ಅರಿವಿನ ಅಲೆಗಳು

ನಿಮ್ಮ ಲೇಖನಗಳನ್ನು [email protected] ಗೆ ಕಳುಹಿಸಿ
Navigation Menu

ಹೊಸ ಅಲೆ ೧೦ – ಕಲಿಕೆ ಮತ್ತು FOSS

ಪ್ರಕಟಿಸಿದ್ದು ದಿನಾಂಕ Aug 10, 2012 ವಿಭಾಗ 2012, ale2 | 0 ಪ್ರತಿಕ್ರಿಯೆಗಳು

ಉಚಿತ ಮತ್ತು ಮುಕ್ತ ತಂತ್ರಾಂಶವು (FOSS) ತನ್ನ ಸಾಮರ್ಥ್ಯದಿಂದ ಈಗಾಗಲೆ ಜಗತ್ತಿನ ನಾನಾ ಮೂಲೆಗಳಿಂದ ಸಾಕಷ್ಟು ಗಮನವನ್ನು ಸೆಳೆದಿದೆ. ಸಮಾಜದ ವಿವಿಧ ಕ್ಷೇತ್ರಗಳು ಈಗಾಗಲೆ ಇದರ ವೈವಿಧ್ಯವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ಪ್ರಮುಖವಾದುದೆಂದರೆ ಶಿಕ್ಷಣ ಕ್ಷೇತ್ರ. ಒಂದು ರೀತಿಯಲ್ಲಿ ನೋಡಿದರೆ FOSS ಮತ್ತು ಶಿಕ್ಷಣದ ಸಿದ್ಧಾಂತಗಳು ಹಲವಾರು ದೃಷ್ಟಿಗಳಲ್ಲಿ ಪರಸ್ಪರ ಒಂದನ್ನೊಂದು ಹೋಲುತ್ತವೆ. ತಾತ್ವಿಕವಾಗಿ ದೃಷ್ಟಿಯಿಂದ ನೋಡಿದರೆ, FOSS ತಂತ್ರಾಂಶಗಳನ್ನು ಹಂಚಿಕೊಂಡರೆ, ಶಿಕ್ಷಣವು ಜ್ಞಾನವನ್ನು ಹಂಚಿಕೊಳ್ಳುತ್ತದೆ. ಒಟ್ಟಾರೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ FOSS ಬಹಳಷ್ಟು ಸಾಧ್ಯತೆಗಳಿವೆ.

ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಈ ಸಾಧ್ಯತೆಗಳನ್ನು ವಿವರಿಸಲು ಪ್ರಯತ್ನಿಸಲಾಗಿದೆ.

ಕಲಿಕೆಯಲ್ಲಿ FOSS ಅನ್ನು ಬಳಸುವುದು ಮತ್ತು FOSS ಅನ್ನು ಕಲಿಯುವುದು ಎರಡೂ ಸಹ ಗಂಭೀರವಾಗಿ ಪರಿಗಣಿಸಬೇಕಿರುವ ವಿಷಯಗಳಾಗಿವೆ. ಇಂದಿನ ದಿನಗಳಲ್ಲಿ, ಗಣಕ ಮತ್ತು ಅದರ ಸಂಬಂಧಿ ಸಾಧನಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅನಿವಾರ್ಯವಾಗುತ್ತಿವೆ. ಹಾಗಿರುವಾಗ ಇಲ್ಲಿ FOSS ಅನ್ನೇ ಯಾಕೆ ಬಳಸಬೇಕು ಎನ್ನು ಪ್ರಶ್ನೆ ಉದ್ಭವಿಸುವುದು ಸಹಜ.

FOSS ನ ಇತಿಹಾಸವನ್ನು ಗಮನಿಸಿದಲ್ಲಿ, ಹೆಚ್ಚಿನ ತಂತ್ರಾಂಶಗಳ ಉಗಮವು ಶೈಕ್ಷಣಿಕ ರಂಗದಲ್ಲಿಯೆ ಆಗಿದೆ. ಉದಾಹರಣೆಗೆ, ಲಿನಸ್ ಟಾರ್ವೋಲ್ಡ್‍ 386 ಆರ್ಕಿಟೆಕ್ಚರ್ ಕುರಿತು ಕಲಿಯುವಾಗ ಮತ್ತು ಕಾರ್ಯಾಚರಣೆ ವ್ಯವಸ್ಥೆಯ (ಆಪರೇಟಿಂಗ್ ಸಿಸ್ಟಮ್) ಬಗ್ಗೆ ಹೆಚ್ಚಿನ ಅರಿವಿಗಾಗಿ ಪ್ರಯತ್ನಿಸಿದಾಗ ಲಿನಕ್ಸ್ ಹುಟ್ಟಿಕೊಂಡಿದ್ದು, Lyx ಎನ್ನುವ ವರ್ಡ್ ಪ್ರೊಸೆಸರ್ ಒಂದು ಕಾಲೇಜಿನ ಪ್ರಾಜೆಕ್ಟ್‍ ಆಗಿತ್ತು.

ಕಲಿಕೆಯಲ್ಲಿ FOSS ನ ಪಾತ್ರವನ್ನು ಮೂರು ಭಾಗವಾಗಿ ವಿಂಗಡಿಸಬಹುದು

೧. ಮುಕ್ತ ವಿಷಯ/ಓಪನ್ ಕಂಟೆಂಟ್

ಮುಕ್ತ ಮತ್ತು ಉಚಿತ ಜ್ಞಾನವನ್ನು ಪ್ರೋತ್ಸಾಹಿಸುವ ಜನರಿಂದ ಮುಕ್ತ ಕೃತಿಗಳು ಅಥವ ಪಠ್ಯದ ರಚನೆಯಾಗುತ್ತಿರುವುದು ಮತ್ತು ಅದನ್ನು ಉಚಿತವಾಗಿ ಹಂಚಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿದೆ. ಇದು ಪಠ್ಯ, ಧ್ವನಿ ಅಥವ ಚಲನಚಿತ್ರ ರೂಪದಲ್ಲಿ ಇರಬಹುದು. ಮೂಲ ಲೇಖಕನ ಹೆಸರನ್ನು ಹಾಗೆಯೆ ಇರಿಸಿಕೊಳ್ಳುವುದು, ಪಠ್ಯದ ಮೂಲ ಆಶಯವನ್ನು ಬದಲಾಯಿಸದೆ ಇರುವುದು ಮುಂತಾದ ಕೆಲವು ಕನಿಷ್ಟ ನಿರ್ಬಂಧಗಳನ್ನು ಹೊಂದಿರುವ ಕ್ರಿಯೇಟೀವ್ ಕಾಮನ್ಸ್‍ನಂತಹ ವಿಶಿಷ್ಟವಾದ ಪರವಾನಗಿ ಮುಖಾಂತರ ಈ ರೀತಿ ರಚನೆಯಾದ ಕೃತಿಯನ್ನು ಸಮಾಜಕ್ಕೆ ನೀಡಲಾಗುತ್ತದೆ. ಈ ಬಗೆಯ ಪ್ರಯತ್ನಗಳಲ್ಲಿ ಅತ್ಯಂತ ಯಶಸ್ವಿಯಾದವೆಂದರೆ, ಪಿಡಿಎಫ್ ರೂಪದಲ್ಲಿ ಮಿಲಿಯನ್ನುಗಟ್ಟಲೆ ಪುಸ್ತಕಗಳನ್ನು ಒದಗಿಸುವ ಪ್ರಾಜೆಕ್ಟ್‍ ಗುಟೆನ್‌ಬರ್ಗ್ (gutenberg.org), ಹೆಸರಾಂತ ಪುಸ್ತಕಗಳನ್ನು ಧ್ವನಿ ರೂಪದಲ್ಲಿ ನೀಡುವ librivox.org, ವಿಶ್ವದ ಪ್ರತಿಯೊಂದು ವಿಷಯದ ಕುರಿತು ಮಾಹಿತಿಯನ್ನು ಹೊಂದಿರುವ ವಿಕಿಪಿಡಿಯಾ, MIT ಯ ಓಪನ್ ಕೋರ್ಸ್ ವೇರ್ ಇನಿಶಿಯೇಟಿವ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಪ್ರಯತ್ನಗಳ ಒಟ್ಟಾರೆ ಉದ್ಧೇಶವು ಕಲಿಕೆಯಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

೨. ಮುಕ್ತ ತಂತ್ರಾಂಶ

ಕಲಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಗಣಕ ಅಥವ ಗಣಕದ ರೀತಿಯ ಸಾಧನಗಳ ಪಾತ್ರ ಮಹತ್ತರವಾಗಿದೆ. ಕಂಪ್ಯೂಟರ್ ಸಿಮುಲೇಶನ್, ಇಂಟರಾಕ್ಟೀವ್ ಎನಿಮೇಶನ್ಸ್‍ ಮುಂತಾದವು ಈ ಪಂಗಡಕ್ಕೆ ಸೇರುತ್ತವೆ. ವೈಯಕ್ತಿಕ ತರಬೇತಿ ಮತ್ತು ಪ್ರತ್ಯೇಕ ಕಾರ್ಯನಿರ್ವಹಣೆ ಆಧರಿತವಾದ ಕಲಿಕೆ ಪ್ರಕ್ರಿಯೆಗಾಗಿ ಕೆಲವು ನಿಶ್ಚಿತ ವಿಷಯಗಳಿಗೆ ಸಂಬಂಧಿಸಿದ (ಉದಾ., ಆಲ್ಜೀಬ್ರಾದ ಸಮೀಕರಣಗಳನ್ನು ಬಿಡಿಸಲು) ಚತುರ ಕಲಿಕಾ ವ್ಯವಸ್ಥೆಗಳು ಈ ಗುಂಪಿಗೆ ಸೇರುತ್ತವೆ. ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಮುಕ್ತ ತಂತ್ರಾಂಶ ಪರವಾನಗಿ ಅಡಿಯಲ್ಲಿ ಬರುವ ಇಂತಹ ಹಲವಾರು ತಂತ್ರಾಂಶಗಳನ್ನು ನಾವು ಕಾಣಬಹುದು ಹಾಗೂ ಇವುಗಳಲ್ಲಿ ಹೆಚ್ಚಿನವುಗಳ ವಿಂಡೋಸ್ ಆವೃತ್ತಿಗಳೂ ಸಹ ಉಚಿತವಾಗಿ ದೊರೆಯುತ್ತವೆ. ಚಿಣ್ಣರಿಂದ ಹಿಡಿದು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭವಾಗಿಸಲು ಭೌತಶಾಸ್ತ್ರ, ಗಣಿತ, ಖಗೋಳ ವಿಜ್ಞಾನ, ರಸಾಯನ ಶಾಸ್ತ್ರ, ಮುಂತಾದ ವಿಭಾಗಗಳಿಗೆ ಸಂಬಂಧಿಸಿದ ನೂರಾರು ತಂತ್ರಾಂಶಗಳನ್ನು ಕಾಣಬಹುದು. schoolforge.net ಎಂಬ ತಾಣದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಈ ಎಲ್ಲಾ ತಂತ್ರಾಂಶಗಳ ಬೃಹತ್ ಸಂಗ್ರಹವೇ ಇದೆ. ಇವುಗಳ ಕೆಲವು ಉದಾಹರಣೆಗಳೆಂದರೆ:

  • Chemlab – ರಸಾಯನ ಶಾಸ್ತ್ರದ ಪ್ರಯೋಗಗಳು
  • Earth3D – ಭೂಮಿಯ ವಾಸ್ತವಿಕ 3D ಚಿತ್ರಣ
  • Stellarium – ವಾಸ್ತವಿಕ ಪ್ಲಾನೆಟೋರಿಯಮ್
  • Units – ಮಾನಕಗಳ ಪರಿವರ್ತನೆ
  • Kalzium – ಪಿರಿಯೋಡಿಕ್ ಟೇಬಲ್,
  • Atomix ಭೌತಶಾಸ್ತ್ರದ ಆಟಗಳು
  • tux4kids ಮಕ್ಕಳಿಗಾಗಿನ ಕಲಿಕೆ ಮತ್ತು ಆಟಗಳ ಸಂಗ್ರಹ

ಅಷ್ಟೇ ಅಲ್ಲದೆ, ಕೆಲವು ಲಿನಕ್ಸ್ ಡಿಸ್ಟ್ರಿಬ್ಯೂಶನ್‌ಗಳು, ಕಲಿಕೆಗಾಗಿ ಮೀಸಲಿರಿಸಲಾದ ಆವೃತ್ತಿಗಳನ್ನು ಅಥವ ಅನ್ವಯಗಳ ಪಟ್ಟಿಯನ್ನು ಹೊಂದಿವೆ. ಅವುಗಳಲ್ಲಿ ಹೆಸರಿಸಬಹುದಾದವುಗಳೆಂದರೆ, ಡಿಬಿಯನ್‌ನ Skolelinux (http://skolelinux.org/) ಮತ್ತು DebianEdu (http://wiki.debian.org/DebianEdu), ಉಬುಂಟುವಿನ Edubuntu (http://edubuntu.com/), ಫೆಡೋರಾದ Fedora Education Spin (https://fedoraproject.org/wiki/Features/Education), CDAC ನ EduBoss (http://bosslinux.in/eduboss) GNOME ಪರಿಯೋಜನೆಯ GNOME Science CD (https://live.gnome.org/GnomeScienceCD) ಮತ್ತು KDE ಯ kdeedu (http://edu.kde.org/) .

ವರ್ಲ್ಡ್‍ ವೈಡ್ ವೆಬ್‌ನ ಸ್ಥಾಪಕರಾದಂತಹ ಟಿಮ್ ಬರ್ನರ್ಸ್ ಲೀಯು ಮುಂದಿನ ಪೀಳಿಗೆಯ ಅಂತರಜಾಲವು ಅಂಗವಿಕಲರೂ ಸೇರಿದಂತೆ ಜಗತ್ತಿನ ಎಲ್ಲಾ ವರ್ಗದ ಜನರೂ ಬಳಸುವಂತಾಗಬೇಕು ಎಂದು ಕನಸು ಕಂಡಿದ್ದರು. ಕೇವಲ ದೈಹಿಕ ನ್ಯೂನತೆಯಿಂದಾಗಿ ಅವರ ಕಲಿಕೆಯ ವ್ಯಾಪ್ತಿಯು ಮೊಟಕುಗೊಳ್ಳಬಾರದು. ಅದು ಭೌತಶಾಸ್ತ್ರವೇ ಇರಬಹುದು ಅಥವ ಗಣಕ ವಿಜ್ಞಾನವೆ ಇರಬಹುದು. ಮುಕ್ತ ತಂತ್ರಾಂಶದ ಚಳುವಳಿಯು ಈ ಸಮಸ್ಯೆಯನ್ನು ಮೊದಲೆ ಗುರುತಿಸಿ ಸ್ಕ್ರೀನ್‌ ರೀಡರ್, ಸ್ಪೀಚ್ ರೆಕಗ್ನೈಸರ್, ಬ್ರೈಲ್ ಸಿಸ್ಟಮ್‌ ಮುಂತಾದ ಹಲವಾರು ವ್ಯವಸ್ಥೆಗಳನ್ನು ಒದಗಿಸಿದೆ. Gnome ಎಕ್ಸೆಬಿಲಿಟಿ ಎನ್ನುವುದು ಯಾವುದೆ Gnome ಅನ್ವಯದ ಸೋರ್ಸ್ ಕೋಡ್‌ ಅನ್ನು ಹಾಗೆಯೆ ಇರಿಸಿಕೊಂಡು ಮಾತಿನ ಮೂಲಕ ಬಳಸಬಹುದಾದ ಒಂದು ಶಕ್ತಿಯುತವಾದ ತಂತ್ರಾಂಶವಾಗಿದೆ.

ಕಲಿಕೆಯ ನಿರ್ವಹಣೆ

ಶಾಲೆ/ಕಾಲೇಜಿನ ನಿರ್ವಹಣೆ, ಪಠ್ಯಕ್ರಮವನ್ನು ನೋಡಿಕೊಳ್ಳುವಿಕೆ, ಫಲಿತಾಂಶದ ಸಂಸ್ಕರಣೆ, ಮೌಲ್ಯಮಾಪನ ನಡೆಸುವಿಕೆ, ಅಸೈನ್ಮೆಂಟ್ ಸಲ್ಲಿಕೆ ಮತ್ತು ಮೌಲ್ಯಮಾಪನೆ, ಪಠ್ಯಕ್ರಮಕ್ಕೆ ಅಗತ್ಯವಾದ ಸಾಮಗ್ರಿಗಳ ಸಿದ್ಧಪಡಿಕೆ ಮುಂತಾದ ಕಾರ್ಯಗಳಿಗೆ ನೆರವು ನೀಡಬಲ್ಲ ತಂತ್ರಾಂಶಗಳು ಉಪಕರಣಗಳು ಈ ವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಹಲವಾರು ಮುಕ್ತ ಮತ್ತು ಉಚಿತ ತಂತ್ರಾಂಶಗಳಾಗಿವೆ. ಯುನೆಸ್ಕೋದ ಕಲಿಕೆಗೆ ಸಂಬಂಧಿಸಿದ ಜಾಲತಾಣದಲ್ಲಿ FOSS ಗಾಗಿ ಒಂದು ವಿಭಾಗವನ್ನೇ ಮೀಸಲಿರಿಸಲಾಗಿದೆ. ಒಂದೆಡೆಯಲ್ಲಿ ಯುನೆಸ್ಕೋದಂತಹ ಅಂತರಾಷ್ಟ್ರೀಯ ಸಂಸ್ಥೆಗಳು FOSS ಮತ್ತು ಕಲಿಕೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂದು ತೋರಿಸಿದರೆ, ಇನ್ನೊಂದೆಡೆಯಲ್ಲಿ ದೊಡ್ಡ ಸಂಖ್ಯೆಯ ಮತ್ತು ಗುಣಮಟ್ಟದ ಸಂಪನ್ಮೂಲಗಳು ದೊರೆಯುತ್ತವೆ ಎನ್ನುವುದನ್ನು ಇದು ತೋರಿಸುತ್ತದೆ.

ಯಾವುದೆ ಶಾಲೆಯಲ್ಲಿ ನಿರ್ವಹಣೆಗಾಗಿ ಹಲವು ಬಗೆಯ ತಂತ್ರಾಂಶ ವ್ಯವಸ್ಥೆಗಳು ನೆರವಾಗುತ್ತವೆ. ಹಳೆಯ ಯಂತ್ರಾಂಶಗಳಲ್ಲಿಯೂ ಸಹ ಓಡಬಲ್ಲ, ಲಿನಕ್ಸ್ ಒಂದು ಉತ್ತಮ ಸಂಪನ್ಮೂಲವಾಗಿ ಒದಗಬಲ್ಲದು. ನಿರ್ವಹಣೆಯಲ್ಲಿ ನೆರವಾಗುವ ಇನ್ನಿತರೆ ತಂತ್ರಾಂಶಗಳಲ್ಲಿ ಪ್ರಮುಖವಾದವುಗಳೆಂದರೆ:

  • ಯೋಜನಾ ನಿರ್ವಹಣೆ – Planner
  • ದಸ್ತಾವೇಜು (ಡಾಕ್ಯಮೆಂಟ್) ರಚನೆ – LibreOffice (Openoffice), Latex
  • ಆಡಿಯೋ ರೆಕಾರ್ಡ್/ಮಾರ್ಪಡಿಸುವಿಕೆ – Audicity
  • ಜಾಲ ತಾಣ ನಿರ್ಮಾಣ – Nyu
  • ಕಲಿಕೆಯ ನಿರ್ವಹಣೆ – Moodle
  • ಶಾಲೆಯ ವ್ಯವಸ್ಥಾಪನೆ – Schooltool
  • 3D ಎನಿಮೇಶನ್ – Blender
  • ರೇಖಾಕೃತಿ ಸಂಪಾದನೆ – Dia
  • ಚಿತ್ರ ಸಂಸ್ಕರಣೆ – Gimp
  • ಪುಟದ ವಿನ್ಯಾಸ – Scribus
  • ನಕ್ಷೆ ರಚನೆ – kmplot

ಶಿಕ್ಷಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಅಳವಡಿಕೆಗಳಾಗಿವೆ. ಕೇರಳ ಸರ್ಕಾರವು ಈ ವಿಷಯದಲ್ಲಿ ಸಾಕಷ್ಟು ಆಸಕ್ತಿ ತೋರಿಸಿವೆ. ಹಲವಾರು ಸರ್ಕಾರೇತರ ಸಂಸ್ಥೆಗಳು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವು ಹಳ್ಳಿಗಳಲ್ಲಿ ಸುಲಭವಾಗಿ ಹರಡುವಂತೆ ದೊರೆಯುವಂತೆ ಮಾಡುವ ಪ್ರಯತ್ನದಲ್ಲಿ ಭಾಗಿಯಾಗಿವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದು ಮಗುವೂ ಸಹ ಪ್ರಾಥಮಿಕ ಶಿಕ್ಷಣ ಪಡೆಯುವುದು ದುಸ್ತರವಾಗಿರುವಾಗ ಗಣಕ ಮತ್ತದರ ತಂತ್ರಾಂಶಗಳಿಗಾಗಿ ಹಣ ವೆಚ್ಚಮಾಡುವುದು ಸುಲಭದ ಮಾತಲ್ಲ. ಇಂತಹ ಸನ್ನಿವೇಶದಲ್ಲಿ FOSS ಬಹು ಮಟ್ಟಿಗೆ ಈ ಹೊರೆಯನ್ನು ತಗ್ಗಿಸಬಲ್ಲದು. ಇದು ಕೇವಲ ಹಣವನ್ನು ಉಳಿಸುವುದು ಮಾತ್ರವಲ್ಲದೆ, ವಿಶ್ವಾಸಾರ್ಹತೆ, ಕಾರ್ಯನಿರ್ವಹಣೆ ಮತ್ತು ಉತ್ತಮ ಸುರಕ್ಷತೆಯನ್ನೂ ಒದಗಿಸುತ್ತದೆ.

FOSS ಅನ್ನು ಕಲಿಕೆಯಲ್ಲಿ ಬಳಸುವುದರ ಜೊತೆಗೆ, ಅದನ್ನು ಪಠ್ಯದ ಒಂದು ಭಾಗವಾಗಿಸುವುದರಿಂದ ವಿದ್ಯಾರ್ಥಿಗಳಿಗಾಗುವ ಒಂದು ಅತ್ಯಂತ ಪ್ರಮುಖವಾದ ಪ್ರಯೋಜನವೆಂದರೆ ತಂತ್ರಾಂಶಗಳ ತಳಹದಿಯಾದಂತ ಸೋರ್ಸ್ ಕೋಡ್‌ ಅನ್ನು ಅವಲೋಕಿಸುವ ಅವಕಾಶ. ಇದರಿಂದಾಗಿ ವಿದ್ಯಾರ್ಥಿಗಳು ನಿಜವಾದ ಪ್ರೊಗ್ರಾಮ್‌ಗಳನ್ನು ಅಧ್ಯಯನ ಮಾಡಲು ಸಾಧ್ಯವಿರುತ್ತದೆ. ಅಲ್ಲದೆ ಇದರಲ್ಲಿನ ಪ್ರಾದೇಶೀಕರಣ (ಲೋಕಲೈಸೇಶನ್) ಅವಕಾಶದಿಂದಾಗಿ ಇಂಗ್ಲೀಷಿನ ಜ್ಞಾನದ ಕೊರತೆಯಿಂದಾಗಿ ಆಧುನಿಕ ತಂತ್ರಜ್ಞಾನದಿಂದ ವಂಚಿತರಾಗುವುದನ್ನು ತಪ್ಪಿಸುತ್ತದೆ. ಒಟ್ಟಿನಲ್ಲಿ FOSS ನ ಸರಿಯಾದ ರೀತಿಯ ಅಳವಡಿಕೆ ಮತ್ತು ಬಳಕೆಯು ಸಮಾಜದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅಂತರವನ್ನು ಕಡಿಮೆಮಾಡಲು ಸಾಧ್ಯವಿದೆ.

ಶಂಕರ್ ಪ್ರಸಾದ್. ಎಮ್ ವಿ, ಹುಟ್ಟು ಮತ್ತು ಬಾಲ್ಯ ಶೃಂಗೇರಿ ಸಮೀಪದ ತುಂಗೆಯ ತಟದಲ್ಲಿರುವ ಪುಟ್ಟ ಹಳ್ಳಿಯಲ್ಲಿ. ಓದಿದ್ದು ವಸ್ತುವಿಜ್ಞಾನದಲ್ಲಿ ಎಂಎಸ್ಸಿ. ಬೆಂಗಳೂರಿನ ಎನ್‌ಎಎಲ್‌ನ ವಸ್ತುವಿಜ್ಞಾನ ವಿಭಾಗದಲ್ಲಿ ಒಂದಿಷ್ಟು ವರ್ಷ ವಾಸ ಸಹಾಯಕ ಸಂಶೋಧಕನಾಗಿ ಕೆಲಸ ಮಾಡಿದೆ. ಜೊತೆಗೆ ಕನ್ನಡದ ವಾರ್ಷಿಕ ವಿಜ್ಞಾನ ಪತ್ರಿಕೆಯಾದ ಕಣಾದ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ. ನಂತರ ಮುಕ್ತ ತಂತ್ರಾಂಶಗಳೆಡೆಗೆ ಒಲವು. ಪ್ರಸಕ್ತ ಮುಕ್ತ ತಂತ್ರಾಂಶವನ್ನು ಒದಗಿಸುವ ಸಂಸ್ಥೆಯಲ್ಲಿ ಅನುವಾದಕನಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಫೈರ್ಫಾಕ್ಸ್, ಗ್ನೋಮ್, ಕೆಡಿಇ, ಫೆಡೋರ, ಓಪನ್ಆಫೀಸ್ ಮುಂತಾದ ಹೆಚ್ಚಿನ ಎಲ್ಲಾ ಮುಕ್ತತಂತ್ರಾಂಶಗಳ ಕನ್ನಡ ಅನುವಾದದಲ್ಲಿ ಕೈಜೋಡಿಸಿದ್ದೇನೆ. ಈ ಅನುವಾದಗಳಲ್ಲಿ ಶಿಷ್ಟತೆಯನ್ನು ತರುವುದು ಮುಂದಿನ ಗುರಿ. ವಿಜ್ಞಾನ ಹಾಗು ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನೂ ಸಹ ಬರೆದಿದ್ದೇನೆ. ಸಾಹಿತ್ಯ ಹಾಗು ಕ್ರಿಕೆಟ್‌ನೆಡೆಗೆ ಅಪರಿಮಿತ ಆಸಕ್ತಿ, ಒಂದಿಷ್ಟು ಸಣ್ಣ ಪುಟ್ಟ ಕವನಗಳನ್ನೂ ಸಹ ಗೀಚಿದ್ದೇನೆ.

ಮುಂದೆ ಓದಿ

ಹೊಸ ಅಲೆ ೯ – ಹ್ಯಾಕಿಂಗ್

ಪ್ರಕಟಿಸಿದ್ದು ದಿನಾಂಕ Aug 9, 2012 ವಿಭಾಗ 2012, ale2 | 3 ಪ್ರತಿಕ್ರಿಯೆಗಳು

‘ಹ್ಯಾಕಿಂಗ್‘ ಈ ಪದವನ್ನು ಕೇಳಿದಾಕ್ಷಣ ನಮ್ಮ ತಲೆಯಲ್ಲಿ ಒಂದು ರೀತಿಯ ನಕಾರಾತ್ಮಕ ಭಾವನೆ ಮೂಡುತ್ತದೆ. ಇದು ಗಣಕಲೋಕದಲ್ಲಿ ಒಂದು ಮಾಡಬಾರದ ಕೆಲಸ, ಇದೊಂದು ಅಪರಾಧ, ಹ್ಯಾಕರ್‌ಗಳ ಉದ್ದೇಶ ಸಾಮಾನ್ಯವಾಗಿ ಕೆಟ್ಟದ್ದೇ ಆಗಿರುತ್ತದೆ, ಹ್ಯಾಕರ್‌ಗಳು ಕೆಟ್ಟವರು, ಕಳ್ಳರು. ಹೀಗೆ ನಾನಾ ಬಗೆಯ ವಿಚಾರವನ್ನು ನಮ್ಮ ‘ಟೆಕ್‘ ಪ್ರಪಂಚ ಸಾಮಾನ್ಯರ ತಲೆಯಲ್ಲಿ ಬಿತ್ತಿಬಿಟ್ಟಿದೆ!

ಹೀಗಾಗಿ ನಮ್ಮಲ್ಲಿ ಹಲವರು, ಹ್ಯಾಕಿಂಗ್ ಎಂದರೇನು? ಇದು ನಿಜವಾಗಿಯೂ ಕೆಟ್ಟದೇ, ಅಥವಾ ಯಾವುದೋ ಒಂದು ಮಾಡಬಾರದ ಪಾಪದ ಕೆಲಸವೇ? ಅಥವಾ ‘ಹ್ಯಾಕಿಂಗ್‘ ಗೂ ಒಂದು ಒಳ್ಳೆಯ ಮುಖವಿದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದೇ, ಸುಮ್ಮನಿದ್ದುಬಿಡುತ್ತೇವೆ! ‘ಯಾವುದೋ ಒಂದು ಜಾಲತಾಣವನ್ನು ಯಾರೋ ಹ್ಯಾಕ್ ಮಾಡಿ ಅನಧಿಕೃತವಾಗಿ ಒಳಹೊಕ್ಕು ಯಾವುದೋ ಗೌಪ್ಯ ಮಾಹಿತಿಯನ್ನು ಕದ್ದರಂತೆ’, ’ಯಾವುದೋ ಅಂತರಜಾಲ ಬ್ಯಾಂಕ್‌ನಿಂದ ’ಹ್ಯಾಕ್’ ಮಾಡಿ ಯಾರದೋ ಹಣವನ್ನು ಯಾರೋ ಕದ್ದರಂತೆ’, ಹೀಗೆಲ್ಲಾ ಕೇಳಿ ಕೇಳಿ ’ಹ್ಯಾಕ್’ ಎಂಬ ಪದವೇ ಕೆಲವರಿಗೆ ಅಸಹ್ಯಕರವಾಗಿಬಿಟ್ಟಿದೆ.

ಹಾಗಾದರೆ, ಹ್ಯಾಕಿಂಗ್ ಎಂದರೇನು? ಈ ಪ್ರಶ್ನೆಗೆ ಒಂದೇ ವಾಖ್ಯದಲ್ಲಿ ಉತ್ತರಿಸುವುದು ಕಷ್ಟ. ಆದರೂ ಸರಳವಾಗಿ ಹೇಳಬೇಕೆಂದರೆ ಗಣಕ ಅಥವಾ ಗಣಕಕ್ಕೆ ಸಂಬಂಧಿಸಿದ ತಂತ್ರಾಂಶ (Software), ಯಂತ್ರಾಂಶ (Hardware) ಕ್ಕೆ ಅಸಾಂಪ್ರದಾಯಿಕ, ಅಂದರೆ ರೂಢಿಯಲ್ಲಿರದ ಯಾವುದೋ ಒಂದು ಕ್ರಮದಿಂದ ಅಥವ ರೀತಿಯಲ್ಲಿ ಮಾಡುವ ಬದಲಾವಣೆ ಎಂದು ಹೇಳಬಹುದು. ಉದಾಹರಣೆಗೆ ನಿಮ್ಮ ಗಣಕದಲ್ಲಿ ಬಳಸುತ್ತಿರುವ ಒಂದು ನಿರ್ದಿಷ್ಟ video player ತಂತ್ರಾಂಶವು ಯಾವುದೋ ಒಂದು ಬಗೆಯ video ವನ್ನು ತೋರಿಸಲು ಅಸಮರ್ಥವಾದಾಗ, ಅದಕ್ಕೆ ಬೇಕಾದ ಪ್ಯಾಚ್‌ಅನ್ನು ಆ ತಂತ್ರಾಂಶದ ತಯಾರಕರು ಒದಗಿಸದೇ ಹೋದಾಗ, ನೀವು ಅಡ್ಡದಾರಿಯನ್ನು ಹಿಡಿಯಬೇಕಾಗಬಹುದು; ಅಂದರೆ, ಆ ತಂತ್ರಾಂಶದ ಸಂಕೇತವನ್ನು ಬದಲಾಯಿಸುವ ಅನುಮತಿ ಇಲ್ಲದೇ ಹೋದರೂ, ನಿಮ್ಮ ಬಳಕೆಯ ಅನುಕೂಲಕ್ಕಾಗಿ ಅದರಲ್ಲಿ ನೀವು ಸಣ್ಣದೊಂದು ಬದಲಾವಣೆ ಮಾಡಿ ಅದನ್ನು ನಿಮ್ಮ ಬಳಿಯೇ ಇಟ್ಟುಕೊಂಡಿದ್ದೀರಿ ಎಂದುಕೊಳ್ಳೋಣ; ಅಲ್ಲಿಗೆ, ಸಾಮಾನ್ಯ ಬಳಕೆದಾರನೊಬ್ಬನೂ ಹ್ಯಾಕರ್ ಆದಂತೆಯೆ! ಅದಕ್ಕೆ programming ಜ್ಞಾನ ಅಗತ್ಯ ಎಂಬುದು ಬೇರೆ ಮಾತು. ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಒಂದು computer game ಅನ್ನು ಆಡುವುದು ಅತ್ಯಂತ ಕಠಿಣವಾದಾಗ, ಅದಕ್ಕೆ ಸಂಬಂಧಪಟ್ಟ cheat code ಗಳನ್ನು ಬಳಸುವುದನ್ನು ನಾವು ಕಂಡು-ಕೇಳಿಯೇ ಇರುತ್ತೇವೆ. ಇದೂ ಸಹಾ ಒಂದು ರೀತಿಯ ಹ್ಯಾಕಿಂಗ್!

ಮೇಲಿನ ಉದಾಹರಣೆಗಳನ್ನು ಗಮನಿಸಿದರೆ, ಹ್ಯಾಕಿಂಗ್ ಕೆಟ್ಟದ್ದೇನೂ ಅಲ್ಲ ಎಂಬ ಭಾವನೆ ಮೂಡುತ್ತದೆ ಅಲ್ಲವೇ? ನಿಜ, ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿದೆ. ಕೆಲವು ಫೋನ್‌ಗಳಲ್ಲಿ ಕೆಲವು apps (ಆಂಡ್ರಾಯ್ಡ್‌ಫೋನ್‌ಗಳಿಗಾಗಿ ತಯಾರಿಸಿದ ತಂತ್ರಾಂಶಗಳು) ಅನ್ನು ಬಳಸುವುದು ಕಷ್ಟಕರವಾಗಿರುತ್ತದೆ. ಆಗ ಅಂತಹಾ ಫೋನ್‌ಗಳಲ್ಲಿ ನಮಗೆ ಬೇಕಾದಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೆಕಾಗುತ್ತದೆ. ಇದೂ ಸಹಾ ಹ್ಯಾಕಿಂಗ್!  ಹೀಗೆ ಹೇಳುತ್ತಾ ಹೋದರೆ ಹ್ಯಾಕಿಂಗ್ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಣಕದ ಆರಂಭದ ದಿನಗಳಲ್ಲಿ ಈ ಹ್ಯಾಕಿಂಗ್‌ನ್ನು ಗಣಕದಲ್ಲಿನ ಕೆಲ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಬಳಸುತ್ತಿದ್ದರು. ಈ ’ಹ್ಯಾಕಿಂಗ್’ ಎಂಬುದು ಗಣಕ ಪ್ರಪಂಚಕ್ಕೆ ಒಂದು ವರ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಮಾಜ ಘಾತುಕರ ಕೈಗೆ ಇದು ಸಿಕ್ಕಿ ಇದು ಒಂದು ಶಾಪವಾಗಿ ಬದಲಾಗುತ್ತಿದೆ. ಈಗಲೂ ಕೆಲವು ಹ್ಯಾಕರ್‌ಗಳು ಅಸಾಂಪ್ರದಾಯಿಕ ದಾರಿಯಲ್ಲಿಯೇ, ಕೆಲವು ಅದ್ಬುತ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಆಂಡ್ರಾಯ್ಡ್ನಲ್ಲಿ ಕನ್ನಡ ಭಾಷೆಯನ್ನೂ ಫೋನನ್ನು ಹ್ಯಾಕ್ ಮಾಡಿಯೇ ಕನ್ನಡ ಅಕ್ಷರಗಳನ್ನು ತೋರಿಸಬೇಕಾಗಿತ್ತು (rooting) ಎಂಬುದು ಸುಳ್ಳಲ್ಲವಷ್ಟೇ? ಹ್ಯಾಕಿಂಗ್ ಎಂಬುದು ಕೇವಲ ಗಣಕ ಲೋಕದಲ್ಲಷ್ಟೇ ಅಲ್ಲ, ಅನೇಕ ಎಲಕ್ಟ್ರಾನಿಕ್ಸ್ ಗ್ಯಾಡ್ಜೆಟ್‌ಗಳಿಗೂ ಅನ್ವಯವಾಗುತ್ತದೆ. ಕೆಲವೊಮ್ಮೆ ಕೆಲವು ಎಲಕ್ಟ್ರಾನಿಕ್ ಉಪಕರಣಗಳ ರಿಪೇರಿ ಸಾಮಾನ್ಯ ರೀತಿಯಲ್ಲಿ ಅಸಾಧ್ಯವಾಗಿರುತ್ತದೆ. ಆದರೆ, ಕೆಲವು ಹ್ಯಾಕ್ ಮಾರ್ಗಗಳಿಂದ ಅದು ಸಾಧ್ಯವಾಗಬಹುದು.

ಕೊನೆಯ ಮಾತು: ದುಷ್ಟ ಹ್ಯಾಕರ್‌ಗಳಿಂದ ಅಂತರಜಾಲದಲ್ಲಿನ ಮಾಹಿತಿ, ನಮ್ಮ-ನಿಮ್ಮ ಕಂಪ್ಯೂಟರ್ಗಳನ್ನು ಹಾಗೂ ಸರಕಾರಕ್ಕೆ ಹಾಗೂ ದೇಶಕ್ಕೆ ಸಂಬಂಧಿಸಿದ ಅತೀ ಗೌಪ್ಯ ಮಾಹಿತಿಗಳನ್ನು ರಕ್ಷಿಸಿಕೊಳ್ಳಲು ಹ್ಯಾಕರ್ಗಳನ್ನೇ ಬಳಸಿಕೊಳ್ಳಲಾಗುತ್ತದೆ ಎಂಬುದು ನಿತ್ಯ ಸತ್ಯ! ಎಲ್ಲಿಯವರೆಗೆ ಹ್ಯಾಕರ್‌ಗಳಿಂದ ಅಪಾಯವಿದೆಯೋ, ಅಲ್ಲಿಯವರೆಗೆ ಅದೇ ರೀತಿಯ ಹ್ಯಾಕರ್‌ಗಳಿಂದಲೇ ರಕ್ಷಣೆ ಪಡೆಯಬೇಕಾಗುತ್ತದೆ.

ಶ್ರೀಧರ್ ಟಿ ಎಸ್ ಅವರು ಶಿವಮೊಗ್ಗ ಜಿಲ್ಲೆ  ಸೊರಬ ತಾಲ್ಲೂಕಿನ ಅಬಸಿ ಗ್ರಾಮದವರು. ಹುಟ್ಟಿನಿಂದಲೇ ಅಂಧರಾಗಿರುವ ಇವರು, ಮೈಸೂರಿನ ಜೆ ಎಸ್ ಎಸ್ ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ ’Computer Applications for the Visually Impaired’ ಎಂಬ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್‌ನ ಪರದೆಯ ಮೇಲೆ ಬರೆದಿರುವ ಪಠ್ಯವನ್ನು ಧ್ವನಿ ರೂಪಕ್ಕೆ ಪರಿವರ್ಥಿಸಿ ಓದಿ ಹೇಳುವ ತಂತ್ರಾಂಶವೊಂದನ್ನು ಕನ್ನಡ ಭಾಷೆಗೂ ತರುವಲ್ಲಿ ಕೆಲಸ ಮಾಡಿದ್ದಾರೆ. ಈಸ್ಪೀಕ್ ಎಂಬ, (ಮೊದಲೇ ಆಂಗ್ಲ ಭಾಷೆಯಲ್ಲಿ ಲಭ್ಯವಿದ್ದ) ಒಂದು ಮುಕ್ತ ತಂತ್ರಾಂಶದ ಕರ್ತೃ ಜೋನಾಥನ್ ಡಡ್ಡಿಂಗ್‌ಟನ್ ಎಂಬ ಆಂಗ್ಲ Engineer ರನ್ನು ಸಂಪರ್ಕಿಸಿ, ಅದೇ ತಂತ್ರಾಂಶವನ್ನು ಕನ್ನಡಕ್ಕೂ ತಂದಿದ್ದಾರೆ. ಇದರ ನೆರವಿನಿಂದ ಅಂಧರು, ಅನಕ್ಷರಸ್ತರು, ಹಾಗು ಕನ್ನಡ ಭಾಷೆ ಮಾತನಾಡಲು ಬಂದರು, ಓದಲು
ಬಾರದವರೂ ಸಹಾ ಪ್ರಯೋಜನ ಪಡೆಯಬಹುದು. ಭಾರತದಲ್ಲಿರುವ ಬೆರಳೆಣಿಕೆಯಷ್ಟು ಅಂಧ Software Engineer ಗಳಲ್ಲಿ ಇವರೂ ಒಬ್ಬರು. ಅಂಧರಿಗೆ, ಹಾಗು ಸಮಾಜಕ್ಕೆ ಅನುಕೂಲವಾಗಬಲ್ಲ ಉಚಿತ ತಂತ್ರಾಂಶಗಳ ಅಭಿವೃದ್ಧಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ.

ಮುಂದೆ ಓದಿ

ಹೊಸ ಅಲೆ ೮ – HTML5

ಪ್ರಕಟಿಸಿದ್ದು ದಿನಾಂಕ Aug 8, 2012 ವಿಭಾಗ 2012, ale2 | ೧ ಪ್ರತಿಕ್ರಿಯೆ

HTML ಎಂಬುದು ಅಂತರ್ಜಾಲ ತಾಣಗಳನ್ನು ರಚಿಸಲು ಇರುವ ಶಿಷ್ಟತೆ. ಇದನ್ನು ಹೀಗೂ ಅರ್ಥೈಸಬಹುದು. ಕನ್ನಡದಂತಹ ಒಂದು ಭಾಷೆಯನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವ ಹಾಗೆ, HTML ಅನ್ನು ಬ್ರೌಸರುಗಳು ಅರ್ಥಮಾಡಿಕೊಳ್ಳುತ್ತವೆ. HTML5 ಇದರ ಇತ್ತೀಚಿನ ಆವೃತ್ತಿಯಾಗಿದ್ದು ಅತ್ಯಂತ ಕುತೂಹಲ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಇದರ ವೈಶಿಷ್ಟ್ಯವಿರುವುದು ಎಲ್ಲೆಯಿಲ್ಲದ ಹಾಗೆಯೇ ಎಲ್ಲದಕ್ಕೂ ಬಳಕೆಯಾಗಬಹುದಾದ, ಅಪರಿಮಿತ ಸಾಧ್ಯತೆಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಂಡು ಅನೇಕ ತಂತ್ರಜ್ಞಾನಗಳ ಹರಿವನ್ನು ಮುನ್ನಡೆಸಬಲ್ಲ ಚೈತನ್ಯದಲ್ಲಿ.

ಇದರ ವೈಶಿಷ್ಟ್ಯಗಳು ಎಷ್ಟರ ಮಟ್ಟಿಗೆ ವೆಬ್-ಟೆಕ್ನಾಲಜಿಯನ್ನು ಮೋಡಿಗೊಳಿಸಿದೆಯೆಂದರೆ, ಇದರ ಪ್ರಸ್ತಾವನೆ ಇನ್ನೂ ಕರಡಿನ ಹಂತಲ್ಲಿದ್ದರೂ ಕೂಡ, ಈಗಾಗಲೇ ಎಲ್ಲ ಬ್ರೌಸರುಗಳು ಇದರ ಬಹುತೇಕ ವೈಶಿಷ್ಟ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿವೆ.

ಹಾಗಿದ್ದಲ್ಲಿ, HTML5ನ ವೈಶಿಷ್ಟ್ಯಗಳು ಏನು ? ಏಕೆ ಎಲ್ಲ ಕಂಪನಿಗಳೂ ತಮ್ಮ ಬ್ರೌಸರುಗಳಲ್ಲಿ HTML5 ಅನ್ನು ಅಳವಡಿಸಿಕೊಳ್ಳುವಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ವೈಶಿಷ್ಟ್ಯಗಳು

೧. ಕ್ಯಾನ್ವಾಸ್ – ಮೊಟ್ಟಮೊದಲಿಗೆ

<canvas>

ಎಂಬ ಮಾಯಾಕುಂಚ. ಹಿಂದೆ, ವೆಬ್-ಪುಟಗಳಲ್ಲಿ ಚಿತ್ರಗಳನ್ನು ಬಿಡಿಸುವಂತಹ ಅಪ್ಲಿಕೇಶನ್ನುಗಳನ್ನು ಬಳಸಬೇಕೆಂದರೆ, ಫ್ಲಾಶ್ ಅಪ್ಲಿಕೇಶನ್ನುಗಳು ಬರೆಯಬೇಕಿತ್ತು. ಆದರೆ ಈಗ,

<canvas>

ಎಂಬ ಮಾಯಾಕುಂಚವನ್ನು ನಮ್ಮ ಅಂತರ್ಜಾಲ ತಾಣಗಳಲ್ಲಿ ಬಳಸಿದರೆ, ಯಾವುದೇ 3rd ಪಾರ್ಟಿ ಪ್ಲಗಿನ್ನುಗಳ ಸಹಾಯವಿಲ್ಲದೆ ನೇರವಾಗಿ ಬ್ರೌಸರಿನ ಒಳಗೇ ಚಿತ್ರಗಳನ್ನು ಬಿಡಿಸಬಹುದು. ಇಷ್ಟಕ್ಕೆ ನಿಲ್ಲದೆ,

<canvas>

ಕುಂಚವನ್ನು ಬಳಸಿ ಅನೇಕ ಬಗೆಯ ಅನಿಮೇಶನ್ನುಗಳನ್ನು ಸೃಜಿಸಬಹುದು. ಹಿಂದೆ, miniclip.com ಅನ್ನು ಹೊಕ್ಕು ಅಲ್ಲಿದ್ದ ಆಟಗಳನ್ನು ಆಡುತಿದ್ದೆವು. ಅವೆಲ್ಲವೂ ಫ್ಲಾಶಿನಲ್ಲಿರುತ್ತಿದ್ದವು. ಈಗ ನೀವು html5games.com ಅನ್ನು ಹೊಕ್ಕು ಯಾವುದೇ ಪ್ಲಗಿನ್ನುಗಳ ಸಹಾಯವಿಲ್ಲದೆ ಆಟಗಳನ್ನು ಆಟಬಹುದು. ಇದರ ಬಹುದೊಡ್ಡ ಪ್ರಯೋಜನವೆಂದರೆ,

ಅ. ವೈರಸ್ಸುಗಳು ಬರುವ ಸಾಧ್ಯತೆ ಕಡಿಮೆ,
ಆ. ಫ್ಲಾಶ್ ಅನ್ನು ಕಡಿಮೆ ಬಳಸಿದಷ್ಟು ಕಂಪ್ಯೂಟರಿನ ಪವರ್ ಉಳಿತಾಯವಾಗುತ್ತದೆ.

೨. ಆಡಿಯೋ ಮತ್ತು ವೀಡಿಯೋ- ನೀವು youtube.com ತಾಣದಿಂದ ವೀಡಿಯೋಗಳನ್ನು ನೋಡಿರುತ್ತೀರೆಂದರೆ, ನಿಮ್ಮ ಕಂಪ್ಯೂಟರಿನಲ್ಲಿ ಫ್ಲಾಶ್ ಪ್ಲಗಿನ್ ಇದೆ ಎಂದು ಅರ್ಥೈಸಬಹುದು. ಹಾಗೆಯೇ ಹಾಡುಗಳನ್ನು ಕೇಳಲು windows media player, real player, winamp, quicktime, vlc player, ಮುಂತಾದ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಬಳಸಿರುತ್ತೇವೆ. ಆದರೆ HTML5ನಲ್ಲಿ ಪ್ರಸ್ತಾಪಿತವಾಗಿರುವ ಅಂಶವೆಂದರೆ, ಯಾವುದೇ ಒಂದು ತಂತ್ರಾಂಶದ ಮೇಲೆ ಅವಲಂಬಿತವಾಗದೆ, ನಮ್ಮ ನೆಚ್ಚಿನ ಬ್ರೌಸರುಗಳ ಒಳಗೆಯೇ ಹಾಡುಗಳನ್ನು ಕೇಳುವಂತಹ ವ್ಯವಸ್ಥೆ ಸೆಟ್ಟೇರಲಿದೆ. ಇದರ ಬಹುದೊಡ್ಡ ಪ್ರಯೋಜನವೆಂದರೆ ನಮ್ಮ ನೆಚ್ಚಿನ ಪ್ಲೇಲಿಸ್ಟುಗಳನ್ನು ವೆಬ್ ಅಪ್ಲಿಕೇಶನ್ನುಗಳಲ್ಲಿಯೇ ಜೋಡಿಸಿಡಬಹುದು. ಹಾಗೆಯೇ ಯಾವುದೇ 3rd party ಅಪ್ಲಿಕೇಶನ್ ನೆರವಿಲ್ಲದೆ ವೀಡಿಯೋಗಳನ್ನು ನೋಡುತ್ತಾ ಆನಂದಪಡಬಹುದು. ನೀವು ಹಾಡುಗಳನ್ನು ಓದಗಿಸುವಂತಹ ಒಂದು ಸಂಸ್ಥೆಯಾದರೆ, ನಿಮ್ಮ ಗ್ರಾಹಕರು ಯಾವ ಕಂಪ್ಯೂಟರ್ ಬಳಸುತ್ತಿದ್ದಾರೆ, ಯಾವ ಮೊಬೈಲ್ ಬಳಸುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಉತ್ತಮ ಹಾಡುಗಳನ್ನು ಗ್ರಾಹಕರಿಗೆ ಒದಗಿಸುವ ಕಾರ್ಯದಲ್ಲಿ ಹೆಚ್ಚು ಸಕ್ರಿಯರಾದರೆ ಸಾಕು. ಅಂದ ಹಾಗೆ, ಈಗಾಗಲೇ, ಗೂಗಲಿನವರು youtube.com ಅನ್ನು HTML5ಗೂ ಅನ್ವಯವಾಗುವಂತೆ,
http://www.youtube.com/html5 ಅನ್ನೂ ಬೆಂಬಲಿಸುತ್ತಿದ್ದಾರೆ.

೩. ಸ್ಮಾಟ್ ಆದ ಇನ್ಪುಟ್ ಕಂಟ್ರೋಲ್ಸ್- ಸಾಮಾನ್ಯವಾಗಿ ವೆಬ್ ವಿನ್ಯಾಸಗಾರರು ಅನೇಕ ರೀತಿಯ ಇನ್ಪುಟ್ ಕಂಟ್ರೋಲುಗಳನ್ನು ಬಳಸುತ್ತಾರೆ.

<input type="text" />

ಉದಾ:-
type = text, submit, password, textarea.

ಹಿಂದೆ, ಯಾವುದಾದರು ಇನ್ಪುಟ್ ಕಂಟ್ರೋಲಿನಲ್ಲಿ email ನಮೂದಿಸಬೇಕಿದ್ದರೆ, ಆ email ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಪರೀಕ್ಷಿಸಲು ವೆಬ್ ವಿನ್ಯಾಸಗಾರರು, ಸಾಮಾನ್ಯವಾಗಿ ಜಾವಾಸ್ಕ್ರಿಪ್ಟ್ ಬಳಸಿ ಪರೀಕ್ಷಿಸಬೇಕಿತ್ತು. ಆದರೆ ಈಗ

<input type="”email”" />

ಎಂದು ಬಳಸಿದರೆ, ಆಯಾ ಬ್ರೌಸರುಗಳೇ ಈ ಇನ್ಪುಟ್ ಕಂಟ್ರೋಲಿನಲ್ಲಿ ನಮೂದಾದ ಪಠ್ಯವನ್ನು ತಾವೇ ಪರೀಕ್ಷಿಸುತ್ತವೆ.

ಹೀಗೆ, html5ನಲ್ಲಿ ಪ್ರಸ್ತಾಪವಾಗಿರುವ ಇತರ ಕಂಟ್ರೋಲುಗಳೆಂದರೆ
color, date, datetime, datetime-local, email, month, number, range, search, tel, time, url, week

ಇದರ ಪೂರ್ಣವಿವರಗಳನ್ನು http://www.w3schools.com/html5/html5_form_input_types.asp ಪಡೆಯಬಹುದು.

೪. ಭೌಗೋಳಿಕ ಪರಿಚಾರಿಕೆಗಳು – ಅಂತರ್ಜಾಲ ಬಳಕೆದಾರ ಎಲ್ಲಿದ್ದಾನೆ, ಆತನಿರುವ ಜಾಗದಲ್ಲಿ ಆತನಿಗೆ ಬೇಕಾದ ಸೇವೆಗಳು ಏನು ಎಂಬ ವಿಚಾರದ ಬಗ್ಗೆ ಅನೇಕ ಕಂಪನಿಗಳು ಬಗೆಬಗೆಯ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿವೆ. HTML5 ನಲ್ಲಿ ಪ್ರಸ್ತಾಪಿತವಾಗಿರುವ ಮತ್ತೊಂದು ಮುಖ್ಯ ಅಂಶವೆಂದರೆ, ಇದರ ಭೌಗೋಳಿಕ ಪರಿಚಾರಿಕೆಗಳು. ವೆಬ್ ಅಪ್ಲಿಕೇಶನ್ನು, ಆಯಾ ಬಳಕೆದಾರ ಜಗತ್ತಿನ ಯಾವ ಮೂಲೆಯಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಂಡು ಆತನಿಗೆ ಬೇಕಾದ ಸ್ಥಳೀಯ ಸೇವೆಯನ್ನು ಕೊಡುವಂತಹ ವ್ಯವಸ್ಥೆ ಮಾಡಿಕೊಂಡಿವೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದಾಗಿದೆ.

http://dev.w3.org/geo/api/spec-source.html

೫. ಅಂತರ್ಜಾಲವಿಲ್ಲದಿದ್ದಾಗಲೂ ಬಳಸಬಹುದಾದ ವೆಬ್ ಅಪ್ಲಿಕೇಶನ್ನುಗಳ ಸಾಧ್ಯತೆ – HTML5 AppCache ಎನ್ನುವಂತಹ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಹಾಗೆಯೇ ಎರಡು ಬಗೆಯ ಸಣ್ಣ ಪ್ರಮಾಣದ ಮಾಹಿತಿ ಶೇಖರಿಸಿಡಬಹುದಾದಂತಹ ಸಾಧ್ಯತೆಯನ್ನೂ ಪ್ರಸ್ತಾಪಿಸುತ್ತದೆ. ಅವುಗಳೆಂದರೆ, localStorage ಮತ್ತು sessionStorage. ಇವುಗಳನ್ನು ಬಳಸಿ, ಅಂತರ್ಜಾಲ ಸಂಪರ್ಕವಿಲ್ಲದಿದ್ದಾಗಲೂ ಕೂಡ ನಾವು ವೆಬ್ ಅಪ್ಲಿಕೇಶನ್ನುಗಳು ಬಳಸಲು ಸಾಧ್ಯವಾಗುತ್ತದೆ. ಉದಾ: ನಾವು ಗೂಗಲ್ ಡಾಕ್ಸ್ ಬಳಸಿ ಕಡತಗಳನ್ನು ಸಂಪಾದಿಸುತ್ತಿದ್ದಾಗ, ಅಂತರ್ಜಾಲ ಸಂಪರ್ಕ ಕಡಿತಗೊಂಡರೆ, ಭಯಪಡಬೇಕಿಲ್ಲ, ನಮ್ಮ ಬ್ರೌಸರಿನಲ್ಲಿ ಕೆಲಸ ಮುಂದುವರೆಸುತ್ತಾ ಸಂಪಾದನೆಗಳನ್ನು ಉಳಿಸುತ್ತಿರಬಹುದು. ಮತ್ತೆ ಸಂಪರ್ಕ ಪುನಶ್ಚೇತನಗೊಂಡಾಗ, ಅಪ್ಲಿಕೇಶನ್ ಸ್ಥಳೀಯ ಸಂಪಾದನೆಗಳನ್ನು ತಾನಾಗಿಯೇ ಅಂರ್ಜಾಲದಲ್ಲಿ ಉಳಿಸುತ್ತದೆ.

೬. ಸಾರ್ವತ್ರಿಕ ಪ್ರಯೋಜನಗಳು – HTML5 ನಲ್ಲಿ ಬರೆದಂತಹ ಅಪ್ಲಿಕೇಶನ್ನುಗಳು ಯಾವುದೇ ಆಪರೇಟಿಂಗ್ ಸಿಸ್ಟಮ್, ಬ್ರೌಸರ್, ಮೊಬೈಲುಳಿಗೆ ಸೀಮಿತವಾಗಿಲ್ಲ. ಈಗಾಗಲೇ ಮೊಬೈಲುಗಳ ಮೂಲಕ ಅಂತರ್ಜಾಲವನ್ನು ಬಳಸುವವರ ಸಂಖ್ಯೆ ಕಂಪ್ಯೂಟರ್ ಮೂಲಕ ಬಳಸುವವರಿಗೆ ಹೆಚ್ಚಿದೆ. ಈ ನಿಟ್ಟಿನಲ್ಲಿ HTML5ನ ಪ್ರಸ್ತುತತೆ ಏರುತ್ತಲೇ ಸಾಗಿದೆ. HTML5ನಲ್ಲಿ ರಚಿತವಾದ ಪುಟವು, ಮೊಬೈಲ್ ಸ್ನೇಹಿಯಾಗಿಯೂ ಕೆಲಸಮಾಡುತ್ತದೆ.

HTML5 ವೈಶಿಷ್ಟ್ಯಗಳನ್ನು ತಿಳಿದುಕೊಂಡು ನಾವು ಇದರ ಪ್ರಯೋಜನಗಳತ್ತ ಕಣ್ಣು ಹರಿಸೋಣ.

೧. ವೆಬ್ ವಿನ್ಯಾಸಗಾರರಿಗೆ – ವೆಬ್ ವಿನ್ಯಾಸಗಾರರಿಗೆ HTML5 ಮತ್ತಷ್ಟು ವೆಬ್-ಸ್ನೇಹಿಯಾಗಲಿದೆ. ಇದರ ಬಹುದೊಡ್ಡ ಪ್ರಯೋಜನವೆಂದರೆ, HTML5 ಅಪ್ಲಿಕೇಶನ್ ಬರೆದರೆ ಅದನ್ನು ಕಂಪ್ಯೂಟರಿನ ಬ್ರೌಸರ್, ಮೊಬೈಲ್ ಬ್ರೌಸರ್, ಸ್ಮಾರ್ಟ್ ಟೀವಿ, XBOX ಎಲ್ಲೆಡೆಯೂ ಅದೇ ವಿನ್ಯಾಸ ಕೆಲಸಮಾಡುತ್ತದೆ. ಈಗೀಗ, ವೆಬ್ ವಿನ್ಯಾಸಗಾರರು ಅನೇಕ ಬಗೆಯ ತಾಂತ್ರಿಕ ವಿಚಾರಗಳಿಂದ ವಿಚಲಿತರಾಗದೆ, HTML5 ಕಂಪ್ಲೈಯಂಟ್ ವೆಬ್ ಅಪ್ಲಿಕೇಶನ್ನು ಅನ್ನು ರಚಿಸುತ್ತಿದ್ದಾರೆ.

೨. ಸಾಮಾನ್ಯ ಬಳಕೆದಾರರಿಗೆ - HTML5 ತಂತ್ರಜ್ಞಾನದ ಬಹುದೊಡ್ಡ ಪ್ರಯೋಜನ ಪಡೆಯುವರೆಂದರೆ ಸಮಾನ್ಯ ಬಳಕೆದಾರರು. ನಾವು ಬಳಸುವ ಲ್ಯಾಪಟಾಪ್, ಮೊಬೈಲು, ಟ್ಯಾಬ್ಲೆಟ್ಟು, ಟೀವಿ ಕಡಿಮೆ ವಿದ್ಯುತ್ ಮತ್ತು ಹೆಚ್ಚು ಕಾರ್ಯಕ್ಷಮತೆ ಹೊಂದಿರಬೇಕು ಎಂದು ಬಯಸುತ್ತೇವೆ. HTML5 ಆ ನಿಟ್ಟಿನಲ್ಲಿ ನಮ್ಮ ನಮ್ಮ ಸಿಸ್ಟಮ್ಮುಗಳಲ್ಲಿ ನಾವು ಅನುಸ್ಥಾಪಿಸಿರುವಂತಹ 3RD ಪಾರ್ಟಿ ತಂತ್ರಾಂಶಗಳ ಮೇಲೆ ನಮ್ಮ ಅವಲಂಬನೆ ಕಡಿಮೆಯಾಗುತ್ತದೆ.

೩. ಆಡ್-ಏಜೆನ್ಸಿಗಳಿಗೆ – ಆನ್ಲೈನ್ Ad Agency ಗಳ ಬಹುದೊಡ್ಡ ತಲೆನೋವೆಂದರೆ ಹೇಗೆ, ತಾವು ಹೆಚ್ಚು ಹೆಚ್ಚು ಜನರನ್ನು ತಲುಪುವುದು ಎಂಬುದು. HTML5 ಎಂಬುದು Ad Agency ಗಳಿಗೆ ವರದಾನವಾಗಿ ಪರಿಣಮಿಸಿದೆ. HTML5ನಲ್ಲಿ ಬರೆದಂತಹ ಅಪ್ಲಿಕೇಶನ್ನುಗಳು ಕಂಪ್ಯೂಟರಿನ ಬಹುತೇಕ ಎಲ್ಲ ಬ್ರೌಸರುಗಳಲ್ಲಿಯೂ ಹಾಗೆಯೇ ಮೊಬೈಲಿನಲ್ಲಾದರೆ, ಐಫೋನ್, ಆಡ್ರಾಯ್ಡ್, ವಿಂಡೋಸ್ 7.5 ನಲ್ಲಿಯೂ ಕೆಲಸ ಮಾಡುತ್ತವೆ.

<canvas>,</canvas>

೪. ಗೇಮ್ಸ್ ಡೆವೆಲಪರುಗಳಿಗೆ – ಗೇಮ್ಸ್ ಡೆವೆಲಪರುಗಳಿಗೆ HTML5 ವರದಾನವಾಗಿ ಪರಿಣಮಿಸಿದೆ. ಬ್ರೌಸರುಗಳ ಕಾರ್ಯಕ್ಷಮತೆ ಹೆಚ್ಚಿದಷ್ಟೂ, HTML5ನ ವ್ಯಾಪ್ತಿ ಉದ್ದಗಲಕ್ಕೂ ಹರಡುತ್ತಿದೆ. HTML5ನಲ್ಲಿ ಬರೆದಂತಹ ಆಟ, ಕಂಪ್ಯೂಟರ್ ಹಾಗು ಮೊಬೈಲ್ ಎರಡರಲ್ಲಿಯೂ ಕೆಲಸ ಮಾಡುತ್ತದೆಯಾದ್ದರಿಂದ, ಅನೇಕ ಕಂಪನಿಗಳು HTML5 ನೈಪುಣ್ಯತೆಯನ್ನು ಸಾಧಿಸಲು ವಿಶೇಷ ತಂಡಗಳನ್ನು ರಚಿಸುತ್ತಿವೆ.

ಎಚ್ಚರಿಕೆಗಳು – ಹಾಗಿದ್ದಲ್ಲಿ HTML5 ನಲ್ಲಿ ಎಲ್ಲವೂ ಇದೆಯೇ ? ಇದರಿಂದ ಫ್ಲಾಶ್ ಹೊರಟುಹೋಗುತ್ತದೆಯೇ ಎಂದರೆ ಉತ್ತರ “ಇಲ್ಲ”. ಅನಿಮೇಶನ್ ತಯಾರಿಕೆಗಳಲ್ಲಿ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಆಥರಿಂಗ್ ಟೂಲ್ಸ್(ಸೃಜಿಸುವ ಸಾಧನಗಳು) ಬೇಕಾಗುತ್ತವೆ. HTML5ಗೆ ಈ ರೀತಿಯ ಸಾಧನಗಳು ಸದ್ಯಕ್ಕೆ ಕಡಿಮೆಯೇ. ಅಡೋಬೆ ಕಂಪನಿಯವರು ಕೂಡ ಈಗಾಗಲೇ HTML5 ಪರಿಣತಿ ಹೊಂದಿದ ಫ್ರೇಮವರ್ಕುಗಳನ್ನು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದಾರೆ. ಫ್ಲಾಶ್ ಮೇಲಿನ ಅವಲಂಬನೆ ಸಂಪೂರ್ಣವಾಗಿ ಹೋಗುವುದಿಲ್ಲವಾದರೂ, ಅದರ ಪ್ರಭಾವ ಈಗಾಗಲೇ ತಗ್ಗಿದೆ ಹಾಗು ಮುಂದೆ ಮತ್ತಷ್ಟು ತಗ್ಗಲಿದೆ ಎಂಬುದು ಮಾತ್ರ ಸುಸ್ಪಷ್ಟ. ಆದರೆ, ವೆಬ್-ತಂತ್ರಜ್ಞಾನದಲ್ಲಿ ಖಂಡಿತವಾಗಿಯೂ HTML5 ಇತರ ಎಲ್ಲ ವೆಬ್-ಟೆಕ್ನಾಲಜಿಗಳ ಮುಂದೆ ಗಂಭೀರ ಸವಾಲೊಡ್ಡಲಿದೆ. ನೀವು ವೆಬ್-ತಂತ್ರಜ್ಞರಾದರೆ ನೀವು HTML5 ತಿಳಿದುಕೊಳ್ಳಲೇಬೇಕಾದ ತಂತ್ರಜ್ಞಾನವಾಗಿದೆ ಮತ್ತು ನೀವು ಸಾಮಾನ್ಯ ಬಳಕೆದಾರರಾದರೆ, ನೀವು ಬಳಸುವ ವೆಬ್ ತಾಣಗಳು(ಹಾಗೆಯೇ ಅಪ್ಲಿಕೇಶನ್ನುಗಳು) HTML5 ಕಂಪ್ಲಯಂಟ್ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಲಿದೆ.

 

HTML5 ಬಗ್ಗೆ ಮತ್ತಷ್ಟು ತಿಳಿಯಲು

೧. http://html5demos.com/

೨. http://diveintohtml5.info/

೩. http://www.w3schools.com/html5/default.asp

 

ಸುನಿಲ್ ಜಯಪ್ರಕಾಶ್, ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. “ನನ್ನಿ ಸುನಿಲ” ಎಂಬುದು ನನಗೂ ಇಷ್ಟವಾದ ಹೆಸರು. www.chukkiworks.com ನ ಕಣಸುಗಾರ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಮತ್ತೊಂದು ಕಣಸು. ಇವುಗಳ ನಡುವೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ…  [email protected]

ಮುಂದೆ ಓದಿ

ಹೊಸ ಅಲೆ ೭ – ವಿಕಿಪೀಡಿಯ – ಸ್ವತಂತ್ರ ವಿಶ್ವಕೋಶ

ಪ್ರಕಟಿಸಿದ್ದು ದಿನಾಂಕ Aug 7, 2012 ವಿಭಾಗ 2012, ale2 | ೧ ಪ್ರತಿಕ್ರಿಯೆ

ಚಿತ್ರ ಕೃಪೆ: ವಿಕಿಪೀಡಿಯ

ಅದೊಂದು ಕಾಲವಿತ್ತು. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಾದಲ್ಲಿ ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇರುವವರ ಬಳಿಗೋ ಗ್ರಂಥಾಲಯಕ್ಕೋ ಹೋಗಿ, ನೂರಾರು ಪುಸ್ತಕಗಳನ್ನು ತಡಕಾಡಿ, ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬೇಕಾಗಿತ್ತು. ಎಷ್ಟೋ ಬಾರಿ ಸಿಗುವ ಮಾಹಿತಿ ಯಾವುದೋ ಅಜ್ಜನ ಕಾಲದ್ದಾಗಿದ್ದು, ಅಪ್ರಸ್ತುತವಾಗಿರುವ ಸಾಧ್ಯತೆಯೂ ಇತ್ತು. ಶಾಲೆ-ಕಾಲೇಜುಗಳಲ್ಲಿ ರಸಪ್ರಶ್ನೆ ಮುಂತಾದ ಸ್ಪರ್ಧೆ ಮಾಡುವವರೆಂದರೆ ಅನೇಕ ಪುಸ್ತಕ, ದಿನಪತ್ರಿಕೆಗಳನ್ನು ಓದಿ ಓಡಾಡುವ ವಿಶ್ವಕೋಶದಂತಿರಬೇಕಿತ್ತು.

ನಂತರದ ಕಾಲದ ಅಂತರಜಾಲ ಬೆಳೆದಂತೆ ಯಾಹೂ, ಗೂಗಲ್, ಎಮ್ಮೆಸ್ಸೆನ್ ಮುಂತಾದ ಸರ್ಚ್ ಇಂಜಿನ್‌ಗಳು ಬಂದಂತೆ ಈ ಮಾಹಿತಿ ಹುಡುಕಾಟ ಸುಲಭವಾಯಿತು. ಯಾವ ವಿಷಯದ ಬಗ್ಗೆ ಮಾಹಿತಿ ಬೇಕೋ, ಆ ವಿಷಯಕ್ಕೆ ಸಂಬಂಧಿಸಿದ ಪದಗಳನ್ನು ಬಳಸಿ ಯಾರು ಬೇಕಾದರೂ ಮಾಹಿತಿ ಹುಡುಕಬಹುದಾಯಿತು.

ಹೀಗೆ ಸಿಕ್ಕ ಮಾಹಿತಿಯನ್ನು ನಂಬುವ ಹಾಗಿರಲಿಲ್ಲ. ಅದು ತಪ್ಪೂ ಇರಬಹುದಿತ್ತು, ಸರಿಯೂ ಇರಬಹುದಿತ್ತು. ಹೀಗಾಗಿ ಅಂತರಜಾಲದಲ್ಲಿ ಎಲ್ಲ ವಿಷಯದ ಬಗ್ಗೆಯೂ ಅಧಿಕೃತವಾದ, ದೃಢವಾದ, ಪರಿಶೀಲಿಸಲ್ಪಟ್ಟ ಮಾಹಿತಿಗಳು ಒಂದೇ ಕಡೆ ಸಿಗುವಂತೆ ಮಾಡಲು ನೂಪೀಡಿಯ ಎಂಬ ಒಂದು ಯೋಜನೆ ಹುಟ್ಟಿಕೊಂಡಿತು. ಇದಕ್ಕೆ ಯಾರು ಬೇಕಾದರೂ ಮಾಹಿತಿ ಬರೆದು ಕಳುಹಿಸಬೇಹುದಾಗಿತ್ತು. ೭ ಸುತ್ತಿನ ಪರಿಶೀಲನೆಯ ನಂತರ ಅಧಿಕೃತವಾಗಿ ಪ್ರದರ್ಶಿಸಲಾಗುತ್ತಿತ್ತು. ಈ ವ್ಯವಸ್ಥೆ ಮೇಲ್ನೋಟಕ್ಕೆ ಉತ್ತಮವಾಗಿಯೇ ಕಂಡರೂ ಲೇಖನಗಳ ಸಂಖ್ಯೆ ಹೆಚ್ಚಿದಂತೆ, ಪರಿಶೀಲನೆ ಕಷ್ಟವಾಗತೊಡಗಿತು. ಹಾಗಾಗಿ ನೂಪೀಡಿಯಕ್ಕೆ ಒಂದು ವರ್ಷದಲ್ಲಿ ಕೇವಲ ೧೨ ಲೇಖನ ಮಾತ್ರ ಸೇರಿತು.

ನೂಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದ ಜಿಮ್ಮಿ ವೇಲ್ಸ್ ಮತ್ತು ಸಂಗಡಿಗ ಲ್ಯಾರಿ ಸೇಂಜರ್ ಈ ತೊಂದರೆಯನ್ನು ಪರಿಹರಿಸಲು ಪರ್ಯಾಯ ವಿಧಾನಗಳನ್ನು ಹುಡುಕಲಾರಂಭಿಸಿದರು. ಇದೇ ಸಮಯದಲ್ಲಿ, ಬೆನ್ ಕೋವಿಜ್ ಎಂಬ ಪ್ರೋಗ್ರಾಮರ್ ಒಬ್ಬ “ವಿಕಿ” ತಂತ್ರಾಂಶವನ್ನು ಅವರಿಗೆ ಪರಿಚಯಿಸಿದ. ಅದು ಯಾರು ಬೇಕಾದರೂ, ಯಾವಾಗ ಬೇಕಾದರೂ, ಯಾವ ಮಾಹಿತಿಯನ್ನು ಬೇಕಾದರೂ ಬದಲಾಯಿಸಬಲ್ಲ ತಂತ್ರಾಂಶವಾಗಿತ್ತು. ಜಿಮ್ಮಿ ವೇಲ್ಸ್ ಈ ವಿಕಿ ತಂತ್ರಾಂಶದ ಮೂಲಕ ಯಾರು ಬೇಕಾದರೂ ಮಾಹಿತಿಯನ್ನು ಸೇರಿಸಬಹುದಾದ ಒಂದು ಹೊಸ ಯೋಜನೆಯ ಪರಿಕಲ್ಪನೆಗೆ ಜನವರಿ ೧೦, ೨೦೦೧ರಂದು ಚಾಲನೆ ನೀಡಿದ. ಆದರೆ ನೂಪೀಡಿಯದಲ್ಲಿದ್ದ ಸಂಪಾದಕರು ಅದರ ವಿಶ್ವಾಸಾರ್ಹತೆ ಕಡಿಮೆಯಾಗಬಹುದೆಂದು ತಿಳಿದು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಹಾಗಾಗಿ, ಜಿಮ್ಮಿ ವೇಲ್ಸ್ ಈ ಯೋಜನೆಯನ್ನು ನೂಪೀಡಿಯದಿಂದ ಬೇರ್ಪಡಿಸಿ, ಸ್ವತಂತ್ರವಾಗಿ ೨೦೦೧ರ ಜನವರಿ ೧೫ರಂದು ವಿಕಿಪೀಡಿಯ ಎಂಬ ಹೆಸರಿನೊಂದಿಗೆ ಪ್ರಾರಂಭಿಸಿದ.

ಹೀಗೆ ಪ್ರಾರಂಭವಾದ ವಿಕಿಪೀಡಿಯಕ್ಕೆ ಮೊದಲ ತಿಂಗಳಿನೊಳಗೇ ಸಾವಿರ ಲೇಖನಗಳು ಸೇರಿಸಲ್ಪಟ್ಟವು. ೮ ತಿಂಗಳಿನಲ್ಲಿ ಹತ್ತು ಸಾವಿರ ಲೇಖನಗಳು ತುಂಬಿದವು. ಯಾವುದೇ ಲೇಖನದಿಂದ, ಅದಕ್ಕೆ ಸಂಬಂಧಿಸಿದ ಇನ್ನಾವುದೋ ಲೇಖನಕ್ಕೆ ಕೇವಲ ಕ್ಲಿಕ್ ಮಾಡುವ ಮೂಲಕ ಹೋಗುವ, ತಪ್ಪು ಕಂಡುಬಂದಲ್ಲಿ ಓದುಗರೇ ತಿದ್ದಬಹುದಾದ ಈ ತನ್ನ ವಿಶಿಷ್ಟ ಯೋಜನೆ ಇಷ್ಟು ಜನಪ್ರಿಯವಾಗಿ, ಇಷ್ಟು ವೇಗವಾಗಿ ಬೆಳೆಯಬಹುದೆಂದು ಬಹುಶಃ ಸ್ವತಃ ಜಿಮ್ಮಿ ವೇಲ್ಸ್ ಕೂಡ ಅಂದುಕೊಂಡಿರಲಿಕ್ಕಿಲ್ಲ!

ಈ ಮಧ್ಯೆ ಇನ್ನೊಂದು ಜಿಜ್ಞಾಸೆ ಪ್ರಾರಂಭವಾಯಿತು. ಬ್ರಿಟಾನಿಯಾ ಮುಂತಾದ ವಿಶ್ವಕೋಶಗಳಲ್ಲಿ ಅಧಿಕೃತ ಸಂಪಾದಕ ಮಂಡಳಿ ಇರುತ್ತದೆ; ಅದರಲ್ಲಿನ ಮಾಹಿತಿ ಪರಿಣಿತರಿಂದ ಪರಿಶೀಲಿಸಲ್ಪಟ್ಟಿರುತ್ತದೆ ಹಾಗಾಗಿ ಅದನ್ನು ನಂಬಬಹುದು. ಆದರೆ ವಿಕಿಪೀಡಿಯದಲ್ಲಿ ಇರುವ ಲೇಖನಗಳ ವಿಶ್ವಾಸಾರ್ಹತೆ ಎಷ್ಟು? ನಾನು, ನೀವು ಸೇರಿದಂತೆ ಯಾರು ಬೇಕಾದರೂ ಬರೆಯಬಹುದಾದ್ದರಿಂದ, ಅದರಲ್ಲಿ ಯಾರಾದರೂ “ಮೊಲಕ್ಕೆ ಮೂರು ಕಾಲು, ಎರಡು ಕೊಂಬು ಇರುತ್ತದೆ. ಮೊಲ ಒಂದು ಮಾಂಸಾಹಾರಿ ಪ್ರಾಣಿ” ಎಂದು ಬರೆದರೆ ಅದು ಕೂಡ ವಿಕಿಪೀಡಿಯದಲ್ಲಿ ದಾಖಲಾಗುತ್ತದೆ. ಹಾಗಾಗಿ ಇದನ್ನು ನಂಬುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು, ವಿಕಿಪೀಡಿಯದ ೫ ಆಧಾರಸ್ತಂಭಗಳನ್ನು ನೋಡೋಣ:

೧. ವಿಕಿಪೀಡಿಯ ಒಂದು ವಿಶ್ವಕೋಶ :- ಇದೊಂದು ವಿಶ್ವಕೋಶ ಎಂದು ಗೊತ್ತು, ಅದೇನು ದೊಡ್ಡ ವಿಷಯ ಎನ್ನಬೇಡಿ. ಅದರ ಅರ್ಥ, ಅದರಲ್ಲಿ ಇರಬೇಕಾಗಿದ್ದು ವಾಸ್ತವಾಂಶಗಳೇ ಹೊರತು, ಕಥೆ-ಕವನ-ಸುದ್ದಿ-ಅಭಿಪ್ರಾಯಗಳಲ್ಲ.
೨. ವಿಕಿಪೀಡಿಯದಲ್ಲಿನ ಲೇಖನಗಳು ತಟಸ್ಥ ದೃಷ್ಟಿಕೋನದಿಂದ ಬರೆಯಬೇಕು :- ಯಾರೇ ಆಗಲಿ ವಿಷಯ ಬರೆಯುವಾಗ ಅರ್ಧ ಸತ್ಯ ಬರೆಯಬಾರದು. ಇದು ನಾನು ಓದಿದ ಶಾಲೆ ಎಂದು ಆ ಶಾಲೆಯನ್ನು ಹೊಗಳುವುದೋ, ಅಥವಾ ಯಾವುದೋ ಆಟಗಾರ ನನಗಿಷ್ಟವಿಲ್ಲ ಎಂದು ಕೇವಲ ಅವನು ಸಿಕ್ಕಿಹಾಕಿಕೊಂಡ ವಿವಾದಗಳ ಬಗ್ಗೆ ಮಾತ್ರ ಬರೆಯುವುದು – ಹೀಗೆ ಮಾಡುವಂತಿಲ್ಲ. ಒಂದು ವಿಷಯದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಬರೆಯಬೇಕು.
೩. ವಿಕಿಪೀಡಿಯದ ಲೇಖನಗಳನ್ನು ಯಾರು ಬೇಕಾದರೂ ವೀಕ್ಷಿಸಬಹುದು, ಬದಲಿಸಬಹುದು ಮತ್ತು ಹಂಚಬಹುದು :- ವಿಕಿಪೀಡಿಯ ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಷೇರ್ ಅಲೈಕ್ ಲೈಸೆನ್ಸ್ ಮಾದರಿಯನ್ನು ಹೊಂದಿದೆ. ಅಂದರೆ ವಿಕಿಪೀಡಿಯವನ್ನು ನೀವು ಕೇವಲ ಓದುವುದು, ಬರೆಯುವುದು, ತಿದ್ದುವುದು ಅಷ್ಟೇ ಅಲ್ಲ, ಅದನ್ನು ಬೇರೆಯವರಿಗೆ ಕೂಡ ಹಂಚಬಹುದು. ವಿಕಿಪೀಡಿಯದ ಸಂಪೂರ್ಣ ದತ್ತಾಂಶವನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಂದೇ ನಿಬಂಧನೆಯೆಂದರೆ,ನೀವು ಅದನ್ನು ವಿಕಿಪೀಡಿಯದಿಂದ ತೆಗೆದುಕೊಂಡಿದ್ದೀರಿ ಎಂಬುದನ್ನು ನಮೂದಿಸಬೇಕು.
೪. ವಿಕಿಪೀಡಿಯದ ಸಂಪಾದಕರು ಪರಸ್ಪರ ಸಂವಹನ ನಡೆಸುವಾಗ ಗೌರವಯುತವಾಗಿ ಮತ್ತು ಸಭ್ಯವಾಗಿ ವರ್ತಿಸಬೇಕು :- ಕೆಲವೊಮ್ಮೆ ಲೇಖನಗಳನ್ನು ತಿದ್ದುವುದು ವೈಯಕ್ತಿಕ ಪ್ರತಿಷ್ಠೆಯ ವಿಷಯಗಳಾಗುವುದುಂಟು. ಹೀಗಾಗಬಾರದೆಂದು ಈ ಕಿವಿಮಾತು.
೫. ವಿಕಿಪೀಡಿಯದಲ್ಲಿ ಯಾವುದೇ ಕಟ್ಟುನಿಟ್ಟಾದ ನಿಯಮಗಳಿಲ್ಲ – ಈ ಮೇಲಿನ ನಿಯಮಗಳು ಜನರಿಂದಲೇ ಮಾಡಿದ್ದು, ಅವು ಕೇವಲ ಮಾರ್ಗದರ್ಶಿ ಸೂತ್ರಗಳಷ್ಟೇ. ವಿಕಿಪೀಡಿಯದ ಮಾಹಿತಿಯನ್ನು ಉತ್ತಮಗೊಳಿಸಬಹುದೆಂದು ನಿಮಗೆ ಅನ್ನಿಸಿದರೆ ನೀವು ನಿಯಮಗಳನ್ನು ಗಾಳಿಗೆ ತೂರಿ ಲೇಖನ ಬದಲಾಯಿಸಬಹುದು.

ಈಗ ಹಿಂದೆ ಉದ್ಭವಿಸಿದ ಪ್ರಶ್ನೆಗೆ ಉತ್ತರ ಕಂಡುಹಿಡಿಯೋಣ. ಒಬ್ಬ “ಮೊಲಕ್ಕೆ ಮೂರು ಕಾಲು, ಎರಡು ಕೊಂಬು ಇರುತ್ತದೆ. ” ಎಂದು ಬರೆದ. ಇನ್ನೊಬ್ಬ ಕೂಡ ಅದನ್ನು ಓದಬಹುದು, ಬದಲಾಯಿಸಬಹುದು ತಾನೆ? ಅವನು ಬಂದು “ಮೊಲಕ್ಕೆ ನಾಲ್ಕು ಕಾಲು ಇರುತ್ತದೆ, ಎರಡು ಕಿವಿ ಇರುತ್ತದೆ” ಎಂದು ತಿದ್ದಬಹುದು. ಮೊದಲ ವ್ಯಕ್ತಿ ಬಂದು ಈ ಬದಲಾವಣೆ ನೋಡಿ ಮತ್ತೆ ಅದನ್ನು ಮೂರು ಕಾಲು ಎರಡು ಕೊಂಬು ಎಂದು ತಿದ್ದಬಹುದು. ಆಗ ಎರಡನೇ ವ್ಯಕ್ತಿ ಬಂದು ಯಾವುದೋ ಅಧಿಕೃತ ಪುಸ್ತಕ, ಜಾಲತಾಣ ಅಥವಾ ಪತ್ರಿಕಾ ವರದಿ ಅಥವಾ ಸಂಶೋಧನಾ ಪ್ರಬಂಧ – ಇವುಗಳನ್ನು ಉದ್ಧರಿಸಿ ಮೊಲಕ್ಕೆ ನಾಲ್ಕು ಕಾಲು, ಎರಡು ಕಿವಿ ಎಂದು ಮತ್ತೆ ತಿದ್ದಬಹುದು. ಈ ರೀತಿ ಸಮರ್ಥನೆಗಳನ್ನು ನೀಡುವುದಕ್ಕೆ ವಿಕಿಪೀಡಿಯದಲ್ಲಿ ಉಲ್ಲೇಖಗಳು/ಆಧಾರಗಳು (references/citations) ಎಂದು ಕರೆಯಲಾಗುತ್ತದೆ (ಸಾಮಾನ್ಯವಾಗಿ ಲೇಖನಗಳ ಕೆಳಗೆ ಇರುತ್ತವೆ, ಮತ್ತು ಲೇಖನದ ನಡುವೆ ಸಣ್ಣ ಸಂಖ್ಯೆ ನೀಡಲಾಗಿರುತ್ತದೆ). ಯಾವುದು ಸಮರ್ಪಕವಾದ ಆಧಾರವಿದೆಯೋ ಅದನ್ನು ಸರಿ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಮೀರಿ ಮೊದಲ ವ್ಯಕ್ತಿ ಬಂದು, ಯಾವುದೇ ಸಮರ್ಪಕ ಪುರಾವೆ ನೀಡದೆ ಮತ್ತೆ ಮೂರು ಕಾಲು ಎಂದು ತಿದ್ದಿದರೆ, ವಿವಾದ  ಬಗೆಹರಿಯುವವರೆಗೆ ಆ ಲೇಖನವನ್ನು ಸಂರಕ್ಷಿತಗೊಳಿಸುವ (locked article) ಮತ್ತು ಆ ವ್ಯಕ್ತಿ ಈ ರೀತಿಯ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ಆ ವ್ಯಕ್ತಿ ವಿಕಿಪೀಡಿಯ ಸಂಪಾದನೆ ಮಾಡಲು ಬಾರದಂತೆ ನಿಷೇಧಿಸುವ (ban) ಸೌಲಭ್ಯವೂ ಇದೆ. ಹೀಗಾಗಿ, ಒಬ್ಬ ವ್ಯಕ್ತಿ ತಪ್ಪು ಬರೆದರೂ, ತಿದ್ದುವವರು ಇರುವಾಗ ತನ್ನಿಂತಾನೇ ಲೇಖನದಲ್ಲಿನ ಸತ್ಯಾಂಶ ಮತ್ತು ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. ಇತ್ತೀಚಿನ ವರದಿ ಪ್ರಕಾರ ಬ್ರಿಟಾನಿಕಾ ಮತ್ತು ವಿಕಿಪೀಡಿಯ ಎರಡೂ ಕೂಡ ವಿಶ್ವಾಸಾರ್ಹತೆಯಲ್ಲಿ ಒಂದೇ ಮಟ್ಟವನ್ನು ಹೊಂದಿವೆ ಎಂದು ತಿಳಿದುಬರುತ್ತದೆ.

ಯಾವುದೇ ಪ್ರಮುಖ ವಿಷಯದ ಬಗ್ಗೆ ಮಾಹಿತಿ ಹುಡುಕಿದಾಗಲೂ ಮೊದಲು ಸಿಗುವ ಕೊಂಡಿ ವಿಕಿಪೀಡಿಯದ್ದು. ವಿಜ್ಞಾನ, ಕಲೆ, ಸಾಹಿತ್ಯ, ಪುರಾಣ – ಯಾವುದೇ ವಿಷಯವಿರಲಿ, ವಿಕಿಪೀಡಿಯದಲ್ಲಿ ಮಾಹಿತಿಯಿರುತ್ತದೆ. ಹಾಗಾಗಿ ವಿಕಿಪೀಡಿಯ ಇಲ್ಲದೇ ಮಾಹಿತಿ ಹುಡುಕುವುದೇ ಕಷ್ಟವೇನೋ ಎನ್ನುವಷ್ಟು ಹಾಸುಹೊಕ್ಕಾಗಿದೆ. ವಿಕಿಪೀಡಿಯ ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ, ಹಿಂದೀ, ಸಂಸ್ಕೃತ ಮುಂತಾದ ೨೦ ಭಾರತೀಯ ಭಾಷೆಗಳೂ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಲಭ್ಯವಿದೆ. ಆಂಗ್ಲದಲ್ಲಿ ನಲವತ್ತು ಲಕ್ಷಕ್ಕಿಂತ ಹೆಚ್ಚು ವಿಷಯಗಳ ಮಾಹಿತಿಯಿದ್ದರೆ, ಕನ್ನಡದಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ವಿಷಯಗಳ ಬಗ್ಗೆ ಮಾಹಿತಿಯದೆ.

ಇವೆಲ್ಲವೂ ಸಾಧ್ಯವಾಗುವುದು ನನ್ನ-ನಿಮ್ಮಂಥವರಿಂದ. ಯಾರು ಬೇಕಾದರೂ ವಿಕಿಪೀಡಿಯದ ಲೇಖನಗಳ ಮೇಲ್ಭಾಗದಲ್ಲಿ ಇರುವ Edit/ಸಂಪಾದಿಸು ಎನ್ನುವ ಕೊಂಡಿಯನ್ನು ಒತ್ತಿ, ಲೇಖನವನ್ನು ಬದಲಾಯಿಸಬಹುದು, ತಿದ್ದಬಹುದು, ಹೆಚ್ಚಿನ ಮಾಹಿತಿಯನ್ನು ಸೇರಿಸಬಹುದು. ನಮ್ಮ ಊರಿಗೆ-ಸಂಸ್ಕೃತಿಗೆ-ಕೆಲಸಕ್ಕೆ ಸಂಬಂಧಪಟ್ಟ ವಿಷಯಗಳನ್ನು ನಾವೇ ಬರೆಯಬಹುದು. ನಮಗೆ ಗೊತ್ತಿರುವ ವಿಷಯಗಳನ್ನು ವಿಕಿಪೀಡಿಯದಲ್ಲಿ ಬರೆದು ಹಾಕಿ ಇತರರಿಗೂ ಸುಲಭವಾಗಿ ಸಿಗುವಂತೆ ಹಂಚಿಕೊಂಡರೆ ನಾವು ಆ ವಿಷಯ ತಿಳಿದುಕೊಂಡಿದ್ದೂ ಸಾರ್ಥಕವಾದಂತೆ. ಅಲ್ಲವೆ?

ಹರೀಶ್ ಊರು ಸಾಗರದ ಹತ್ತಿರ ಮಂಚಾಲೆ. ದಾವಣಗೆರೆಯ ಬಿ.ಐ.ಇ.ಟಿ ಯಲ್ಲಿ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮುಗಿಸಿ ಈಗ ಟಾಟಾ ಎಲೆಕ್ಸಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಭಾಷೆಯ ಬಳಕೆ, ತಂತ್ರಜ್ಞಾನದ ವಿಷಯಗಳಲ್ಲಿ ಆಸಕ್ತಿಯಿದೆ.

ಮುಂದೆ ಓದಿ

ಹೊಸ ಅಲೆ ೬ – ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ

ಪ್ರಕಟಿಸಿದ್ದು ದಿನಾಂಕ Aug 6, 2012 ವಿಭಾಗ 2012, ale2 | ೧ ಪ್ರತಿಕ್ರಿಯೆ

20ನೇ ಶತಮಾನದ ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಲಾ ಇತಿಹಾಸದಲ್ಲಿ ನಿಸರ್ಗ ಚಿತ್ರಣ.

ವಸಾಹತೋತ್ತರ ಕರ್ನಾಟಕದ ನಿಸರ್ಗ ಚಿತ್ರಣಕ್ಕೆ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದರೂ ಸಹ, ಇನ್ನಿತರ ಪ್ರಕಾರಗಳಿಗೆ ಸಿಕ್ಕಂತ ಮನ್ನಣೆ ಇದಕ್ಕೆ ಸಿಕ್ಕಿರುವುದು ವಿರಳವೆಂದೇ ಹೇಳಬಹುದು. ವೆಂಕಟಪ್ಪನವರ ಆದಿಯಾಗಿ ಈಗಲೂ ಉತ್ತರಕರ್ನಾಟಕದ ಬಹುತೇಕ ಕಲಾವಿದರು ನಿಸರ್ಗಚಿತ್ರಣದಲ್ಲಿ ತೊಡಗಿದ್ದರು, ಕೇವಲ ಬೆರಳೆಣಿಕೆಯಷ್ಟು ಕಲಾವಿದರ ಕಲಾಕೃತಿಗಳನ್ನು ಹೊರತುಪಡಿಸಿದರೆ ನಿಸರ್ಗ ಚಿತ್ರಣಗಳನ್ನು ಕಲೆಯ ಮುಖ್ಯವಾಹಿನಿಯಾಗಿ, ಚರ್ಚೆಗೊಳಪಡಿಸುವುದಾಗಲಿ ಅಥವ ಕಲಾ ಇತಿಹಾಸದ ಪ್ರಮುಖ ಘಟ್ಟಗಳನ್ನು ಗುರುತಿಸುವ ಕಾರ್ಯ ನಡೆದಿಲ್ಲವೆಂಬ ಅಂಶವನ್ನು ಗುರುತಿಸಬಹುದು.

ಕೃಪೆ:   ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ರಂಥಾಲಯ ವಿಭಾಗ

ಕಲಾಶಾಲೆಗಳ ಪ್ರಭಾವ ನಿಸರ್ಗ ಪ್ರಕಾರದ ಮೇಲೆ

ವಸಾಹತೋತ್ತರ ಕರ್ನಾಟಕದ ಚಿತ್ರಕಲೆಯಲ್ಲಿನ ಪ್ರಮುಖ ಕಲಾವಿದರ ಕಲಾಕೃತಿಗಳಲ್ಲಿ ಎರಡು ಪ್ರಮುಖ ಕಾಲಾಶಾಲೆಗಳ ಅಭ್ಯಾಸ ಕ್ರಮದ ಪ್ರಭಾವಿತ ಶೈಲಿಗಳನ್ನು ಗುರುತಿಸುವುದಾದರೆ ಅದು ಜೆ.ಜೆ ಕಲಾಶಾಲೆಯ ಅಭ್ಯಾಸದಿಂದ ಪ್ರಭಾವಿತ ಶೈಲಿ. ಮತ್ತು ಕಲ್ಕತ್ತಾ, ಶಾಂತಿನಿಕೇತನದ ಬಂಗಾಲಿ ಪುನರುಜ್ಜೀವನ ಶೈಲಿ ಮತ್ತೊಂದು. ಇದಕ್ಕೂ ಮೊದಲು ಕರ್ನಾಟಕ ಕಲಾಭ್ಯಾಸಗಳನ್ನು ಸಾಂಪ್ರದಾಯಿಕ ಶೈಲಿಗಳೆ ಪ್ರಭಾವಿಸಿದ್ದು, ಬ್ರಿಟೀಷರ ಶೈಲಿಯ ಭಾರತೀಯ ಕಲಾಭ್ಯಾಸವನ್ನು ಮೈಸೂರು ರಾಜರ ಆಸ್ಥಾನ ಕಲಾವಿದರಲ್ಲಿ ಕಾಣಬಹುದು.

ಈ ಆಸ್ಥಾನ ಕೇಂದ್ರಿತ ಅಥವ ಮಹಾರಾಜರ ಪ್ರೋತ್ಸಾಹದಿಂದ ರಚಿತವಾಗುತ್ತಿದ್ದ ಕಲಾಕೃತಿಗಳು ಮಾಹಾರಾಜರಿಗಾಗಿ ಮಾತ್ರ ರಚಿಸುತ್ತಿದ್ದರಿಂದ ಅವು ಅರಮನೆಯ, ರಾಜನ ಒಡ್ದೋಲಗ, ವೈಭೋಗವನ್ನು ಪ್ರತಿನಿದಿಸುವ, ರಾಜನ ಸಂಭ್ರಮಾಚಾರಣೆಯನ್ನು ದಾಖಲಿಸುವ (ಕಾಲದ) ಕಲಾಕೃತಿಗಳಾಗಿ ಉಳಿದವೇ ಹೊರತು, ಅರಮನೆಯ ಸರಹದ್ದುಗಳನ್ನು ಮೀರಿ ಕಾಲ ಘಟ್ಟಗಳನ್ನು, ಪರಿಸರಗಳನ್ನು, ಜನಜೀವನದೊಂದಿಗೆ ಮೇಳೈಸುವ ನಿಸರ್ಗ ಚಿತ್ರಣಗಳು ಕಾಣಸಿಗುವುದೇಇಲ್ಲ. ಇಲ್ಲವೇ ದೊರಕಿದರೂ ಅವು ಕರ್ನಾಟಕದವರಲ್ಲದ ಕಲಾವಿದರು ಮತ್ತು ಬ್ರಿಟೀಷರಿಂದ ರಚಿತಗೊಂಡಿರುವ ಕಲಾಕೃತಿಗಳನ್ನಷ್ಟೇ ಕಾಣಬಹುದು.

ಅ) ಪ್ರಭುತ್ವ ಮತ್ತು ನಿಸರ್ಗ

ವಸಾಹತು ಕಾಲದಿಂದಲೇ ಪ್ರಾರಂಭಿಸಿ ಮಹಾರಾಜರ ಪ್ರೋತ್ಸಾಹದಿಂದ ಶಾಂತಿನಿಕೇತನದಲ್ಲಿ ಕಲಾವ್ಯಾಸಂಗ ಮಾಡಿ ಬಂದ ಕಲಾಕುಟುಂಬದ ಹಿನ್ನಲೆಯ ಕೆ.ವೆಂಕಟಪ್ಪನವರು ಈ ಮೇಲಿನ ದಾಖಲೆಗಳಿಗೆ ಅಪವಾದವೆಂಬಂತೆ ನಿಸರ್ಗ ದೃಶ್ಯಗಳ ರಚನೆಯಲ್ಲಿ ತೊಡಗಿದ್ದರು. ಇವರು ಪಡೆದುಕೊಂಡ ಶಿಕ್ಷಣದ ಪ್ರಭಾವದ ಹಿನ್ನಲೆಯಲ್ಲೇ ಈ ಚಿತ್ರಗಳನ್ನು ನೋಡುವುದಾದರೆ ಇವು ವಸಾಹತು ಶೈಲಿಗಳಿಂದ ಭಿನ್ನವಾಗಿ ನಿಲ್ಲುವುದು ಇವರ ಚಿತ್ರಗಳಲ್ಲಿ ಎಲ್ಲಿಯೂ ನಮಗೆ ಪ್ರಾಚೀನ ಕಟ್ಟಡಗಳ, ಸ್ಮಾರಕಗಳ ಚಿತ್ರಗಳು ಸಿಗುವುದಿಲ್ಲ. ಅಲ್ಲಿ ಸಿಗುವುದೆಲ್ಲ ಅಪ್ಪಟ ನಿಸರ್ಗ ಚಿತ್ರಗಳು. ಅಥವ ವಸಾಹತು ಶೈಲಿಯ ದಾಖಲೆಗಳಾಗಿ ಉಳಿಯಬೇಕೆಂಬ ಕಲಾರಚನೆಯನ್ನು ದಿಕ್ಕರಿಸಲೆಂದೇ ರಚನೆಯಾದ ವಿರೋಧಿನೆಲೆಯಲ್ಲಿ ರಚಿತ ಕಲಾಕೃತಿಗಳು. ಇದಕ್ಕೆ ಸ್ಪಷ್ಟ ಉದಹರಣೆ ಕೊಡಬಹುದಾದರೆ ಅದು

ವೆಂಕಟಪ್ಪನವರ ಅಗ್ರಹಾರದ ಒಂದು ಮರದ ಚಿತ್ರವನ್ನು ಉದಾಹರಿಸಬಹುದು. ಇಡೀ ಕಲಾಕೃತಿಯ ಚೌಕಟ್ಟಿನಲ್ಲಿ ಹೆಂಚಿನ ಮಾಡಿನ ಮುನ್ನಲೆಯಲ್ಲಿ ಮರವನ್ನು ಕೇಂದ್ರೀಕರಿಸಿ ಚಿತ್ರವನ್ನು ರಚಿಸಲಾಗಿದೆ. ವಸಾಹತುಗಳ ಪ್ರಭಾವವೇ ಎಲ್ಲ ಕಲಾಕೃತಿಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಲಘಟ್ಟದಲ್ಲಿ ರಚಿತವಾದ ಈ ಕಲಾಕೃತಿಯಲ್ಲಿ ಅಲ್ಲಿಯವರೆಗಿನ ಕಲಾಹಾದಿಯನ್ನೇ ಕವಲು ದಾರಿಯಲ್ಲಿ ನಡೆಸಲು ಪ್ರಯತ್ನಿಸಿರುವುದರ ಹಿಂದೆ ಶಾಂತಿನಿಕೇತನದ ಬಂಗಾಲಿ ಪುನರುಜ್ಜೀವನದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದರೊಂದಿಗೆ ಈ ಕಲಾವಿದನಿಗೆ ಮೈಸೂರು ಸಂಸ್ಥಾನದ ವಸಾಹತು ನೀತಿಗಳು ಮತ್ತು ಅವರ ಪ್ರಭಾವಿತ ಸಂಸ್ಕೃತಿಯೆಡೆಗಿನ ತಿರಸ್ಕಾರ ಮತ್ತು ನಿರಾಕರಣೆಯೂ ಇರಬಹುದೇ ಎಂಬ ಅನುಮಾನವು ಮೂಡದೇ ಇರುವುದಿಲ್ಲ.
ವೆಂಕಟಪ್ಪನವರಿಗೆ ವಸಾಹತುಶಾಹಿ ಪ್ರಭಾವದೊಂದಿಗೆ ಬಹುಶಃ ಮಹಾರಾಜರ ಜನಪರಯೋಜನೆಗಳನ್ನು ಸಹ ತಮ್ಮ ಮೇಲಿನ ಋಣಭಾರ(ಶಾಂತಿನಿಕೇತನಕ್ಕೆ ವ್ಯಾಸಂಗದ ಸಲುವಾಗಿ ಕಳಿಸಿದ್ದು)ದರ ಸಲುವಾಗಿ ತಮ್ಮ ಕಲಾಕೃತಿಗಳಲ್ಲಿ ಎಲ್ಲೂ ದಾಖಲಿಸುವ ವೈಭವೀಕರಿಸುವ ಗೋಜಿಗೆ ಹೋಗಿಲ್ಲವೇನೋ ಎಂಬ ಸಂದೇಹವು ಮೂಡುತ್ತದೆ.

ವೆಂಕಟಪ್ಪನವರ ಕೊಡೈಕೆನಾಲ್-ಊಟಿ ಚಿತ್ರಗಳು ಕೂಡ ಅಲ್ಲಿನ ಪರಿಸರವನ್ನು ದೃಶ್ಯದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತವೆಯೇ ಹೊರತು, ಆ ಪರಿಸರದ ವ್ಯಾಪ್ತಿಯಲ್ಲಿ ದಟ್ಟವಾಗಿ ವ್ಯಾಪಿಸಿದ್ದ ಬ್ರಿಟೀಷರ ವಾಸ್ತುಶಿಲ್ಪ ಕಟ್ಟಡಗಳು, ಸ್ಮಾರಕಗಳನ್ನಲ್ಲ. ಅದರ ಬದಲಿಗೆ ವಸಾಹತುಶಾಹಿ ಕಲಾಭ್ಯಾಸದ ಕಲಾಶಾಲೆಯಾದ ಜೆ.ಜೆ.ಕಲಾಶಾಲೆಯ ನೈಜ ಚಿತ್ರಣದ ಪ್ರಭಾವವನ್ನು ಕಾಣಬಹುದು. ವೆಂಕಟಪ್ಪನವರ ನಿಸರ್ಗ ಚಿತ್ರದಲ್ಲಿ ಕಾಣುವ ಮತ್ತೊಂದು ಅಂಶವೆಂದರೆ ಅವರ ನಿಸರ್ಗ ಚಿತ್ರಗಳಲ್ಲಿ ಎಲ್ಲಿಯೂ ಆಗಿನ ಜನ-ಜೀವನವು ಕಾಣುವುದಿಲ್ಲ. ಹಾಗಾಗಿ ಅವರ ಕಲಾಕೃತಿಗಳು ವಸಾಹತೋತ್ತರ-ಪೂರ್ವದ ಕಾಲಘಟ್ಟದಲ್ಲಿ ರಚಿತವಾಗಿದ್ದರೂ ಕಾಲದ ಗಣನೆಗೆ ಎಲ್ಲೂ ಒಳಗಾಗುವುದೇ ಇಲ್ಲ. ಹಾಗಾಗಿ ಅವು ಕಾಲದ ವ್ಯಾಪ್ತಿಯ ಹೊರಗೇ ಉಳಿಯುವಂತ ಸಾಂಪ್ರದಾಯಿಕ ಶೈಲಿಯ ಮುಂದುವರಿದ ಭಾಗದ ಕಲಾಕೃತಿಗಳಾಗಿ ನಿಲ್ಲುತ್ತವೆ. ಇವರ ಒಟ್ಟಾರೆ ನಿಸರ್ಗ ಚಿತ್ರಗಳನ್ನು ಗಮನಿಸಿದಲ್ಲ್ಲಿ ಇವು ಕಾ¯ದ ರಾಜಕೀಯ ನಡೆಗಳು, ವಸಾಹತುಶಾಹಿ ಪ್ರಭಾವ, ಸಾಂಸ್ಕೃತಿಕ ಪಲ್ಲಟಗಳ ಅಧ್ಯಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸ್ವಾತಂತ್ರ್ಯ ಪೂರ್ವದ ಮೂರು ದಶಕಗಳು ಮತ್ತು ಸ್ವಾತಂತ್ರ್ಯೋತ್ತರದ ಮೂರು ದಶಕಗಳು ಕರ್ನಾಟಕದಲ್ಲಿ, ಅದಕ್ಕೂ ಮುಂಚಿನ ಸಾಂಪ್ರದಾಯಿಕ ಶೈಲಿಗಳಿಂದ ಹೊರಬಂದು ಪಾಶ್ಚಿಮಾತ್ಯದ ಪ್ರಭಾವದಿಂದ ಪ್ರೇರಿತವಾಗಿ ಕರ್ನಾಟಕ ಕಲಾ ಇತಿಹಾಸದ ಆಧುನಿಕ ಕಲಾ ಪರ್ವದ ಬುನಾದಿ ಕರ್ನಾಟಕ ಕಲಾಚರಿತ್ರೆಗೆ ಕಟ್ಟಿಕೊಟ್ಟ ಕಾಲವೆಂದು ಗುರುತಿಸಬಹುದು. ಕಾರಣ ಅಲ್ಲಿಯವರೆಗು ಇದ್ದ ವಂಶಪಾರಂಪರ್ಯದ ಕಲಾಭ್ಯಾಸದಿಂದ ಹೊರಗೆ ಬಂದು, ವಸಾಹತುಶಾಹಿ ಕಲಾ ಶಿಕ್ಷಣವನ್ನು ಕಲಿಸಲು ಆರಂಭಿಸಿದ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಮತ್ತು ಹೆಚ್ಚಿನ ವ್ಯಾಸಂಗಕ್ಕೆ ಜೆ.ಜೆ.ಕಲಾಶಾಲೆಗೆ, ಮದ್ರಾಸು ಆರ್ಟ್ ಕಾಲೇಜ್ ಹೋಗುವ ಪರಿಪಾಠ ಆರಂಭವಾದ ಕಾಲವದು.

ಈ ಹಿಂದೆ ಹೇಳಿದಂತೆ ಕರ್ನಾಟಕದ ಕಲಾಚರಿತ್ರೆಯ ವಸಾಹತುಶಾಹಿ ಶೈಲಿಯ ಆಧುನಿಕ ಪರ್ವದ ಆರಂಭದ ಕಾಲದಲ್ಲಿ ಮೈಸೂರು ರಾಜಾಶ್ರಯದ ಕಲಾವಿದರಷ್ಟೇ ಅಲ್ಲದೆ ಮೈಸೂರು ಪ್ರಾಂತ್ಯದಲ್ಲೇ ಆದರೆ ಮೈಸೂರಿಗೆ ದೂರದ ಪ್ರದೇಶಗಳಾದ ಧಾರವಾಡ, ಕಲ್ಬುರ್ಗಿ, ಬೆಳಗಾವಿಯಲ್ಲೂ ಕೂಡ ಈ ವಸಾಹತುಶಾಹಿಯ ಪ್ರಭಾವದಿಂದಾಗಿ ಚಿತ್ರಕಲೆಯಲ್ಲಿ ಕಲಾಶಿಕ್ಷಣವನ್ನು ಪಡೆದು ಕಲಾಕೃತಿಗಳನ್ನು ರಚಿಸುವ ಕಲಾವಿದರ ಸಂಖ್ಯೆಯು ಜಾಸ್ತಿಯಾಯಿತು. ಅಲ್ಲಿನ ಬಹುತೇಕರು ಕಲಾ ಶಿಕ್ಷಣಕ್ಕೆ ಮುಂಬಯಿಯ ಜೆ.ಜೆಯನ್ನೇ ಆಯ್ದುಕೊಂಡದ್ದು ಹೆಚ್ಚು. ಅದರಲ್ಲಿ ಕೆಲವರು ಜೆ.ಜೆಯಲ್ಲಿ ಪ್ರವೇಶ ಸಿಗದೆ ಜಿ.ಎಸ್.ದಂಡಾವತಿ ಮಠರ ನೂತನ ಕಲಾಮಂದಿರದಲ್ಲಿ ಶಿಕ್ಷಣಪಡೆದವರು ಇದ್ದಾರೆ. ಆ ನಂತರದ ದಿನಗಳಲ್ಲಿ ಪ್ರಾರಂಭವಾದ ಡಿ.ವಿಹಾಲಭಾವಿ ಕಲಾಶಾಲೆ, ಗದಗಿನ ವಿಜಯ ಕಲಾಮಂದಿರದಲ್ಲು ಕಲಾಶಿಕ್ಷಣ ಪ್ರಾರಂಭವಾಯಿತು. 60-70ರ ದಶಕದಲ್ಲಿ ಕೆನ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಆರಂಭವಾಯಿತು.

ಆ) ನಿಸರ್ಗ ಚಿತ್ರಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವ

ಈ ಎಲ್ಲ ಬೆಳವಣಿಗೆಗಳ ಹಿಂದೆ ಅದಾಗಲೇ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟೀಷರ ಜೆ.ಜೆ ಪ್ರಭಾವ ಕಲಾವಿದರ ಕಲಾಕೃತಿಗಳ ರಚನೆಯಲ್ಲಿ ಆಳವಾಗಿ ಬೇರೂರಿದ್ದರಿಂದ ಅಲ್ಲಿಯವರೆಗೂ ಅಂದರೆ ವಸಾಹತುಶಾಹಿಗೂ ಮೊದಲಿನ ಸಾಂಪ್ರದಾಯಿಕ ಚಿತ್ರಗಳಲ್ಲಿ

ಹಿನ್ನಲೆಯಾಗಿದ್ದ ನಿಸರ್ಗ ಚಿತ್ರಗಳ ಸಂಪ್ರದಾಯ, ಸಾಂಪ್ರದಾಯಿಕತೆಯಿಂದ ಹೊರಬಂದು ತಮ್ಮದೇ ಪ್ರತ್ಯೇಕ ಅಸ್ತಿತ್ವವನ್ನು ಪಡೆದುಕೊಳ್ಳತೊಡಗಿದವು. ಸಾಂಪ್ರದಾಯಿಕ ಚಿತ್ರಗಳಲ್ಲಿನ ಪೌರಾಣಿಕ, ಧಾರ್ಮಿಕ ಚಿತ್ರಗಳಲ್ಲಿ ಮುನ್ನಲೆಯ ವಿಷಯಕ್ಕೆ ಪೂರಕವಾಗಿ ಹಿನ್ನಲೆಯಲ್ಲಿ ರಚಿತವಾಗುತ್ತಿದ್ದ ಮಹಲುಗಳು, ಪರಿಸರಗಳು ಮುನ್ನಲೆಗೆ ಬಂದು ನಿಂತು ಕಲಾಕೃತಿಯ ಮೂಲವಸ್ತು ವಿಷಯವಾಗತೊಡಗಿತು. ಅಲ್ಲಿಯವರೆಗು ಸ್ಮೃತಿಯು ಉದ್ದೀಪಿಸುವಂತ ಕಾಲ್ಪನಿಕ ಭವನ ಪರಿಸರಗಳನ್ನು ತ್ಯಜಿಸಿ. ನಿಸರ್ಗದಲ್ಲೇ ಕೂತು ಸ್ಥಳದಲ್ಲೇ ಚಿತ್ರ ರಚಿಸುವ ಅಭ್ಯಾಸ ಪ್ರಾರಂಭವಾಯಿತು. ಆ ಮೂಲಕ ವಸಾಹತು ಶೈಲಿಯ ಸ್ಮಾರಕಗಳನ್ನು, ಕಟ್ಟಡಗಳನ್ನು, ದೇವಸ್ಥಾನಗಳನ್ನು , ಪರಿಸರಗಳನ್ನು ರಚಿಸುವುದು ಪ್ರಾರಂಭವಾಯಿತು. ಕೆಲವರು ತಮ್ಮ ಆಯ್ಕೆಯ ವಿಷಯಗಳನ್ನಾದರಿಸಿ ತಮ್ಮ ಪರಿಸರದಿಂದ ದೂರದ ಸ್ಥಳಗಳಿಗೆ ಹೋಗಿ ಚಿತ್ರ ರಚಿಸುತ್ತಿದ್ದರೆ ಕೆಲ ಕಲಾವಿದರು ತಮ್ಮ ಸುತ್ತಮುತ್ತಲಿನ ಪರಿಸರವನ್ನೇ ತಮ್ಮ ಆಯ್ಕೆಯ ವಿಷಯಗಳನ್ನಾಗಿಸುತ್ತಿದ್ದರು. ಈ ಆಯ್ಕೆಯ ಪ್ರಕ್ರಿಯೆಯಲ್ಲೇ ಕಲಾವಿದರಿಗೆ ಸೌಂದರ್ಯ, ರೂಪಕ, ಪ್ರತಿಮೆ, ರಸಗ್ರಹಣಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಎದುರಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಆಗಿನ ಕಲಾವಿದರ ಕಲಾಕೃತಿಗಳಲ್ಲಿ ನೋಡಬಹುದು. ಇದಕ್ಕಾಗಿ ಬಹುತೇಕ ಕಲಾವಿದರು ಪಾಶ್ಚಿಮಾತ್ಯದ ಇಸಂಗಳಿಗೆ ಶರಣಾಗಿರುವುದು ಕಾಣಬಹುದು.

ಒಂದೆಡೆ ಬಂಗಾಲಿ ಪ್ರಭಾವ ಇನ್ನೊಂದೆಡೆ ಜೆ.ಜೆ ಕಲಾಶಾಲೆಯ ಭಾರತೀಯ ವಸಾಹತುಶಾಯಿಯ ಪ್ರಭಾವ, ಪಾಶ್ಚಿಮಾತ್ಯದ ಇಸಂಗಳ ಮಧ್ಯೆ ಒಂದಷ್ಟು ಕಾಲದಲ್ಲಿ ರಚಿತವಾದ ನಿಸರ್ಗ ಚಿತ್ರಗಳಲ್ಲಿ ಪ್ರಭಾವಗಳಿಂದ ಹೊರಗುಳಿದ/ಹೊರಗುಳಿಯಲು ಪ್ರಯತ್ನಿಸಿರುವ ನಿರ್ಲಿಪ್ತತೆಯನ್ನು ಬಹು ಸಂಖ್ಯೆಯಲ್ಲಿ ಕಾಣಬಹುದು. ಆ ನಿಪ್ರ್ತತೆಯೇ ಕರ್ನಾಟಕದ ನಿಸರ್ಗ ಚಿತ್ರಗಳಿಗೆ ಬೇರೆ ಪ್ರದೇಶಗಳಿಗಿಂತ ಭಿನ್ನವಾದ ಒಳಪದರಗಳನ್ನು ಒಳಗೊಂಡಂತ ಒಳಗೊಳ್ಳಬಹುದಾದ ಸಾಧ್ಯತೆಗಳನ್ನು ಹುಟ್ಟಿಹಾಕಿತು.

III. ಅಂತರ್ ಶಿಸ್ತೀಯ ಸಾಧ್ಯತೆಯ ಸೂಚಿ :

ಅ) ಕನ್ನಡ ಸಿನಿಮಾದ ಕಲಾನಿರ್ದೇಶನ ಮತ್ತು ನಿಸರ್ಗ ಚಿತ್ರ ಪ್ರಕಾರ.

ಇದೇ ಕಾಲಘಟ್ಟದಲ್ಲಿ ಚಿತ್ರಕಲೆಯನ್ನು ಹೊರತುಪಡಿಸಿ ಇನ್ನಿತರ ಸಾಹಿತ್ಯ, ಸಿನಿಮಾದಲ್ಲಿನ ನಿಸರ್ಗ ಚಿತ್ರಗಳಿಗೆ ಸಂಭಂದಿಸಿದಂತೆ ಅವಲೋಕಿಸಿದರೆ ಸಾಹಿತ್ಯವು ದೃಶ್ಯಪ್ರದಾನವಾದ ಚಿತ್ರಕಲೆ ಮತ್ತು ಸಿನಿಮಾಗಿಂತ ಮೊದಲೇ ಧಾರ್ಮಿಕ ಮತ್ತು ಪುರಾಣಗಳ ಚೌಕಟ್ಟನ್ನು ಮೀರಿ ಸಮಾಜದೊಳಗಿನ ಸಾಮಾಜಿಕ ಸಂಗತಿಗಳನ್ನು ಚರ್ಚಿಸಲು ಆರಂಭಿಸಿದ್ದರಿಂದ, ಜೊತೆಗೆ ಸ್ವಾತಂತ್ರ್ಯ ಚಳುವಳಿಗೆ ಪೂರಕವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರಿಂದ, ಕರ್ನಾಟಕದ ಪರಿಸರವನ್ನು ಕಟ್ಟಿಕೊಡುವಂತ ವಿಫುಲ ಸಾಹಿತ್ಯ ಸೃಷ್ಠಿಯಾಯಿತು. ಆ ಮೂಲಕ ಆ ಅರವತ್ತು ವರ್ಷಗಳ ಕಾಲಾವದಿಯ ಚಿತ್ರಣ ಅಕ್ಷರ ರೂಪದಲ್ಲಿ ದಾಖಲಾಯಿತು. ಆದರೆ ‘ಸತಿ ಸುಲೋಚನ’ ಸಿನಿಮಾ ಮೊದಲ ಕನ್ನಡ ಸಿನಿಮಾ ಆಗಿ 1934ರಲ್ಲಿ ತೆರೆಕಂಡರು. ಸರಿ ಸುಮಾರು 50-60 ರ ದಶಕದವರೆಗೆ ಕನ್ನಡ ಸಿನಿಮಾಗಳು ಕೆಲವೊಂದು ನಿರ್ಧಿಷ್ಟ ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಚಿತ್ರೀಕರಿಸುತ್ತಿದ್ದುದ್ದು ಮದ್ರಾಸಿನ ಸ್ಟುಡಿಯೋಗಳಲ್ಲಿ. ಹಾಗಾಗಿ ನಿರ್ಧಿಷ್ಟ ದೃಶ್ಯಗಳಿಗಾಗಿ ಚಿತ್ರೀಕರಿಸಲ್ಪಡುತ್ತಿದ್ದ ಹಿನ್ನಲೆಗಳೇ ನಮಗೆ ಸುಮಾರು 20 ವರ್ಷಗಳ ದೃಶ್ಯ ದಾಖಲೆಗಳಾಗಿ ದೊರಕುವುದು.

ಆ ಲಭ್ಯವಿರುವ ದೃಶ್ಯಗಳು ಅದಾಗಲೇ ಗುರುತಿಸಲ್ಪಡುತ್ತಿದ್ದ ಸ್ಮಾರಕ, ವಾಸ್ತುಕಟ್ಟಡಗಳೇ ಬಹುತೇಕ ಇರುವುದು. ಅವು ಗುರುತಿಸಲ್ಪಡುತ್ತಿದ್ದವು ಗುರುತಿಸಲ್ಪಡುವಂತಹುವುವು ಎಂದೇ ಆ ದೃಶ್ಯಗಳನ್ನು ಹಿನ್ನಲೆಯಲ್ಲಿ ಬಳಸಲಾಗುತ್ತಿತ್ತು. ಪೌರಾಣಿಕ ಸಿನಿಮಾಗಳಿಂದ ಸಾಮಾಜಿಕ ಕಥೆಯಾದರಿಸಿ ಸಿನಿಮಾಗಳು ಬಂದಂತೆಲ್ಲಾ ಕರ್ನಾಟಕದ ಬೇರೆ ಬೇರೆ ಭಾಗದ ನಿಸರ್ಗವು ಸಿನಿಮಾಗಳಲ್ಲಿ ದಾಖಲಾಗುತ್ತಿತ್ತು. ಈ ಹಿಂದೆ ಹೇಳಿದಂತೆ ಸ್ಟುಡಿಯೋಗಳಲ್ಲಿ ಸಿನಿಮಾ ಚಿತ್ರಿಕರಿಸುವುದು ಸಮಾಜಿಕ ಸಿನಿಮಾಗಳು ಬಂದ ಮೇಲೆ ಸುಮಾರು ವರ್ಷಗಳ ಕಾಲ ಮುಂದುವರಿಯಿತು. ಅದು ಮನೆಗಳ ಒಳಾಂಗಣಕ್ಕೆ ಸಂಬಂಧಿಸಿದಂತೆ.

ಸಮಾಜದಲ್ಲಿನ ಮೇಲಸ್ತರ – ಕೆಳಸ್ತರ- ಮಧ್ಯಮವರ್ಗ ಹೀಗೆ ವರ್ಗಗಳಿಗೆ ಸಂಬಂದಿಸಿದ ವಸ್ತುಗಳನ್ನು ಆ ಹಿನ್ನಲೆಯ ಮನೆಯನ್ನು ನೆನಪಿಸುವಂತ ಹಿನ್ನಲೆಯಲ್ಲಿ ಸಂಯೋಜಿಸುವುದರ ಮೂಲಕ ನೀಜಜೀವನದ ಹಿನ್ನಲೆಗಳನ್ನು ಪುನರ್ ರೂಪಿಸಿರುವುದರ ಮೂಲಕ ವರ್ಗಗಳ ಪುನರ್ ಸೃಷ್ಠಿಯ ರೂಪದ ಚೌಕಟ್ಟನ್ನು ಕಟ್ಟಿಕೊಡಲಾಯಿತು.

ಆ) ಕನ್ನಡ ಸಾಹಿತ್ಯ ಮತ್ತು ದೃಶ್ಯಕಲೆಯಲ್ಲಿ ನಿಸರ್ಗ :

ಸಾಹಿತ್ಯ ವಿಮರ್ಶಕ ಡಿ. ಆರ್ ನಾಗರಾಜ್ ತಮ್ಮ ಅಮೃತ ಮತ್ತು ಗರುಡ ಪುಸ್ತಕದಲ್ಲಿ ಶಿವರಾಮ ಕಾರಂತರ ಕುರಿತಂತೆ ಬರೆಯುವಾಗ ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಜಕೀಯ ಕಲ್ಪನೆಗಳು ಸ್ವಾತಂತ್ರ್ಯಾನಂತರ ನಿಂತುಹೋಗಿವೆ ಎಂದು ಉಲ್ಲೇಖಿಸಿದ್ದಾರೆ. ಅದನ್ನೇ ಚಿತ್ರಕಲೆಗೆ ಸಂಬಂದಿಸಿದಂತೆ ನೋಡುವುದಾದರೆ ರಾಜಕೀಯ ಪ್ರೇರಿತ ಕಲಾಕೃತಿ ರಚನೆ ಮತ್ತು ವಸಾಹತುಶಾಯಿ ಪ್ರಭಾವದಿಂದ ಪ್ರಾರಂಭವಾದ ಆಧುನಿಕ ನಿಸರ್ಗಚಿತ್ರಣಗಳ ರಚನೆಯಲ್ಲಿ ರಚಿಸುವುದು ಸ್ಥಳದಲ್ಲೇ ಆದರು ಅಲ್ಲಿ ಕಣ್ಣಿಗೆ ಕಾಣುವ ಚಿತ್ರಕ್ಕಿಂತ ಸ್ಮೃತಿಯೊಳಗೆ ಆಳವಾಗಿ ಅಚ್ಚಾಗಿರುವ ರೂಪಕ ರಸಗ್ರಹಣಗಳ ಆಧಾರಿತ ನಿಸರ್ಗ ಚಿತ್ರಗಳು ರಚನೆಯಾಗಿರುವುದು ಹೆಚ್ಚು.

20 ನೇ ಶತಮಾನದ ಕರ್ನಾಟಕದ ಕಲೆಯು ಭಾರತೀಯ ಕಲಾ ಇತಿಹಾಸಕ್ಕೆ ತನ್ನದೇ ವಿಶಿಷ್ಠವೆನಿಸುವ ಶೈಲಿ, ಚಟುವಟಿಕೆಗಳ ಮೂಲಕ ತನ್ನ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅಂತಹ ಚಟುವಟಿಕೆಗಳು, ಕಲಾಕೃತಿಗಳ ಮೂಲಕ ಆಯಾ ಕಾಲದ ಕರ್ನಾಟಕದ ಕಲಾ ಇತಿಹಾಸದ ಪ್ರಮುಖ ಬದಲಾವಣೆಗಳನ್ನು ನಾವು ಗುರುತಿಸಬಹುದಾಗಿದೆ.

ಆದರೆ ನಿಸರ್ಗ ಚಿತ್ರಗಳಲ್ಲಿ ಮಾತ್ರ ವಿಭಿನ್ನವಾದ ವಾತವರಣವಿದೆ. ಇಲ್ಲಿಯವರೆಗೂ ರಚಿಸಲ್ಪಟ್ಟಿರುವ ಬಹುತೇಕ ನಿಸರ್ಗಚಿತ್ರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದಾಗ ಈ ಚಿತ್ರಗಳಲ್ಲಿ ಕಂಡುಬರುವ ಮೂರು ಪ್ರಮುಖ ವಿಷಯಗಳೆಂದರೆ, ಹಳ್ಳಿಗಳು, ಪ್ರಕೃತಿ, ಸ್ಮಾರಕಗಳು.. ಇವಷ್ಟೇ ಅಲ್ಲದೇ ಇವನ್ನೂ ಮೀರುವಂತ ಕರ್ನಾಟಕದ ಚಿತ್ರಣವನ್ನು ಡಿ.ವಿ.ಜಿ, ಕುವೆಂಪು, ಕಾರಂತರು, ತೇಜಸ್ವಿ, ಚಿತ್ತಾಲರು ಇನ್ನೂ ಅನೇಕ ಸಾಹಿತಿಗಳು ಕರ್ನಾಟಕದ, ಕರ್ನಾಟಕದ್ದೇ ಆದ ಚಿತ್ರಣವನ್ನು ತಮ್ಮ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಅಕ್ಷರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂತಹದೇ ಅವಕಾಶಗಳನ್ನು ಕನ್ನಡ ಚಿತ್ರರಂಗ ಕಪ್ಪು-ಬಿಳುಪು ಚಿತ್ರಗಳಿಂದ ಆರಂಭಿಸಿ ಈಗಿನವರೆಗೂ ತಮ್ಮ ದೃಶ್ಯ ಚೌಕಟ್ಟಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ಚಿತ್ರಕಲೆಯಲ್ಲಿ ಇದಕ್ಕೆ ವಿಭಿನ್ನವಾದ ವಾತಾವರಣ ನಿರ್ಮಾಣಗೊಂಡಿದ್ದು , ದೃಶ್ಯಕಲೆಯಲ್ಲಿನ ಇನ್ನುಳಿದ ಕಲಾಕೃತಿಗಳಂತೆ ನಿಸರ್ಗ ಚಿತ್ರಗಳಿಗೆ ಇಂತಹ ವಸ್ತುನಿಷ್ಠ, ಮೌಲಿಕ ಅಂಶಗಳನ್ನು ಗುರುತಿಸಿ ಕ್ರೋಢಿಕರಿಸಿ, ವಿಮರ್ಶಿಸಬೇಕಾದ ಅಗತ್ಯವಿದೆ.

ಈಗಿನ ಕಲಾವಲಯದಲ್ಲಿ ಹುಡುಕಿದರೆ ಅತಿ ಹೆಚ್ಚು ನಿಸರ್ಗಚಿತ್ರ ಕಲಾವಿದರು ನಮಗೆ ಉತ್ತರಕರ್ನಾಟಕದಲ್ಲಿ ಕಂಡುಬರುತ್ತಾರೆ. ಬೆಂಗಳೂರು ಮೈಸೂರು ಕಡೆಗಳಲ್ಲು ಕಲಾವಿದರು ಇದ್ದಾಗ್ಯೂ ಅವರಿಗೆ ಅದು ಕೇವಲ ಕಲಾಭ್ಯಾಸದಲ್ಲಿ ಒಂದು ಭಾಗವಷ್ಟೇ ಆಗಿ ಉಳಿದುಕೊಂಡಿದೆ. ಇವರ ಕಲಾಕೃತಿಗಳಲ್ಲಿಯೂ ಸಹ ಸಿದ್ದ ಮಾದರಿ ಕಲಾಕೃತಿಗಳನ್ನು ಕಾಣಬಹುದೇ ಹೊರತು, ಸಧ್ಯದ ನಗರೀಕರಣದಲ್ಲಿ ಮುಖ್ಯವಾಗುವ ಅಂಶಗಳ ನಗಣ್ಯವೇನೋ ಎಂಬಂತ ಭಾವನೆ ಅಡಕವಾಗಿರುವುದನ್ನು ಕಾಣಬಹುದು.

ಉತ್ತರಕರ್ನಾಟಕದ ಕಡೆಗಿನ ಕಲಾವಿದರ ನಿಸರ್ಗಚಿತ್ರಗಳಲ್ಲಿಯೂ ಸಹ ಈ ಮೇಲಿನ ಅಂಶ,ಸಿದ್ಧಸೂತ್ರಗಳ ಗಾಡಪ್ರಭಾವವನ್ನು ಕಾಣಬಹುದು. ಅಲ್ಲಿನ ಕಲಾಕೃತಿಗಳಲ್ಲಿಯೂ ಸಹ ಬಹುತೇಕ ಹಳ್ಳಿಗಳ, ಸ್ಮಾರಕಗಳ ಚಿತ್ರಗಳೇ ಹೆಚ್ಚು ಕಾಣಸಿಗುತ್ತವೆ. ಆದರೆ ಈ ಕಲಾಕೃತಿಗಳಲ್ಲಿ ಕಾಣಬರುವ ಪ್ರಮುಖ ಅಂಶವೆಂದರೆ ಆ ಚಿತ್ರಗಳು ಮೂಲ ಸ್ಥಳಗಳನ್ನು ಉದ್ದೀಪಿಸುವ ನೆನಪನ್ನು ಮರುಕಳಿಸುವುದಕ್ಕಷ್ಟೇ ಸೀಮಿತವಾಗುತ್ತವೆ ಹೊರತು ಅದನ್ನು ಮೀರಿದ ಸಾಂಸ್ಕೃತಿಕ, ದೃಶ್ಯಪರಂಪರೆಯನ್ನು ಗುರುತಿಸಿ ಕ್ರೋಢಿಕರಿಸಿ ದಾಖಲಿಸುವ ಅವಶ್ಯಕತೆ ಈ ಕೃತಿಗಳಿಗಿದೆ.

ಈ ಮೇಲೆ ಉಲ್ಲೇಖಿಸಿರುವ ಕಾಲಘಟ್ಟದಲ್ಲಿ ನಿಸರ್ಗ ಚಿತ್ರಗಳನ್ನು ರಚಿಸುತ್ತಿದ್ದ ಪ್ರಮುಖ ಕಲಾವಿದರೆಂದರೆ

ಕೆ. ವೆಂಕಟಪ್ಪ, ರುಮಾಲೆ ಚನ್ನಬಸವಯ್ಯ, ಎನ್. ಹನುಮಯ್ಯ, ಪಾವಂಜೆ ಗೋಪಾಲಕೃಷ್ಣಯ್ಯ, ಸೋಮಶೇಖರ ಸಾಲಿ, ಅಮೆನ್ ಸಾಹೆಬ್ ಕಮಡೋಳಿ, ಟಿ.ಪಿ. ಅಕ್ಕಿ, ಎನ್.ಎಸ್. ಸುಬ್ಬು ಕೃಷ್ಣ, ಎಂ.ವೀರಪ್ಪ., ಪಿ.ಆರ್.ತಿಪ್ಪೇಸ್ವಾಮಿ, ಎಸ್.ಎಂ ಪಂಡಿತ್, ಎಂ.ಎ.ಚೆಟ್ಟಿ, ಎಂ.ವಿ. ಮಿಣಜಗಿ, ಬಸವರಾಜ ಹಳ್ಳಿಜೋಳ, ಎಫ್.ಎಂ ಸೂಫಿ, ಡಿ.ವಿ. ಹಾಲಭಾವಿ, ಬಿ.ಕೆ. ಹುಬ್‍ಲಿ, ಪಿ. ಸುಬ್ಬರಾವ್, ಎಂ.ಎಸ್. ಶುದ್ದೋದನ, ಎಸ್.ಎಸ್. ಕುಕ್ಕೆ, ಎಸ್.ನಂಜುಂಡಸ್ವಾಮಿ, ಎಂ.ಟಿ.ವಿ ಆಚಾರ್ಯ, ಕೆ.ಕೆ. ಹೆಬ್ಬಾರ್, ದಂಡಾವತಿ ಮಠ, ಜಿ.ಎಸ್. ಶೆಣೈ, ಜೆ.ಎಸ್. ಖಂಡೇರಾವ್.

IV. ಕರ್ನಾಟಕ ಏಕೀಕರಣದ ಕಾಲಘಟ್ಟದ ನಿಸರ್ಗ ಚಿತ್ರಗಳ ಹಿನ್ನಲೆಯಲ್ಲಿ ಆಧುನಿಕ ಕರ್ನಾಟಕ

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ಅವದಿ ಕರ್ನಾಟಕದ ಈಗಿನ ಭೌಗೋಳಿಕ ಪ್ರದೇಶಕ್ಕೆ ಸಂಬಂದಪಟ್ಟಂತೆ ಬಹುಮುಖ್ಯ ಕಾಲಘಟ್ಟವಾಗಿದೆ. ಕಾರಣ ಇದು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದಿದ್ದು ಮಾತ್ರವಲ್ಲದೆ, ಸ್ವಾತಂತ್ರ್ಯದ ಹೋರಾಟದ ಜೊತೆ-ಜೊತೆಗೆ ಸ್ಥಳೀಯ ನಾಯಕರ ಹೋರಾಟದ ಫಲವಾಗಿ, ಮೈಸೂರು ರಾಜರ ಸಾಮ್ರಾಜ್ಯ ಅಖಂಡ ಭಾರತದ ಭಾಗವಾಗಿ ಕನ್ನಡ ಮಾತಾಡುವ ಪ್ರದೇಶಗಳ ಭೌಗೋಳಿಕ ನಕ್ಷೆಯಾಗಿ ರೂಪುಗೊಂಡು ಕರುನಾಡೆಂಬ ಕರ್ನಾಟಕವೆಂದು ರೂಪುಗೊಂಡ ಕಾಲಾವದಿ.

ಹಾಗಾಗಿ ಅಲ್ಲಿಯವರೆಗೂ ಉತ್ತರಕರ್ನಾಟಕದ ಕೆಲ ಭಾಗಗಳು ಹೈದರಾಬಾದ್ ನವಾಬರ ಆಳ್ವಿಕೆಯಲ್ಲಿ ಇದ್ದಂತಹುವು. ಕನ್ನಡ ಭಾಷಿಕರ ಆದಾರದ ಮೇಲೆ ಕರ್ನಾಟಕದ ಭಾಗವಾಗಿದ್ದು ಅಲ್ಲಿನ ಸಾಹಿತ್ಯ ಚಿತ್ರಕಲೆಯ ಅಭ್ಯಾಸಕ್ರಮಕ್ಕೆ ಕರ್ನಾಟಕ ಕಲೆ ಎಂಬ ಚೌಕಟ್ಟೌ ರೂಪುಗೊಂಡ ಕಾಲ ಸ್ವಾತಂತ್ರ್ಯೋತ್ತರ ಭಾರತದ ಪ್ರಾರಂಭಿಕ ಕಾಲಘಟ್ಟ. ಆದ್ದರಿಂದ ಸಧ್ಯದ ಈಗಿನ ಕರ್ನಾಟಕ ಕಲೆ ಎಂಬ ಚೌಕಟ್ಟಿನಲ್ಲಿ ಅಂದಿನ ಮೈಸೂರು ಕಲೆ, ಮೈಸೂರು ಅರಸರ ಕೃಪಾಪೋಷಿತ ವಸಾಹತುಶಾಹಿ ಪ್ರಭಾವದ ಹಿನ್ನಲೆಯಲ್ಲಿ ತನ್ನ ಆರಂಭಿಕ ದಿನಗಳನ್ನು ಕಂಡ ಕರ್ನಾಟಕ ಕಲೆ, ಮುಂದಿನ ದಿನಗಳಲ್ಲಿ ಕಲಾಶಾಲೆಗಳ ಒಳ ಹೊರಗನ್ನು ರೂಪಿಸಿದ ನಿಸರ್ಗ ಚಿತ್ರಣದ ಪ್ರಕಾರದ ಕುರಿತಂತೆ ಸಂಶೋಧಿಸಿ, ದಾಖಲಿಸಿ ಚರ್ಚಿಸುವುದು ಇಂದಿನ ಕಲಾವಲಯ ಮತ್ತು ಕಲಾಶಾಲೆಗಳ ಅಭ್ಯಾಸಕ್ರಮದಲ್ಲಿ ಬಹು ಮುಖ್ಯವಾಗಿದೆ.

V. ಗ್ರಂಥಋಣಿ :

1. ವಸಾಹತು ಕಾಲೀನ ಕರ್ನಾಟಕ : ಡಾ. ಎಸ್. ಚಂದ್ರಶೇಖರ್
2. ಕಲಾಪ್ರಪಂಚ : ಡಾ. ಶಿವರಾಮ ಕಾರಂತ
3. ನೋಟ ಪಲ್ಲಟ : ಎಚ್ . ಎ. ಅನಿಲ್ ಕುಮಾರ್
4. ಶಂಕರಗೌಡ ಬೆಟ್ಟದೂರು : ಎಚ್. ಎ. ಅನಿಲ್ ಕುಮಾರ್
5. ಕರ್ನಾಟಕ ಲಲಿತಾ ಅಕಾಡೆಮಿ ಪ್ರಕಟಿತ ಕಲಾವಿದರ ಕುರಿತ ಸಮಗ್ರ ಪುಸ್ತಕಗಳು.
6. ಜ್ಞಾಪಕ ಚಿತ್ರಶಾಲೆ : ಡಿ.ವಿ.ಜಿ
7. ಕಾನೂರು ಹೆಗ್ಗಡತಿ -1938 : ಕುವೆಂಪು
8. ಆಬೋಲಿನ ಮತ್ತು ಇತರ ಕಥೆಗಳು : ಯಶವಂತ ಚಿತ್ತಾಲ
9. when was modernism in Indian Art : Geetha Kapur (Arts & Ideas journal )
10. Cinema and the Desire for modernity : Madhava Prasad (Arts & Ideas journal )
11. Whose culture is it? Contesting the modern : Tejaswini Niranjan (Arts & Ideas journal )
12. Visualizing the Nation The iconography of a ‘National Art’ in Modern India : Tapati Guha Thakurta (Arts & Ideas journal )
13. 1934 ರಲ್ಲಿ ತೆರೆಕಂಡ ಮೊದಲ ಕನ್ನಡ ಸಿನಿಮಾ ಸತಿಸುಲೋಚನ ಮತ್ತು 1934 ರಿಂದ 1970 ರವರೆಗಿನ ಕನ್ನಡ ಸಿನಿಮಾಗಳು. ಅದರಲ್ಲಿ ಪ್ರಮುಖವಾಗಿ ಬಳಕೆಯಾಗಿರುವ ನಿಸರ್ಗ ಚಿತ್ರಗಳನ್ನು ಕುರಿತಂತೆ ಬೇಡರ ಕಣ್ಣಪ್ಪ, ಚಂದವಳ್ಳಿ ತೋಟ, ಅಮರ ಶಿಲ್ಪಿ ಜಕಣಾಚಾರಿ, ನಾಂದಿ, ಭೂದಾನ, ಸ್ಕೂಲ್ ಮಾಸ್ಟರ್, ಸರ್ವ ಮಂಗಳ, ಬೆಳ್ಳಿಮೋಡ, ಸಂಸ್ಕಾರ ಚಿತ್ರಗಳು

 ಮಂಸೋರೆ. ವೃತ್ತಿ ಚಿತ್ರಕಲಾವಿದ., ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಸ್ನಾತಕೋತ್ತರ ಪದವೀದರ. ಸದ್ಯ ಚಿತ್ರರಂಗದಲ್ಲಿ ಸ್ವತಂತ್ರ ಕಲಾ ನಿರ್ದೇಶಕ

ಮುಂದೆ ಓದಿ

ಹೊಸ ಅಲೆ ೫ – ಹಾವುರಾಣಿ

ಪ್ರಕಟಿಸಿದ್ದು ದಿನಾಂಕ Aug 5, 2012 ವಿಭಾಗ 2012, ale2 | 4 ಪ್ರತಿಕ್ರಿಯೆಗಳು

ಹಾವುರಾಣಿ ಸರೀಸೃಪದ ಜಾತಿಗೆ ಸೇರಿದ ಪ್ರಾಣಿ. ಇದು ಸಾಮಾನ್ಯವಾಗಿ ೨೦ ಸೆಂ. ಮೀ. ಉದ್ದ ಬೆಳೆಯುತ್ತದೆ. ಆದರೆ ಕೆಲವು ಹಾವುರಾಣಿಗಳು ಕೇವಲ ೧೦ ಸೆಂ. ಮೀ. ಉದ್ದ ಮಾತ್ರ ಬೆಳೆಯುತ್ತವೆ. ಹೆಣ್ಣು ಹಾವುರಾಣಿಯು ಗಂಡು ಹಾವುರಾಣಿಯ ಜೊತೆ ಸಂಭೋಗ ನಡೆಸಿದಾಗ ಸುಮಾರು ೨೫೦ ಮೊಟ್ಟೆಗಳನ್ನು ಇಡುತ್ತದೆ. ಎಲ್ಲಾ ಸರೀಸೃಪಗಳಂತೆಯೇ, ಹಾವುರಾಣಿಯು ಬಾಲವನ್ನು ಜೋರಾಗಿ ಅಲ್ಲಾಡಿಸಿ, ತನ್ನ ಬೇಟೆಯ ಮೇಲೆ ನಿಗಾ ಇಡುತ್ತದೆ. ಸಾಮಾನ್ಯವಾಗಿ ಹಾವುರಾಣಿಯು ಕಪ್ಪು ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ. ಕೆಲವು ಬಾರಿ, ತುಂಬಾ ಬಿಸಿಲಿನಲ್ಲಿ, ಇವುಗಳು ಕಡು ಕೆಂಪು ಬಣ್ಣದಂತೆ ಕಾಣುತ್ತದೆ. 

ಸಾಮಾನ್ಯವಾಗಿ, ಹಾವುರಾಣಿಗಳ ಆಹಾರ ಸಣ್ಣ ಕ್ರಿಮಿಗಳು, ಕೀಟಗಳು, ಎರೆಹುಳಗಳು, ನೊಣಗಳು, ಮಿಡತೆಗಳು, ಜಿರಳೆಗಳು, ಸಣ್ಣ ಜೇಡಹುಳಗಳು, ಇರುವೆಗಳು, ಇತ್ಯಾದಿ. ಹಾವುರಾಣಿಗಳು ಬಾಳೆಹಣ್ಣನ್ನು, ಸ್ಟ್ರಾಬೆರ್ರಿಗಳನ್ನು ಕೂಡ ಇಷ್ಟಪಡುತ್ತವೆ. ಹಾವುರಾಣಿಗಳು ತನ್ನ ಬೇಟೆಯ ಚಲನೆಯನ್ನು ಅವಲಂಬಿಸಿ ಬೇಟೆಯಾಡುತ್ತದೆ. ತನ್ನ ಬೇಟೆಯು ಚಲಿಸದಿದ್ದಾಗ, ತನಗೆ ಬೇಟೆಯು ಕಾಣಿಸದ ಕಾರಣ ಅದು ಬೇಟೆಯಾಡುವುದಿಲ್ಲ. ಬೇಟೇಯಾಡುವಾಗ ಹಾವುರಾಣಿಯು ಅವಿತುಕೊಡು ಅಥವಾ ಕಾದು ಬೇಟೆಯಾಡುತ್ತದೆ. ತನ್ನ ಬೇಟೆಯನ್ನು ಬಾಯಲ್ಲಿ ಹಿಡಿದಾಗ, ಅದನ್ನು ಜೋರಾಗಿ ಅಲ್ಲಾಡಿಸಿ ಸಾಯಿಸುತ್ತದೆ. ನಂತರ ಅದನ್ನು ಇಡಿಯಾಗಿ ನುಂಗುತ್ತದೆ. ತನ್ನ ಊಟವಾದ ಬಳಿಕ ಹಾವುರಾಣಿಯು ಬೇಟೆಯಾಡುವುದಿಲ್ಲ. ಹಾವುರಾಣಿಗಳು ಸಾಮಾನ್ಯವಾಗಿ ೪ – ೫ ದಿನಕ್ಕೊಮ್ಮೆ ಬೇಟೆಯಾಡುತ್ತದೆ. ಆದರೆ, ಪ್ರತಿದಿನವೂ ಆಹಾರವನ್ನು ಬೇಟೆಯಾಡಿ ಕೂಡ ತಿನ್ನುತ್ತದೆ. 
Scientific classification
Kingdom : Animalia
Phylum : Chordata
Class : Reptilia
Order : Squamata (paraphyletic)
Infraorder : Scincomorpha
Family : Scincidae
Subfamily : Lygosominae
Genus : Lampropholis
Species: :  L. guichenoti
ಇವು ಸಾಮಾನ್ಯವಾಗಿ ಎಲೆಗಳ ಮರೆಯಲ್ಲಿ ಮತ್ತು ಉದ್ದನೆಯ ಹುಲ್ಲುಗಳ ನಡುವೆ ಇದ್ದು ಬೇಟೆಯಾಡುತ್ತದೆ. ತನಗಿಂತ ದೊಡ್ಡ ಪ್ರಾಣಿಗಳ ಬಾಯಿಗೆ ಸಿಗಬಾರದೆಂದು ಇವು ಮರದ ದಿಮ್ಮಿಗಳ ಒಳಗೆ ಇರಲು ಇಷ್ಟ ಪಡುತ್ತವೆ. ಎಲ್ಲಾ ಸರೀಸೃಪಗಳಂತೆಯೇ ಇವುಗಳು ಕೂಡ ಪರಿಸರದ ಶಾಖವನ್ನು ಅವಲಂಬಿಸಿದ ಉಷ್ಣತೆಯುಳ್ಳ ಪ್ರಾಣಿಗಳು (Cold Blooded). ಹಾಗಾಗಿ, ಇವುಗಳು, ಬೆಳಗಿನ ಜಾವ ಬಂಡೆಯ ಮೇಲೆ, ಅಥವಾ, ರಸ್ತೆಯ ಮೇಲೆ ತನ್ನ ಮೈಯನ್ನು ಉಷ್ಣವಾಗಿರಿಸಿಕೊಳ್ಳಲು ಬಿಸಿಲನ್ನು ಕಾಯುತ್ತದೆ. ಸಾಮಾನ್ಯವಾಗಿ ಇವು, ಮರದ ಎಲೆಗಳ ಅಡಿಯಲ್ಲಿ, ಅತ್ಯಂತ ಶಾಖವಿರುವ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. 

ಹಾವುರಾಣಿಗಳನ್ನು ಆಹಾರವಾಗಿ ತಿನ್ನುವ ಜೀವಿಗಳೆಂದರೆ, ಹಾವುಗಳು, ಕೆಂಪು ಎದೆಯ ಹಕ್ಕಿ (robin) ಹಾಗು ದೊಡ್ಡ ಹಲ್ಲಿಗಳು. 

ಈ ಚಿತ್ರದಲ್ಲಿರುವ ಹಾವುರಾಣಿ ನನಗೆ ಕಾಣಿಸಿದ್ದು ಜೋಗದಲ್ಲಿ. ಇದು ತನ್ನ ಬೇಟೆಯನ್ನು ಹುಡುಕುತ್ತಿತ್ತು. ಆಗ ಇದನ್ನು ಸೆರೆಹಿಡಿದೆ. 
ಇನ್ನು ಇದರ ಪರಿಚಯ ಮಾಡೋಣ ಅನ್ನಿಸಿತು. ಹಾಗಾಗಿ ಈ ಲೇಖನ ಬರೆದದ್ದು. 
ಅನಿಲ್ ರಮೇಶ್

ಅನಿಲ್ ರಮೇಶ್

ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಪ್ರವೃತ್ತಿಯಲ್ಲಿ ಛಾಯಾಗ್ರಾಹಕ, ಓದುಗ, ಬರಹಗಾರ. ಅನವರತ ಎಂಬ ಬ್ಲಾಗ್ ಅಲ್ಲಿ ಬರಹ.     ಸ್ನೇಹಜೀವಿ. ಸಾಹಿತ್ಯದಲ್ಲಿ ಮತ್ತು ಸಂಗೀತದಲ್ಲಿ ಆಸಕ್ತಿ.

ಮುಂದೆ ಓದಿ

ಹೊಸ ಅಲೆ ೪ – ಬ್ಲಾಗಿನ ಬಾಗಿಲು ತೆರೆದಾಗ

ಪ್ರಕಟಿಸಿದ್ದು ದಿನಾಂಕ Aug 4, 2012 ವಿಭಾಗ 2012, ale2 | 0 ಪ್ರತಿಕ್ರಿಯೆಗಳು

ಅದು ನಾನು ಕಾಲೇಜ್ ಮುಗಿಸಿ ಕೆಲಸಕ್ಕಾಗಿ ಕಾಯುತ್ತಿದ್ದ ದಿನಗಳು. ಪ್ರತಿ ದಿನವೂ ಏನು ಮಾಡುವುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ದಿನಪೂರ್ತಿ ಉತ್ತರದ ಹುಡುಕಾಟದಲ್ಲಿ ಕಳೆದು, ಕೊನೆಗೆ ಏನೂ ಮಾಡಲಿಲ್ಲ ಎಂಬ ನಿರಾಸೆಯೊಂದಿಗೆ ಕಾಲಹರಣ ಮಾಡುತ್ತಿದ್ದ ದಿನಗಳು. ಆಗ ನನಗೆ ಗೆಳೆಯರ ಮೂಲಕ ಅಂತರ್ಜಾಲದಲ್ಲಿ ಬ್ಲಾಗ್ ಎಂಬ ಪ್ರಪಂಚದ ಪರಿಚಯವಾಯಿತು. ಓದುವ ಹವ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಂಡಿದ್ದ ನನಗೆ ಸಹಜವಾಗಿ ಈ ಪ್ರಪಂಚ ಕುತೂಹಲಕಾರಿಯಾಗಿ ಕಂಡಿತು. ಸಿಕ್ಕ ಬ್ಲಾಗಿನ ಕೊಂಡಿಯನ್ನು ಕ್ಲಿಕ್ಕಿಸಿ, ಅದರಲ್ಲಿನ ಲೀಖನಗಳನ್ನು ಓದಿ, ಅಲ್ಲಿಂದ ಸಿಕ್ಕ ಮತ್ತೊಂದು, ಮಗದೊಂದು ಬ್ಲಾಗಿನ ಕೊಂಡಿಗಳನ್ನು ಕ್ಲಿಕ್ಕಿಸಿಕೊಂಡು ಓದುತ್ತ ಹೋದಂತೆ ಸಮಯ ಕಳೆಯುತ್ತಿದ್ದದೆ ತಿಳಿಯುತ್ತಿರಲಿಲ್ಲ. ನನ್ನ ಅಂದಿನ ಅವಶ್ಯಕತೆಗೆ ತಕ್ಕ ಗೆಳೆಯನಾಗಿ ಸಿಕ್ಕಿತು ಈ ಬ್ಲಾಗಿನ ಪ್ರಪಂಚ.

ಈಗಾಗಲೇ ನೀವೆಲ್ಲ ಊಹಿಸಿರುವಂತೆ ಬ್ಲಾಗ್ ಎಂದರೆ, “online ದಿನಚರಿ”. ಬ್ಲಾಗಿನಲ್ಲಿ, ಅದರ ಬ್ಲಾಗರ್ ಏನು ಬೇಕಾದರೂ ದಾಖಲಿಸಬಹುದು. ತನ್ನ ಖಾಸಗಿ ವಿಷಯಗಳೊಂದಿಗೆ, ತನ್ನ ಪ್ರವಾಸ ಕಥನ, ಕವಿತೆ, ತನ್ನ ಅಪರಿಮಿತವಾದ ಜ್ಞಾನ ಭಂಡಾರ, ಆಲೋಚನೆ, ಹೊಸ ಆವಿಷ್ಕಾರ. ತನ್ನ ನೆಚ್ಚಿನ ನಾಯಿ ಮರಿ ಹಾಕಿದ ಸಂತಸದ ವಿಷಯ.. ಹೀಗೆ, ಅಲ್ಲಿ ಬ್ಲಾಗರ್ ಏನು ಬರೆಯಬಹುದು, ಏನು ಬರೆಯಬಾರದು ಎಂಬುದರ ಬಗ್ಗೆ ಯಾವ ಕಡಿವಾಣವೂ ಇರುವುದಿಲ್ಲ. ಆದರೆ ಏನು ಓದಬೇಕು, ಏನು ಓದಬಾರದು ಎಂಬ ಕಡಿವಾಣ ನಮಗಂತೂ ಖಂಡಿತ ಇರುತ್ತದೆ. ನನ್ನ ಮೊದಲ ಕೆಲವು ದಿನಗಳ ಬ್ಲಾಗ್ ಅನುಭವದಲ್ಲಿ ನನಗೆ ಎದುರಾದ ಸಮಸ್ಯೆ ಇದೇ. ಒಂದು ಬ್ಲಾಗ್ ತಾಣದಿಂದ ಇನ್ನೊಂದು ತಾಣಕ್ಕೆ ನೆಗೆಯುತ್ತ, ಜ್ಞಾನವನ್ನು ಬಸಿಯುತ್ತ ಹೋದಂತೆ, ಮೊದಲು ನೋಡಿದ ತಾಣ/ಬ್ಲಾಗ್ ಸಂಪೂರ್ಣ ಮರೆತು ಹೋಗುತಿತ್ತು. ಮತ್ತೆ ಅದೇ ವಿಷಯದ ಬಗ್ಗೆ ತಿಳಿಯಲು ಬಯಸಿದಾಗ ಅದನ್ನು ಹೆಕ್ಕಿ ತೆಗೆಯಲು ಗೂಗಲ್ ಮೊರೆ ಹೋಗಬೇಕಿತ್ತು. ಇಲ್ಲವಾದರೆ ನನ್ನ ಬ್ರೌಸರ್ ನಲ್ಲಿ ಇರುತ್ತಿದ್ದ ಸಾವಿರ URLಗಳ ನಡುವೆ ಇಡೀ ಬ್ಲಾಗಿನ ಕೊಂಡಿಯನ್ನು ಹುಡುಕಬೇಕಿತ್ತು. ದಿನ ಕಳೆದಂತೆ ಈ ಕೆಲಸ ಮತ್ತಷ್ಟು ಕ್ಲಿಷ್ಟವಾಗತೊಡಗಿತು. ಅಷ್ಟೇ ಅಲ್ಲದೆ ನನ್ನ  ನೆಚ್ಚಿನ ಬ್ಲಾಗ್ ನಲ್ಲಿ ಹೊಸ ಲೇಖನದ ಸೇರ್ಪಡೆಯಾದರೆ ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಇದಕ್ಕೆ ಪರಿಹಾರವನ್ನು ಹುಡಕಬೇಕು ಎಂದು ಗೂಗಲ್ ನಲ್ಲಿ ಜಾಲಾಡಿದಾಗ ಸಿಕ್ಕ ಪರಿಹಾರಗಳಲ್ಲಿ ನನಗೆ ಮೆಚ್ಚುಗೆಯಾದದ್ದು “ಗೂಗಲ್ ರೀಡರ್”. (reader.google.com)

“ಗೂಗಲ್ ರೀಡರ್” ಗೂಗಲ್ ನ ಹಲವು ಆವಿಷ್ಕಾರಗಳಲ್ಲಿ ಒಂದು. ನಮಗೆ ಬೇಕಾದ ಯಾವುದೇ  ಬ್ಲಾಗಿನ  URL ಅನ್ನು ಇಲ್ಲಿ ಒಮ್ಮೆ ಫೀಡ್ ಮಾಡಿಬಿಟ್ಟರೆ ಆಯಿತು, ರೀಡರ್ ಅದರ ಅಡ್ರೆಸ್ ಮತ್ತು ಮಾಹಿತಿಯನ್ನು ಸದಾ ತನ್ನ ಬಳಿ ಇಟ್ಟುಕೊಂಡಿರುತ್ತದೆ ಮತ್ತು ನಮಗೆ ಯಾವಾಗ ಬೇಕಾದರೆ ಆಗ ನಮಗೆ ನೀಡುತ್ತದೆ. ಇದು ನಮ್ಮ ಗೂಗಲ್ ಅಕೌಂಟ್ ಜೊತೆಗೆ ಬೆಸೆದುಕೊಂದಿರುವುದರಿಂದ, ಇದನ್ನು ನಾವು ಎಲ್ಲಿ ಬೇಕೆಂದರೆ ಅಲ್ಲಿ, ಅಂತರ್ಜಾಲದ ಲಭ್ಯತೆಯಿರುವಲ್ಲೆಲ್ಲ ವೀಕ್ಷಿಸಬಹುದು. ಅಂದರೆ, ನನ್ನ ಆಫೀಸಿನ ಸಮಯದಲ್ಲಿ ಸಮಯ ಸಿಕ್ಕಾಗ, ಪ್ರಯಾಣ ಮಾಡುವಾಗ ನನ್ನ ಮೊಬೈಲ್ ನಲ್ಲಿ ಹೀಗೆ. ಇಷ್ಟೇ ಅಲ್ಲದೆ ನನಗೆ ಬೇಕಾದ ಎಲ್ಲ ಬ್ಲಾಗನ್ನು ಕೇವಲ  ಬ್ರೌಸೆರ್ ನ ಒಂದೇ  ಕಿಟಕಿಯಲ್ಲಿ ನೋಡಬಹುದು ಹಾಗೂ ಯಾವುದೇ ಬ್ಲಾಗಿನಲ್ಲಿ ಹೊಸ ಲೇಖನದ ಸೇರ್ಪಡೆಯಾದರೆ, ಆ ಬ್ಲಾಗಿನ ಹೆಸರು ದಪ್ಪಕ್ಷರದಲ್ಲಿ ಮೂಡುವುದರಿಂದ ನಾನು ಸದಾ updated ಆಗಿರಬಹುದು.

ನನ್ನ ಬ್ಲಾಗ್ ಪಯಣ ಇನ್ನಷ್ಟು ಮುಂದುವರೆದು ನಾನೊಂದು ಬ್ಲಾಗ್ ಅನ್ನು ಬರೆಯಬೇಕು ಎಂಬ ಯೋಚನೆಯಲ್ಲಿದ್ದಾಗ ನನಗೆ ಎದುರಾದ ಪ್ರಶ್ನೆ ಕನ್ನಡಲ್ಲಿ ಬರೆಯುವುದು ಹೇಗೆ ಎಂಬುದು. “ಬರಹ” ಮತ್ತು “ನುಡಿ” ಎಂಬ ಎರಡೂ ತಂತ್ರಾಂಶಗಳು ಪರಿಚಿತವಾಗಿದ್ದರೂ, ನನಗೆ ಅದರಲ್ಲಿ ಬರೆಯುವುದು ಬಹಳ ಕಷ್ಟಕರವಾಗಿಯೇ ತೊರುತ್ತಿತ್ತು. ಆಗ ಪುನಹ ನನ್ನ ಸಹಾಯಕ್ಕೆ ನಿಂತದ್ದು ಗೂಗಲ್. ಗೂಗಲ್ ನ “ಗೂಗಲ್ ಟ್ರಾನ್ಸ್ಲಿಟರೇಟ್” (transliterate.google.com) ಎಂಬ ಮತ್ತೊಂದು ಆವಿಷ್ಕಾರ ಕನ್ನಡದಲ್ಲಿ ಬರೆಯುವ ಕೆಲಸವನ್ನು ಇಂಗ್ಲಿಷ್ ನಲ್ಲಿ ಬರೆಯುವಷ್ಟೆ ಸುಗಮಗೊಳಿಸಿತು. ಇದೊಂದು “ಮಶಿನ್ ಲರ್ನಿಂಗ್ ಟೂಲ್ ” ಆಗಿರುವುದರಿಂದ ನಾವು ಬರೆದಂತೆ ಪದಗಳನ್ನು ತನ್ನ ನೆನಪಿಗೆ ಸೇರಿಸಿಕೊಂಡು ಆ ಪದವನ್ನು ಬೇರೆ ಯಾರಾದರು ಬರೆಯಲು ಪ್ರಯತ್ನ ಪಟ್ಟರೆ ತನ್ನ ಸೂಚನಾ ಕಿಟಕಿಯಲ್ಲಿ ತೋರಿಸಿವುದರ ಮೂಲಕ  ಕನ್ನಡದಲ್ಲಿ ಬರೆಯುವುದನ್ನು ಮತ್ತಷ್ಟು ಸುಗಮಗೊಳಿಸಿತು.

ಮುಂದುವರೆದಂತೆ ಉಂಟಾದ ಮತ್ತೊಂದು  ಸಮಸ್ಯೆಯೆಂದರೆ, “ಗೂಗಲ್ ಟ್ರಾನ್ಸ್ಲಿಟರೇಟ್” ಗೆ ಅಂತರ್ಜಾಲದ ಹಂಗು. ನನ್ನ ಅಂತರ್ಜಾಲದ ಸಂಪರ್ಕ ಕೊನೆಗೊಂಡರೆ, ಅಥವಾ ಸಂಪರ್ಕವೇ ಇಲ್ಲದಿದ್ದರೆ ಕನ್ನಡದ ಬರವಣಿಗೆ ಸಾಗುತ್ತಿರಲಿಲ್ಲ. ನಾನಾಗಲೇ windows ನಿಂದ ಲಿನಕ್ಸ್ ಗೆ ಬಂದಾಗಿತ್ತು. ಲಿನಕ್ಸ್ ನಲ್ಲಿ ಈ ಸಮಸ್ಯೆಗೆ ಬಹಳ ಸುಲಭವಾದ ಪರಿಹಾರ ದೊರಕಿತು. ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ  ಕನ್ನಡ  language pack ಮತ್ತು iBus ಎಂಬ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಂಡ ಮೇಲೆ ಇಂಗ್ಲಿಷ್ ನಲ್ಲಿ ಬರೆದಷ್ಟೆ ಸುಲಭವಾಗಿ ಕನ್ನಡದಲ್ಲೂ ಬರೆಯುವುದು ಸಾಧ್ಯವಾಗಿದೆ, ಅಂತರ್ಜಾಲದ ಹೊರತಾಗಿಯೂ ಕೂಡ.

ದಿನ ಕಳೆದಂತೆ ತಂತ್ರಜ್ಞಾನ  ಬದಲಾಗುತ್ತಿದೆ. ಎರಡು ವರ್ಷದ ಕೆಳಗೆ laptopನಲ್ಲಿ ಮಾಡುತ್ತಿದ್ದ ಕೆಲಸವೆಲ್ಲವನ್ನು ಈಗ smartphoneನಲ್ಲಿ ಮಾಡಬಹುದಾಗಿದೆ. ಹಾಗೆಯೇ ಗೂಗಲ್ ರೀಡರ್ ನandroid application ಸಹ ಲಭ್ಯವಿದ್ದು ಈಗ ನನ್ನ ಸಂಪೂರ್ಣ ಓದುವಿಕೆ ಮೊಬೈಲ್ ನಲ್ಲೆ ನಡೆಯುತ್ತದೆ. ಕೆಲವು ಮೊಬೈಲ್ ಗಳಲ್ಲಿ ಕನ್ನಡ font support ಇಲ್ಲದಿರುವುದರಿಂದ ಓದುವುದು ಸಾಧ್ಯವಾಗದೆ ಇದ್ದಾಗ laptopನ ಮೊರೆ ಹೋಗದೆ ಇರಲಾಗುವುದಿಲ್ಲ. ಆದರೆ ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸ ನಡೆಯುತ್ತಿರುವುದರಿಂದ ಬೇಗಲೇ ಇದು ಸಹ ನಮ್ಮ ಅಂಗೈಗೆ ಬರುವುದನ್ನು ಕಾಯಬಹುದು.

ಸುಹಾಸ್

ಸುಹಾಸ್

ಸುಹಾಸ್
ಬೆಂಗಳೂರಿನಲ್ಲಿ ವಾಸ, ಬಿ.ಇ. ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹಾಗೂ ಹೊಟ್ಟೆಪಾಡಿಗೆ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನೀಯರ್ ಉದ್ಯೋಗ. ಓದುವುದು ಹವ್ಯಾಸಕ್ಕಿಂತ ಹೆಚ್ಚು , ಬರೆಯುವುದು ಓದುವುದಕ್ಕಿಂತ ಕಡಿಮೆ. ಸಂಗೀತ ಮತ್ತು ಸಿನಿಮಾ ಆಕರ್ಷಣೆ. ದಿನದ ಹೆಚ್ಚು ಸಮಯವನ್ನು ಕಂಪ್ಯೂಟರ್ ನ ಮುಂದೆಯೇ ಕಳೆಯುವುದರಿಂದ ಅದರಲ್ಲೂ ಸಹ ಕನ್ನಡವನ್ನು ಕಾಣುವಲ್ಲಿ ಅಪರಿಮಿತ ಆಸೆ. ಪ್ರವಾಸ, ಅದರ ಕಥನ, ಇತ್ತೀಚಿಗೆ ಛಾಯಾಗ್ರಹಣೆ, ಅಲ್ಲೊಂದು ಕಥೆ, ಇಲ್ಲೊಂದು ಚುಟುಕು, ಹೀಗೆ ಸದಾ ಹೊಸತನದ ಅನ್ವೇಷಣೆಯಲ್ಲಿ ಓಡುತ್ತಿರುವ ದಿನಗಳನ್ನು ಹಿಡಿಯುವಲ್ಲಿ ನಿರಂತರ ಪ್ರಯತ್ನ.

ಮುಂದೆ ಓದಿ

ಹೊಸ ಅಲೆ ೩ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು

ಪ್ರಕಟಿಸಿದ್ದು ದಿನಾಂಕ Aug 3, 2012 ವಿಭಾಗ 2012, ale2 | 4 ಪ್ರತಿಕ್ರಿಯೆಗಳು

ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ.

ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ.

೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು  ಬಳಸುವಂತಿಲ್ಲ.

೨.  ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ ಉಪಯೋಗಿಸತಕ್ಕದ್ದು. ಪೈಪ್ ಹಾಕಿ ಬೇರೆ ಕಡೆಗೂ ಎಳೆಯುವಂತಿಲ್ಲ

೩. ಈ ನಲ್ಲಿಯನ್ನು ನೀವು ಬಾಯಿ ಮುಕ್ಕಳಿಸಲು ಮಾತ್ರ ಬಳಸಬೇಕು, ಬೇರೆ ಏನೂ ಮಾಡುವಂತಿಲ್ಲ.

೪. ಈ ನಲ್ಲಿಯನ್ನು ಸಾರ್ವಜನಿಕ ಬಳಕೆಗೆ ಬಿಡುವಂತಿಲ್ಲ.

೫. ಈ ನಲ್ಲಿಯನ್ನು ನೀವು ಬಿಚ್ಚಿ ರಿಪೇರಿ ಮಾಡುವಂತಿಲ್ಲ.

೬, ಈ ನಲ್ಲಿಗೆ ನೀವು ಬೇರೆ ಯಾವುದೇ ಸಲಕರಣೆ ಸೇರಿಸುವಂತಿಲ್ಲ.

೭. ಈ ನಲ್ಲಿಯನ್ನು ನೀವು ಬೇರೆಯವರಿಗೆ ಮಾರುವುದಕ್ಕಾಗಲೀ/ಕೊಡುವುದಕ್ಕಾಗಲೀ ಅನುಮತಿ ಇಲ್ಲ.

೮ .  ನಲ್ಲಿಗೆ ಹಾಕುವ ನಟ್ಟು ಬೋಲ್ಟು ಮತ್ತು ಮುಂತಾದವುಗಳನ್ನ ಈ ನಲ್ಲಿಯ ವರ್ತಕನಲ್ಲಿಯೇ ಕೊಳ್ಳಬೇಕು. ಬೇರೆಯಲ್ಲಿ ಕೊಂಡರೆ ಅದು ಈ ನಲ್ಲಿಗೆ ಸರಿ ಹೊಂದುವುದಿಲ. ಸರಿ ಹೊಂದುವ ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ.

ಈಗ ನೀವು ಈ ನಲ್ಲಿಯನ್ನು ಕೇವಲ ನೀವೊಬ್ಬರು ಮಾತ್ರ ಬಳಸಬೇಕು. ಅದರಲ್ಲೂ ಕೇವಲ ಬಾಯಿ ಮುಕ್ಕಳಿಸಲು ಬಳಸಬೇಕು. ಅದು ಬಿಟ್ಟು ನಿಮಗೆ ಬೇರೆ ಸ್ವಾತಂತ್ರವಿಲ್ಲ.

ಬಹುಶಃ ಇಂತಹುದೇ ಒಂದು ಸ್ಥಿತಿ ೧೯೮೦ರ ಸುಮಾರಿಗೆ ರಿಚರ್ಡ್ ಸ್ಟಾಲ್‍ಮನ್ ( ಜನ ಅವರನ್ನು ಆರೆಮ್ಮೆಸ್ ಎಂದೂ ಕರೆಯುತ್ತಾರೆ) ಅನುಭವಿಸಿದ್ದು. ಅವರ ಕಚೇರಿಯ ಪ್ರಿಂಟರ್ ಉಪಯೋಗಕ್ಕೆಂದು ಅವರು ಬರೆದ ಕೋಡ್ ಒಂದು, ಇನ್ನೊಂದು ಪ್ರಿಂಟರ್ ನಲ್ಲಿ ಕೆಲಸ ಮಾಡದಂತಾಯಿತು. ಆಗ ಈ ತಂತ್ರಾಂಶಗಳ ಮೇಲಿರುವ ನಿರ್ಬಂಧಗಳು ಅದರಲ್ಲೂ ತಂತ್ರಾಂಶದ ಕೋಡ್ ಅನ್ನು ಓದಲು ಇರುವ ನಿರ್ಬಂಧಗಳನ್ನು ತೆಗೆಯಬೇಕೆನ್ನುವ ಯೋಚನೆ ಅವರಿಗೆ ಬಂದಿತು.

ಇದಾದ ನಂತರ ೧೯೮೩ರಲ್ಲಿ ಗ್ನು ಎನ್ನುವ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದ್ದು ಸ್ಟಾಲ್‍ಮನ್. (gnu). ಆಗಲೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಯೋಜನೆಯ ನಾಂದಿಯಾಯಿತು.

ಇಂಗ್ಲಿಷ್ ಭಾಷೆಯ (free) ಎನ್ನುವ ಪದಕ್ಕೆ ಉಚಿತ ಮತ್ತು ಸ್ವತಂತ್ರ ಎನ್ನುವ ಎರಡು ಅರ್ಥವಿದೆ. ಇಂಗ್ಲಿಷ್ ಭಾಷೆಯ ಫ಼್ರೀ ಸಾಫ಼್ಟ್‍ವೇರ್ (free software) ಅನ್ನು ಕನ್ನಡದಲ್ಲಿ ಉಚಿತ ತಂತ್ರಾಂಶ ಎನ್ನುವುದಕ್ಕಿಂತ ಅನಿರ್ಬಂಧಿತ ಅಥವಾ ಸ್ವತಂತ್ರ ತಂತ್ರಾಂಶ ಎನ್ನಬಹುದು.

ಈ ಹಿನ್ನೆಲೆಯಲ್ಲಿ ಆರೆಮ್ಮೆಸ್ “free ಎನ್ನುವ ಪದದ ಅರ್ಥ, free-speech (ವಾಕ್-ಸ್ವಾತಂತ್ರ್ಯ) ನಲ್ಲಿ ರುವಂತೆ, free beer (ಉಚಿತ ಬೀರ್) ನಂತಲ್ಲ ಎನ್ನುತ್ತಾರೆ. ಇದರ ಒಟ್ಟಾರೆ ಅರ್ಥ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಉಚಿತವಾಗಿ ದೊರೆಯಬೇಕೆಂದೇನಿಲ್ಲ. ಆದರೆ ಅವುಗಳ ಕೋಡ್ ಮುಕ್ತವಾಗಿ ಓದಲು, ಮತ್ತು ಅರ್ಥಮಾಡಿಕೊಳ್ಳಲು ಸಿಗಬೇಕೆಂದು.

ತಂತ್ರಾಂಶವೊಂದು ಮುಕ್ತ ಮತ್ತು ಸ್ವತಂತ್ರವಾಗಿರಲು ಬೇಕಾದ ಉಳಿದ ಸ್ವಾಂತಂತ್ರ್ಯಗಳೆಂದರೆ,

* ಸ್ವತಂತ್ರ ೦ : ತಂತ್ರಾಂಶವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವ ಸ್ವತಂತ್ರ.

* ಸ್ವತಂತ್ರ ೧ : ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆಂದು ಅಭ್ಯಸಿಸುವ ಮತ್ತು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಸ್ವತಂತ್ರ.

* ಸ್ವತಂತ್ರ ೨ : ಈ ತಂತ್ರಾಂಶದ ಪ್ರತಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಸ್ವತಂತ್ರ.

* ಸ್ವತಂತ್ರ ೩ : ತಂತ್ರಾಂಶಗಳನ್ನು ಉತ್ತಮ ಪಡಿಸುವ ಮತ್ತು ನಿಮ್ಮಿಂದ ಉತ್ತಮಗೊಂಡ ತಂತ್ರಾಂಶವನ್ನು ಪ್ರಕಟಿಸುವ (ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ) ಸ್ವಾತಂತ್ರ್ಯ.

ಈ ಮೂಲ ಉದ್ದೇಶಗಳನ್ನೊಳಗೊಂಡ ತನ್ನದೇ ಒಂದು ಪರವಾನಗಿಯನ್ನು ಆರೆಮ್ಮೆಸ್ ರಚಿಸಿದರು. ಮತ್ತು ಇದನ್ನು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್(ಜಿಪಿಎಲ್) ಎಂದು ಹೆಸರಿಸಿದರು. ಇದರ ಉತ್ತಮಗೊಂಡ ಭಾಗಗಳಾಗಿ ಜಿಪಿಎಲ್-೨ ಮತ್ತು ಜಿಪಿಎಲ್-೩ ಅನ್ನೂ ಅವರೇ ಅಭಿವೃದ್ದಿ ಪಡಿಸಿದರು.

ಈ ಲೈಸೆನ್ಸ್‍ಗಳು, ಮೂಲ ತಂತ್ರಾಂಶ ಮುಕ್ತವಾಗಿರುವುದಷ್ಟೇ ಅಲ್ಲದೆ, ಅದರ ಉತ್ತಮಪಡಿಸುವಿಕೆಗಳೂ, ಅಳವಡಿಕೆಗಳೂ ಕೂಡಾ ಮುಕ್ತವಾಗಿರುವಂತೆ ನೋಡಿಕೊಳ್ಳುವ, ವಿಶೇಷ ಕಾಪಿಲೆಫ಼್ಟ್ ವ್ಯವಸ್ಥೆಯನ್ನು ಹೊಂದಿವೆ.

ಇಂದು ೬೬ಕ್ಕೂ ಹೆಚ್ಚಿನ ಬಗೆಯ ಮುಕ್ತ ಲೈಸೆನ್ಸ್ ಗಳು ಲಭ್ಯವಿದೆ. ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಅಲ್ಲದೆ, ಗ್ನು ಲೆಸ್ಸರ್ ಪಬ್ಲಿಕ್ ಲೈಸೆನ್ಸ್. ಅಪಾಚೆ ಲೈಸೆನ್ಸ್. ಬಿ ಎಸ್ ಡಿ ಲೈಸೆನ್ಸ್, ಕಾಮನ್ ಪಬ್ಲಿಕ್ ಲೈಸೆನ್ಸ್, ಮೊಜಿಲ್ಲಾ ಪಬ್ಲಿಕ್ ಲೈಸೆನ್ಸ್,ಯುರೋಪಿಯನ್ ಪಬ್ಲಿಕ್ ಲೈಸೆನ್ಸ್. ಇವುಗಳಲ್ಲಿ ಪ್ರಮುಖವಾದುವು. ಪ್ರೊಪ್ರೈಟರಿ ಲೈಸೆನ್ಸ್ ಕಾರಣಗಳಿಂದಾಗಿ ದೈತ್ಯ ಶಕ್ತಿಯಾಗಿ ಬೆಳೆದಿರುವ ಮೈಕ್ರೋಸಾಫ್ಟ್ ಕಂಪನಿ ಕೂಡಾ, ಎಮ್.ಎಸ್ — ಪಿ ಎಲ್ ಎನ್ನುವ ಮುಕ್ತ ತಂತ್ರಾಂಶ ಲೈಸೆನ್ಸ್ ಅನ್ನು ಹೊಂದಿದೆ.

ಈ ಮುಕ್ತ ತಂತ್ರಾಂಶಗಳ ಒಂದು ಪ್ರಮುಖ ಲಕ್ಷಣ ಕಾಪಿ ಲೆಫ್ಟ್. ಕಾಪಿರೈಟ್ ಪದದೊಂದಿಗೆ ಆಟವಾಡಿ ಸೃಷ್ಟಿಯಾದ ಪದ. ಇದರ ಮೊದಲ ಬಳಕೆ ೧೯೭೬ರ ಟೈನಿ ಬೇಸಿಕ್ ಎನ್ನುವ ತಂತ್ರಾಂಶದಲ್ಲಿ ಬಳಕೆಯಾಗಿದ್ದನ್ನು ಕಾಣಬಹುದು. ಕಾಪಿರೈಟ್ ನ ಜೊತೆ ಬಳಕೆಯಾಗುವ ಸಾಮಾನ್ಯ ವಾಕ್ಯವಾದ all rights are reserved ಅನ್ನು all wrongs are reserved ಎಂದು ಅಲ್ಲಿ ಬಳಸಲಾಗಿದೆ. ಆದರೆ ಕಾಪಿಲೆಫ್ಟ್, ಕಾಪಿರೈಟ್ ಕಾಯಿದೆಯ ಅಂಶಗಳನ್ನೇ ಬಳಸಿಕೊಂಡು ತಂತ್ರಾಂಶವೊಂದು ತನ್ನೆಲ್ಲಾ ಮುಕ್ತತೆಯನ್ನು ಉಳಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ತಂತ್ರಾಂಶವೊಂದು ಬೇರೆಯವರಿಂದ ಉತ್ತಮಗೊಂಡಾಗ, ಅವರು ಅದನ್ನು ಮುಕ್ತತಂತ್ರಾಂಶವಾಗಿಯೇ ಉಳಿಸುವಂತಹ ರಕ್ಷಣೆ ಕಾಪಿರೈಟ್ ಕಾಯಿದೆಯಿಂದ ಇಲ್ಲಿ ದೊರೆಯುತ್ತದೆ. ಆದುದರಿಂದ ಮುಕ್ತ ಲೈಸೆನ್ಸ್ ಗಳನ್ನು, ಬಲಶಾಲಿ ಲೈಸೆನ್ಸ್ ಗಳು ಮತ್ತು ದುರ್ಬಲ ಲೈಸೆನ್ಸ್ ಗಳು ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಜಿಪಿಎಲ್-೩ ಬಲಶಾಲಿ ಲೈಸೆನ್ಸ್ ಆದರೆ, ಜಿಪಿಎಲ್-೨ ಮತ್ತು ಜಿಪಿಎಲ್ ದುರ್ಬಲ ಲೈಸೆನ್ಸ್ ಗಳು. ಜಿಪಿಎಲ್-೩ ತಂತ್ರಾಂಶ ತನ್ನೆಲ್ಲಾ ಬೆಳವಣಿಗೆಯೊಂದಿಗೆ ಕೂಡಾ ಮುಕ್ತವಾಗಿ ಉಳಿಯುವಂತೆ ರೂಪಿಸಲಾಗಿರುವ ವಿಶೇಷ ಪರವಾನಗಿ. ಇದನ್ನು ಜಿಪಿಎಲ್ ಮತ್ತು ಜಿಪಿಎಲ್-೨ ರಲ್ಲಿರುವ ನ್ಯೂನತೆಗಳಿಂದ ಹೊರಬರಲಿಕ್ಕಾಗಿಯೇ ರೂಪಿಸಲಾಯಿತು.

ಜಿಪಿಎಲ್-೩ ಲೈಸೆನ್ಸ್ ನ ಕೆಲವು ಮುಖ್ಯ ಆಂಶಗಳು

೧. ಜನರಲ್ ಪಬ್ಲಿಕ್ ಲೈಸೆನ್ಸ್ ನ ಅಡಿಪಾಯದ ಮೇಲೆ ನಿಂತಿದೆ
೨. ಮುಕ್ತ ತಂತ್ರಾಂಶಗಳನ್ನು ಪ್ರತಿಬಂಧಿಸುವ ಕಾನೂನುಗಳಿಂದ ರಕ್ಷಣೆ.
೩. ತಂತ್ರಾಂಶವನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಹಕ್ಕಿನ ರಕ್ಷಣೆ.
೪. ಪೇಟೆಂಟ್ ಗಳ ಮೂಲಕ ಎದುರಾಗುವ ಸಮಸ್ಯೆಗಳ ವಿರುದ್ದ ಸೂಕ್ತ ರಕ್ಷಣೆ.
೫. ವಿವಿಧ ಲೈಸೆನ್ಸ್ ಗಳು ಜಿಪಿಎಲ್-೩ ನ ಜೊತೆಗೆ ಹೊಂದಿರುವ ಸ್ವಾಮ್ಯತೆಯ ವಿವರಣೆ.
೬. ಹಲವಾರು ವಿಧಗಳ ಮುಕ್ತ ಸ್ವತಂತ್ರ ಲೈಸೆನ್ಸ್ ಗಳೊಂದಿಗೆ ಹೊಂದಾಣಿಕೆ.
೭. ತಂತ್ರಾಂಶದ ಕೋಡ್ ಹಂಚಲು ಹೆಚ್ಚಿನ ವಿಧಾನಗಳು
೮. ಕಡಿಮೆ ತಂತ್ರಾಂಶವನ್ನು ಹಂಚುವ ಅವಕಾಶ.
೯. ಜಾಗತಿಕವಾಗಿ ಅನ್ವಯವಾಗುವಂತಹ ಪರವಾನಗಿ.
೧೦. ತಪ್ಪುಗಳಾದಾಗ ತಿದ್ದಿಕೊಳ್ಳುವ ಅವಕಾಶ.
ಮುಕ್ತ ತಂತ್ರಾಂಶಗಳ ಬಗ್ಗೆ ಇರುವ ಇನ್ನೊಂದು ಬಹುದೊಡ್ಡ ತಪ್ಪು ಅಭಿಪ್ರಾಯವೆಂದರೆ ಅವು ಉಚಿತವಾಗಿ ಇರಬೇಕೆಂಬುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಉಚಿತವಾಗಿ ಇರಬೇಕೆನ್ನುವ ನಿಯಮವಿಲ್ಲ. ಇವುಗಳಲ್ಲಿ ತಂತ್ರಾಂಶದ ಕೋಡ್ ಅನ್ನು ಮುಕ್ತವಾಗಿ ಹಂಚಬೇಕೆಂಬ ನಿಯಮವಿದೆ ಅಷ್ಟೇ. ಉಚಿತವಾಗಿ ತಂತ್ರಾಂಶ ನೀಡುವುದು ಅದನ್ನು ಅಭಿವೃದ್ದಿ ಪಡಿಸಿದವರಿಗೆ ಬಿಟ್ಟ ವಿಚಾರ. ೨೦೧೨ರ ಈ ಸ್ವಾತಂತ್ರ್ಯ ತಿಂಗಳಲ್ಲಿ, ಈ ಲೇಖನದ ಓದಿ, ಸ್ವತಂತ್ರ ತಂತ್ರಾಂಶಗಳನ್ನು ಪ್ರೋತ್ಸಾಹಿಸಿ.

ಮೊದ್ಮಣಿ ಮಂಜುನಾಥ್

ಮೊದ್ಮಣಿ ಮಂಜುನಾಥ್

ಮೈಸೂರಿನವನು. ಓದಿದ್ದು ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್, ಚಾಟ್ ಮಾಡುವ ಕುತೂಹಲದಿಂದ ಕಲಿತ ಕಂಪ್ಯೂಟರ್ ಈಗ ಬೆಂಗಳೂರಲ್ಲಿ ಅನ್ನ ಕೊಡುತ್ತಿದೆ. ಆಗಾಗ ಕವನ, ಬರಹ ಗೀಚುತ್ತೇನೆ. ಹಾಗಂತ ಕವಿಯಲ್ಲ. ಮನಸ್ಸಿಗೆ ತೋಚಿದ್ದೆಲ್ಲಾ ಮಾಡುತ್ತಿರುತ್ತೇನೆ. ಅವೆಲ್ಲಾ ಹವ್ಯಾಸಗಳಲ್ಲ. ಕನ್ನಡವೆಂದರೆ ಪ್ರೀತಿ. ಕನ್ನಡ ಉಳಿಯಲು ಕಂಪ್ಯೂಟರಿನಲ್ಲಿ, ಇಂಗ್ಲಿಷಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಿರ್ವಹಣೆಯೂ ಸೇರಿದಂತೆ, ಕನ್ನಡದಲ್ಲಿ ಮಾಡುವಂತಾಗಬೇಕೆಂಬ ನಂಬಿಕೆ ನನ್ನದು.

ಮುಂದೆ ಓದಿ

ಹೊಸ ಅಲೆ ೨ – ಹಿತ್ತಲ ಜೊತೆ ಹಿತ್ತಲ ಗಿಡವೂ ಹೋಯ್ತಾ?

ಪ್ರಕಟಿಸಿದ್ದು ದಿನಾಂಕ Aug 2, 2012 ವಿಭಾಗ 2012, ale2 | 2 ಪ್ರತಿಕ್ರಿಯೆಗಳು

 ಹಿಂದೆ, ನಾನು ಕಂಡಂತೆ ನಗರಗಳಲ್ಲಿ ಮನೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಇರುತ್ತಿದ್ದವು. ಅಂದಿನ ಆರ್ಥಿಕ ಪರಿಸ್ಥಿತಿಯು ಇದಕ್ಕೆ ಕಾರಣವಿದ್ದಿರಬಹುದು. ಹೂಬಿಡುವ ಸಸ್ಯಗಳ ಜೊತೆಗೆ ಕರಿಬೇವು, ಬಾಳೆ, ಸಪೋಟ, ನುಗ್ಗೆ , ಟೊಮ್ಯಾಟೊ, ಇತ್ಯಾದಿ ಗಿಡಗಳುಳ್ಳ ಒಂದು ಕೈತೋಟವಿರುವ ಮನೆ ಸರ್ವೇಸಾಮಾನ್ಯವಾಗಿತ್ತು.. ಬಹಳಶ್ಟು ಖಾಲಿ ಜಾಗ ಇದ್ದುದ್ದರಿಂದ ತ್ಯಾಜ್ಯ ನಿರ್ವಹಣೆ, ಅಂತರ್ಜಲ ಪುನರ್ಭರ್ತಿಕಾರ್ಯ ಹಾಗು ಮಳೆ ನೀರು ಕೊಯ್ಲು ವ್ಯವಸ್ಥೆಗಳ ಅವಶ್ಯಕತೆಯೂ ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಆದಾಯ ಹೆಚ್ಚಾದಂತೆ ಮನೆಗಳು ದೊಡ್ಡದಾಗಿವೆ ಹಾಗು ತೋಟಗಳು ಚಿಕ್ಕದಾಗಿವೆ ಅಥವಾ ಪೂರ್ತಿಯಾಗಿ ಕಣ್ಮರೆಯಾಗತೊಡಗಿವೆ. ಇದಕ್ಕೆ ಕಾರಣ ವಾಸ್ತು ತಿದ್ದುಪಡಿ ಇರಬಹುದು ಅಥವಾ ಮನೆಗಳ ಸುಧಾರಣೆ ಇರಬಹುದು. ಆರಾಮವಾಗಿ ಜೀವಿಸುವುದರಲ್ಲಿ ತಪ್ಪೇನು ಇಲ್ಲದಿದ್ದರೂ, ಅಗತ್ಯ ಎನ್ನುವ ಹೆಸರಿನಲ್ಲಿ ನಾವು ಅನಪೇಕ್ಷಿತ ಹಾಗು ಐಷಾರಾಮಿ ಜೀವನದೆಡೆಗೆ ಕಾಲಿಟ್ಟಿದ್ದೇವೆ.

ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಹಾಗು ವಿಲೇವಾರಿ ವಿಕೇಂದ್ರೀಕರಣದ ಸಮಸ್ಯೆ ಬಗೆಹರಿಸಲು ಅನೇಕ ಸಂಸ್ಥೆಗಳು ಸಾಕಷ್ಟು ಶ್ರಮಪಡುತ್ತಿದ್ದಾರೆ. ಇದೇ ರೀತಿ ಆಹಾರ ಉತ್ಪಾದನೆಯಲ್ಲಿ ಯೂ ವಿಕೇಂದ್ರೀಕರಣದ ಅವಶ್ಯಕತೆ ಕಂಡು ಬರುತ್ತಿದೆ. ಈ ಎರಡೂ ಸಮಸ್ಯೆಗಳನ್ನುಒಟ್ಟಿಗೆ ಪರಿಹರಿಸಿದರೆ ಇನ್ನೂಉತ್ತಮ.

ಕೆನಡಾದಲ್ಲಿನ ನನ್ನ ವಿದ್ಯಾರ್ಥಿ ದಿನಗಳಲ್ಲಿ, “ಫ್ರೆಶ್ ಸಿಟಿ ಫಾರ್ಮ್ಸ್” (http://www.freshcityfarms.com/ ) ಎಂಬ “ನಗರ ಕೃಷಿ” ಉದ್ಯಮದ ಸ್ಥಾಪಕರನ್ನು ಭೇಟಿ ಮಾಡುವ ಹಾಗು ಅಲ್ಲಿ ಕೆಲಸ ಮಾಡಿ ಕಲಿಯುವ ಅವಕಾಶ ನನಗೆ ದೊರಕಿತ್ತು. ಸ್ಥಳೀಯವಾಗಿ ಆಹಾರ ಬೆಳೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗ ಒದಗಿಸುವ ಅವಳಿ ಉದ್ದೇಶಗಳನ್ನು ಸಾಧಿಸಿರುವ ಈ ಸಂಸ್ಥೆ ಸಾಮಾಜಿಕ ಉದ್ದಿಮೆಗೆ ಒಂದು ಪರಿಪೂರ್ಣ ಉದಾಹರಣೆ. “ಫ್ರೆಶ್ ಸಿಟಿ ಫಾರ್ಮ್ಸ್” ಬಳಕೆಯಾಗದ ಬಾಲ್ಕನಿಗಳಲ್ಲಿ ಮತ್ತು ಹಿತ್ತಲಲ್ಲಿ ಸಾವಯವ ಪದ್ದತಿಯಲ್ಲಿ ಆಹಾರ ಬೆಳೆಯಲು ತನ್ನ ಸದಸ್ಯ ರೈತರನ್ನು ಬೆಂಬಲಿಸುತ್ತದೆ. ಒಂದು ಹಸಿರುಮನೆಯಲ್ಲಿ (green house) ಬೆಳೆದ ಹಸಿರು ತರಕಾರಿಗಳ (salad greens) ಜೊತೆಗೆ ಪುಟ್ಟ ಪುಟ್ಟ ಖಾಲಿ ಪ್ರದೇಶಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು, ಒಂದು ಸೀಮಿತ ಪ್ರದೇಶದಲ್ಲಿ ಚಂದಾದಾರರಿಗೆ ತಲುಪಿಸಲಾಗುತ್ತದೆ. ಕೆಲವು ತರಕಾರಿಗಳು ಮತ್ತು ಹಣ್ಣುಗಳನ್ನು ಸಾಧ್ಯವಾದಷ್ಟು ಕಮ್ಮಿ ದೂರದಿಂದ (minimal food miles) ಒಳಗೊಂಡ ರಸ್ತೆ ಅಥವಾ ಸಮುದ್ರ ಮಾರ್ಗದ ಮೂಲಕ ಆಮದು ಮಾಡಲಾಗುತ್ತದೆ.

ಈ ಪರಿಹಾರದ ಸೂಕ್ತತೆಯನ್ನು ವಿಮರ್ಶಿಸಿ ಭಾರತೀಯ ಪರಿಸ್ಥಿತಿಗಳಿಗೆ ಅನುವಾಗುವಂತೆ ಕಾರ್ಯಗತಗೊಳಿಸುವ ಅಗತ್ಯವಿದೆ. ಜೈವಿಕ, ಸ್ಥಳೀಯ ಹಾಗು ಆರೋಗ್ಯಕರ ಆಹಾರವನ್ನೂ ಸೇವಿಸುವ ಬಲವಾದ ಇಚ್ಛೆ ಇದ್ದರೆ ಸರಳ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬಹುದು ಎಂಬುದಕ್ಕೆ “ಫ್ರೆಶ್ ಸಿಟಿ ಫಾರ್ಮ್ಸ್” ಒಂದು ಉದಾಹರಣೆಯಷ್ಟೇ.

ವಿಕೇಂದ್ರೀಕರಣ ನಮಗೆ ಹೊಸತೇನಲ್ಲ. ಹಿಂದಿನಿಂದಲೂ, ನಮ್ಮ ಮನೆಯ ಬಾಗಿಲಿಗೆ ತರಕಾರಿ ಮಾರಾಟಗಾರರು ಬರುತ್ತಿದ್ದಾರೆ. ಈ ಮಾರಾಟಗಾರರು ಅವರ ಸಾಂಪ್ರದಾಯಿಕ ಪಾತ್ರದ ಜೊತೆಗೆ ನಮ್ಮ ಹಿತ್ತಲು ಹಾಗು ಮೇಲ್ಚಾವಣಿಗಳ ಮೇಲೆ (ಎಲ್ಲಿ ಸಾಧ್ಯವೋ ಅಲ್ಲಿ) ತರಕಾರಿಗಳನ್ನು ಬೆಳೆದು ಅದನ್ನೇ ನಮಗೇಕೆ ಸರಬರಾಜು ಮಾಡಬಾರದು?

ಅನೇಕ ವರ್ಷಗಳ ಹಿಂದೆ ಟಿಂಕಲ್ ಎಂಬ ನಿಯತಕಾಲಿಕದಲ್ಲಿ ಓದಿದ ಒಂದು ಕಥೆ ನೆನಪಿಗೆ ಬರುತ್ತದೆ. ಒಬ್ಬ ಜಾಣ ರಾಜ ತನ್ನ ಪ್ರಜೆಗಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಲುವಾಗಿ ಒಂದು ಸವಾಲು ಹಾಕುತ್ತಾನೆ. ಅನೇಕ ದಿನಗಳ ಪ್ರಯಾಣವುಳ್ಳ ಒಂದು ಗ್ರಾಮದಿಂದ ತನ್ನ ಅರಮನೆಗೆ ಯಾರು ತಾಜಾ ತರಕಾರಿಗಳನ್ನು ತರುತ್ತಾರೋ ಅವರಿಗೆ ಬಹುಮಾನವನ್ನು ಕೊಡುವುದಾಗಿ ಪ್ರಕಟಿಸುತ್ತಾನೆ. ಒಬ್ಬ ಜಾಣ ರೈತ ತರಕಾರಿ ಸಸ್ಯಗಳನ್ನು ಒಂದು ಬಂಡಿಯಲ್ಲಿ ನೆಟ್ಟು ಅರಮನೆ ತಲುಪುವ ಸಮಯಕ್ಕೆ ಕೊಯ್ಲಿಗೆ ತಯಾರಾಗಿರುವಾಗ ಹಾಗೆ ತನ್ನ ಪ್ರಯಾಣವನ್ನು ಯೋಜಿಸುತ್ತಾನೆ. ಈಗಿನ ಕಾಲಕ್ಕೆ ನಮಗೆ ಇಂತಹ ಸೃಜನಾತ್ಮಕ ಪರಿಹಾರಗಳ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜೈವಿಕ ಮತ್ತು ಟೆರೇಸ್ ತೋಟಗಾರಿಕೆ ಹಾಗೂ ಮನೆಯಲ್ಲೇ ಗೊಬ್ಬರ ತಯಾರಿಸಲು ಪರಿಹಾರ ಹಾಗು ಸಲಹೆ ಕೊಡುವ ಕೆಲಸವನ್ನು ಸಾಕಷ್ಟು ಸಂಸ್ಥೆಗಳು ಹಾಗು ಸಮುದಾಯಗಳು ಮಾಡುತ್ತಿವೆ.

 

ಮೈ ಸನ್ನಿ ಬಾಲ್ಕನಿ ಅವರ ಸ್ಕ್ವೆರ ಫುಟ್ ಗಾರ್ಡನ್ (ಒಂದು ಚದುರ ಅಡಿ ತೋಟ)
http://www.mysunnybalcony.com/tag/square-foot-garden/

ಪೂರ್ಣ ಒರ್ಗನಿಕ್ಸ್
http://www.purnaorganics.com/

ಡಾ ಬಿಎನ್ ವಿಶ್ವನಾಥ್ ರವರ ಸಾವಯವ ಟೆರೇಸ್ ತೋಟಗಾರಿಕೆ ಕೈಪಿಡಿ (A Handbook of Organic Terrace Gardening) ಸಾವಯವ ಟೆರೇಸ್ ತೋಟಗಾರಿಕೆ ಆಸಕ್ತರಿಗೆ ಉಪಯುಕ್ತವಾಗಿದೆ.
http://www.cityfarmer.info/2008/03/05/a-handbook-of-organic-terrace-gardening-bangalore-india/

ಡೈಲಿ ಡಂಪ್ ಮನೆಯಲ್ಲಿಯೇ ಗೊಬ್ಬರ ತಯಾರಿಸಲು ಸೃಜನಾತ್ಮಕ ಪರಿಹಾರಗಳನ್ನು ಹೊಂದಿದೆ.
http://www.dailydump.org/

ಬೆಂಗಳೂರಿನಲ್ಲಿ ಸಾವಯವ ತೋಟಗಾರಿಕೆ ಬಗ್ಗೆ ಮಾಹಿತಿ, ಘಟನೆಗಳ ವಿವರ ಹಾಗು ಸಹಾಯವನ್ನು Bangalore Terrace Gardeners ಎಂಬ ಸಮುದಾಯದಲ್ಲಿ ಪಡೆಯಬಹುದು.
http://organicconversations.blogspot.in/p/about-btg.html

ಲಾವಣ್ಯ

ಲಾವಣ್ಯ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಲಾವಣ್ಯ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಕಳೆದ ಕೆಲವು ವರುಷಗಳಿಂದ ಕನಸುಗಳನ್ನು ಬೆನ್ನಟ್ಟಿಕೊಂಡು ಅಲೆಮಾರಿ ಜೀವನ ನೆಡಿಸುತ್ತಿದ್ದಾರೆ. ಮುಂದೊಂದು ದಿನ ರೈತ ಆಗಬೇಕೆಂಬ ಆಸೆ. ಅವರ ಸಾಹಸಮಯ ಪಯಣಗಳನ್ನು ಅವರ ಬ್ಲಾಗ್ ಮೂಲಕ ಹಂಚಿಕೊಳ್ಳುವುದು ಅವರ ಹವ್ಯಾಸ. ಈಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದಾರೆ.

ಮುಂದೆ ಓದಿ

ಹೊಸ ಅಲೆ ೧ – Puppy Linux : ಭರವಸೆಯ ಮುಕ್ತ ತಂತ್ರಾಂಶ

ಪ್ರಕಟಿಸಿದ್ದು ದಿನಾಂಕ Aug 1, 2012 ವಿಭಾಗ 2012, ale2 | ೧ ಪ್ರತಿಕ್ರಿಯೆ

ಅರಿವಿನ ಅಲೆಗಳು ೨೦೧೨ ರ ಲೇಖನಗಳ ಮಾಲೆಯನ್ನು ಶ್ರೀ ಪ್ರಶಾಂತ್ ರವರ ಈ ಲೇಖನದಿಂದ ಪ್ರಾರಂಭಿಸುತ್ತಿದ್ದೇವೆ. ಕನ್ನಡದಲ್ಲಿ ಲೇಖನಗಳನ್ನು, ಸಾಮಾನ್ಯನೂ ಕೂಡ ಸಾಮಾನ್ಯನ ಭಾಷೆಯಲ್ಲೇ ಬರೆಯಬಹುದು. ಜೊತೆಗೆ ತನ್ನ ಜ್ಞಾನದ ಅರಿವನ್ನು ಇತರರೊಡನೆ ಸುಲಭವಾಗಿ ಬರವಣಿಗೆಯ ಮೂಲಕವೂ ಹಂಚಿಕೊಳ್ಳಬಹುದು ಎಂಬುದನ್ನು ನೀವೇ ಓದಿ ನೋಡಿ, ನೀವೂ ಬರೆಯಿರಿ, ಇತರರೊಡನೆ ಹಂಚಿಕೊಳ್ಳಿ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ ಅರಿವಿನ ಅಲೆಗಳ ‘ಹಕ್ಕುಗಳು ಮತ್ತು ಹಂಚಿಕೆ’ಯ ವಿಷಯವನ್ನು ಜೊತೆ ಸೇರಿಸಲು ಮರೆಯಬೇಡಿ.  ನಿಮ್ಮ – ಅರಿವಿನ ಅಲೆಗಳು ತಂಡ, ಸಂಚಯದ ಪರವಾಗಿ.

ಈ ಬರಹವನ್ನು ಪ್ರಾರಂಭಿಸುವ ಮುನ್ನ ಒಂದು ವಿಷಯವನ್ನು ನಾನು ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳಲು ಇಚ್ಛಿಸುತ್ತೇನೆ – ಮೂಲತಃ ನಾನು ತಂತ್ರಜ್ಞನಲ್ಲ; ತಂತ್ರಜ್ಞಾನದ ಬಗೆಗೆ ಲೇಖನವೊಂದನ್ನು ರಚಿಸುವಂತಹ ತಂತ್ರ-ಜ್ಞಾನ ನನ್ನಲ್ಲಿಲ್ಲ; ಹೀಗಿದ್ದರೂ, ‘ಅರಿವಿನ ಅಲೆಗಳು 2012′ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹದಾಸೆಯಿಂದ, ಮುಕ್ತ ತಂತ್ರಾಂಶಗಳ ಸ್ವತಂತ್ರ ಲೋಕದಲ್ಲಿ ಅನ್ಯಗ್ರಹ ಜೀವಿಯಾದ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ, ಆದರಿಸಿ, ಬೆಂಬಲಿಸಿ ಕಲಿಸಿ, ಪರಿಣಿತನನ್ನಲ್ಲದಿದ್ದರೂ ಮುಕ್ತ ತಂತ್ರಾಂಶಗಳ ಒಬ್ಬ ಸಾಮಾನ್ಯ ಬಳಕೆದಾರನನ್ನಾಗಿ ಮಾಡಿದ ತಂತ್ರಾಂಶವೊಂದರೊಂದಿಗಿನ ನನ್ನ ಒಡನಾಟದ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನಕ್ಕೆ ಒಡ್ಡಿಕೊಂಡಿದ್ದೇನೆ; ವಿಷಯದ ಗ್ರಹಿಕೆ, ವ್ಯಾಖ್ಯಾನ ಹಾಗೂ ಮಂಡನೆಯಲ್ಲಿ ಆಗಿರಬಹುದಾದ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸಬಾರದಾಗಿ ಕೋರಿಕೆ.

ಕಳೆದ ಐದು ವರ್ಷಗಳ ಹಿಂದೆ, ಅನೇಕ ಕಾರಣಗಳಿಂದಾಗಿ ನಾನು Microsoft Windows ಬಳಕೆಯಿಂದ ನಿರ್ಗಮಿಸಿ, Linux ಎಂಬ ಮುಕ್ತ ಪ್ರಪಂಚದೆಡೆಗೆ ಹೆಜ್ಜೆಯಿಡುವ ನಿರ್ಧಾರ ಮಾಡಲು ಹಲವು ತಿಂಗಳುಗಳೇ ಬೇಕಾದವು! ಬಹುಶಃ, Linux ಬಳಕೆ ಮಾಡಬೇಕಾದರೆ ವ್ಯಾಪಕವಾಗಿ DOS Prompt ಸಂಕೇತಗಳನ್ನು ಬಳಸುವ ಅರಿವು ಬೇಕಾಗಬಹುದೆಂಬ ಸುಪ್ತ ಅಳುಕು ಇದಕ್ಕೆ ಕಾರಣವಿರಬಹುದೇನೋ? ಸಹಜವಾಗಿಯೇ Ubuntu ಮೂಲಕ Linux ಲೋಕಕ್ಕೆ ಪ್ರವೇಶ ಪಡೆದುಕೊಂಡ ನಂತರ, ನಿರಂತರವಾದ ಅವಿರತ ಹುಡುಕಾಟದಿಂದ ದೊರೆತ ಪುಟ್ಟದೊಂದು Linux Distro ನನ್ನಲ್ಲಿ ಆಸಕ್ತಿ ಮೂಡಿಸಿತ್ತು! ಮೊದಲ ಬಳಕೆಯಲ್ಲಿಯೇ ಆ ಪುಟ್ಟ ತಂತ್ರಾಂಶದ ದೈತ್ಯ ಉಪಯುಕ್ತತೆಯು ನನ್ನನ್ನು ಬೆರಗುಗೊಳಿಸದೇ ಇರಲಿಲ್ಲ; ಆ ತಂತ್ರಾಂಶವೇ Puppy Linux.

Puppy Linux – ಹೆಸರು ಕೇಳುತ್ತಿದ್ದಂತೆಯೇ ಹಲವರ ಮುಖದಲ್ಲಿ ಮುಗುಳ್ನಗೆ ಮೂಡುವುದು ಸಹಜ. ಬಳಕೆಗೆ ಮೊದಲೇ ಇದು ನನ್ನೊಳಗೊಂದು ಚಿರಪರಿಚಿತ ಅನುಭವವನ್ನು ಉಂಟುಮಾಡಿದ್ದಕ್ಕೆ ಕಾರಣಗಳೂ ಇವೆ; ಮೊದಲನೆಯದಾಗಿ, ವೃತ್ತಿಯಲ್ಲಿ ಪಶುವೈದ್ಯನಾದ ನನಗೆ ‘puppy’ ಗಳೊಂದಿಗೆ ಸಹಜ-ಸಲಿಗೆಯ ಬಿಡದ ನಂಟು; ಎರಡನೆಯದಾಗಿ, ಚಿಕ್ಕಂದಿನಿಂದ ಆಡಿಕೊಂಡು ಒಟ್ಟಿಗೆ ಬೆಳೆದ ನನ್ನ ಸೋದರಿಯೊಬ್ಬರ ಅಚ್ಚುಮೆಚ್ಚಿನ ಹೆಸರು ‘puppy’. ಇಂತಹುದೇ ಭಾವುಕ ಕಾರಣದಿಂದಾಗಿ ಇದರ ಆವಿಷ್ಕಾರಕ Barry Kauler ತಮ್ಮ ಪ್ರೀತಿಯ ಪುಟ್ಟ ನಾಯಿಮರಿ Mascot ಸವಿನೆನಪಿಗಾಗಿ ಈ ತಂತ್ರಾಂಶಕ್ಕೆ Puppy Linux ಎಂದು ನಾಮಕರಣ ಮಾಡಿ, ಅಭಿವೃದ್ಧಿ ಪಡಿಸುತ್ತಾ ಇಂದಿಗೂ ಸಹ Mascot ಅನ್ನು Puppy Linux ನಲ್ಲಿ ಅಮರವಾಗಿಸಿದ್ದಾರೆ.

ತನ್ನ ಅಧಿಕೃತ ಜಾಲತಾಣ www.puppylinux.org ನಲ್ಲಿ ಹೇಳಿರುವಂತೆ, Puppy ಹಿಂದಿರುವ ಮೂಲಮಂತ್ರಗಳು – ಮುಕ್ತ, ಸರಾಗ ಹಾಗೂ ವೇಗ. ಮೂಲತಃ, Microsoft Windows ನ ಯಾವುದೇ ಆವೃತ್ತಿಯ ಅನುಸ್ಥಾಪನೆಗೂ ಬೆಂಬಲಿಸದ ನನ್ನಲ್ಲಿದ್ದ ಅತ್ಯಂತ ಹಳೆಯ ಗಣಕಯಂತ್ರಕ್ಕೆ ಮರುಜೀವ ನೀಡುವ ಸಲುವಾಗಿ ಅಗತ್ಯವಿದ್ದ ಮುಕ್ತ ತಂತ್ರಾಂಶದ ನನ್ನ ಅವಶ್ಯಕತೆಗಳೂ ಸಹ ಮೇಲಿನವುಗಳೇ ಆಗಿದ್ದುದು ಶ್ರೇಯಸ್ಕರವಾಗಿ ಪರಿಣಮಿಸಿತು. ಒಂದೂವರೆ ದಶಕದಷ್ಟು ಹಳೆಯದಾದ ನನ್ನ ಗಣಕಯಂತ್ರವೊಂದು ಇಂದಿಗೂ ಸಹ ಯಾವುದೇ ಅಡ್ಡಿ-ಆತಂಕಗಳಿಲ್ಲದೆ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದಕ್ಕೆ Puppy Linux ನ ಜಾದುವೇ ಕಾರಣವೆಂದರೆ ತಪ್ಪಾಗಲಾರದು.

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ನಾಣ್ನುಡಿಯಂತೆ, Puppy ಚಿಕ್ಕದಾದರೂ ಅದು ಹೊಂದಿರುವ ಉಪಯುಕ್ತ ತಂತ್ರಾಂಶ ಸಾಧನಗಳು ಪ್ರಸ್ತುತ ಚಾಲ್ತಿಯಲ್ಲಿರುವ ಇತರೆ ಯಾವುದೇ Linux Distro ಗಳಿಗೆ ಸರಿಸಮನಾಗಿರುವಂತಹವು. Wordprocessor, Spreadsheet, Internet Browser, Games, Image Editors, Network Manager, Firewall, Multimedia ಮುಂತಾದ ಅನೇಕ ಸೌಲಭ್ಯಗಳು ಲಭ್ಯವಿದ್ದು, ಇವುಗಳೆಲ್ಲವುಗಳೂ ಅತ್ಯಂತ ಹಗುರಾದವು (lightweight) ಎನ್ನುವುದೂ ವಿಶೇಷ. ಪೂರ್ವನಿಯೋಜಿತ ತಂತ್ರಾಂಶಗಳು ಲಭ್ಯವಿಲ್ಲದಿದ್ದರೆ, ಅವುಗಳನ್ನು ಸ್ವತಃ ನಾವುಗಳೇ ಯಾವುದೇ ಶ್ರಮವಿಲ್ಲದೇ ಸುಲಭವಾಗಿ dotpet installer ತಯಾರಿಸುವ ಮೂಲಕ ಅಭಿವೃದ್ಧಿಪಡಿಸಿಕೊಳ್ಳಬಹುದು. ಇದಕ್ಕೆ ಅನುವಾಗುವಂತೆ GUI ಒಂದನ್ನು Puppy ಹೊಂದಿದೆ.

ಯಾವುದೇ ಗಣಕಯಂತ್ರದಲ್ಲಿ ಪೂರ್ವಭಾವಿಯಾಗಿ ಅನುಸ್ಥಾಪನೆಗೊಳ್ಳದೇ, ಕೇವಲ Live CD ಅಥವಾ USB ಸಾಧನದ ಮೂಲಕ ಸಂಪೂರ್ಣ ಕಾರ್ಯಪ್ರವೃತ್ತವಾಗಬಲ್ಲ ಸಾಮರ್ಥ್ಯ ಮಾತ್ರವಲ್ಲದೇ, ಅತ್ಯಂತ ಹಳೆಯ ಹಾಗೂ ನವನವೀನ hardware components ಗಳಿಗೆ ಹೊಂದಾಣಿಕೆಯಾಗುವಂತಹ updated drivers ಗಳನ್ನೂ ಒಳಗೊಂಡಿರುವುದು Puppy ಯ ಇನ್ನೋದು ಪ್ರಮುಖ ಲಕ್ಷಣ. ಈ ಉಪಯುಕ್ತತೆಯು Microsoft Wondows ಹೊಂದಿದ್ದು, ಅಜ್ಞಾತ ಕಾರಣಗಳಿಂದ ಸ್ಥಗಿತಗೊಂಡಿರಬಹುದಾದ ಬಹಳಷ್ಟು ಗಣಕಯಂತ್ರಗಳನ್ನು ದುರಸ್ತಿಪಡಿಸುವಲ್ಲಿಯೂ ಸಹ ಸಹಕಾರಿಯಾಗುತ್ತದೆ. ಅಲ್ಲದೇ, ಸ್ತಬ್ಧಗೊಂಡ ಗಣಕಗಳಿಂದ ಉಪಯುಕ್ತ ಮಾಹಿತಿಯ ಪುನಶ್ಚೇತನ (Data Recovery) ಕೂಡ Puppy ಮೂಲಕ ಸುಲಭ ಸಾಧ್ಯ.

ಒಂದು ಮುಕ್ತ ತಂತ್ರಾಂಶದ ಮೂಲ ಆಧಾರ ಅದರ ಬಳಕೆದಾರರ ಸಮೂಹ; Puppy ಯ ವಿಷಯದಲ್ಲಿಯೂ ಸಹ ಇದು ವಾಸ್ತವ ಹಾಗೂ ಸತ್ಯ. Puppy ಬಳಕೆದಾರರ ಸಮೂಹವು ಅತ್ಯಂತ ಕ್ರಿಯಾಶೀಲವಾಗಿದ್ದು, ಹೊಸಬರಿಗೆ ಹಾಗೂ ತೊಂದರೆಗೊಳಗಾದವರಿಗೆ ತ್ವರಿತ ಗತಿಯಲ್ಲಿ ಸಹಾಯವನ್ನು ಒದಗಿಸುತ್ತಿದೆ. ಇದರೊಟ್ಟಿಗೆ, ಅಭಿವೃದ್ಧಿ ತಂಡ (development team), ದಾಸ್ತಾವೇಜು ತಂಡ (documentation team), ಜಾಲತಾಣ ನಿರ್ವಹಣಾ ತಂಡ (web maintenance team), ಅನುವಾದ ತಂಡ (translation team), ಬಳಕೆದಾರರ ಕೊಡುಗೆ (users contribution) ಹಾಗೂ ಕ್ರಿಯಾತ್ಮಕ ಒಡೆಯ Barry Kauler ಇವರೆಲ್ಲರುಗಳ ಸತತ ಪರಿಶ್ರಮದಿಂದ ನಮ್ಮ ಯಾವುದೇ ಬೇಡಿಕೆಗಳಿಗೆ ಅನುಗುಣವಾಗಿ ಹಲವಾರು ವಿಶೇಷ ವೈಶಿಷ್ಟ್ಯಗಳನ್ನೊಳಗೊಂಡು, ChoicePup, TeenPup, FlexxxPup, BioPup, ChemPup, ChurchPup, MediaPup, MiPup, MacPup ಮುಂತಾದ ವೈವಿಧ್ಯಮಯ ಆವೃತ್ತಿಯ Puplet ಗಳಲ್ಲಿ ಲಭ್ಯವಿರುವ Puppy ಯು ಕ್ರಮೇಣ ಒಂದು ಬಲಿಷ್ಠ ಹಾಗೂ ಭರವಸೆಯ ಮುಕ್ತ ತಂತ್ರಾಂಶವಾಗಿ ಹೊರಹೊಮ್ಮಿದೆ.

ಚಿತ್ರ ಕೃಪೆ:- http://bkhome.org/bkauler/

 

ಪ್ರಶಾಂತ್ ಜಚಿ ಇವರು ವೃತ್ತಿಯಲ್ಲಿ ಪಶುವೈದ್ಯರಾದರೂ, ತಂತ್ರಜ್ಞಾನದ ಬಗೆಗಿನ ಆಸಕ್ತಿಯು ಕ್ರಮೇಣ ಪ್ರವೃತ್ತಿಯಾಗಿ ಪರಿವರ್ತನೆಗೊಂಡಿದೆ. ಹುಟ್ಟಿ ಬೆಳೆದದ್ದು ಬೆಂಗಳೂರು. ವೃತ್ತಿ-ಪ್ರವೃತ್ತಿಯ ಹೊರೆತಾಗಿ ಕರ್ನಾಟಕ ಹಾಗೂ ಕನ್ನಡದ ಬಗೆಗೆ ಅಪಾರವಾದ ಗೌರವ ಮತ್ತು ಅಭಿಮಾನ ಹೊಂದಿದ್ದಾರೆ.

 

 

ಮುಂದೆ ಓದಿ