ಪ್ರಕಟಿಸಿದ್ದು ದಿನಾಂಕ Aug 1, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಪದವಿ ಶಿಕ್ಷಣವನ್ನು ಮುಗಿಸಿದ ಸಮಯ. ಉದ್ಯೋಗಕ್ಕಾಗಿ ಹುಡುಕಾಟ ಶುರುವಾಗಿತ್ತು. ಹಲವರಂತೆ ನಾನೂ ಕಂಪ್ಯೂಟರ್ಗಳ ಬಳಕೆಯ ಕಡೆ ಗಮನ ಹರಿಸತೋಡಗಿದೆ. ಮೊದಮೊದಲಿಗೆ Microsoft ನ ವಿಂಡೋಸ್ ಬಳಸುತ್ತಿದ್ದೆನಾದರೂ, ಕ್ರಮೇಣ ಅದರಲ್ಲಿನ ತಾಪತ್ರಯಗಳು ದಿನೇದಿನೇ ಹೆಚ್ಚಾಗಿ, ಹುಚ್ಚುಹಿಡಿಸಹತ್ತಿದವು. ಒಂದು ತಂತ್ರಾಂಶ ಬೇಕೆಂದರೆ, ಅದರ ಲೈಸೆನ್ಸ್ ಇಲ್ಲದಿದ್ದರೆ, ಅವರಿವರ ಬಳಿ ನಕಲಿ ಪ್ರತಿಗಳಿಗಾಗಿ ಹುಡುಕಾಟ, ಅವುಗಳ ಬಳಕೆಯ ಕಿರಿಕಿರಿ ಈ ಎಲ್ಲದರಿಂದ ಬೇಸತ್ತಿದ್ದ ಹೊತ್ತಿನಲ್ಲಿ, ಮುಕ್ತ ತಂತ್ರಾಂಶದ ಜಗತ್ತು ನನಗೆ ಪರಿಚಯವಾಗತೊಡಗಿತು. ಅದರಲ್ಲಿ ಮೊತ್ತ ಮೊದಲದಾಗಿ ತಿಳಿದಿದ್ದು ಗ್ನೂ/ಲಿನಕ್ಸ್ ಎಂಬ ಮುಕ್ತ ಆಪರೇಟಿಂಗ್ ಸಿಸ್ಟಮ್.

ಮೊದಮೊದಲಿಗೆ ನಾನು ಬಳಸ ತೊಡಗಿದ್ದು, ಅಂದು ಮುಕ್ತವಾಗಿ ಸಿಗುತ್ತಿದ್ದ ರೆಡ್‌ಹ್ಯಾಟ್ ಎಂಬ ಲಿನಕ್ಸ್‌ನ ಹಂಚಿಕೆ. ಅಂದು, ಅದರಲ್ಲಿಯೂ ಹಲವು ನ್ಯೂನತೆಗಳಿದ್ದವು. ಸ್ರೀನ್ ಅಷ್ಟು ಅಂದವಾಗಿರಲಿಲ್ಲ, ಸೌಂಡ್‌ಕಾರ್ಡ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೂ, ನನಗೊಂದು ಚಿಕ್ಕ ಬರವಸೆಯನ್ನು ಅದು ಮೂಡಿಸಿತ್ತು. ಲಿನಕ್ಸ್, ಮುಕ್ತವಾಗಿಯೇ ಆ ಮಟ್ಟದವರೆಗೆ ಬೆಳೆಯಲು ಹೇಗೆ ಸಾಧ್ಯವಾಯಿತು ಎಂದು ನೋಡಲು ಶುರು ಮಾಡಿದೆ. ಆಗ ತಿಳಿದಿದ್ದದ್ದೆ, ಅಂತರ್ಜಾಲದ ಮುಕ್ತ ಸಮುದಾಯಗಳ ಬಗ್ಗೆ. ಇಡೀ ಲಿನಕ್ಸ್ ಪ್ರಮುಖವಾಗಿ ಒಂದು ಬಹು ದೊಡ್ಡ ಮುಕ್ತ ಸಮುದಾಯಗಳ ಸಂಚಯ ವೆಂದು ಗೊತ್ತಾಗಿತ್ತು. ತದನಂತರದ ದಿನಗಳಲ್ಲಿ ನಾನು ಒಂದ ಚಿಕ್ಕ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸ ತೊಡಗಿದೆ. ನನ್ನ ಅದೃಷ್ಟವೆಂಬಂತೆ, ಅಲ್ಲಿಯೂ ಕೇವಲ ಲಿನಕ್ಸ್‌ದೇ ‌ಕಾರೋಬಾರು. ಅಲ್ಲಿನ ಸರ್ವರ್ಸ್, ದೆಸ್ಕ್ಟಾಪ್, ಲ್ಯಾಪ್ಟಾಪ್‌ಗಳೂ ಸೇರಿದಂತೆ ಎಲ್ಲ ಲಿನಕ್ಸ್ ಯಂತ್ರಗಳ ನಿರ್ವಹಣೆ ನನ್ನ ಪ್ರಮುಖ ಕೆಲಸವಾಗಿತ್ತು. ಇನ್ನೂ ಅಷ್ಟಾಗಿ ಲಿನಕ್ಸ್ ಬಗ್ಗೆ ತಿಳುವಳಿಕೆ ಇಲ್ಲದಿದ್ದರ ಕಾರಣ, ಬಳಸಲು ನಿರ್ವಹಿಸಲು ಸುಲಭವಾದಂತಹ, ನೋವೆಲ್ ಕಂಪನಿಯ ‘ಸೂಸೆ’ ಎಂಬ ಲಿನಕ್ಸ್ ಹಂಚಿಕೆಯನ್ನು ಬಳಸಲು ಶುರುಮಾಡಿದೆ. ಇದರೊಂದಿಗೆ, ಮಾಂಡ್ರೇಕ್, ಡೆಬಿಯನ್ ಲಿನಕ್ಸ್ ಹಂಚಿಕೆಗಳು ಕಛೇರಿಯಲ್ಲಿ ಬಳಸಲ್ಪಡುತ್ತಿದ್ದವು. ಕೆಲದಿನಗಳು ಕಳೆದ ಮೇಲೆ, ಕಂಪನಿಯ ಮೇಲ್ವರ್ಗದಿಂದ ಕೇವಲ ಡೆಬಿಯನ್ ಹಂಚಿಕೆಯೊಂದನ್ನೇ ಬಳಸುವಂತೆ ಆದೇಶ ಬಂದಿತ್ತು. ಕೆಲವು ಪ್ರಮುಖ ಕಾರ್ಯಗಳಲ್ಲಿ ಮಾತ್ರ ಮ್ಯಾಂಡ್ರೇಕ್ ಬಳಸಲು ಅವಕಾಶವಿತ್ತು. ಹಾಗಾಗಿ, ನಾನು ಡೆಬಿಯನ್ ಬಳಸುವುದು ಅನಿವಾರ್ಯವಾಯಿತು. ಮೊದಮೊದಲು ಕಷ್ಟಕರ ಹಂಚಿಕೆಯೆಂದು ಕೈಬಿಟ್ಟಿದ್ದ ಈ ಲಿನಕ್ಸ್ ಹಂಚಿಕೆಯ ಶಕ್ತಿ ತಿಳಿದದ್ದೇ ಒಂದೆರಡು ತಿಂಗಳ ಬಳಕೆಯ ನಂತರ. ಈ ಸಮಯದಲ್ಲಿ, ಹಲವಾರು ಭಾರಿ ಅದನ್ನು ಅನುಸ್ಥಾಪಿಸುವ, ತೆಗೆಯುವ ಕಾರ್ಯಗಳು ನಡೆದಿದ್ದವು. ಪ್ರಯತ್ನಕ್ಕಿಂತ ದೊಡ್ದದಾದ ಕಲಿಕೆಯ ಹಾದಿ ಮತ್ತೊಂದಿಲ್ಲವೆಂಬ ಸತ್ಯವು ಅರಿವಿಗೆ ಬಂದಿತ್ತು. ನಂತರ, ಈವರೆಗೂ ಡೆಬಿಯನ್ ಹಾಗೂ ಅದನ್ನು ಆಧಾರಿಸಿ ತಯಾರಾದ ಹಂಚಿಕೆಗಳನ್ನಷ್ಟೇ ಬಳಸುತ್ತಿದ್ದೇನೆ, ಅದರಲ್ಲೂ ವಿಶೇಷವಾಗಿ, ಸರ್ವರ್ಗಳಲ್ಲಿ, ಬಹುಕಾಲ ವ್ಯತ್ಯಯಗಳಿಲ್ಲದೇ ಕಾರ್ಯನಿರ್ವಹಿಸಬೇಕಾದ ಯಂತ್ರಗಳಿಗೆ ಕೇವಲ ಡೆಬಿಯನ್ ಮಾತ್ರವೇ ಬಳಸುವುದು ನನ್ನ ರೂಢಿಯೂ ಕೂಡ. ಅದು ಕೇವಲ ನನ್ನ ರೂಢಿ ಮಾತ್ರವಲ್ಲ, ವಿಶ್ವದೆಲ್ಲೆಡೆ, ಪ್ರಮುಖ ಕಂಪನಿಗಳು ಪಾಲಿಸುವ ಕ್ರಮವೂ ಕೂಡ.

೧೯೯೩ರಲ್ಲಿ ಪ್ರಾರಂಭಗೊಂಡ ಡೆಬಿಯನ್, ನನಗೆ ಸರಿಯಾಗಿ ಪರಿಚಯವಾದದ್ದು ೨೦೦೨ಕ್ಕೆ. ಅಂದಿನಿಂದ ಇಂದಿನವರೆಗೆ, ನಾನು ಹತ್ತು ಹಲವು ಕಂಪನಿ ಬೆಂಬಲಿತ ಲಿನಕ್ಸ್ ಹಂಚಿಕೆಗಳನ್ನು ಬಳಸಿದ್ದೆನಾದರೂ, ಡೆಬಿಯನ್ ಮಾತ್ರ ಪ್ರಮುಖವಾಗಿ ಒಂದು ಸಮುದಾಯ ದತ್ತ ಲಿನಕ್ಸ್ ತಂತ್ರಾಂಶಗಳ ಆಗರವಾಗಿಯೇ ಉಳಿದಿದೆ. ತಾನು ತನ್ನ ಸಮುದಾಯ ಕಾರ್ಯಕಾರಿ ಮಾಧರಿಯನ್ನು ಉಳಿಸಿಕೊಂಡು, ವಿಶ್ವವಿಖ್ಯಾತವಾದ ಹಲವು ಲಿನಕ್ಸ್ ಹಂಚಿಕೆಗಳ ಮೂಲವಾಗಿದೆ. ಅವುಗಳಲ್ಲಿ, ಮುಖ್ಯವಾದವು ಉಬುಂಟು, ಕ್ನಾಪಿಕ್ಸ್, ದ್ಯಾಮ್ ಸ್ಮಾಲ್ ಲಿನಕ್ಸ್ (ಡಿಎಸ್‌ಎಲ್), ಮಿಂಟ್, ಮೇಪಿಸ್, ಕ್ಸಾಂಡ್ರೋಸ್, ಹಾಗೂ ಸಂಕ್ಷಿಪ್ತ ಗಣಕಯಂತ್ರಗಳ ಕಾರ್ಯ ನಿರ್ವಹಣೆಗಾಗಿ ಮೂಡಿರುವ ಎಂಡೆಬಿಯನ್. ನಾನು ಹೇಳಿಲ್ಲದ್ದ, ಕೇಳಿಲ್ಲದ ಎನ್ನೂ ಹತ್ತು ಹಲವು ಲಿನಕ್ಸ್ ಹಂಚಿಕೆಗಳಿಗೆ ಡೆಬಿಯನ್ ಮೂಲವೆಂದರೆ ತಪ್ಪಾಗಲಾರದು.

ಡೆಬಿಯನ್‌ನಲ್ಲಿ ನನಗೆ ಹಿಡಿಸಿದ್ದು ಪ್ರಮುಖವಾಗಿ ಮೂರು ವಿಚಾರಗಳು. ಮೊದಲನೆಯದು, ಅದರಲ್ಲಿ ದೊರೆಯುವ ಬೃಹತ್ ತಂತ್ರಾಂಶಗಳ ಕೋಶ. ಇಂದು ಅದರಲ್ಲಿ ದೊರೆಯುವ, ಪ್ರಮುಖ ಮುಕ್ತ ತಂತ್ರಾಂಶಗಳ ಸಂಖ್ಯೆ ೧೫೦೦೦ಕ್ಕೂ ಮಿಗಿಲಾಗಿದೆ. ಇವೆಲ್ಲವನ್ನು ಅನುಸ್ಥಾಪಿಸಲು, ತೆಗೆದು ಹಾಕಲು, ಉತ್ತಮಗೊಂಡ ಪ್ರತಿಗಳನ್ನು ಅಳವಡಿಸಿ ಕೊಳ್ಳಲು ಅದರಲ್ಲೇ ಬರುವ, ಎಪಿಟಿ (ಅಡ್ವಾಸ್ಡ್ ಪ್ಯಾಕೇಜಿಂಗ್ ಟೂಲ್) ಎಂಬ ತಂತ್ರಾಂಶ ಅನುಸ್ಥಾಪನಾ ವ್ಯವಸ್ಥೆ. ಒಮ್ಮೆ ನಾವು ಡೆಬಿಯನ್ ಹಂಚಿಕೆಯನ್ನು ಅನುಸ್ಥಾಪಿಸಿದರೆ ಸಾಕು, ಎಪಿಟಿಯ ಸಹಾಯದಿಂದ, ಮೂಲ ಕರ್ನಲ್ ಒಳಗೊಂಡಂತೆ, ಎಲ್ಲಾ ಸುಧಾರಿತ ತಂತ್ರಾಂಶಗಳನ್ನು ಕಾಲಕಾಲಕ್ಕೆ ಪಡೆಯುತ್ತಿರಬಹುದು. ಮತ್ತೊಮ್ಮೆ, ಮಗದೊಮ್ಮೆ ಇಡೀ ಆಪರೇಟಿಂಗ್ ಸಿಸ್ಟಮ್‌ನ ಮರು ಅನುಸ್ಥಾಪನೆಯ ತೊಂದರೆಗಳಿರುವುದಿಲ್ಲ. ಇದು ಡೆಬಿಯನ್ ಲಿನಕ್ಸ್‌ನ ಪ್ರಮುಖ ಶಕ್ತಿಗಳಲ್ಲಿ ಒಂದು ಎನ್ನಬಹುದು. ಎರಡನೆಯದು, ಡೆಬಿಯನ್‌ನ, ತನ್ನದೇ ಆದ ‘ಡೆಬಿಯನ್ ಫ್ರೀ ಸಾಫ್ಟ್ವೇರ್ ನಿಯಮಗಳು’. ಇದನ್ನು ಅದರ ಸಮುದಾಯದಲ್ಲಿ ಅತೀ ಕಟ್ಟುನಿಟ್ಟಾಗಿ ಪಾಲಿಸುವುದರಿಂದ, ಉತ್ತಮ, ದಕ್ಷ, ಮುಕ್ತ ತಂತ್ರಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ತದನಂತರ ತನ್ನ ಕೋಶದಲ್ಲಿ ಸೇರಿಸಲು ಅನುಕೂಲವಾಗಿದೆ. ಪ್ರಮುಖವಾದ ಮುಕ್ತ ತಂತ್ರಾಂಶಗಳನ್ನು,ಮೈನ್ ಎಂಬ ಹೆಸರಿನ ಪಟ್ಟಿಯಲ್ಲಿ, ಉಳಿದವನ್ನು ಕಾಂಟ್ರಿಬ್ ಹಾಗೂ ನಾನ್-ಫ್ರೀ ಪಟ್ಟಿಗಳಲ್ಲಿ, ಅವುಗಳ ನಿಭಂದನೆಗಳ ಪ್ರಕಾರ ಸೇರಿಸಲಾಗಿರುತ್ತದೆ. ಮೂರನೆಯ ವಿಚಾರ, ಅದರ ಸ್ಟೇಬಲ್, ಟೆಸ್ಟಿಂಗ್ ಹಾಗೂ ಅನ್‌ಸ್ಟೇಬಲ್ ಎಂಬ ಮೂರು ವಿಧವಾದ ಹಂಚಿಕೆಗಳು. ಸ್ಟೇಬಲ್ ಎಂಬುದು ಹೆಸರೇ ಸೂಚಿಸುವಂತೆ, ಬಹುಕಾಲ ಪರೀಕ್ಷಿಸಲ್ಪಟ್ಟ, ಸಮುದಾಯದಿಂದ ಅನುಮೋದಿಸಿದ ತಂತ್ರಾಂಶ ಸಂಗ್ರಹವನ್ನು ಒಳಗೊಂಡಿರುತ್ತದೆ. ಬಹುಕಾಲ ವ್ಯತ್ಯಯಗಳಿಲ್ಲದೇ ಕಾರ್ಯನಿರ್ವಹಿಸಬೇಕಾದ ಗಣಕ ಯಂತ್ರಗಳಿಗೆ ಇದರ ಬಳಕೆ ಸೂಕ್ತವಾಗಿದೆ. ಇನ್ನು ದಿನನಿತ್ಯದ ಬಳಕೆಗೆ, ಕಾಲಕಾಲಕ್ಕೆ ಸುಧಾರಿಸುವ ತಂತ್ರಾಂಶಗಳನ್ನು ಬಳಸಬೇಕೆಂದು ಇಚ್ಚಿಸುವವರಿಗಾಗಿ, ತಾವು ಸ್ವಯಂಪ್ರೇರಿತವಾಗಿ ಮುಕ್ತ ತಂತ್ರಾಂಶಗಳನ್ನು ಪರೀಕ್ಷಿಸುವಲ್ಲಿ ಸಹಕಾರ ನೀಡುವವರಿಗಾಗಿ, ಟೆಸ್ಟಿಂಗ್ ಹಂಚಿಕೆ ಇದೆ. ಕೆಲವಷ್ಟೇ, ನುರಿತ ಮುಕ್ತ ತಂತ್ರಾಂಶ ಬಳಕೆದಾರರಿಗಾಗಿ, ಅವುಗಳ ಅಭಿವೃದ್ಧಿಗಾರರಿಗಾಗಿ ಅನ್‌ಸ್ಟೇಬಲ್ ಹಂಚಿಕೆಯಿದೆ. ಪರೀಕ್ಷೆಯ ಕಾಲವಧಿಯ ಪ್ರಕಾರ, ಟೆಸ್ಟಿಂಗ್ ಹಂಚಿಕೆಯು ಸ್ಟೇಬಲ್ ಆಗಿ ಹೊರಬರುತ್ತದೆ, ಅನ್‌ಸ್ಟೇಬಲ್ ಹಂಚಿಕೆಯಲ್ಲಿ ಕೆಲ ಕಾಲ ಸುಧಾರಿತಗೊಂಡ ತಂತ್ರಾಂಶಗಳು, ಟೆಸ್ಟಿಂಗ್ ಮಟ್ಟವನ್ನು ಸೇರುತ್ತವೆ. ಇನ್ನೂ ಕನಿಷ್ಟ ಪರೀಕ್ಷೆಗೆ ಒಳಪಡಬೇಕಾದ ತಂತ್ರಾಂಶಗಳು ಅನ್‌ಸ್ಟೇಬಲ್ ಹಂಚಿಕೆಗೆ ಸೂರುತ್ತಿರುತ್ತವೆ. ಈ ಮೂರೂ ವಿಚಾರಗಳಿಂದ ಡೆಬಿಯನ್, ನನ್ನ ನಿಚ್ಚಿನ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆಗಿದೆ.

ರವಿಶಂಕರ್ ಹರನಾಥ್ ಮೂಲತಃ ಬೆಂಗಳೂರಿನವ. ವಿದ್ಯಾಭ್ಯಾಸ ಬೆಂಗಳೂರು, ಮೈಸೂರುಗಳಲ್ಲಿ. ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿ. ಸದ್ಯಕ್ಕೆ, ಬೆಂಗಳೂರಿನಲ್ಲೇ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ. ಸುಮಾರು ಹತ್ತುವರ್ಷಗಳ ಕೆಲಸ ಕಾರ್ಯಗಳಲ್ಲಿ, ಲಿನಕ್ಸ್ ದಿನನಿತ್ಯದ ಬಳಕೆಯ ವಸ್ತುವಾಗಿದೆ. ತಂತ್ರಜ್ಞಾನವನ್ನು ಹೊರತು ಪಡಿಸಿದರೆ, ಚಾರಣ, ಪ್ರವಾಸ ಹಾಗೂ ಚಿತ್ರ ಕಲೆಯಲ್ಲಿ ಆಸಕ್ತಿ. ಮುಕ್ತ ತಂತ್ರಾಂಶಗಳಲ್ಲಿ, ಕನ್ನಡ ಮಾಧ್ಯಮದ ಅಳವಡಿಕೆಯನ್ನು, ಬಳಕೆಯನ್ನು ಸುಧಾರಿಸುವುದರಲ್ಲಿ, ವಿಶೇಷ ಒಲವು.