ಆಗಸ್ಟ್ ೧ ರಿಂದ ೧೪ ರವರೆಗೆ ದಿನವೂ ಒಂದೊಂದು ಹೊಸ ವಿಷಯಗಳು. ದಿನನಿತ್ಯ ಬಳಸುವ ಮುಕ್ತ ತಂತ್ರಾಂಶ/ತಂತ್ರಜ್ಞಾನಗಳ ಬಗ್ಗೆಯ ಲೇಖನಗಳು ೧೪ ಅಲೆಗಳ ರೂಪದಲ್ಲಿ ನಿಮಗೆಲ್ಲರಿಗೂ ಸಿಗಲಿದೆ. ಆಗಸ್ಟ್ ೧೫ ರಂದು ಎಲ್ಲಾ ಅಲೆಗಳನ್ನೂ ಒಂದೇ ಕಡೆ ಸೇರಿಸಿ e-ಪುಸ್ತಕ ಬಿಡುಗಡೆ ಮಾಡಲಾಗುವುದು.
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ದಿನನಿತ್ಯ ಬಳಸುತ್ತಿದ್ದು ಅದರ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಅರಿವಿನ ಅಲೆಗಳನ್ನು ಪ್ರಾರಂಭಿಸಿದೆವು. ಅಂತರ್ಜಾಲದಲ್ಲಿ ತಂತ್ರಜ್ಞಾನದ ಲೇಖನಗಳು ಕನ್ನಡದಲ್ಲಿ ಇರುವುದು ಕಡಿಮೆ, ಬರೆಯಬೇಕೆಂದು ಬಹಳಷ್ಟು ಬಾರಿ ಅನಿಸಿದ್ದರೂ ಅದಕ್ಕೋಸ್ಕರ ಬಿಡುವು ಮಾಡಿಕೊಳ್ಳಲಾಗಿರಲಿಲ್ಲ. ಏನು ಬರೆಯುವುದು? ಯಾರು ಓದುತ್ತಾರೆ ಎಂಬ ನಮ್ಮೆಲ್ಲರ ಮನದಲ್ಲಿದ್ದ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ ಈ ರೀತಿಯ ಸ್ವಾತಂತ್ರೋತ್ಸವದ ಯೋಚನೆ ಬಂತು. ಬರೆಯಬೇಕೆನಿಸಿದವರಿಗೆ ಕಾರಣವೂ ಸಿಕ್ಕಿತು, ಒಪ್ಪಿಕೊಂಡ ದಿನಕ್ಕೇ ಲೇಖನ ಮುಗಿಸ ಬೇಕಾದ್ದರಿಂದ ಬರೆಯಲು ತಡೆಯಾಗಿದ್ದ ಆಲಸ್ಯವೂ ಹೋಯಿತು.
ಸಂಚಯದ ಬಗ್ಗೆ
“ಸಂಚಯ” – ಹೆಸರೇ ಸೂಚಿಸುವಂತೆ ಇದೊಂದು, ಕನ್ನಡ ಭಾಷೆಯ ಕುರಿತಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಗಳನ್ನು ಒಂದೆಡೆ ತರುವ ಪ್ರಯತ್ನ. ಭಾರತ ದೇಶದಲ್ಲಿ, ಹಿಂದಿ, ತಮಿಳು, ಬಂಗಾಳಿ ಹೀಗೆ ಬಹಳಷ್ಟು ಅಧಿಕೃತ ಭಾಷೆಗಳನ್ನು, ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಸಲು ಯೋಗ್ಯವಾಗುವಂತೆ, ಹತ್ತು ಹಲವು ಬಗೆಯ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಹಾಗೂ ಸರ್ಕಾರದ ಕಾರ್ಯಗಳಿಗೂ ಹೊಂದುವಂತೆ ರೂಪುಗೊಂಡಿವೆ, ಅಭಿವೃದ್ಧಿಯ ಪಥದಲ್ಲಿಯೂ ಸಾಗುತ್ತಿವೆ. ಅವುಗಳಂತೆಯೇ ಅಧಿಕೃತ ಭಾಷೆಯಾದ ಕನ್ನಡದಲ್ಲಿ ನಡೆಯುತ್ತಿರುವ, ನಡೆಸಬಹುದಾದ ಮುಕ್ತ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಅಭಿವೃದ್ಧಿಗಾರರಿಗೆ ಒಂದು ಮುಕ್ತ ವೇದಿಕೆಯನ್ನು ಒದಗಿಸುವುದು ‘ಸಂಚಯ’ದ ಆಶಯ. ಯಾವುದೇ ಒಂದು ಭಾಷೆಯ ಸುತ್ತಲಿನ ತಂತ್ರಾಂಶ ಅಥವಾ ತಂತ್ರಜ್ಞಾನ ಅಭಿವೃದ್ದಿಯು ಆ ಭಾಷೆಯ ಅಭಿವೃದ್ದಿಯೇ ಆಗಿರುತ್ತದೆ. ಈ ಕೆಲಸ ಜನಸಾಮಾನ್ಯನಿಂದ ಇಡಿದು ತಂತ್ರಜ್ಞಾನ ನಿಪುಣರೂ, ಉದ್ಯಮಿಗಳು, ಸರ್ಕಾರ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು ಎಲ್ಲರ ಒಗ್ಗಟ್ಟನ್ನು ಬಯಸುತ್ತದೆ. ಕನ್ನಡಿಗರು ಈ ಕಾರ್ಯದಲ್ಲಿ ಒಟ್ಟಾಗುತ್ತಾರೆ ಎಂಬ ನಂಬಿಕೆಯೊಂದಿಗೆ.
ಅರಿವಿನ ಅಲೆಗಳು ಬಳಗ:
ಹಳ್ಳಿಮನೆ ಅರವಿಂದ
ಊರು ಉತ್ತಮೇಶ್ವರ,ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ನಮ್ಮ ಮನೆಯ ಹೆಸರು ಹಳ್ಳಿಮನೆ, ಹಾಗಾಗಿ ಗೆಳೆಯರು ಹಳ್ಳಿಮನೆ ಅರವಿಂದ ಅಂತಲೂ ಕರೆಯುವುದು ಉಂಟು.
ಬೆಂಗಳೂರಿನಲ್ಲೊಂದು ಕಂಪನಿಯಲ್ಲಿ ತಂತ್ರಾಂಶ ತಂತ್ರಜ್ಞ. ಚಾರಣಗಳು, ಛಾಯಾಗ್ರಹಣ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಒಲವು. ತಂತ್ರಜ್ಞಾನದ ಬಗ್ಗೆ ಹೊಸತಾಗಿ ತಿಳಿಯುವುದೆಂದರೆ ಎಲ್ಲಿಲ್ಲದ ಉತ್ಸಾಹ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಇನ್ನೂ ತೀರದ ಆಸೆ
Web | Hosabelaku | Twitter
ಓಂಶಿವಪ್ರಕಾಶ್ ಎಚ್.ಎಲ್
ಹವ್ಯಾಸ, ಕೆಲಸ ಎರಡೂ ನನ್ನ ನೆಚ್ಚಿನ ತಂತ್ರಜ್ಞಾನವೇ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಳಕೆ, ಭೋದನೆ, ಅಳವಡಿಕೆ, ಅಭಿವೃದ್ದಿ ಖುಷಿ ಕೊಡುವ ಕೆಲಸಗಳು. ಮೂಲತ: ಬೆಂಗಳೂರಿನವನೇ ಆದ ನಾನು ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ನನ್ನ ಅರಿವಿನ ಒಂದಷ್ಟು ಭಾಗವನ್ನು ಕನ್ನಡಿಗರೊಂದಿಗೆಲಿನಕ್ಸಾಯಣದ ಮೂಲಕ ಹಂಚಿಕೊಳ್ಳುತ್ತೇನೆ. ಕನ್ನಡದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಅಭಿವೃದ್ದಿಗೆ ಮತ್ತು ಅವುಗಳ ಬಗೆಗಿನ ಬರಹದೆಡೆಗೆ ವಿಷೇಶ ಆಸಕ್ತಿ. ವಿರಾಮದ ವೇಳೆ ಕ್ಯಾಮೆರಾ, ಸೈಕಲ್, ಪ್ರವಾಸ, ಜೊತೆಗೆ ಒಂದಿಷ್ಟು ಸಾಲುಗಳನ್ನು ಹೆಣೆಯುವುದು ಇತ್ಯಾದಿ.. ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತೇನೆಂಬ ನಂಬಿಕೆಯಿಲ್ಲ, ಆದರೂ ಒಂದಿಷ್ಟು ಮಂದಿಗಾದರೂ ಒಳ್ಳೆಯ ಮಾಹಿತಿ ಒದಗಿಸಬಲ್ಲೆ ಎಂಬ ನಂಬಿಕೆಯಿದೆ.
ಪವಿತ್ರ. ಹೆಚ್
ಸಾಪ್ಟ್ವೇರ್ ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಪವಿತ್ರ, ಪರಿಸರ ಪ್ರೇಮಿ. ಇವರು ಮಂಡ್ಯ ಜಿಲ್ಲೆಯ, ಮಳವಳ್ಳಿ ಎಂಬ ಹಳ್ಳಿಯಿಂದ ಬಂದವರು, ಬಿ.ಇ. ಕಂಪ್ಯೂಟರ್ ಸೈನ್ಸ್ ಪದವೀಧರೆ ಹಾಗೂ ಬಿಟ್ಸ್ ಪಿಲಾನಿ ಎಂ.ಎಸ್. ಸ್ನಾತಕೋತ್ತರ ಪದವಿಧರೆ. ಜೊತೆಗೆ ವೈದ್ಯಕೀಯ ನ್ಯಾಯಶಾಸ್ತ್ರ (Forensic Science)ದಲ್ಲಿ ಬಳಸುವ ಬರವಣಿಗೆಯ ವಿಶ್ಲೇಷಣೆಯಲ್ಲಿಯೂ (Handwriting Analyst) ಇವರು ಪದವಿಯನ್ನು ಹೊಂದಿದ್ದಾರೆ.
ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುತ್ತಿರುವ ಉದಯೋನ್ಮುಕ ಛಾಯಾಗ್ರಾಹಕಿ. ಕನ್ನಡ ಬ್ಲಾಗ್ ಲೋಕಕ್ಕೆ ಇಣುಕು ಹಾಕುತ್ತಾ, ಅಲ್ಲಲ್ಲಿ ಕಂಡು ಬರುವ ಪಕ್ಷಿ, ಹೂವು, ಸಸ್ಯಗಳ ಹೆಸರುಗಳನ್ನು ಇತರರಿಗೆ ತಿಳಿಸುತ್ತಾ, ಅನೇಕ ಕಡೆಗಳಲ್ಲಿ ಇಂಗ್ಲೀಷ್ ಹಾಗೂ ಕನ್ನಡ ಹೆಸರನ್ನೂ ಸೂಚಿಸುತ್ತ ತಮ್ಮ ಗೆಳೆಯರ ಬಳಗವನ್ನು ಚಕಿತಗೊಳಿಸುತ್ತಾರೆ.
ರವಿಶಂಕರ್ ಹರನಾಥ್
ಮೂಲತಃ ಬೆಂಗಳೂರಿನವ. ವಿದ್ಯಾಭ್ಯಾಸ ಬೆಂಗಳೂರು, ಮೈಸೂರುಗಳಲ್ಲಿ. ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿ. ಸದ್ಯಕ್ಕೆ, ಬೆಂಗಳೂರಿನಲ್ಲೇ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ. ಸುಮಾರು ಹತ್ತುವರ್ಷಗಳ ಕೆಲಸ ಕಾರ್ಯಗಳಲ್ಲಿ, ಲಿನಕ್ಸ್ ದಿನನಿತ್ಯದ ಬಳಕೆಯ ವಸ್ತುವಾಗಿದೆ. ತಂತ್ರಜ್ಞಾನವನ್ನು ಹೊರತು ಪಡಿಸಿದರೆ, ಚಾರಣ, ಪ್ರವಾಸ ಹಾಗೂ ಚಿತ್ರ ಕಲೆಯಲ್ಲಿ ಆಸಕ್ತಿ. ಮುಕ್ತ ತಂತ್ರಾಂಶಗಳಲ್ಲಿ, ಕನ್ನಡ ಮಾಧ್ಯಮದ ಅಳವಡಿಕೆಯನ್ನು, ಬಳಕೆಯನ್ನು ಸುಧಾರಿಸುವುದರಲ್ಲಿ, ವಿಶೇಷ ಒಲವು.
೨೦೧೧ ರ ಸಂಚಿಕೆಯ ಲೇಖಕ/ಲೇಖಕಿಯರು :
ರವಿಶಂಕರ್ ಹರನಾಥ್, ಮೊದ್ಮಣಿ ಮಂಜುನಾಥ್, ವಿಜಯ್ ಕುಮಾರ್ ಎಂ, ಸುನಿಲ್ ಜಯಪ್ರಕಾಶ್, ಪವಿತ್ರ ಹೆಚ್, ಎಂ.ಕೆ. ರೇಖಾವಿಜೇಂದ್ರ, ಹಳ್ಳಿಮನೆ ಅರವಿಂದ, ಪ್ರಸನ್ನ ಎಸ್ ಪಿ, ಓಂಶಿವಪ್ರಕಾಶ್ ಎಚ್.ಎಲ್, ಶಂಕರ್ ಪ್ರಸಾದ್. ಎಮ್ ವಿ, ಹಂಸಾನಂದಿ, ಹರೀಶ್, ಶ್ರೀನಿವಾಸ್ ಪಿ ಎಸ್, ಹರ್ಷ ಪೆರ್ಲ
ಈ ಕಾರ್ಯಕ್ರಮ ಮಾಡಲು ಸ್ಪೂರ್ತಿ phpadvent.org ಎನ್ನುವ ವೆಬ್ ಸೈಟ್ ನಿಂದ. ಅವರು ಕ್ರಿಸ್ಮಸ್ ಆಚರಿಸುವ ಸಲುವಾಗಿ ಡಿಸೆಂಬರ್ ೧ ರಿಂದ ೨೪ ರವರೆಗೆ ಇದೇ ತರಹ PHP ಎಂಬ ತಂತ್ರಾಂಶದ ಬಗೆಗಿನ ಲೇಖನಗಳನ್ನು ಬರೆದು ಹಂಚಿಕೊಳ್ಳುತ್ತಾರೆ.
ನಮ್ಮ ಬಳಗಕ್ಕೆ ಏನಾದರೂ ಹೇಳುವುದಿದ್ದರೆ arivu AT sanchaya DOT net ಗೆ ಬರೆದು ಕಳಿಸಿ.
ನಿಮ್ಮ ಪ್ರತಿಕ್ರಿಯೆಗಳು