Posted on Aug 3, 2012 in 2012, ale2 | 4 comments

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ.

ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ.

೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು  ಬಳಸುವಂತಿಲ್ಲ.

೨.  ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ ಉಪಯೋಗಿಸತಕ್ಕದ್ದು. ಪೈಪ್ ಹಾಕಿ ಬೇರೆ ಕಡೆಗೂ ಎಳೆಯುವಂತಿಲ್ಲ

೩. ಈ ನಲ್ಲಿಯನ್ನು ನೀವು ಬಾಯಿ ಮುಕ್ಕಳಿಸಲು ಮಾತ್ರ ಬಳಸಬೇಕು, ಬೇರೆ ಏನೂ ಮಾಡುವಂತಿಲ್ಲ.

೪. ಈ ನಲ್ಲಿಯನ್ನು ಸಾರ್ವಜನಿಕ ಬಳಕೆಗೆ ಬಿಡುವಂತಿಲ್ಲ.

೫. ಈ ನಲ್ಲಿಯನ್ನು ನೀವು ಬಿಚ್ಚಿ ರಿಪೇರಿ ಮಾಡುವಂತಿಲ್ಲ.

೬, ಈ ನಲ್ಲಿಗೆ ನೀವು ಬೇರೆ ಯಾವುದೇ ಸಲಕರಣೆ ಸೇರಿಸುವಂತಿಲ್ಲ.

೭. ಈ ನಲ್ಲಿಯನ್ನು ನೀವು ಬೇರೆಯವರಿಗೆ ಮಾರುವುದಕ್ಕಾಗಲೀ/ಕೊಡುವುದಕ್ಕಾಗಲೀ ಅನುಮತಿ ಇಲ್ಲ.

೮ .  ನಲ್ಲಿಗೆ ಹಾಕುವ ನಟ್ಟು ಬೋಲ್ಟು ಮತ್ತು ಮುಂತಾದವುಗಳನ್ನ ಈ ನಲ್ಲಿಯ ವರ್ತಕನಲ್ಲಿಯೇ ಕೊಳ್ಳಬೇಕು. ಬೇರೆಯಲ್ಲಿ ಕೊಂಡರೆ ಅದು ಈ ನಲ್ಲಿಗೆ ಸರಿ ಹೊಂದುವುದಿಲ. ಸರಿ ಹೊಂದುವ ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ.

ಈಗ ನೀವು ಈ ನಲ್ಲಿಯನ್ನು ಕೇವಲ ನೀವೊಬ್ಬರು ಮಾತ್ರ ಬಳಸಬೇಕು. ಅದರಲ್ಲೂ ಕೇವಲ ಬಾಯಿ ಮುಕ್ಕಳಿಸಲು ಬಳಸಬೇಕು. ಅದು ಬಿಟ್ಟು ನಿಮಗೆ ಬೇರೆ ಸ್ವಾತಂತ್ರವಿಲ್ಲ.

ಬಹುಶಃ ಇಂತಹುದೇ ಒಂದು ಸ್ಥಿತಿ ೧೯೮೦ರ ಸುಮಾರಿಗೆ ರಿಚರ್ಡ್ ಸ್ಟಾಲ್‍ಮನ್ ( ಜನ ಅವರನ್ನು ಆರೆಮ್ಮೆಸ್ ಎಂದೂ ಕರೆಯುತ್ತಾರೆ) ಅನುಭವಿಸಿದ್ದು. ಅವರ ಕಚೇರಿಯ ಪ್ರಿಂಟರ್ ಉಪಯೋಗಕ್ಕೆಂದು ಅವರು ಬರೆದ ಕೋಡ್ ಒಂದು, ಇನ್ನೊಂದು ಪ್ರಿಂಟರ್ ನಲ್ಲಿ ಕೆಲಸ ಮಾಡದಂತಾಯಿತು. ಆಗ ಈ ತಂತ್ರಾಂಶಗಳ ಮೇಲಿರುವ ನಿರ್ಬಂಧಗಳು ಅದರಲ್ಲೂ ತಂತ್ರಾಂಶದ ಕೋಡ್ ಅನ್ನು ಓದಲು ಇರುವ ನಿರ್ಬಂಧಗಳನ್ನು ತೆಗೆಯಬೇಕೆನ್ನುವ ಯೋಚನೆ ಅವರಿಗೆ ಬಂದಿತು.

ಇದಾದ ನಂತರ ೧೯೮೩ರಲ್ಲಿ ಗ್ನು ಎನ್ನುವ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದ್ದು ಸ್ಟಾಲ್‍ಮನ್. (gnu). ಆಗಲೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಯೋಜನೆಯ ನಾಂದಿಯಾಯಿತು.

ಇಂಗ್ಲಿಷ್ ಭಾಷೆಯ (free) ಎನ್ನುವ ಪದಕ್ಕೆ ಉಚಿತ ಮತ್ತು ಸ್ವತಂತ್ರ ಎನ್ನುವ ಎರಡು ಅರ್ಥವಿದೆ. ಇಂಗ್ಲಿಷ್ ಭಾಷೆಯ ಫ಼್ರೀ ಸಾಫ಼್ಟ್‍ವೇರ್ (free software) ಅನ್ನು ಕನ್ನಡದಲ್ಲಿ ಉಚಿತ ತಂತ್ರಾಂಶ ಎನ್ನುವುದಕ್ಕಿಂತ ಅನಿರ್ಬಂಧಿತ ಅಥವಾ ಸ್ವತಂತ್ರ ತಂತ್ರಾಂಶ ಎನ್ನಬಹುದು.

ಈ ಹಿನ್ನೆಲೆಯಲ್ಲಿ ಆರೆಮ್ಮೆಸ್ “free ಎನ್ನುವ ಪದದ ಅರ್ಥ, free-speech (ವಾಕ್-ಸ್ವಾತಂತ್ರ್ಯ) ನಲ್ಲಿ ರುವಂತೆ, free beer (ಉಚಿತ ಬೀರ್) ನಂತಲ್ಲ ಎನ್ನುತ್ತಾರೆ. ಇದರ ಒಟ್ಟಾರೆ ಅರ್ಥ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಉಚಿತವಾಗಿ ದೊರೆಯಬೇಕೆಂದೇನಿಲ್ಲ. ಆದರೆ ಅವುಗಳ ಕೋಡ್ ಮುಕ್ತವಾಗಿ ಓದಲು, ಮತ್ತು ಅರ್ಥಮಾಡಿಕೊಳ್ಳಲು ಸಿಗಬೇಕೆಂದು.

ತಂತ್ರಾಂಶವೊಂದು ಮುಕ್ತ ಮತ್ತು ಸ್ವತಂತ್ರವಾಗಿರಲು ಬೇಕಾದ ಉಳಿದ ಸ್ವಾಂತಂತ್ರ್ಯಗಳೆಂದರೆ,

* ಸ್ವತಂತ್ರ ೦ : ತಂತ್ರಾಂಶವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವ ಸ್ವತಂತ್ರ.

* ಸ್ವತಂತ್ರ ೧ : ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆಂದು ಅಭ್ಯಸಿಸುವ ಮತ್ತು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಸ್ವತಂತ್ರ.

* ಸ್ವತಂತ್ರ ೨ : ಈ ತಂತ್ರಾಂಶದ ಪ್ರತಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಸ್ವತಂತ್ರ.

* ಸ್ವತಂತ್ರ ೩ : ತಂತ್ರಾಂಶಗಳನ್ನು ಉತ್ತಮ ಪಡಿಸುವ ಮತ್ತು ನಿಮ್ಮಿಂದ ಉತ್ತಮಗೊಂಡ ತಂತ್ರಾಂಶವನ್ನು ಪ್ರಕಟಿಸುವ (ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ) ಸ್ವಾತಂತ್ರ್ಯ.

ಈ ಮೂಲ ಉದ್ದೇಶಗಳನ್ನೊಳಗೊಂಡ ತನ್ನದೇ ಒಂದು ಪರವಾನಗಿಯನ್ನು ಆರೆಮ್ಮೆಸ್ ರಚಿಸಿದರು. ಮತ್ತು ಇದನ್ನು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್(ಜಿಪಿಎಲ್) ಎಂದು ಹೆಸರಿಸಿದರು. ಇದರ ಉತ್ತಮಗೊಂಡ ಭಾಗಗಳಾಗಿ ಜಿಪಿಎಲ್-೨ ಮತ್ತು ಜಿಪಿಎಲ್-೩ ಅನ್ನೂ ಅವರೇ ಅಭಿವೃದ್ದಿ ಪಡಿಸಿದರು.

ಈ ಲೈಸೆನ್ಸ್‍ಗಳು, ಮೂಲ ತಂತ್ರಾಂಶ ಮುಕ್ತವಾಗಿರುವುದಷ್ಟೇ ಅಲ್ಲದೆ, ಅದರ ಉತ್ತಮಪಡಿಸುವಿಕೆಗಳೂ, ಅಳವಡಿಕೆಗಳೂ ಕೂಡಾ ಮುಕ್ತವಾಗಿರುವಂತೆ ನೋಡಿಕೊಳ್ಳುವ, ವಿಶೇಷ ಕಾಪಿಲೆಫ಼್ಟ್ ವ್ಯವಸ್ಥೆಯನ್ನು ಹೊಂದಿವೆ.

ಇಂದು ೬೬ಕ್ಕೂ ಹೆಚ್ಚಿನ ಬಗೆಯ ಮುಕ್ತ ಲೈಸೆನ್ಸ್ ಗಳು ಲಭ್ಯವಿದೆ. ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಅಲ್ಲದೆ, ಗ್ನು ಲೆಸ್ಸರ್ ಪಬ್ಲಿಕ್ ಲೈಸೆನ್ಸ್. ಅಪಾಚೆ ಲೈಸೆನ್ಸ್. ಬಿ ಎಸ್ ಡಿ ಲೈಸೆನ್ಸ್, ಕಾಮನ್ ಪಬ್ಲಿಕ್ ಲೈಸೆನ್ಸ್, ಮೊಜಿಲ್ಲಾ ಪಬ್ಲಿಕ್ ಲೈಸೆನ್ಸ್,ಯುರೋಪಿಯನ್ ಪಬ್ಲಿಕ್ ಲೈಸೆನ್ಸ್. ಇವುಗಳಲ್ಲಿ ಪ್ರಮುಖವಾದುವು. ಪ್ರೊಪ್ರೈಟರಿ ಲೈಸೆನ್ಸ್ ಕಾರಣಗಳಿಂದಾಗಿ ದೈತ್ಯ ಶಕ್ತಿಯಾಗಿ ಬೆಳೆದಿರುವ ಮೈಕ್ರೋಸಾಫ್ಟ್ ಕಂಪನಿ ಕೂಡಾ, ಎಮ್.ಎಸ್ — ಪಿ ಎಲ್ ಎನ್ನುವ ಮುಕ್ತ ತಂತ್ರಾಂಶ ಲೈಸೆನ್ಸ್ ಅನ್ನು ಹೊಂದಿದೆ.

ಈ ಮುಕ್ತ ತಂತ್ರಾಂಶಗಳ ಒಂದು ಪ್ರಮುಖ ಲಕ್ಷಣ ಕಾಪಿ ಲೆಫ್ಟ್. ಕಾಪಿರೈಟ್ ಪದದೊಂದಿಗೆ ಆಟವಾಡಿ ಸೃಷ್ಟಿಯಾದ ಪದ. ಇದರ ಮೊದಲ ಬಳಕೆ ೧೯೭೬ರ ಟೈನಿ ಬೇಸಿಕ್ ಎನ್ನುವ ತಂತ್ರಾಂಶದಲ್ಲಿ ಬಳಕೆಯಾಗಿದ್ದನ್ನು ಕಾಣಬಹುದು. ಕಾಪಿರೈಟ್ ನ ಜೊತೆ ಬಳಕೆಯಾಗುವ ಸಾಮಾನ್ಯ ವಾಕ್ಯವಾದ all rights are reserved ಅನ್ನು all wrongs are reserved ಎಂದು ಅಲ್ಲಿ ಬಳಸಲಾಗಿದೆ. ಆದರೆ ಕಾಪಿಲೆಫ್ಟ್, ಕಾಪಿರೈಟ್ ಕಾಯಿದೆಯ ಅಂಶಗಳನ್ನೇ ಬಳಸಿಕೊಂಡು ತಂತ್ರಾಂಶವೊಂದು ತನ್ನೆಲ್ಲಾ ಮುಕ್ತತೆಯನ್ನು ಉಳಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ತಂತ್ರಾಂಶವೊಂದು ಬೇರೆಯವರಿಂದ ಉತ್ತಮಗೊಂಡಾಗ, ಅವರು ಅದನ್ನು ಮುಕ್ತತಂತ್ರಾಂಶವಾಗಿಯೇ ಉಳಿಸುವಂತಹ ರಕ್ಷಣೆ ಕಾಪಿರೈಟ್ ಕಾಯಿದೆಯಿಂದ ಇಲ್ಲಿ ದೊರೆಯುತ್ತದೆ. ಆದುದರಿಂದ ಮುಕ್ತ ಲೈಸೆನ್ಸ್ ಗಳನ್ನು, ಬಲಶಾಲಿ ಲೈಸೆನ್ಸ್ ಗಳು ಮತ್ತು ದುರ್ಬಲ ಲೈಸೆನ್ಸ್ ಗಳು ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಜಿಪಿಎಲ್-೩ ಬಲಶಾಲಿ ಲೈಸೆನ್ಸ್ ಆದರೆ, ಜಿಪಿಎಲ್-೨ ಮತ್ತು ಜಿಪಿಎಲ್ ದುರ್ಬಲ ಲೈಸೆನ್ಸ್ ಗಳು. ಜಿಪಿಎಲ್-೩ ತಂತ್ರಾಂಶ ತನ್ನೆಲ್ಲಾ ಬೆಳವಣಿಗೆಯೊಂದಿಗೆ ಕೂಡಾ ಮುಕ್ತವಾಗಿ ಉಳಿಯುವಂತೆ ರೂಪಿಸಲಾಗಿರುವ ವಿಶೇಷ ಪರವಾನಗಿ. ಇದನ್ನು ಜಿಪಿಎಲ್ ಮತ್ತು ಜಿಪಿಎಲ್-೨ ರಲ್ಲಿರುವ ನ್ಯೂನತೆಗಳಿಂದ ಹೊರಬರಲಿಕ್ಕಾಗಿಯೇ ರೂಪಿಸಲಾಯಿತು.

ಜಿಪಿಎಲ್-೩ ಲೈಸೆನ್ಸ್ ನ ಕೆಲವು ಮುಖ್ಯ ಆಂಶಗಳು

೧. ಜನರಲ್ ಪಬ್ಲಿಕ್ ಲೈಸೆನ್ಸ್ ನ ಅಡಿಪಾಯದ ಮೇಲೆ ನಿಂತಿದೆ
೨. ಮುಕ್ತ ತಂತ್ರಾಂಶಗಳನ್ನು ಪ್ರತಿಬಂಧಿಸುವ ಕಾನೂನುಗಳಿಂದ ರಕ್ಷಣೆ.
೩. ತಂತ್ರಾಂಶವನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಹಕ್ಕಿನ ರಕ್ಷಣೆ.
೪. ಪೇಟೆಂಟ್ ಗಳ ಮೂಲಕ ಎದುರಾಗುವ ಸಮಸ್ಯೆಗಳ ವಿರುದ್ದ ಸೂಕ್ತ ರಕ್ಷಣೆ.
೫. ವಿವಿಧ ಲೈಸೆನ್ಸ್ ಗಳು ಜಿಪಿಎಲ್-೩ ನ ಜೊತೆಗೆ ಹೊಂದಿರುವ ಸ್ವಾಮ್ಯತೆಯ ವಿವರಣೆ.
೬. ಹಲವಾರು ವಿಧಗಳ ಮುಕ್ತ ಸ್ವತಂತ್ರ ಲೈಸೆನ್ಸ್ ಗಳೊಂದಿಗೆ ಹೊಂದಾಣಿಕೆ.
೭. ತಂತ್ರಾಂಶದ ಕೋಡ್ ಹಂಚಲು ಹೆಚ್ಚಿನ ವಿಧಾನಗಳು
೮. ಕಡಿಮೆ ತಂತ್ರಾಂಶವನ್ನು ಹಂಚುವ ಅವಕಾಶ.
೯. ಜಾಗತಿಕವಾಗಿ ಅನ್ವಯವಾಗುವಂತಹ ಪರವಾನಗಿ.
೧೦. ತಪ್ಪುಗಳಾದಾಗ ತಿದ್ದಿಕೊಳ್ಳುವ ಅವಕಾಶ.
ಮುಕ್ತ ತಂತ್ರಾಂಶಗಳ ಬಗ್ಗೆ ಇರುವ ಇನ್ನೊಂದು ಬಹುದೊಡ್ಡ ತಪ್ಪು ಅಭಿಪ್ರಾಯವೆಂದರೆ ಅವು ಉಚಿತವಾಗಿ ಇರಬೇಕೆಂಬುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಉಚಿತವಾಗಿ ಇರಬೇಕೆನ್ನುವ ನಿಯಮವಿಲ್ಲ. ಇವುಗಳಲ್ಲಿ ತಂತ್ರಾಂಶದ ಕೋಡ್ ಅನ್ನು ಮುಕ್ತವಾಗಿ ಹಂಚಬೇಕೆಂಬ ನಿಯಮವಿದೆ ಅಷ್ಟೇ. ಉಚಿತವಾಗಿ ತಂತ್ರಾಂಶ ನೀಡುವುದು ಅದನ್ನು ಅಭಿವೃದ್ದಿ ಪಡಿಸಿದವರಿಗೆ ಬಿಟ್ಟ ವಿಚಾರ. ೨೦೧೨ರ ಈ ಸ್ವಾತಂತ್ರ್ಯ ತಿಂಗಳಲ್ಲಿ, ಈ ಲೇಖನದ ಓದಿ, ಸ್ವತಂತ್ರ ತಂತ್ರಾಂಶಗಳನ್ನು ಪ್ರೋತ್ಸಾಹಿಸಿ.

ಮೊದ್ಮಣಿ ಮಂಜುನಾಥ್

ಮೊದ್ಮಣಿ ಮಂಜುನಾಥ್

ಮೈಸೂರಿನವನು. ಓದಿದ್ದು ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್, ಚಾಟ್ ಮಾಡುವ ಕುತೂಹಲದಿಂದ ಕಲಿತ ಕಂಪ್ಯೂಟರ್ ಈಗ ಬೆಂಗಳೂರಲ್ಲಿ ಅನ್ನ ಕೊಡುತ್ತಿದೆ. ಆಗಾಗ ಕವನ, ಬರಹ ಗೀಚುತ್ತೇನೆ. ಹಾಗಂತ ಕವಿಯಲ್ಲ. ಮನಸ್ಸಿಗೆ ತೋಚಿದ್ದೆಲ್ಲಾ ಮಾಡುತ್ತಿರುತ್ತೇನೆ. ಅವೆಲ್ಲಾ ಹವ್ಯಾಸಗಳಲ್ಲ. ಕನ್ನಡವೆಂದರೆ ಪ್ರೀತಿ. ಕನ್ನಡ ಉಳಿಯಲು ಕಂಪ್ಯೂಟರಿನಲ್ಲಿ, ಇಂಗ್ಲಿಷಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಿರ್ವಹಣೆಯೂ ಸೇರಿದಂತೆ, ಕನ್ನಡದಲ್ಲಿ ಮಾಡುವಂತಾಗಬೇಕೆಂಬ ನಂಬಿಕೆ ನನ್ನದು.