಮೆ. ಪಕ್ಷಿ ವೀಕ್ಷಣೆಯಲ್ಲಿ ಮಕ್ಕಳೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು.

ಮನೆಯಂಗಳದಿಂದಲೇ ಪಕ್ಷಿ ವೀಕ್ಷಣೆ ಪ್ರಾರಂಭಿಸಬಹುದು. ದುರ್ಬೀನು ಇದ್ದರೆ ಇನ್ನೂ ಉತ್ತಮ. ನಗರೀಕರಣದ ಪರಿಣಾಮವಾಗಿ ಪಕ್ಷಿಗಳು ಕಾಣಿಸುವುದು ಅಪರೂಪವಾಗಿರಬಹುದು. ಆದರೂ ಮರಗಳ ಗುಂಪಿನಲ್ಲಿ, ಕೆರೆಕಟ್ಟೆಗಳ ಸಮೀಪ, ಟೆಲಿಗ್ರಾಫ್ ತಂತಿಗಳ ಮೇಲೆ ಕುಳಿತ ಹಕ್ಕಿ ಸಾಲನ್ನು ನೋಡಬಹುದು. ಸಹಜವಾಗಿಯೇ ಪಕ್ಷಿಗಳಿಗೆ ಮನುಷ್ಯರ ಬಗ್ಗೆ ಅಂಜಿಕೆ ಇರುತ್ತದೆ. ಅವು ತಮ್ಮಷ್ಟಕ್ಕೆ ಇರಬಯಸುತ್ತವೆ. ಕಿರುಕುಳವನ್ನು ಸಹಿಸಲಾರವು. ಆದುದರಿಂದ, ಸಾಧ್ಯವಾದಷ್ಟು ಮರೆಯಲ್ಲಿ ನಿಂತು, ಅವುಗಳ ಏಕಾಂತತೆಗೆ ಭಂಗವಾಗದಂತೆ, ತುಸು ದೂರದಿಂದಲೇ ಪಕ್ಷಿವೀಕ್ಷಣೆ ಮಾಡುವುದು ಒಳ್ಳೆಯದು. ಆಗ ದುರ್ಬೀನು ಸಹಾಯಕ್ಕೆ ಬರುತ್ತದೆ.

ಪಕ್ಷಿಗಳು ಗೂಡು ಕಟ್ಟುವುದನ್ನು, ಆಹಾರ ಸಂಗ್ರಹಿಸುವುದನ್ನು, ಸಲ್ಲಾಪ ನಡೆಸುವುದನ್ನು, ಮೊಟ್ಟೆಗಳನ್ನು ಜೋಪಾನ ಮಾಡುವುದನ್ನು, ಕಾವು ಕೊಡುವುದನ್ನು, ಮರಿಗಳಿಗೆ ಗುಟುಕು ನೀಡುವುದನ್ನು, ಅಪಾಯದ ಸಂದರ್ಭದಲ್ಲಿ ಗಾಬರಿಯ ದನಿಯಲ್ಲಿ ಸೂಚನೆ ನೀಡುವುದು, ಪ್ರತಿಭಟಿಸುವುದು, ಅಪಾಯ ನೀಗಿದ ಮೇಲೆ ಹರ್ಷದ ದನಿ ಹೊರಡಿಸುವುದು, ನೀರಿನಲ್ಲಿ ಮುಳುಗು ಹಾಕಿ ಬಿಸಿಲಿನ ಝಳದಿಂದ ಸಾಂತ್ವನ ಪಡೆಯುವುದು, ಮುಂತಾದವನ್ನು ಮರೆಯಲ್ಲಿ ನಿಂತು ನೋಡುತ್ತ ಹೋದಂತೆ ಅವುಗಳ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ.

ಪಕ್ಷಿಗಳ ವಲಸೆ ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ವಿದ್ಯಮಾನ. ಅವು ಭೂಖಂಡದ ಬೇರೆ ಬೇರೆ ಭಾಗಗಳಿಂದ, ಭೌಗೋಳಿಕ ಎಲ್ಲೆಗಳನ್ನು ದಾಟಿ, ಹಾರಿ ಬಂದು ಒಂದು ನಿರ್ದಿಷ್ಟ ತಾಣದಲ್ಲಿ ಸಂಸಾರ ಹೂಡುತ್ತವೆ, ಆಹಾರ ಸಂಗ್ರಹಿಸುತ್ತವೆ, ಮೊಟ್ಟೆಯಿಟ್ಟು ಮರಿಮಾಡುತ್ತವೆ. ಮರಿಗಳು ಹಾಡುವಂತಾಗುವ ವೇಳೆಗೆ ಹಾರಿಹೋಗುತ್ತವೆ. ಇವೆಲ್ಲಾ ಪಕ್ಷಿವೀಕ್ಷಕರ ಅಧ್ಯಯನಕ್ಕೆ ಬಹಳ ಮುಖ್ಯವಾದ ವಿಷಯಗಳಾಗಿವೆ.

ಪಕ್ಷಿ ವೀಕ್ಷಕರು ತಮ್ಮ ಪುಸ್ತಕಗಳಲ್ಲಿ ಈ ಕೆಳಕಂಡಂತೆ ವಿವರಗಳನ್ನು ಸಂಗ್ರಹಿಸಿ ಪಕ್ಷಿಗಳನ್ನು ಕುರಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಪಕ್ಷಿ ವೀಕ್ಷಣೆ ವಿವರ:

ವೇಳೆ: ದಿನಾಂಕ:
ಸ್ಥಳ: ಋತು:
ಪಕ್ಷಿಯ ವರ್ಣನೆ:
ಆಕಾರ:
ಬಣ್ಣ:
ಪ್ರಮುಖ ವೈಶಿಷ್ಟ್ಯಗಳು
ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸ
ಮರಿಗಳ ಬಣ್ಣ ಮತ್ತು ಸ್ವರೂಪ
ಪಕ್ಷಿಯ ನಡೆವಳಿಕೆ:
ಧ್ವನಿ:
ಗೂಡಿನ ವರ್ಣನೆ:
ಪ್ರವಾಸಿ ಪಕ್ಷಿಯೇ ಅಥವಾ ಸ್ಥಳೀಯ ಪಕ್ಷಿಯೇ?

ಲೇಖಕ: ಅನಿಲ್ ರಮೇಶ್

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ, ಓದುಗ, ಬರಹಗಾರ. ಅನವರತ ಎಂಬ ಬ್ಲಾಗ್ ಅಲ್ಲಿ ಬರಹ. ಸ್ನೇಹಜೀವಿ. ಸಾಹಿತ್ಯದಲ್ಲಿ ಮತ್ತು ಸಂಗೀತದಲ್ಲಿ ಆಸಕ್ತಿ.