Posted on Aug 7, 2012 in 2012, ale2 | 1 comment

ಚಿತ್ರ ಕೃಪೆ: ವಿಕಿಪೀಡಿಯ

ಅದೊಂದು ಕಾಲವಿತ್ತು. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಾದಲ್ಲಿ ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇರುವವರ ಬಳಿಗೋ ಗ್ರಂಥಾಲಯಕ್ಕೋ ಹೋಗಿ, ನೂರಾರು ಪುಸ್ತಕಗಳನ್ನು ತಡಕಾಡಿ, ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬೇಕಾಗಿತ್ತು. ಎಷ್ಟೋ ಬಾರಿ ಸಿಗುವ ಮಾಹಿತಿ ಯಾವುದೋ ಅಜ್ಜನ ಕಾಲದ್ದಾಗಿದ್ದು, ಅಪ್ರಸ್ತುತವಾಗಿರುವ ಸಾಧ್ಯತೆಯೂ ಇತ್ತು. ಶಾಲೆ-ಕಾಲೇಜುಗಳಲ್ಲಿ ರಸಪ್ರಶ್ನೆ ಮುಂತಾದ ಸ್ಪರ್ಧೆ ಮಾಡುವವರೆಂದರೆ ಅನೇಕ ಪುಸ್ತಕ, ದಿನಪತ್ರಿಕೆಗಳನ್ನು ಓದಿ ಓಡಾಡುವ ವಿಶ್ವಕೋಶದಂತಿರಬೇಕಿತ್ತು.

ನಂತರದ ಕಾಲದ ಅಂತರಜಾಲ ಬೆಳೆದಂತೆ ಯಾಹೂ, ಗೂಗಲ್, ಎಮ್ಮೆಸ್ಸೆನ್ ಮುಂತಾದ ಸರ್ಚ್ ಇಂಜಿನ್‌ಗಳು ಬಂದಂತೆ ಈ ಮಾಹಿತಿ ಹುಡುಕಾಟ ಸುಲಭವಾಯಿತು. ಯಾವ ವಿಷಯದ ಬಗ್ಗೆ ಮಾಹಿತಿ ಬೇಕೋ, ಆ ವಿಷಯಕ್ಕೆ ಸಂಬಂಧಿಸಿದ ಪದಗಳನ್ನು ಬಳಸಿ ಯಾರು ಬೇಕಾದರೂ ಮಾಹಿತಿ ಹುಡುಕಬಹುದಾಯಿತು.

ಹೀಗೆ ಸಿಕ್ಕ ಮಾಹಿತಿಯನ್ನು ನಂಬುವ ಹಾಗಿರಲಿಲ್ಲ. ಅದು ತಪ್ಪೂ ಇರಬಹುದಿತ್ತು, ಸರಿಯೂ ಇರಬಹುದಿತ್ತು. ಹೀಗಾಗಿ ಅಂತರಜಾಲದಲ್ಲಿ ಎಲ್ಲ ವಿಷಯದ ಬಗ್ಗೆಯೂ ಅಧಿಕೃತವಾದ, ದೃಢವಾದ, ಪರಿಶೀಲಿಸಲ್ಪಟ್ಟ ಮಾಹಿತಿಗಳು ಒಂದೇ ಕಡೆ ಸಿಗುವಂತೆ ಮಾಡಲು ನೂಪೀಡಿಯ ಎಂಬ ಒಂದು ಯೋಜನೆ ಹುಟ್ಟಿಕೊಂಡಿತು. ಇದಕ್ಕೆ ಯಾರು ಬೇಕಾದರೂ ಮಾಹಿತಿ ಬರೆದು ಕಳುಹಿಸಬೇಹುದಾಗಿತ್ತು. ೭ ಸುತ್ತಿನ ಪರಿಶೀಲನೆಯ ನಂತರ ಅಧಿಕೃತವಾಗಿ ಪ್ರದರ್ಶಿಸಲಾಗುತ್ತಿತ್ತು. ಈ ವ್ಯವಸ್ಥೆ ಮೇಲ್ನೋಟಕ್ಕೆ ಉತ್ತಮವಾಗಿಯೇ ಕಂಡರೂ ಲೇಖನಗಳ ಸಂಖ್ಯೆ ಹೆಚ್ಚಿದಂತೆ, ಪರಿಶೀಲನೆ ಕಷ್ಟವಾಗತೊಡಗಿತು. ಹಾಗಾಗಿ ನೂಪೀಡಿಯಕ್ಕೆ ಒಂದು ವರ್ಷದಲ್ಲಿ ಕೇವಲ ೧೨ ಲೇಖನ ಮಾತ್ರ ಸೇರಿತು.

ನೂಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದ ಜಿಮ್ಮಿ ವೇಲ್ಸ್ ಮತ್ತು ಸಂಗಡಿಗ ಲ್ಯಾರಿ ಸೇಂಜರ್ ಈ ತೊಂದರೆಯನ್ನು ಪರಿಹರಿಸಲು ಪರ್ಯಾಯ ವಿಧಾನಗಳನ್ನು ಹುಡುಕಲಾರಂಭಿಸಿದರು. ಇದೇ ಸಮಯದಲ್ಲಿ, ಬೆನ್ ಕೋವಿಜ್ ಎಂಬ ಪ್ರೋಗ್ರಾಮರ್ ಒಬ್ಬ “ವಿಕಿ” ತಂತ್ರಾಂಶವನ್ನು ಅವರಿಗೆ ಪರಿಚಯಿಸಿದ. ಅದು ಯಾರು ಬೇಕಾದರೂ, ಯಾವಾಗ ಬೇಕಾದರೂ, ಯಾವ ಮಾಹಿತಿಯನ್ನು ಬೇಕಾದರೂ ಬದಲಾಯಿಸಬಲ್ಲ ತಂತ್ರಾಂಶವಾಗಿತ್ತು. ಜಿಮ್ಮಿ ವೇಲ್ಸ್ ಈ ವಿಕಿ ತಂತ್ರಾಂಶದ ಮೂಲಕ ಯಾರು ಬೇಕಾದರೂ ಮಾಹಿತಿಯನ್ನು ಸೇರಿಸಬಹುದಾದ ಒಂದು ಹೊಸ ಯೋಜನೆಯ ಪರಿಕಲ್ಪನೆಗೆ ಜನವರಿ ೧೦, ೨೦೦೧ರಂದು ಚಾಲನೆ ನೀಡಿದ. ಆದರೆ ನೂಪೀಡಿಯದಲ್ಲಿದ್ದ ಸಂಪಾದಕರು ಅದರ ವಿಶ್ವಾಸಾರ್ಹತೆ ಕಡಿಮೆಯಾಗಬಹುದೆಂದು ತಿಳಿದು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಹಾಗಾಗಿ, ಜಿಮ್ಮಿ ವೇಲ್ಸ್ ಈ ಯೋಜನೆಯನ್ನು ನೂಪೀಡಿಯದಿಂದ ಬೇರ್ಪಡಿಸಿ, ಸ್ವತಂತ್ರವಾಗಿ ೨೦೦೧ರ ಜನವರಿ ೧೫ರಂದು ವಿಕಿಪೀಡಿಯ ಎಂಬ ಹೆಸರಿನೊಂದಿಗೆ ಪ್ರಾರಂಭಿಸಿದ.

ಹೀಗೆ ಪ್ರಾರಂಭವಾದ ವಿಕಿಪೀಡಿಯಕ್ಕೆ ಮೊದಲ ತಿಂಗಳಿನೊಳಗೇ ಸಾವಿರ ಲೇಖನಗಳು ಸೇರಿಸಲ್ಪಟ್ಟವು. ೮ ತಿಂಗಳಿನಲ್ಲಿ ಹತ್ತು ಸಾವಿರ ಲೇಖನಗಳು ತುಂಬಿದವು. ಯಾವುದೇ ಲೇಖನದಿಂದ, ಅದಕ್ಕೆ ಸಂಬಂಧಿಸಿದ ಇನ್ನಾವುದೋ ಲೇಖನಕ್ಕೆ ಕೇವಲ ಕ್ಲಿಕ್ ಮಾಡುವ ಮೂಲಕ ಹೋಗುವ, ತಪ್ಪು ಕಂಡುಬಂದಲ್ಲಿ ಓದುಗರೇ ತಿದ್ದಬಹುದಾದ ಈ ತನ್ನ ವಿಶಿಷ್ಟ ಯೋಜನೆ ಇಷ್ಟು ಜನಪ್ರಿಯವಾಗಿ, ಇಷ್ಟು ವೇಗವಾಗಿ ಬೆಳೆಯಬಹುದೆಂದು ಬಹುಶಃ ಸ್ವತಃ ಜಿಮ್ಮಿ ವೇಲ್ಸ್ ಕೂಡ ಅಂದುಕೊಂಡಿರಲಿಕ್ಕಿಲ್ಲ!

ಈ ಮಧ್ಯೆ ಇನ್ನೊಂದು ಜಿಜ್ಞಾಸೆ ಪ್ರಾರಂಭವಾಯಿತು. ಬ್ರಿಟಾನಿಯಾ ಮುಂತಾದ ವಿಶ್ವಕೋಶಗಳಲ್ಲಿ ಅಧಿಕೃತ ಸಂಪಾದಕ ಮಂಡಳಿ ಇರುತ್ತದೆ; ಅದರಲ್ಲಿನ ಮಾಹಿತಿ ಪರಿಣಿತರಿಂದ ಪರಿಶೀಲಿಸಲ್ಪಟ್ಟಿರುತ್ತದೆ ಹಾಗಾಗಿ ಅದನ್ನು ನಂಬಬಹುದು. ಆದರೆ ವಿಕಿಪೀಡಿಯದಲ್ಲಿ ಇರುವ ಲೇಖನಗಳ ವಿಶ್ವಾಸಾರ್ಹತೆ ಎಷ್ಟು? ನಾನು, ನೀವು ಸೇರಿದಂತೆ ಯಾರು ಬೇಕಾದರೂ ಬರೆಯಬಹುದಾದ್ದರಿಂದ, ಅದರಲ್ಲಿ ಯಾರಾದರೂ “ಮೊಲಕ್ಕೆ ಮೂರು ಕಾಲು, ಎರಡು ಕೊಂಬು ಇರುತ್ತದೆ. ಮೊಲ ಒಂದು ಮಾಂಸಾಹಾರಿ ಪ್ರಾಣಿ” ಎಂದು ಬರೆದರೆ ಅದು ಕೂಡ ವಿಕಿಪೀಡಿಯದಲ್ಲಿ ದಾಖಲಾಗುತ್ತದೆ. ಹಾಗಾಗಿ ಇದನ್ನು ನಂಬುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು, ವಿಕಿಪೀಡಿಯದ ೫ ಆಧಾರಸ್ತಂಭಗಳನ್ನು ನೋಡೋಣ:

೧. ವಿಕಿಪೀಡಿಯ ಒಂದು ವಿಶ್ವಕೋಶ :- ಇದೊಂದು ವಿಶ್ವಕೋಶ ಎಂದು ಗೊತ್ತು, ಅದೇನು ದೊಡ್ಡ ವಿಷಯ ಎನ್ನಬೇಡಿ. ಅದರ ಅರ್ಥ, ಅದರಲ್ಲಿ ಇರಬೇಕಾಗಿದ್ದು ವಾಸ್ತವಾಂಶಗಳೇ ಹೊರತು, ಕಥೆ-ಕವನ-ಸುದ್ದಿ-ಅಭಿಪ್ರಾಯಗಳಲ್ಲ.
೨. ವಿಕಿಪೀಡಿಯದಲ್ಲಿನ ಲೇಖನಗಳು ತಟಸ್ಥ ದೃಷ್ಟಿಕೋನದಿಂದ ಬರೆಯಬೇಕು :- ಯಾರೇ ಆಗಲಿ ವಿಷಯ ಬರೆಯುವಾಗ ಅರ್ಧ ಸತ್ಯ ಬರೆಯಬಾರದು. ಇದು ನಾನು ಓದಿದ ಶಾಲೆ ಎಂದು ಆ ಶಾಲೆಯನ್ನು ಹೊಗಳುವುದೋ, ಅಥವಾ ಯಾವುದೋ ಆಟಗಾರ ನನಗಿಷ್ಟವಿಲ್ಲ ಎಂದು ಕೇವಲ ಅವನು ಸಿಕ್ಕಿಹಾಕಿಕೊಂಡ ವಿವಾದಗಳ ಬಗ್ಗೆ ಮಾತ್ರ ಬರೆಯುವುದು – ಹೀಗೆ ಮಾಡುವಂತಿಲ್ಲ. ಒಂದು ವಿಷಯದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಬರೆಯಬೇಕು.
೩. ವಿಕಿಪೀಡಿಯದ ಲೇಖನಗಳನ್ನು ಯಾರು ಬೇಕಾದರೂ ವೀಕ್ಷಿಸಬಹುದು, ಬದಲಿಸಬಹುದು ಮತ್ತು ಹಂಚಬಹುದು :- ವಿಕಿಪೀಡಿಯ ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಷೇರ್ ಅಲೈಕ್ ಲೈಸೆನ್ಸ್ ಮಾದರಿಯನ್ನು ಹೊಂದಿದೆ. ಅಂದರೆ ವಿಕಿಪೀಡಿಯವನ್ನು ನೀವು ಕೇವಲ ಓದುವುದು, ಬರೆಯುವುದು, ತಿದ್ದುವುದು ಅಷ್ಟೇ ಅಲ್ಲ, ಅದನ್ನು ಬೇರೆಯವರಿಗೆ ಕೂಡ ಹಂಚಬಹುದು. ವಿಕಿಪೀಡಿಯದ ಸಂಪೂರ್ಣ ದತ್ತಾಂಶವನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಂದೇ ನಿಬಂಧನೆಯೆಂದರೆ,ನೀವು ಅದನ್ನು ವಿಕಿಪೀಡಿಯದಿಂದ ತೆಗೆದುಕೊಂಡಿದ್ದೀರಿ ಎಂಬುದನ್ನು ನಮೂದಿಸಬೇಕು.
೪. ವಿಕಿಪೀಡಿಯದ ಸಂಪಾದಕರು ಪರಸ್ಪರ ಸಂವಹನ ನಡೆಸುವಾಗ ಗೌರವಯುತವಾಗಿ ಮತ್ತು ಸಭ್ಯವಾಗಿ ವರ್ತಿಸಬೇಕು :- ಕೆಲವೊಮ್ಮೆ ಲೇಖನಗಳನ್ನು ತಿದ್ದುವುದು ವೈಯಕ್ತಿಕ ಪ್ರತಿಷ್ಠೆಯ ವಿಷಯಗಳಾಗುವುದುಂಟು. ಹೀಗಾಗಬಾರದೆಂದು ಈ ಕಿವಿಮಾತು.
೫. ವಿಕಿಪೀಡಿಯದಲ್ಲಿ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ – ಈ ಮೇಲಿನ ನಿಯಮಗಳು ಜನರಿಂದಲೇ ಮಾಡಿದ್ದು, ಅವು ಕೇವಲ ಮಾರ್ಗದರ್ಶಿ ಸೂತ್ರಗಳಷ್ಟೇ. ವಿಕಿಪೀಡಿಯದ ಮಾಹಿತಿಯನ್ನು ಉತ್ತಮಗೊಳಿಸಬಹುದೆಂದು ನಿಮಗೆ ಅನ್ನಿಸಿದರೆ ನೀವು ನಿಯಮಗಳನ್ನು ಗಾಳಿಗೆ ತೂರಿ ಲೇಖನ ಬದಲಾಯಿಸಬಹುದು.

ಈಗ ಹಿಂದೆ ಉದ್ಭವಿಸಿದ ಪ್ರಶ್ನೆಗೆ ಉತ್ತರ ಕಂಡುಹಿಡಿಯೋಣ. ಒಬ್ಬ “ಮೊಲಕ್ಕೆ ಮೂರು ಕಾಲು, ಎರಡು ಕೊಂಬು ಇರುತ್ತದೆ. ” ಎಂದು ಬರೆದ. ಇನ್ನೊಬ್ಬ ಕೂಡ ಅದನ್ನು ಓದಬಹುದು, ಬದಲಾಯಿಸಬಹುದು ತಾನೆ? ಅವನು ಬಂದು “ಮೊಲಕ್ಕೆ ನಾಲ್ಕು ಕಾಲು ಇರುತ್ತದೆ, ಎರಡು ಕಿವಿ ಇರುತ್ತದೆ” ಎಂದು ತಿದ್ದಬಹುದು. ಮೊದಲ ವ್ಯಕ್ತಿ ಬಂದು ಈ ಬದಲಾವಣೆ ನೋಡಿ ಮತ್ತೆ ಅದನ್ನು ಮೂರು ಕಾಲು ಎರಡು ಕೊಂಬು ಎಂದು ತಿದ್ದಬಹುದು. ಆಗ ಎರಡನೇ ವ್ಯಕ್ತಿ ಬಂದು ಯಾವುದೋ ಅಧಿಕೃತ ಪುಸ್ತಕ, ಜಾಲತಾಣ ಅಥವಾ ಪತ್ರಿಕಾ ವರದಿ ಅಥವಾ ಸಂಶೋಧನಾ ಪ್ರಬಂಧ – ಇವುಗಳನ್ನು ಉದ್ಧರಿಸಿ ಮೊಲಕ್ಕೆ ನಾಲ್ಕು ಕಾಲು, ಎರಡು ಕಿವಿ ಎಂದು ಮತ್ತೆ ತಿದ್ದಬಹುದು. ಈ ರೀತಿ ಸಮರ್ಥನೆಗಳನ್ನು ನೀಡುವುದಕ್ಕೆ ವಿಕಿಪೀಡಿಯದಲ್ಲಿ ಉಲ್ಲೇಖಗಳು/ಆಧಾರಗಳು (references/citations) ಎಂದು ಕರೆಯಲಾಗುತ್ತದೆ (ಸಾಮಾನ್ಯವಾಗಿ ಲೇಖನಗಳ ಕೆಳಗೆ ಇರುತ್ತವೆ, ಮತ್ತು ಲೇಖನದ ನಡುವೆ ಸಣ್ಣ ಸಂಖ್ಯೆ ನೀಡಲಾಗಿರುತ್ತದೆ). ಯಾವುದು ಸಮರ್ಪಕವಾದ ಆಧಾರವಿದೆಯೋ ಅದನ್ನು ಸರಿ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಮೀರಿ ಮೊದಲ ವ್ಯಕ್ತಿ ಬಂದು, ಯಾವುದೇ ಸಮರ್ಪಕ ಪುರಾವೆ ನೀಡದೆ ಮತ್ತೆ ಮೂರು ಕಾಲು ಎಂದು ತಿದ್ದಿದರೆ, ವಿವಾದ  ಬಗೆಹರಿಯುವವರೆಗೆ ಆ ಲೇಖನವನ್ನು ಸಂರಕ್ಷಿತಗೊಳಿಸುವ (locked article) ಮತ್ತು ಆ ವ್ಯಕ್ತಿ ಈ ರೀತಿಯ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ಆ ವ್ಯಕ್ತಿ ವಿಕಿಪೀಡಿಯ ಸಂಪಾದನೆ ಮಾಡಲು ಬಾರದಂತೆ ನಿಷೇಧಿಸುವ (ban) ಸೌಲಭ್ಯವೂ ಇದೆ. ಹೀಗಾಗಿ, ಒಬ್ಬ ವ್ಯಕ್ತಿ ತಪ್ಪು ಬರೆದರೂ, ತಿದ್ದುವವರು ಇರುವಾಗ ತನ್ನಿಂತಾನೇ ಲೇಖನದಲ್ಲಿನ ಸತ್ಯಾಂಶ ಮತ್ತು ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಇತ್ತೀಚಿನ ವರದಿ ಪ್ರಕಾರ ಬ್ರಿಟಾನಿಕಾ ಮತ್ತು ವಿಕಿಪೀಡಿಯ ಎರಡೂ ಕೂಡ ವಿಶ್ವಾಸಾರ್ಹತೆಯಲ್ಲಿ ಒಂದೇ ಮಟ್ಟವನ್ನು ಹೊಂದಿವೆ ಎಂದು ತಿಳಿದುಬರುತ್ತದೆ.

ಯಾವುದೇ ಪ್ರಮುಖ ವಿಷಯದ ಬಗ್ಗೆ ಮಾಹಿತಿ ಹುಡುಕಿದಾಗಲೂ ಮೊದಲು ಸಿಗುವ ಕೊಂಡಿ ವಿಕಿಪೀಡಿಯದ್ದು. ವಿಜ್ಞಾನ, ಕಲೆ, ಸಾಹಿತ್ಯ, ಪುರಾಣ – ಯಾವುದೇ ವಿಷಯವಿರಲಿ, ವಿಕಿಪೀಡಿಯದಲ್ಲಿ ಮಾಹಿತಿಯಿರುತ್ತದೆ. ಹಾಗಾಗಿ ವಿಕಿಪೀಡಿಯ ಇಲ್ಲದೇ ಮಾಹಿತಿ ಹುಡುಕುವುದೇ ಕಷ್ಟವೇನೋ ಎನ್ನುವಷ್ಟು ಹಾಸುಹೊಕ್ಕಾಗಿದೆ. ವಿಕಿಪೀಡಿಯ ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ, ಹಿಂದೀ, ಸಂಸ್ಕೃತ ಮುಂತಾದ ೨೦ ಭಾರತೀಯ ಭಾಷೆಗಳೂ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಲಭ್ಯವಿದೆ. ಆಂಗ್ಲದಲ್ಲಿ ನಲವತ್ತು ಲಕ್ಷಕ್ಕಿಂತ ಹೆಚ್ಚು ವಿಷಯಗಳ ಮಾಹಿತಿಯಿದ್ದರೆ, ಕನ್ನಡದಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ವಿಷಯಗಳ ಬಗ್ಗೆ ಮಾಹಿತಿಯದೆ.

ಇವೆಲ್ಲವೂ ಸಾಧ್ಯವಾಗುವುದು ನನ್ನ-ನಿಮ್ಮಂಥವರಿಂದ. ಯಾರು ಬೇಕಾದರೂ ವಿಕಿಪೀಡಿಯದ ಲೇಖನಗಳ ಮೇಲ್ಭಾಗದಲ್ಲಿ ಇರುವ Edit/ಸಂಪಾದಿಸು ಎನ್ನುವ ಕೊಂಡಿಯನ್ನು ಒತ್ತಿ, ಲೇಖನವನ್ನು ಬದಲಾಯಿಸಬಹುದು, ತಿದ್ದಬಹುದು, ಹೆಚ್ಚಿನ ಮಾಹಿತಿಯನ್ನು ಸೇರಿಸಬಹುದು. ನಮ್ಮ ಊರಿಗೆ-ಸಂಸ್ಕೃತಿಗೆ-ಕೆಲಸಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಾವೇ ಬರೆಯಬಹುದು. ನಮಗೆ ಗೊತ್ತಿರುವ ವಿಷಯಗಳನ್ನು ವಿಕಿಪೀಡಿಯದಲ್ಲಿ ಬರೆದು ಹಾಕಿ ಇತರರಿಗೂ ಸುಲಭವಾಗಿ ಸಿಗುವಂತೆ ಹಂಚಿಕೊಂಡರೆ ನಾವು ಆ ವಿಷಯ ತಿಳಿದುಕೊಂಡಿದ್ದೂ ಸಾರ್ಥಕವಾದಂತೆ. ಅಲ್ಲವೆ?

ಹರೀಶ್ ಊರು ಸಾಗರದ ಹತ್ತಿರ ಮಂಚಾಲೆ. ದಾವಣಗೆರೆಯ ಬಿ.ಐ.ಇ.ಟಿ ಯಲ್ಲಿ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮುಗಿಸಿ ಈಗ ಟಾಟಾ ಎಲೆಕ್ಸಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷೆಯ ಬಳಕೆ, ತಂತ್ರಜ್ಞಾನದ ವಿಷಯಗಳಲ್ಲಿ ಆಸಕ್ತಿಯಿದೆ.