ಅರಿವಿನ ಅಲೆಗಳು

ನಿಮ್ಮ ಲೇಖನಗಳನ್ನು [email protected] ಗೆ ಕಳುಹಿಸಿ
Navigation Menu

ಗಣರಾಜ್ಯೋತ್ಸವ – ಅಲೆ ೭ – OLPC – ಪ್ರತಿ ಮಕ್ಕಳಿಗೂ ಒಂದೊಂದು ಲ್ಯಾಪ್‌ಟಾಪ್

ಪ್ರಕಟಿಸಿದ್ದು ದಿನಾಂಕ Jan 8, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಜಗತ್ತಿನ ಬದಲಾವಣೆಯ ವೇಗವು ಗಮನಾರ್ಹವಾಗಿ ಹೆಚ್ಚುತ್ತಿದೆ, ಅದರಂತೆ ಇಂದಿನ ಎಲ್ಲಾ ಮಕ್ಕಳನ್ನು ಭವಿಷ್ಯದ ಪರಿಪೂರ್ಣ ನಾಗರೀಕರನ್ನಾಗಿಸುವ ತುರ್ತು ಸಹ ಅತ್ಯಧಿಕವಾಗಿದೆ. ನಮ್ಮ ಮುಂದಿನ ಪೀಳಿಗೆಯ ಪ್ರಪಂಚವು ಯಾವ ರೀತಿಯಲ್ಲಿರುತ್ತದೆ ಎಂದು ಯಾರಿಂದಲೂ ಸಹ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿ ಈ ಮಕ್ಕಳನ್ನು ಸಿದ್ಧಗೊಳಿಸುವ ಸೂಕ್ತವಾದ ಮಾರ್ಗವೆಂದರೆ ಕಲಿಕೆಯ ತುಡಿತವನ್ನು ಬೆಳೆಸುವುದು ಮತ್ತು ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುವುದು. ಈ ವೇಗವಾದ ಬದಲಾವಣೆಗೆ ಮೂಲ ಕಾರಣವಾದಂತಹ ಡಿಜಿಟಲ್ ತಂತ್ರಜ್ಞಾನವೆ ಸ್ವತಃ ಈ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಮಕ್ಕಳು ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಪ್ರಯತ್ನವು ಹೊಸತೇನಲ್ಲ. ಕಲಿಯಲು ಆರಂಭಿಸುವ ಪ್ರತಿಯೊಬ್ಬ ಮಗುವೂ ಸಹ ಲ್ಯಾಪ್‌ಟಾಪ್‌ನಂತಹ ಸಾಧನದ ಮೂಲಕ ಅಂತರಜಾಲಕ್ಕೆ ಸಂಪರ್ಕಿತಗೊಂಡಲ್ಲಿ ಸಂಪೂರ್ಣವಾದ ವಿಕಸನೆ ಮಾತ್ತು ತೊಡಗಿಸಿಕೊಳ್ಳುವಿಕೆಯ ಸಾಧ್ಯತೆಯನ್ನು ಹೊಂದಿರುತ್ತಾನೆ. ಪ್ರಪಂಚದಲ್ಲಿ ದೊರೆಯುವ ಉತ್ತಮ ಗುಣಮಟ್ಟದ, ಆಧುನಿಕ ಪರಿಕರಗಳನ್ನು ಬಳಸಿಕೊಂಡು ತನ್ನ ಇಚ್ಛೆಯ ಕ್ಷೇತ್ರದಲ್ಲಿ ಕಲಿಯಲು ಮಾರ್ಗವೊಂದು ಆತನ ಮುಂದೆ ತೆರೆದುಕೊಳ್ಳುತ್ತದೆ.

ಈ ನಿಟ್ಟಿನಲ್ಲಿನ ಒಂದು ಸಾಮಾಜಿಕ ಕಳಕಳಿಯಿಂದ ಮತ್ತು ಯಾವುದೆ ಲಾಭದ ಆಕಾಂಕ್ಷೆಯನ್ನು ಹೊಂದಿರದ ಯೋಜನೆಗಳಲ್ಲಿ ಒಎಲ್‌ಪಿಸಿಯೂ (ಒನ್ ಲ್ಯಾಪ್‌ಟಾಪ್ ಪರ್ ಚೈಲ್ಡ್‍) ಸಹ ಒಂದು. ಇದರ ಜಾಲತಾಣವೇ ಹೇಳುವಂತೆ, ಅದರ ಉದ್ಧೇಶವು ಜಗತ್ತಿನ ಅತ್ಯಂತ ಬಡ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡುವುದಾಗಿದೆ. ಈ ಶೈಕ್ಷಣಿಕ ಯೋಜನೆಯ ಮೂಲಕ ಅಭಿವೃದ್ಧಿಶೀಲ ದೇಶಗಳಲ್ಲಿನ ಪ್ರತಿಯೊಂದು ಮಗುವಿಗೂ ಸಹ ಗಟ್ಟಿಮುಟ್ಟಾದ, ಅಗ್ಗವಾದ, ಉತ್ತಮಗುಣಮಟ್ಟದ, ಕಡಿಮೆ ವಿದ್ಯುತ್ ಅನ್ನು ಬಳಸುವ, ಮತ್ತು ಅಂತರಜಾಲವನ್ನೂ ಸಹ ಜಾಲಾಡಲು ಬಳಸಬಹುದಾದ ಒಂದು ಲ್ಯಾಪ್‌ಟಾಪ್ ಅನ್ನು ಸಿದ್ಧಗೊಳಿಸುವ ಗುರಿಯನ್ನು ಹೊಂದಿದೆ.

ಇತಿಹಾಸ

ತಂತ್ರಜ್ಞಾನವನ್ನು ಮಕ್ಕಳಿಗೆ ತಲುಪಿಸಲು ಲ್ಯಾಪ್‌ಟಾಪ್‌ನಂತಹ ಒಂದು ಸಾಧನವನ್ನು ಒಂದು ಮಾರ್ಗವಾಗಿ ಬಳಸುವ ಕುರಿತು ಒಂದು ಕನಸನ್ನು ಜಗತ್ತಿನ ಹಲವು ಶಿಕ್ಷಣ ತಜ್ಞರು ಬಹಳ ಹಿಂದೆಯೆ ಕಂಡಿದ್ದರು. ೨೦೦೫ರ ಆರಂಭದಲ್ಲಿ, MIT ಯ ಮೀಡಿಯಾ ಲ್ಯಾಬ್‌ನ ಸ್ಥಾಪಕರಾದಂತಹ ನಿಕೋಲಸ್ ನೆಗ್ರೊಪಾಂಟೆ ಮಕ್ಕಳಿಗೆ ಲ್ಯಾಪ್‌ಟಾಪ್‌ಗಳನ್ನು ಹಂಚುವ ತಮ್ಮ ಹಿಂದಿನ ಯಶಸ್ಸಿನಿಂದ ಪ್ರೇರಿತರಾಗಿ ೧೦೦ ಡಾಲರ್ ವೆಚ್ಚದ ಲ್ಯಾಪ್‌ಟಾಪ್‌ನ ಆರಂಭಿಕ ಯೋಜನೆಯನ್ನು ಹುಟ್ಟುಹಾಕಿದರು. ಈ ಯೋಜನೆಯನ್ನು ಅವರು ವರ್ಲ್ಡ್‍ ಎಕನಾಮಿಕ್ ಫೋರಮ್‌ನಲ್ಲಿ ಇದನ್ನು ಜಗತ್ತಿಗೆ ಪರಿಚಯಿಸಿದರು ಹಾಗು ಅಲ್ಲಿ ಇದು ಅತ್ಯಂತ ಪ್ರಶಂಸೆಗೆ ಒಳಗಾಯಿತು. ದಿ ನ್ಯೂಯೋರ್ಕ್ ಟೈಮ್ಸ್‍ ಪತ್ರಿಕೆಯ ಜಾನ್ ಮಾರ್ಕಾಫ್ ಅಂತೂ ನೆಗ್ರೊಪಾಂಟೆಯನ್ನು “ಡಿಜಿಟಲ್ ಯುಗದ ಜಾನಿ ಆಪಲ್‌ಸೀಡ್*” ಎಂದು ಹೊಗಳಿತು.

ನೆಗ್ರೊಪಾಂಟೆಯ ಈ ಯೋಜನೆಗೆ ಹೆಸರಾಂತ ಕಾರ್ಪೋರೇಟ್ ಪಾಲುದಾರರಾದಂತಹ ಎಎಮ್‌ಡಿ, ನ್ಯೂಸ್‌ ಗ್ರೂಪ್, ಗೂಗಲ್, ರೆಡ್ ಹ್ಯಾಟ್, ಕ್ವಾಂಟಾ ಕಂಪ್ಯೂಟರುಗಳು, ನೋರ್ಟೆಲ್ ಮುಂತಾದವುಗಳಿಂದ ವ್ಯಾಪಕ ಬೆಂಬಲವನ್ನು ನೀಡಲಾಯಿತು. ಅಷ್ಟೆ ಅಲ್ಲದೆ ಇದರ ಪ್ರಯೋಜನ ಪಡೆದುಕೊಳ್ಳಲು ೫೦ ಕ್ಕೂ ಹೆಚ್ಚಿನ ದೇಶಗಳು ಮುಂದೆ ಬಂದವು. ಅದರಲ್ಲಿ ಪ್ರಮುಖವಾದುದೆಂದರೆ ನೈಜೀರಿಯಾ, ಇದು ಸುಮಾರು ೧ ಮಿಲಿಯನ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಮುಂದಾಯಿತು.

ಯಂತ್ರಾಂಶ

ತೈವಾನಿನ ಕಂಪೆನಿಯಾದ ಕ್ವಾಂಟಾ ಕಂಪ್ಯೂಟರ್ ಎಂಬ ಕಂಪನಿಯಿಂದ ನಿರ್ಮಿತವಾದ ಓಎಲ್‌ಪಿಸಿ ಲ್ಯಾಪ್‌ಟಾಪ್ ಅನ್ನು XO ಲ್ಯಾಪ್‌ಟಾಪ್‌ ಎಂದು ಕರೆಯಲಾಗುತ್ತದೆ. ಚಿಕ್ಕದಾದ ಪುಸ್ತಕದ ರೂಪದಲ್ಲಿರುವ ಇದು ಒಳ-ನಿರ್ಮಿತ ವೈರ್ಲೆಸ್ ಮತ್ತು ಬಿಸಿಲಿನಲ್ಲಿಯೂ ಸಹ ಓದಬಹುದಾದ ವಿಶಿಷ್ಟವಾದ ತೆರೆಯನ್ನು ಹೊಂದಿದೆ. ಚೂಪಾದ ಅಂಚುಗಳನ್ನು ಹೊಂದಿರದಂತೆ ಕಾಳಜಿವಹಿಸಲಾದ ಇದನ್ನು ವಿಪರೀತ ಹವಾಮಾನದಲ್ಲಿಯೂ ಸಹ ಬಳಸಲಾಗುವಂತೆ ನಿರ್ಮಿಸಲಾಗಿದೆ. ಕೆಳಕ್ಕೆ ಬಿದ್ದರೂ ಸಹ ಸುಲಭವಾಗಿ ಹಾಳಾಗದಂತಹ ದಪ್ಪನೆಯ ಪ್ಲಾಸ್ಟಿಕ್‌ನಿಂದ (ಸುಮಾರು ೨ ಮಿಲಿ ಮೀಟರ್) ತಯಾರಿಸಲಾಗಿದೆ. ಇದರ ಕೀಲಿಮಣೆಯನ್ನು ಮೇಲೆ ನೀರು ಬಿದ್ದರೂ ಸಹ ಹಾಳಾಗದಂತೆ ವಿನ್ಯಸಿಸಲಾಗಿದೆ. ಕೇವಲ ಒಂದು ವ್ಯಾಟ್‌ನಷ್ಟು ವಿದ್ಯುತ್ ಅನ್ನು ಬಳಸುವ ಇದರ LiFePO4 ಬ್ಯಾಟರಿಯಲ್ಲಿ ಯಾವುದೆ ಅಪಾಯಕಾರಿ ಲೋಹಗಳು ಇರದಂತೆ ಎಚ್ಚರಿಕೆವಹಿಸಲಾಗಿದೆ. ಇದರಲ್ಲಿ ಕ್ರಾಶ್ ಆಗಲು ಯಾವುದೆ ಹಾರ್ಡ್ ಡ್ರೈವ್ ಇಲ್ಲ! ಮತ್ತು ಕೇವಲ ಎರಡು ಆಂತರಿಕ ಕೇಬಲ್‌ಗಳನ್ನು ಮಾತ್ರ ಇದೆ.. ಎಲ್ಲಾ ಲ್ಯಾಪ್‌ಟಾಪ್‌ನಂತೆ ಇದರಲ್ಲಿ ಯುಎಸ್‌ಬಿ ಸಂಪರ್ಕಸ್ಥಾನಗಳನ್ನು (ಪೋರ್ಟ್), ಕ್ಯಾಮೆರಾ, ಆಂತರಿಕ ಸ್ಟೀರಿಯೊ ಸ್ಪೀಕರುಗಳು ಮತ್ತು ಆಂಪ್ಲಿಫಯರುಗಳನ್ನು ಹೊಂದಿದೆ. ಈ ಪ್ರತಿಯೊಂದು ಗಣಕವೂ ಸಹ ಪೂರ್ಣ-ಪ್ರಮಾಣದ ವೈರ್ಲೆಸ್ ರೌಟರ್ ಆಗಿರುತ್ತದೆ. ಈ ಮೂಲಕ ಮಕ್ಕಳು ಹಾಗೂ ಶಿಕ್ಷಕರು ಅಂತರಜಾಲದೊಂದಿಗೆ ಮತ್ತು ಪರಸ್ಪರ ಸಂಪರ್ಕಿತದಲ್ಲಿರಲು ಸಾಧ್ವವಾಗುತ್ತದೆ. ಈ ಲ್ಯಾಪ್‌ಟಾಪ್‌ನ ಕನಿಷ್ಟ ಜೀವಿತಾವಧಿಯು ನಾಲ್ಕು ವರ್ಷಗಳಾಗಿರುತ್ತವೆ.

ತಂತ್ರಾಂಶ
ಇದರಲ್ಲಿ ಅತ್ಯಂತ ಹಗುರವಾದ, ಗ್ನು/ಲಿನಕ್ಸ್ ಆಧರಿತವಾದ ಉಚಿತ ಮತ್ತ ಮುಕ್ತ ತಂತ್ರಾಂಶವಾದ ಶುಗರ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸಲಾಗಿದೆ. ಮಕ್ಕಳ ಬಳಕೆ ಸುಲಭವಾಗುವಂತಹ ಸರಳವಾದ ಇಂಟರ್ಫೇಸ್ ಅನ್ನು ಅಳವಡಿಸಲಾಗಿದೆ.

ಇದನ್ನು ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಇದನ್ನು ಬಳಸಲು ನೆರವಾಗುವಂತೆ ಪ್ರಾದೇಶೀಕರಣವನ್ನೂ (ಲೋಕಲೈಸೇಶನ್) ಸಹ ಮಾಡಲಾಗಿದೆ. ಕಲಿಕೆಯ ರೂಪವಾದ ಇ-ಪುಸ್ತಕ ಓದುವಿಕೆ, ಬರೆಯುವಿಕೆ, ಚಿತ್ರರಚನೆಯ ಜೊತೆಯಲ್ಲಿ ಆಟವನ್ನು ಆಡುವಂತೆಯೂ ಕೂಡ ಅನುಕೂಲಗೊಳಿಸಲಾಗಿದೆ. ಈ ಕಾರ್ಯಾಚರಣೆ ವ್ಯವಸ್ಥೆಯು ಸಾಮಾನ್ಯ ಬಳಕೆಗೆ ಅಗತ್ಯವಿರುವ ಎಲ್ಲಾ ಉಪಕರಣ ತಂತ್ರಾಂಶಗಳನ್ನು ಹೊಂದಿರುತ್ತದೆ. ಈವರೆಗೆ ಬಂದಿರುವ ಆವೃತ್ತಿಗಳೆಂದರೆ: XO-1, XO-1.5, XO-1.75, ಮತ್ತು ಸದ್ಯಕ್ಕೆ ವಿಕಸನೆಗೊಳಿಸಲಾಗುತ್ತಿರುವ XO-4.

ಅಳವಡಿಕೆ
ಲ್ಯಾಪ್‌ಟಾಪ್‌ಗಳನ್ನು ಶಿಕ್ಷಣ ಇಲಾಖೆಯ ಮೂಲಕ “ಪ್ರತಿ ಮಕ್ಕಳಿಗೂ ಒಂದೊಂದು ಲ್ಯಾಪ್‌ಟಾಪ್” ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ನೀಡಲಾಗುವಂತೆ ಆಯಾಯ ದೇಶದ ಸರ್ಕಾರಗಳಿಗೆ ಮಾರಲಾಗುತ್ತದೆ. ಸಮವಸ್ತ್ರ, ಪಠ್ಯಪುಸ್ತಕದಂತೆಯೆ ಇದೂ ಸಹ ಶಾಶ್ವತವಾಗಿ ಮಕ್ಕಳೊಂದಿಗೆ ಉಳಿಯುತ್ತದೆ. ಇಷ್ಟೇ ಅಲ್ಲದೆ, “ಗೀವ್ ಒನ್, ಬೈ ಒನ್” ಕಾರ್ಯಕ್ರಮ ಅಡಿಯಲ್ಲಿ ಆಸಕ್ತ ಗ್ರಾಹಕರು, ಎರಡು ಲ್ಯಾಪ್‌ಟಾಪ್‌ಗೆ ಹಣತೆತ್ತು ಅದರಲ್ಲಿ ಒಂದನ್ನು ಕೊಡುಗೆಯಾಗಿ ನೀಡಿ ಇನ್ನೊಂದನ್ನು ಪಡೆದುಕೊಳ್ಳಲು ಅವಕಾಶವನ್ನೂ ಸಹ ನೀಡಲಾಗಿದೆ. ೨೦೦೭ ರಿಂದ ೨೦೧೧ರ ವರೆಗೆ ಜಗತ್ತಿನಾದ್ಯಂತ ವಿವಿಧ ದೇಶಗಳಿಗೆ ಸುಮಾರು ೧.೮೪ ಮಿಲಿಯನ್‌ ಲ್ಯಾಪ್‌ಟಾಪ್ ಒದಗಿಸಲಾಗಿದೆ.

ಟೀಕೆಗಳು
ಈ ಯೋಜನೆಯ ಉದ್ಧೇಶಗಳು ಎಷ್ಟೇ ಉನ್ನತವಾಗಿದ್ದರೂ ಸಹ ಟೀಕೆಗಳಿಂದ ಹೊರತಾಗಿಲ್ಲ. ಕೆಲೆವೆಡೆಗಳಲ್ಲಿ ಕೇವಲ ಮಕ್ಕಳಿಗೆ ಲ್ಯಾಪ್‌ಟಾಪ್‌ಗಳು ನೀಡಲಾಯಿತೆ ಹೊರತು ಶಿಕ್ಷಕರಿಗೆ ಅದರ ಕುರಿತು ಸೂಕ್ತವಾದ ತರಬೇತಿಯನ್ನು ನೀಡಲಾಗಿಲ್ಲ ಎಂಬ ದೂರಗಳು ಕೇಳಿಬಂದಿವೆ. ಅಂತರಾಷ್ಟ್ರೀಯ ಮಟ್ಟದ ಉತ್ಪನ್ನವೊಂದು ಒಂದು ಪ್ರದೇಶದ ಮಕ್ಕಳ ಕಲಿಕೆಯಲ್ಲಿ ಎಷ್ಟರ ಮಟ್ಟಿಗೆ ಸಹಾಯ ನೀಡಬಲ್ಲದು ಎಂಬ ಸಂದೇಹಗಳು ಮೂಡಿವೆ. ಉತ್ಪಾದನಾ ವೆಚ್ಚದಲ್ಲಿ ಉಂಟಾದ ಹೆಚ್ಚಳದಿಂದಾಗಿ ಯೋಜನೆಯ ಆರಂಭದಲ್ಲಿ ಉದ್ಧೇಶಿಸಲಾದಂತೆ ಪ್ರತಿ ಲ್ಯಾಪ್‌ಟಾಪನ್ನು ೧೦೦ ಡಾಲರಿಗೆ ನೀಡಲಾಗದ್ದನ್ನೂ ಸಹ ಟೀಕಿಸಲಾಯಿತು. ಬೇರೆ ಯಾವುದೆ ಯಂತ್ರಾಂಶ ಮತ್ತು ತಂತ್ರಾಂಶಗಳಲ್ಲಿರುವಂತೆ ಇದರಲ್ಲಿಯೂ ಸಹ ಕೆಲವು ದೋ ಷಗಳು ಕಂಡುಬಂದಿವೆ. “ಗೀವ್ ಒನ್, ಬೈ ಒನ್” ಯೋಜನೆಯ ಅಡಿಯಲ್ಲಿ ಖರೀದಿಸಿದ ಹಲವರಿಗೆ ಲ್ಯಾಪ್‌ಟಾಪ್‌ ತಲುಪುವುದು ತಡವಾಗಿದ್ದೂ ಸಹ ವ್ಯಾಪಕವಾಗಿ ಟೀಕೆಗೆ ಒಳಗಾಯಿತು.

ಭಾರತದಲ್ಲಿ ಓಎಲ್‌ಪಿಸಿ
ಈ ಯೋಜನೆಯಲ್ಲಿ ಪಾಲ್ಗೊಂಡ ಭಾರತದ ಮೊದಲ ರಾಜ್ಯವೆಂದರೆ ಮಣಿಪುರ. ನಂತರ ಕೇರಳ, ಗುಜರಾತ್ ಆಸಕ್ತಿ ತೋರಿಸಿದವು. ಆದರೆ ಕೇಂದ್ರ ಸರ್ಕಾರದಿಂದ ಇದಕ್ಕೆ ವ್ಯಾಪಕವಾದ ಬೆಂಬ ಲ ದೊರಕಲಿಲ್ಲ . ಇದಕ್ಕೆ ಪರ್ಯಾಯವಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾದ ಆಕಾಶ್ ಟ್ಯಾಬ್ಲೆಟ್ ಇದಕ್ಕೆ ಒಂದು ಕಾರಣವಿರಬಹುದು.

ಇಂದಿನ ಪ್ರಪಂಚದಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವ ಸ್ಮಾರ್ಟ್-ಫೋನ್ ಅನಿವಾರ್ಯವಾಗಿದೆ. ಮಕ್ಕಳಿಗೆ , ಅದರಲ್ಲೂ ಅಭಿವೃದ್ಧಿಶೀಲ ದೇಶಗಳ ಲ್ಲಿನ ಬಡ ಕುಟುಂಬದ ಮಕ್ಕಳಿಗೆ ಈ ಬಗೆಯ ಒಂದು ಸಾಧನವನ್ನು ಪರಿಚಯಿಸುವ ಮೂಲಕ ಕಲಿಕೆಯಲ್ಲಿ ನೆರವಾಗುವುದರ ಜೊತೆಗೆ ಇಂದಿನ ತಂತ್ರಜ್ಞಾನ ಜಗತ್ತಿನ ಬಾಗಿಲನ್ನು ತೆರೆದಂತಾಗುತ್ತದೆ..

ಚಿತ್ರಕೃಪೆ ಮತ್ತು ಹೆಚ್ಚಿನ ಓದು:
1. http://one.laptop.org/
2. http://en.wikipedia.org/wiki/One_Laptop_per_Child

*ಜಾನಿ ಆಪಲ್‌ಸೀಡ್ : ೧೮ನೆಯ ಶತಮಾನದಲ್ಲಿ ಸೇಬಿನ ಬೀಜಗಳನ್ನು ಪೆನ್‌ಸಿಲ್ವೇನಿಯಾ, ಓಹಿಯೊ, ಇಂಡಿಯಾನಾ ಮತ್ತು ಇಲ್ಲಿನೋಯಿಸ್‌ ಪ್ರಾಂತ್ಯಕ್ಕೆ ಪರಿಚಯಿಸಿದ ಖ್ಯಾತ ವ್ಯಕ್ತಿ.

ಲೇಖಕ: ಶಂಕರ್ ಪ್ರಸಾದ್ ಎಮ್. ವಿ

ಹುಟ್ಟು ಮತ್ತು ಬಾಲ್ಯ ಶೃಂಗೇರಿ ಸಮೀಪದ ತುಂಗೆಯ ತಟದಲ್ಲಿರುವ ಪುಟ್ಟ ಹಳ್ಳಿಯಲ್ಲಿ. ಓದಿದ್ದು ವಸ್ತುವಿಜ್ಞಾನದಲ್ಲಿ ಎಂಎಸ್ಸಿ. ಬೆಂಗಳೂರಿನ ಎನ್‌ಎಎಲ್‌ನ ವಸ್ತುವಿಜ್ಞಾನ ವಿಭಾಗದಲ್ಲಿ ಒಂದಿಷ್ಟು ವರ್ಷ ವಾಸ ಸಹಾಯಕ ಸಂಶೋಧಕನಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕನ್ನಡದ ವಾರ್ಷಿಕ ವಿಜ್ಞಾನ ಪತ್ರಿಕೆಯಾದ ಕಣಾದ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ. ನಂತರ ಮುಕ್ತ ತಂತ್ರಾಂಶಗಳೆಡೆಗೆ ಒಲವು. ಪ್ರಸಕ್ತ ಮುಕ್ತ ತಂತ್ರಾಂಶವನ್ನು ಒದಗಿಸುವ ಸಂಸ್ಥೆಯಲ್ಲಿ ಅನುವಾದಕನಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೈರ್ಫಾಕ್ಸ್, ಗ್ನೋಮ್, ಕೆಡಿಇ, ಫೆಡೋರ, ಓಪನ್ಆಫೀಸ್ ಮುಂತಾದ ಹೆಚ್ಚಿನ ಎಲ್ಲಾ ಮುಕ್ತತಂತ್ರಾಂಶಗಳ ಕನ್ನಡ ಅನುವಾದದಲ್ಲಿ ಕೈಜೋಡಿಸಿದ್ದಾರೆ. ಈ ಅನುವಾದಗಳಲ್ಲಿ ಶಿಷ್ಟತೆಯನ್ನು ತರುವುದು ಮುಂದಿನ ಗುರಿ. ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನೂ ಸಹ ಬರೆದಿದ್ದಾರೆ. ಸಾಹಿತ್ಯ ಹಾಗು ಕ್ರಿಕೆಟ್‌ನೆಡೆಗೆ ಅಪರಿಮಿತ ಆಸಕ್ತಿ, ಒಂದಿಷ್ಟು ಸಣ್ಣ ಪುಟ್ಟ ಕವನಗಳನ್ನೂ ಸಹ ರಚಿಸಿದ್ದಾರೆ.

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೬ – ಸ್ಯಾಂಡಿ / ಸಂಧ್ಯಾನ / ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ಪ್ರಕಟಿಸಿದ್ದು ದಿನಾಂಕ Jan 7, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ – ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ…ನೀನೇನು ಯೋಚನೆ ಮಾಡಬೇಡ’ ಅಂದೆ…
’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ – ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ…
ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು ಇಟ್ಕೊಂಡ್ ಬರಕ್ಕೇ ಆಗತ್ತಾ? ನಾವೇ ಹೆಸರಿಡೋದು…ಹಿಂದೆ ಎಲ್ಲ ’ಲೈಲಾ’ ಬಂದಿದ್ಳು ನೆನಪಿದೆಯಾ?’ ಅಂದೆ…
’ಹೌದಾ…ಲೈಲಾ ಬಂದ್ರೆ ಮಜನೂ ಬರಲಿಲ್ವಾ?’ ಎಂದು ಕೇಳಿದಾಗ, ಅಮ್ಮನ ಮಾತಿಗೆ ನಾನು ಗೊಳ್ಳೆಂದು ನಕ್ಕೆನಾದರೂ, ’ಮಜನೂ’ ಯಾಕೆ ಬರಲಿಲ್ಲ ಅಥವಾ ಯಾಕೆ ಮಜನೂ ಮುಂದೇನೂ ಬರೋದಿಲ್ಲ ಅಂತ ಗೊತ್ತಿರಲಿಲ್ಲ…

ಇತ್ತ ಕಡೆ ’ಸ್ಯಾಂಡಿ’ ಅಮೇರಿಕದ ಪೂರ್ವ ಭಾಗದಲ್ಲಿ ಅನಾಹುತವನ್ನು ಮಾಡ್ತಿದ್ರೆ,
ಕೀಟಲೆ ಕೋರರು, “’ಸ್ಯಾಂಡಿ’ ನಮ್ಮ ’ಸಂಧ್ಯ’ನಾ ಇಲ್ಲ ’ಸಂದೀಪ’ನಾ?” ಅಂತ ಫ಼ೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿ, ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ನಡುವೆ ಭಯಂಕರ ಬಿಕ್ಕಟ್ಟನ್ನೇ ಸೃಷ್ಟಿಸಿಬಿಟ್ಟರು…
’ಸ್ಯಾಂಡಿ’ – ’ ಸಂಧ್ಯಾ”ನೇ ಅಂತ ಹೆಂಡತಿಯೊಂದಿಗೆ ವಾಗ್ವಾದ ಮಾಡಿದ ಗಂಡ ಉಪವಾಸ ಬೀಳಬೇಕಾಯ್ತು ಅಂತ ಅನ್ನೋದು ಮತ್ತೊಂದು ಫ಼ೇಸ್ ಬುಕ್ ಕಥೆ…

ಅದೇನೆ ಇರಲಿ, ನನ್ನ ಹೆಂಡತಿ ಕೂಡ, ’ತುಂಬಾ ಮೋಸ…ಹರಿಕೇನ್ ಗೆಲ್ಲಾ ಹುಡುಗೀರ್ ಹೆಸರೇ ಯಾಕಿಡ್ಬೇಕು – ಕಟ್ರೀನಾ ಅಂತೆ…ಲೈಲಾ ಅಂತೆ…ನೀಲಂ ಅಂತೆ…’ ಎಂದಾಗ ನಾನು ಸುಮ್ಮನೆ ಇರದೆ ’ಅಷ್ಟೂ ಗೊತ್ತಾಗಲ್ವೇನೆ ಯಾಕೆ ಹುಡುಗೀರ್ ಹೆಸರಿಡ್ತಾರೆ ಅಂತ?’ ಎಂದು ಹೇಳ್ಬಿಟ್ಟೆ…ಅವತ್ತು ನನ್ನ ಪಾಡು ಯಾಕೆ ಕೇಳ್ತೀರಾ!
ನನ್ನ ಪಾಡು ಏನೇ ಆದ್ರೂ, ನನ್ನ ಹೆಂಡತಿ ಸ್ಯಾಂಡಿ ಹುಡುಗಿನೇ ಅಂತ ಒಪ್ಕೊಂಡ್ಳಲ್ಲಾ ಅಂತ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡ್ಕೊಂಡಿದ್ದೆ!!!

ಇಷ್ಟೆಲ್ಲಾ ಓದಿದ ಹೆಣ್ಣು ಮಕ್ಕಳು ಈಗಾಗಲೇ ನನ್ನ ಮೇಲೆ ಮೂರನೇ ಮಹಾ ಯುದ್ಧಕ್ಕೆ ಸಿದ್ಧರಾಗ್ತಿರಬಹುದು, ಹಾಗಾಗಿ ಮುಖ್ಯವಾದ ವಿಷಯ ಮೊದಲೇ ಹೇಳಿ ಬಿಡ್ತೀನಿ…
ಎಲ್ಲಾ ಹರಿಕೇನ್ ಗಳೂ/ಸೈಕ್ಲೋನ್‍ಗಳೂ, ಹೆಣ್ಣು ಮಕ್ಕಳ ಹೆಸರು ಇಟ್ಕೊಂಡಿರಲ್ಲ…ಮುಂದೆ ’ಆಕಾಶ’ ನೂ ಬರ್ತಾನೆ ’ಸಾಗರ್’ ಕೂಡ ಬರ್ತಾನೆ ಆದ್ರೆ ಸದ್ಯಕ್ಕಲ್ಲ …ಆದ್ರೆ ’ಮಜನೂ’ ಬರೋದು ಮಾತ್ರ ತುಂಬಾನೇ ಡೌಟು…

“ಅದೇನು ಅಷ್ಟೊಂದು ಕಾನ್ಫಿಡೆನ್ಸ್ ನಿಂದ ಹೇಳ್ತಿದೀರಾ?” ಅಂತೀರಾ? ಅದಕ್ಕೆ ಕಾರಣ ಇದೆ…

ಪ್ರತಿಯೊಂದು ಸೈಕ್ಲೋನ್ ಬರೋದಕ್ಕೂ ಮುಂಚೇನೆ ಮುಂದೆ ಏನು ಬರತ್ತೇ ಅನ್ನೋದನ್ನ ಮೊದಲೇ ನಿರ್ಧಾರ ಮಾಡಿ ಆಗಿರತ್ತೆ…ಇದು ಏನಪ್ಪಾ ಇದು ಅಂತ ತಲೆ ಕೆರ್ಕೋ ಬೇಡಿ…
ನಮ್ಮ ’ಪ್ರಭವ’, ’ವಿಭವ’ ಅಂತ ಅರವತ್ತು ಸಂವತ್ಸರಗಳ ಹೆಸರಿದೆಯಲ್ಲಾ, ಅದೇ ರೀತಿ…

“ರೀ, ಸಾಕು ಸುಮ್ನೆ ಬುರಡೆ ಬಿಡಬೇಡಿ, ನಾವು ಚಿಕ್ಕವರಾಗಿದ್ದಾಗ ಇದು ಯಾವ ಹೆಸ್ರೂ ಕೇಳೇ ಇರಲಿಲ್ಲ…ಪ್ರಭವ-ವಿಭವ ಅಂತೇ…ಆ ರೀತಿ ಇದ್ದಿದ್ರೆ ನಮ್ಮ ಅಪ್ಪನೋ ತಾತನೋ ಹೇಳ್ತಿದ್ರು ಅಲ್ವಾ” ಅಂತ ಅಂದ್ರಾ?
ಅದಕ್ಕೂ ಕಾರಣ ಇದೆ…ನಮ್ಮ ಭಾರತದಲ್ಲಿ ಸೈಕ್ಲೋನ್ ಹೆಸರಿಡುವ ಪ್ರತೀತಿ ಶುರುವಾಗಿದ್ದು ೨೦೦೪ರಲ್ಲಿ…
ಮೊದಲು ಬಂದಿದ್ದು ’ಒನಿಲ್’ ಆಮೇಲೆ ’ಅಗ್ನಿ’ ಆದರೆ ನೀವು ಎಲ್ಲ ಹೆಸರೂ ಕೇಳಿರಬೇಕು ಅಂತ ಏನು ಇಲ್ಲ…
ಯಾಕೇ ಅಂದ್ರೆ ಪ್ರತಿ ವರ್ಷ ಹತ್ತಾರು ಸೈಕ್ಲೋನ್ ಗಳೂ ಹರಿಕೇನ್ ಗಳೂ ಬಂದು ಹೋಗ್ತಾ ಇರತ್ತೆ…ದಿನ ಪತ್ರಿಕೆಯಲ್ಲಿ ಬರೋದು ಏನಿದ್ರೂ ನಮ್ಮ ನಿತ್ಯ-ಜೀವನಕ್ಕೆ ತಟ್ಟುವಂತಹವುಗಳು ಮಾತ್ರ…
ಹಾಗಾಗಿ ’ಲೈಲಾ’ ’ಕಟ್ರೀನಾ’ ’ಐರೀನ್’ ಗಳ ನೆನಪು ನಮಲ್ಲಿ ಹೆಚ್ಚು ಕಾಲ ಉಳಿಯುತ್ತೆ…

’ಅದು ಸರಿ, ನಮ್ಮ ಬಾಲಿವುಡ್ ನಲ್ಲಿ ಕಟ್ರೀನಾ ಈಗಾಗ್ಲೇ ಇದಾಳೆ, ಸೈಕ್ಲೋನ್ ಕಟ್ರೀನಾ ಬೇಡ’ ಅಂದ್ರಾ?
ತಥಾಸ್ತು! ನಮ್ಮ ದೇಶಕ್ಕೆ ಕಟ್ರೀನಾ ’ಶಾಪ’ ತಟ್ಟಲ್ಲ ಬಿಡಿ!

“ಏನ್ರೀ ಈಗ ತಾನೆ ಲಿಸ್ಟ್ ಇದೇ ಅಂದ್ರೀ, ಈಗ ಕಟ್ರೀನಾ ಬರಲ್ಲ ಅಂತೀರಾ? ಸುಮ್ನೆ ತಲೇ ಕೇಡಿಸ್ಬೇಡ್ರೀ” ಅಂದ್ರಾ?
ಅದು ಹಾಗಲ್ಲ ಕಣ್ರೀ, ನಮ್ಮ ಭೂಮಿಯಲ್ಲಿರೋ ಬೇರೆ ಬೇರೆ ಸಾಗರ/ಸಮುದ್ರಗಳನ್ನು ವಿವಿಧ ಪ್ರಾಂತ್ಯಗಳಾಗಿ ವಿಂಗಡನೆ ಮಾಡಿದ್ದಾರೆ…
ಪ್ರತಿಯೊಂದು ಪ್ರಾಂತ್ಯದಲ್ಲೂ ಸೈಕ್ಲೋನ್/ಹರಿಕೇನ್ ಗಳ ಒಂದು ಪಟ್ಟಿ ಇರತ್ತೆ, ಹಾಗಾಗಿ ’ಕಟ್ರೀನಾ’ ಶಾಪ ಏನಿದ್ರೂ ಅಟ್ಲಾಂಟಿಕ್ ಪ್ರದೇಶಕ್ಕೇ ಸೀಮಿತ…ನಮ್ಮ ನೀಲಂ ನೃತ್ಯ ಏನಿದ್ರೂ ಹಿಂದೂ ಮಹಾ ಸಾಗರದಲ್ಲಿ ಮಾತ್ರ!

ಈ ಹೆಸರಿಡೋ ಪದ್ಧತಿ ಮೊದಲು ಶುರುವಾಗಿದ್ದು ಆಕಸ್ಮಿಕವಾಗಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ “ಅಂತ್ಜೆ” ಎಂಬ ಒಂದು ಪ್ರಸಿದ್ಧ ಹಡಗು ಹರಿಕೇನ್ ನಿಂದ ಮುಳಿಗಿದಾಗ…ಆಗ ಜನ “ಅಂತ್ಜೆ” ಹರಿಕೇನ್ ಎಂದು ಕರೆಯಲು ಆರಂಭಿಸಿದರಂತೆ…

ನಂತರ ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಪ್ರತಿಯೊಂದು ಹರಿಕೇನ್‍ಗೂ ಹೆಸರಿಡಲು ಆರಂಭಿಸಿದರಂತೆ…
ಮೊದ-ಮೊದಲಿಗೆ ಬರೀ ಹುಡುಗಿಯರ ಹೆಸರೇ ಇತ್ತಂತೆ…ಇದಾದ ಮೇಲೆ ಹವಾಮಾನ ಕೇಂದ್ರದಲ್ಲಿದ್ದವರಿಗೆ ಉಪವಾಸವೇ ಗತಿಯಾಯ್ತೇನೋ ೧೯೭೯ರಲ್ಲಿ ಹುಡುಗರ ಹೆಸರನ್ನೂ ಸೇರಿಸಿದರಂತೆ…ಈಗ ಅಟ್ಲಾಂಟಿಕ್ ಸಾಗರದಲ್ಲಿ ಹುಟ್ಟುವ ಹರಿಕೇನ್ ಗಳಿಗೆ ಹುಡುಗಿಯರ ಮತ್ತು ಹುಡುಗರ ಹೆಸರನ್ನು ಒಂದಾದಮೇಲೆ ಮತ್ತೊಂದು ಬರುವಂತೆ ಬದಲಾಯಿಸಿದ್ದಾರೆ…

ಈಗ ಪ್ರಪಂಚದಲ್ಲಿರುವ ವಿಭಾಗಳು ಇವು:
೧. ಕೆರಿಬಿಯನ್, ಮೆಕ್ಸಿಕೋ ಮತ್ತು ಉತ್ತರ ಅಟ್ಲಾಂಟಿಕ್ ವಿಭಾಗ
೨. ಈಶಾನ್ಯ ಪೆಸಿಫಿಕ್ ವಿಭಾಗ
೩. ಉತ್ತರ-ಮಧ್ಯ ಪೆಸಿಫಿಕ್ ವಿಭಾಗ
೪. ವಾಯುವ್ಯ ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಭಾಗ
೫. ಆಸ್ಟ್ರೇಲಿಯಾ ವಿಭಾಗ
೬. ನಾಡಿಸ್ ವಿಭಾಗ (ದಕ್ಷಿಣ ಪೆಸಿಫಿಕ್‍ನ ಕೆಲವು ಭಾಗಗಳು)
೭. ಪೋರ‍್ಟ್ ಮೋರ್ಸ್‍ಬಯ್ ವಿಭಾಗ
೮. ಜಕಾರ್ತಾ ವಿಭಾಗ
೯. ಉತ್ತರ ಹಿಂದೂ ಮಹಾಸಾಗರ ವಿಭಾಗ
೧೦.ನೈರುತ್ಯ ಹಿಂದೂ ಮಹಾ ಸಾಗರ ವಿಭಾಗ

ಪ್ರತಿಯೊಂದು ವಿಭಾಗದ ಹವಾಮಾನಕ್ಕೂ ಒಂದು ಮುಖ್ಯ ಕಚೇರಿಯಿದ್ದು, ಉತ್ತರ ಹಿಂದೂ ಮಹಾಸಾಗರ ವಿಭಾಗಕ್ಕೆ ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ…
ಈ ವಿಭಾಗದ ಸೈಕ್ಲೋನ್‍ಗಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕ, ಮಾಲ್ಡೀವ್ಸ್, ಮ್ಯಾನ್‍ಮಾರ್, ಥೈಲಾಂಡ್ ಮತ್ತು ಓಮನ್ ದೇಶದವರು ಸೇರಿ ಹೆಸರಿಟ್ಟಿದ್ದಾರೆ.

ಈ ಪಟ್ಟಿ ಇಲ್ಲಿದೆ:

ಭಾರತೀಯ ಹವಾಮಾನ ಇಲಾಖೆ ಜನತೆಗೆ ಹೊಸ ಹೆಸರನ್ನು ಸೂಚಿಸಬಹುದಾದ ಅವಕಾಶ ಕೊಡುತ್ತದೆಯಾದರೂ, ೨೦೦೪ರಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಸದ್ಯದಲ್ಲಿ ಬದಲಾಯಿಸುವುದು ಅನುಮಾನ…ಹಾಗಾಗಿ, ಸೈಕ್ಲೋನ್ ಲೈಲಾ-’ಸೈಕ್ಲೋನ್’ ಮಜನೂನ ಸದ್ಯಕ್ಕಂತೂ ಸೇರೋಕಾಗೋದಿಲ್ಲ…!

ಇವೆಲ್ಲಾ ವಿಷಯ ಓದಿ ನಿಮಗೆ ಇನ್ನೂ ಸಮಾಧಾನ ಆಗಲಿಲ್ಲವಾದಲ್ಲಿ, ಹೆಚ್ಚಿನ ವಿಷಯಗಳಿಗೆ ಇಲ್ಲಿ ಚಿಟಕಿಸಿ:
http://www.wmo.int/pages/prog/www/tcp/Storm-naming.html

ಇಷ್ಟೆಲ್ಲ ಕಥೆ ಹೇಳಿದ್ದಾಯ್ತು, ಮುಖ್ಯವಾದ ವಿಷಯ ಹೇಳೋದ್ದನ್ನೇ ಮರೆತಿದ್ದೇ…
ಸ್ಯಾಂಡಿ – ಸಂಧ್ಯಾನೇ ಅಂತ ಕನ್ಫರ್ಮ್ ಆಯ್ತು ಯಾಕೇ ಅಂದ್ರೆ ಅವಳ ಹಿಂದೆ ಬಂದಿದ್ದು ರಾಫಲ್ ಮುಂದೆ ಬರೋವ್ನು ಟೋನಿ…! :-)

ಹೆಚ್ಚಿನ ಮಾಹಿತಿಗೆ:
http://www.wmo.int
ಚಿತ್ರ ಕೃಪೆ: http://www.imd.gov.in/
ಸ್ಯಾಂಡಿ ಚಿತ್ರಕೃಪೆ: http://www.telegraph.co.uk

ಲೇಖಕ: ಶ್ರೀನಿವಾಸ್ ಪ. ಶೇ.

ಹುಟ್ಟಿದ್ದು, ಬೆಳೆದದ್ದು, ಓದಿದ್ದು ಬೆಂಗಳೂರಲ್ಲಿ. ಸುಮಾರು ಹನ್ನೆರಡು ವರ್ಷದಿಂದ ಹಲವಾರು ನೆಟ್‍ವರ್ಕಿಂಗ್ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ ಅನುಭವ. ಈಗ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಪ್ರಮುಖ ನೆಟ್‍ ವರ್ಕಿಂಗ್ ಸಂಸ್ಥೆಯೊಂದಕ್ಕೆ ಕೆಲಸ ಮಾಡುತ್ತಿರುವರು. ಪ್ರವಾಸ, ಚಾರಣ, ಛಾಯಾಗ್ರಹಣ, ವ್ಯಂಗ್ಯಚಿತ್ರಕಲೆ, ಸಣ್ಣ ಕಥೆ-ಹಾಡು-ಕವನ-ಚುಟುಕಗಳನ್ನು ಬರೆಯುವ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ.

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೫ – ಕನ್ನಡಿಗರ ಏಳಿಗೆಗೆ ಕನ್ನಡದಲ್ಲಿ ತಂತ್ರಜ್ಞಾನ ಅವಶ್ಯಕ

ಪ್ರಕಟಿಸಿದ್ದು ದಿನಾಂಕ Jan 6, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಇತ್ತೀಚಿನ ದಿನದಲ್ಲಿ ತಂತ್ರಜ್ಞಾನ ಬಳಕೆಯಿಂದ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ಬದಲಾವಣೆಗಳನ್ನು ನೋಡಬಹುದು. ತಂತ್ರಜ್ಞಾನ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಲು ಮತ್ತು ತಂತ್ರಜ್ಞಾನವು ಜನರಿಗೆ ಬಳಸಲು ಸರಳ/ಸುಲಭವಾಗಿ ಕಾಣಲು ಜನರ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ದಿ ಮುಖ್ಯವಾದುದು. ಸಾಮಾನ್ಯ ಜನರು ತಮ್ಮ ಭಾಷೆಯಲ್ಲೇ ತಂತ್ರಜ್ಞಾನವಿದ್ದರೆ ತಾವು ಬಳಸುವ ತಂತ್ರಜ್ಞಾನವನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸುವುದರ ಜೊತೆಗೆ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ತಂತ್ರಜ್ಞಾನದಲ್ಲಿ ಕನ್ನಡದ ವಿಷಯವನ್ನು ತೆಗೆದುಕೊಂಡರೆ, ಜನ ಸಾಮಾನ್ಯರಿಗೆ ಉಪಯೋಗವಾಗಬೇಕಾದ ತಂತ್ರಜ್ಞಾನವು ಜನರ ಭಾಷೆಯಾದ ಕನ್ನಡದಲ್ಲಿ ಇಲ್ಲದಿರುವುದು ಅಥವಾ ಕೆಲವೆಡೆ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುವವರು ಕನ್ನಡದಲ್ಲಿ ತಂತ್ರಜ್ಞಾನ ಅಭಿವೃದ್ದಿ ಪಡಿಸಲು ಆಸಕ್ತಿ ತೋರದಿರುವುದು, ಇಂದಿಗೂ ಸಾಮಾನ್ಯ ಜನ ತಂತ್ರಜ್ಞಾನದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಲು ವಿಫಲವಾಗುತ್ತಿದ್ದಾರೆ. ಇದಕ್ಕೆ ಉದಾಹರಣೆಯೆನ್ನುವಂತೆ ಮೊಬೈಲ್ ನಿಂದ ಹಿಡಿದು ಬೇರೆ ಬೇರೆ ರೀತಿಯ ತಂತ್ರಜ್ಞಾನವನ್ನು ಜನರು ಬಳಸುತ್ತಿದ್ದಾರಾದರೂ ಆಯಾ ವಸ್ತುಗಳಿಂದ ಪಡೆಯಬಹುದಾದ ಸಂಪೂರ್ಣ ಲಾಭ ಪಡೆಯಲಾಗುತ್ತಿಲ್ಲ. ಕೆಲವೆಡೆ ತಂತ್ರಜ್ಞಾನದಲ್ಲಿ ಕನ್ನಡವಿಲ್ಲದಿರುವುದು ಜನರಿಗೆ ತಂತ್ರಜ್ಞಾನದ ಬಳಕೆ ಕಷ್ಟವೆನಿಸಿ, ಬಳಕೆಯಿಂದಲೇ ದೂರ ಉಳಿದಿರುವುದೂ ಉಂಟು.

ಸರಕಾರ/ಖಾಸಗಿ ಸಂಸ್ಥೆಯ ಮತ್ತು ಜನ ಸಾಮಾನ್ಯರ ನಡುವಿನ ವ್ಯವಹಾರವು ಪಾರದರ್ಶಕವಾಗಿಸಲು ಕನ್ನಡದ ತಂತ್ರಜ್ಞಾನ ಸಹಕಾರಿಯಾಗುತ್ತದೆ. ಆದರೆ ಕನ್ನಡವಿಲ್ಲದ ತಂತ್ರಜ್ಞಾನವು ಸರಕಾರ/ಖಾಸಗಿ ಸಂಸ್ಥೆಯ ಮತ್ತು ಜನ ಸಾಮಾನ್ಯರ ನಡುವಿನ ವ್ಯವಹಾರದಲ್ಲಿ ದೊಡ್ಡ ತಡೆಗೋಡೆಯಾಗುವ ಮೂಲಕ, ಕರ್ನಾಟಕದ ಜನಸಾಮಾನ್ಯರು ಹಿಂದೆ ಉಳಿಯುವಂತೆ ಆಗಿದೆ ಎನ್ನುವುದು ವಿಷಾದನೀಯವಾದುದು. ಉದಾಹರಣೆಗೆ ಇತ್ತೀಚೆಗೆ ಸರಕಾರ ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯಲು ಈ ಆಡಳಿತ/ಮೊಬೈಲ್ ಆಡಳಿತವನ್ನು ರೂಪಿಸಿ, ತಂತ್ರಜ್ಞಾನವನ್ನು ಬಳಸಿದೆಯಾದರೂ, ಕೆಲವು ಕಡೆ ಮಾತ್ರ ಕಾಟಾಚಾರಕ್ಕೆಂದು ಕನ್ನಡ ಬಳಸಿರುವುದು ಕಾಣುವುದರಿಂದ ಜನಸಾಮಾನ್ಯರು ಈ- ಆಡಳಿತ/ಮೊಬೈಲ್ ಆಡಳಿತದ ಬಳಕೆಯಿಂದ ದೂರ ಉಳಿಯುವಂತಾಗಿದೆ ಅಥವಾ ತಂತ್ರಜ್ಞಾನದ ಬಳಕೆಗೆ ಇನ್ಯಾರನ್ನೋ ಅವಲಂಬಿಸುವಂತಾಗಿದೆ.

ಸರಕಾರ/ ಖಾಸಗಿ ಸಂಸ್ಥೆಗಳು, ತಂತ್ರಜ್ಜಾನವೆಂದಗೆ ಇಂಗ್ಲೀಷ್ ಎನ್ನುವ ಹುಸಿಯನ್ನು ನಂಬಿರುವುದು ಜನ ಸಾಮಾನ್ಯರೂ ಅದನ್ನೇ ನಂಬುವಂತೆ ಮಾಡಿ, ಜನಸಾಮಾನ್ಯರು ಕನ್ನಡದಲ್ಲಿ ತಂತ್ರಜ್ಞಾನ ಸಾದ್ಯವೇ ಇಲ್ಲವೆಂಬ ಭಾವನೆಯನ್ನು ಬೆಳೆಸಿಕೊಳ್ಳುವಂತಾಗಿದೆ. ಈ ಹುಸಿ ನಂಬಿಕೆಯಿಂದ, ತಾವು ಕೊಳ್ಳುವ/ ಬಳಸುವ ತಂತ್ರಜ್ಞಾನ ಕನ್ನಡದಲ್ಲಿ ಇರಲೇ ಬೇಕು ಎನ್ನುವುದನ್ನು ಹೇಳಲು ಹಿಂಜರಿಯುತ್ತಿರುವುದು ಮತ್ತು ಜನರು ತಂತ್ರಜ್ಞಾನದಲ್ಲಿ ಕನ್ನಡಕ್ಕಾಗಿ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಮೇಲೆ ಒತ್ತಡ ಹೇರದೇ ಇರುವುದರಿಂದ ತಂತ್ರಜ್ಞಾನದಲ್ಲಿ ಕನ್ನಡದ ಅಭಿವೃದ್ದಿಗೆ ಹೆಚ್ಚು ಒತ್ತು ಸಿಗದಂತಾಗಿದೆ.

ಕನ್ನಡಿಗರು ತಂತ್ರಜ್ಞಾನದ ಸಂಪೂರ್ಣ ಲಾಭವನ್ನು ಪಡೆದು ಕನ್ನಡಿಗರ ಜೀವನ ಮಟ್ಟದಲ್ಲಿ ಸುಧಾರಣೆ ಕಾಣಲು ಮತ್ತು ಸರಕಾರ/ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಕನ್ನಡದಲ್ಲಿ ತಂತ್ರಜ್ಞಾನದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ತಂತ್ರಜ್ಞಾನವೆಂದರೆ ಇಂಗ್ಲೀಷ್ ಎನ್ನುವ ತಪ್ಪು ತಿಳುವಳಿಕೆಯನ್ನು ತೊಡೆದುಹಾಕಿ, ಕನ್ನಡದಲ್ಲಿ ತಂತ್ರಜ್ಞಾನ ರೂಪಿಸುವಲ್ಲಿ ಯುವ ಕನ್ನಡ ತಂತ್ರಜ್ಞರ ಪಾತ್ರವೂ ದೊಡ್ಡದಿದೆ ಎಂದರೆ ತಪ್ಪಾಗಲಾರದು.

ಲೇಖಕ: ಅರುಣ್ ಜಾವಗಲ್

ಸರಕಾರಿದ ನಾಗರೀಕ ಸೇವೆಗಳು ಮತ್ತು ಖಾಸಗಿ ಸಂಸ್ಥೆಯ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗಬೇಕು ಎನ್ನುವೆಡೆಗೆ ಕೆಲಸ ಮಾಡುತ್ತಿರುವ ಕನ್ನಡ ಗ್ರಾಹಕ ಕೂಟದ ಸದಸ್ಯ. ಗ್ರಾಹಕ ಸೇವೆಯಲ್ಲಿ ಕನ್ನಡದ ಪಾತ್ರದ ವಿಷಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು, ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಆಯಾ ಸಂಸ್ಥೆಯ ಎಲ್ಲಾ ರೀತಿಯ ಸೇವೆಗಳೂ ಕನ್ನಡದಲ್ಲಿ ಸಿಗುವಂತೆ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡೆಗಿಸಿಕೊಂಡಿದ್ದಾರೆ. ಜೊತೆಗೆ ವೃತ್ತಿಯಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸಾಪ್ಟ್ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೪ – ಅಂತರ್ಜಾಲದ ಯುಗದಲ್ಲಿ ಕರ್ನಾಟಕದ ದೃಶ್ಯಕಲೆ

ಪ್ರಕಟಿಸಿದ್ದು ದಿನಾಂಕ Jan 5, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಇಂದಿನ ದೃಶ್ಯಕಲಾ ಪ್ರಪಂಚದಲ್ಲಿ ಅಂತರ್ಜಾಲದ ಪ್ರಾಮುಖ್ಯತೆ ಬಹಳ ಮುಖ್ಯವಾದುದು ಎಂದು ನಂಬುವ ಹೊತ್ತಿನಲ್ಲೇ ಅದರ ಪ್ರಸ್ತುತತೆಯನ್ನು ವಿಶ್ಲೇಷಿಸಬೇಕಾಗಿದೆ. ಅದು ಕಲಾಕೃತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುವುದಾಗಬಹುದು ಅಥವಾ ಕಲಾಕೃತಿಯನ್ನು ಸ್ವಯಂ ಪ್ರದರ್ಶಿಸುವುದಾಗಬಹುದು. ಕಲಾಕೃತಿಯ ರಚನೆಯ ನಂತರದ ಪ್ರತಿ ಹಂತದಲ್ಲು ಅಂತರ್ಜಾಲ ಇಂದು ದೃಶ್ಯಕಲೆಯಲ್ಲಿ ತನ್ನದೇ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಇದರಲ್ಲಿ ಸಾಮಾಜಿಕ ತಾಣಗಳ (ಫೇಸ್ ಬುಕ್, ಆರ್ಕುಟ್, ಗೂಗಲ್ ಪ್ಲಸ್) ಕೊಡುಗೆ ಬಹು ಮುಖ್ಯವಾದುದು.

ಇಂದು ಕಲಾಕೃತಿಯ ಪ್ರದರ್ಶಿಸಲ್ಪಡುವ ಸ್ಥಳ ಬದಲಾಗಿದೆ. ವಾಲ್ಟರ್ ಬೆಂಜಮಿನ್ ತನ್ನ ’ಆರ್ಟ್ ವರ್ಕ್ ಇನ್ ದ ಏಜ್ ಆಫ್ ಮೆಕಾನಿಕಲ್ ರೀಪ್ರೊಡಕ್ಷನ್’ ಲೇಖನದಲ್ಲಿ ಛಾಯಾಗ್ರಹಣದ ಆವಿಷ್ಕಾರದ ನಂತರ ಮೂಲ ಕಲಾಕೃತಿಯನ್ನು ನೋಡುವಾಗ ಆ ಕಲಾಕೃತಿಗಿದ್ದ ಪ್ರಭೆ ಮರೆಯಾಯಿತೆಂದು ಚರ್ಚಿಸುತ್ತಾನೆ. ಅದರದೇ ಮುಂದುವರಿದ ಭಾಗವಾಗಿ ಇಂದು ಚರ್ಚಿಸಿದಲ್ಲಿ ಆ ಪ್ರಭೆ ಮಾಯವಾಗಿ ಕಲಾಕೃತಿ ಜಾಲದೊಳಗೆ ಸೇರಿಕೊಂಡಿದೆ. ಒಂದು ಕಲಾಕೃತಿ ರಚನೆಯನಂತರ ಅದನ್ನುವೀಕ್ಷಿಸುವ ಸಮಯದ ಅಂತರ-ಅಂತರ್ಜಾಲದ ಆಗಮನದ ನಂತರ ದೂರವಾಗಿದೆ. ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಕೂತ ಕಲಾವಿದ ತಾನು ರಚಿಸಿದ ಕಲಾಕೃತಿಯನ್ನು ಅಂತರ್ಜಾಲದ ಮೂಲಕ ಎಲ್ಲಿಗೆ ಬೇಕಾದರು ತಲುಪಿಸಬಹುದಾಗಿದೆ. ಜಗತ್ತಿನ ಯಾವುದೆ ಮೂಲೆಯಲ್ಲಿ ನಡೆಯುವ ಕಲಾ ಚಟುವಟಿಕೆಯ ವಿವರಗಳು ಕ್ಷಣಗಳಲ್ಲಿ ಜಗತ್ತಿನಾದ್ಯಂತ ತಲುಪುತ್ತದೆ. ಅದು ಸಕಾರಾತ್ಮಕ ಸಂಗತಿಗಳಾಗಬಹುದು ಅಥವಾ ನಕಾರಾತ್ಮಕ ಸಂಗತಿಗಳಾಗಬಹುದು. ಹುಸೇನ್ ಸಾವಿನ ಸುದ್ದಿ ಟಿ,ವಿ. ಮಾಧ್ಯಮಕ್ಕಿಂತ ವೇಗವಾಗಿ ಜನಸಮುದಾಯವನ್ನು ತಲುಪುತ್ತದೆ. ಹುಸೇನ್ ಸಾವಿನ ಬಗ್ಗೆ ಗಂಭೀರವಾಗಿ ಗುರುತಿಸಿಕೊಂಡಿರುವ ಕಲಾವಲಯದೊಳಗೆ ನೆಡೆಯದ ಚರ್ಚೆಗಳು, ಹುಸೇನತ್ವವನ್ನು ವಿರೊಧಿಸುವ ಭಾರತೀಯರಿಂದ ಸಾಮಾಜಿಕ ತಾಣದಲ್ಲಿ ಚರ್ಚೆಗೊಳಪಡುತ್ತದೆ.

ಇಲ್ಲಿಯವರೆಗೂ ಯಾರನ್ನು ಶ್ರೀಸಾಮಾನ್ಯ ಎಂದು ಕಲಾವಲಯ ತಮ್ಮ ಅಂತರವನ್ನು ಕಾಪಾಡಿಕೊಂಡು ಬಂದಿತ್ತೋ ಅದು ಕ್ರಮೇಣ ಮರೆಯಾಗುತ್ತಿದ್ದು, ಕಲಾವಲಯದೊಳಗೆ ಬಂದು ಚರ್ಚಿಸಲಾಗದ ಶ್ರೀಸಾಮಾನ್ಯ ಅಂತರ್ಜಾಲದಲ್ಲಿ ಚರ್ಚಿಸುತ್ತಿದ್ದಾನೆ. ಈ ಚರ್ಚೆಗೆ ನಿಯಂತ್ರಿಸುವವ ಎಂದು ಯಾರು ಇರುವುದಿಲ್ಲ. ಹಾಗಾಗಿ ಇಲ್ಲಿ ಗಟ್ಟಿತನ ಇರುವಷ್ಟೇ ಜೊಳ್ಳು ಕೂಡ ಹೆಚ್ಚೆ ಇರುತ್ತದೆ. ಇದೆಲ್ಲದರ ಮಧ್ಯೆ ಅಂತರ್ಜಾಲದ ಬೆಳವಣಿಗೆಯಿಂದ ಉಪಯೋಗ ಪಡೆಯುವವರ ಸಂಖ್ಯೆಯು ಹೆಚ್ಚಿದೆ ಎಂದು ಹೇಳಬಹುದು. ಉದಾಹರಣೆಗೆ ಬೆಂಗಳೂರು ಎಂಬ ದೃಶ್ಯಕಲೆಯ ಚಟುವಟಿಕೆಯ ಕೇಂದ್ರ ಸ್ಥಾನದಿಂದ ದೂರದಲ್ಲಿರುವ ಗುಲ್ಬರ್ಗಾ, ಧಾರವಾಡ, ಬೆಂಗಳೂರಿನಲ್ಲಿರುವ ಕಲಾವಿದರಿಗೆ, ಕಲಾವಿಧ್ಯಾರ್ಥಿಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಗ್ಯಾಲರಿಗಳನ್ನು ಸಂಪರ್ಕಿಸಲು ಬೆಂಗಳೂರಿಗೋ ಅಥವ ದೆಹಲಿ ಬಾಂಬೆಗೇ ಸ್ವತಃ ಹೋಗಲೆಬೇಕೆಂಬ ಅನಿವಾರ್ಯತೆ ಇಲ್ಲ. ತಾವಿದ್ದಲ್ಲಿಂದಲೆ ಅವರು ಯಾವುದೇ ಗ್ಯಾಲರಿಯನ್ನು ಸಂಪರ್ಕಿಸಬಹುದು ತಮ್ಮ ಮೂಲಕೃತಿಯ ಪ್ರತಿಕೃತಿಯ ಡಿಜಿಟಲ್ ರೂಪದಲ್ಲಿ. ಯಾವುದೇ ಪ್ರಶಸ್ತಿಗೆ, ಪ್ರದರ್ಶನಕ್ಕೆ, ಅರ್ಜಿ ಸಲ್ಲಿಸಲು ತಮ್ಮ ಕಲಾಕೃತಿಗಳನ್ನು ಅಂಚೆ ಮೂಲಕವೇ ತಲುಪಿಸಬೆಕು ಅಥವ ತಾವೇ ಖುದ್ದಾಗಿ ತೆಗೆದುಕೊಂಡು ಹೋಗಬೇಕಾಗಿಲ್ಲ. ಅಂತರ್ಜಾಲದ ಮೂಲಕ ಅಲ್ಲೇ ಅರ್ಜಿ ಸಲ್ಲಿಸಬಹುದು, ಇ-ಮೇಲ್ ಮುಖಾಂತರ ತಮ್ಮ ಕಲಾಕೃತಿಗಳ ಚಿತ್ರವನ್ನು ಕಳಿಸಬಹುದು. ಈ ವಿಷಯವನ್ನು ಮತ್ತೊಂದು ಕೋನದಿಂದ ನೋಡಿದಲ್ಲಿ ಇಲ್ಲಿ ಮೂಲ ಕಲಾಕೃತಿ ಎಂಬುದು ಇದ್ದಲ್ಲಿಯೇ ಇರುತ್ತದೆ. ಅದರ ಪ್ರತಿಕೃತಿ ಡಿಜಿಟಲೈಸ್ಡ್ ಆಗಿ ಪರಿವರ್ತನೆಗೊಂಡು ಅಂತರ್ಜಾಲದ ಮೂಲಕ ಒಂದು ಪ್ರದೇಶದಿಂದ ಮತ್ತೊಂದೆಡೆಗೆ ಚಲಿಸುತ್ತದೆ. ಈ ಪ್ರತಿಕೃತಿ ಕಂಪ್ಯೂಟರ್ ಎಂಬ ಪರದೆಯ ಒಳಗೆ ಇರುತ್ತದೆ. ಇಲ್ಲಿ ಈ ಕೃತಿಯನ್ನು ನೊಡುವ ಕ್ರಿಯೆಯು ಇಲ್ಲಿಯವರೆಗು ಕಲಾಕೃತಿಯನ್ನು ’ನೋಡುವ’ ಅಭ್ಯಾಸವೇ ಬದಲಾಗುತ್ತದೆ. ಮೂಲ ಕಲಾಕೃತಿಯನ್ನು ಗ್ಯಾಲರಿಯಲ್ಲಿ ನೋಡುವ ಕ್ರಮವೂ , ತಮ್ಮ ಕಂಪ್ಯೂಟರ್ ಪರದೆಯ ಮೇಲೆ ನೋಡುವು ಕ್ರಮವೂ ಬೇರೆ ಬೇರೆಯಾಗುತ್ತದೆ. ಮೂಲ ಕೃತಿಯನ್ನು ನೋಡುವಾಗ ಅದರೊಳಗಿನ ಯಾವುದಾದರು ನಿರ್ದಿಷ್ಟ ಸೂಕ್ಷ್ಮತೆಯನ್ನು ಗಮನಿಸಬೇಕೆಂದಿದ್ದಲ್ಲಿ ಕಲಾಕೃತಿಯ ಹತ್ತಿರ ಹೋಗಬೇಕಾಗುತ್ತದೆ, ಕಲಾಕೃತಿ ಯಥಾಸ್ಥಿತಿಯಲ್ಲಿರುತ್ತದೆ. ಕಂಪ್ಯೂಟರ್‌ನಲ್ಲಿ ನೋಡುವಾಗ ನೋಡುವ ಅಂತರ ಅಷ್ಟೇ ಇದ್ದು ಚಿತ್ರವನ್ನು ಜೂಮ್ ಮಾಡುವುದರ ಮೂಲಕ ಮೂಲಕೃತಿಗಿಂತ ಸುಮಾರು ಪಟ್ಟು ದೊಡ್ದದು ಮಾಡಿ(ಅದರಲ್ಲು ಪಿಕ್ಸಲ್ ಮೇಲೆ ಅವಲಂಬಿತ) ನೋಡಬಹುದು. ಇದು ಸ್ಥಿರಚಿತ್ರಕ್ಕೆ ಮಾತ್ರ ಅನ್ವಯಿಸುತ್ತದೆ. ವಿಡಿಯೋ ದೃಶ್ಯಗಳನ್ನು ಅಂತರ್ಜಾಲದಲ್ಲಿ ನೋಡುವಾಗ ಅದರ ರೆಸ್ಯುಲೂಷನ್ ಎಂದಿಗೂ ಅದು ಚಿತ್ರೀಕರಣಗೊಂಡ ಸ್ವರೂಪಕ್ಕಿಂತ ಕಡಿಮೆ ಮಟ್ಟದ್ದಾಗಿರುತ್ತದೆ. ವಿಡಿಯೋ ಕಲೆಯನ್ನು ಚಿತ್ರಿಸುವಾಗಲೇ ಅದನ್ನು ನೋಡಬೇಕಾದ ಕೋನವನ್ನು ಕಲಾವಿದ ನಿರ್ಧರಿಸಿರುತ್ತಾನೆ, ಹಾಗಾಗಿ ಅದು ಗ್ಯಾಲರಿಯಲ್ಲಿ ನೋಡಿದರೂ ಅಂತರ್ಜಾಲದಲ್ಲಿ ನೋಡಿದರೂ ಅದನ್ನು ನೋಡುವ ಕೋನವು ಬದಲಾಗುವುದಿಲ್ಲ. ಆದರೆ ಗ್ಯಾಲರಿಯಲ್ಲಿ ಅದು ಪ್ರೊಜೆಕ್ಟರ್‌ನಿಂದ ಗೋಡೆಯ ಮೆಲೆ ಪ್ರೊಜೆಕ್ಟ್ ಆಗಿ ಕಾಣುವ ಪ್ರಕ್ರಿಯೆಯು ಬದಲಾಗಿ ಅಂತರ್ಜಾಲದ ಒಳಗೆ ಅಡಕಗೊಂಡು ಪರದೆಯ ಮೇಲೆ ಮೂಡುತ್ತ ನೋಡುಗನ ದೃಷ್ಟಿಯೆಡೆಗೆ ಚಲಿಸುತ್ತಿರುತ್ತದೆ. ಹಾಗಾಗಿ ಅಂತರ್ಜಾಲವು ಪ್ರತಿಕೃತಿಗಳನ್ನು ತನ್ನೊಳಗೆ ಸೇರಿಸಿಕೊಂಡ ನಂತರ ಮೂಲಕೃತಿಗೂ-ಪ್ರತಿಕೃತಿಗಳನ್ನು ನೋಡುವ ಪ್ರಕ್ರಿಯೆಯನ್ನೇ ಬದಲಿಸಿಬಿಡುತ್ತದೆ. ಇನ್‌ಸ್ಟಾಲೇಷನ್ ಕಲೆಯು ಅಂತರ್ಜಾಲವನ್ನು ಹೊಕ್ಕಬೇಕಾದಲ್ಲಿ ಸ್ಥಿರ ಅಥವಾ ವಿಡಿಯೋ ಎರಡರಲ್ಲಿ ಒಂದನ್ನು ಅವಲಂಬಿಸಲೇಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮೂಲಕೃತಿಯನ್ನು ಉದ್ದೀಪಿಸುವ ದಾಖಲೆಯಾಗಿ ಉಳಿಯುತ್ತದೆಯಷ್ಟೇ ಹೊರತು ಅದು ಎಂದಿಗೂ ಮೂಲಕೃತಿಯ ಭೌತಿಕ ಅಸ್ತಿತ್ವವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ಮೂರು ಆಯಾಮದ ಪ್ರತಿಗಳನ್ನು ವೀಕ್ಷಿಸಲೆಂದೇ ಮತ್ತೊಂದು ರೀತಿಯ ತಂತ್ರಜ್ಞಾನವಿದೆ. ಅದಕ್ಕೆ ವರ್ಚ್ಯುವಲ್ ಫೋಟೋಗ್ರಫಿ ಎನ್ನುತ್ತಾರೆ. ಇದು ಯಾವುದೇ ವಸ್ತುವಿನ ೩ಆಯಾಮವನ್ನು ತೋರಿಸಲು ಬಳಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಶಿಲ್ಪ ಅಥವ ಇನ್‌ಸ್ಟಾಲ್ಲೇಷನ್ ಕೃತಿಗಳನ್ನು ಭೌತಿಕವಾಗಿ ಅಲುಗಾಡಿಸದೆ, ಯಾವುದೇ ಭಾಗ, ಅಂಶವನ್ನು, ನಮಗೆ ಬೇಕಾದ ಕೋನದಲ್ಲಿ ನೋಡಬಹುದು.

ತಮ್ಮ ಕಲಾಕೃತಿ ಅಥವ ವಿಡಿಯೋಗಳನ್ನು ಕಳಿಸಬೇಕೆಂದರೆ ಉಚಿತವಾಗಿ ಮೇಲ್ ಸೌಲಭ್ಯವನ್ನು ನೀಡುವ ಗೂಗಲ್‌ನ ಜೀಮೈಲ್, ಯಾಹೂ ಮೈಲ್ ‌ನಂತಹ ಹಲವು ಜಾಲಗಳಲ್ಲಿ ಸ್ಥಳಾವಕಾಶವು ಸೀಮಿತವಾಗಿದೆ. ಅಂತಹ ತೊಂದರೆಗಳನ್ನು ನಿವಾರಿಸಲೆಂದೆ ಇನ್ನು ಹಲವು ಜಾಲಗಳು ಹಲವು ನಿಬಂದಗಳೊಂದಿಗೆ ಈ ಸ್ಥಳಾವಕಾಶವನ್ನು ಹಿಗ್ಗಿಸಿದ್ದಾರೆ ಅಂತಹ ಕೆಲವು ತಾಣಗಳೆಂದರೆ https://www.yousendit.com/ , https://.sendspace.com/, https://.dropbox.com/, ಈ ತಾಣಗಳು ನೀಡುವ ಸೌಲಭ್ಯವು ಎಂಬಿ(ಮೆಗಾ ಬೈಟ್ಸ್)ಗಳಿಂದ ಮುಂದುವರೆದು ಜಿಬಿ(ಗಿಗಾ ಬೈಟ್ಸ್)ಗಳವರೆಗೂ ಇವೆ. ಇನ್ನು ಸಾಮಾಜಿಕ ತಾಣಗಳಷ್ಟೇ ಇಂದಿನ ದೃಶ್ಯಕಲಾ ಮಾಧ್ಯಮದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿರುವ ತಾಣವೆಂದರೆ ಯೂಟ್ಯೂಬ್ ಮತ್ತು ವಿಮಿಯೋ ವಿಡಿಯೋ ತಾಣಗಳು. ಈ ವಿಡಿಯೋ ತಾಣಗಳಲ್ಲಿ ತಮ್ಮ ಹೆಸರಿನ ಖಾತೆಯನ್ನು ತೆರೆಯುವ ವ್ಯಕ್ತಿ ತನ್ನ ವಿಡಿಯೋ ಕಲೆ ಅಥವ ತನ್ನ ಅಭಿನಯ ಕಲೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಅದನ್ನು ಸಾಮಾಜಿಕ ತಾಣಗಳ ಮೂಲಕ ಜನರಿಗೆ ತಲುಪುವಂತೆ ಮಾಡಬಹುದಾಗಿದೆ. ವಿಡಿಯೋ ಅಷ್ಟೇ ಅಲ್ಲದೆ. ಚರ್ಚೆ, ಸಂವಾದ, ಸೆಮಿನಾರುಗಳನ್ನು ಧ್ವನಿಗ್ರಹಣ ಮಾಡಿ ಬರೀ ಧ್ವನಿ ಮಾತ್ರ ಕೇಳುವಂತ ಸೌಲಭ್ಯವಿರುವ ತಾಣಗಳು ಇವೆ. ಅದರಲ್ಲಿ ಪ್ರಮುಖವಾದುದು http://soundcloud.com/.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಂತರ್ಜಾಲದಲ್ಲಿ ಎಷ್ಟೇ ಉಚಿತ ಅಥವ ಹಣ ಕೊಟ್ಟು ಸ್ಥಳ-ಅವಕಾಶಗಳನ್ನು ಪಡೆದರೂ ಅದರಲ್ಲಿ ಸೇರಿಸುವ ಪ್ರತಿ ದಾಖಲೆ ಚಿತ್ರಗಳ ಪ್ರತಿಯೊಂದನ್ನು ಶೇಖರಿಸಿಡಲೇಬೇಕಾದ ಅನಿವಾರ್ಯತೆ ಅಂತರ್ಜಾಲ ಹುಟ್ಟಿಸುವ ಅತಂತ್ರತೆಯ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.

ಅಂತರ್ಜಾಲದಲ್ಲಿ ಇಷ್ಟೆಲ್ಲ ಸೌಲಭ್ಯ ಇದ್ದರೂ ನಮ್ಮ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇದನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆಯೇ ಎಂದು ಹೇಳಬಹುದು. ಕಾರಣಗಳನ್ನು ಹುಡುಕಿದರೆ ಹಲವು ಸಿಗುತ್ತವೆ. ಮೊದಲಿಗೆ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡದ ಕೆಲವೇ ಕೆಲವು ಪ್ರಮುಖ ನಗರಗಳನ್ನು ಹೊರತುಪಡಿಸಿದರೆ ಇನ್ನುಳಿದ ನಗರಗಳಲ್ಲಿ ಅಂತರ್ಜಾಲದ ಬಗ್ಗೆ ಮಾಹಿತಿ ಇದ್ದರೂ, ಈ ರೀತಿಯ ಸೌಲಭ್ಯಗಳ ಮೂಲಕ ನಡೆಯುವ ಕಲಾಚಟುವಟಿಕೆಗಳ ಮಾಹಿತಿ ತಲುಪಿಸುವ ಸೌಲಭ್ಯ ಇಲ್ಲದಿರುವುದು ಮತ್ತು ಅಂತರ್ಜಾಲದ ಕುರಿತಂತೆ ಇರುವ ಮೌಡ್ಯ ಕಾರಣವೆನ್ನಬಹುದು.

ಈಗಿರುವ ಚಟುವಟಿಕೆಗಳೆಲ್ಲವೂ ಬೆಂಗಳೂರು ಕೇಂದ್ರಭಾಗದಲ್ಲಿ ಮಾತ್ರ ನಡೆಯುತ್ತಿರುವಂತದ್ದು. ಇದರೊಳಗೆ ಭಾಗವಹಿಸುತ್ತಿರುವವರು ಬಹುತೇಕ ಇಲ್ಲಿಯೇ ನೆಲೆಸಿರುವವರು ಮಾತ್ರ. ಬೇರೆ ಊರಿಗಳಿಂದ ಬಂದಿರುವವರು ಈ ಚಟುವಟಿಕೆಗಳ ಕುರಿತಂತೆ ಮಾಹಿತಿ ಇದ್ದರು ಅದರಲ್ಲಿ ಭಾಗವಹಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಲ್ಲಿದೆ. ಇಲ್ಲಿ ಭಾಗವಹಿಸುವಿಕೆ ನಡೆದರೂ ಅದರೊಳಗಿನ ಮಾಹಿತಿ ಮತ್ತು ಕಲೆಯನ್ನು ಕಲಾಲೋಕದಲ್ಲಿರುವವರು ಗಂಭೀರವಾಗಿ ಪರಿಗಣಿಸುವುದೂ ಕಡಿಮೆ. ಅದಕ್ಕೆ ಕಾರಣ ಹಳೆಯ ಕಾಲದಿಂದ ನಂಬಿ ಬಂದಿರುವ ನಂಬಿಕೆಗಳು. ಜನಪ್ರಿಯತೆ ಮತ್ತು ಕಲಾತ್ಮಕತೆ ಎಂಬುದು ಎಂದಿಗೂ ಬೆರೆಯಲು ಸಾಧ್ಯವಿಲ್ಲ ಎಂಬುದು. ಜನಪ್ರಿಯವಾದದ್ದೆಲ್ಲ ಕಲಾತ್ಮಕತೆ ಲೇಪನ ಹೊಂದಿರುವುದಿಲ್ಲ ಎಂಬ ನಂಬಿಕೆಯೆ ಹಲವು ಪ್ರಯೋಗಗಳನ್ನು ಜನಪ್ರಿಯ ವೇದಿಕೆಗಳನ್ನು ಹತ್ತಲು ಬಿಡುತ್ತಿಲ್ಲ. ಇದಕ್ಕೆ ಉದಾಹರಣೆ ನೀಡುವುದಾದರೆ ಕರ್ನಾಟಕದಿಂದ ಹಲವಾರು ಕಲಾವಿದರು ಅಂತರ್ರಾಷ್ಟ್ರೀಯ ಮಟ್ಟದ ಆರ್ಟ್ ರೆಸಿಡೆನ್ಸಿಗಳಲ್ಲಿ ಭಾಗವಹಿಸಿದ್ದರು, ಅಲ್ಲಿನ ಅನುಭವಗಳನ್ನು ಆಪ್ತವಲಯಗಳಲ್ಲಿ, ಗ್ಯಾಲರಿಗಳಲ್ಲಿ ಹಂಚಿಕೊಳ್ಳುತ್ತಾರೆಯೆ ವಿನಃ ಸಾಮಾಜಿಕ ತಾಣಗಳ ಮೂಲಕ ಎಲ್ಲರನ್ನು ತಲುಪಲು ಬಯಸುವುದಿಲ್ಲ. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗ ಅದಕ್ಕೆ ಎದುರುಗಡೆಯ ವ್ಯಕ್ತಿಯಿಂದ ತತ್‌ಕ್ಷಣದ ಪ್ರತಿಕ್ರಿಯಾನುಭವವನ್ನು ನಿರೀಕ್ಷಿಸುವುದೂ ಒಂದು ಕಾರಣವಾಗಿರಬಹುದು. ಇದು ಅಂತರ್ಜಾಲದಲ್ಲಿ ಸಾಧ್ಯವಾಗುವುದಿಲ್ಲ. ಯೂಟೂಬ್ನಲ್ಲಿ ಹುಡುಕಿದರೆ ಹೊರದೇಶದ ಅಂತರ್ರಾಷ್ಟ್ರೀಯ ಕಲಾವಿದರ ವಿಡಿಯೋ ಕಲೆಗಳು ಸಿಗುತ್ತವೆಯೇ ವಿನಃ ಇಲ್ಲಿನ ಸ್ಥಳೀಯ ಕಲಾವಿದರ ಕೃತಿಗಳು ಸಿಗುವುದಿಲ್ಲ. ಅದರಲ್ಲೂ ಸಿಗುವ ವಿಡಿಯೋಗಳಲ್ಲಿ ಪೂರ್ಣ ಪ್ರಮಾಣದ ವಿಡಿಯೋ ಸಿಗುವುದು ಈಗಾಗಲೇ ಪ್ರಸಿದ್ದರಾದಂತಹ ಕಲಾವಿದರದ್ದು ಮಾತ್ರ, ಸಮಕಾಲೀನ ಕಲಾವಿದರದ್ದು ವಿಡಿಯೋಗಳ ಕೆಲವು ತುಣುಕುಗಳು ಮಾತ್ರ ಇರುತ್ತವೆ. ಪೂರ್ಣ ಪ್ರಮಾಣದಲ್ಲಿ ನೋಡಬೇಕಾದರು ಕೆಲವೊಂದು ಪಾಶ್ಚಿಮಾತ್ಯ ಕಲಾವಿದರ ವಿಡಿಯೋಗಳು ದೊರಕುತ್ತವೆಯಾದರು ಅದಕ್ಕೆ ಹೆಚ್ಚು ವೇಗದ ಅಂತರ್ಜಾಲದ ಸೌಲಭ್ಯ ಅನಿವಾರ್ಯತೆ ಇರುವುದರಿಂದ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ, ಇಲ್ಲವಾದಲ್ಲಿ ವಿಡಿಯೋ ನೋಡುವ ಅನುಭವದ ಸಮಗ್ರತೆಗೆ, ಕಾದು ಕಾದು ನೋಡುವ ಪ್ರಕ್ರಿಯೆ ದಕ್ಕೆಯುಂಟು ಮಾಡುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಕಲಾವಿದರಿಗೆ ಇರುವ ಕಾಪಿರೈಟ್ಸ್ ಭಯ, ತಮ್ಮ ಕ್ರಿಯಾಶೀಲತೆಯ ಅವಿಷ್ಕಾರದ ನಕಲಾಗುವ ಭಯವು ಪೂರ್ಣ ಪ್ರಮಾಣದಲ್ಲಿ ಪ್ರದರ್ಶಿಸಲು ಒಪ್ಪುವುದಿಲ್ಲ. ಈ ತುಣುಕುಗಳನ್ನು ಕೆಲವು ಕಲಾವಿದರು ಸ್ವತಃ ಸೇರಿಸಿದ್ದರೆ, ಕೆಲವೊಂದನ್ನು ಗ್ಯಾಲರಿ, ಮ್ಯೂಸಿಯಂನವರು ಸೇರಿಸಿರುತ್ತಾರೆ. ಈ ಪದ್ದತಿಯೇ ಕರ್ನಾಟಕದಲ್ಲಿ ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾಗುವ ಮೂಲಕ ನಡೆಯುವ ಕ್ರಿಯಾಶೀಲತೆ ಕಳುವಿನ ಅಳುಕಿನಿಂದಾಗಿ ಬಹುತೇಕ ಕಲಾವಿದರು ತಮ್ಮ ಕಲಾಕೃತಿಗಳನ್ನು ಸಾಮಾಜಿಕ ತಾಣಗಳ ಮೂಲಕ ಪ್ರದರ್ಶಿಸಲು ಹೋಗುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ , ಗ್ಯಾಲರಿಗಳ ಮೂಲಕ ಕಲಾ ಮಾರುಕಟ್ಟೆ ಸೇರುವ ಕಲಾಕೃತಿಗಳು ಕಲಾ ಮಾರಾಟಗಾರರ ಮೂಲಕ ಅದೇ ಸಾಮಾಜಿಕ ತಾಣಗಳಿಗೆ ಪ್ರವೇಶಿದರೆ ಆಗ ಯಾವುದೇ ಆತಂಕವಿರುವುದಿಲ್ಲ ಕಲಾವಿದರಿಗೆ. ನಕಲಿಗೆ ಸಂಭಂದಿಸಿದ ಜಾಗ್ರತೆಯನ್ನು ಗ್ಯಾಲರಿಗಳ ಮೇಲೆ ಹೊರಿಸಿ ಇವರು ನಿರಾಳರಾಗಿರುತ್ತಾರೆ.

ಈ ಆತಂಕ ಭಯಗಳ ಮಧ್ಯದಲ್ಲು ಕೆಲವು ಕಲಾವಿದರು ತಮ್ಮ ಕಲಾಪ್ರಯೋಗಗಳಲ್ಲಿ ಅಂತರ್ಜಾಲವನ್ನು ಬಳಸಿಕೊಂಡಿದ್ದಾರೆ. ೨೦೧೧ರಲ್ಲಿ ನಡೆದ ಕಲಾವಿದೆ ಸುರೇಖಾರವರ ಜಕ್ಕೂರು ಕೆರೆ ಯೋಜನೆಯ ಅಂಗವಾಗಿ ತಮ್ಮ ವೆಬ್ ತಾಣದಲ್ಲಿ (೧*)ಈ ಯೋಜನೆಗೆ ಸಂಭಂದಿಸಿದ ಚಿತ್ರಗಳು ಲೇಖನಗಳನ್ನು ಪ್ರಕಟಿಸಿ, ಕಲಾ ಸಮುದಾಯವನ್ನು ಅದರಲ್ಲಿ ಭಾಗವಹಿಸುವಂತೆ ಮಾಡಿದ್ದರು. ಇದರಲ್ಲಿ ಸುಮಾರು ಕಲಾವಿದರು, ಲೇಖಕರು ಈ ಯೋಜನೆಗೆ ಸಂಭಂದಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಆ ಮೂಲಕ ಅವರೂ ಈ ಯೋಜನೆಯಲ್ಲಿ ಭಾಗವಹಿಸಿದಂತಾಯಿತು. ಇದಕ್ಕು ಮೊದಲು ಸಮೂಹ ಹೆಸರಲ್ಲಿ ಜಿ.ಸುರೇಶ್‌ಕುಮಾರ್, ಶಿವಪ್ರಸಾದ್, ಅರ್ಚನಾ ಪ್ರಸಾದ್ ರವರು ಮಾಡಿದ ಯೋಜನೆಯನ್ನು ಅವರದೇ ಆದ ವೆಬ್ ತಾಣ ಮತ್ತು ಫೇಸ್‌ಬುಕ್ಕಲ್ಲಿ ದಾಖಲಿಸಲಾಯಿತು. ಜಿ.ಸುರೇಶ್‌ಕುಮಾರ್ ರವರ ಪರ್‌ಫ್ಯೂಮ್ಸ್ ಹೆಸರಿನ ಯೋಜನೆಯು ಫೇಸ್‌ಬುಕ್ಕಲ್ಲಿ ಪ್ರತ್ಯೇಕವಾಗಿ ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಇದೆ ಸುರೇಶ್‌ಕುಮಾರ್‌ರವರ ಮತ್ತೆರೆಡು ಬ್ಲಾಗ್‌ಗಳಿವೆ. (೨*) ಆ ಎರಡೂ ಬ್ಲಾಗ್‌ಗಳಲ್ಲಿ ಸುರೇಶ್ ಕುಮಾರ್‌ರವರು ತಾವು ದಾಖಲಿಸಿರುವ ಕಲಾ ಚಟುವಟಿಕೆಗಳ ವಿಡಿಯೋಗಳನ್ನು ನೋಡಬಹುದು. ಕಲಾ ಇತಿಹಾಸಕಾರರು, ವಿಮರ್ಶಕರು, ಉಪನ್ಯಾಸಕರಾದ ಎಚ್.ಎ.ಅನಿಲ್‌ಕುಮಾರ್‌ರವರು ತಮ್ಮದೇ ತಾಣದಲ್ಲಿ (೩*) ಕಲೆಗೆ ಸಂಭಂದಿಸಿದ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿರುವ ವಿಮರ್ಶಕರು, ಇತಿಹಾಸಕಾರರಾದ ಸುರೇಶ್‌ಜಯರಾಂ ರವರ ೧ಶಾಂತಿರೋಡ್ ಗ್ಯಾಲರಿ, ಆರ್ಟ್ ರೆಸಿಡೆನ್ಸಿಯದ್ದು ವೆಬ್‌ತಾಣವಿದ್ದು (೪*) ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತಂತೆ ಮಾಹಿತಿಯನ್ನು ತಮ್ಮ ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಈ ವೆಬ್‌ತಾಣಗಳನ್ನು ಕುರಿತಂತೆ ಮತ್ತೊಮ್ದು ವಿಷಯವನ್ನು ಗಮನಿಸಬೇಕಾಗುತ್ತದೆ. ಇಲ್ಲಿ ವೆಬ್‌ತಾಣಗಳನ್ನು ಸ್ವಂತವಾಗಿ ಹಣ ಪಾವತಿಸಿ ಪಡೆದವರ ದಾಖಲೆಗಳು ಅವರಿಗೆ ಸೇವೆಯನ್ನು ಒದಗಿಸುವವರ ಮೂಲಕ ದಾಖಲೆಗಳ ಸುರಕ್ಷತೆಯ ಖಾತ್ರಿಯು ದೊರೆಯುತ್ತದೆ. ಇದೇ ಸೌಲಭ್ಯ ಅಂತರ್ಜಾಲದಲ್ಲಿ ಉಚಿತವಾಗಿ ಸ್ಥಳಾವಕಾಶವನ್ನು ಪಡೆದವರಿಂದ ದೊರೆಯುವುದಿಲ್ಲ. ಅಲ್ಲಿ ಖಾತೆ ತೆರೆಯುವಾಗ ಮೊದಲಿಗೆ ಷರತ್ತುಗಳು ಅನ್ವಯ ಎಂದು ಅದಕ್ಕೆ ಸಮ್ಮತಿಯನ್ನು ಪಡೆಯುತ್ತಾರೆ. ಅಂತರ್ಜಾಲದಲ್ಲಿ ಸೇರಿದ ತಕ್ಷಣ ಅದು ಶಾಶ್ವತ ಎಂದು ಭಾವಿಸಿ ತಮ್ಮಲ್ಲಿರುವ ದಾಖಲೆಗಳನ್ನು ಅಳಿಸುವಂತಿಲ್ಲ.

ಇದರ ಜೊತೆಗೆ ಬೆಂಗಳೂರಿನಲ್ಲಿರುವ ಕಲಾಗ್ಯಾಲರಿಗಳು ತಮ್ಮದೇ ಆದ ವೈಯುಕ್ತಿಕ ವೆಬ್ ತಾಣಗಳನ್ನು ಹೊಂದಿವೆ. ಇವೆಲ್ಲ ಆಯಾ ಗ್ಯಾಲರಿಗಳನ್ನು ಸಂಪರ್ಕಿಸಲು, ಪ್ರಚಾರ ಪಡಿಸಲು ಬಳಸಿಕೊಳ್ಳಲಾಗುತ್ತದೆ. ಕಲೆಯ ಕುರಿತಾದ ಗಂಭೀರ ಚರ್ಚೆಯನ್ನು ಹುಟ್ಟು ಹಾಕುವಂತಹ ಅಥವ ಕಲಾ ಚಟುವಟಿಕೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯಂತಹ ವೆಬ್‌ತಾಣಗಳು ಕರ್ನಾಟಕದ ಮಟ್ಟಿಗೆ ಯಾವುದೂ ಇಲ್ಲ. ಸಮೂಹ ಯೋಜನೆಯ ಅವದಿಯಲ್ಲಿ ಫೇಸ್‌ಬುಕ್ಕಲ್ಲಿ ಕೆಲವೊಂದು ಗಂಭೀರ ಚರ್ಚೆಗಳು ನಡೆದದ್ದುಂಟು.

ಅಂತರ್ಜಾಲವನ್ನು ಕೇವಲ ದಾಖಲಿಸುವ ಅಥವ ವಿಚಾರ ವಿನಿಮಯ ಮಾಡಿಕೊಳ್ಳಲಷ್ಟೇ ಅಲ್ಲದೆ ಬೇರೆ ರೀತಿಯಲ್ಲೂ ಕಲಾವಿದರು ಬಳಸಿಕೊಂಡಿರುವ ಉದಾಹರಣೆಯೆಂದರೆ, ಭರತೇಶ್ ಯಾದವ್ ರವರು ತಮ್ಮ ಸ್ವಿಜರ್ಲೆಂಡಿನಲ್ಲಿನ ಆರ್ಟ್ ರೆಸಿಡೆನ್ಸಿ ಯೋಜನೆಯ ಪ್ರಯುಕ್ತ ಬರ್ನ್‌ನಲ್ಲಿದ್ದಾಗ ಅಲ್ಲಿನ ತಮ್ಮ ಯೋಜನೆಗಾಗಿ ಅಂತರ್ಜಾಲದಲ್ಲಿನ ವಿಡಿಯೋ ಚಾಟ್ ಮೂಲಕ ಬೆಂಗಳೂರು ಸೇರಿದಂತೆ ಹಲವು ದೇಶಗಳಿಂದ ಧ್ವನಿಯಾಕ್ಷರವನ್ನು ಸಂಗ್ರಹಿಸಿದ್ದರು. ಮತ್ತೊಬ್ಬ ಬೆಂಗಳೂರಿನ ಕಲಾವಿದೆ ಸುರೇಖಾರವರು ವಿದೇಶದಿಂದ ವಿಡಿಯೋ ಚಾಟ್ ಮುಖಾಂತರ ಬೆಂಗಳೂರಿನಲ್ಲಿರುವ ಸ್ಟುಡಿಯೋ ಒಂದರಲ್ಲಿ ತಮ್ಮ ವಿಡಿಯೋಗಳ ಸಂಕಲನ ಮಾಡಿಸಿ, ಯ್ಯೂಸೆಂಡಿಟ್, ಡ್ರಾಪ್ ಬಾಕ್ಸ್ ತಾಣಗಳ ಮೂಲಕ ಅಲ್ಲಿಗೆ ತರಿಸಿಕೊಂಡು ಪ್ರದರ್ಶಿಸಿದ್ದರು. ಅರ್ಚನಾ ಹಂಡೆಯವರು ಭಾರತೀಯ ಮದುವೆ, ಗಂಡು, ಹೆಣ್ಣನ್ನು ಪರಸ್ಪರ ಆಯ್ಕೆ ಮಾಡಿಕೊಳ್ಳುವುದನ್ನು ಕುರಿತಂತೆ ಅಣಕು ಕೃತಿಯನ್ನು ಅಂತರ್ಜಾಲದಲ್ಲಿ ಮಾಡಿದ್ದಾರೆ (೫*).

1. http://surekha.info/negotiating-routes-jakkurlake/
2. http://perfumesbengaluru.tumblr.com/
3. http://www.youtube.com/channel/UCXidBlteE25vJahMKFtGTMg?feature=watch
4. http://haanilkumar.com/
5. http://www.1shanthiroad.blogspot.in/
6. http://www.arrangeurownmarriage.com/
7. http://belakindi.com

ಲೇಖಕ: ಮಂಸೋರೆ

ವೃತ್ತಿ ಚಿತ್ರಕಲಾವಿದ. ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಸ್ನಾತಕೋತ್ತರ ಪದವೀದರ. ಸದ್ಯ ಚಿತ್ರರಂಗದಲ್ಲಿ ಸ್ವತಂತ್ರ ಕಲಾ ನಿರ್ದೇಶಕ

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೩ – ಸ್ಮಾರ್ಟ್ ಫೋನಿನಲ್ಲಿ ಕನ್ನಡ: ಒಂದು ಪಕ್ಷಿನೋಟ

ಪ್ರಕಟಿಸಿದ್ದು ದಿನಾಂಕ Jan 4, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ನಮ್ಮ ಅಂಗೈಗಳಲ್ಲಿ ಕುಳಿತು ಜಗತ್ತನ್ನೇ ಜಾಲಾಡುವ ಸ್ಮಾರ್ಟ್ ಫೋನ್ ಗಳೆಂಬ ಅದ್ಭುತಗಳ ಇತಿಹಾಸ ತುಂಬಾ ಪ್ರಾಚೀನವಾದುದೇನಲ್ಲ. ಕೆಲವೇ ವರ್ಷಗಳ ಹಿಂದೆ ಇಟ್ಟಿಗೆ ಗಾತ್ರದ ಸರಕನ್ನು ಹೊತ್ತು ಒಳಬರುವ ಕರೆಗೂ ಸುಂಕ ಕಟ್ಟಿ ಅಂದಿನ ಆಧುನಿಕ ಆವಿಷ್ಕಾರದ ಬಗ್ಗೆ ಆನಂದ ಬಾಷ್ಪ ಸುರಿಸುತ್ತಿದ್ದೆವು. ಅದಕ್ಕೂ ಕೆಲ ದಶಕಗಳ ಹಿಂದೆ ಈಗಿನ ತೀರಾ ಸಾಧಾರಣ ಸ್ಮಾರ್ಟ್ ಫೋನಿನ ದಿನಚರಿಯನ್ನು ನಿರ್ವಹಿಸುವುದಕ್ಕೆ ಕಬಡ್ಡಿ ಮೈದಾನದಷ್ಟು ವಿಶಾಲವಾದ ಕೋಣೆಯನ್ನು ಆವರಿಸಿಕೊಂಡು ಧುಸು ಮುಸು ಎಂದು ವ್ಯಾಕ್ಯೂಮ್ ಕೊಳವೆಗಳಲ್ಲಿ ಬಿಸಿಗಾಳಿ ಹೂಂಕರಿಸುತ್ತಾ ಯುನಿವ್ಯಾಕ್, ಇನಿಯಾಕ್ ಕಂಪ್ಯೂಟರುಗಳು ಏದುಸಿರು ಬಿಡುತ್ತಿದ್ದವು. ಆದರಿಂದು ಇದೆಲ್ಲವೂ ಮುಂಚೆಯೇ ಯೋಜಿಸಲ್ಪಟ್ಟಿತ್ತು ಎನ್ನುವಷ್ಟು ಸರಾಗವಾಗಿ ಬ್ರಹ್ಮಾಂಡ ಕ್ಲಿಷ್ಟತೆಯನ್ನು ಮೈಯೊಳಗಡಿಸಿಕೊಂಡ ಮಶೀನುಗಳು ನಮ್ಮ್ ಜೇಬುಗಳಲ್ಲಿ ಅವಿತು ಕುಳಿತಿವೆ.

ಈ ಪ್ರಬಂಧದ ಉದ್ದೇಶ ಇಂದು ಅವ್ಯಾಹತವಾಗಿ ಎಲ್ಲರ ಕಿಸೆಗಳಲ್ಲಿ ಸ್ಥಾಪಿತವಾಗುತ್ತಿರುವ ಸ್ಮಾರ್ಟ್ ಫೋನ್ ಹಾಗೂ ಅವುಗಳ ಕಾರ್ಯಾಚರಣೆ ವ್ಯವಸ್ಥೆಗಳಾದ ಆಂಡ್ರಾಯ್ಡ್(Android), ಐ ಓಎಸ್ (iOS) ಹಾಗೂ ವಿಂಡೋಸ್ ೮ (Windows 8) ಗಳಲ್ಲಿನ ಆಧುನಿಕ ತಂತ್ರಜ್ಞಾನವನ್ನು ವಿವರಿಸುವುದಲ್ಲ. ತ್ವರಿತವಾಗಿ ಲಭ್ಯವಾಗುತ್ತಿರುವ ವಿವಿಧ ಸವಲತ್ತುಗಳನ್ನು ಕುರಿತು ಚರ್ಚಿಸುವುದಲ್ಲ. ಬದಲಾಗಿ ನಮ್ಮೆಲ್ಲರ ದೈನಂದಿನ ಬದುಕುಗಳಿಗೆ ನೇರವಾಗಿ ಪ್ರವೇಶ ಮಾಡಿ ನಾವು ನಮ್ಮ ಸುತ್ತಲ ಜಗತ್ತಿನೊಡನೆ ಒಡನಾಡುವ ರೀತಿಯನ್ನೇ ಪ್ರಭಾವಿಸುತ್ತಿರುವ ಈ ಸ್ಮಾರ್ಟ್ ಫೋನ್ ಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ, ಪ್ರಾದೇಶಿಕ ಅಗತ್ಯಗಳಿಗೆ ಅದೆಷ್ಟರ ಮಟ್ಟಿಗೆ ಸ್ಪಂದಿಸುತ್ತಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಈ ಪ್ರಬಂಧದ ಉದ್ದೇಶ.

ಹಳೇ ಚಕ್ರವನ್ನು ಹೊಸ ಗಾಡಿಗೆ ಜೋಡಿಸುವುದು
ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಅಳವಡಿಕೆಯಾಗಿದೆ ಎನ್ನುವುದು ನಮಗೆ ಹೊಸ ಚರ್ಚೆಯಾಗಿ ಕಾಣಬಹುದು. ಆದರೆ ಈ ಚರ್ಚೆಯಲ್ಲಿ ಪಾಲ್ಗೊಂಡು ಮುಂದಿನ ಭಾಗಗಳನ್ನು ಓದಿದಂತೆಲ್ಲಾ ನಿಮಗೆ ಕನ್ನಡದ ಅಳವಡಿಕೆಯ ಸವಾಲುಗಳು ಹಾಗೂ ಪರಿಹಾರಗಳು ಹಿಂದೆಲ್ಲೋ ಕೇಳಿದಂತೆ, ಬೇರೆಯದೇ ಪರಿಸರದಲ್ಲಿ ಮತ್ತೆ ಪುನರಾವರ್ತನೆಗೊಂಡಂತೆ ಭಾಸವಾಗುವುದಕ್ಕೆ ಸಾಧ್ಯವಿದೆ.

ಒಂದು ವೇಳೆ ನಿಮಗೆ ಹಾಗೆ ಅನ್ನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಸ್ಮಾರ್ಟ್ ಫೋನುಗಳ ಬಗೆ ಬಗೆಯ ವಿನ್ಯಾಸಗಳು, ಅವುಗಳನ್ನು ತಯಾರು ಮಾಡುತ್ತಿರುವ ಕಂಪೆನಿಗಳು, ದಿನ ದಿನಕ್ಕೆ ವೃದ್ಧಿಯಾಗುತ್ತಿರುವ ಹಾರ್ಡ್ ವೇರ್ ಸಾಮರ್ಥ್ಯ, ಹಿಂದೆಂದೂ ಕಂಡು ಕೇಳರಿಯದ ಹೊಸ ತಾಂತ್ರಿಕ ಪದಗಳು ನಿಮ್ಮ ಗ್ರಹಿಕೆಯನ್ನು ಮಬ್ಬಾಗಿಸಿರಬಹುದು. ಈ ಎಲ್ಲ ಗೋಜಲನ್ನು ಬದಿಗಿರಿಸಿದರೆ ಸ್ಮಾರ್ಟ್ ಫೋನ್ ಗಳು ನಮ್ಮ ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಕಂಪ್ಯೂಟರುಗಳ ಡಿ.ಎನ್.ಎಯನ್ನೇ ಹೊಂದಿದೆ ಎನ್ನುವುದು ಅರಿವಾಗುತ್ತದೆ. ಕಂಪ್ಯೂಟರ್ ಬಳಕೆ ಶೈಶವಾವಸ್ಥೆಯಲ್ಲಿದ್ದಾಗ ಕನ್ನಡ ಹಾಗೂ ಇತರೆ ಪ್ರಾದೇಶಿಕ ಭಾಷೆಗಳ ಅಳವಡಿಕೆಯ ಕುರಿತು ಉದ್ಭವಾದ ಚರ್ಚೆಗಳೇ ಈಗ ಸ್ಮಾರ್ಟ್ ಫೋನ್ ಆವರಣದಲ್ಲಿ ಪುನರಾವರ್ತನೆಯಾಗುತ್ತಿವೆ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತದೆ.

ವಿಂಡೋಸ್ ಕಾರ್ಯಚರಣೆ ವ್ಯವಸ್ಥೆ (Operating System)ಯಲ್ಲಿ ಒಂದು ಕನ್ನಡದ ಲೇಖನ ಬರೆಯುವುದಕ್ಕೆ, ಕನ್ನಡದ ಫೈಲ್ ಒಂದನ್ನು ಓದುವುದಕ್ಕೆ ಇದ್ದ ಸವಾಲುಗಳು. ಈ ಸವಾಲುಗಳಿಗೆ ಆಸ್ಕೀ (ASCII), ಯುನಿಕೋಡ್ (UNICODE) ಎನ್ಕೋಡಿಂಗುಗಳ ಹಂಗಿನಲ್ಲಿ ಕಂಡುಕೊಂಡ ಹಲವು ಪರಿಹಾರಗಳು. ಪ್ರಾದೇಶಿಕ ಭಾಷೆಗಳ ಬೆಂಬಲಕ್ಕೆ ಆಗ್ರಹಿಸಿ ಸಂಘಟಿಸಿದ ಪ್ರತಿಭಟನೆಗಳು ಹೀಗೆ ಕಂಪ್ಯೂಟರುಗಳ ಆವರಣದಲ್ಲಿ ಜರುಗಿ ಹೋದ ಅನೇಕ ಘಟನೆಗಳು ಇಂದು ಸ್ಮಾರ್ಟ್ ಫೋನ್ ಗಳ ಅಂಗಳದಲ್ಲಿ ಪುನರಾವರ್ತನೆಯಾಗುತ್ತಿವೆ. ಇತಿಹಾಸ ಮರುಕಳಿಸುತ್ತಿದೆ!

ಕನ್ನಡ ಎನೆ ಕಣ್ ಅರಳುವುದು
ಐದರಿಂದ ಹತ್ತು ಅಂಕಿಗಳ ಫೋನ್ ನಂಬರನ್ನು ಒತ್ತಿ ದೂರದಲ್ಲಿರುವ ಯಾರೊಂದಿಗೋ ಮಾತನಾಡುವುದಷ್ಟೇ ಫೋನಿನ ಉಪಯುಕ್ತತೆ ಸೀಮಿತವಾಗಿದ್ದ ದಿನಗಳಲ್ಲಿ ಕನ್ನಡವಿರಲಿ, ಫೋನುಗಳ ಪರದೆಯ ಮೇಲೆ ಅಂಕಿಗಳನ್ನು ನೋಡುವುದು ಸಹ ಅಷ್ಟು ಮುಖ್ಯವಾದ ಸಂಗತಿಯಾಗಿರುತ್ತಿರಲಿಲ್ಲ. ಎಸ್.ಟಿ.ಡಿ ಬೂತ್ ಗಳಲ್ಲಿ ದೂರದ ಊರಿನ ಕೋಡ್ ಸರಿಯಾಗಿ ಒತ್ತಿದ್ದೇವೆಯೇ ಎಂದು ಖಾತರಿ ಪಡಿಸಿಕೊಳ್ಳಲು ಎಲ್ ಇ ಡಿ ಹಲಗೆಗಳನ್ನು ತಲೆ ಎತ್ತಿ ನೋಡುತ್ತಿದ್ದೆವು. ಮುಂದೆ ಅಂಗೈ ಉದ್ದದ ಸೆಲ್ ಫೋನ್ ಗಳು ಬಂದಾಗಲೂ ಅವುಗಳಲ್ಲಿ ನಂಬರ್ ಅದುಮಲು ಬೇಕಾದ ಕೀ ಪ್ಯಾಡ್ ಗಳಿಗೇ ಹೆಚ್ಚಿನ ಮಾನ್ಯತೆ ಇರುತ್ತಿತ್ತು. ಸಣ್ಣ ಕಿಂಡಿಯ ಡಿಸ್ ಪ್ಲೇ ಅವಶ್ಯಕವಾದ ಮಾಹಿತಿಯನ್ನಷ್ಟೇ ತೋರುವ ಮಾಧ್ಯಮವಾಗಿತ್ತು.

ಸ್ಮಾರ್ಟ್ ಫೋನುಗಳು ತಮ್ಮ ಮೈ ತುಂಬ ವ್ಯಾಪಿಸಿಕೊಂಡ ಸ್ಪರ್ಶ ಸಂವೇದಿ ಟಚ್ ಸ್ಕ್ರೀನುಗಳೊಂದಿಗೆ ಕಾಲಿರಿಸಿದಾಗಲೇ ನಮ್ಮ ಕಣ್ಣಗುಡ್ಡೆಗಳನ್ನು ಮೋಹಿಸಲು ಪ್ರಾರಂಭಿಸಿದ್ದು. ಅಲ್ಲಿಯರೆಗೆ ಟಿವಿ ಪರದೆ, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಪರದೆಗಳಿಗೆ ಕಣ್ಣು ಅಂಟಿಸಿ ಕೂರುತ್ತಿದ್ದ ಜನ ಸಮೂಹ ತಮ್ಮ ಕಿಸೆಯಲ್ಲಿರುವ ಸ್ಮಾರ್ಟ್ ಫೋನ್ ಗಳನ್ನು ‘ನೋಡುವ, ಓದುವ’ ಸಾಧನವಾಗಿ ಕಾಣಲಾರಂಭಿಸಿತು. ಹೀಗೆ ಫೋನುಗಳು ಓದುವ ಸಲಕರಣೆಗಳಾಗಿ ತಮ್ಮ ಬಳಕೆಯನ್ನು ಹಿಗ್ಗಿಸಿಕೊಂಡಾಗ, ನೂರಾರು ಸಾಲು ಇಂಗ್ಲೀಷ್ ಪಠ್ಯವನ್ನು ಓದಿ ಓದಿ ಸ್ವೈಪ್ ಮಾಡುವಾಗ ಸಹಜವಾಗಿ ನಮ್ಮ ಕಣ್ಣುಗಳು ಕನ್ನಡದ ಮುದ್ದು ಅಕ್ಷರಗಳಿಗಾಗಿ ಹಂಬಲಿಸಲು ಆರಂಭಿಸಿದವು.

ಆಗ ನಾವು ಪ್ರಶ್ನಿಸಲಾರಂಭಿಸಿದೆವು: ನನ್ನ ಫೋನಿನಲ್ಲಿ ಕನ್ನಡವೇಕೆ ಕಾಣುವುದಿಲ್ಲ? ಇಂಗ್ಲೀಷು ಇಷ್ಟು ಸ್ಪಷ್ಟವಾಗಿ ನಮ್ಮ ಎಸ್.ಎಂ.ಎಸ್, ಮೇಲ್, ಬ್ರೌಸರ್ ಆಪ್ ಗಳಲ್ಲಿ ಕಾಣುವಾಗ ಕನ್ನಡದ ಅಕ್ಷರಗಳೇಕೆ ಚೌಕಾಕಾರದ ಡಬ್ಬಗಳಾಗಿ, ಒತ್ತಕ್ಷರ- ತಲೆ ಕಟ್ಟುಗಳು ಘಾಸಿಗೊಳಗಾಗಿ ಸ್ಥಾನ ಪಲ್ಲಟಗೊಂಡು ಏಕೆ ಕಾಣುತ್ತಿವೆ ಎಂದು ಕೇಳಿಕೊಳ್ಳಲಾರಂಭಿಸಿದೆವು.

ತಮ್ಮ ಗ್ಯಾಜೆಟ್ ಗಳಲ್ಲಿ ಕನ್ನಡವನ್ನು ಕಾಣಲೇಬೇಕೆಂಬ ಹಠದಿಂದ ಮುಂದೆ ವಿವರಿಸಿರುವ ಒಪೆರಾ ಬ್ರೌಸರ್ ಉಪಾಯದಂತಹ ದ್ರಾವಿಡ ಪ್ರಾಣಾಯಾಮ ಕೈಗೊಂಡು ಯಶಸ್ವಿಯಾದವರು ಮರುಕ್ಷಣದಲ್ಲಿಯೇ “ಕನ್ನಡದ ಅಕ್ಷರವನ್ನು ಕಂಡು ನನ್ನ ಕಣ್ಣುಗಳಿಗೇನೋ ತಂಪಾಯಿತು. ಆದರೆ ಕನ್ನಡದ ಅಕ್ಷರಗಳನ್ನು ಟೈಪ್ ಮಾಡಲಿಕ್ಕಾಗದೆ ನನ್ನ ಬೆರಳುಗಳೇಕೆ ಕೆಂಪಾಗುತ್ತಿವೆ?” ಎಂದು ಮರುಗತೊಡಗಿದರು.
ಹಳೇ ಪ್ರೇತಗಳು ಹಳೇ ಮಂತ್ರಕ್ಕೆ ಬಗ್ಗುತ್ತಿಲ್ಲ

ಇಲ್ಲಿಗೆ ಡೆಸ್ಕ್ ಟಾಪ್ ಆವರಣದಲ್ಲಿ ಶಾಂತಿ ಪಡೆದಿದ್ದ ಪ್ರೇತಾತ್ಮಗಳೆಲ್ಲ ಸ್ಮಾರ್ಟ್ ಫೋನ್ ಆವರಣದಲ್ಲಿ ಗಿರಕಿ ಹೊಡೆಯಲು ಶುರುಮಾಡಿದವು. ಒಮ್ಮೆ ಮಣಿಸಿದ್ದ ಪ್ರೇತಗಳನ್ನು ಮತ್ತೊಮ್ಮೆ ಮಣಿಸುವುದೇನು ಕಷ್ಟವಾಗಲಿಕ್ಕಿಲ್ಲ ಎನ್ನುವುದು ನಿಮ್ಮ ಎಣಿಕೆಯಾಗಿರಬಹುದು. ಆದರೆ ಈ ಹಳೇ ಪ್ರೇತಗಳು ಹಳೇ ಮಂತ್ರಗಳಿಗೆ ಬಗ್ಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ.

ಡೆಸ್ಕ್ ಟಾಪ್ ಕಂಪ್ಯೂಟರುಗಳು ನಮ್ಮ ನಡುವೆ ನೆಲೆಯೂರುತ್ತಿದ್ದ ಕಾಲದಲ್ಲಿ ಇಡೀ ಆಪರೇಟಿಂಗ್ ಸಿಸ್ಟಂ ಎನ್ನುವ ವ್ಯವಹಾರ ಮೈಕ್ರೋ ಸಾಫ್ಟ್ ಎನ್ನುವ ಕಂಪನಿಯ ಹಿಡಿತದಲ್ಲಿತ್ತು. ನೀವು ಡೆಲ್, ಎಚ್.ಪಿ, ಲಿನೊವೋ ಯಾವುದೇ ಕಂಪನಿಯಿಂದ ಹಾರ್ಡ್ ವೇರ್ ಖರೀದಿಸಿದರೂ ಅವುಗಳು ಮೈಕ್ರೋಸಾಫ್ಟ್ ನಿರ್ಮಿಸಿದ ಕಾರ್ಯಚರಣೆ ವ್ಯವಸ್ಥೆ – ವಿಂಡೋಸ್ ಹೊತ್ತು ಬರುತ್ತಿದ್ದವು. ಬಳಕೆದಾರರ ಆಯ್ಕೆಯ ದೃಷ್ಟಿಯಿಂದ ಇದು ದುರುಳ ವ್ಯವಸ್ಥೆಯೇ ಆದರೂ ಕಂಪ್ಯೂಟರುಗಳಲ್ಲಿ ಪ್ರಾದೇಶಿಕ ಭಾಷೆಗಳ ಅಳವಡಿಕೆ ಎನ್ನುವ ಸಮಸ್ಯೆ ಮೈಕ್ರೋಸಾಫ್ಟ್ ವಿಂಡೋಸ್ ನಲ್ಲಿ ಅವುಗಳ ಅಳವಡಿಕೆ ಎನ್ನುವುದಕ್ಕೆ ಸೀಮಿತವಾಗಿತ್ತು.

ಸ್ಮಾರ್ಟ್ ಫೋನ್ ಕ್ಷೇತ್ರದಲ್ಲೂ ಹೀಗೆ ಆಪರೇಟಿಂಗ್ ಸಿಸ್ಟಮ್ ನ ಸಂಪೂರ್ಣ ಹಿಡಿತವನ್ನು ಒಂದು ಕಂಪೆನಿ ಹೊಂದಿರುವ ನಿದರ್ಶನಗಳು ಇವೆಯಾದರೂ ಇಲ್ಲಿ ಹತ್ತು ಹಲವು ಅಡ್ಡಿ ಅಡಚಣೆಗಳು ಸಮಸ್ಯೆಗಳನ್ನು ಕ್ಲಿಷ್ಟವಾಗಿಸಿವೆ. ಸ್ಮಾರ್ಟ್ ಫೋನ್ ಗಳ ಕಾರ್ಯಚರಣೆ ವ್ಯವಸ್ಥೆ(Operating System)ಯನ್ನು ಒದಗಿಸುವ ಹತ್ತು ಹಲವು ಕಂಪೆನಿ, ಯೋಜನೆಗಳು ಇರುವುದು ನಿಜವಾದರೂ ನಮ್ಮ ಚರ್ಚೆಗೆ ಆಪಲ್ ಕಂಪೆನಿಯ iOS, ಮೈಕ್ರೋಸಾಫ್ಟ್ ನ ವಿಂಡೋಸ್ ಹಾಗೂ ಗೂಗಲ್ ನ ಆಂಡ್ರಾಯ್ಡ್ – ಈ ಮೂರು ಓಎಸ್ ಗಳನ್ನು ಪರಿಗಣಿಸೋಣ.

ಆಪಲ್ ಕಂಪೆನಿ ತಾನು ಮಾರುವ ಎಲ್ಲಾ ಐಫೋನು, ಐಪ್ಯಾಡುಗಳಿಗೆ ತನ್ನದೇ ಆಪರೇಟಿಂಗ್ ಸಿಸ್ಟಂ ಒದಗಿಸುತ್ತದೆ. ಹಾಗೆಯೇ ಬೇರೆ ಬೇರೆ ಕಂಪೆನಿಗಳು ನಿರ್ಮಿಸುವ ಹಾರ್ಡ್ ವೇರುಗಳಿಗೆ ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವ ಲೈಸೆನ್ಸ್ ನೀಡುತ್ತದೆ. ಆದರೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಆಪಲ್ ನ ಐಫೋನ್ ಜನ ಸಾಮಾನ್ಯರ ಕೈಗೆಟುವ ದರದಲ್ಲಿ ಲಭ್ಯವಿಲ್ಲ. ವಿಂಡೋಸ್ ತಡವಾಗಿ ರೇಸಿಗೆ ಬಂದಿರುವುದರಿಂದ ವಿಂಡೋಸ್ ಫೋನುಗಳು ಹೆಚ್ಚಾಗಿ ಬಳಕೆಯಲ್ಲಿಲ್ಲ. ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮನ್ನು ಮೈಕ್ರೋಸಾಫ್ಟ್ ನಂತೆ ಶುಲ್ಕವಿಧಿಸಿ ಲೈಸೆನ್ಸ್ ನೀಡುವಂತೆ ವಿತರಿಸುವುದಿಲ್ಲ. Open Source Android Project ಎನ್ನುವ ಯೋಜನೆಯಡಿಯಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ್ನು ಮುಕ್ತ ಬಳಕೆಗೆ ಬಿಡುಗಡೆ ಮಾಡುತ್ತದೆ. ಗೂಗಲ್ ಬಿಡುಗಡೆ ಮಾಡುವ ಆಂಡ್ರಾಯ್ಡ್ ಆವೃತ್ತಿಯನ್ನು ವಿವಿಧ ಕಂಪೆನಿಗಳು (OEM- Original Equipment Manufacturer) ಗಳು ತಮ್ಮ ಹಾರ್ಡ್ ವೇರ್ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡುಗೊಳಿಸಿಕೊಂಡು ಬಳಸುತ್ತವೆ. ಹೀಗೆ ಗೂಗಲ್ ಬಿಡುಗಡೆ ಮಾಡಿದ ಕಾರ್ಯಚರಣೆ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸಿ ತಮ್ಮ ಡಿವೈಸುಗಳಿಗೆ ಅಪ್ ಡೇಟ್ ಬಿಡುಗಡೆ ಮಾಡುವ ಜವಾಬ್ದಾರಿ OEMಗಳ ಮೇಲೆ ಬೀಳುವುದರಿಂದಾಗಿ ಪ್ರಾದೇಶಿಕ ಭಾಷೆಗಳ ಬೆಂಬಲ ಎನ್ನುವುದು ಆಂಡ್ರಾಯ್ಡ್ ಸನ್ನಿವೇಶದಲ್ಲಿ ಅನಾಥ ಶಿಶುವಿನಂತಾಗಿದೆ.

ಉದಾಹರಣೆಗೆ, ಗೂಗಲ್ ಜುಲೈ ೨೦೧೨ರಲ್ಲಿ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಆವೃತ್ತಿ ೪.೨ (ಜೆಲ್ಲಿ ಬೀನ್) ನಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳ ಯುನಿಕೋಡ್ ಬೆಂಬಲವನ್ನು ಅಳವಡಿಸಿದೆ. ಆದರೆ ಆರು ತಿಂಗಳು ಕಳೆದರೂ ಅನೇಕ OEMಗಳು ತಮ್ಮ ಫೋನುಗಳಿಗೆ ಈ ಆವೃತ್ತಿಯನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ಮಾರುವ ಕೆಲವು ‘ಸಮಯ ಸಾಧಕ’ ಕಂಪೆನಿಗಳಂತೂ ತಾವು ಈ ಹಿಂದೆ ಮಾರಿದ ಫೋನುಗಳು ಈ ಹೊಸ ಆವೃತ್ತಿಯನ್ನು ಬೆಂಬಲಿಸುವುದೇ ಇಲ್ಲ ಎಂದು ಖಂಡತುಂಡವಾಗಿ ಹೇಳುತ್ತವೆ. ಕಾರ್ಯಚರಣ ವ್ಯವಸ್ಥೆ ಹೀಗೆ ಚದುರಿ ಹೋಗಿರುವುದರಿಂದ ಪ್ರಾದೇಶಿಕ ಭಾಷೆಗಳ ಅಳವಡಿಕೆ ಯಾರ ಜವಾಬ್ದಾರಿ ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ.

ಪ್ರಾದೇಶಿಕ ಭಾಷೆಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸುವುದಕ್ಕೆ ಮತ್ತೊಂದು ದೊಡ್ಡ ಅಡಚಣೆ ಇದೆ. ಇದು ಆಂಡ್ರಾಯ್ಡ್ ಕಾರ್ಯಚರಣೆ ವ್ಯವಸ್ಥೆಗಷ್ಟೇ ಸೀಮಿತವಲ್ಲ. ಅದೆಂದರೆ, ಕಾರ್ಯಚರಣೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ತಿದ್ದಿ ಹೆಚ್ಚಿನ ಸವಲತ್ತುಗಳನ್ನು ಸೇರಿಸುವುದಕ್ಕೆ ಬಳಕೆದಾರರಿಗೆ ಹಾಗೂ ಡೆವಲಪರ್ ಗಳಿಗೆ ಅನುಮತಿ ಇಲ್ಲದಿರುವುದು. ಕನ್ನಡದ ಅಕ್ಷರಗಳನ್ನು ಮೂಡಿಸುವುದಕ್ಕೆ ಕನ್ನಡದ ಒಂದು ಫಾಂಟ್ ಅನುಸ್ಥಾಪಿಸಲು ನಿಮ್ಮ ಫೋನನ್ನು ‘ರೂಟ್’ ಮಾಡಬೇಕಾಗುತ್ತದೆ. ಅಂದರೆ ಕಾರ್ಯಚರಣೆ ವ್ಯವಸ್ಥೆ ಹಾಕಿರುವ ಬೀಗವನ್ನು ಮುರಿದು ಒಳ ಹೊಕ್ಕು ನಮಗೆ ಬೇಕಾದ ಬದಲಾವಣೆ ಮಾಡಬೇಕಾಗುತ್ತದೆ, ಏಕೆಂದರೆ ಮೊಬೈಲ್ ಫೋನ್ ಗಳಲ್ಲಿ ಬಳಕೆದಾರರಿಗಾಗಲಿ ಅಥವಾ ಡೆವಲಪರ್ (ಇಲ್ಲಿ ಅಪ್ಲಿಕೇಶನ್ ಡೆವಲಪರ್ ಎಂದು ಓದಿಕೊಳ್ಳಿ) ಗಳಿಗಾಗಲಿ ಬೀಗ (ಕೀ) ಲಭ್ಯವಿಲ್ಲ. ಸ್ಮಾರ್ಟ್ ಫೋನ್ ಗಳಲ್ಲಿ ಹೀಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವುದಕ್ಕೆ ಹಲವು ಸಮರ್ಥನೆಗಳಿವೆ. ನಿಮ್ಮ ಡೆಸ್ಕ್ ಟಾಪ್ ಗಳಲ್ಲಿ ಸುಡೋ ಅನುಮತಿ ಇಲ್ಲವೇ ಅಡ್ ಮಿನಿಸ್ಟ್ರೇಶನ್ ಅನುಮತಿ ಇದ್ದಂತೆ ಮೊಬೈಲ್ ಗಳಲ್ಲೂ ಅನುಮತಿಸುವ ವ್ಯವಸ್ಥೆ ಇದ್ದರೆ ದುರುಳ ಅಪ್ಲಿಕೇಶನ್ ಗಳು ಬೇಕಾದ ನಂಬರಿಗೆ ಫೋನ್ ಮಾಡಿ ನಿಮಗೆ ಹಾರ್ಟ್ ಅಟ್ಯಾಕ್ ಆಗುವಷ್ಟು ಬಿಲ್ ಪೇರಿಸಬಹುದು. ಅಲ್ಲದೆ, ಸ್ಮಾರ್ಟ್ ಫೋನ್ ಪ್ರಾಥಮಿಕವಾಗಿ ಒಂದು ಫೋನ್. ಅದು ಅವ್ಯಾಹತವಾಗಿ ತನ್ನ ಟೆಲಿಫೋನ್ ನೆಟ್ ವರ್ಕ್ ಟವರುಗಳೊಂದಿಗೆ ಸಂಭಾಷಣೆ ನಡೆಸುತ್ತಲೇ ಇರಬೇಕು. ಇದರಲ್ಲೆಲ್ಲ ಕೈಯಾಡಿಸುವ ಅನುಮತಿ ನೀಡುವುದು ಅಪೇಕ್ಷಣೀಯವೂ ಅಲ್ಲ.

ಈ ಎಲ್ಲ ಕಾರಣಗಳಿಂದಾಗಿ ಬರಹ, ನುಡಿ, ಐ-ಬಸ್, SCIM ನಂತಹ ಹಲವು ಯೋಜನೆಗಳು ಡೆಸ್ಕ್ ಟಾಪ್ ಗಳಲ್ಲಿ ಕನ್ನಡದ ಅಳವಡಿಕೆಯನ್ನು ಸಾಧ್ಯವಾಗಿಸಿದ್ದರೂ ಸ್ಮಾರ್ಟ್ ಫೋನ್ ಗಳಲ್ಲಿ ಅದನ್ನು ಸಾಧ್ಯವಾಗಿಸಲು ಸಾಧ್ಯವಾಗಿಲ್ಲ.

ಇಲ್ಲಿಯವರೆಗೆ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡದ ಅಳವಡಿಕೆಯ ಸುತ್ತಲಿನ ಸವಾಲುಗಳನ್ನು ಕುರಿತು ವಿವರಿಸಿದ್ದಾಯ್ತು. ಈಗ ವಿವಿಧ ಸ್ಮಾರ್ಟ್ ಫೋನ್ ಕಾರ್ಯಚರಣೆ ವ್ಯವಸ್ಥೆಯಲ್ಲಿ ಕನ್ನಡದ ಬೆಂಬಲ ಯಾವ ಹಂತದಲ್ಲಿದೆ, ಕನ್ನಡವನ್ನು ಅವಳವಡಿಸುವುದರಲ್ಲಿನ ಗಮನಾರ್ಹ ಪ್ರಯೋಗಗಳನ್ನು ದಾಖಲಿಸುವ ಪ್ರಯತ್ನ ಮಾಡೋಣ.

ಆಂಡ್ರಾಯ್ಡ್ ನಲ್ಲಿ ಕನ್ನಡ
ಆಂಡ್ರಾಯ್ಡ್ ನಲ್ಲಿ ಕನ್ನಡದ ಬೆಂಬಲ ಬೆಳೆದು ಬಂದ ಬಗೆಯನ್ನು ಮೂರು ಹಂತಗಳಾಗಿ ವಿಂಗಡಿಸಬಹುದು.

೧. ಚೌಕಾಕಾರದ ಡಬ್ಬಿಗಳು
ಆಂಡ್ರಾಯ್ಡ್ ತನ್ನ ಪ್ರಾರಂಭದ ಆವೃತ್ತಿಗಳಲ್ಲೇ ಯುನಿಕೋಡ್ ಬೆಂಬಲವನ್ನು ಹೊಂದಿತ್ತಾದರೂ ಭಾರತೀಯ ಭಾಷೆಗಳೂ ಸೇರಿದಂತೆ ಅನೇಕ ಭಾಷೆಗಳ ಅಕ್ಷರಗಳನ್ನು ತೋರಿಸುವುದಕ್ಕೆ ಬೇಕಾದ ತಾಂತ್ರಿಕ ಕೌಶಲವನ್ನು ಹೊಂದಿರಲಿಲ್ಲ. ಯುನಿಕೋಡ್ ಶಿಷ್ಟಾಚಾರದ ಅನ್ವಯ ಇಂಗ್ಲೀಷ್ ಸೇರಿದಂತೆ ಅನೇಕ ಪ್ರಮುಖ ಅಂತರಾಷ್ಟ್ರೀಯ ಭಾಷೆಗಳಿಗಷ್ಟೇ ಬೆಂಬಲ ಲಭ್ಯವಿತ್ತು.

ಈ ಹಂತದಲ್ಲಿ ನಿಮ್ಮ ಫೋನುಗಳಲ್ಲಿ ಕನ್ನಡದ ಪಠ್ಯವನ್ನು ತೆರೆದರೆ ಅವು ಚೌಕಾಕಾರದ ಡಬ್ಬಿಗಳ ಸಾಲುಗಳಾಗಿ ಕಾಣುತ್ತಿದ್ದವು.

ಅನೇಕ ಸಾಹಸಿಗಳು ಕಾರ್ಯಚರಣೆ ವ್ಯವಸ್ಥೆಯ ಬೀಗವನ್ನು ಒಡೆದು, ತಮ್ಮ ಫೋನುಗಳನ್ನು ರೂಟ್ ಮಾಡಿ ಕೇದಗೆ, ಲೋಹಿತ್ ಕನ್ನಡದಂತಹ ಫ್ರೀ ಟೈಪ್ ಫಾಂಟುಗಳನ್ನು ಅನುಸ್ಥಾಪಿಸುವ ಪ್ರಯತ್ನ ಮಾಡಿದರು. ಆಂಡ್ರಾಯ್ಡ್ ನಲ್ಲಿ ಯುನಿಕೋಡ್ ಬೆಂಬಲ out-of-the-box ಲಭ್ಯವಿದ್ದುದರಿಂದ ಕನ್ನಡದ ಯುನಿಕೋಡ್ ಫಾಂಟ್ ಕನ್ನಡದ ಅಕ್ಷರಗಳನ್ನು ತೋರುವ ಪ್ರಯತ್ನವನ್ನು ಮಾಡಿತು. ಆದರೆ ಕನ್ನಡದಲ್ಲಿರುವ ಒತ್ತಕ್ಷರ, ತಲೆ ಕಟ್ಟು- ಕೊಂಬುಗಳನ್ನು ಸಮರ್ಪಕವಾಗಿ ಸಂಯೋಜಿಸುವ ತರ್ಕವಿಲ್ಲದೆ ಒತ್ತು-ಕೊಂಬುಗಳೆಲ್ಲ ಸ್ಥಾನ ಪಲ್ಲಟಗೊಂಡಿರುತ್ತಿದ್ದವು. ಹೀಗಾಗಿ ಕನ್ನಡದ ಫಾಂಟ್ ಅನುಸ್ಥಾಪಿಸಿದರೂ ಕನ್ನಡ ಸರಿಯಾಗಿ ಮೂಡುತ್ತಿರಲಿಲ್ಲ.

೨. ಯುನಿಕೋಡ್ ಶಿಷ್ಟತೆಯ ಅನುಷ್ಟಾನ
ಆಂಡ್ರಾಯ್ಡ್ ೨.೩(ಜಿಂಜರ್ ಬ್ರೆಡ್) ಆವೃತ್ತಿಯಲ್ಲಿ ಹಲವು ಭಾಷೆಗಳಿಗೆ ಕಾಂಪ್ಲೆಕ್ಸ್ ಸ್ಕ್ರಿಪ್ಟ್ ರೆಂಡರಿಂಗ್ – ಸಂಯುಕ್ತ ಅಕ್ಷರಗಳ ಜೋಡಣೆಯ ಬೆಂಬಲ ಲಭ್ಯವಾಯಿತು. ಆದರೆ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳು ಈ ಬೆಂಬಲವನ್ನು ಪಡೆದಿರಲಿಲ್ಲ. ಬ್ರೌಸರ್ ತಂತ್ರಾಂಶದಲ್ಲಿ ಬಳಸುವ ವೆಬ್ ಕಿಟ್ ನಲ್ಲೂ ಸಹ ಭಾರತೀಯ ಭಾಷೆಗಳ ಸಂಯುಕ್ತ ಅಕ್ಷರಗಳ ಜೋಡಣೆಯ ಬೆಂಬಲ ಲಭ್ಯವಿರಲಿಲ್ಲ. ವೆಬ್ ಫಾಂಟ್ ಬಳಸಿಯೂ ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಸಾಧ್ಯವಿರಲಿಲ್ಲ.

೩. ಸಂಪೂರ್ಣ ಬೆಂಬಲ
ಆಂಡ್ರಾಯ್ಡ್ ೪ (ಐಸ್ ಕ್ರೀಮ್ ಸ್ಯಾಂಡ್ ವಿಚ್) ನಲ್ಲಿ ದೇವನಾಗರಿ, ಬೆಂಗಾಲಿ ಹಾಗೂ ತಮಿಳು ಭಾಷೆಗಳಿಗೆ ಬೆಂಬಲವನ್ನು ಸೇರಿಸಲಾಯ್ತು.

ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ನಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ತೋರುವುದಕ್ಕೆ ಬೆಂಬಲವನ್ನು ಅಳವಡಿಸಲಾಯ್ತು. ಆದರೆ ಆಂಡ್ರಾಯ್ಡ್ ನ ರೊಬೊಟೋ ಫಾಂಟಿನಲ್ಲಿ ಭಾರತೀಯ ಭಾಷೆಗಳನ್ನು ಬೆಂಬಲಿಸುವ ಗ್ಲಿಫ್ ಗಳನ್ನು ಅಳವಡಿಸಲಾಗಿಲ್ಲ. ಹೆಚ್ಚುವರಿ ಫಾಂಟುಗಳನ್ನು ಸೇರಿಸುವ ಅನುಮತಿ ಇಲ್ಲದಿರುವುದರಿಂದ ಈ ಭಾಷೆಗಳನ್ನು ಸಂಪೂರ್ಣ ಬೆಂಬಲಿಸುವ ಜವಾಬ್ದಾರಿ OEMಗಳ ಮೇಲೆ ಬೀಳುತ್ತದೆ. ಹೀಗಾಗಿಯೇ ಜೆಲ್ಲಿ ಬೀನ್ ಆವೃತ್ತಿ ಇರುವ ಸ್ಯಾಮ್ ಸಂಗ್ ಫೋನ್ ಗಳಲ್ಲಿ ಭಾರತೀಯ ಭಾಷೆಗಳು ಚೆನ್ನಾಗಿ ಮೂಡುತ್ತವೆಯಾದರೂ ಇದೇ ಆವೃತ್ತಿಯನ್ನು ಹೊಂದಿರುವ ಎಲ್.ಜಿ ಮೊಬೈಲುಗಳಲ್ಲಿ ಕನ್ನಡ ಮೂಡುವುದಿಲ್ಲ.

ಸ್ಯಾಮ್ ಸಂಗ್ ತಾನು ಭಾರತದಲ್ಲಿ ಮಾರುವ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲಷ್ಟೇ ಭಾರತೀಯ ಭಾಷೆಗಳ ಫಾಂಟುಗಳನ್ನು ಸೇರಿಸುವುದರಿಂದ ಬೇರೆ ದೇಶಗಳಲ್ಲಿ ಕೊಂಡ ಮೊಬೈಲ್, ಟ್ಯಾಬ್ಲೆಟುಗಳಲ್ಲಿ ಕನ್ನಡ ಬೆಂಬಲ ಇರುವುದಿಲ್ಲ.

(ಈ ಚಿತ್ರದಲ್ಲಿ ಅಕ್ಷರಗಳ ಜಾಗದಲ್ಲಿ ಡಬ್ಬಿಗಳು ಕಾಣದಿದ್ದರೂ ಕನ್ನಡದ ಅಕ್ಷರಗಳನ್ನು ಬೆಂಬಲಿಸುವ ಗ್ಲಿಫ್ ಗಳು ಫಾಂಟಿನಲ್ಲಿ ಇಲ್ಲದ ಕಾರಣ ಕನ್ನಡ ಕಾಣುತ್ತಿಲ್ಲ. ಆದರೆ ‘.’ (ಪೂರ್ಣ ವಿರಾಮ) ಕಾಣುತ್ತಿದೆ :) )

ನಿಮ್ಮ ಮೊಬೈಲ್ ತಯಾರಕ ಕನ್ನಡ ಬೆಂಬಲಿಸುವ ಫಾಂಟ್ ಅಳವಡಿಸಿರದಿದ್ದರೆ ಜೆಲ್ಲಿ ಬೀನ್ ಆವೃತ್ತಿಯಲ್ಲೂ ಕನ್ನಡ ಕಾಣುವುದಿಲ್ಲ. ಈಗ ಒಂದು ವೇಳೆ ನಿಮ್ಮ ಮೊಬೈಲನ್ನು ರೂಟ್ ಮಾಡಿ ಕನ್ನಡವನ್ನು ಬೆಂಬಲಿಸುವ ಫಾಂಟ್ (ಉದಾಹರಣೆಗೆ ಲೋಹಿತ್ ಕನ್ನಡ, ಕೇದಗೆ) ಅಳವಡಿಸಿದರೆ ನಿಮ್ಮ ಮೊಬೈಲಿನಲ್ಲಿ ಕನ್ನಡ ಚೆಂದವಾಗಿ ಮೂಡುತ್ತದೆ.

ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡವನ್ನು ಅಳವಡಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಒಪೆರಾ ಉಪಾಯ
ಅಕ್ಷರಗಳನ್ನು ಫಾಂಟುಗಳ ಮೂಲಕ ಪರದೆಯ ಮೇಲೆ ಬರೆಯುವ ವಿಧಾನವನ್ನೇ ಕೈ ಬಿಟ್ಟು ಅಕ್ಷರಗಳನ್ನು, ಪದಗಳನ್ನು, ಒಟ್ಟಾರೆಯಾಗಿ ಇಡೀ ವೆಬ್ ಪೇಜನ್ನು ಒಂದು ಫೋಟೊ ಇಲ್ಲವೇ ಸ್ಕ್ಯಾನ್ ಮಾಡಿದ ಹಾಳೆಯಾಗಿ ಪರಿಗಣಿಸಿ ಅದನ್ನು ಹಾಗೆಯೇ ಪರದೆಯ ಮೇಲೆ ಮೂಡಿಸುವ ವಿಧಾನವನ್ನು ಒಪೆರಾ ಸಂಸ್ಥೆಯ ಮೊಬೈಲ್ ಬ್ರೌಸರ್ ಮಾಡುತ್ತದೆ [1].

ಒಪೆರಾ ಮೊಬೈಲ್ ಬ್ರೌಸರಿನಲ್ಲಿ ನೀವು ತೆರೆಯುವ ವೆಬ್ ಪುಟ ಒಪೆರಾದ ಸರ್ವರಿನಲ್ಲಿ ಹಾದು ಬಿಟ್ ಮ್ಯಾಪ್ ರೂಪದಲ್ಲಿ ನಿಮ್ಮ ಮೊಬೈಲಿಗೆ ಬರುವುದರಿಂದ ಕನ್ನಡವಿರಲಿ ಯಾವುದೇ ಭಾಷೆಯ ವೆಬ್ ಪುಟವನ್ನಾದರೂ ನೀವು ಈ ಬ್ರೌಸರಿನಲ್ಲಿ ಓದಬಹುದು. ಆದರೆ ಇದರಲ್ಲಿ ನೀವು ಪಠ್ಯವನ್ನು ಕಾಪಿ ಮಾಡಲು ಬರುವುದಿಲ್ಲ. ಮುದ್ರಿತ ದಿನ ಪತ್ರಿಕೆಯನ್ನು ಓದಿದಂತೆ ನೀವು ಕನ್ನಡದ ಪುಟಗಳನ್ನು ಓದಬಹುದು.

ಆಸ್ಕೀ ಶರಣಂ ಗಚ್ಚಾಮಿ
ಯುನಿಕೋಡ್ ಫಾಂಟಿನಲ್ಲಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಸಂಯುಕ್ತ ಅಕ್ಷರಗ ಜೋಡಣೆಯ ಬೆಂಬಲ ಇಲ್ಲದಿದ್ದಾಗ ಆಸ್ಕೀ ಎನ್ಕೋಡಿಂಗ್ ಬಳಸಿ ಕನ್ನಡದ ಪಠ್ಯವನ್ನು ತೋರುವ ಪ್ರಯತ್ನಗಳು ನಡೆದವು. ಬರಹ, ನುಡಿ ತಂತ್ರಾಂಶಗಳು ತಮ್ಮ ಪ್ರಾರಂಭದ ಹಂತದಲ್ಲಿ ಆಸ್ಕೀ ಎನ್ಕೋಡಿಂಗ್ ಹಾಗೂ ಆಸ್ಕೀ ಕನ್ನಡ ಫಾಂಟುಗಳನ್ನು ಬಳಸಿದಂತೆ ಕೆಲವು ಆಂಡ್ರಾಯ್ಡ್ ಅಪ್ಲಿಕೇಶನ್ ಗಳು ಆಸ್ಕೀ ಎನ್ಕೋಡಿಂಗ್ ಹಾಗೂ ಆಸ್ಕೀ ಕನ್ನಡ ಫಾಂಟುಗಳನ್ನು ಬಳಸಿಕೊಂಡು ಕನ್ನಡ ಪಠ್ಯವನ್ನು ಬೆಂಬಲಿಸಿದವು. ಉದಾಹರಣೆಗೆ, ಹಂಸನಾದ ಆಂಡ್ರಾಯ್ಡ್ ಅಪ್ಲಿಕೇಶನ್ [2](ಡಿಸ್ ಕ್ಲೇಮರ್:‌ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವಲ್ಲಿ ಈ ಪ್ರಬಂಧದ ಲೇಖಕ ಕೆಲಸ ಮಾಡಿರುತ್ತಾನೆ. ), ಕನ್ನಡದಲ್ಲಿ ಭಗವದ್ಗೀತೆ [3].

ಇರೋ ಟೈರಿಗೆ ಹವಾ ತುಂಬು
ಆಂಡ್ರಾಯ್ಡ್ ತನ್ನ ಸ್ಕಿಯಾ ರೆಂಡರಿಂಗ್ ಇಂಜಿನ್ನಿನಲ್ಲಿ ಸಂಯುಕ್ತ ಅಕ್ಷರ ಜೋಡಣೆಯ ಬೆಂಬಲವನ್ನು ಎಂದು ನೀಡುವುದೋ ಎನ್ನುವುದು ನಿಖರವಾಗಿ ತಿಳಿಯದಿದ್ದ ಸಮಯದಲ್ಲಿ ಅದಾಗಲೇ ಲಿನಕ್ಸಿನಲ್ಲಿ ಕನ್ನಡ ಹಾಗೂ ಇತರೆ ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಬಳಸಲಾಗುತ್ತಿದ್ದ ಹಾರ್ಫ್ ಬಜ್ ರೆಂಡರಿಂಗ್ ಇಂಜಿನ್ ನ್ನು ಆಂಡ್ರಾಯ್ಡಿಗೆ ಪೋರ್ಟ್ ಮಾಡುವ ಪ್ರಯತ್ನಗಳು ನಡೆದವು.

ಐಐಎಸ್ಸಿ(Indian Insititute of Science)ಯ ಶಿವಕುಮಾರ್ ಎಚ್. ಆರ್ ಹಾರ್ಫ್ ಬಜ್-ಎನ್.ಜಿ ಲೈಬ್ರರಿಯನ್ನು ಆಂಡ್ರಾಯ್ಡಿಗೆ ಪೋರ್ಟ್ ಮಾಡಿ, ಅದರಲ್ಲಿ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಅಳವಡಿಸುವಲ್ಲಿ ಯಶಸ್ವಿಯಾದರು. ತಮ್ಮ ಪ್ರಾಜೆಕ್ಟನ್ನು [4] ಓಪನ್ ಸೋರ್ಸ್ ಮಾಡುವ ಮೂಲಕ ಅದು ಮುಕ್ತವಾಗಿ ಇತರ ಡೆವಲಪರ್ ಗಳಿಗೆ ಲಭ್ಯವಾಗುವಂತೆ ಮಾಡಿದರು. ಆದರೆ ಈ ಲೈಬರಿ ಅಪ್ಲಿಕೇಶನ್ ಹಂತದಲ್ಲಷ್ಟೇ ಬಳಸಲು ಸಾಧ್ಯವಿದೆಯಾದ್ದರಿಂದ ಇಡೀ ಫೋನಿಗೆ ಕನ್ನಡ ಬೆಂಬಲ ಒದಗಿಸಲು ಇದರಿಂದ ಸಾಧ್ಯವಿಲ್ಲ.

ಆಪಲ್ ಐ-ಓಸ್ ನಲ್ಲಿ ಕನ್ನಡದ ಕಲರವ
ಆಪಲ್ ಕಂಪನಿಯಯವರ ಮೊಬೈಲ್(ಐಫೋನ್) ಮತ್ತು ಟ್ಯಾಬ್ಲೆಟ್(ಐಪ್ಯಾಡ್) ಗಳಲ್ಲಿ ಇರುವ ಐ-ಓಸ್ ನಲ್ಲಿ ಕನ್ನಡದ ರೆಂಡರಿಂಗ್ ತುಂಬಾನೇ ಚೆನ್ನಾಗಿದೆ. ಜೂನ್ ೨೦೧೦ ರಲ್ಲಿ ಬಿಡುಗಡೆಯಾದ ಐ-ಓಸ್ ನ ೪ನೇ ಆವೃತ್ತಿಯಲ್ಲಿ, ಪೂರ್ಣ ಪ್ರಮಾಣದ ಕನ್ನಡ ಯೂನಿಕೋಡ್ ಅನ್ನು ಆಪಲ್ ತನ್ನ ಮೊಬೈಲುಗಳಲ್ಲಿ ಅಳವಡಿಸಿದೆ.

ಈ ಹಿಂದೆ ಹೇಳಿದಂತೆ ಆಪಲ್ ತನ್ನೆಲ್ಲಾ ಡಿವೈಸುಗಳಿಗೆ ತಾನೇ ಕಾರ್ಯಚರಣೆ ವ್ಯವಸ್ಥೆಯನ್ನು ಬಿಡುಗಡೆ ಮಾಡುವುದರಿಂದ ಬಳಕೆದಾರರು ಹೊಸ ಆವೃತ್ತಿಗಳಿಗೆ ಬಲು ಬೇಗನೆ ಅಪ್ ಗ್ರೇಡ್ ಆಗಬಹುದು.

ಹಾಗಾಗಿ, ಕಡತಗಳಿರಲಿ, ಅಥವಾ ಹಾಡುಗಳ ಫೈಲ್ ಹೆಸರಿನಲ್ಲಿರುವ ಕನ್ನಡದ ಅಕ್ಷರಗಳಿರಲಿ, ತುಂಬಾನೇ ಚೆನ್ನಾಗಿ ಕಾಣಿಸುತ್ತವೆ.

ವಿಂಡೋಸ್ ೮ ರಲ್ಲಿ ಕನ್ನಡ
ಮೊಬೈಲ್ ಕ್ಷೇತ್ರದಲ್ಲಿ ಕಳೆದುಕೊಂಡ ತನ್ನ ಛಾಪನ್ನು ಮೂಡಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಮೈಕ್ರೋಸಾಫ್ಟಿನವರು ಡೆಸ್ಕಟಾಪ್ ಮತ್ತು ಟ್ಯಾಬ್ಲೆಟ್ಟುಗಳಿಗೆ ವಿಂಡೋಸ್ ೮ ಮತ್ತು ಮೊಬೈಲ್ ಫೋನುಗಳಿಗೆ ವಿಂಡೋಸ್ ಫೋನ್ ೮ ಬಿಡುಗಡೆ ಮಾಡಿದ್ದಾರೆ. ಸಂತಸದ ಸುದ್ದಿಯೆಂದರೆ, ವಿಂಡೋಸ್ ೮ ರಲ್ಲಿ ಕನ್ನಡದ ಅಳವಡಿಕೆ ಪೂರ್ಣ ಪ್ರಮಾಣದಲ್ಲಿದೆ. ಅಂದರೆ, ನೀವು ಕನ್ನಡದಲ್ಲಿ ಓದಲೂ ಬಹುದು, ಬರೆಯಲೂ ಬಹುದು. ಮೈಕ್ರೋಸಾಫ್ಟಿನವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ವಿಂಡೋಸ್ ೮ರಲ್ಲಿ ಸಣ್ಣ ಪ್ರಮಾಣ ಕನ್ನಡದ ಹೊದಿಕೆಯನ್ನೂ ಕೂಡ ನೀಡಿದ್ದಾರೆ. ಆದರೆ, ವಿಂಡೋಸ್ ಫೋನ್ ೮ ರಲ್ಲಿ ಕನ್ನಡವನ್ನು ಓದುವುದಕ್ಕೆ ಮಾತ್ರವೇ ಸಾಧ್ಯವಿದೆ. ಕನ್ನಡದಲ್ಲಿ ಬರೆಯುವ ಸೌಲಭ್ಯವನ್ನು ಇನ್ನೂ ಅಳವಡಿಸಲಾಗಿಲ್ಲ.

ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ
ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಓದಲು ಸಾಧ್ಯವಾದರಷ್ಟೇ ಸಾಕೇ? ಕನ್ನಡ ಟೈಪ್ ಮಾಡಲು ಸಾಧ್ಯವಾಗಬಾರದೇ? ಕನ್ನಡದಲ್ಲಿ ಟ್ವೀಟ್ ಮಾಡಲು, ಫೇಸ್ ಬುಕ್ ಸ್ಟೇಟಸ್ ಅಪ್ ಡೇಟ್ ಮಾಡಲು, ಇ ಮೇಲ್ ಗೆ ಉತ್ತರಿಸಲು ಸಾಧ್ಯವಾಗಬೇಕಲ್ಲವೇ?
ಯುನಿಕೋಡ್ ಕನ್ನಡ ಸ್ಮಾರ್ಟ್ ಫೋನಿನಲ್ಲಿ ಸರಿಯಾಗಿ ಮೂಡುವುದಕ್ಕೆ ಸಾಧ್ಯವಾದಾಗ ಬಳಕೆದಾರರು ಕನ್ನಡದಲ್ಲಿ ಟೈಪ್ ಮಾಡಲು ನೆರವಾಗುವ ತಂತ್ರಾಂಶಗಳಿಗಾಗಿ ಶೋಧಿಸ ತೊಡಗಿದರು. ಎನಿಸಾಫ್ಟ್ ಎಂಬ ಸಾಫ್ಟ್ ಕಿಬೋರ್ಡ್ ಅಪ್ಲಿಕೇಶನ್ನಿಗೆ ಕನ್ನಡ ಪ್ಲಗಿನ್ [5],ಸ್ಪರ್ಶ್ ಕೀಬೋರ್ಡ್[6] , ಪಾಣಿನಿ ಕೀಬೋರ್ಡ್ [7], ಅಡಾಪ್ಟ್ ಟೆಕ್ಸ್ಟ್ ಟ್ಯಾಬ್ಲೆಟ್ ಕೀಬೋರ್ಡ್ [8](ಇದರಲ್ಲಿ ಡಿಕ್ಷನರಿ ಹಾಗೂ ಸಜೆಶನ್ ಸೌಕರ್ಯಗಳಿವೆ) ಗಳು ಗೂಗಲ್ ಪ್ಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಐ ಓಎಸ್ ನಲ್ಲಿ ಕನ್ನಡ ಅಕ್ಷರಗಳು ಚೆಂದವಾಗಿ ಮೂಡುತ್ತವೆಯಾದರೂಯೂ, ಇಡೀ ಫೋನಿನಲ್ಲಿ ಕನ್ನಡದಲ್ಲಿಯೇ ನೇರವಾಗಿ ಟೈಪ್ ಮಾಡುವ ಸೌಲಭ್ಯವನ್ನು ಇಲ್ಲಿಯವರೆಗೂ ನೀಡಿಲ್ಲ. ಆದರೆ, ಕನ್ನಡದಲ್ಲಿ ಟೈಪ್ ಮಾಡಲು ಅನುಕೂಲ ಮಾಡಿಕೊಡುವಂತಹ ಅಪ್ಲಿಕೇಶನ್(ಆಪ್)ಗಳು ಆಪಲ್-ಸ್ಟೋರಿನಲ್ಲಿ ಲಭ್ಯವಿದೆ.
ಉದಾ:- Kannada for iPhone [9], iTransliterate for iPhone [10].

ವಿಂಡೋಸ್ ಫೋನ್ ೮ರಲ್ಲಿ, ಆಪಲ್ ಐ-ಓಸ್ ನಲ್ಲಿರುವಂತೆ, ಕನ್ನಡದ ರೆಂಡರಿಂಗ್ ಮಾತ್ರವೇ ಲಭ್ಯವಿದೆ. ಅಂದರೆ, ಕನ್ನಡದ ಪಠ್ಯವನ್ನು ಓದಲು ಮಾತ್ರವೇ ಸಾಧ್ಯವಿದೆ. ಆದರೆ ಬರೆಯಲು ಸಾಧ್ಯವಾಗಿಸುವಂತಹ ಸರಳ ಸಾಧನಗಳು ಇನ್ನೂ ಬಂದಿಲ್ಲ.

ಮುಂದಿನ ದಾರಿ
ಸ್ಮಾರ್ಟ್ ಫೋನ್ ಗಳು ಹಾಗೂ ಟ್ಯಾಬ್ಲೆಟುಗಳು ಮುಂದಿನ ಹಲವು ವರ್ಷಗಳನ್ನು ಆಳುವುದಂತೂ ಸತ್ಯ. ಡೆಸ್ಕ್ ಟಾಪ್, ಲ್ಯಾಪ್ ಟಾಪುಗಳಂತೆ ಇವುಗಳ ಬಳಕೆ ಸೀಮಿತವಾದುದಲ್ಲ. ದಿನದ ಬಹು ಸಮಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕಳೆಯುವ ಇಂದಿನ ಜನ ಸಮೂಹಕ್ಕೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಗಳು ಜೇಬಿನಲ್ಲಿರುವ ಪರ್ಸಿನಷ್ಟೇ ಅನಿವಾರ್ಯವಾಗುವುದು ನಿಶ್ಚಿತ.

ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡದ ಅಳವಡಿಕೆ ಎನ್ನುವುದು ಕೇವಲ ಕನ್ನಡ ಓದಲಿಕ್ಕೆ ಹಾಗೂ ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ ಬೆಂಬಲ ನೀಡುವುದಕ್ಕೆ ಸೀಮಿತವಾಗಬಾರದು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೆ ಪ್ರತ್ಯೇಕ ಲೊಕೇಲ್ ಗಳ ಬೆಂಬಲ ಲಭ್ಯವಾಗಬೇಕು. ನಮ್ಮ ಫೋನ್ ಬುಕ್ಕಿನಲ್ಲಿ ಕನ್ನಡದಲ್ಲಿರುವ ಹೆಸರುಗಳನ್ನು ಅಕಾರಾದಿಯಾಗಿ ಪಟ್ಟಿ ಮಾಡುವುದಕ್ಕೆ ಸಾಧ್ಯವಾಗಬೇಕು, ದಿನಾಂಕಗಳನ್ನು, ಸಮಯವನ್ನು ನಮ್ಮ ಭಾಷೆಯಲ್ಲಿ ಪಡೆಯುವಂತಾಗಬೇಕು, ಕಿಬೋರ್ಡ್ ಗಳಲ್ಲಿ ಕನ್ನಡದ ಪದಗಳಿಗೆ ಸಜೆಶನ್ ಬರಬೇಕು, ಸ್ಪೆಲ್ ಚೆಕರ್ ಕನ್ನಡದಲ್ಲಿ ಲಭ್ಯವಾಗಬೇಕು. ಹತ್ತು ಹಲವು ಹೋರಾಟಗಳಿಂದ ಡೆಸ್ಕ್ ಟಾಪ್ ಗಳಲ್ಲಿ ಸಾಧ್ಯವಾಗಿರುವ ಕನ್ನಡದ ಅಳವಡಿಕೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲಿ ಲಭ್ಯವಾಗಬೇಕು.

ಇದಕ್ಕೆ ಮೊಬೈಲ್ ಕಾರ್ಯಚರಣೆ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಗಳು, OEMಗಳ ಮೇಲೆ ಒತ್ತಡ ಹೇರುವುದನ್ನು ಬಿಟ್ಟರೆ ಬೇರೆ ಸುಲಭದ ಮಾರ್ಗಗಳಿಲ್ಲ. ಭಾರತದಂತಹ ಮೊಬೈಲ್ ಸ್ನೇಹಿ ದೇಶದ ಗ್ರಾಹಕರನ್ನು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಸ್ಯಾಮ್ ಸಂಗ್ ನಂತಹ ಕಂಪೆನಿಗಳು ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಹೆಚ್ಚಿನ ಮುತುವರ್ಜಿ ತೋರುತ್ತಿವೆ. ಇದೇ ಮನಸ್ಥಿತಿ ಮುಂದುವರೆದರೆ ಈ ವರ್ಷದ ಸ್ವಾತಂತ್ರ ದಿನಾಚರಣೆಯ ವೇಳೆಗೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ಗಳಲ್ಲಿ ಕನ್ನಡದ ಅಳವಡಿಕೆ ಬಹುಮಟ್ಟಿಗೆ ಯಶಸ್ವಿಯಾಗಬಹುದು.

(ಐಓಎಸ್, ವಿಂಡೋಸ್ ೮ ಕುರಿತು ಮಾಹಿತಿ ಒದಗಿಸಿದ ಸುನಿಲ್ ಜಯಪ್ರಕಾಶರಿಗೆ ಧನ್ಯವಾದಗಳು.)

ಬಾಹ್ಯಕೊಂಡಿಗಳು

1. ಒಪೆರಾ ಮಿನಿ ಬ್ರೌಸರ್ ನಲ್ಲಿ ಕನ್ನಡ
http://veerasundar.com/blog/2010/08/regional-font-support-in-opera-mini/

2. ಹಂಸನಾದ ಆಂಡ್ರಾಯ್ಡ್ ಅಪ್ಲಿಕೇಶನ್
(ಡಿಸ್ ಕ್ಲೇಮರ್:‌ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವಲ್ಲಿ ಈ ಪ್ರಬಂಧದ ಲೇಖಕ ಕೆಲಸ ಮಾಡಿರುತ್ತಾನೆ. ) https://play.google.com/store/apps/details?id=com.saaranga.hamsanaadatest&feature=search_result#?t=W251bGwsMSwyLDEsImNvbS5zYWFyYW5nYS5oYW1zYW5hYWRhdGVzdCJd

3. ಕನ್ನಡದಲ್ಲಿ ಭಗವದ್ಗೀತೆ
https://play.google.com/store/apps/details?id=com.utl.bhagavadgita&feature=search_result#?t=W251bGwsMSwxLDEsImNvbS51dGwuYmhhZ2F2YWRnaXRhIl0

4. Indic text renderer
https://code.google.com/p/indic-text-renderer/

5. ಎನಿ ಸಾಫ್ಟ್ ಕೀಬೋರ್ಡ್ ಕನ್ನಡ ಪ್ಲಗಿನ್
https://play.google.com/store/apps/details?id=com.anysoftkeyboard.sriandroid.kannada&feature=search_result

6. ಸ್ಪರ್ಶ್ ಕೀಬೋರ್ಡ್
https://play.google.com/store/apps/details?id=com.sparsh.inputmethod&feature=search_result

7. ಪಾಣಿನಿ ಕೀಬೋರ್ಡ್
https://play.google.com/store/apps/details?id=com.paninikeypad.kannada&feature=search_result

8. ಅಡಾಪ್ಟೆಕ್ಸ್ಟ್ ಟ್ಯಾಬ್ಲೆಟ್ ಕೀಬೋರ್ಡ್
https://play.google.com/store/apps/details?id=com.kpt.adaptxt.tablet.beta&feature=search_result#?t=W251bGwsMSwxLDEsImNvbS5rcHQuYWRhcHR4dC50YWJsZXQuYmV0YSJd

9. Kannada for iphone
https://itunes.apple.com/us/app/kannada-for-iphone/id419341024?mt=8

10. Transliterate for iphone
https://itunes.apple.com/in/app/itransliterate/id324679389?mt=8

ಲೇಖಕ: ಸುಪ್ರೀತ್.ಕೆ.ಎಸ್

ಬೆಂಗಳೂರಿನ ಕಂಪೆನಿಯೊಂದರಲ್ಲಿ ಮೊಬೈಲ್ ಅಪ್ಲಿಕೇಶನ್ ಡೆವಲಪರ್. ಕನ್ನಡ ಸಾಹಿತ್ಯ, ಜಾಗತಿಕ ಸಿನೆಮ, ವಿಜ್ಞಾನ ಬರವಣಿಗೆ, ಕನ್ನಡ ತಂತ್ರಾಂಶ ಅಭಿವೃದ್ಧಿ ಇವು ಆಸಕ್ತಿಯ ಕ್ಷೇತ್ರಗಳು. ಕಾಲೇಜಿನಲ್ಲಿರುವಾಗ ಮಾಸಪತ್ರಿಕೆಯೊಂದನ್ನು ಎರಡು ವರ್ಷಗಳವರೆಗೆ ಸಂಪಾದಿಸಿದ, ಕಿರು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡ ಅನುಭವಗಳಿವೆ.

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೨ – ತೆರೆದುಕೊಂಡಷ್ಟು ಆಗಸ!

ಪ್ರಕಟಿಸಿದ್ದು ದಿನಾಂಕ Jan 3, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ವಿಜ್ಞಾನವೆಂಬುದು ಆಗಸವಿದ್ದಂತೆ! ನಾವುಗಳು ಮುಚ್ಚಿದ ಮನೆಯೊಳಿದ್ದುಕೊಂಡು ಪುಟಾಣಿ ಕಿಟಕಿ ತೆಗೆದು ಬೈನಾಕ್ಯುಲರ್‌ನಿಂದ ಇಣುಕಿದರೆ ಒಂದಷ್ಟು ಆಗಸ ಕಾಣಿಸತ್ತೆ, ಬಾಗಿಲು ತೆರೆದು ಹೊರಬಂದು ನೋಡಿದರೆ ಕಣ್ಣಿಗೆಟುಕುವಷ್ಟು ಆಗಸ!. ನಾವು ಜ್ಞಾನದ ಕಡೆ ತೆರೆದುಕೊಂಡಷ್ಟು ನಮ್ಮ ಅರಿವು, ಅನುಭವ ಹೆಚ್ಚುತ್ತಾ ನಮ್ಮ ಆಲೋಚನಾ ಕ್ರಮವೂ ಬದಲಾಗತ್ತೆ. ನಮ್ಮ ಹೆಣ್ಣುಮಕ್ಕಳ ಮನೆಯೊಳಗೆ ಮತ್ತು ಮನದೊಳಗೆ ಒಮ್ಮೆ ಇಣುಕಿ ನೋಡಿದರೆ ಕಲೆ ಮತ್ತು ಸಂಸ್ಕೃತಿಗೆ ಸುಮಾರು ಜಾಗಕೊಟ್ಟಿದ್ದೇವೆ ಆದ್ರೆ ವಿಜ್ಞಾನವನ್ನ ಪುಸ್ತಕಕ್ಕೆ ಅಷ್ಟೇ ಸೀಮಿತವಾಗಿಸಿದ್ದೇವೆ ಏಕೆ?

ವಿಜ್ಞಾನ ತಂತ್ರಜ್ಞಾನ ಅನ್ನೋ ಪದಗಳಿಗೆ ನಾವು, ಹೆಣ್ಮಕ್ಕಳು ಹೇಗೆ ಸ್ಪಂದಿಸ್ತೇವೆ ನೋಡೋಣ. ನಮ್ಮಜ್ಜಿಗೆ ವಿಜ್ಞಾನ/ತಂತ್ರಜ್ಞಾನ ಅಂದ್ರೇನು ಅಂತ ಕೇಳಿದ್ರೆ ಅವರ ಉತ್ತರ …ಮನೆಯಲ್ಲಿನ ಯಾಂತ್ರಿಕ ವಸ್ತುಗಳು ಸರಿಯಾಗಿ ಕೆಲಸ ಮಾಡ್ತಿವೆಯಾ? ರೇಡಿಯೋದಲ್ಲಿ ಬರೋ ವಾರ್ತೆ,ಹಾಡು, ಕೃಷಿ ಸಮಾಚಾರಗಳು ಸರಿಯಾಗಿ ಕೇಳಿಸ್ತಿದೆಯಾ ಇಲ್ವಾ, ಹೊಲದಲ್ಲಿನ ನೀರಿನ ಮೋಟಾರು ಪಂಪು, ರಾಸಾಯನಿಕ ಗೊಬ್ಬರ, ಮೇವು ಕಟಾವು ಮಾಡೋ ಯಂತ್ರ, ಟ್ರಾಕ್ಟರ್ರು, ಸ್ಟಾಂಡಿಂಗ್ ಫ್ಯಾನ್ ಇವೆಲ್ಲಾ ಸರಿಯಾಗಿ ಕೆಲಸ ಮಾಡ್ತಾ ಇದ್ದಾವೋ ಇಲ್ವಾ ಅನ್ನೋದಕ್ಕಷ್ಟೇ ಸೀಮಿತ. ಅಮ್ಮನ ದುನಿಯಾದಲ್ಲೊಮ್ಮೆ ಇಣುಕಿದರೆ ಇನ್ನಷ್ಟು ಸಾಧನಗಳು ಗೀಸರ್,ಫಿಲ್ಟರ್, ಟೇಪ್ರೆಕಾರ್ಡರ್, ಗ್ರೈಂಡರ್, ಫ್ರಿಜ್, ಗ್ಯಾಸ್ಟವ್, ಕುಕ್ಕರ್, ಟಿವಿ…

ಈಗಿನ ದುಡಿಯೋ ಹೆಣ್ಮಕ್ಕಳ ನಮ್ಮ ಬದುಕಿನ ತುಂಬೆಲ್ಲಾ ಸಿಕ್ಕಾಪಟ್ಟೆ ಸಾಧನಗಳು. ವಿಜ್ಞಾನ, ತಂತ್ರಜ್ಞಾನದ ಕೊಡುಗೆಗಳು!. ಓವೆನ್,ವಾಷಿಂಗ್ ಮೆಷಿನ್, ಮಿಕ್ಸರ್, ಕಂಪ್ಯೂಟರ್,ಲ್ಯಾಪ್ಟಾಪ್,ಟ್ಯಾಬ್,ನೋಟ್,ಟಚ್ ಸ್ಕ್ರೀನ ಫೋನ್,ಎಂಪಿತ್ರಿ, ಇಂಟರ್ನೆಟ್ಟು,ನಡೆದಾಡಿದಲ್ಲೆಲ್ಲಾ ಕಡೆಯಿರುವ ವೈಫೈ, ಬ್ಲೂಟೂತು, ಆನ್ಲೈನ್ ಬ್ಯಾಂಕಿಂಗು/ಶ್ಯಾಪಿಂಗು, ಎಸಿ, ಕಾರು, ಡೆಬಿಟ್ಟು ಕ್ರೆಡಿಟ್ಟು ಕಾರ್ಡುಗಳು…….ಕೊನೆಯಿಲ್ಲದಷ್ಟಿವೆ. ಇವಿಷ್ಟೊಂದ್ರಲ್ಲಿ ಯಾವ್ದಾದ್ರೂ ಒಂದು ಸಾಧನ ಕೆಲಸ ಮಾಡೋಕೆ ನಿಲ್ಸಿದ್ರೆ ಜೀವನವೇ ಏರುಪೇರಾಗತ್ತೆ. ಅಷ್ಟೊಂದು ಅವಲಂಬಿತ ಬದುಕನ್ನ ಬದುಕುತ್ತಿರುವ ನಮಗೆ “ಮಹಿಳೆ- ವಿಜ್ಞಾನ, ತಂತ್ರಜ್ಞಾನ”ದ ಬಗ್ಗೆ ಯಾರಾದ್ರೂ ಮಾತಾಡ್ಸಿದ್ರೆ ನಮಗೂ ಅದಕ್ಕೂ ಏನೂ ಸಂಭಂದ ಇಲ್ವೇನೋ ಅನ್ನೋ ಹಾಗೆ ಯಾಕೆ ಬಿಹೇವಿಸ್ತೇವೆ? ಅನ್ನೋದು ನನಗೆ ಅತ್ಯಂತ ಕಾಡಿದ ಪ್ರಶ್ನೆ!

ಉತ್ತರವೂ ಹೊಸದೇನಲ್ಲ! ಹೆಣ್ಮಕ್ಕಳಿಗೆ ಮನೆ ಅಡುಗೆಮನೆಗಷ್ಟೇ ಸೀಮಿತಗೊಳಿಸಿದ್ದ ಬದುಕು! ಅದರಾಚೆಗಿನ ವಿಸ್ತಾರ ಜಗದತ್ತ ಇಣುಕಿ ನೋಡಿ ಹೊರ ಬಂದು ಕಲಿತು ಸಾಧಿಸಲು ಸಾಧ್ಯವಾದದ್ದು ಕಳೆದ ಶತಮಾನದ ಮಧ್ಯದಿಂದಷ್ಟೇ. ಈಗ ಕಲಿತು ಸ್ವಾವಲಂಬಿಯಾಗಿ ದುಡಿಯೋದು ತೀರಾ ನಮ್ಮ ಅವಶ್ಯಕತೆಗಳಿಗೆ ಸೀಮಿತವಾಗಿದೆ ಉದಾ: ಬ್ಯಾಂಕಲ್ಲಿ ತೆಗೆದ ಸಾಲ ತೀರಿಸುವವರೆಗೆ, ಮದುವೆಯಾಗೋವರೆಗೆ, ಮಗುವಾಗೋವರೆಗೆ, ಮನೆ ಕಟ್ಟೋವರೆಗೆ….ಹೀಗೆ ಸುಮಾರು ಹೆಣ್ಮಕ್ಕಳು ಕೆಲಸಕ್ಕೋಗುವ ಕಾರಣಗಳು ಹೀಗೇ ಇವೆ. ಪುರುಷರು ಕಟ್ಟಿಕೊಳ್ಳುವಷ್ಟು ಭದ್ರವಾಗಿ ಮಹಿಳೆಯರ ವೃತ್ತಿಜೀವನ ಇರಲ್ಲ. ಹಾಗಾಗಿ ವಿಜ್ಞಾನ/ತಂತ್ರಜ್ಞಾನದ ಜಗತ್ತಿನಲ್ಲಿ ಪುರುಷರು ಮಹಿಳೆಯರ ನಡುವಿನಲ್ಲಿ ಮೈಲುಗಳಷ್ಟು ಅಂತರವಿದೆ. ವಿಜ್ಞಾನ/ತಂತ್ರಜ್ಞಾನದ ಜಗತ್ತಿನಲ್ಲಿ ನೆಲೆ ನಿಂತು ಸಾಧಿಸಲು ಪುರುಷರಿಗೆ ಸಾಧ್ಯವಾದಷ್ಟು ಸಲೀಸು ಮಹಿಳೆಯರಿಗಾಗಬೇಕಾಗಿದೆ.
ಶಾಲೆ/ಕಾಲೇಜಲ್ಲಿ ಅದೆಷ್ಟೊಂದು ಕುತೂಹಲದಿಂದ ಕಲಿತ ವಿಜ್ಞಾನದ ವಿಷಯಗಳು…..ಪಾಶ್ಚರಿಕರಣ, ದ್ಯುತಿ ಸಂಶ್ಲೇಷಣಕ್ರಿಯೆ, ಬೆಳಕಿನ ವಕ್ರೀಭವನ, ಸಸ್ಯ ಪ್ರಾಣಿ ಪ್ರಭೇದಗಳು, ದೇಹ ರಚನೆ, ಪರಿಸರ, ನ್ಯೂಟನ್ನನ ನಿಯಮಗಳು, ಕಿರ್ಚಾಫ್ ಲಾಗಳು. ಎಲ್ಲವೂ ಕೇವಲ ಪುಸ್ತಕಕ್ಕಷ್ಟೇ ಸೀಮಿತಗೊಳಿಸ್ತೇವೇಕೆ? ಓದಿ ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಿದೊಡನೆ ಈ ಕಲಿಕೆಯ ಅಭಿರುಚಿ ಯಾಕೆ ನಿಂತೋಗತ್ತೆ? ಸೈನ್ಸ್ ಓದಿದವರ ಕತೆಯೇ ಹೀಗಾದ್ರೆ ಸೈನ್ಸ್ ವಿಷಯ ಕಲಿಯದವರಿಗೆ ಈ ಸ್ವಾರಸ್ಯದ ವಿಷಯಗಳು ಹೇಗೆ ತಿಳಿಯತ್ತೆ. ವಿಜ್ಞಾನ ಓದದ ನನ್ನ ಅಮ್ಮನಿಗೆ ಇವೆಲ್ಲವನ್ನ ತಿಳಿಸುವಾಸೆಯೊಂದಿಗೆ ಈ ವಿಚಾರಗಳನ್ನ ಪಟ್ಟಿ ಮಾಡಿದ್ದೇನೆ. ನೀವೂ ಕೂಡ ಒಮ್ಮೆ ನಿಮಗೇ ಕೇಳಿಕೊಳ್ಳಿ, ಉತ್ತರ ಗೊತ್ತಿದ್ರೆ ನಿಮ್ಮನೆಯಲ್ಲಿ ಉಳಿದವರಿಗೆಲ್ಲಾ ತಿಳಿಸಿ, ಗೊತ್ತಿಲ್ದಿದ್ರೆ ಮತ್ತೊಮ್ಮೆ ವಿಜ್ಞಾನ ಕಲಿಕೆಯನ್ನ ಶುರು ಮಾಡಿ ಮತ್ತು ಪುಸ್ತಕ ಓದುವ ಗೀಳನ್ನ ಬೆಳೆಸಿಕೊಳ್ಳಿ.

ವಿಜ್ಞಾನ ಮತ್ತು ತಂತ್ರಜ್ಞಾನ ಅಂದ್ರೇನು?

ಉಪ್ಪಿನಕಾಯನ್ನ ಭರಣಿಯಲ್ಲೇಕೆ ಹಾಕುತ್ತಾರೆ? ಸ್ಟೀಲ್ ಡಬ್ಬಿಯಲ್ಲಿ ಯಾಕೆ ಹಾಕಿಡೊಲ್ಲ?

ಪಿ.ಎಚ್ ಅಂದ್ರೇನು? ಆಮ್ಲ ಪ್ರತ್ಯಾಮ್ಲಗಳೆಂದ್ರೇನು? ನಾವು ಉಪಯೋಗಿಸುವ ಖಾರ ಉಪ್ಪು ಹುಳಿಯ ಅಡುಗೆ ಪದಾರ್ಥಗಳ ಪಿಎಚ್ ಎಷ್ತಿರತ್ತೆ?

ನಾವು ಉಪಯೋಗಿಸುವ ಸಾಧನಗಳು ಹೇಗೆ ಕೆಲಸ ಮಾಡ್ತವೆ? ಅವನ್ನ ಹೇಗೆ ವಿನ್ಯಾಸಗೊಳಿಸಿದ್ದಾರೆ? ಒಂದ್ವೇಳೆ ಅವು ಕೆಟ್ಟು ನಿಂತರೆ ನಮಗೆ ಸರಿಮಾಡೋಕೆ ಸಾಧ್ಯವಾ?

ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಅಮೀಬಾ, ನಮ್ಮ ದೇಹ ರಚನೆಯ ಬಗ್ಗೆ

ನಾವಿರೋ ಭೂಮಿಯ, ಆಗಸ, ಗ್ರಹ,ಉಪಗ್ರಹ, ತಾರೆ, ನಕ್ಷತ್ರ, ಅಂತರಿಕ್ಷದ, ಸೌರವ್ಯೂಹ, ,ಕಪ್ಪು ನಕ್ಷತ್ರದ ಬಗ್ಗೆ

ಕಾರ್ಬನ್ ಫೂಟ್ ಪ್ರಿಂಟ್, ಇಂಧನಗಳ ಬಗ್ಗೆ, ಆಹಾರ ಸರಪಳಿಯ ಬಗ್ಗೆ

ಅಣು, ಪರಮಾಣು, ಮೂಲ ಧಾತುಗಳ ಕೋಷ್ಟಕದ ಬಗ್ಗೆ

ನಿಸರ್ಗದಲ್ಲಿ ಬದಲಾಗುವ ಕಾಲಗಳ ಬಗ್ಗೆ

ರಸಾಯನಶಾಸ್ತ್ರದ ಕ್ರಿಯೆ ಪ್ರತಿಕ್ರಿಯೆಗಳು

ಗುರುತ್ವಾಕರ್ಷಣೆಯ ಬಗ್ಗೆ, ಅಳತೆಯ ಮಾಪನಗಳು

ಹೀಗೇ ನಿಮಗೆ ಕುತೂಹಲವೆನಿಸುವ ವಿಚಾರಗಳನ್ನ ತಿಳಿದುಕೊಳ್ಳುತ್ತಾ ಮತ್ತೊಬ್ಬರಿಗೆ ತಿಳಿಸುತ್ತಾ ಹೋದರೆ… ವಿಜ್ಞಾನದಲ್ಲಿನ ಕಲೆ ಮತ್ತು ಕಲೆಯಲ್ಲಿನ ವಿಜ್ಞಾನವೆರಡನ್ನೂ[Art of Science & Science of Art] ಓದಿ ಅನುಭವಿಸಿ ಜೀವನಕ್ಕೆ ಅಳವಡಿಸಿಕೊಳ್ಳುವ ಅವಕಾಶ ಎಲ್ಲರಿಗೂ ಸಿಗುವಂತಾದರೆ ಎಷ್ಟು ಚೆಂದ.

ಲೇಖಕಿ: ಸವಿತ ಎಸ್. ಆರ್

ಓದಿದ್ದು ಬಿ.ಇ. ಮೆಕ್ಯಾನಿಕಲ್,ಕೆಲಸ ಬೆಂಗಳೂರ ಐಟಿ ಕಂಪೆನಿಯಲ್ಲಿ. ವಿಜ್ಞಾನ, ಓದು, ಬರವಣಿಗೆ, ಸುತ್ತಾಟ, ಚಿತ್ರ ಕಲೆ ಮತ್ತು ಫೊಟೋಗ್ರಫಿಯಲ್ಲಿ ಆಸಕ್ತಿ. ಸದ್ಯದ ಓದುವಿಕೆ – ಕುಮಾರ ವ್ಯಾಸ ಭಾರತ, ಬ್ಲಾಗ್ – ಕದವ ತೆರೆ ಬೆಳಕು ಬರಲಿ ಓ ಚಿತ್ತಾ

ಮುಂದೆ ಓದಿ

ಗಣರಾಜ್ಯೋತ್ಸವ – ಅಲೆ ೧ – ಪಕ್ಷಿ ವೀಕ್ಷಣೆ

ಪ್ರಕಟಿಸಿದ್ದು ದಿನಾಂಕ Jan 2, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು.

ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಹಕ್ಕಿಗಳು ಕೆಲವಾದರೆ, ಊರಾಚೆಗಿನ ತೋಪುಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿ ವಾಸಿಸುವ ಪಕ್ಷಿಗಳು ಹಲವಾರು. ಅವುಗಳ ಬಣ್ಣ, ಆಕಾರ, ದನಿ, ಸ್ವಭಾವ, ನೆಲೆ, ಆಹಾರ, ಗೂಡುಕಟ್ಟುವ ಹಾಗೂ ಮರಿಗಳನ್ನು ಸಾಕುವ ವಿಧಾನ ಸಹ ವೈವಿಧ್ಯಮಯ.

’ಪಕ್ಷಿ ವೀಕ್ಷಣೆ’ ಕುತೂಹಲಕಾರಿಯಾದ, ಹೆಚ್ಚು ದುಬಾರಿಯಲ್ಲದ, ಪರಿಸರದ ಬಗ್ಗೆ, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು, ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹವ್ಯಾಸ. ಇದನ್ನು ಒಂದು ಅಧ್ಯಯನ ಎಂದು ಹೇಳಲೂಬಹುದು. ಪಕ್ಷಿ ವೀಕ್ಷಣೆಗೆ ಬೇಕಾಗುವ ವಸ್ತುಗಳು ಸಹ ತೀರಾ ಸಾಮಾನ್ಯವಾದುವು. ಒಂದು ನೋಟ್ ಪುಸ್ತಕ, ಲೇಖನಿ, ದುರ್ಬೀನು ಹಾಗೂ ಅತ್ಯಂತ ಮುಖ್ಯವಾಗಿ ತಾಳ್ಮೆ. ಪಕ್ಷಿ ವೀಕ್ಷಣೆಯಲ್ಲಿ ಮಕ್ಕಳೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು.

ಮನೆಯಂಗಳದಿಂದಲೇ ಪಕ್ಷಿ ವೀಕ್ಷಣೆ ಪ್ರಾರಂಭಿಸಬಹುದು. ದುರ್ಬೀನು ಇದ್ದರೆ ಇನ್ನೂ ಉತ್ತಮ. ನಗರೀಕರಣದ ಪರಿಣಾಮವಾಗಿ ಪಕ್ಷಿಗಳು ಕಾಣಿಸುವುದು ಅಪರೂಪವಾಗಿರಬಹುದು. ಆದರೂ ಮರಗಳ ಗುಂಪಿನಲ್ಲಿ, ಕೆರೆಕಟ್ಟೆಗಳ ಸಮೀಪ, ಟೆಲಿಗ್ರಾಫ್ ತಂತಿಗಳ ಮೇಲೆ ಕುಳಿತ ಹಕ್ಕಿ ಸಾಲನ್ನು ನೋಡಬಹುದು. ಸಹಜವಾಗಿಯೇ ಪಕ್ಷಿಗಳಿಗೆ ಮನುಷ್ಯರ ಬಗ್ಗೆ ಅಂಜಿಕೆ ಇರುತ್ತದೆ. ಅವು ತಮ್ಮಷ್ಟಕ್ಕೆ ಇರಬಯಸುತ್ತವೆ. ಕಿರುಕುಳವನ್ನು ಸಹಿಸಲಾರವು. ಆದುದರಿಂದ, ಸಾಧ್ಯವಾದಷ್ಟು ಮರೆಯಲ್ಲಿ ನಿಂತು, ಅವುಗಳ ಏಕಾಂತತೆಗೆ ಭಂಗವಾಗದಂತೆ, ತುಸು ದೂರದಿಂದಲೇ ಪಕ್ಷಿವೀಕ್ಷಣೆ ಮಾಡುವುದು ಒಳ್ಳೆಯದು. ಆಗ ದುರ್ಬೀನು ಸಹಾಯಕ್ಕೆ ಬರುತ್ತದೆ.

ಪಕ್ಷಿಗಳು ಗೂಡು ಕಟ್ಟುವುದನ್ನು, ಆಹಾರ ಸಂಗ್ರಹಿಸುವುದನ್ನು, ಸಲ್ಲಾಪ ನಡೆಸುವುದನ್ನು, ಮೊಟ್ಟೆಗಳನ್ನು ಜೋಪಾನ ಮಾಡುವುದನ್ನು, ಕಾವು ಕೊಡುವುದನ್ನು, ಮರಿಗಳಿಗೆ ಗುಟುಕು ನೀಡುವುದನ್ನು, ಅಪಾಯದ ಸಂದರ್ಭದಲ್ಲಿ ಗಾಬರಿಯ ದನಿಯಲ್ಲಿ ಸೂಚನೆ ನೀಡುವುದು, ಪ್ರತಿಭಟಿಸುವುದು, ಅಪಾಯ ನೀಗಿದ ಮೇಲೆ ಹರ್ಷದ ದನಿ ಹೊರಡಿಸುವುದು, ನೀರಿನಲ್ಲಿ ಮುಳುಗು ಹಾಕಿ ಬಿಸಿಲಿನ ಝಳದಿಂದ ಸಾಂತ್ವನ ಪಡೆಯುವುದು, ಮುಂತಾದವನ್ನು ಮರೆಯಲ್ಲಿ ನಿಂತು ನೋಡುತ್ತ ಹೋದಂತೆ ಅವುಗಳ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ.

ಪಕ್ಷಿಗಳ ವಲಸೆ ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ವಿದ್ಯಮಾನ. ಅವು ಭೂಖಂಡದ ಬೇರೆ ಬೇರೆ ಭಾಗಗಳಿಂದ, ಭೌಗೋಳಿಕ ಎಲ್ಲೆಗಳನ್ನು ದಾಟಿ, ಹಾರಿ ಬಂದು ಒಂದು ನಿರ್ದಿಷ್ಟ ತಾಣದಲ್ಲಿ ಸಂಸಾರ ಹೂಡುತ್ತವೆ, ಆಹಾರ ಸಂಗ್ರಹಿಸುತ್ತವೆ, ಮೊಟ್ಟೆಯಿಟ್ಟು ಮರಿಮಾಡುತ್ತವೆ. ಮರಿಗಳು ಹಾಡುವಂತಾಗುವ ವೇಳೆಗೆ ಹಾರಿಹೋಗುತ್ತವೆ. ಇವೆಲ್ಲಾ ಪಕ್ಷಿವೀಕ್ಷಕರ ಅಧ್ಯಯನಕ್ಕೆ ಬಹಳ ಮುಖ್ಯವಾದ ವಿಷಯಗಳಾಗಿವೆ.

ಪಕ್ಷಿ ವೀಕ್ಷಕರು ತಮ್ಮ ಪುಸ್ತಕಗಳಲ್ಲಿ ಈ ಕೆಳಕಂಡಂತೆ ವಿವರಗಳನ್ನು ಸಂಗ್ರಹಿಸಿ ಪಕ್ಷಿಗಳನ್ನು ಕುರಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಪಕ್ಷಿ ವೀಕ್ಷಣೆ ವಿವರ:

ವೇಳೆ: ದಿನಾಂಕ:
ಸ್ಥಳ: ಋತು:
ಪಕ್ಷಿಯ ವರ್ಣನೆ:
ಆಕಾರ:
ಬಣ್ಣ:
ಪ್ರಮುಖ ವೈಶಿಷ್ಟ್ಯಗಳು
ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸ
ಮರಿಗಳ ಬಣ್ಣ ಮತ್ತು ಸ್ವರೂಪ
ಪಕ್ಷಿಯ ನಡೆವಳಿಕೆ:
ಧ್ವನಿ:
ಗೂಡಿನ ವರ್ಣನೆ:
ಪ್ರವಾಸಿ ಪಕ್ಷಿಯೇ ಅಥವಾ ಸ್ಥಳೀಯ ಪಕ್ಷಿಯೇ?

ಲೇಖಕ: ಅನಿಲ್ ರಮೇಶ್

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ, ಓದುಗ, ಬರಹಗಾರ. ಅನವರತ ಎಂಬ ಬ್ಲಾಗ್ ಅಲ್ಲಿ ಬರಹ. ಸ್ನೇಹಜೀವಿ. ಸಾಹಿತ್ಯದಲ್ಲಿ ಮತ್ತು ಸಂಗೀತದಲ್ಲಿ ಆಸಕ್ತಿ.

ಮುಂದೆ ಓದಿ

ಅರಿವಿನ ಅಲೆಗಳು ೩ – ೨೦೧೩ರ ಗಣರಾಜ್ಯೋತ್ಸವ ಸಂಚಿಕೆ

ಪ್ರಕಟಿಸಿದ್ದು ದಿನಾಂಕ Jan 1, 2013 ವಿಭಾಗ 2013, ale3 | 0 ಪ್ರತಿಕ್ರಿಯೆಗಳು

ಎರಡು ವಸಂತಗಳನ್ನು ಕಳೆದಿರುವ ಅರಿವಿನ ಅಲೆಗಳಲ್ಲಿ ಅನೇಕರು ಈಗಾಗಲೇ ಬಹಳಷ್ಟು ವಿಚಾರಗಳನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಕನ್ನಡಿಗರಿಗೆ ಹತ್ತಿರವಾಗಬೇಕು ಎಂಬ ಆಶಯವನ್ನು ಹೊತ್ತು ವೇದಿಕೆಯನ್ನು ಸಿದ್ದಪಡಿಸಿದ್ದ ಸಂಚಯ ಈ ಎರಡು ವರ್ಷಗಳಲ್ಲಿ ಕಲಿತದ್ದು ಬಹಳ. ಕೇವಲ ತಂತ್ರಾಂಶ ಹಾಗೂ ತಂತ್ರಜ್ಞಾನವಷ್ಟೇ ಅಲ್ಲದೇ ಸಾಮಾನ್ಯ ವಿಜ್ಞಾನವನ್ನು ಒಳಗೊಂಡು ಕನ್ನಡದಲ್ಲಿ ಸುಲಭವಾಗಿ ಲಭ್ಯವಿರದ ಈ ಕ್ಷೇತ್ರಗಳಲ್ಲಿಯೂ, ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲು ಸಂಚಯ ‘ವಿಜ್ಞಾನ, ತಂತ್ರಜ್ಞಾನ, ಹಾಗು ತಂತ್ರಾಂಶ ಕುರಿತ, ಅನುಭವಿ ವಿಚಾರ ಸಂಗ್ರಹ’ವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಚಯದ ಇತ್ತೀಚಿನ ಪ್ರಕಟಣೆ ‘ಸಂಚಯ – ಹೊಸ ರೂಪ‘ದಲ್ಲಿ ಓದಬಹುದು. ವಾರ್ಷಿಕ ಕಾರ್ಯಕ್ರಮದಲ್ಲಿ ಕೆಲ ಬದಲಾವಣೆಗಳು ಕೂಡ ಅರಿವಿನ ಅಲೆಗಳ ಈ ಸಂಚಿಕೆಯಿಂದ ಜಾರಿಗೆ ಬರುತ್ತಿವೆ.

ಗಣರಾಜ್ಯೋತ್ಸವ ಆಚರಣೆಯವಿಶೇಷ ಸಂಚಿಕೆಯನ್ನು ಅನಿಲ್ ರಮೇಶ್ ಅವರು ಬರೆದಿರುವ ‘ಪಕ್ಷಿ ವೀಕ್ಷಣೆ’ ಎಂಬ ಲೇಖನದಿಂದ ಪ್ರಾರಂಭಿಸುತ್ತಿದ್ದು, ವಿಜ್ಞಾನದೆಡೆಗೆ ನಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿ ಬೇಕಿರುವ, ನಮ್ಮ ಸುತ್ತಮುತ್ತಲಿನ ಪರಿಸರದ ವೀಕ್ಷಣೆಯ ವಿಚಾರವನ್ನೂ, ಅದನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗುವಂತೆ ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಪರಿಪಾಠದ ಬಗ್ಗೆ ಹೇಳುತ್ತಾರೆ. ಜೊತೆಗೆ ಅದಕ್ಕೆ ಒಂದು ಮಾದರಿಯನ್ನೂ ನಿಮಗೆ ಇದರಲ್ಲಿ ಒದಗಿಸಿದ್ದಾರೆ.

ಎಂದಿನಂತೆ ಅರಿವಿನ ಅಲೆಗಳು – ಸಾಮಾನ್ಯನ ಜ್ಞಾನ ಭಂಡಾರವನ್ನು ಹೆಚ್ಚಿಸಲು ತನ್ನ ಶಕ್ತಿಗೆ ಅನುಸಾರವಾಗಿ ಹೊಸ ಹೊಸ ಲೇಖನಗಳನ್ನು ನಿಮ್ಮ ಮುಂದೆ ಮುಂದಿನ ಹಲವಾರು ದಿನಗಳಲ್ಲಿ ತರಲಿದೆ. ಈ ಅಲೆಗಳ ಸರದಿಗೆ ನಿಮ್ಮದೂ ಒಂದು ಲೇಖನ ಸೇರಲಿ, ಜ್ಞಾನದ ಅವಶ್ಯಕತೆ ಇರುವೆಲ್ಲೆಡೆ ಈ ಅಲೆಗಳನ್ನು ಹರಿಯ ಬಿಡಲು ನಿಮ್ಮ ಸಹಕಾರವೂ ದೊರೆಯಲಿ ಎಂದು ವಿನಂತಿಸುತ್ತಾ,

ಅರಿವಿನ ಅಲೆಗಳು ತಂಡ – ಸಂಚಯ

ಮುಂದೆ ಓದಿ