ಅರಿವಿನ ಅಲೆಗಳು

ನಿಮ್ಮ ಲೇಖನಗಳನ್ನು [email protected] ಗೆ ಕಳುಹಿಸಿ
Navigation Menu

ಅಲೆ ೪ – ಫೈರ್ಫಾಕ್ಸ್ – ಮುಕ್ತ ತಂತ್ರಾಂಶದ ಮುಕುಟ

ಪ್ರಕಟಿಸಿದ್ದು ದಿನಾಂಕ Aug 4, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ದೂರವಾಣಿಯ ನಂತರ ಇಂದು ಜಗತ್ತಿನಲ್ಲಿ ನಾವೆಲ್ಲಿದ್ದರೂ ನಮ್ಮವರೊಡನೆ ಸಂಪರ್ಕದಲ್ಲಿರುವಂತೆ ಸಾಧ್ಯವಾಗಿಸಿದ್ದು ಇಂಟರ್ನೆಟ್ ಅಥವಾ ಅಂತರ್ಜಾಲ. ನಮ್ಮೆಲ್ಲರ ಮತ್ತಷ್ಟು ಅಗತ್ಯಗಳನ್ನು ಪೂರೈಸುವಂತೆ ಮಾಡಿದ್ದು ಇದೇ ಇಂಟರ್ನೆಟ್. ಇಂದು ಇಂಟರ್ನೆಟ್ ಜನಸಾಮಾನ್ಯರಿಗೂ ಎಟುಕುವಂತಾಗಿದ್ದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ತಪ್ಪಾಗಲಾರದು.

ಉದಾ:- ನಮ್ಮ ಮಾನ್ಯ ಸಚಿವರು, ಅಕ್ರಮ ಗ್ಯಾಸ ಬಳಕೆದಾರರನ್ನು ಪತ್ತೆಹಚ್ಚಲು ಅಗತ್ಯ ದಾಖಲೆಗಳನ್ನು ಅಂತರ್ಜಾಲದ ಮೂಲಕ ಕಳುಹಿಸಬೇಕು ಎಂದು ಆದೇಶ ಹೊರಡಿಸಿರುವುದು ನಿಮಗೆ ತಿಳಿದಿರಬೇಕಲ್ಲವೇ, ಹಾಗೆ.

ಈ ಇಂಟರ್ನೆಟ್ ಅನ್ನು ನಮ್ಮ ಕಂಪ್ಯೂಟರಗಳ ಮೂಲಕ ಬಳಸಲು ಬೇಕಿರುವ ಸಾಧನವೇ ಬ್ರೌಸರ್. ಇಂದು ಬಗೆಬಗೆಯ ಬ್ರೌಸರುಗಳು ಬಳಕೆದಾರರಿಗೆ ಲಭ್ಯವಿದೆ. ಅದರಲ್ಲಿ ಸಂಪೂರ್ಣ ಮುಕ್ತ ಆಕರಗಳನ್ನು ಒಳಗೊಂಡಿರುವ ಬ್ರೌಸರ್ ಎಂದರೆ ಫೈರ್ಫಾಕ್ಸ್.
ಫೈರ್ಫಾಕ್ಸ್ ಮುಕ್ತ ತಂತ್ರಾಂಶದ ಆಶಯಗಳನ್ನು ಸಾಕಾರಗೊಳಿಸಿದ ಅತ್ಯಂತ ಯಶಸ್ವಿ ಬ್ರೌಸರ್. ಇದು ಮುಕ್ತವಾಗಿರುವುದರಿಂದ ಯಾರು ಬೇಕಾದರೂ ಅದನ್ನು ಇಚ್ಛೆಗೆ ತಕ್ಕಂತೆ ಮಾರ್ಪಡಿಸಬಹುದಾಗಿದೆ. ಈ ಕಾರಣದಿಂದಾಗಿಯೇ, ಫೈರ್ಫಾಕ್ಸ್ ಸಂಪೂರ್ಣ ಕನ್ನಡದಲ್ಲಿ ಬಂದ ಮೊಟ್ಟಮೊದಲ ಬ್ರೌಸರ್. ಇದರ ಫಲಶ್ರುತಿಯೆಂದರೆ, ಒಂದು, ಕನ್ನಡಿಗರು ಕನ್ನಡದಲ್ಲಿಯೇ ಬ್ರೌಸ್ ಮಾಡುವಂತಾಗಿದ್ದು ಮತ್ತೊಂದು ಇತರ ಬ್ರೌಸರುಗಳೂ ಕನ್ನಡವನ್ನು ಬೆಂಬಲಿಸುವಂತೆ ಒತ್ತಡ ಹೇರಿದ್ದು.

ಕನ್ನಡದಲ್ಲಿರುವ ಫೈರ್ಫಾಕ್ಸನ್ನು ಡೌನ್ಲೋಡ್ ಇಲ್ಲಿ  ಲಭ್ಯವಿದೆ.

ಫೈರ್ಫಾಕ್ಸನ್ನು ಅಭಿವೃದ್ಧಿಯ ನೇತೃತ್ವ ವಹಿಸಿರುವುದು ಮೊಝಿಲ್ಲಾ ಎಂಬ ಸಮುದಾಯ. ಅವರ ಮಾತಿನಲ್ಲಿಯೇ ಹೇಳಬೇಕೆಂದರೆ, “ನಮ್ಮದು, ಪ್ರಪಂಚದ ಎಲ್ಲೆಡೆಯ ಜನರು ಅಂತರ್ಜಾಲವನ್ನು ಸುಲಭವಾಗಿ ‍ಬಳಸುವುದಕ್ಕಾಗಿ ಉಚಿತ, ಮುಕ್ತಆಕರ ತಂತ್ರಾಂಶ ಉತ್ಪನ್ನಗಳು ಹಾಗು ತಂತ್ರಜ್ಞಾನಗಳನ್ನು ನಿರ್ಮಾಣಕ್ಕೆ ಮುಡಿಪಾಗಿರುವ ಒಂದು ಜಾಗತಿಕ ಸಮುದಾಯ”.

ಫೈರ್ಫಾಕ್ಸಿನ ಮತ್ತೊಂದು ದೊಡ್ಡ ಪ್ರಯೋಜನಗಳೆದರೆ – ಆಡ್-ಆನ್
ಫೈರ್ಫಾಕ್ಸ್ ಬ್ರೌಸರಿನ ಮತ್ತಷ್ಟು ಪ್ರಯೋಜನ ಪಡೆಯುವುದು ತುಂಬಾನೇ ಸುಲಭ. ಹೊಸ ಥೀಮುಗಳನ್ನು, ವಿನ್ಯಾಸಗಳನ್ನು, ಆಡ್-ಆನುಗಳನ್ನು ಬಳಕೆದಾರರು ಬಳಸಬಹುದಾಗಿದೆ.
ಕೆಲವು ಉಪಯುಕ್ತ ಆಡ್-ಆನ್ ಗಳು.
೧. ಆಡ್-ಬ್ಲಾಕ್ ಪ್ಲಸ್ – ಇಂಟರ್ನೆಟ್ ಬಳಸುತ್ತಿರಬೇಕಾದರೆ ಅನೇಕ ವೇಳೆ ನಮಗೆ ಬೇಡದಿರುವ ಜಾಹಿರಾತುಗಳು, ಮುಜುಗರ ತರಿಸುವಂತಹ ಚಿತ್ರಗಳು ಅಕಸ್ಮಾತ್ ನುಸುಳುತ್ತವೇ. ಇಂತಹ ಅನಪೇಕ್ಷಿತ ಜಾಹಿರಾತುಗಳನ್ನು ತಡೆಹಿಡಿಯಲು ಆಡ್-ಬ್ಲಾಕ್ ಪ್ಲಸ್ ಬಳಸಬಹುದು.

https://addons.mozilla.org/en-US/firefox/addon/adblock-plus/

೨. ನೋ-ಸ್ಕ್ರಿಪ್ಟ್ – ನಾವು ಇಂಟರ್ನೆಟ್ಟಿನಲ್ಲಿ ಅಡ್ಡಾಡುತ್ತಿರುವಾಗ ನಮಗೆ ತಿಳಿಯದ ಹಾಗೆ ನಮಗೆ ಬೇಕಿರದ ಸ್ಕ್ರಿಪ್ಟುಗಳು ಓಡುತ್ತಿರತ್ತವೆ. ಇದು ಎರಡು ರೀತಿಯಲ್ಲಿ ಹಾನಿಕಾರಕ. ಒಂದು ನಮ್ಮ ಸಿಸ್ಟಮ್ಮಿನ ಶಕ್ತಿ ಪೋಲಾಗುತ್ತಿರುತ್ತದೆ, ಎರಡು ಕೆಲವೊಮ್ಮೆ ಹಾನಿಕಾರಕ ಸ್ಕ್ರಿಪ್ಟುಗಳು ಹೆಚ್ಚು ಇಂಟರ್ನೆಟ್ ಬಿಲ್ಲನ್ನು ಏರಿಸಬಹುದು. ಇದಕ್ಕೆ ಪರಿಹಾರವೆಂದರೆ ನೋ-ಸ್ಕ್ರಿಪ್ಟ್. ಇದು ಸ್ಕ್ರಿಪ್ಟುಗಳನ್ನು ತಡೆಹಿಡಿದು, ಬಳಕೆದಾರನಿಗೆ ಯಾವ ಸ್ಕ್ರಿಪ್ಟು ಓಡಿಸಬೇಕು ಅದಕ್ಕಾಗಿ ಅನುಮತಿಯನ್ನು ಬೇಡುತ್ತದೆ.

https://addons.mozilla.org/en-US/firefox/addon/noscript/

ಫೈರ್ಫಾಕ್ಸ್ ವಿಂಡೋಸ್, ಲಿನಕ್ಸ್ ಮತ್ತು ಮ್ಯಾಕ್ ಆಪರೇಟಿಂಗ್ ಸಿಸ್ಟಮ್ಮುಗಳಿಗೆ ಲಭ್ಯವಿದ್ದು ವೆಬ್-ಡೆವೆಲಪರುಗಳ ನೆಚ್ಚಿನ ಬ್ರೌಸರ್ ಇದಾಗಿದೆ.
ಅಂದಹಾಗೆ ಫೈರ್ಫಾಕ್ಸ್ ಈ ಕೆಳಕಂಡ ಮೊಬೈಲ್ ಫೋನುಗಳಿಗೂ ಲಭ್ಯವಿದೆ.

೧. ನೋಕಿಯಾ ಎನ್900
೨. ಆಂಡ್ರಾಯ್ಡ್ ೨.೧ ನಂತರದ ಆವೃತ್ತಿಗಳಲ್ಲಿ.

ಸುನಿಲ್ ಜಯಪ್ರಕಾಶ್, ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. “ನನ್ನಿ ಸುನಿಲ” ಎಂಬುದು ನನಗೂ ಇಷ್ಟವಾದ ಹೆಸರು. ಇರೋದು “ನಮ್ಮ ಬೆಂಗಳೂರಲ್ಲಿ”. ಸೀಸಾ ;) ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ…

ಮುಂದೆ ಓದಿ

ಅಲೆ ೩ – ಕಿಟಕಿಯಿಂದ… ಮುಕ್ತ ಜಗತ್ತಿಗೆ ಮೊದಲ ಹೆಜ್ಜೆ

ಪ್ರಕಟಿಸಿದ್ದು ದಿನಾಂಕ Aug 3, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಭಾರತದಲ್ಲಿ ಅನೇಕ ಮಂದಿ Windows OS ಉಪಯೋಗಿಸುವವರಿದ್ದಾರೆ. ಆದರೆ ಪರವಾನಗಿ ಹೊಂದಿದ ತಂತ್ರಾಂಶ ಮತ್ತು OS ಉಪಯೊಗಿಸುವುದು ಬಹುಮಂದಿಗೆ ದುಬಾರಿ, ಅಂತದರಲ್ಲೂ ಅವರಿಗೆ ಕಡ್ಡಾಯವಾಗಿ Windows ಉಪಯೋಗಿಸಲೇ ಬೇಕಾಗುತ್ತದೆ. ಆಫೀಸಲ್ಲಿ ಉಪಯೋಗಿಸುವ Windows ಮತ್ತು ಅವಲಂಬಿತ ತಂತ್ರಾಂಶಗಳು, ಇಂತ ಅನಿವಾರ್ಯತೆಗಳಲ್ಲಿ ಒಂದು. ನಮ್ಮ ಸುತ್ತಲಿನ ಜನರು, ಹಾಗು Linux (ಅಥವಾ ಬೇರೆ OS) ಬಗೆಗಿನ ಅಲ್ಪ ತಿಳುವಳಿಕೆ ನಮ್ಮ ಅನಿವಾರ್ಯತೆಗಳಿಗೆ ಇನ್ನೂ ಒತ್ತುಕೊಡುತ್ತವೆ. ಇಂತ ಸನ್ನಿವೇಶದಲ್ಲೂ ಜನರು ದಿನನಿತ್ಯ ಬೇರೆ ಬೇರೆ ತಂತ್ರಾಂಶಗಳಿಗೆ ಹುಡುಕಾಟ ನೆಡೆಸುತ್ತಾರೆ. ಅಲ್ಲಿ ಕೂಡ ಉಚಿತವಾಗಿ ದೊರಕುವುದಕ್ಕೆ ಆದ್ಯತೆ.

ಇತ್ತೀಚಿನ ದಿನಗಳಲ್ಲಿ, ಸ್ವತಂತ್ರ ಹಾಗು ಮುಕ್ತ ತಂತ್ರಾಂಶಗಳು (FOSS – Free and Open Source software) ಪ್ರಚಲಿತಗೊಳ್ಳುತ್ತಿವೆ. ಇದೇ ಮುಕ್ತ ಪ್ರಪಂಚದ ಹೆಬ್ಬಾಗಿಲು!! ಎಲ್ಲೊ ಓದಿದ ನೆನಪು… ಮುಕ್ತ ಪ್ರಪಂಚದ “ಬಾಗಿಲು’ ತೆರೆದಿರುವಾಗ “ಕಿಟಕಿ'(windows)ಯಿಂದೇಕೆ ನೋಡುವಿರಿ!! ಹಾಗಾಗಿ, ಏನಕ್ಕೆ ಕಾಯುತ್ತಿರುವಿರಿ. ಬಾಗಿಲಿನೆಡೆಗೆ ನೆಡೆಯಿರಿ. ಇಡಿ ನಿಮ್ಮ ಮೊದಲ ಹೆಜ್ಜೆ.

ಇದು Windows ಅನ್ನು ರದ್ದು ಮಾಡಲಿಕ್ಕೆ ಕರೆಯಲ್ಲ. ಆದರೆ ತುಂಬ ಜನ ಅದನ್ನ ಉಪಯೊಗಿಸುವವರು, ಪರವಾನಗಿ ಇಲ್ಲದ OS ಮತ್ತು/ಅಥವಾ ತಂತ್ರಾಂಶಗಳನ್ನು ಉಪಯೋಗಿಸುತ್ತಿದ್ದರೆ. ಇದರಲ್ಲಿ MS-Office, Winzip, Adobe ಒಳಗೊಂಡಂತೆ ಇನ್ನೂ ಕೆಲವು ತಂತ್ರಾಂಶಗಳು ಸೇರಿಕೊಳ್ಳುತ್ತವೆ. Windowsನ ಒಳಗೆ ಉಪಯೊಗಿಸಲಿಕ್ಕೂ ಕೆಲವು ಮುಕ್ತ ತಂತ್ರಾಂಶಗಳಿವೆ. (Eg: Firefox, Notepad++, etc) ಆದರೆ ಇದು ಮುಕ್ತ ‘ಪ್ರಪಂಚದ’ ಅರ್ಥ ಕೊಡುವುದಿಲ್ಲ. ಯಾಕೆಂದರೆ ನಾವಿರುವುದು ಮುಕ್ತ OSನ ಒಳಗಲ್ಲ. ಇನ್ನು ಬಹುತೇಕ ಪರವಾನಗಿರಹಿತ ಬಳಕೆದಾರರು, Microsoft ಅಧಿಕಾರಿಗಳ ದಾಳಿಯ ಹೆದರಿಕೆಯಲ್ಲಿ ಇರುತ್ತಾರೆ.

Windows ಇಂದ Linuxಗೆ ತಕ್ಷಣಕ್ಕೆ ಬದಲಾಗಲಿಕ್ಕೆ ಕಷ್ಟವಾಗಬಹುದು. ಏಕೆಂದರೆ ಅದರ ಪ್ರತಿಯೊಂದು ಉಪಯೋಗಕ್ಕೂ ನಾವು ಒಗ್ಗಿಕೊಳ್ಳಬೇಕು. ಆದರೆ ಎಲ್ಲದಕ್ಕೂ ಒಂದು ಆರಂಭ ಇರಲೇಬೇಕು….

ಮೊದಲ ಹೆಜ್ಜೆ…..

ನೀವು Linuxಗೆ ಬದಲಾಗಲು ದೃಡ ಮನಸ್ಸು ಮಾಡಿದಾಗ, Windows ಅನ್ನು ತಕ್ಷಣ ಬಿಡಬೇಡಿ. ಬದಲಿಗೆ, Linux ಅನ್ನು Windows ಒಳಗೆ ಒಂದು ತಂತ್ರಾಂಶದಂತೆ ಹಾಕಿಕೊಳ್ಳಿ. ಇದಕ್ಕಾಗಿ ನೀವು Oracleನ ’Virtual Box’ ತಂತ್ರಾಂಶವನ್ನು ಉಪಯೋಗಿಸಿದರೆ ಸೂಕ್ತ. ಇದು ಒಂದು OSನ ಒಳಗೆ ಇನ್ನೊಂದು OS ಹಾಕಲಿಕ್ಕೆ ಅನುವು ಮಾಡಿ ಕೊಡುತ್ತದೆ. ಈ ತಂತ್ರಾಂಶ ಅಳವಡಿಸಲಿಕ್ಕೆ ಮತ್ತು ಸಜ್ಜುಗೊಳಿಸುವುದಕ್ಕೆ ಸುಲಭ. ನಿಮ್ಮ hard diskನಲ್ಲಿ ಸ್ವಲ್ಪ ಜಾಗವನ್ನು ಇದರ ಉಪಯೋಗಕ್ಕೆ ಕಾಯ್ದಿರಿಸಬೇಕು.
ಈಗ, virtual box ತಂತ್ರಾಂಶದಲ್ಲಿ Linuxನ ಒಂದು ಆವೃತ್ತಿಯನ್ನು ಅಳವಡಿಸಿ. Linux ಎಂದಾಕ್ಷಣ ಅದರಲ್ಲಿ ಬೇರೆ ಬೇರೆ ರೂಪಾಂತರಗಳಿವೆ. ಉದಾಹರಣೆಗೆ, Fedora, debian, ubuntu, CentOS, etc. ಪ್ರತಿಯೊಂದರಲ್ಲೂ ಅದರದ್ದೇ ಆದಂತ ಅಲ್ಪ ಬದಲಾವಣೆಗಳು ಮತ್ತು ವಿಶೇಷತೆಗಳಿವೆ. ಇನ್ನು dektopಗಳಲ್ಲೂ ಬೇರೆ ಬೇರೆ ಪರಿಸರಗಳಿವೆ. ಉದಾಹರಣೆಗೆ Gnome, KDE, etc. (ಇದನ್ನ ಉನ್ನತ themeಗಳೆಂದುಕೊಳ್ಳಿ) . ಈಗ windowsನಿಂದ Linuxಗೆ ಬರುವವರಿಗೆ KDE/Gnome ಇರುವಂತ Ubuntu ಸೂಕ್ತ. ಬಳಕೆದಾರರು ಈ ಆವೃತ್ತಿಯನ್ನು ಉಚಿತವಾಗಿ Ubuntu ಅಂತರ್ಜಾಲದಿಂದ ತೆಗೆದುಕೊಳ್ಳಬಹುದು.

ಈ Linuxನ ಅಳವಡಿಕೆ, ನಾವು windowsಗೆ ಮಾಡಿದಂತೆನೇ ಇರುತ್ತದೆ. ಆದರೂ ಎನಾದರೂ ಗೊಂದಲವಿದ್ದಲ್ಲಿ, ಅದರಲ್ಲಿ ಆರಿಸಿದಂತೆಯೇ ಮುಂದುವರೆಯಿರಿ. (ಅಥವ Google/ನಿಮ್ಮ
ಗೆಳೆಯರಿಂದ ಸಹಾಯ ಪಡೆಯಿರಿ). ಒಮ್ಮೆ Virtual boxನಲ್ಲಿ ನೀವು Linux ಹಾಕಿಕೊಂಡರೆ ಅದನ್ನು ನೀವು windows ಒಳಗಿಂದ ಯಾವಾಗ ಬೇಕಾದರೂ ಶುರು/ಕೊನೆಗೊಳಿಸಬಹುದು. ಒಮ್ಮೆ ಇದನ್ನ ಶುರು ಮಾಡಿದ ಮೇಲೆ ನಿಮಗೆ ಅದರಲ್ಲೆ ಸೀದ ಕೆಲಸ ಮಾಡಿದಂತೆ ಅನಿಸುತ್ತದೆ. (ನಿಮಗೆ ಪೂರ್ಣ ಪರದೆ ಹಾಗು ಇನ್ನಿತರ ಗುಣಗಳು ಬಾರದಿದ್ದಲ್ಲಿ, virtual boxನ Guest additionsಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.)

ಇನ್ನು ಉಪಯೊಗಿಸುವುದರ ಬಗ್ಗೆ ನಿಮ್ಮ ಪ್ರಯತ್ನ ಹೇಗಿರಬೇಕೆಂದರೆ, ನೀವು ನಿಮ್ಮ ದಿನನಿತ್ಯದ ಅಗತ್ಯಗಳನ್ನು ಪಟ್ಟಿ ಮಾಡಿಕೊಳ್ಳಿ. (ತಂತ್ರಾಂಶಗಳ ಹೆಸರಲ್ಲ. ಬದಲಿಗೆ, ನೀವು ಮಾಡಬೇಕಾದ ಕೆಲಸಗಳನ್ನು). ಇದು ಹೇಗಿರುತ್ತದೆ ಎಂದರೆ, File compression, Office applications (Document/Spreadsheets), Chat client, movies/video ನೋಡುವುದು, music ಕೇಳುವುದು, Internet browsers, Image Designing (ಉನ್ನತ ಬಳಕೆದಾರರಿಗೆ), etc. ಈಗ, Linuxನಲ್ಲಿ ಪ್ರತಿಯೊಂದು ಅಗತ್ಯಗಳಿಗೂ ಒಂದೊಂದು ತಂತ್ರಾಂಶಗಳಿವೆ. Internet Browsingಗೆ Firefox ಅಥವ Chrome, File Compressionಗೆ 7-Zip, ಹಾಡು ಕೇಳಲಿಕ್ಕೆ ಮತ್ತು ಚಿತ್ರ ನೋಡಲಿಕ್ಕೆ Linuxನಲ್ಲೆ ಇರುವಂತ ಅಥವಾ VLCಯಂತ ತಂತ್ರಾಂಶ ಉಪಯೊಗಿಸಬಹುದು. ಪ್ರತಿಯೊಂದಕ್ಕೂ ಬದಲಿ ತಂತ್ರಾಶಗಳು ಸಿಗುತ್ತವೆ, ಮತ್ತು ಅದು ಉತ್ತಮವಾಗಿ ಕೂಡ ಇರಬಹುದು.
Linuxನಲ್ಲಿ Package Managerಎಂಬ ತಂತ್ರಾಂಶ ಬರುತ್ತದೆ. ಇದು windowsನ Add/Remove Programs ತರಹ. ಆದರೆ ಸ್ವಲ್ಪ ಬದಲಾವಣೆ. ಇದು ಆ Linuxನ online repositoryಗೆ ಕೂಡಿಕೊಂಡಿರುತ್ತದೆ. ಇದರಿಂದ ಹುಡುಕುವುದಷ್ಟೆ ಸುಲಭವಲ್ಲ, ಬದಲಿಗೆ ಹೊಸ ಅವೃತ್ತಿಗಳ update ಕೂಡ ಸುಲಭದಲ್ಲಿ ಸಿಗುತ್ತದೆ. ನೀವು ಹೊರಗಿನಿಂದಲು ತಂತ್ರಾಂಶಗಳನ್ನು download ಮಾಡಿ ಇದರ ಮುಖಾಂತರ ಹಾಕಿಕೊಳ್ಳಬಹುದು.

ಒಮ್ಮೆ ನೀವು Linuxಅನ್ನು ಸಜ್ಜುಗೊಳಿಸಿದನಂತರ, ಅದನ್ನು ದಿನನಿತ್ಯ ಉಪಯೊಗಿಸಲಿಕ್ಕೆ ಪ್ರಾರಂಭಿಸಿ (Windowsನ ಬದಲಿಗೆ). ಯಾವುದೇ ತೊಂದರೆ ಬಂದಲ್ಲಿ ಅದನ್ನ ಪರಿಹರಿಸಿಕೊಳ್ಳಿ (ಸ್ವಪ್ರಯತ್ನದಿಂದ, ಅಥವಾ google/ಗೆಳೆಯರ ಸಹಾಯದಿಂದ). ನೀವು ದಿನನಿತ್ಯ ಅದನ್ನು ಬಳಸುವುದರಿಂದ ನಿಮಗೆ ಅದರ ಅಭ್ಯಾಸವೂ ಆಗುತ್ತದೆ,
ಇದಾದ ನಂತರ, ನೀವು ಎರಡನೆ ಹೆಜ್ಜೆ ತನ್ನಿಂತಾನೆ ಇಡುವುದರಲ್ಲಿಸಂಶಯವಿಲ್ಲ. ನಿಮಗೆ Linux ಬಳಸುವುದರಲ್ಲಿ ವಿಶ್ವಾಸ ಬಂದಮೇಲೆ, ನಿಮ್ಮ ಕಂಪ್ಯೂಟರ್ ಅನ್ನು ಸಂಪೂರ್ಣ format ಮಾಡಿ, Linuxಅನ್ನು primaryಯಾಗಿ ಹಾಕಿಕೊಳ್ಳುವುದು ಕಷ್ಟವೇನಲ್ಲ. ಹಾಗೆ ಹಾಕಿಕೊಂಡ ಮೇಲೆ, ನೀವು Windowsಅನ್ನು Virtual box ಮುಖಾಂತರ Linuxನಲ್ಲಿ ಹಾಕಿ, ನಿಮಗೆ ಅವಶ್ಯ ಬಿದ್ದಾಗ ಉಪಯೋಗಿಸಬಹುದು (ಯಾವುದಾದರು ಆಫೀಸ್ ಕೆಲಸಕ್ಕಾಗಿ).

ಮುಕ್ತ ಪ್ರಪಂಚಕ್ಕೆ ನಿಮ್ಮನ್ನು ಸ್ವಾಗತಿಸಲು ಬಹಳಷ್ಟು ಮಂದಿ ಇದ್ದರೆ. ಇದು ಅನ್ಯ ಲೋಕವಲ್ಲ. ನಿಮ್ಮದೇ ಲೋಕ. :)

ವಿಜಯ್ ಕುಮಾರ್ ಎಂ, ಊರು ಕೊಪ್ಪ, ಚಿಕ್ಕಮಗಳೂರು ಜಿಲ್ಲೆ. ಈಗ ಇರುವುದು ಬೆಂಗಳೂರಿನಲ್ಲಿ. ಒಂಬತ್ತು ವರ್ಷದಿಂದ ಬೆಂಗಳೂರಿನ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ. ಆದಾಯ ತೆರಿಗೆ, TDS, ಮತ್ತಿತರ ತೆರಿಗೆ ಮತ್ತು ಹಣಕಾಸು ವಿಚಾರಗಳಲ್ಲಿ ಆಸಕ್ತಿ. ತಂತ್ರಜ್ಞಾನ ಕ್ಷೇತ್ರದಲ್ಲಿ ವಿಷೇಶ ಆಸಕ್ತಿ. cross-platform ಅಂತರ್ಜಾಲ ತಂತ್ರಾಂಶಗಳ ತಯಾರಿಕೆ. PHP, MySQL, Javascript, Python, HTML, CSS, ಮುಂತಾದ ಭಾಷೆಗಳಲ್ಲಿ ಪರಿಣಿತಿ. ಕನ್ನಡ ಭಾಷೆಯ ಮೆಲೆ ಇನ್ನಿಲ್ಲದ ಒಲವು. ಕನ್ನಡದ ಬಳಕೆಗೆ ಹಾಗು ಅಳವಡಿಕೆಗೆ ಪ್ರೊತ್ಸಾಹ. Photographyಯಲ್ಲಿ ಕೊಂಚ ಆಸಕ್ತಿ.
ಮುಂದೆ ಓದಿ

ಅಲೆ ೨ – ಕ್ಯಾಥೆಡ್ರಲ್ ಅಂಡ್ ಬಜಾರ್

ಪ್ರಕಟಿಸಿದ್ದು ದಿನಾಂಕ Aug 2, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಮುಕ್ತ ತಂತ್ರಾಂಶ ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಮುಕ್ತ ತಂತ್ರಾಂಶವೆಂದರೇನೆಂಬುದನ್ನು ಅರಿತುಕೊಂಡರಷ್ಟೇ ಸಾಲದು. ಮುಕ್ತ ತಂತ್ರಾಂಶದ ಬೆಳವಣಿಗೆ ಅಭಿವೃದ್ಧಿಯ ರೀತಿಗೂ, ಇತರೆ ತಂತ್ರಾಂಶಗಳ ಅಭಿವೃಧ್ಧಿಯ ರೀತಿಗೂ ಇರುವ ವ್ಯತ್ಯಾಸಗಳನ್ನೂ ತಿಳಿದುಕೊಳ್ಳಬೇಕು. ಅದು ಮುಕ್ತ ತಂತ್ರಾಂಶವನ್ನು ನಾವು ಬಳಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳುವಲ್ಲಿನ ಮೊದಲ ಹೆಜ್ಜೆ. ಏಕೆಂದರೆ, ಇದು ತಂತ್ರಾಂಶಗಳ ನಿಖರತೆ, ಸಾಧ್ಯತೆ, ಮತ್ತು ಬಳಕೆಯ ಯೋಗ್ಯತೆಗಳ ಬಗೆಗಿನ ಮಾಪನವನ್ನು ಉಪಯೋಗಿಸಲು, ಮೂಲಭೂತ ಅವಶ್ಯಕತೆಯಾಗಿದೆ. ಮುಕ್ತತಂತ್ರಾಂಶವಾದಿಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವ ಎರಿಕ್ ಸ್ಟೀವನ್ ರೇಮಾಂಡ್, ಇದರ ಬೆಳವಣಿಗೆಯ ರೀತಿಯನ್ನು ತನ್ನದೇ ಆದ fetchmail ಪ್ರಾಜೆಕ್ಟಿನಲ್ಲಿ ಉಪಯೋಗಿಸಿಕೊಂಡು, ಆ ಅನುಭವದಿಂದ ಬರೆದ ಮೂವತ್ತೈದು ಪುಟಗಳಷ್ಟಿರುವ ಒಂದು ಸುಂದರ ಪುಸ್ತಕ “ಕ್ಯಾಥೆಡ್ರಲ್ ಅಂಡ್ ಬಜಾರ್”. ನಾನಿಲ್ಲಿ ಈ ಪುಸ್ತಕದಲ್ಲಿ ಅವನು ಹೇಳಿರುವ ಪಾಠಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಯತ್ನಿಸಿದ್ದೇನೆ. ಮತ್ತು ಪೂರ್ವಭಾವಿಯಾಗಿ ಕ್ಯಾಥೆಡ್ರಲ್ (ದೇಗುಲ ಮಾದರಿ) ಮತ್ತು ಬಜಾರ್ (ಸಂತೆಯ ಮಾದರಿ)ಯ ಬಗ್ಗೆ ಲೇಖಕನ ಅನಿಸಿಕೆಗಳನ್ನು ಕನ್ನಡೀಕರಿಸಿದ್ದೇನೆ. ದೇಗುಲ ಮಾದರಿಯೆಂದರೆ, ದೇಗುಲ ಕಟ್ಟುವಾಗಿನಿಂದ ಹಿಡಿದು, ಕಟ್ಟಿದ ನಂತರ ಅಲ್ಲಿ ಸೇರುವ ಜನ, ಅವರನ್ನು ನಿರ್ದೇಶಿಸುವ ಜನ, ಕಾರ್ಯಕ್ರಮದ ರೂಪರೇಷೆಗಳು, ಆಚರಣೆಗಳು, ಎಲ್ಲಕ್ಕೂ ಎಲ್ಲರಿಗೂ ನಿಯಮಾವಳಿಗಳಿರುತ್ತವೆ. ಬಹಳಷ್ಟು ರಹಸ್ಯಗಳು ಅಲ್ಲಿ ಜತನದಿಂದ ಕಾಪಾಡಲ್ಪಡುತ್ತವೆ. ಅವನ್ನು ಮೀರುವುದು ಅಸಾಧ್ಯ. ಆದರೆ ಸಂತೆ ನೆರೆಯಲು ಅಲ್ಲಿ ಅವಶ್ಯಕತೆಯೊಂದಿದ್ದರೆ, ಮುಂದೆ ಮಿಕ್ಕೆಲ್ಲವನ್ನು ಪರಿಸರವೇ ಸೃಷ್ಟಿಸುತ್ತದೆ. ಅಷ್ಟೇ ಅಲ್ಲ. ಸಂತೆಯಲ್ಲಿ ಸೇರುವ ಮಾರುವವರು, ಕೊಳ್ಳುವವರು, ಮಧ್ಯವರ್ತಿಗಳು, ಇವರೆಲ್ಲ ತಂತಮ್ಮ ಅಭಿಪ್ರಾಯಗಳಂತೆ ವರ್ತಿಸಿದರೂ, ಅವರನ್ನು ಹಿಡಿದಿಡುವ ನಿಯಮಗಳು ತನ್ನಂತಾನೇ ಮೂಡಿ ಬರುತ್ತವೆ. ಆ ನಿಯಮಗಳ ಮುಖ್ಯ ಉದ್ದೇಶ ಸಂತೆ ಯಶಸ್ವಿಯಾಗುವುದು. ಅಲ್ಲಿ ರಹಸ್ಯಗಳಿಗೆ ಜಾಗವಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತು. ಆದರೆ ಸಂತೆಯನ್ನು ನಿರ್ದೇಶಿಸುವ ಕಾರ್ಯಸೂತ್ರವೊಂದು ಎಲ್ಲವನ್ನೂ ನಡೆಸುತ್ತದೆ. ಬನ್ನಿ ಇ.ಎಸ್.ಆರ್ ಏನು ಹೇಳುತ್ತಾರೋ ನೋಡೋಣ.

***

ಮುಕ್ತ ತಂತ್ರಾಂಶದ ಬಹು ಮುಖ್ಯ ಅಂಶವೆಂದರೆ, ಅದರ ಬೆಳವಣಿಗೆಯಲ್ಲಿ ಭಾಗಿಯಾಗುವ ಸಮೂಹದ ವ್ಯಾಪಕತೆ. ಭೂಗೋಳದ ಯಾವುದೇ ಭಾಗದಿಂದ ಸ್ವಯಿಚ್ಛೆ ಮಾತ್ರದಿಂದಲೇ ಅಂತರ್ಜಾಲದ ಮೂಲಕ ಸೇರಿಕೊಂಡಿರುವ ಈ ಸಮೂಹ ನಿಜವಾಗಿಯೂ, ಗುಣಮಟ್ಟದ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಲಿನಕ್ಸ್ ಇದೆ.
ದೇಗುಲವೊಂದನ್ನು ಕಟ್ಟುವ ಶಿಸ್ತಿನಲ್ಲಿ ದೊಡ್ಡ ತಂತ್ರಾಂಶಗಳನ್ನು ತಯಾರು ಮಾಡಬೇಕೆಂಬ ಅಭಿಪ್ರಾಯ ನನ್ನದಾಗಿತ್ತು. ಪ್ರತಿಯೊಂದಕ್ಕೂ ಒಬ್ಬೊಬ್ಬ ನುರಿತ ತಂತ್ರಜ್ಞ, ಬೇರೆಯವರೊಂದಿಗೆ ಸಂಪರ್ಕವಿಲ್ಲದೆ, ಕಣ್ಣಿಗೆ ಕಟ್ಟಿದ ಕುದುರೆಯಂತೆ ಗುರಿಯೆಡಗಿನ ಪಯಣ, ಎಲ್ಲಾ ಅಂಶಗಳೂ ಪೂರ್ಣಗೊಂಡ ಮೇಲಷ್ಟೇ ಬೀಟಾ ವರ್ಶನ್ ಬಿಡುಗಡೆ. ಇವೆಲ್ಲಾ ಇದ್ದರಷ್ಟೇ ಒಂದು ಆಪರೇಟಿಂಗ್ ಸಿಸ್ಟಮ್ ನಂತಹ ತಂತ್ರಾಂಶ ಅಭಿವೃದ್ದಿ ಪಡಿಸಲು ಸಾಧ್ಯ ಎಂದು ನಾನು ನಂಬಿದ್ದೆ. ಇದು ಬದಲಾದದ್ದು ೧೯೯೩ರಲ್ಲಿ ಲಿನಕ್ಸ್ ನನ್ನ ಗಮನಕ್ಕೆ ಬಂದಾಗ.

ಲಿನಸ್ ಟೋರ್ವಾಲ್ಡ್‍ಸ್ ಬೇಗ ಬೇಗ ಹೊಸ ವರ್ಷನ್ ಬಿಡುಗಡೆ, ಸಾಧ್ಯವಿರುವಷ್ಟು ಕೆಲಸವನ್ನೂ ಬೇರೆಯವರೊಂದಿಗೂ ಹಂಚಿಕೊಳ್ಳುವುದು. ಎಲ್ಲ ವಿಷಯಗಳಲ್ಲೂ ಮುಕ್ತ ಸಂವಹನ, ಇವು ದೇಗುಲ ಕಟ್ಟುವ, ನಡೆಸುವ ಶಿಸ್ತಿಗಿಂತಲೂ, ನೆರೆಯುವ ಸಂತೆಯಲ್ಲಿ ತನ್ನಂತಾನೇ ಒಡಮೂಡುವ ಶಿಸ್ತನ್ನು ಅನುಸರಿಸುತ್ತವೆ. ಸಂತೆಯಲ್ಲಿ ನೆರೆಯುವ ಪ್ರತಿಯೊಬ್ಬರಿಗೂ ಅವರದೇ ಕಾರಣಗಳಿರುತ್ತವೆ, ಆದರೆ ಒಟ್ಟಾರೆಯಾಗಿ ಎಲ್ಲ ಉದ್ದೇಶವೂ ಸಾಧನೆಯಾಗುತ್ತದೆ.

ಇದನ್ನು ಲಿನಕ್ಸ್ ಬೆಳವಣಿಗೆಯ ಮಾದರಿಯಲ್ಲಿ ಕಾಣಬಹುದು. ಯಾರಾದರೂ ಸರಿ, ಲಿನಕ್ಸ್ ನ ಬೆಳವಣಿಗೆಗೆ ತಮ್ಮ ಕಾಣಿಕೆ ಸಲ್ಲಿಸಬಹುದು, ಅವೆಲ್ಲವನ್ನೂ ಸೋಸಿ, ಬಲಿಷ್ಠ ಮತು ತಾಳಿಕೆಯ ತಂತ್ರಾಂಶವನ್ನು ನೀಡುವ ಜವಾಬುದಾರಿ ನಿರ್ವಹಣೆಯ ಹೊಣೆ ಹೊತ್ತ ನಾಯಕರದಾಗಿರುತ್ತದೆ. ವಸ್ತುಶಃ ಇಂತಹುದೊಂದು ಮಾದರಿ ಹರಿದು ಹಂಚಿ ಹೋಗದೆ, ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದೇ ಎನ್ನುವ ಅನುಮಾನ ಪ್ರತಿಯೊಬ್ಬರಿಗೂ ಮೂಡುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ಮಾದರಿ, ದೇಗುಲದ ಶಿಸ್ತಿನ ಮಾದರಿಗಿಂತ ಎಷ್ಟೋ ಪಟ್ಟು ವೇಗದಲ್ಲಿ ತಂತ್ರಾಂಶ ಅಭಿವೃದ್ಧಿಗೆ ಸಾಧನವಾಗಿದೆ ಎಂದು ತಿಳಿದು ಬರುತ್ತದೆ.

ನಾನು ಈ ಮಾದರಿಯನ್ನು ಅರ್ಥ ಮಾಡಿಕೊಳ್ಳಲು ಶುರುವಾಗುವ ಹೊತ್ತಿಗೆ ೧೯೯೬ ಕಾಲಿಟ್ಟಿತ್ತು. ನನ್ನದೇ ಆದ fetchmail ಎನ್ನುವ ತಂತ್ರಾಂಶದಲ್ಲಿ ನಾನಿದ್ದನ್ನು ಅಳವಡಿಸಿಕೊಂಡು ನೋಡಲು ನಿರ್ಧರಿಸಿದೆ. ಅದರಲ್ಲಿ ನಾನು ಕಲಿತ ಪಾಠಗಳ ಸಾರಾಂಶವಿದು.

೧. ಯಾವುದೇ ಉತ್ತಮ ತಂತ್ರಾಂಶಕ್ಕೆ ತಳಹದಿಯಾಗಿ ತಂತ್ರಾಂಶ ತಂತ್ರಜ್ಞನ ವೈಯುಕ್ತಿಕ ಕಾರಣಗಳಿರುತ್ತವೆ.
೨. ಉತ್ತಮ ಪ್ರೋಗ್ರಾಮರುಗಳಿಗೆ (ಕಾರ್ಯಲಿಪಿಕಾರರಿಗೆ) ಯಾವ ಪ್ರೋಗ್ರಾಮ್ (ಕಾರ್ಯಲಿಪಿ) ಬರೆಯಬೇಕೆಂದು ಗೊತ್ತಿರುತ್ತದೆ. ಆದರೆ ಅತ್ಯುತ್ತಮವಾದವರಿಗೆ ಯಾವುದನ್ನು ಮರುಬಳಕೆ ಮಾಡಬೇಕೆಂದು ತಿಳಿದಿರುತ್ತದೆ.
೩. ಯಾವುದನ್ನಾದರೂ ಕಸದ ಬುಟ್ಟಿಗೆ ಹಾಕಬೇಕೆಂದು ನಿಮಗನ್ನಿಸಿದರೆ, ಹೇಗಾದರೂ ಅದನ್ನು ಕಸದ ಬುಟ್ಟಿಗೆ ಹಾಕಿಯೇ ಹಾಕುತ್ತೀರಿ.
೪. ನಿಮ್ಮ ಮನೋಭಾವ ಸರಿಯಿದ್ದರೆ, ನಿಮಗೆ ಸರಿಯಾದ ಆಸಕ್ತಿಯಿರುವ ಸಮಸ್ಯೆಗಳೇ ನಿಮ್ಮ ಮುಂದಿರುತ್ತವೆ. (ಅಥವಾ ನಿಮ್ಮ ಮನೋಭಾವಕ್ಕೆ ತಕ್ಕಂತಹ ಸಮಸ್ಯೆಗಳಿಗೇ ನೀವು ಆದ್ಯತೆ ನೀಡುತ್ತೀರಿ.)
೫. ಪ್ರೋಗ್ರಾಮ್ ಒಂದರಲ್ಲಿ ನಿಮ್ಮ ಆಸಕ್ತಿ ಇಳಿಯಿತೆಂದರೆ, ಅದನ್ನು ನಿಮ್ಮಷ್ಟೇ ಕಾರ್ಯತತ್ಪರ ಉತ್ತರಾಧಿಕಾರಿಗೆ ವಹಿಸಿಕೊಡುವುದು ನಿಮ್ಮ ಕರ್ತವ್ಯ.
೬. ನಿಮ್ಮ ತಂತ್ರಾಂಶದ ಬಳಕೆದಾರರನ್ನು ನಿಮ್ಮ ಜೊತೆಗಾರ ತಂತ್ರಾಂಶ ತಙ್ಞರಂತೆ ನೋಡಿಕೊಂಡರೆ, ನಿಮ್ಮ ತಂತ್ರಾಂಶದ ಕೊರೆಗಳನ್ನು ಅಳೆಯುವ ಮತ್ತು ಅವನ್ನು ಮುಚ್ಚುವ ಅತ್ಯಂತ ಶೀಘ್ರ ವಿಧಾನ ನಿಮ್ಮದಾಗುತ್ತದೆ.
೭. ನಿಮ್ಮ ತಂತ್ರಾಂಶವನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತಿರಬೇಕು, ಮತ್ತು ಆದಷ್ಟು ಹೆಚ್ಚು ಬಾರಿ ಬಿಡುಗಡೆ ಮಾಡಬೇಕು. ಜೊತೆಗೆ ನಿಮ್ಮ ತಂತ್ರಾಂಶ ಬಳಕೆದಾರರ ಅಭಿಪ್ರಾಯಗಳನ್ನು ಗಮನಿಸುತ್ತಿರಬೇಕು.
೮. ನಿಮ್ಮ ತಂತ್ರಾಂಶದ ಬೀಟಾ ಅವೃತ್ತಿಯ ಸಾಕಷ್ಟು ಬಳಕೆದಾರರಿದ್ದು, ನಿಮ್ಮೊಂದಿಗೆ ಸಾಕಷ್ಟು ಮಂದಿ ತಂತ್ರಾಂಶ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದರೆ, ಸಮಸ್ಯೆಗಳನ್ನು ಬೇಗ ಗುರುತಿಸಬಹುದು, ಮತ್ತು ಅದರ ನಿವಾರಣೋಪಾಯವನ್ನು ಯಾರಾದರೊಬ್ಬರು ಶೀಘ್ರವಾಗಿಯೇ ಸೂಚಿಸುತ್ತಾರೆ. (ಇದರ ಇನ್ನೊಂದು ರೂಪ ಸಾಕಷ್ಟು ಸಂಖ್ಯೆಯ ಬಳಕೆದಾರರಿದ್ದರೆ, ಎಲ್ಲಾ ಕೊರೆಗಳೂ ಬೇಗ ಮುಚ್ಚುತ್ತವೆ. ಇದನ್ನು ನಾನು ಲಿನಸ್ ನಿಯಮ ಎನ್ನುತ್ತೇನೆ.)
೯. ಉತ್ತಮ ಡಾಟಾ-ಸ್ಟ್ರಕ್ಚರ್ ಮತ್ತು ಸುಮಾರಾದ ಕೋಡ್, ಉತ್ತಮ ಕೋಡ್ ಮತ್ತು ಸುಮಾರಾದ ಡಾಟಾ ಸ್ಟ್ರಕ್ಚರ್ ಗಿಂತಲೂ ಮೇಲು.
೧೦. ನಿಮ್ಮ ಬೀಟಾ ಬಳಕೆದಾರರು ಮತ್ತು ಪರೀಕ್ಷಕರನ್ನು ನೀವು ನಿಮ್ಮ ಅತಿ ಮುಖ್ಯ ಆಸ್ತಿಯೆಂದು ಪರಿಗಣಿಸಿದರೆ, ಅವರು ನಿಮ್ಮ ಅತಿ ಮುಖ್ಯ ಆಸ್ತಿಯೇ ಆಗುತ್ತಾರೆ.
೧೧. ನಿಮಗೇ ಹೊಳೆಯುವ ಅತ್ಯುತ್ತಮ ಐಡಿಯಾವನ್ನು ಬಿಟ್ಟರೆ, ಮುಂದಿನ ಅತ್ಯುತ್ತಮ ಐಡಿಯಾ ನಿಮ್ಮ ಬಳಕೆದಾರರದ್ದಾಗಿರುತ್ತದೆ. ಕೆಲವೊಮ್ಮೆ ಅವರ ಐಡಿಯಾ ನಿಮ್ಮದಕ್ಕಿಂತ ಉತ್ತಮವಾಗಿರಲೂ ಸಾಕು.
೧೨. ಕೆಲವೊಮ್ಮೆ, ನೀವು ಸಮಸ್ಯೆಯನ್ನು ಅರ್ಥೈಸಿಕೊಂಡಿರುವುದು ತಪ್ಪು ಎಂದು ತಿಳಿದುಬಂದಾಗ ಅತ್ಯಂತ ಸೂಕ್ತ ಪರಿಹಾರಗಳು ಕಾಣುತ್ತವೆ.
೧೩. (ವಿನ್ಯಾಸದಲ್ಲಿ) ಪರಿಪೂರ್ಣತೆ ಸಾಧಿಸುವುದೆಂದರೆ ಹೊಸತೇನನ್ನೂ ಸೇರಿಸಲು ಸಾಧ್ಯವಾಗದೇ ಇರುವುದಲ್ಲ. ಬದಲಾಗಿ ಬೇರೇನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲದಂತಾಗುವುದು.
೧೪. ಯಾವುದೇ ಪರಿಕರಗಳು, ನಿಶ್ಚಯಿಸಿದಂತೆ ಸಹಕಾರಿಗಳಾಗಬಹುದು. ಆದರೆ ಅತ್ಯುತ್ತಮ ಪರಿಕರವೆಂದರೆ, ನಾವು ಎಣಿಸಿಲ್ಲದ್ದಿದ್ದರೂ ಸಹಕಾರಿಯಾಗಿ ನಿಲ್ಲುವಂತಹುದು.
೧೫. ಗೇಟ್ ವೇ ಗೆ ಸಂಬಂಧಿಸಿದ ಕಾರ್ಯಲಿಪಿ ಬರೆಯಬೇಕಾದರೆ, ಯಾವುದೇ ಕಾರಣಕ್ಕೂ ಏನನ್ನೂ ವ್ಯತಿರಿಕ್ತಗೊಳಿಸಿದಿರಿ. ಮತ್ತು ಸಾಧ್ಯವಾದಷ್ಟೂ ಮಾಹಿತಿಯನ್ನು ಉಳಿಸಿಕೊಳ್ಳಿ.
೧೬. ಟ್ಯೂರಿಂಗ್ ಕ್ಷಮತೆಯ ಕಾರ್ಯಲಿಪಿ ಭಾಷೆಯನ್ನು ನೀವು ಬಳಸಲಾಗದಿದ್ದಲ್ಲಿ, ಸಾಕಷ್ಟು ಸರಳ, ಅರ್ಥವಾಗಬಲ್ಲ ಭಾಷೆಯನ್ನು ಬಳಸಿ (ಸಿಂಟಾಕ್ಟಿಕ್ ಶುಗರ್).
೧೭. ರಕ್ಷಣಾವ್ಯವಸ್ಥೆಯೊಂದು ತನ್ನ ರಹಸ್ಯದಷ್ಟಷ್ಟೇ ಭದ್ರವಾಗಿರುತ್ತದೆ. ನಿಜವಲ್ಲದ ರಹಸ್ಯಗಳ ಬಗ್ಗೆ ಎಚ್ಚರವಿರಲಿ.
೧೮. ಒಂದು ಆಸಕ್ತಿಕರ ಸಮಸ್ಯೆಯನ್ನು ಬಿಡಿಸಬೇಕೆಂದರೆ ನಿಮಗೆ ಆಸಕ್ತಿಯಿರುವ ಸಮಸ್ಯೆಯನ್ನು ಹುಡುಕಿಕೊಳ್ಳಿ.
೧೯. ತಂತ್ರಾಂಶ ಅಭಿವೃದ್ಧಿಯ ಕೊ-ಆರ್ಡಿನೇಟರ್, ಸರಿಯಾದ ರೀತಿಯಲ್ಲಿ ಇಂಟರ್ನೆಟ್ ಮುಖಾಂತರ ತಂಡವನ್ನು ಮುನ್ನಡೆಸಬಲ್ಲವನಾದರೆ, ಒಂದಕ್ಕಿಂತ ಹೆಚ್ಚು ತಲೆಗಳು ಉತ್ತಮ ಕೆಲಸ ಮಾಡಬಲ್ಲುದು.

***

ಮೇಲಿನ ಹತ್ತೊಂಬತ್ತು ಪಾಠಗಳು ಮುಕ್ತ ತಂತ್ರಾಂಶದ ಅಭಿವೃದ್ಧಿಯಲ್ಲಿ ಅಳವಡಿಕೆಯಾದರೆ ಅವು ಮುಕ್ತ ತಂತ್ರಾಂಶದ ಯಶಸ್ಸಿಗೆ ಕಾರಣೀಭೂತವಾಗುತ್ತವೆ.
ಹಾಗೆಯೇ ಸಾಮಾನ್ಯ ಬಳಕೆದಾರರ ದೃಷ್ಟಿಯಿಂದ ನೋಡುವುದಾದರೂ, ಈ ತಂತ್ರಾಂಶಗಳ ಅಭಿವೃದ್ಧಿಯ ಪಥ ಬೇರೆಯೇ ಇರುವುದರಿಂದ, ಈ ಬಳಕೆದಾರರೂ ಅಭಿವೃದ್ಧಿಯಲ್ಲಿ ಭಾಗವಹಿಸಬಹುದಾದ ಅಂಶವಿರುತ್ತದೆ. ಇದು ತಂತ್ರಾಂಶ, ಸರ್ವರ ಬಳಕೆಗೂ ಸೂಕ್ತವಾಗುವಂತೆ, ತಾಳಿಕೆಯಿರುವಂತೆ ಮತ್ತು ಉತ್ತಮ ಗುಣಮಟ್ಟದಲ್ಲಿರುವಂತೆ ಮಾಡಲು ಸಹಕರಿಸುತ್ತವೆ. ಇದನ್ನು ನೆಟ್‍ಸ್ಕೇಪ್ ಬ್ರೌಸರ್ ತಂತ್ರಾಂಶದ ಉದಾಹರಣೆಯಲ್ಲಿ ನೋಡಬಹುದು.

ನೆಟ್ ಸ್ಕೇಪ್ ನ ಸ್ಥಾಪಕರು, ಇ.ಎಸ್.ಆರ್ ಅವರ ಈ ಕೃತಿಯನ್ನೋದಿ, ನೆಟ್ ಸ್ಕೇಪ್ ತಂತ್ರಾಂಶವನ್ನು ಮುಕ್ತವನಾಗಿಸಿದರು. ಆ ಹೊತ್ತಿಗೆ, ಕಾನೂನು ಸಮರ ಮತ್ತು ತಂತ್ರಜ್ಞಾನಗಳ ಇತಿಮಿತಿಯಿಂದ ಸೊರಗುತ್ತಿದ್ದ, ನೆಟ್ ಸ್ಕೇಪ್ ಮುಕ್ತವಾಗಿದ್ದುದರ ಪರಿಣಾಮವಾಗಿ ಹೊಸ ಹುಟ್ಟು ಪಡೆದುಕೊಂಡು, ಮೊಜಿಲ್ಲಾ ಫೈರ್ ಫಾಕ್ಸ್ ಆಗಿ ನಿಮ್ಮ ಮುಂದಿದೆ. ಪ್ರಪಂಚದ ಅಚ್ಚುಮೆಚ್ಚಿನ ಬ್ರೌಸರ್ ಆಗಿದೆ.

ಮೊದ್ಮಣಿ ಮಂಜುನಾಥ್ ಮೈಸೂರಿನವನು. ಓದಿದ್ದು ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್, ಚಾಟ್ ಮಾಡುವ ಕುತೂಹಲದಿಂದ ಕಲಿತ ಕಂಪ್ಯೂಟರ್ ಈಗ ಬೆಂಗಳೂರಲ್ಲಿ ಅನ್ನ ಕೊಡುತ್ತಿದೆ. ಆಗಾಗ ಕವನ, ಬರಹ ಗೀಚುತ್ತೇನೆ. ಹಾಗಂತ ಕವಿಯಲ್ಲ. ಮನಸ್ಸಿಗೆ ತೋಚಿದ್ದೆಲ್ಲಾ ಮಾಡುತ್ತಿರುತ್ತೇನೆ. ಅವೆಲ್ಲಾ ಹವ್ಯಾಸಗಳಲ್ಲ. ಕನ್ನಡವೆಂದರೆ ಪ್ರೀತಿ. ಕನ್ನಡ ಉಳಿಯಲು ಕಂಪ್ಯೂಟರಿನಲ್ಲಿ, ಇಂಗ್ಲಿಷಿನಲ್ಲಿ ಮಾಡುವ ಎಲ್ಲಾ ಕೆಲಸಗಳನ್ನೂ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಿರ್ವಹಣೆಯೂ ಸೇರಿದಂತೆ, ಕನ್ನಡದಲ್ಲಿ ಮಾಡುವಂತಾಗಬೇಕೆಂಬ ನಂಬಿಕೆ ನನ್ನದು.
ಮುಂದೆ ಓದಿ

ಅಲೆ ೧ – ಡೆಬಿಯನ್ ಲಿನಕ್ಸ್ – ಒಂದು ನಂಟು

ಪ್ರಕಟಿಸಿದ್ದು ದಿನಾಂಕ Aug 1, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಪದವಿ ಶಿಕ್ಷಣವನ್ನು ಮುಗಿಸಿದ ಸಮಯ. ಉದ್ಯೋಗಕ್ಕಾಗಿ ಹುಡುಕಾಟ ಶುರುವಾಗಿತ್ತು. ಹಲವರಂತೆ ನಾನೂ ಕಂಪ್ಯೂಟರ್ಗಳ ಬಳಕೆಯ ಕಡೆ ಗಮನ ಹರಿಸತೋಡಗಿದೆ. ಮೊದಮೊದಲಿಗೆ Microsoft ನ ವಿಂಡೋಸ್ ಬಳಸುತ್ತಿದ್ದೆನಾದರೂ, ಕ್ರಮೇಣ ಅದರಲ್ಲಿನ ತಾಪತ್ರಯಗಳು ದಿನೇದಿನೇ ಹೆಚ್ಚಾಗಿ, ಹುಚ್ಚುಹಿಡಿಸಹತ್ತಿದವು. ಒಂದು ತಂತ್ರಾಂಶ ಬೇಕೆಂದರೆ, ಅದರ ಲೈಸೆನ್ಸ್ ಇಲ್ಲದಿದ್ದರೆ, ಅವರಿವರ ಬಳಿ ನಕಲಿ ಪ್ರತಿಗಳಿಗಾಗಿ ಹುಡುಕಾಟ, ಅವುಗಳ ಬಳಕೆಯ ಕಿರಿಕಿರಿ ಈ ಎಲ್ಲದರಿಂದ ಬೇಸತ್ತಿದ್ದ ಹೊತ್ತಿನಲ್ಲಿ, ಮುಕ್ತ ತಂತ್ರಾಂಶದ ಜಗತ್ತು ನನಗೆ ಪರಿಚಯವಾಗತೊಡಗಿತು. ಅದರಲ್ಲಿ ಮೊತ್ತ ಮೊದಲದಾಗಿ ತಿಳಿದಿದ್ದು ಗ್ನೂ/ಲಿನಕ್ಸ್ ಎಂಬ ಮುಕ್ತ ಆಪರೇಟಿಂಗ್ ಸಿಸ್ಟಮ್.

ಮೊದಮೊದಲಿಗೆ ನಾನು ಬಳಸ ತೊಡಗಿದ್ದು, ಅಂದು ಮುಕ್ತವಾಗಿ ಸಿಗುತ್ತಿದ್ದ ರೆಡ್‌ಹ್ಯಾಟ್ ಎಂಬ ಲಿನಕ್ಸ್‌ನ ಹಂಚಿಕೆ. ಅಂದು, ಅದರಲ್ಲಿಯೂ ಹಲವು ನ್ಯೂನತೆಗಳಿದ್ದವು. ಸ್ರೀನ್ ಅಷ್ಟು ಅಂದವಾಗಿರಲಿಲ್ಲ, ಸೌಂಡ್‌ಕಾರ್ಡ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೂ, ನನಗೊಂದು ಚಿಕ್ಕ ಬರವಸೆಯನ್ನು ಅದು ಮೂಡಿಸಿತ್ತು. ಲಿನಕ್ಸ್, ಮುಕ್ತವಾಗಿಯೇ ಆ ಮಟ್ಟದವರೆಗೆ ಬೆಳೆಯಲು ಹೇಗೆ ಸಾಧ್ಯವಾಯಿತು ಎಂದು ನೋಡಲು ಶುರು ಮಾಡಿದೆ. ಆಗ ತಿಳಿದಿದ್ದದ್ದೆ, ಅಂತರ್ಜಾಲದ ಮುಕ್ತ ಸಮುದಾಯಗಳ ಬಗ್ಗೆ. ಇಡೀ ಲಿನಕ್ಸ್ ಪ್ರಮುಖವಾಗಿ ಒಂದು ಬಹು ದೊಡ್ಡ ಮುಕ್ತ ಸಮುದಾಯಗಳ ಸಂಚಯ ವೆಂದು ಗೊತ್ತಾಗಿತ್ತು. ತದನಂತರದ ದಿನಗಳಲ್ಲಿ ನಾನು ಒಂದ ಚಿಕ್ಕ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸ ತೊಡಗಿದೆ. ನನ್ನ ಅದೃಷ್ಟವೆಂಬಂತೆ, ಅಲ್ಲಿಯೂ ಕೇವಲ ಲಿನಕ್ಸ್‌ದೇ ‌ಕಾರೋಬಾರು. ಅಲ್ಲಿನ ಸರ್ವರ್ಸ್, ದೆಸ್ಕ್ಟಾಪ್, ಲ್ಯಾಪ್ಟಾಪ್‌ಗಳೂ ಸೇರಿದಂತೆ ಎಲ್ಲ ಲಿನಕ್ಸ್ ಯಂತ್ರಗಳ ನಿರ್ವಹಣೆ ನನ್ನ ಪ್ರಮುಖ ಕೆಲಸವಾಗಿತ್ತು. ಇನ್ನೂ ಅಷ್ಟಾಗಿ ಲಿನಕ್ಸ್ ಬಗ್ಗೆ ತಿಳುವಳಿಕೆ ಇಲ್ಲದಿದ್ದರ ಕಾರಣ, ಬಳಸಲು ನಿರ್ವಹಿಸಲು ಸುಲಭವಾದಂತಹ, ನೋವೆಲ್ ಕಂಪನಿಯ ‘ಸೂಸೆ’ ಎಂಬ ಲಿನಕ್ಸ್ ಹಂಚಿಕೆಯನ್ನು ಬಳಸಲು ಶುರುಮಾಡಿದೆ. ಇದರೊಂದಿಗೆ, ಮಾಂಡ್ರೇಕ್, ಡೆಬಿಯನ್ ಲಿನಕ್ಸ್ ಹಂಚಿಕೆಗಳು ಕಛೇರಿಯಲ್ಲಿ ಬಳಸಲ್ಪಡುತ್ತಿದ್ದವು. ಕೆಲದಿನಗಳು ಕಳೆದ ಮೇಲೆ, ಕಂಪನಿಯ ಮೇಲ್ವರ್ಗದಿಂದ ಕೇವಲ ಡೆಬಿಯನ್ ಹಂಚಿಕೆಯೊಂದನ್ನೇ ಬಳಸುವಂತೆ ಆದೇಶ ಬಂದಿತ್ತು. ಕೆಲವು ಪ್ರಮುಖ ಕಾರ್ಯಗಳಲ್ಲಿ ಮಾತ್ರ ಮ್ಯಾಂಡ್ರೇಕ್ ಬಳಸಲು ಅವಕಾಶವಿತ್ತು. ಹಾಗಾಗಿ, ನಾನು ಡೆಬಿಯನ್ ಬಳಸುವುದು ಅನಿವಾರ್ಯವಾಯಿತು. ಮೊದಮೊದಲು ಕಷ್ಟಕರ ಹಂಚಿಕೆಯೆಂದು ಕೈಬಿಟ್ಟಿದ್ದ ಈ ಲಿನಕ್ಸ್ ಹಂಚಿಕೆಯ ಶಕ್ತಿ ತಿಳಿದದ್ದೇ ಒಂದೆರಡು ತಿಂಗಳ ಬಳಕೆಯ ನಂತರ. ಈ ಸಮಯದಲ್ಲಿ, ಹಲವಾರು ಭಾರಿ ಅದನ್ನು ಅನುಸ್ಥಾಪಿಸುವ, ತೆಗೆಯುವ ಕಾರ್ಯಗಳು ನಡೆದಿದ್ದವು. ಪ್ರಯತ್ನಕ್ಕಿಂತ ದೊಡ್ದದಾದ ಕಲಿಕೆಯ ಹಾದಿ ಮತ್ತೊಂದಿಲ್ಲವೆಂಬ ಸತ್ಯವು ಅರಿವಿಗೆ ಬಂದಿತ್ತು. ನಂತರ, ಈವರೆಗೂ ಡೆಬಿಯನ್ ಹಾಗೂ ಅದನ್ನು ಆಧಾರಿಸಿ ತಯಾರಾದ ಹಂಚಿಕೆಗಳನ್ನಷ್ಟೇ ಬಳಸುತ್ತಿದ್ದೇನೆ, ಅದರಲ್ಲೂ ವಿಶೇಷವಾಗಿ, ಸರ್ವರ್ಗಳಲ್ಲಿ, ಬಹುಕಾಲ ವ್ಯತ್ಯಯಗಳಿಲ್ಲದೇ ಕಾರ್ಯನಿರ್ವಹಿಸಬೇಕಾದ ಯಂತ್ರಗಳಿಗೆ ಕೇವಲ ಡೆಬಿಯನ್ ಮಾತ್ರವೇ ಬಳಸುವುದು ನನ್ನ ರೂಢಿಯೂ ಕೂಡ. ಅದು ಕೇವಲ ನನ್ನ ರೂಢಿ ಮಾತ್ರವಲ್ಲ, ವಿಶ್ವದೆಲ್ಲೆಡೆ, ಪ್ರಮುಖ ಕಂಪನಿಗಳು ಪಾಲಿಸುವ ಕ್ರಮವೂ ಕೂಡ.

೧೯೯೩ರಲ್ಲಿ ಪ್ರಾರಂಭಗೊಂಡ ಡೆಬಿಯನ್, ನನಗೆ ಸರಿಯಾಗಿ ಪರಿಚಯವಾದದ್ದು ೨೦೦೨ಕ್ಕೆ. ಅಂದಿನಿಂದ ಇಂದಿನವರೆಗೆ, ನಾನು ಹತ್ತು ಹಲವು ಕಂಪನಿ ಬೆಂಬಲಿತ ಲಿನಕ್ಸ್ ಹಂಚಿಕೆಗಳನ್ನು ಬಳಸಿದ್ದೆನಾದರೂ, ಡೆಬಿಯನ್ ಮಾತ್ರ ಪ್ರಮುಖವಾಗಿ ಒಂದು ಸಮುದಾಯ ದತ್ತ ಲಿನಕ್ಸ್ ತಂತ್ರಾಂಶಗಳ ಆಗರವಾಗಿಯೇ ಉಳಿದಿದೆ. ತಾನು ತನ್ನ ಸಮುದಾಯ ಕಾರ್ಯಕಾರಿ ಮಾಧರಿಯನ್ನು ಉಳಿಸಿಕೊಂಡು, ವಿಶ್ವವಿಖ್ಯಾತವಾದ ಹಲವು ಲಿನಕ್ಸ್ ಹಂಚಿಕೆಗಳ ಮೂಲವಾಗಿದೆ. ಅವುಗಳಲ್ಲಿ, ಮುಖ್ಯವಾದವು ಉಬುಂಟು, ಕ್ನಾಪಿಕ್ಸ್, ದ್ಯಾಮ್ ಸ್ಮಾಲ್ ಲಿನಕ್ಸ್ (ಡಿಎಸ್‌ಎಲ್), ಮಿಂಟ್, ಮೇಪಿಸ್, ಕ್ಸಾಂಡ್ರೋಸ್, ಹಾಗೂ ಸಂಕ್ಷಿಪ್ತ ಗಣಕಯಂತ್ರಗಳ ಕಾರ್ಯ ನಿರ್ವಹಣೆಗಾಗಿ ಮೂಡಿರುವ ಎಂಡೆಬಿಯನ್. ನಾನು ಹೇಳಿಲ್ಲದ್ದ, ಕೇಳಿಲ್ಲದ ಎನ್ನೂ ಹತ್ತು ಹಲವು ಲಿನಕ್ಸ್ ಹಂಚಿಕೆಗಳಿಗೆ ಡೆಬಿಯನ್ ಮೂಲವೆಂದರೆ ತಪ್ಪಾಗಲಾರದು.

ಡೆಬಿಯನ್‌ನಲ್ಲಿ ನನಗೆ ಹಿಡಿಸಿದ್ದು ಪ್ರಮುಖವಾಗಿ ಮೂರು ವಿಚಾರಗಳು. ಮೊದಲನೆಯದು, ಅದರಲ್ಲಿ ದೊರೆಯುವ ಬೃಹತ್ ತಂತ್ರಾಂಶಗಳ ಕೋಶ. ಇಂದು ಅದರಲ್ಲಿ ದೊರೆಯುವ, ಪ್ರಮುಖ ಮುಕ್ತ ತಂತ್ರಾಂಶಗಳ ಸಂಖ್ಯೆ ೧೫೦೦೦ಕ್ಕೂ ಮಿಗಿಲಾಗಿದೆ. ಇವೆಲ್ಲವನ್ನು ಅನುಸ್ಥಾಪಿಸಲು, ತೆಗೆದು ಹಾಕಲು, ಉತ್ತಮಗೊಂಡ ಪ್ರತಿಗಳನ್ನು ಅಳವಡಿಸಿ ಕೊಳ್ಳಲು ಅದರಲ್ಲೇ ಬರುವ, ಎಪಿಟಿ (ಅಡ್ವಾಸ್ಡ್ ಪ್ಯಾಕೇಜಿಂಗ್ ಟೂಲ್) ಎಂಬ ತಂತ್ರಾಂಶ ಅನುಸ್ಥಾಪನಾ ವ್ಯವಸ್ಥೆ. ಒಮ್ಮೆ ನಾವು ಡೆಬಿಯನ್ ಹಂಚಿಕೆಯನ್ನು ಅನುಸ್ಥಾಪಿಸಿದರೆ ಸಾಕು, ಎಪಿಟಿಯ ಸಹಾಯದಿಂದ, ಮೂಲ ಕರ್ನಲ್ ಒಳಗೊಂಡಂತೆ, ಎಲ್ಲಾ ಸುಧಾರಿತ ತಂತ್ರಾಂಶಗಳನ್ನು ಕಾಲಕಾಲಕ್ಕೆ ಪಡೆಯುತ್ತಿರಬಹುದು. ಮತ್ತೊಮ್ಮೆ, ಮಗದೊಮ್ಮೆ ಇಡೀ ಆಪರೇಟಿಂಗ್ ಸಿಸ್ಟಮ್‌ನ ಮರು ಅನುಸ್ಥಾಪನೆಯ ತೊಂದರೆಗಳಿರುವುದಿಲ್ಲ. ಇದು ಡೆಬಿಯನ್ ಲಿನಕ್ಸ್‌ನ ಪ್ರಮುಖ ಶಕ್ತಿಗಳಲ್ಲಿ ಒಂದು ಎನ್ನಬಹುದು. ಎರಡನೆಯದು, ಡೆಬಿಯನ್‌ನ, ತನ್ನದೇ ಆದ ‘ಡೆಬಿಯನ್ ಫ್ರೀ ಸಾಫ್ಟ್ವೇರ್ ನಿಯಮಗಳು’. ಇದನ್ನು ಅದರ ಸಮುದಾಯದಲ್ಲಿ ಅತೀ ಕಟ್ಟುನಿಟ್ಟಾಗಿ ಪಾಲಿಸುವುದರಿಂದ, ಉತ್ತಮ, ದಕ್ಷ, ಮುಕ್ತ ತಂತ್ರಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ತದನಂತರ ತನ್ನ ಕೋಶದಲ್ಲಿ ಸೇರಿಸಲು ಅನುಕೂಲವಾಗಿದೆ. ಪ್ರಮುಖವಾದ ಮುಕ್ತ ತಂತ್ರಾಂಶಗಳನ್ನು,ಮೈನ್ ಎಂಬ ಹೆಸರಿನ ಪಟ್ಟಿಯಲ್ಲಿ, ಉಳಿದವನ್ನು ಕಾಂಟ್ರಿಬ್ ಹಾಗೂ ನಾನ್-ಫ್ರೀ ಪಟ್ಟಿಗಳಲ್ಲಿ, ಅವುಗಳ ನಿಭಂದನೆಗಳ ಪ್ರಕಾರ ಸೇರಿಸಲಾಗಿರುತ್ತದೆ. ಮೂರನೆಯ ವಿಚಾರ, ಅದರ ಸ್ಟೇಬಲ್, ಟೆಸ್ಟಿಂಗ್ ಹಾಗೂ ಅನ್‌ಸ್ಟೇಬಲ್ ಎಂಬ ಮೂರು ವಿಧವಾದ ಹಂಚಿಕೆಗಳು. ಸ್ಟೇಬಲ್ ಎಂಬುದು ಹೆಸರೇ ಸೂಚಿಸುವಂತೆ, ಬಹುಕಾಲ ಪರೀಕ್ಷಿಸಲ್ಪಟ್ಟ, ಸಮುದಾಯದಿಂದ ಅನುಮೋದಿಸಿದ ತಂತ್ರಾಂಶ ಸಂಗ್ರಹವನ್ನು ಒಳಗೊಂಡಿರುತ್ತದೆ. ಬಹುಕಾಲ ವ್ಯತ್ಯಯಗಳಿಲ್ಲದೇ ಕಾರ್ಯನಿರ್ವಹಿಸಬೇಕಾದ ಗಣಕ ಯಂತ್ರಗಳಿಗೆ ಇದರ ಬಳಕೆ ಸೂಕ್ತವಾಗಿದೆ. ಇನ್ನು ದಿನನಿತ್ಯದ ಬಳಕೆಗೆ, ಕಾಲಕಾಲಕ್ಕೆ ಸುಧಾರಿಸುವ ತಂತ್ರಾಂಶಗಳನ್ನು ಬಳಸಬೇಕೆಂದು ಇಚ್ಚಿಸುವವರಿಗಾಗಿ, ತಾವು ಸ್ವಯಂಪ್ರೇರಿತವಾಗಿ ಮುಕ್ತ ತಂತ್ರಾಂಶಗಳನ್ನು ಪರೀಕ್ಷಿಸುವಲ್ಲಿ ಸಹಕಾರ ನೀಡುವವರಿಗಾಗಿ, ಟೆಸ್ಟಿಂಗ್ ಹಂಚಿಕೆ ಇದೆ. ಕೆಲವಷ್ಟೇ, ನುರಿತ ಮುಕ್ತ ತಂತ್ರಾಂಶ ಬಳಕೆದಾರರಿಗಾಗಿ, ಅವುಗಳ ಅಭಿವೃದ್ಧಿಗಾರರಿಗಾಗಿ ಅನ್‌ಸ್ಟೇಬಲ್ ಹಂಚಿಕೆಯಿದೆ. ಪರೀಕ್ಷೆಯ ಕಾಲವಧಿಯ ಪ್ರಕಾರ, ಟೆಸ್ಟಿಂಗ್ ಹಂಚಿಕೆಯು ಸ್ಟೇಬಲ್ ಆಗಿ ಹೊರಬರುತ್ತದೆ, ಅನ್‌ಸ್ಟೇಬಲ್ ಹಂಚಿಕೆಯಲ್ಲಿ ಕೆಲ ಕಾಲ ಸುಧಾರಿತಗೊಂಡ ತಂತ್ರಾಂಶಗಳು, ಟೆಸ್ಟಿಂಗ್ ಮಟ್ಟವನ್ನು ಸೇರುತ್ತವೆ. ಇನ್ನೂ ಕನಿಷ್ಟ ಪರೀಕ್ಷೆಗೆ ಒಳಪಡಬೇಕಾದ ತಂತ್ರಾಂಶಗಳು ಅನ್‌ಸ್ಟೇಬಲ್ ಹಂಚಿಕೆಗೆ ಸೂರುತ್ತಿರುತ್ತವೆ. ಈ ಮೂರೂ ವಿಚಾರಗಳಿಂದ ಡೆಬಿಯನ್, ನನ್ನ ನಿಚ್ಚಿನ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆಗಿದೆ.

ರವಿಶಂಕರ್ ಹರನಾಥ್ ಮೂಲತಃ ಬೆಂಗಳೂರಿನವ. ವಿದ್ಯಾಭ್ಯಾಸ ಬೆಂಗಳೂರು, ಮೈಸೂರುಗಳಲ್ಲಿ. ಯಾಂತ್ರಿಕ ಇಂಜಿನಿಯರಿಂಗ್‌ನಲ್ಲಿ ಪದವಿ. ಸದ್ಯಕ್ಕೆ, ಬೆಂಗಳೂರಿನಲ್ಲೇ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗ. ಸುಮಾರು ಹತ್ತುವರ್ಷಗಳ ಕೆಲಸ ಕಾರ್ಯಗಳಲ್ಲಿ, ಲಿನಕ್ಸ್ ದಿನನಿತ್ಯದ ಬಳಕೆಯ ವಸ್ತುವಾಗಿದೆ. ತಂತ್ರಜ್ಞಾನವನ್ನು ಹೊರತು ಪಡಿಸಿದರೆ, ಚಾರಣ, ಪ್ರವಾಸ ಹಾಗೂ ಚಿತ್ರ ಕಲೆಯಲ್ಲಿ ಆಸಕ್ತಿ. ಮುಕ್ತ ತಂತ್ರಾಂಶಗಳಲ್ಲಿ, ಕನ್ನಡ ಮಾಧ್ಯಮದ ಅಳವಡಿಕೆಯನ್ನು, ಬಳಕೆಯನ್ನು ಸುಧಾರಿಸುವುದರಲ್ಲಿ, ವಿಶೇಷ ಒಲವು.
ಮುಂದೆ ಓದಿ