ಪ್ರಕಟಿಸಿದ್ದು ದಿನಾಂಕ Aug 2, 2012 ವಿಭಾಗ 2012, ale2 | 2 ಪ್ರತಿಕ್ರಿಯೆಗಳು

 ಹಿಂದೆ, ನಾನು ಕಂಡಂತೆ ನಗರಗಳಲ್ಲಿ ಮನೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಇರುತ್ತಿದ್ದವು. ಅಂದಿನ ಆರ್ಥಿಕ ಪರಿಸ್ಥಿತಿಯು ಇದಕ್ಕೆ ಕಾರಣವಿದ್ದಿರಬಹುದು. ಹೂಬಿಡುವ ಸಸ್ಯಗಳ ಜೊತೆಗೆ ಕರಿಬೇವು, ಬಾಳೆ, ಸಪೋಟ, ನುಗ್ಗೆ , ಟೊಮ್ಯಾಟೊ, ಇತ್ಯಾದಿ ಗಿಡಗಳುಳ್ಳ ಒಂದು ಕೈತೋಟವಿರುವ ಮನೆ ಸರ್ವೇಸಾಮಾನ್ಯವಾಗಿತ್ತು.. ಬಹಳಶ್ಟು ಖಾಲಿ ಜಾಗ ಇದ್ದುದ್ದರಿಂದ ತ್ಯಾಜ್ಯ ನಿರ್ವಹಣೆ, ಅಂತರ್ಜಲ ಪುನರ್ಭರ್ತಿಕಾರ್ಯ ಹಾಗು ಮಳೆ ನೀರು ಕೊಯ್ಲು ವ್ಯವಸ್ಥೆಗಳ ಅವಶ್ಯಕತೆಯೂ ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಆದಾಯ ಹೆಚ್ಚಾದಂತೆ ಮನೆಗಳು ದೊಡ್ಡದಾಗಿವೆ ಹಾಗು ತೋಟಗಳು ಚಿಕ್ಕದಾಗಿವೆ ಅಥವಾ ಪೂರ್ತಿಯಾಗಿ ಕಣ್ಮರೆಯಾಗತೊಡಗಿವೆ. ಇದಕ್ಕೆ ಕಾರಣ ವಾಸ್ತು ತಿದ್ದುಪಡಿ ಇರಬಹುದು ಅಥವಾ ಮನೆಗಳ ಸುಧಾರಣೆ ಇರಬಹುದು. ಆರಾಮವಾಗಿ ಜೀವಿಸುವುದರಲ್ಲಿ ತಪ್ಪೇನು ಇಲ್ಲದಿದ್ದರೂ, ಅಗತ್ಯ ಎನ್ನುವ ಹೆಸರಿನಲ್ಲಿ ನಾವು ಅನಪೇಕ್ಷಿತ ಹಾಗು ಐಷಾರಾಮಿ ಜೀವನದೆಡೆಗೆ ಕಾಲಿಟ್ಟಿದ್ದೇವೆ.

ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಹಾಗು ವಿಲೇವಾರಿ ವಿಕೇಂದ್ರೀಕರಣದ ಸಮಸ್ಯೆ ಬಗೆಹರಿಸಲು ಅನೇಕ ಸಂಸ್ಥೆಗಳು ಸಾಕಷ್ಟು ಶ್ರಮಪಡುತ್ತಿದ್ದಾರೆ. ಇದೇ ರೀತಿ ಆಹಾರ ಉತ್ಪಾದನೆಯಲ್ಲಿ ಯೂ ವಿಕೇಂದ್ರೀಕರಣದ ಅವಶ್ಯಕತೆ ಕಂಡು ಬರುತ್ತಿದೆ. ಈ ಎರಡೂ ಸಮಸ್ಯೆಗಳನ್ನುಒಟ್ಟಿಗೆ ಪರಿಹರಿಸಿದರೆ ಇನ್ನೂಉತ್ತಮ.

ಕೆನಡಾದಲ್ಲಿನ ನನ್ನ ವಿದ್ಯಾರ್ಥಿ ದಿನಗಳಲ್ಲಿ, “ಫ್ರೆಶ್ ಸಿಟಿ ಫಾರ್ಮ್ಸ್” (http://www.freshcityfarms.com/ ) ಎಂಬ “ನಗರ ಕೃಷಿ” ಉದ್ಯಮದ ಸ್ಥಾಪಕರನ್ನು ಭೇಟಿ ಮಾಡುವ ಹಾಗು ಅಲ್ಲಿ ಕೆಲಸ ಮಾಡಿ ಕಲಿಯುವ ಅವಕಾಶ ನನಗೆ ದೊರಕಿತ್ತು. ಸ್ಥಳೀಯವಾಗಿ ಆಹಾರ ಬೆಳೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗ ಒದಗಿಸುವ ಅವಳಿ ಉದ್ದೇಶಗಳನ್ನು ಸಾಧಿಸಿರುವ ಈ ಸಂಸ್ಥೆ ಸಾಮಾಜಿಕ ಉದ್ದಿಮೆಗೆ ಒಂದು ಪರಿಪೂರ್ಣ ಉದಾಹರಣೆ. “ಫ್ರೆಶ್ ಸಿಟಿ ಫಾರ್ಮ್ಸ್” ಬಳಕೆಯಾಗದ ಬಾಲ್ಕನಿಗಳಲ್ಲಿ ಮತ್ತು ಹಿತ್ತಲಲ್ಲಿ ಸಾವಯವ ಪದ್ದತಿಯಲ್ಲಿ ಆಹಾರ ಬೆಳೆಯಲು ತನ್ನ ಸದಸ್ಯ ರೈತರನ್ನು ಬೆಂಬಲಿಸುತ್ತದೆ. ಒಂದು ಹಸಿರುಮನೆಯಲ್ಲಿ (green house) ಬೆಳೆದ ಹಸಿರು ತರಕಾರಿಗಳ (salad greens) ಜೊತೆಗೆ ಪುಟ್ಟ ಪುಟ್ಟ ಖಾಲಿ ಪ್ರದೇಶಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು, ಒಂದು ಸೀಮಿತ ಪ್ರದೇಶದಲ್ಲಿ ಚಂದಾದಾರರಿಗೆ ತಲುಪಿಸಲಾಗುತ್ತದೆ. ಕೆಲವು ತರಕಾರಿಗಳು ಮತ್ತು ಹಣ್ಣುಗಳನ್ನು ಸಾಧ್ಯವಾದಷ್ಟು ಕಮ್ಮಿ ದೂರದಿಂದ (minimal food miles) ಒಳಗೊಂಡ ರಸ್ತೆ ಅಥವಾ ಸಮುದ್ರ ಮಾರ್ಗದ ಮೂಲಕ ಆಮದು ಮಾಡಲಾಗುತ್ತದೆ.

ಈ ಪರಿಹಾರದ ಸೂಕ್ತತೆಯನ್ನು ವಿಮರ್ಶಿಸಿ ಭಾರತೀಯ ಪರಿಸ್ಥಿತಿಗಳಿಗೆ ಅನುವಾಗುವಂತೆ ಕಾರ್ಯಗತಗೊಳಿಸುವ ಅಗತ್ಯವಿದೆ. ಜೈವಿಕ, ಸ್ಥಳೀಯ ಹಾಗು ಆರೋಗ್ಯಕರ ಆಹಾರವನ್ನೂ ಸೇವಿಸುವ ಬಲವಾದ ಇಚ್ಛೆ ಇದ್ದರೆ ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬಹುದು ಎಂಬುದಕ್ಕೆ “ಫ್ರೆಶ್ ಸಿಟಿ ಫಾರ್ಮ್ಸ್” ಒಂದು ಉದಾಹರಣೆಯಷ್ಟೇ.

ವಿಕೇಂದ್ರೀಕರಣ ನಮಗೆ ಹೊಸತೇನಲ್ಲ. ಹಿಂದಿನಿಂದಲೂ, ನಮ್ಮ ಮನೆಯ ಬಾಗಿಲಿಗೆ ತರಕಾರಿ ಮಾರಾಟಗಾರರು ಬರುತ್ತಿದ್ದಾರೆ. ಈ ಮಾರಾಟಗಾರರು ಅವರ ಸಾಂಪ್ರದಾಯಿಕ ಪಾತ್ರದ ಜೊತೆಗೆ ನಮ್ಮ ಹಿತ್ತಲು ಹಾಗು ಮೇಲ್ಚಾವಣಿಗಳ ಮೇಲೆ (ಎಲ್ಲಿ ಸಾಧ್ಯವೋ ಅಲ್ಲಿ) ತರಕಾರಿಗಳನ್ನು ಬೆಳೆದು ಅದನ್ನೇ ನಮಗೇಕೆ ಸರಬರಾಜು ಮಾಡಬಾರದು?

ಅನೇಕ ವರ್ಷಗಳ ಹಿಂದೆ ಟಿಂಕಲ್ ಎಂಬ ನಿಯತಕಾಲಿಕದಲ್ಲಿ ಓದಿದ ಒಂದು ಕಥೆ ನೆನಪಿಗೆ ಬರುತ್ತದೆ. ಒಬ್ಬ ಜಾಣ ರಾಜ ತನ್ನ ಪ್ರಜೆಗಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಲುವಾಗಿ ಒಂದು ಸವಾಲು ಹಾಕುತ್ತಾನೆ. ಅನೇಕ ದಿನಗಳ ಪ್ರಯಾಣವುಳ್ಳ ಒಂದು ಗ್ರಾಮದಿಂದ ತನ್ನ ಅರಮನೆಗೆ ಯಾರು ತಾಜಾ ತರಕಾರಿಗಳನ್ನು ತರುತ್ತಾರೋ ಅವರಿಗೆ ಬಹುಮಾನವನ್ನು ಕೊಡುವುದಾಗಿ ಪ್ರಕಟಿಸುತ್ತಾನೆ. ಒಬ್ಬ ಜಾಣ ರೈತ ತರಕಾರಿ ಸಸ್ಯಗಳನ್ನು ಒಂದು ಬಂಡಿಯಲ್ಲಿ ನೆಟ್ಟು ಅರಮನೆ ತಲುಪುವ ಸಮಯಕ್ಕೆ ಕೊಯ್ಲಿಗೆ ತಯಾರಾಗಿರುವಾಗ ಹಾಗೆ ತನ್ನ ಪ್ರಯಾಣವನ್ನು ಯೋಜಿಸುತ್ತಾನೆ. ಈಗಿನ ಕಾಲಕ್ಕೆ ನಮಗೆ ಇಂತಹ ಸೃಜನಾತ್ಮಕ ಪರಿಹಾರಗಳ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜೈವಿಕ ಮತ್ತು ಟೆರೇಸ್ ತೋಟಗಾರಿಕೆ ಹಾಗೂ ಮನೆಯಲ್ಲೇ ಗೊಬ್ಬರ ತಯಾರಿಸಲು ಪರಿಹಾರ ಹಾಗು ಸಲಹೆ ಕೊಡುವ ಕೆಲಸವನ್ನು ಸಾಕಷ್ಟು ಸಂಸ್ಥೆಗಳು ಹಾಗು ಸಮುದಾಯಗಳು ಮಾಡುತ್ತಿವೆ.

 

ಮೈ ಸನ್ನಿ ಬಾಲ್ಕನಿ ಅವರ ಸ್ಕ್ವೆರ ಫುಟ್ ಗಾರ್ಡನ್ (ಒಂದು ಚದುರ ಅಡಿ ತೋಟ)
http://www.mysunnybalcony.com/tag/square-foot-garden/

ಪೂರ್ಣ ಒರ್ಗನಿಕ್ಸ್
http://www.purnaorganics.com/

ಡಾ ಬಿಎನ್ ವಿಶ್ವನಾಥ್ ರವರ ಸಾವಯವ ಟೆರೇಸ್ ತೋಟಗಾರಿಕೆ ಕೈಪಿಡಿ (A Handbook of Organic Terrace Gardening) ಸಾವಯವ ಟೆರೇಸ್ ತೋಟಗಾರಿಕೆ ಆಸಕ್ತರಿಗೆ ಉಪಯುಕ್ತವಾಗಿದೆ.
http://www.cityfarmer.info/2008/03/05/a-handbook-of-organic-terrace-gardening-bangalore-india/

ಡೈಲಿ ಡಂಪ್ ಮನೆಯಲ್ಲಿಯೇ ಗೊಬ್ಬರ ತಯಾರಿಸಲು ಸೃಜನಾತ್ಮಕ ಪರಿಹಾರಗಳನ್ನು ಹೊಂದಿದೆ.
http://www.dailydump.org/

ಬೆಂಗಳೂರಿನಲ್ಲಿ ಸಾವಯವ ತೋಟಗಾರಿಕೆ ಬಗ್ಗೆ ಮಾಹಿತಿ, ಘಟನೆಗಳ ವಿವರ ಹಾಗು ಸಹಾಯವನ್ನು Bangalore Terrace Gardeners ಎಂಬ ಸಮುದಾಯದಲ್ಲಿ ಪಡೆಯಬಹುದು.
http://organicconversations.blogspot.in/p/about-btg.html

ಲಾವಣ್ಯ

ಲಾವಣ್ಯ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಲಾವಣ್ಯ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಕಳೆದ ಕೆಲವು ವರುಷಗಳಿಂದ ಕನಸುಗಳನ್ನು ಬೆನ್ನಟ್ಟಿಕೊಂಡು ಅಲೆಮಾರಿ ಜೀವನ ನೆಡಿಸುತ್ತಿದ್ದಾರೆ. ಮುಂದೊಂದು ದಿನ ರೈತ ಆಗಬೇಕೆಂಬ ಆಸೆ. ಅವರ ಸಾಹಸಮಯ ಪಯಣಗಳನ್ನು ಅವರ ಬ್ಲಾಗ್ ಮೂಲಕ ಹಂಚಿಕೊಳ್ಳುವುದು ಅವರ ಹವ್ಯಾಸ. ಈಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದಾರೆ.