ಪ್ರಕಟಿಸಿದ್ದು ದಿನಾಂಕ Aug 10, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಉಚಿತ ಹಾಗು ಮುಕ್ತ ಆಕರ ತಂತ್ರಾಂಶವು ವ್ಯಾವಹಾರಿಕ(ಕಮರ್ಶಿಯಲ್) ತಂತ್ರಾಂಶದಷ್ಟು ಸಶಕ್ತವೆ? ಆಶ್ಚರ್ಯವೆನಿಸಿದರೂ ಇದು ಸತ್ಯ! Bind, Sendmail, ಅಥವ Perl ಇಲ್ಲದೆ ಇಂದಿನ ಅಂತರಜಾಲ(ಇಂಟರ್ನೆಟ್) ಕಾರ್ಯನಿರ್ವಹಿಸಲು ಸಾಧ್ಯವೆ ಇಲ್ಲ. ಲಿನಕ್ಸ್ ಈಗಾಗಲೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಹಾಗು ವ್ಯವಹಾರಗಳಲ್ಲಿ ಮಹತ್ತರ ಕೊಡುಗೆ ನೀಡಿದೆ. ಮೋಝಿಲ್ಲಾದ ಫೈರ್ಫಾಕ್ಸಿನಲ್ಲಿರುವ ಸೌಲಭ್ಯಗಳು ಹಾಗು ಅದರ ದೃಢತೆಯಿಂದಾಗಿ ದಿನದಿಂದ ದಿನಕ್ಕೆ ಪ್ರಖ್ಯಾತಗೊಳ್ಳುತ್ತಾ ಹೋಗುತ್ತಿದೆ. ಇಂತಹ ಉಪಯುಕ್ತವಾದ ಮುಕ್ತ ಹಾಗು ಉಚಿತವಾಗಿ ಜಾಗತಿಕವಾಗಿ ಎಲ್ಲೆಡೆಯಲ್ಲಿಯೂ ಸಹ ಲಭ್ಯವಿರುವ ತಂತ್ರಾಂಶ ಉಪಕರಣಗಳಲ್ಲಿ ಗಿಂಪ್ ಸಹ ಒಂದು.

ಗಿಂಪ್(GIMP ಅಥವ GNU Image Manipulation Program) ಚಿತ್ರಗಳನ್ನು ಸಂಸ್ಕರಿಸುವ, ಕುಶಲತೆಯಿಂದ ನಿರ್ವಹಿಸುವ, ಗಾತ್ರ ಹಾಗು ಆಕಾರವನ್ನು ಬದಲಾಯಿಸುವ ಒಂದು ತಂತ್ರಾಶವಾಗಿದೆ. ಸಂಪೂರ್ಣ ಉಚಿತ ತಂತ್ರಾಂಶವಾದ ಇದು ಬಹು ಪದರ, ಚಿತ್ರಗಳನ್ನು ಕತ್ತರಿಸುವ, ಅನೇಕ ಚಿತ್ರಗಳನ್ನು ಜೋಡಿಸುವ ಹಾಗು ವಿವಿಧ ಚಿತ್ರ ವಿನ್ಯಾಸಗಳ ನಡುವೆ ಪರಸ್ಪರ ರೂಪಾಂತರಿಸುವಂತಹ ಹತ್ತು ಹಲವು ಸೌಲಭ್ಯಗಳನ್ನು ಹೊಂದಿದೆ. ಅಂತರಜಾಲದಲ್ಲಿ ಬಳಸಲು ಬೇಕಾದ ಚಿತ್ರಗಳನ್ನು ಸಂಸ್ಕರಿಸಲು ಇದು ಯೋಗ್ಯವಾದ ತಂತ್ರಾಂಶವಾಗಿದೆ. ಗಿಂಪ್‌ ಅನ್ನು ದುಬಾರಿಯಾದಂತಹ ಆಡೋಬ್‌ನ ಫೋಟೋಶಾಪ್‌ನ ಒಂದು ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಫೋಟೊಶಾಪ್‌ಗೆ ಹೋಲಿಸಿದಲ್ಲಿ ಬೆರಳೆಣಿಕೆಯಷ್ಟು ನ್ಯೂನತೆಗಳನ್ನು ಗಿಂಪ್ ಹೊಂದಿದ್ದರೂ ಅದರಷ್ಟೆ ಸಶಕ್ತವಾದ ಯಾವುದೆ ಕಾರ್ಯವ್ಯವಸ್ಥೆಯಲ್ಲಿ ಬಳಸಬಹುದಾದಂತಹ ತಂತ್ರಾಂಶವಾಗಿದೆ.

ಇತಿಹಾಸ

೧೯೯೬ ರಲ್ಲಿ ಬರ್ಕಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಸ್ಪೆನ್ಸರ್ ಕಿಂಬಾಲ್ ಹಾಗು ಪೀಟರ್ ಮ್ಯಾಟಿಸ್ ಎಂಬವರಿಂದ ಜನರಲ್ ಇಮೇಜ್ ಮ್ಯಾನಿಪುಲೇಶನ್ ಪ್ರೊಗ್ರಾಮ್ ಎಂಬ ಹೆಸರಿನೊಂದಿಗೆ ಅಭಿವೃದ್ಧಿಯಾಯಿತು. ೧೯೯೭ರಲ್ಲಿ ಇದು GNU ಪರಿಯೋಜನೆಯ ಒಂದು ಭಾಗವಾಗಿ ಸೇರಿಸುವುದರ ಜೊತೆಗೆ ಅದರ ಹೆಸರನ್ನು GNU ಇಮೇಜ್ ಮ್ಯಾನಿಪುಲೇಶನ್ ಪ್ರೊಗ್ರಾಮ್ ಎಂದಾಗಿ ಬದಲಾಯಿಸಲಾಯಿತು. ಈಗ ಹೆಸರಾಂತ ಮುಕ್ತ ತಂತ್ರಾಂಶ(ಓಪನ್‌ಸೋರ್ಸ್) ಪರಿಯೋಜನೆಯಾದಂತಹ GNOMEನ ಒಂದು ಭಾಗವಾಗಿ ಸೇರ್ಪಡಿಸಿಕೊಂಡು ಅವಿರತವಾಗಿ ಪೋಷಿಸುತ್ತಾ ಹಾಗು ಅಭಿವೃದ್ಧಿಪಡಿಸುತ್ತಾ ಬರಲಾಗುತ್ತಿದೆ. ಇಂದಿನವರೆಗೆ ಸಾವಿರಾರು ಮಂದಿ ಇದನ್ನು ಉತ್ತಮಗೊಳಿಸುವಲ್ಲಿ ನೆರವಾಗಿದ್ದಾರೆ. ಗಿಂಪ್ ಅನ್ನು ಮೊಟ್ಟ ಮೊದಲು ಯುನಿಕ್ಸ್ ಹಾಗು ಗ್ನು/ಲಿನಕ್ಸ್ ಕಾರ್ಯವ್ಯವಸ್ಥೆಗಾಗಿ ತಯಾರಿಸಲಾಗಿದ್ದರೂ ಸಹ ೧೯೯೭ರ ಈಚೆಗೆ ಮೈಕ್ರೊಸಾಫ್ಟ್ ವಿಂಡೋಸ್ ಹಾಗು ಆಪಲ್‌ನ ಮ್ಯಾಕ್‌ ವ್ಯವಸ್ಥೆಗಳಿಗೂ ಸಹ ಹೊಂದಿಕೊಳ್ಳುವ ಆವೃತ್ತಿಯೂ ಸಹ ಹೊರ ಬಂದಿದೆ.

ನಿಮ್ಮ ಗಣಕಯಂತ್ರದಲ್ಲಿ ಗಿಂಪ್

ಗಿಂಪ್‌ ಅನ್ನು ಮೂಲತಃ ಯೂನಿಕ್ಸ್ ಹಾಗು ಲಿನಕ್ಸ್ ವ್ಯವಸ್ಥೆಗಾಗಿಯೆ ಸಿದ್ಧಪಡಿಸಲಾಗಿದ್ದರಿಂದ ಹೆಚ್ಚಿನ ಲಿನಕ್ಸ್ ಕಾರ್ಯವ್ಯವಸ್ಥೆಗಳಲ್ಲಿ ಗಿಂಪ್ ಅನ್ನು ಮೊದಲೆ ಅಡಕಗೊಳಿಸಲಾಗಿರುತ್ತದೆ. ಇಲ್ಲದೆ ಹೋದಲ್ಲಿ ಗಿಂಪ್‌ನ ಜಾಲತಾಣ ದಿಂದ(www.gimp.org) ನಕಲಿಳಿಸಿಕೊಳ್ಳಬಹುದಾಗಿದೆ. ವಿಂಡೋಸ್ ಅಥವ ಮ್ಯಾಕ್ ಗಣಕಗಳಿಗೆ ಹೊಂದಿಕೊಳ್ಳುವ ಆವೃತ್ತಿಗಳೂ ಈ ತಾಣದಲ್ಲಿ ಲಭ್ಯವಿದೆ. ಗಿಂಪ್‌ ಅನ್ನು ಜನರಲ್ ಪಬ್ಲಿಕ್ ಲೈಸೆನ್ಸಿನ(ಜಿಪಿಎಲ್) ಅಡಿಯಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ.

ನೀವು ಯಾವುದೇ ಕಾರ್ಯವ್ಯವಸ್ಥೆಯನ್ನು ಬಳಸುತ್ತಿದ್ದರೂ ಸಹ ಮೊದಲ ಬಾರಿಗೆ ಗಿಂಪ್ ಅನ್ನು ಬಳಸುವಾಗ ನಿಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳಲು ತಾನಾಗಿಯೆ ಮಾರ್ಗದರ್ಶನವನ್ನು ನೀಡುತ್ತದೆ. ಅಂದರೆ ನಿಮ್ಮ ಚಿತ್ರಗಳನ್ನು ಹಾಗು ಉಪಕರಣಗಳನ್ನು ಉಳಿಸಲು ಕಡತಕೋಶಗಳನ್ನು(ಫೋಲ್ಡರ್) ನಿಯೋಜಿಸಲು, ಮೆಮೊರಿ ನಿರ್ವಹಣೆಯನ್ನು ಸರಿಹೊಂದಿಸಲು, ಅಗತ್ಯಬಿದ್ದರೆ ತೆರೆಯ ರೆಸಲ್ಯೂಶನ್ ಅನ್ನು ಬದಲಾಯಿಸಲು ಸೂಕ್ತವಾದ ಸಲಹೆಗಳನ್ನು ನೀಡುತ್ತದೆ. ನಿಮ್ಮ ಗಣಕದ ಸಿದ್ಧತೆಯ ಮೇಲೆ ಆಧರಿತವಾಗಿ ಪೂರ್ವನಿಯೋಜಿತ ಸಿದ್ಧತೆಗಳನ್ನೆ ಇರಿಸಿಕೊಳ್ಳುವಂತೆ ಗಿಂಪ್ ಸೂಚಿಸುತ್ತದೆ. ಕೇವಲ ವಿಶೇಷ ಸಂದರ್ಭದಲ್ಲಿ ಮಾತ್ರ ಇವುಗಳನ್ನು ಬದಲಾಯಿಸುವ ಅಗತ್ಯಬೀಳಬಹುದು.

ಬಳಸುವಿಕೆ

ಮುಖ್ಯ ಉಪಕರಣಪೆಟ್ಟಿಗೆ(ಟೂಲ್‌ಬಾಕ್ಸ್): (ಚಿತ್ರ.೧) ಮುಖ್ಯ ಉಪಕರಣಪೆಟ್ಟಿಗೆಯು ಗಿಂಪ್‌ನ ಹೃದಯಭಾಗವಾಗಿರುತ್ತದೆ. ಇದು ಉಪಕರಣಗಳನ್ನು ಆಯ್ಕೆ ಮಾಡಲು ಸೂಕ್ತವಾದಂತಹ ಚಿಹ್ನೆಗಳನ್ನು ಹೊಂದಿರುತ್ತದೆ. ಈ ಚಿಹ್ನೆಗಳು ಆಯಾಯ ಉಪಕರಣಗಳನ್ನು ಶಕ್ತಗೊಳಿಸುವ ಒತ್ತುಗುಂಡಿಗಳಾಗಿರುತ್ತವೆ. ಚಿತ್ರಗಳನ್ನು ಕುಶಲತೆಯಿಂದ ಸಂಸ್ಕರಿಸಲು ಈ ಉಪಕರಣಗಳು ಅತ್ಯಗತ್ಯ. ಉದಾಹರಣೆಗೆ, ಚಿತ್ರಗಳ ನಿರ್ದಿಷ್ಟ ಭಾಗಗಳನ್ನು ಆಯ್ಕೆ ಮಾಡಲು, ಬಣ್ಣಹಚ್ಚಲು, ಚಿತ್ರವನ್ನು ರೂಪಾಂತರಿಸಲು ಮುಂತಾದ ಕಾರ್ಯಗಳಿಗಾಗಿನ ಉಪಕರಣಗಳನ್ನು ಸೂಚಿಸುತ್ತವೆ. ಇವುಗಳ ಜೊತೆಗೆ ಇದರಲ್ಲಿ ಮುನ್ನಲೆ ಹಾಗು ಹಿನ್ನಲೆ ಬಣ್ಣಗಳು; ಕುಂಚಗಳು, ವಿನ್ಯಾಸ, ಗ್ರೇಡಿಯಂಟ್, ಹಾಗು ಸಕ್ರಿಯ ಚಿತ್ರದ ಒಂದು ಚಿಹ್ನೆಯು ಇರುತ್ತದೆ. ಇಷ್ಟೆ ಅಲ್ಲದೆ ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಅಂಶಗಳನ್ನೂ ಸಹ ಹಾಳೆಯ ರೂಪದಲ್ಲಿ ಸೇರಿಸಬಹುದಾಗಿದೆ ಅಥವ ಬೇಡವಾದಲ್ಲಿ ತೆಗೆದು ಹಾಕಬಹುದಾಗಿದೆ. ಈ ಉಪಕರಣಪೆಟ್ಟಿಗೆಯನ್ನು ಮುಚ್ಚಿದಲ್ಲಿ, ನೀವು ಸಂಪೂರ್ಣ ಗಿಂಪ್‌ನಿಂದ ಹೊರನಡೆದಂತಾಗುತ್ತದೆ.

ಉಪಕರಣ ಆಯ್ಕೆಗಳು: (ಚಿತ್ರ.೨) ಉಪಕರಣಪೆಟ್ಟಿಗೆಯ ಕೆಳಗೆ ಅಂಟಿಸಲಾಗಿರುವ ಉಪಕರಣ ಆಯ್ಕೆಯ ಸ್ಥಳವು ಪ್ರಸಕ್ತ ಆಯ್ಕೆ ಮಾಡಲಾದ ಉಪಕರಣದಲ್ಲಿ ಏನೆಲ್ಲಾ ಆಯ್ಕೆಗಳಿವೆ ಎಂದು ತೋರಿಸುತ್ತದೆ.

ಚಿತ್ರದ ವಿಂಡೊ: (ಚಿತ್ರ.೩) ಗಿಂಪ್‌ನಲ್ಲಿ ತೆರೆಯಲಾದ ಎಲ್ಲಾ ಚಿತ್ರಗಳು ಒಂದು ಪ್ರತ್ಯೇಕ ವಿಂಡೊದಲ್ಲಿ ತೆರೆಯಲ್ಪಡುತ್ತದೆ. ಒಂದೆ ಬಾರಿಗೆ ಹಲವು ಚಿತ್ರಗಳನ್ನು ತೆರೆಯಬಹುದು. ಈ ಚಿತ್ರ ವಿಂಡೊದಲ್ಲಿ ಗಿಂಪ್‌ ಮುಖ್ಯ ಆದೇಶಗಳು ಪ್ರಮುಖ ಮೆನುಗಳು (File, Edit, Select…) ಇರುತ್ತವೆ.

ಪದರಗಳು, ಚಾನಲ್‌ಗಳು, ಮಾರ್ಗಗಳು: (ಚಿತ್ರ.೪) ಇವುಗಳು ಪ್ರತ್ಯೇಕ ಹಾಳೆಯಂತಿರುತ್ತವೆ(ಟ್ಯಾಬ್) ಎನ್ನುವುದನ್ನು ಗಮನಿಸಿ. ಬಲ ಮೂಲೆಯಲ್ಲಿ ಸಣ್ಣ ತ್ರಿಕೋನದಂತಿರುವ ಚಿಹ್ನೆಯ ಮೇಲೆ ಕ್ಲಿಕ್‌ ಮಾಡಿ ಈ ಸ್ಥಳಕ್ಕೆ ನಿಮಗೆ ಬೇಕಾದ ಸವಲತ್ತನ್ನು ಸೇರಿಸಿಕೊಳ್ಳಬಹುದಾಗಿದೆ. ಇಲ್ಲಿ ತೋರಿಸಲಾದ ಚಿತ್ರದಲ್ಲಿ ಪದರದ ಹಾಳೆಯನ್ನು ತೋರಿಸಲಾಗಿದೆ. ಇದು ಪ್ರಸಕ್ತ ಸಂಸ್ಕರಿಸಲಾಗುತ್ತಿರುವ ಚಿತ್ರದಲ್ಲಿನ ಪದರಗಳನ್ನು ತೋರಿಸುತ್ತದೆ ಹಾಗು ಈ ಪದರಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸಲು ಅನುವು ಮಾಡಿಕೊಡುತ್ತದೆ. ಪದರಗಳನ್ನು ಬಳಸಿಕೊಳ್ಳದೆ ಇದ್ದಲ್ಲಿ ಕೇವಲ ಮೂಲಭೂತ ಸಂಸ್ಕರಣೆಯಷ್ಟೆ ಸಾಧ್ಯ. ಕೊಂಚ ಪರಿಣಿತಿಹೊಂದಿದ ಗಿಂಪ್‌ ಬಳಕೆದಾರರಿಗೂ ಸಹ ಪದರಗಳ ಬಳಕೆ ಅನಿವಾರ್ಯವಾಗಿರುತ್ತದೆ.

ಕುಂಚಗಳು/ವಿನ್ಯಾಸಗಳು/ಗ್ರೇಡಿಯಂಟ್‌ಗಳು: (ಚಿತ್ರ.೫) ಪದರದ ಸಂವಾದಚೌಕದ (ಡೈಲಾಗ್‌) ಕೆಳಗೆ ಇರಿಸಲಾದ ಇದು ಕುಂಚಗಳನ್ನು. ವಿನ್ಯಾಸಗಳನ್ನು ಹಾಗು ಗ್ರೇಡಿಯಂಟ್‌ಗಳನ್ನು ನಿರ್ವಹಿಸಲು ಬಳಸಬಹುದಾಗಿದೆ.

ಕನ್ನಡದಲ್ಲಿ ಗಿಂಪ್!

ಗಿಂಪ್ ಅನ್ನು ಇತ್ತೀಚಿಗೆ ಕನ್ನಡಕ್ಕೆ ತರುವ ಕಾರ್ಯವೂ ನಡೆಯುತ್ತಿದೆ. ಇನ್ನೂ ಸಹ ಸಂಪೂರ್ಣವಾಗಿ ಕನ್ನಡದ ಅವತರಣಿಕೆಯು ಲಭ್ಯವಿರದೆ ಇದ್ದರೂ ಸಹ ಸದ್ಯದಲ್ಲೆ ಅದು ಸಹ ಹೊರಬರುವ ನಿರೀಕ್ಷೆಯಿದೆ. ಇದರ ಒಂದು ತೆರೆಚಿತ್ರವನ್ನು ಇಲ್ಲಿ ಕಾಣಬಹುದು.

ಇದು ಗಿಂಪ್‌ನ ಒಂದು ಕಿರು ಪರಿಚಯವಷ್ಟೆ. ಪ್ರಾಯೋಗಿಕವಾಗಿ ಗಿಂಪ್‌ ಅನ್ನು ಕೈಯಾರೆ ಬಳಸುವುದರಿಂದ ಇದರಲ್ಲಿ ಲಭ್ಯವಿರುವ ಹಲವಾರು ಸೌಕರ್ಯಗಳನ್ನು ತಿಳಿದುಕೊಳ್ಳಬಹುದು. ಅಷ್ಟೆ ಅಲ್ಲದೆ ಹೆಚ್ಚಿನ ನೆರವಿಗಾಗಿ ಗಿಂಪ್‌ನ ಜಾಲತಾಣದಲ್ಲಿ ಲಭ್ಯವಿರುವ (http://gimp.org) ಚಿತ್ರಸಹಿತವಾದ ಕೈಪಿಡಿಯನ್ನೂ ಸಹ ನೋಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣತೆತ್ತು ಪಡೆಯಬಹುದಾದಂತಹ ಯಾವುದೆ ಪ್ರೊಪ್ರೈಟರಿ ಚಿತ್ರ ಸಂಸ್ಕರಣಾ ತಂತ್ರಾಂಶಕ್ಕಿಂತ ಗಿಂಪ್‌ ಉತ್ತಮವಾಗಿದೆ ಅಥವ ಅವುಗಳು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ಗಿಂಪ್ ಮಾಡುತ್ತದೆ ಎಂದೇನಲ್ಲ. ಇದೂ ಸಹ ಕೆಲವು ಋಣಾತ್ಮಕ ಅಂಶಗಳನ್ನು ಹೊಂದಿದೆ, ಆದರೆ ಅವುಗಳಿಂದ ಸಾಧ್ಯವಿರುವ ಬಹುಮಟ್ಟಿನ ಕಾರ್ಯಗಳನ್ನು ಅವುಗಳಷ್ಟೆ ಯಶಸ್ವಿಯಾಗಿ ಉಚಿತವಾಗಿ ದೊರೆಯುವ ಗಿಂಪ್ ಮಾಡಬಲ್ಲದು ಎಂದಷ್ಟೆ ಹೇಳಬಹುದು. ಇದರ ಪ್ರಖ್ಯಾತಿಯನ್ನು ನೋಡುತ್ತಿದ್ದಲ್ಲಿ ಭವಿಷ್ಯದಲ್ಲಿ ಇದು ಇನ್ನಷ್ಟು ಉತ್ತಮಗೊಳ್ಳುವುದರಲ್ಲಿ ಸಂದೇಹವೆ ಇಲ್ಲ.

ಹೆಚ್ಚಿನ ಮಾಹಿತಿಗಾಗಿ:

http://docs.gimp.org/2.6/en/index.html
http://en.wikipedia.org/wiki/The_GIMP
Grokking the GIMP by Carey Bunks

 

ಶಂಕರ್ ಪ್ರಸಾದ್. ಎಮ್ ವಿ ಹುಟ್ಟು ಮತ್ತು ಬಾಲ್ಯ ಶೃಂಗೇರಿ ಸಮೀಪದ ತುಂಗೆಯ ತಟದಲ್ಲಿರುವ ಪುಟ್ಟ ಹಳ್ಳಿಯಲ್ಲಿ. ಓದಿದ್ದು ವಸ್ತುವಿಜ್ಞಾನದಲ್ಲಿ ಎಂಎಸ್ಸಿ. ಬೆಂಗಳೂರಿನ ಎನ್‌ಎಎಲ್‌ನ ವಸ್ತುವಿಜ್ಞಾನ ವಿಭಾಗದಲ್ಲಿ ಒಂದಿಷ್ಟು ವರ್ಷ ವಾಸ ಸಹಾಯಕ ಸಂಶೋಧಕನಾಗಿ ಕೆಲಸ ಮಾಡಿದೆ. ಜೊತೆಗೆ ಕನ್ನಡದ ವಾರ್ಷಿಕ ವಿಜ್ಞಾನ ಪತ್ರಿಕೆಯಾದ ಕಣಾದ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ. ನಂತರ ಮುಕ್ತ ತಂತ್ರಾಂಶಗಳೆಡೆಗೆ ಒಲವು. ಪ್ರಸಕ್ತ ಮುಕ್ತ ತಂತ್ರಾಂಶವನ್ನು ಒದಗಿಸುವ ಸಂಸ್ಥೆಯಲ್ಲಿ ಅನುವಾದಕನಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಫೈರ್ಫಾಕ್ಸ್, ಗ್ನೋಮ್, ಕೆಡಿಇ, ಫೆಡೋರ, ಓಪನ್ಆಫೀಸ್ ಮುಂತಾದ ಹೆಚ್ಚಿನ ಎಲ್ಲಾ ಮುಕ್ತತಂತ್ರಾಂಶಗಳ ಕನ್ನಡ ಅನುವಾದದಲ್ಲಿ ಕೈಜೋಡಿಸಿದ್ದೇನೆ. ಈ ಅನುವಾದಗಳಲ್ಲಿ ಶಿಷ್ಟತೆಯನ್ನು ತರುವುದು ಮುಂದಿನ ಗುರಿ. ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನೂ ಸಹ ಬರೆದಿದ್ದೇನೆ. ಸಾಹಿತ್ಯ ಹಾಗು ಕ್ರಿಕೆಟ್‌ನೆಡೆಗೆ ಅಪರಿಮಿತ ಆಸಕ್ತಿ, ಒಂದಿಷ್ಟು ಸಣ್ಣ ಪುಟ್ಟ ಕವನಗಳನ್ನೂ ಸಹ ಗೀಚಿದ್ದೇನೆ.