Posted on Aug 12, 2011 in 2011, ale | 0 comments

“ಹಾಡು ಕೇಳಕ್ಕೆ ಯಾವ software ಚೆನ್ನಾಗಿದ್ಯೋ?” – “ವಿನ್ಆಂಪ್ (WinAmp) ಅಂತ ಇದೆ.. ಬಹಳ ಜನ ಅದನ್ನೇ ಉಪಯೋಗಿಸ್ತಾರೆ”

“ಈ ವಿನ್ಆಂಪ್ ಅಲ್ಲಿ ವಿಡಿಯೋ ಬರಲ್ವೇನೋ? ಒಂದು ವಿಸಿಡಿ ತಂದಿದೀನಿ.. ಪ್ಲೇ ಆಗ್ತಿಲ್ಲ” – “ಇಲ್ಲ.. ಅದಕ್ಕೆ ವಿಂಡೋಸ್ ಮೀಡಿಯಾ ಪ್ಲೇಯರ್ ಉಪಯೋಗಿಸು”

“ಇವತ್ತು ಒಂದು ಡಿವಿಡಿ ತಂದೆ ಕಣೋ.. ಈ ವಿಂಡೋಸ್ ಮೀಡಿಯಾ ಪ್ಲೇಯರಲ್ಲಿ ಓಪನ್ ಆಗ್ತಿಲ್ಲ. ಏನ್ ಮಾಡ್ಲಿ?” – “ಪವರ್ ಡಿವಿಡಿ ಅಂತ ಇದೆ.. ಅದನ್ನ ಹಾಕ್ಕೋ”

“ಇದ್ಯಾವ್ದೋ ಹೊಸಾದಂತೆ rm ಫೈಲಂತೆ.. ನೀನು ಹಿಂದೆ ಹೇಳಿದ ಯಾವ ಯಾವುದರಲ್ಲೂ ಓಪನ್ ಆಗ್ತಿಲ್ಲ” – “ಅದಕ್ಕೆ ರಿಯಲ್ ಪ್ಲೇಯರ್ ಹಾಕ್ಕೋ”

“ನನ್ನ ಎಂಪಿತ್ರೀ ಪ್ಲೇಯರಿಗೆ ಹಾಡು ಹಾಕ್ಬೇಕು.. ನನ್ನ ಹತ್ರ rm ಫೈಲಿದೆ… ಅದನ್ನ ಎಂಪಿತ್ರೀಗೆ ಬದಲಾಯಿಸೋದು ಹೇಗೆ?” – “ಹಾಗೆ ಮಾಡಕ್ಕೆ ಟೋಟಲ್ ಕನ್ವರ್ಟರ್ ಬೇಕಾಗುತ್ತೆ”

***

ಸುಮಾರು ಎಂಟು-ಹತ್ತು ವರ್ಷಗಳ ಹಿಂದೆ ಮೇಲಿನಂಥ ಸಂಭಾಷಣೆ ಸಾಮಾನ್ಯವಾಗಿತ್ತು. ಪ್ರತಿಯೊಂದು ಹೊಸ ರೀತಿಯ ಫೈಲಿಗೂ ಹೊಸ ಹೊಸ ತಂತ್ರಾಂಶ ಹಾಕಿಕೊಳ್ಳುವುದು ಕಿರಿಕಿರಿಯುಂಟುಮಾಡುತ್ತಿತ್ತು. ಆದರೆ ಅದೇ ಸಮಯದಲ್ಲಿ ಇವೆಲ್ಲ ಜಂಜಾಟಗಳಿಂದ ಮುಕ್ತಿ ನೀಡುವ, ಸಾಮಾನ್ಯವಾಗಿ ಬಳಸಲ್ಪಡುವ ಬಹುತೇಕ ಫಾರ್ಮ್ಯಾಟುಗಳ ಫೈಲುಗಳನ್ನು ಪ್ಲೇ ಮಾಡಬಲ್ಲ ಚಿಕ್ಕ-ಚೊಕ್ಕ ತಂತ್ರಾಂಶವೊಂದು ಹೊರಬಂದಿತ್ತು. ಅದೂ ಮುಕ್ತ ಮತ್ತು ಸ್ವತಂತ್ರವಾಗಿ… ಅದೇ ವಿ ಎಲ್ ಸಿ ಮೀಡಿಯಾ ಪ್ಲೇಯರ್(VLC Media player). ಮೊದಲಿಗೆ ವಿಡಿಯೋಲ್ಯಾನ್ ಸರ್ವರ್ (VideoLan Server – VLS) ಮತ್ತು ವಿಡಿಯೋಲ್ಯಾನ್ ಕ್ಲೈಂಟ್ (VideoLan Client – VLC) ಎಂಬ ಎರಡು ಪ್ರತ್ಯೇಕ ಹೆಸರಿನೊಂದಿಗೆ, ಪ್ರತ್ಯೇಕ ಉದ್ದೇಶದೊಂದಿಗೆ ಪ್ರಾರಂಭವಾದ ಇದು ಮುಂದೆ ಎರಡೂ ವೈಶಿಷ್ಟ್ಯಗಳನ್ನು ಒಗ್ಗೂಡಿಸಿಕೊಂಡು ವಿ ಎಲ್ ಸಿ ಮೀಡಿಯಾ ಪ್ಲೇಯರ್ ಆಯಿತು.

ಬಹುತೇಕ ಫಾರ್ಮ್ಯಾಟುಗಳನ್ನು ತೆರೆಯಲು ffmpeg ಎಂಬ ಇನ್ನೊಂದು ಮುಕ್ತ ತಂತ್ರಾಂಶವನ್ನು ಬಳಸಿಕೊಳ್ಳುವ ವಿ ಎಲ್ ಸಿ, ffmpeg ನಲ್ಲಿ ಇರದ ಇನ್ನೂ ಕೆಲವು ಫಾರ್ಮ್ಯಾಟುಗಳನ್ನು ತಾನೇ ಡೀಕೋಡ್ ಮಾಡುತ್ತದೆ. ಹೀಗಾಗಿ, MPEG-1, MPEG-2, MPEG-4, H.264, Real Video, Windows Media Video, Flash ಹೀಗೆ ಹತ್ತು ಹಲವು ಬಗೆಯ ವಿಡಿಯೋ ಮತ್ತು MP3, AAC, AC3, Windows Media Audio, Real Audio, Vorbis ಮುಂತಾದ ಆಡಿಯೋ ಫಾರ್ಮ್ಯಾಟುಗಳನ್ನು ತೆರೆಯಬಲ್ಲುದು.

ಇದು ಬೇರೆ ಬೇರೆ ಮಾನಿಟರುಗಳ screen aspect ratio ಗೆ ತಕ್ಕಂತೆ ವಿಡಿಯೋ ಅನ್ನು ಬದಲಾಯಿಸುವ ಅಥವಾ ಕತ್ತರಿಸುವ, ಧ್ವನಿ ಮತ್ತು ಚಿತ್ರಗಳ ನಡುವೆ ವ್ಯತ್ಯಾಸವಿದ್ದರೆ (lip-sync) ಅದನ್ನು ಸರಿಪಡಿಸುವ, ಧ್ವನಿಯ ಮಟ್ಟವನ್ನು ಸಾಮಾನ್ಯಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿಸುವ (ಆದರೆ ಇದರಿಂದ ನಿಮ್ಮ ಗಣಕ/ಲ್ಯಾಪ್ಟಾಪಿನ ಧ್ವನಿವರ್ಧಕ ಹಾಳಾಗಬಹುದು), ಒಂದು ಫ್ಯಾರ್ಮ್ಯಾಟಿನಿಂದ ಇನ್ನೊಂದು ಫಾರ್ಮ್ಯಾಟಿಗೆ ಬದಲಾಯಿಸುವ (transcode) ಸೌಲಭ್ಯ ಕೂಡ ಇದರಲ್ಲಿದೆ.

ಇನ್ನು ಲಿನಕ್ಸಿನಲ್ಲಿ ಕಮಾಂಡ್ ಲೈನಿನಿಂದ ಕೂಡ ವಿ ಎಲ್ ಸಿ ಯನ್ನು ಉಪಯೋಗಿಸಬಹುದು. cvlc filename ಎಂದು ಕಮಾಂಡ್ ಕೊಟ್ಟರೆ GUI ಇಲ್ಲದೆಯೇ ನೀವು ಹಾಡು ಕೇಳುಬಹುದು. ಧ್ವನಿ ಹೆಚ್ಚು/ಕಡಿಮೆ ಮಾಡುವುದು, ನಿಲ್ಲಿಸುವುದು ಇತ್ಯಾದಿಗಳನ್ನು ಕೂಡ ಕೀಲಿಮಣೆ ಉಪಯೋಗಿಸಿಯೇ ಮಾಡಬಹುದು.

ಅದಕ್ಕಿಂತ ಮುಖ್ಯವಾಗಿ ಈ ವಿ ಎಲ್ ಸಿ ಪ್ಲೇಯರ್ ಅನ್ನು ಒಂದು ಸ್ಟ್ರೀಮರ್(streamer) ಆಗಿ ಉಪಯೋಗಿಸಬಹುದು. ಇದನ್ನು ಒಂದು ರೀತಿಯಲ್ಲಿ ಟಿ ವಿ ಚಾನೆಲ್ಲಿಗೆ ಹೋಲಿಸಬಹುದು. ಅಂದರೆ ನಿಮಗೆ ಇಷ್ಟವಾದ ಹಾಡು ಅಥವಾ ವಿಡಿಯೋಗಳನ್ನು ನಿಮ್ಮ ಮನೆಯ ಸ್ಥಳೀಯ ಜಾಲದ ಮೂಲಕ (LAN) ಅಥವಾ ಅಂತರಜಾಲದ ಮೂಲಕ ಬಿತ್ತರಿಸಬಹುದು. ನಿಮ್ಮ ಐ.ಪಿ ವಿಳಾಸ ಮತ್ತು ಪೋರ್ಟ್ ಸಂಖ್ಯೆ ಗೊತ್ತಿರುವವರು ಅದನ್ನು ನೇರವಾಗಿ ಅವರ ಗಣಕಗಳ ಮೂಲಕವೇ ಕೇಳಬಹುದು ಅಥವಾ ವೀಕ್ಷಿಸಬಹುದು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU) ಪ್ರಸ್ತುತ ಉಪಗ್ರಹಗಳ ಮೂಲಕ ಎಜ್ಯುಸಾಟ್(Edusat) ಕಾರ್ಯಕ್ರಮವನ್ನು ನಡೆಸುತ್ತಿದೆ. ಅದರ ಬದಲು ಈ ರೀತಿಯ ಸ್ಟ್ರೀಮರ್ ಉಪಯೋಗಿಸಿದರೆ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೇ ಪಾಠಗಳನ್ನು ಕೇಳಬಹುದು.

ಇಷ್ಟೆಲ್ಲ ಸಾಧ್ಯತೆಗಳನ್ನು ಹೊಂದಿರುವ ವಿ ಎಲ್ ಸಿ ಬೆಳೆದಿದ್ದಾದರೂ ಹೇಗೆ? ವಿಶ್ವಾದ್ಯಂತ ಇರುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಾಸಕ್ತರಿಂದ, ಅವರ ಸ್ವಾರ್ಥರಹಿತ ಕೊಡುಗೆಯಿಂದ. ತಾವು ಯಾವುದೋ ಕಾರಣಕ್ಕೆ ಬೇಕೆಂದು ಅಭಿವೃದ್ಧಿಪಡಿಸಿದ ಒಂದು ತಂತ್ರಾಂಶ ಬೇರೆಯವರಿಗೂ ಉಪಯೋಗವಾಗಲಿ, ಹಾಗೆ ಉಪಯೋಗಿಸುವವರ ಅಗತ್ಯ ಸ್ವಲ್ಪ ಬೇರೆಯಾಗಿದ್ದರೆ ಅವರೂ ಕೂಡ ತಮ್ಮ ಆಗತ್ಯತೆಗಳಿಗೆ ತಕ್ಕಂತೆ ಅದನ್ನು ಮಾರ್ಪಡಿಸಿ ಅಭಿವೃದ್ಧಿಪಡಿಸುವಂತಾಗಲಿ ಎಂಬ ಸದಾಶಯದಿಂದ. ಅಲ್ಲದೇ ಈ ತಂತ್ರಾಂಶಾಸಕ್ತರೆಲ್ಲರೂ ಕೇವಲ ತಂತ್ರಜ್ಞರೇ ಆಗಿರಬೇಕೆಂದೇನೂ ಇಲ್ಲ. ಮೆನು, ಸಹಾಯ ಪುಟ ಇತ್ಯಾದಿಗಳನ್ನು ತಮ್ಮ ತಮ್ಮ ಭಾಷೆಗಳಿಗೆ ಅನುವಾದ ಮಾಡಬಹುದು, ಡಾಕ್ಯುಮೆಂಟೇಷನ್ ಮಾಡಬಹುದು, ಹೀಗೆ.. ಪ್ರತಿಯೊಬ್ಬರೂ ಇದರಲ್ಲಿ ತೊಡಗಿಸಿಕೊಳ್ಳಬಹುದು. ಕೇವಲ ವಿ ಎಲ್ ಸಿ ಮಾತ್ರವಲ್ಲ. ಬಹುತೇಕ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳು ಹೀಗೇ ಬೆಳವಣಿಗೆ ಹೊಂದುತ್ತವೆ. ಲಿನಕ್ಸಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ – ಅದನ್ನು ಮೊದಲಿನಿಂದ ಅಭಿವೃದ್ಧಿಪಡಿಸುವುದಾದರೆ ಅದಕ್ಕೆ ತಗುಲುವ ವೆಚ್ಚ ಸುಮಾರು ೭.೬ ಬಿಲಿಯನ್ ಅಮೆರಿಕನ್ ಡಾಲರ್! ಸುಮ್ಮನೆ ತುಲನೆ ಮಾಡಿ ಹೇಳುವುದಾದರೆ ಇದು ಇಡೀ ಇನ್ಫೋಸಿಸ್ ಕಂಪೆನಿಯ ಸ್ವತ್ತುಗಳ ಮೌಲ್ಯಕ್ಕಿಂತ ಹೆಚ್ಚು!!

ಇನ್ನೇಕೆ ತಡ? ನಾವೂ ಕೂಡ ಮುಕ್ತ ತಂತ್ರಾಂಶಗಳನ್ನು ಬೆಂಬಲಿಸೋಣವೇ?

ಹರೀಶ್, ಊರು ಸಾಗರದ ಹತ್ತಿರ ಮಂಚಾಲೆ. ದಾವಣಗೆರೆಯ ಬಿ.ಐ.ಇ.ಟಿ ಯಲ್ಲಿ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮುಗಿಸಿ ಈಗ ಟಾಟಾ ಎಲೆಕ್ಸಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷೆಯ ಬಳಕೆ, ತಂತ್ರಜ್ಞಾನದ ವಿಷಯಗಳಲ್ಲಿ ಆಸಕ್ತಿಯಿದೆ.