Posted on Jan 4, 2013 in 2013, ale3 | 0 comments

ನಮ್ಮ ಅಂಗೈಗಳಲ್ಲಿ ಕುಳಿತು ಜಗತ್ತನ್ನೇ ಜಾಲಾಡುವ ಸ್ಮಾರ್ಟ್ ಫೋನ್ ಗಳೆಂಬ ಅದ್ಭುತಗಳ ಇತಿಹಾಸ ತುಂಬಾ ಪ್ರಾಚೀನವಾದುದೇನಲ್ಲ. ಕೆಲವೇ ವರ್ಷಗಳ ಹಿಂದೆ ಇಟ್ಟಿಗೆ ಗಾತ್ರದ ಸರಕನ್ನು ಹೊತ್ತು ಒಳಬರುವ ಕರೆಗೂ ಸುಂಕ ಕಟ್ಟಿ ಅಂದಿನ ಆಧುನಿಕ ಆವಿಷ್ಕಾರದ ಬಗ್ಗೆ ಆನಂದ ಬಾಷ್ಪ ಸುರಿಸುತ್ತಿದ್ದೆವು. ಅದಕ್ಕೂ ಕೆಲ ದಶಕಗಳ ಹಿಂದೆ ಈಗಿನ ತೀರಾ ಸಾಧಾರಣ ಸ್ಮಾರ್ಟ್ ಫೋನಿನ ದಿನಚರಿಯನ್ನು ನಿರ್ವಹಿಸುವುದಕ್ಕೆ ಕಬಡ್ಡಿ ಮೈದಾನದಷ್ಟು ವಿಶಾಲವಾದ ಕೋಣೆಯನ್ನು ಆವರಿಸಿಕೊಂಡು ಧುಸು ಮುಸು ಎಂದು ವ್ಯಾಕ್ಯೂಮ್ ಕೊಳವೆಗಳಲ್ಲಿ ಬಿಸಿಗಾಳಿ ಹೂಂಕರಿಸುತ್ತಾ ಯುನಿವ್ಯಾಕ್, ಇನಿಯಾಕ್ ಕಂಪ್ಯೂಟರುಗಳು ಏದುಸಿರು ಬಿಡುತ್ತಿದ್ದವು. ಆದರಿಂದು ಇದೆಲ್ಲವೂ ಮುಂಚೆಯೇ ಯೋಜಿಸಲ್ಪಟ್ಟಿತ್ತು ಎನ್ನುವಷ್ಟು ಸರಾಗವಾಗಿ ಬ್ರಹ್ಮಾಂಡ ಕ್ಲಿಷ್ಟತೆಯನ್ನು ಮೈಯೊಳಗಡಿಸಿಕೊಂಡ ಮಶೀನುಗಳು ನಮ್ಮ್ ಜೇಬುಗಳಲ್ಲಿ ಅವಿತು ಕುಳಿತಿವೆ.

ಈ ಪ್ರಬಂಧದ ಉದ್ದೇಶ ಇಂದು ಅವ್ಯಾಹತವಾಗಿ ಎಲ್ಲರ ಕಿಸೆಗಳಲ್ಲಿ ಸ್ಥಾಪಿತವಾಗುತ್ತಿರುವ ಸ್ಮಾರ್ಟ್ ಫೋನ್ ಹಾಗೂ ಅವುಗಳ ಕಾರ್ಯಾಚರಣೆ ವ್ಯವಸ್ಥೆಗಳಾದ ಆಂಡ್ರಾಯ್ಡ್(Android), ಐ ಓಎಸ್ (iOS) ಹಾಗೂ ವಿಂಡೋಸ್ ೮ (Windows 8) ಗಳಲ್ಲಿನ ಆಧುನಿಕ ತಂತ್ರಜ್ಞಾನವನ್ನು ವಿವರಿಸುವುದಲ್ಲ. ತ್ವರಿತವಾಗಿ ಲಭ್ಯವಾಗುತ್ತಿರುವ ವಿವಿಧ ಸವಲತ್ತುಗಳನ್ನು ಕುರಿತು ಚರ್ಚಿಸುವುದಲ್ಲ. ಬದಲಾಗಿ ನಮ್ಮೆಲ್ಲರ ದೈನಂದಿನ ಬದುಕುಗಳಿಗೆ ನೇರವಾಗಿ ಪ್ರವೇಶ ಮಾಡಿ ನಾವು ನಮ್ಮ ಸುತ್ತಲ ಜಗತ್ತಿನೊಡನೆ ಒಡನಾಡುವ ರೀತಿಯನ್ನೇ ಪ್ರಭಾವಿಸುತ್ತಿರುವ ಈ ಸ್ಮಾರ್ಟ್ ಫೋನ್ ಗಳು ನಮ್ಮ ದೈನಂದಿನ ಚಟುವಟಿಕೆಗಳಿಗೆ, ಪ್ರಾದೇಶಿಕ ಅಗತ್ಯಗಳಿಗೆ ಅದೆಷ್ಟರ ಮಟ್ಟಿಗೆ ಸ್ಪಂದಿಸುತ್ತಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಈ ಪ್ರಬಂಧದ ಉದ್ದೇಶ.

ಹಳೇ ಚಕ್ರವನ್ನು ಹೊಸ ಗಾಡಿಗೆ ಜೋಡಿಸುವುದು
ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಅಳವಡಿಕೆಯಾಗಿದೆ ಎನ್ನುವುದು ನಮಗೆ ಹೊಸ ಚರ್ಚೆಯಾಗಿ ಕಾಣಬಹುದು. ಆದರೆ ಈ ಚರ್ಚೆಯಲ್ಲಿ ಪಾಲ್ಗೊಂಡು ಮುಂದಿನ ಭಾಗಗಳನ್ನು ಓದಿದಂತೆಲ್ಲಾ ನಿಮಗೆ ಕನ್ನಡದ ಅಳವಡಿಕೆಯ ಸವಾಲುಗಳು ಹಾಗೂ ಪರಿಹಾರಗಳು ಹಿಂದೆಲ್ಲೋ ಕೇಳಿದಂತೆ, ಬೇರೆಯದೇ ಪರಿಸರದಲ್ಲಿ ಮತ್ತೆ ಪುನರಾವರ್ತನೆಗೊಂಡಂತೆ ಭಾಸವಾಗುವುದಕ್ಕೆ ಸಾಧ್ಯವಿದೆ.

ಒಂದು ವೇಳೆ ನಿಮಗೆ ಹಾಗೆ ಅನ್ನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಸ್ಮಾರ್ಟ್ ಫೋನುಗಳ ಬಗೆ ಬಗೆಯ ವಿನ್ಯಾಸಗಳು, ಅವುಗಳನ್ನು ತಯಾರು ಮಾಡುತ್ತಿರುವ ಕಂಪೆನಿಗಳು, ದಿನ ದಿನಕ್ಕೆ ವೃದ್ಧಿಯಾಗುತ್ತಿರುವ ಹಾರ್ಡ್ ವೇರ್ ಸಾಮರ್ಥ್ಯ, ಹಿಂದೆಂದೂ ಕಂಡು ಕೇಳರಿಯದ ಹೊಸ ತಾಂತ್ರಿಕ ಪದಗಳು ನಿಮ್ಮ ಗ್ರಹಿಕೆಯನ್ನು ಮಬ್ಬಾಗಿಸಿರಬಹುದು. ಈ ಎಲ್ಲ ಗೋಜಲನ್ನು ಬದಿಗಿರಿಸಿದರೆ ಸ್ಮಾರ್ಟ್ ಫೋನ್ ಗಳು ನಮ್ಮ ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಕಂಪ್ಯೂಟರುಗಳ ಡಿ.ಎನ್.ಎಯನ್ನೇ ಹೊಂದಿದೆ ಎನ್ನುವುದು ಅರಿವಾಗುತ್ತದೆ. ಕಂಪ್ಯೂಟರ್ ಬಳಕೆ ಶೈಶವಾವಸ್ಥೆಯಲ್ಲಿದ್ದಾಗ ಕನ್ನಡ ಹಾಗೂ ಇತರೆ ಪ್ರಾದೇಶಿಕ ಭಾಷೆಗಳ ಅಳವಡಿಕೆಯ ಕುರಿತು ಉದ್ಭವಾದ ಚರ್ಚೆಗಳೇ ಈಗ ಸ್ಮಾರ್ಟ್ ಫೋನ್ ಆವರಣದಲ್ಲಿ ಪುನರಾವರ್ತನೆಯಾಗುತ್ತಿವೆ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತದೆ.

ವಿಂಡೋಸ್ ಕಾರ್ಯಚರಣೆ ವ್ಯವಸ್ಥೆ (Operating System)ಯಲ್ಲಿ ಒಂದು ಕನ್ನಡದ ಲೇಖನ ಬರೆಯುವುದಕ್ಕೆ, ಕನ್ನಡದ ಫೈಲ್ ಒಂದನ್ನು ಓದುವುದಕ್ಕೆ ಇದ್ದ ಸವಾಲುಗಳು. ಈ ಸವಾಲುಗಳಿಗೆ ಆಸ್ಕೀ (ASCII), ಯುನಿಕೋಡ್ (UNICODE) ಎನ್ಕೋಡಿಂಗುಗಳ ಹಂಗಿನಲ್ಲಿ ಕಂಡುಕೊಂಡ ಹಲವು ಪರಿಹಾರಗಳು. ಪ್ರಾದೇಶಿಕ ಭಾಷೆಗಳ ಬೆಂಬಲಕ್ಕೆ ಆಗ್ರಹಿಸಿ ಸಂಘಟಿಸಿದ ಪ್ರತಿಭಟನೆಗಳು ಹೀಗೆ ಕಂಪ್ಯೂಟರುಗಳ ಆವರಣದಲ್ಲಿ ಜರುಗಿ ಹೋದ ಅನೇಕ ಘಟನೆಗಳು ಇಂದು ಸ್ಮಾರ್ಟ್ ಫೋನ್ ಗಳ ಅಂಗಳದಲ್ಲಿ ಪುನರಾವರ್ತನೆಯಾಗುತ್ತಿವೆ. ಇತಿಹಾಸ ಮರುಕಳಿಸುತ್ತಿದೆ!

ಕನ್ನಡ ಎನೆ ಕಣ್ ಅರಳುವುದು
ಐದರಿಂದ ಹತ್ತು ಅಂಕಿಗಳ ಫೋನ್ ನಂಬರನ್ನು ಒತ್ತಿ ದೂರದಲ್ಲಿರುವ ಯಾರೊಂದಿಗೋ ಮಾತನಾಡುವುದಷ್ಟೇ ಫೋನಿನ ಉಪಯುಕ್ತತೆ ಸೀಮಿತವಾಗಿದ್ದ ದಿನಗಳಲ್ಲಿ ಕನ್ನಡವಿರಲಿ, ಫೋನುಗಳ ಪರದೆಯ ಮೇಲೆ ಅಂಕಿಗಳನ್ನು ನೋಡುವುದು ಸಹ ಅಷ್ಟು ಮುಖ್ಯವಾದ ಸಂಗತಿಯಾಗಿರುತ್ತಿರಲಿಲ್ಲ. ಎಸ್.ಟಿ.ಡಿ ಬೂತ್ ಗಳಲ್ಲಿ ದೂರದ ಊರಿನ ಕೋಡ್ ಸರಿಯಾಗಿ ಒತ್ತಿದ್ದೇವೆಯೇ ಎಂದು ಖಾತರಿ ಪಡಿಸಿಕೊಳ್ಳಲು ಎಲ್ ಇ ಡಿ ಹಲಗೆಗಳನ್ನು ತಲೆ ಎತ್ತಿ ನೋಡುತ್ತಿದ್ದೆವು. ಮುಂದೆ ಅಂಗೈ ಉದ್ದದ ಸೆಲ್ ಫೋನ್ ಗಳು ಬಂದಾಗಲೂ ಅವುಗಳಲ್ಲಿ ನಂಬರ್ ಅದುಮಲು ಬೇಕಾದ ಕೀ ಪ್ಯಾಡ್ ಗಳಿಗೇ ಹೆಚ್ಚಿನ ಮಾನ್ಯತೆ ಇರುತ್ತಿತ್ತು. ಸಣ್ಣ ಕಿಂಡಿಯ ಡಿಸ್ ಪ್ಲೇ ಅವಶ್ಯಕವಾದ ಮಾಹಿತಿಯನ್ನಷ್ಟೇ ತೋರುವ ಮಾಧ್ಯಮವಾಗಿತ್ತು.

ಸ್ಮಾರ್ಟ್ ಫೋನುಗಳು ತಮ್ಮ ಮೈ ತುಂಬ ವ್ಯಾಪಿಸಿಕೊಂಡ ಸ್ಪರ್ಶ ಸಂವೇದಿ ಟಚ್ ಸ್ಕ್ರೀನುಗಳೊಂದಿಗೆ ಕಾಲಿರಿಸಿದಾಗಲೇ ನಮ್ಮ ಕಣ್ಣಗುಡ್ಡೆಗಳನ್ನು ಮೋಹಿಸಲು ಪ್ರಾರಂಭಿಸಿದ್ದು. ಅಲ್ಲಿಯರೆಗೆ ಟಿವಿ ಪರದೆ, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಪರದೆಗಳಿಗೆ ಕಣ್ಣು ಅಂಟಿಸಿ ಕೂರುತ್ತಿದ್ದ ಜನ ಸಮೂಹ ತಮ್ಮ ಕಿಸೆಯಲ್ಲಿರುವ ಸ್ಮಾರ್ಟ್ ಫೋನ್ ಗಳನ್ನು ‘ನೋಡುವ, ಓದುವ’ ಸಾಧನವಾಗಿ ಕಾಣಲಾರಂಭಿಸಿತು. ಹೀಗೆ ಫೋನುಗಳು ಓದುವ ಸಲಕರಣೆಗಳಾಗಿ ತಮ್ಮ ಬಳಕೆಯನ್ನು ಹಿಗ್ಗಿಸಿಕೊಂಡಾಗ, ನೂರಾರು ಸಾಲು ಇಂಗ್ಲೀಷ್ ಪಠ್ಯವನ್ನು ಓದಿ ಓದಿ ಸ್ವೈಪ್ ಮಾಡುವಾಗ ಸಹಜವಾಗಿ ನಮ್ಮ ಕಣ್ಣುಗಳು ಕನ್ನಡದ ಮುದ್ದು ಅಕ್ಷರಗಳಿಗಾಗಿ ಹಂಬಲಿಸಲು ಆರಂಭಿಸಿದವು.

ಆಗ ನಾವು ಪ್ರಶ್ನಿಸಲಾರಂಭಿಸಿದೆವು: ನನ್ನ ಫೋನಿನಲ್ಲಿ ಕನ್ನಡವೇಕೆ ಕಾಣುವುದಿಲ್ಲ? ಇಂಗ್ಲೀಷು ಇಷ್ಟು ಸ್ಪಷ್ಟವಾಗಿ ನಮ್ಮ ಎಸ್.ಎಂ.ಎಸ್, ಮೇಲ್, ಬ್ರೌಸರ್ ಆಪ್ ಗಳಲ್ಲಿ ಕಾಣುವಾಗ ಕನ್ನಡದ ಅಕ್ಷರಗಳೇಕೆ ಚೌಕಾಕಾರದ ಡಬ್ಬಗಳಾಗಿ, ಒತ್ತಕ್ಷರ- ತಲೆ ಕಟ್ಟುಗಳು ಘಾಸಿಗೊಳಗಾಗಿ ಸ್ಥಾನ ಪಲ್ಲಟಗೊಂಡು ಏಕೆ ಕಾಣುತ್ತಿವೆ ಎಂದು ಕೇಳಿಕೊಳ್ಳಲಾರಂಭಿಸಿದೆವು.

ತಮ್ಮ ಗ್ಯಾಜೆಟ್ ಗಳಲ್ಲಿ ಕನ್ನಡವನ್ನು ಕಾಣಲೇಬೇಕೆಂಬ ಹಠದಿಂದ ಮುಂದೆ ವಿವರಿಸಿರುವ ಒಪೆರಾ ಬ್ರೌಸರ್ ಉಪಾಯದಂತಹ ದ್ರಾವಿಡ ಪ್ರಾಣಾಯಾಮ ಕೈಗೊಂಡು ಯಶಸ್ವಿಯಾದವರು ಮರುಕ್ಷಣದಲ್ಲಿಯೇ “ಕನ್ನಡದ ಅಕ್ಷರವನ್ನು ಕಂಡು ನನ್ನ ಕಣ್ಣುಗಳಿಗೇನೋ ತಂಪಾಯಿತು. ಆದರೆ ಕನ್ನಡದ ಅಕ್ಷರಗಳನ್ನು ಟೈಪ್ ಮಾಡಲಿಕ್ಕಾಗದೆ ನನ್ನ ಬೆರಳುಗಳೇಕೆ ಕೆಂಪಾಗುತ್ತಿವೆ?” ಎಂದು ಮರುಗತೊಡಗಿದರು.
ಹಳೇ ಪ್ರೇತಗಳು ಹಳೇ ಮಂತ್ರಕ್ಕೆ ಬಗ್ಗುತ್ತಿಲ್ಲ

ಇಲ್ಲಿಗೆ ಡೆಸ್ಕ್ ಟಾಪ್ ಆವರಣದಲ್ಲಿ ಶಾಂತಿ ಪಡೆದಿದ್ದ ಪ್ರೇತಾತ್ಮಗಳೆಲ್ಲ ಸ್ಮಾರ್ಟ್ ಫೋನ್ ಆವರಣದಲ್ಲಿ ಗಿರಕಿ ಹೊಡೆಯಲು ಶುರುಮಾಡಿದವು. ಒಮ್ಮೆ ಮಣಿಸಿದ್ದ ಪ್ರೇತಗಳನ್ನು ಮತ್ತೊಮ್ಮೆ ಮಣಿಸುವುದೇನು ಕಷ್ಟವಾಗಲಿಕ್ಕಿಲ್ಲ ಎನ್ನುವುದು ನಿಮ್ಮ ಎಣಿಕೆಯಾಗಿರಬಹುದು. ಆದರೆ ಈ ಹಳೇ ಪ್ರೇತಗಳು ಹಳೇ ಮಂತ್ರಗಳಿಗೆ ಬಗ್ಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ.

ಡೆಸ್ಕ್ ಟಾಪ್ ಕಂಪ್ಯೂಟರುಗಳು ನಮ್ಮ ನಡುವೆ ನೆಲೆಯೂರುತ್ತಿದ್ದ ಕಾಲದಲ್ಲಿ ಇಡೀ ಆಪರೇಟಿಂಗ್ ಸಿಸ್ಟಂ ಎನ್ನುವ ವ್ಯವಹಾರ ಮೈಕ್ರೋ ಸಾಫ್ಟ್ ಎನ್ನುವ ಕಂಪನಿಯ ಹಿಡಿತದಲ್ಲಿತ್ತು. ನೀವು ಡೆಲ್, ಎಚ್.ಪಿ, ಲಿನೊವೋ ಯಾವುದೇ ಕಂಪನಿಯಿಂದ ಹಾರ್ಡ್ ವೇರ್ ಖರೀದಿಸಿದರೂ ಅವುಗಳು ಮೈಕ್ರೋಸಾಫ್ಟ್ ನಿರ್ಮಿಸಿದ ಕಾರ್ಯಚರಣೆ ವ್ಯವಸ್ಥೆ – ವಿಂಡೋಸ್ ಹೊತ್ತು ಬರುತ್ತಿದ್ದವು. ಬಳಕೆದಾರರ ಆಯ್ಕೆಯ ದೃಷ್ಟಿಯಿಂದ ಇದು ದುರುಳ ವ್ಯವಸ್ಥೆಯೇ ಆದರೂ ಕಂಪ್ಯೂಟರುಗಳಲ್ಲಿ ಪ್ರಾದೇಶಿಕ ಭಾಷೆಗಳ ಅಳವಡಿಕೆ ಎನ್ನುವ ಸಮಸ್ಯೆ ಮೈಕ್ರೋಸಾಫ್ಟ್ ವಿಂಡೋಸ್ ನಲ್ಲಿ ಅವುಗಳ ಅಳವಡಿಕೆ ಎನ್ನುವುದಕ್ಕೆ ಸೀಮಿತವಾಗಿತ್ತು.

ಸ್ಮಾರ್ಟ್ ಫೋನ್ ಕ್ಷೇತ್ರದಲ್ಲೂ ಹೀಗೆ ಆಪರೇಟಿಂಗ್ ಸಿಸ್ಟಮ್ ನ ಸಂಪೂರ್ಣ ಹಿಡಿತವನ್ನು ಒಂದು ಕಂಪೆನಿ ಹೊಂದಿರುವ ನಿದರ್ಶನಗಳು ಇವೆಯಾದರೂ ಇಲ್ಲಿ ಹತ್ತು ಹಲವು ಅಡ್ಡಿ ಅಡಚಣೆಗಳು ಸಮಸ್ಯೆಗಳನ್ನು ಕ್ಲಿಷ್ಟವಾಗಿಸಿವೆ. ಸ್ಮಾರ್ಟ್ ಫೋನ್ ಗಳ ಕಾರ್ಯಚರಣೆ ವ್ಯವಸ್ಥೆ(Operating System)ಯನ್ನು ಒದಗಿಸುವ ಹತ್ತು ಹಲವು ಕಂಪೆನಿ, ಯೋಜನೆಗಳು ಇರುವುದು ನಿಜವಾದರೂ ನಮ್ಮ ಚರ್ಚೆಗೆ ಆಪಲ್ ಕಂಪೆನಿಯ iOS, ಮೈಕ್ರೋಸಾಫ್ಟ್ ನ ವಿಂಡೋಸ್ ಹಾಗೂ ಗೂಗಲ್ ನ ಆಂಡ್ರಾಯ್ಡ್ – ಈ ಮೂರು ಓಎಸ್ ಗಳನ್ನು ಪರಿಗಣಿಸೋಣ.

ಆಪಲ್ ಕಂಪೆನಿ ತಾನು ಮಾರುವ ಎಲ್ಲಾ ಐಫೋನು, ಐಪ್ಯಾಡುಗಳಿಗೆ ತನ್ನದೇ ಆಪರೇಟಿಂಗ್ ಸಿಸ್ಟಂ ಒದಗಿಸುತ್ತದೆ. ಹಾಗೆಯೇ ಬೇರೆ ಬೇರೆ ಕಂಪೆನಿಗಳು ನಿರ್ಮಿಸುವ ಹಾರ್ಡ್ ವೇರುಗಳಿಗೆ ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವ ಲೈಸೆನ್ಸ್ ನೀಡುತ್ತದೆ. ಆದರೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಆಪಲ್ ನ ಐಫೋನ್ ಜನ ಸಾಮಾನ್ಯರ ಕೈಗೆಟುವ ದರದಲ್ಲಿ ಲಭ್ಯವಿಲ್ಲ. ವಿಂಡೋಸ್ ತಡವಾಗಿ ರೇಸಿಗೆ ಬಂದಿರುವುದರಿಂದ ವಿಂಡೋಸ್ ಫೋನುಗಳು ಹೆಚ್ಚಾಗಿ ಬಳಕೆಯಲ್ಲಿಲ್ಲ. ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮನ್ನು ಮೈಕ್ರೋಸಾಫ್ಟ್ ನಂತೆ ಶುಲ್ಕವಿಧಿಸಿ ಲೈಸೆನ್ಸ್ ನೀಡುವಂತೆ ವಿತರಿಸುವುದಿಲ್ಲ. Open Source Android Project ಎನ್ನುವ ಯೋಜನೆಯಡಿಯಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ್ನು ಮುಕ್ತ ಬಳಕೆಗೆ ಬಿಡುಗಡೆ ಮಾಡುತ್ತದೆ. ಗೂಗಲ್ ಬಿಡುಗಡೆ ಮಾಡುವ ಆಂಡ್ರಾಯ್ಡ್ ಆವೃತ್ತಿಯನ್ನು ವಿವಿಧ ಕಂಪೆನಿಗಳು (OEM- Original Equipment Manufacturer) ಗಳು ತಮ್ಮ ಹಾರ್ಡ್ ವೇರ್ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡುಗೊಳಿಸಿಕೊಂಡು ಬಳಸುತ್ತವೆ. ಹೀಗೆ ಗೂಗಲ್ ಬಿಡುಗಡೆ ಮಾಡಿದ ಕಾರ್ಯಚರಣೆ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸಿ ತಮ್ಮ ಡಿವೈಸುಗಳಿಗೆ ಅಪ್ ಡೇಟ್ ಬಿಡುಗಡೆ ಮಾಡುವ ಜವಾಬ್ದಾರಿ OEMಗಳ ಮೇಲೆ ಬೀಳುವುದರಿಂದಾಗಿ ಪ್ರಾದೇಶಿಕ ಭಾಷೆಗಳ ಬೆಂಬಲ ಎನ್ನುವುದು ಆಂಡ್ರಾಯ್ಡ್ ಸನ್ನಿವೇಶದಲ್ಲಿ ಅನಾಥ ಶಿಶುವಿನಂತಾಗಿದೆ.

ಉದಾಹರಣೆಗೆ, ಗೂಗಲ್ ಜುಲೈ ೨೦೧೨ರಲ್ಲಿ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಆವೃತ್ತಿ ೪.೨ (ಜೆಲ್ಲಿ ಬೀನ್) ನಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳ ಯುನಿಕೋಡ್ ಬೆಂಬಲವನ್ನು ಅಳವಡಿಸಿದೆ. ಆದರೆ ಆರು ತಿಂಗಳು ಕಳೆದರೂ ಅನೇಕ OEMಗಳು ತಮ್ಮ ಫೋನುಗಳಿಗೆ ಈ ಆವೃತ್ತಿಯನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಅಗ್ಗದ ಬೆಲೆಗೆ ಸ್ಮಾರ್ಟ್ ಫೋನ್ ಮಾರುವ ಕೆಲವು ‘ಸಮಯ ಸಾಧಕ’ ಕಂಪೆನಿಗಳಂತೂ ತಾವು ಈ ಹಿಂದೆ ಮಾರಿದ ಫೋನುಗಳು ಈ ಹೊಸ ಆವೃತ್ತಿಯನ್ನು ಬೆಂಬಲಿಸುವುದೇ ಇಲ್ಲ ಎಂದು ಖಂಡತುಂಡವಾಗಿ ಹೇಳುತ್ತವೆ. ಕಾರ್ಯಚರಣ ವ್ಯವಸ್ಥೆ ಹೀಗೆ ಚದುರಿ ಹೋಗಿರುವುದರಿಂದ ಪ್ರಾದೇಶಿಕ ಭಾಷೆಗಳ ಅಳವಡಿಕೆ ಯಾರ ಜವಾಬ್ದಾರಿ ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲ.

ಪ್ರಾದೇಶಿಕ ಭಾಷೆಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸುವುದಕ್ಕೆ ಮತ್ತೊಂದು ದೊಡ್ಡ ಅಡಚಣೆ ಇದೆ. ಇದು ಆಂಡ್ರಾಯ್ಡ್ ಕಾರ್ಯಚರಣೆ ವ್ಯವಸ್ಥೆಗಷ್ಟೇ ಸೀಮಿತವಲ್ಲ. ಅದೆಂದರೆ, ಕಾರ್ಯಚರಣೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ತಿದ್ದಿ ಹೆಚ್ಚಿನ ಸವಲತ್ತುಗಳನ್ನು ಸೇರಿಸುವುದಕ್ಕೆ ಬಳಕೆದಾರರಿಗೆ ಹಾಗೂ ಡೆವಲಪರ್ ಗಳಿಗೆ ಅನುಮತಿ ಇಲ್ಲದಿರುವುದು. ಕನ್ನಡದ ಅಕ್ಷರಗಳನ್ನು ಮೂಡಿಸುವುದಕ್ಕೆ ಕನ್ನಡದ ಒಂದು ಫಾಂಟ್ ಅನುಸ್ಥಾಪಿಸಲು ನಿಮ್ಮ ಫೋನನ್ನು ‘ರೂಟ್’ ಮಾಡಬೇಕಾಗುತ್ತದೆ. ಅಂದರೆ ಕಾರ್ಯಚರಣೆ ವ್ಯವಸ್ಥೆ ಹಾಕಿರುವ ಬೀಗವನ್ನು ಮುರಿದು ಒಳ ಹೊಕ್ಕು ನಮಗೆ ಬೇಕಾದ ಬದಲಾವಣೆ ಮಾಡಬೇಕಾಗುತ್ತದೆ, ಏಕೆಂದರೆ ಮೊಬೈಲ್ ಫೋನ್ ಗಳಲ್ಲಿ ಬಳಕೆದಾರರಿಗಾಗಲಿ ಅಥವಾ ಡೆವಲಪರ್ (ಇಲ್ಲಿ ಅಪ್ಲಿಕೇಶನ್ ಡೆವಲಪರ್ ಎಂದು ಓದಿಕೊಳ್ಳಿ) ಗಳಿಗಾಗಲಿ ಬೀಗ (ಕೀ) ಲಭ್ಯವಿಲ್ಲ. ಸ್ಮಾರ್ಟ್ ಫೋನ್ ಗಳಲ್ಲಿ ಹೀಗೆ ಹೆಚ್ಚಿನ ಭದ್ರತೆಯನ್ನು ಒದಗಿಸುವುದಕ್ಕೆ ಹಲವು ಸಮರ್ಥನೆಗಳಿವೆ. ನಿಮ್ಮ ಡೆಸ್ಕ್ ಟಾಪ್ ಗಳಲ್ಲಿ ಸುಡೋ ಅನುಮತಿ ಇಲ್ಲವೇ ಅಡ್ ಮಿನಿಸ್ಟ್ರೇಶನ್ ಅನುಮತಿ ಇದ್ದಂತೆ ಮೊಬೈಲ್ ಗಳಲ್ಲೂ ಅನುಮತಿಸುವ ವ್ಯವಸ್ಥೆ ಇದ್ದರೆ ದುರುಳ ಅಪ್ಲಿಕೇಶನ್ ಗಳು ಬೇಕಾದ ನಂಬರಿಗೆ ಫೋನ್ ಮಾಡಿ ನಿಮಗೆ ಹಾರ್ಟ್ ಅಟ್ಯಾಕ್ ಆಗುವಷ್ಟು ಬಿಲ್ ಪೇರಿಸಬಹುದು. ಅಲ್ಲದೆ, ಸ್ಮಾರ್ಟ್ ಫೋನ್ ಪ್ರಾಥಮಿಕವಾಗಿ ಒಂದು ಫೋನ್. ಅದು ಅವ್ಯಾಹತವಾಗಿ ತನ್ನ ಟೆಲಿಫೋನ್ ನೆಟ್ ವರ್ಕ್ ಟವರುಗಳೊಂದಿಗೆ ಸಂಭಾಷಣೆ ನಡೆಸುತ್ತಲೇ ಇರಬೇಕು. ಇದರಲ್ಲೆಲ್ಲ ಕೈಯಾಡಿಸುವ ಅನುಮತಿ ನೀಡುವುದು ಅಪೇಕ್ಷಣೀಯವೂ ಅಲ್ಲ.

ಈ ಎಲ್ಲ ಕಾರಣಗಳಿಂದಾಗಿ ಬರಹ, ನುಡಿ, ಐ-ಬಸ್, SCIM ನಂತಹ ಹಲವು ಯೋಜನೆಗಳು ಡೆಸ್ಕ್ ಟಾಪ್ ಗಳಲ್ಲಿ ಕನ್ನಡದ ಅಳವಡಿಕೆಯನ್ನು ಸಾಧ್ಯವಾಗಿಸಿದ್ದರೂ ಸ್ಮಾರ್ಟ್ ಫೋನ್ ಗಳಲ್ಲಿ ಅದನ್ನು ಸಾಧ್ಯವಾಗಿಸಲು ಸಾಧ್ಯವಾಗಿಲ್ಲ.

ಇಲ್ಲಿಯವರೆಗೆ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡದ ಅಳವಡಿಕೆಯ ಸುತ್ತಲಿನ ಸವಾಲುಗಳನ್ನು ಕುರಿತು ವಿವರಿಸಿದ್ದಾಯ್ತು. ಈಗ ವಿವಿಧ ಸ್ಮಾರ್ಟ್ ಫೋನ್ ಕಾರ್ಯಚರಣೆ ವ್ಯವಸ್ಥೆಯಲ್ಲಿ ಕನ್ನಡದ ಬೆಂಬಲ ಯಾವ ಹಂತದಲ್ಲಿದೆ, ಕನ್ನಡವನ್ನು ಅವಳವಡಿಸುವುದರಲ್ಲಿನ ಗಮನಾರ್ಹ ಪ್ರಯೋಗಗಳನ್ನು ದಾಖಲಿಸುವ ಪ್ರಯತ್ನ ಮಾಡೋಣ.

ಆಂಡ್ರಾಯ್ಡ್ ನಲ್ಲಿ ಕನ್ನಡ
ಆಂಡ್ರಾಯ್ಡ್ ನಲ್ಲಿ ಕನ್ನಡದ ಬೆಂಬಲ ಬೆಳೆದು ಬಂದ ಬಗೆಯನ್ನು ಮೂರು ಹಂತಗಳಾಗಿ ವಿಂಗಡಿಸಬಹುದು.

೧. ಚೌಕಾಕಾರದ ಡಬ್ಬಿಗಳು
ಆಂಡ್ರಾಯ್ಡ್ ತನ್ನ ಪ್ರಾರಂಭದ ಆವೃತ್ತಿಗಳಲ್ಲೇ ಯುನಿಕೋಡ್ ಬೆಂಬಲವನ್ನು ಹೊಂದಿತ್ತಾದರೂ ಭಾರತೀಯ ಭಾಷೆಗಳೂ ಸೇರಿದಂತೆ ಅನೇಕ ಭಾಷೆಗಳ ಅಕ್ಷರಗಳನ್ನು ತೋರಿಸುವುದಕ್ಕೆ ಬೇಕಾದ ತಾಂತ್ರಿಕ ಕೌಶಲವನ್ನು ಹೊಂದಿರಲಿಲ್ಲ. ಯುನಿಕೋಡ್ ಶಿಷ್ಟಾಚಾರದ ಅನ್ವಯ ಇಂಗ್ಲೀಷ್ ಸೇರಿದಂತೆ ಅನೇಕ ಪ್ರಮುಖ ಅಂತರಾಷ್ಟ್ರೀಯ ಭಾಷೆಗಳಿಗಷ್ಟೇ ಬೆಂಬಲ ಲಭ್ಯವಿತ್ತು.

ಈ ಹಂತದಲ್ಲಿ ನಿಮ್ಮ ಫೋನುಗಳಲ್ಲಿ ಕನ್ನಡದ ಪಠ್ಯವನ್ನು ತೆರೆದರೆ ಅವು ಚೌಕಾಕಾರದ ಡಬ್ಬಿಗಳ ಸಾಲುಗಳಾಗಿ ಕಾಣುತ್ತಿದ್ದವು.

ಅನೇಕ ಸಾಹಸಿಗಳು ಕಾರ್ಯಚರಣೆ ವ್ಯವಸ್ಥೆಯ ಬೀಗವನ್ನು ಒಡೆದು, ತಮ್ಮ ಫೋನುಗಳನ್ನು ರೂಟ್ ಮಾಡಿ ಕೇದಗೆ, ಲೋಹಿತ್ ಕನ್ನಡದಂತಹ ಫ್ರೀ ಟೈಪ್ ಫಾಂಟುಗಳನ್ನು ಅನುಸ್ಥಾಪಿಸುವ ಪ್ರಯತ್ನ ಮಾಡಿದರು. ಆಂಡ್ರಾಯ್ಡ್ ನಲ್ಲಿ ಯುನಿಕೋಡ್ ಬೆಂಬಲ out-of-the-box ಲಭ್ಯವಿದ್ದುದರಿಂದ ಕನ್ನಡದ ಯುನಿಕೋಡ್ ಫಾಂಟ್ ಕನ್ನಡದ ಅಕ್ಷರಗಳನ್ನು ತೋರುವ ಪ್ರಯತ್ನವನ್ನು ಮಾಡಿತು. ಆದರೆ ಕನ್ನಡದಲ್ಲಿರುವ ಒತ್ತಕ್ಷರ, ತಲೆ ಕಟ್ಟು- ಕೊಂಬುಗಳನ್ನು ಸಮರ್ಪಕವಾಗಿ ಸಂಯೋಜಿಸುವ ತರ್ಕವಿಲ್ಲದೆ ಒತ್ತು-ಕೊಂಬುಗಳೆಲ್ಲ ಸ್ಥಾನ ಪಲ್ಲಟಗೊಂಡಿರುತ್ತಿದ್ದವು. ಹೀಗಾಗಿ ಕನ್ನಡದ ಫಾಂಟ್ ಅನುಸ್ಥಾಪಿಸಿದರೂ ಕನ್ನಡ ಸರಿಯಾಗಿ ಮೂಡುತ್ತಿರಲಿಲ್ಲ.

೨. ಯುನಿಕೋಡ್ ಶಿಷ್ಟತೆಯ ಅನುಷ್ಟಾನ
ಆಂಡ್ರಾಯ್ಡ್ ೨.೩(ಜಿಂಜರ್ ಬ್ರೆಡ್) ಆವೃತ್ತಿಯಲ್ಲಿ ಹಲವು ಭಾಷೆಗಳಿಗೆ ಕಾಂಪ್ಲೆಕ್ಸ್ ಸ್ಕ್ರಿಪ್ಟ್ ರೆಂಡರಿಂಗ್ – ಸಂಯುಕ್ತ ಅಕ್ಷರಗಳ ಜೋಡಣೆಯ ಬೆಂಬಲ ಲಭ್ಯವಾಯಿತು. ಆದರೆ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳು ಈ ಬೆಂಬಲವನ್ನು ಪಡೆದಿರಲಿಲ್ಲ. ಬ್ರೌಸರ್ ತಂತ್ರಾಂಶದಲ್ಲಿ ಬಳಸುವ ವೆಬ್ ಕಿಟ್ ನಲ್ಲೂ ಸಹ ಭಾರತೀಯ ಭಾಷೆಗಳ ಸಂಯುಕ್ತ ಅಕ್ಷರಗಳ ಜೋಡಣೆಯ ಬೆಂಬಲ ಲಭ್ಯವಿರಲಿಲ್ಲ. ವೆಬ್ ಫಾಂಟ್ ಬಳಸಿಯೂ ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಸಾಧ್ಯವಿರಲಿಲ್ಲ.

೩. ಸಂಪೂರ್ಣ ಬೆಂಬಲ
ಆಂಡ್ರಾಯ್ಡ್ ೪ (ಐಸ್ ಕ್ರೀಮ್ ಸ್ಯಾಂಡ್ ವಿಚ್) ನಲ್ಲಿ ದೇವನಾಗರಿ, ಬೆಂಗಾಲಿ ಹಾಗೂ ತಮಿಳು ಭಾಷೆಗಳಿಗೆ ಬೆಂಬಲವನ್ನು ಸೇರಿಸಲಾಯ್ತು.

ಆಂಡ್ರಾಯ್ಡ್ ೪.೧ (ಜೆಲ್ಲಿ ಬೀನ್) ನಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳನ್ನು ತೋರುವುದಕ್ಕೆ ಬೆಂಬಲವನ್ನು ಅಳವಡಿಸಲಾಯ್ತು. ಆದರೆ ಆಂಡ್ರಾಯ್ಡ್ ನ ರೊಬೊಟೋ ಫಾಂಟಿನಲ್ಲಿ ಭಾರತೀಯ ಭಾಷೆಗಳನ್ನು ಬೆಂಬಲಿಸುವ ಗ್ಲಿಫ್ ಗಳನ್ನು ಅಳವಡಿಸಲಾಗಿಲ್ಲ. ಹೆಚ್ಚುವರಿ ಫಾಂಟುಗಳನ್ನು ಸೇರಿಸುವ ಅನುಮತಿ ಇಲ್ಲದಿರುವುದರಿಂದ ಈ ಭಾಷೆಗಳನ್ನು ಸಂಪೂರ್ಣ ಬೆಂಬಲಿಸುವ ಜವಾಬ್ದಾರಿ OEMಗಳ ಮೇಲೆ ಬೀಳುತ್ತದೆ. ಹೀಗಾಗಿಯೇ ಜೆಲ್ಲಿ ಬೀನ್ ಆವೃತ್ತಿ ಇರುವ ಸ್ಯಾಮ್ ಸಂಗ್ ಫೋನ್ ಗಳಲ್ಲಿ ಭಾರತೀಯ ಭಾಷೆಗಳು ಚೆನ್ನಾಗಿ ಮೂಡುತ್ತವೆಯಾದರೂ ಇದೇ ಆವೃತ್ತಿಯನ್ನು ಹೊಂದಿರುವ ಎಲ್.ಜಿ ಮೊಬೈಲುಗಳಲ್ಲಿ ಕನ್ನಡ ಮೂಡುವುದಿಲ್ಲ.

ಸ್ಯಾಮ್ ಸಂಗ್ ತಾನು ಭಾರತದಲ್ಲಿ ಮಾರುವ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲಷ್ಟೇ ಭಾರತೀಯ ಭಾಷೆಗಳ ಫಾಂಟುಗಳನ್ನು ಸೇರಿಸುವುದರಿಂದ ಬೇರೆ ದೇಶಗಳಲ್ಲಿ ಕೊಂಡ ಮೊಬೈಲ್, ಟ್ಯಾಬ್ಲೆಟುಗಳಲ್ಲಿ ಕನ್ನಡ ಬೆಂಬಲ ಇರುವುದಿಲ್ಲ.

(ಈ ಚಿತ್ರದಲ್ಲಿ ಅಕ್ಷರಗಳ ಜಾಗದಲ್ಲಿ ಡಬ್ಬಿಗಳು ಕಾಣದಿದ್ದರೂ ಕನ್ನಡದ ಅಕ್ಷರಗಳನ್ನು ಬೆಂಬಲಿಸುವ ಗ್ಲಿಫ್ ಗಳು ಫಾಂಟಿನಲ್ಲಿ ಇಲ್ಲದ ಕಾರಣ ಕನ್ನಡ ಕಾಣುತ್ತಿಲ್ಲ. ಆದರೆ ‘.’ (ಪೂರ್ಣ ವಿರಾಮ) ಕಾಣುತ್ತಿದೆ 🙂 )

ನಿಮ್ಮ ಮೊಬೈಲ್ ತಯಾರಕ ಕನ್ನಡ ಬೆಂಬಲಿಸುವ ಫಾಂಟ್ ಅಳವಡಿಸಿರದಿದ್ದರೆ ಜೆಲ್ಲಿ ಬೀನ್ ಆವೃತ್ತಿಯಲ್ಲೂ ಕನ್ನಡ ಕಾಣುವುದಿಲ್ಲ. ಈಗ ಒಂದು ವೇಳೆ ನಿಮ್ಮ ಮೊಬೈಲನ್ನು ರೂಟ್ ಮಾಡಿ ಕನ್ನಡವನ್ನು ಬೆಂಬಲಿಸುವ ಫಾಂಟ್ (ಉದಾಹರಣೆಗೆ ಲೋಹಿತ್ ಕನ್ನಡ, ಕೇದಗೆ) ಅಳವಡಿಸಿದರೆ ನಿಮ್ಮ ಮೊಬೈಲಿನಲ್ಲಿ ಕನ್ನಡ ಚೆಂದವಾಗಿ ಮೂಡುತ್ತದೆ.

ಆಂಡ್ರಾಯ್ಡ್ ಫೋನುಗಳಲ್ಲಿ ಕನ್ನಡವನ್ನು ಅಳವಡಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಒಪೆರಾ ಉಪಾಯ
ಅಕ್ಷರಗಳನ್ನು ಫಾಂಟುಗಳ ಮೂಲಕ ಪರದೆಯ ಮೇಲೆ ಬರೆಯುವ ವಿಧಾನವನ್ನೇ ಕೈ ಬಿಟ್ಟು ಅಕ್ಷರಗಳನ್ನು, ಪದಗಳನ್ನು, ಒಟ್ಟಾರೆಯಾಗಿ ಇಡೀ ವೆಬ್ ಪೇಜನ್ನು ಒಂದು ಫೋಟೊ ಇಲ್ಲವೇ ಸ್ಕ್ಯಾನ್ ಮಾಡಿದ ಹಾಳೆಯಾಗಿ ಪರಿಗಣಿಸಿ ಅದನ್ನು ಹಾಗೆಯೇ ಪರದೆಯ ಮೇಲೆ ಮೂಡಿಸುವ ವಿಧಾನವನ್ನು ಒಪೆರಾ ಸಂಸ್ಥೆಯ ಮೊಬೈಲ್ ಬ್ರೌಸರ್ ಮಾಡುತ್ತದೆ [1].

ಒಪೆರಾ ಮೊಬೈಲ್ ಬ್ರೌಸರಿನಲ್ಲಿ ನೀವು ತೆರೆಯುವ ವೆಬ್ ಪುಟ ಒಪೆರಾದ ಸರ್ವರಿನಲ್ಲಿ ಹಾದು ಬಿಟ್ ಮ್ಯಾಪ್ ರೂಪದಲ್ಲಿ ನಿಮ್ಮ ಮೊಬೈಲಿಗೆ ಬರುವುದರಿಂದ ಕನ್ನಡವಿರಲಿ ಯಾವುದೇ ಭಾಷೆಯ ವೆಬ್ ಪುಟವನ್ನಾದರೂ ನೀವು ಈ ಬ್ರೌಸರಿನಲ್ಲಿ ಓದಬಹುದು. ಆದರೆ ಇದರಲ್ಲಿ ನೀವು ಪಠ್ಯವನ್ನು ಕಾಪಿ ಮಾಡಲು ಬರುವುದಿಲ್ಲ. ಮುದ್ರಿತ ದಿನ ಪತ್ರಿಕೆಯನ್ನು ಓದಿದಂತೆ ನೀವು ಕನ್ನಡದ ಪುಟಗಳನ್ನು ಓದಬಹುದು.

ಆಸ್ಕೀ ಶರಣಂ ಗಚ್ಚಾಮಿ
ಯುನಿಕೋಡ್ ಫಾಂಟಿನಲ್ಲಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಸಂಯುಕ್ತ ಅಕ್ಷರಗ ಜೋಡಣೆಯ ಬೆಂಬಲ ಇಲ್ಲದಿದ್ದಾಗ ಆಸ್ಕೀ ಎನ್ಕೋಡಿಂಗ್ ಬಳಸಿ ಕನ್ನಡದ ಪಠ್ಯವನ್ನು ತೋರುವ ಪ್ರಯತ್ನಗಳು ನಡೆದವು. ಬರಹ, ನುಡಿ ತಂತ್ರಾಂಶಗಳು ತಮ್ಮ ಪ್ರಾರಂಭದ ಹಂತದಲ್ಲಿ ಆಸ್ಕೀ ಎನ್ಕೋಡಿಂಗ್ ಹಾಗೂ ಆಸ್ಕೀ ಕನ್ನಡ ಫಾಂಟುಗಳನ್ನು ಬಳಸಿದಂತೆ ಕೆಲವು ಆಂಡ್ರಾಯ್ಡ್ ಅಪ್ಲಿಕೇಶನ್ ಗಳು ಆಸ್ಕೀ ಎನ್ಕೋಡಿಂಗ್ ಹಾಗೂ ಆಸ್ಕೀ ಕನ್ನಡ ಫಾಂಟುಗಳನ್ನು ಬಳಸಿಕೊಂಡು ಕನ್ನಡ ಪಠ್ಯವನ್ನು ಬೆಂಬಲಿಸಿದವು. ಉದಾಹರಣೆಗೆ, ಹಂಸನಾದ ಆಂಡ್ರಾಯ್ಡ್ ಅಪ್ಲಿಕೇಶನ್ [2](ಡಿಸ್ ಕ್ಲೇಮರ್:‌ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವಲ್ಲಿ ಈ ಪ್ರಬಂಧದ ಲೇಖಕ ಕೆಲಸ ಮಾಡಿರುತ್ತಾನೆ. ), ಕನ್ನಡದಲ್ಲಿ ಭಗವದ್ಗೀತೆ [3].

ಇರೋ ಟೈರಿಗೆ ಹವಾ ತುಂಬು
ಆಂಡ್ರಾಯ್ಡ್ ತನ್ನ ಸ್ಕಿಯಾ ರೆಂಡರಿಂಗ್ ಇಂಜಿನ್ನಿನಲ್ಲಿ ಸಂಯುಕ್ತ ಅಕ್ಷರ ಜೋಡಣೆಯ ಬೆಂಬಲವನ್ನು ಎಂದು ನೀಡುವುದೋ ಎನ್ನುವುದು ನಿಖರವಾಗಿ ತಿಳಿಯದಿದ್ದ ಸಮಯದಲ್ಲಿ ಅದಾಗಲೇ ಲಿನಕ್ಸಿನಲ್ಲಿ ಕನ್ನಡ ಹಾಗೂ ಇತರೆ ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಬಳಸಲಾಗುತ್ತಿದ್ದ ಹಾರ್ಫ್ ಬಜ್ ರೆಂಡರಿಂಗ್ ಇಂಜಿನ್ ನ್ನು ಆಂಡ್ರಾಯ್ಡಿಗೆ ಪೋರ್ಟ್ ಮಾಡುವ ಪ್ರಯತ್ನಗಳು ನಡೆದವು.

ಐಐಎಸ್ಸಿ(Indian Insititute of Science)ಯ ಶಿವಕುಮಾರ್ ಎಚ್. ಆರ್ ಹಾರ್ಫ್ ಬಜ್-ಎನ್.ಜಿ ಲೈಬ್ರರಿಯನ್ನು ಆಂಡ್ರಾಯ್ಡಿಗೆ ಪೋರ್ಟ್ ಮಾಡಿ, ಅದರಲ್ಲಿ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಅಳವಡಿಸುವಲ್ಲಿ ಯಶಸ್ವಿಯಾದರು. ತಮ್ಮ ಪ್ರಾಜೆಕ್ಟನ್ನು [4] ಓಪನ್ ಸೋರ್ಸ್ ಮಾಡುವ ಮೂಲಕ ಅದು ಮುಕ್ತವಾಗಿ ಇತರ ಡೆವಲಪರ್ ಗಳಿಗೆ ಲಭ್ಯವಾಗುವಂತೆ ಮಾಡಿದರು. ಆದರೆ ಈ ಲೈಬರಿ ಅಪ್ಲಿಕೇಶನ್ ಹಂತದಲ್ಲಷ್ಟೇ ಬಳಸಲು ಸಾಧ್ಯವಿದೆಯಾದ್ದರಿಂದ ಇಡೀ ಫೋನಿಗೆ ಕನ್ನಡ ಬೆಂಬಲ ಒದಗಿಸಲು ಇದರಿಂದ ಸಾಧ್ಯವಿಲ್ಲ.

ಆಪಲ್ ಐ-ಓಸ್ ನಲ್ಲಿ ಕನ್ನಡದ ಕಲರವ
ಆಪಲ್ ಕಂಪನಿಯಯವರ ಮೊಬೈಲ್(ಐಫೋನ್) ಮತ್ತು ಟ್ಯಾಬ್ಲೆಟ್(ಐಪ್ಯಾಡ್) ಗಳಲ್ಲಿ ಇರುವ ಐ-ಓಸ್ ನಲ್ಲಿ ಕನ್ನಡದ ರೆಂಡರಿಂಗ್ ತುಂಬಾನೇ ಚೆನ್ನಾಗಿದೆ. ಜೂನ್ ೨೦೧೦ ರಲ್ಲಿ ಬಿಡುಗಡೆಯಾದ ಐ-ಓಸ್ ನ ೪ನೇ ಆವೃತ್ತಿಯಲ್ಲಿ, ಪೂರ್ಣ ಪ್ರಮಾಣದ ಕನ್ನಡ ಯೂನಿಕೋಡ್ ಅನ್ನು ಆಪಲ್ ತನ್ನ ಮೊಬೈಲುಗಳಲ್ಲಿ ಅಳವಡಿಸಿದೆ.

ಈ ಹಿಂದೆ ಹೇಳಿದಂತೆ ಆಪಲ್ ತನ್ನೆಲ್ಲಾ ಡಿವೈಸುಗಳಿಗೆ ತಾನೇ ಕಾರ್ಯಚರಣೆ ವ್ಯವಸ್ಥೆಯನ್ನು ಬಿಡುಗಡೆ ಮಾಡುವುದರಿಂದ ಬಳಕೆದಾರರು ಹೊಸ ಆವೃತ್ತಿಗಳಿಗೆ ಬಲು ಬೇಗನೆ ಅಪ್ ಗ್ರೇಡ್ ಆಗಬಹುದು.

ಹಾಗಾಗಿ, ಕಡತಗಳಿರಲಿ, ಅಥವಾ ಹಾಡುಗಳ ಫೈಲ್ ಹೆಸರಿನಲ್ಲಿರುವ ಕನ್ನಡದ ಅಕ್ಷರಗಳಿರಲಿ, ತುಂಬಾನೇ ಚೆನ್ನಾಗಿ ಕಾಣಿಸುತ್ತವೆ.

ವಿಂಡೋಸ್ ೮ ರಲ್ಲಿ ಕನ್ನಡ
ಮೊಬೈಲ್ ಕ್ಷೇತ್ರದಲ್ಲಿ ಕಳೆದುಕೊಂಡ ತನ್ನ ಛಾಪನ್ನು ಮೂಡಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಮೈಕ್ರೋಸಾಫ್ಟಿನವರು ಡೆಸ್ಕಟಾಪ್ ಮತ್ತು ಟ್ಯಾಬ್ಲೆಟ್ಟುಗಳಿಗೆ ವಿಂಡೋಸ್ ೮ ಮತ್ತು ಮೊಬೈಲ್ ಫೋನುಗಳಿಗೆ ವಿಂಡೋಸ್ ಫೋನ್ ೮ ಬಿಡುಗಡೆ ಮಾಡಿದ್ದಾರೆ. ಸಂತಸದ ಸುದ್ದಿಯೆಂದರೆ, ವಿಂಡೋಸ್ ೮ ರಲ್ಲಿ ಕನ್ನಡದ ಅಳವಡಿಕೆ ಪೂರ್ಣ ಪ್ರಮಾಣದಲ್ಲಿದೆ. ಅಂದರೆ, ನೀವು ಕನ್ನಡದಲ್ಲಿ ಓದಲೂ ಬಹುದು, ಬರೆಯಲೂ ಬಹುದು. ಮೈಕ್ರೋಸಾಫ್ಟಿನವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ವಿಂಡೋಸ್ ೮ರಲ್ಲಿ ಸಣ್ಣ ಪ್ರಮಾಣ ಕನ್ನಡದ ಹೊದಿಕೆಯನ್ನೂ ಕೂಡ ನೀಡಿದ್ದಾರೆ. ಆದರೆ, ವಿಂಡೋಸ್ ಫೋನ್ ೮ ರಲ್ಲಿ ಕನ್ನಡವನ್ನು ಓದುವುದಕ್ಕೆ ಮಾತ್ರವೇ ಸಾಧ್ಯವಿದೆ. ಕನ್ನಡದಲ್ಲಿ ಬರೆಯುವ ಸೌಲಭ್ಯವನ್ನು ಇನ್ನೂ ಅಳವಡಿಸಲಾಗಿಲ್ಲ.

ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ
ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಓದಲು ಸಾಧ್ಯವಾದರಷ್ಟೇ ಸಾಕೇ? ಕನ್ನಡ ಟೈಪ್ ಮಾಡಲು ಸಾಧ್ಯವಾಗಬಾರದೇ? ಕನ್ನಡದಲ್ಲಿ ಟ್ವೀಟ್ ಮಾಡಲು, ಫೇಸ್ ಬುಕ್ ಸ್ಟೇಟಸ್ ಅಪ್ ಡೇಟ್ ಮಾಡಲು, ಇ ಮೇಲ್ ಗೆ ಉತ್ತರಿಸಲು ಸಾಧ್ಯವಾಗಬೇಕಲ್ಲವೇ?
ಯುನಿಕೋಡ್ ಕನ್ನಡ ಸ್ಮಾರ್ಟ್ ಫೋನಿನಲ್ಲಿ ಸರಿಯಾಗಿ ಮೂಡುವುದಕ್ಕೆ ಸಾಧ್ಯವಾದಾಗ ಬಳಕೆದಾರರು ಕನ್ನಡದಲ್ಲಿ ಟೈಪ್ ಮಾಡಲು ನೆರವಾಗುವ ತಂತ್ರಾಂಶಗಳಿಗಾಗಿ ಶೋಧಿಸ ತೊಡಗಿದರು. ಎನಿಸಾಫ್ಟ್ ಎಂಬ ಸಾಫ್ಟ್ ಕಿಬೋರ್ಡ್ ಅಪ್ಲಿಕೇಶನ್ನಿಗೆ ಕನ್ನಡ ಪ್ಲಗಿನ್ [5],ಸ್ಪರ್ಶ್ ಕೀಬೋರ್ಡ್[6] , ಪಾಣಿನಿ ಕೀಬೋರ್ಡ್ [7], ಅಡಾಪ್ಟ್ ಟೆಕ್ಸ್ಟ್ ಟ್ಯಾಬ್ಲೆಟ್ ಕೀಬೋರ್ಡ್ [8](ಇದರಲ್ಲಿ ಡಿಕ್ಷನರಿ ಹಾಗೂ ಸಜೆಶನ್ ಸೌಕರ್ಯಗಳಿವೆ) ಗಳು ಗೂಗಲ್ ಪ್ಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಐ ಓಎಸ್ ನಲ್ಲಿ ಕನ್ನಡ ಅಕ್ಷರಗಳು ಚೆಂದವಾಗಿ ಮೂಡುತ್ತವೆಯಾದರೂಯೂ, ಇಡೀ ಫೋನಿನಲ್ಲಿ ಕನ್ನಡದಲ್ಲಿಯೇ ನೇರವಾಗಿ ಟೈಪ್ ಮಾಡುವ ಸೌಲಭ್ಯವನ್ನು ಇಲ್ಲಿಯವರೆಗೂ ನೀಡಿಲ್ಲ. ಆದರೆ, ಕನ್ನಡದಲ್ಲಿ ಟೈಪ್ ಮಾಡಲು ಅನುಕೂಲ ಮಾಡಿಕೊಡುವಂತಹ ಅಪ್ಲಿಕೇಶನ್(ಆಪ್)ಗಳು ಆಪಲ್-ಸ್ಟೋರಿನಲ್ಲಿ ಲಭ್ಯವಿದೆ.
ಉದಾ:- Kannada for iPhone [9], iTransliterate for iPhone [10].

ವಿಂಡೋಸ್ ಫೋನ್ ೮ರಲ್ಲಿ, ಆಪಲ್ ಐ-ಓಸ್ ನಲ್ಲಿರುವಂತೆ, ಕನ್ನಡದ ರೆಂಡರಿಂಗ್ ಮಾತ್ರವೇ ಲಭ್ಯವಿದೆ. ಅಂದರೆ, ಕನ್ನಡದ ಪಠ್ಯವನ್ನು ಓದಲು ಮಾತ್ರವೇ ಸಾಧ್ಯವಿದೆ. ಆದರೆ ಬರೆಯಲು ಸಾಧ್ಯವಾಗಿಸುವಂತಹ ಸರಳ ಸಾಧನಗಳು ಇನ್ನೂ ಬಂದಿಲ್ಲ.

ಮುಂದಿನ ದಾರಿ
ಸ್ಮಾರ್ಟ್ ಫೋನ್ ಗಳು ಹಾಗೂ ಟ್ಯಾಬ್ಲೆಟುಗಳು ಮುಂದಿನ ಹಲವು ವರ್ಷಗಳನ್ನು ಆಳುವುದಂತೂ ಸತ್ಯ. ಡೆಸ್ಕ್ ಟಾಪ್, ಲ್ಯಾಪ್ ಟಾಪುಗಳಂತೆ ಇವುಗಳ ಬಳಕೆ ಸೀಮಿತವಾದುದಲ್ಲ. ದಿನದ ಬಹು ಸಮಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕಳೆಯುವ ಇಂದಿನ ಜನ ಸಮೂಹಕ್ಕೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಗಳು ಜೇಬಿನಲ್ಲಿರುವ ಪರ್ಸಿನಷ್ಟೇ ಅನಿವಾರ್ಯವಾಗುವುದು ನಿಶ್ಚಿತ.

ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡದ ಅಳವಡಿಕೆ ಎನ್ನುವುದು ಕೇವಲ ಕನ್ನಡ ಓದಲಿಕ್ಕೆ ಹಾಗೂ ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ ಬೆಂಬಲ ನೀಡುವುದಕ್ಕೆ ಸೀಮಿತವಾಗಬಾರದು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಿಗೆ ಪ್ರತ್ಯೇಕ ಲೊಕೇಲ್ ಗಳ ಬೆಂಬಲ ಲಭ್ಯವಾಗಬೇಕು. ನಮ್ಮ ಫೋನ್ ಬುಕ್ಕಿನಲ್ಲಿ ಕನ್ನಡದಲ್ಲಿರುವ ಹೆಸರುಗಳನ್ನು ಅಕಾರಾದಿಯಾಗಿ ಪಟ್ಟಿ ಮಾಡುವುದಕ್ಕೆ ಸಾಧ್ಯವಾಗಬೇಕು, ದಿನಾಂಕಗಳನ್ನು, ಸಮಯವನ್ನು ನಮ್ಮ ಭಾಷೆಯಲ್ಲಿ ಪಡೆಯುವಂತಾಗಬೇಕು, ಕಿಬೋರ್ಡ್ ಗಳಲ್ಲಿ ಕನ್ನಡದ ಪದಗಳಿಗೆ ಸಜೆಶನ್ ಬರಬೇಕು, ಸ್ಪೆಲ್ ಚೆಕರ್ ಕನ್ನಡದಲ್ಲಿ ಲಭ್ಯವಾಗಬೇಕು. ಹತ್ತು ಹಲವು ಹೋರಾಟಗಳಿಂದ ಡೆಸ್ಕ್ ಟಾಪ್ ಗಳಲ್ಲಿ ಸಾಧ್ಯವಾಗಿರುವ ಕನ್ನಡದ ಅಳವಡಿಕೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲಿ ಲಭ್ಯವಾಗಬೇಕು.

ಇದಕ್ಕೆ ಮೊಬೈಲ್ ಕಾರ್ಯಚರಣೆ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಗಳು, OEMಗಳ ಮೇಲೆ ಒತ್ತಡ ಹೇರುವುದನ್ನು ಬಿಟ್ಟರೆ ಬೇರೆ ಸುಲಭದ ಮಾರ್ಗಗಳಿಲ್ಲ. ಭಾರತದಂತಹ ಮೊಬೈಲ್ ಸ್ನೇಹಿ ದೇಶದ ಗ್ರಾಹಕರನ್ನು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಸ್ಯಾಮ್ ಸಂಗ್ ನಂತಹ ಕಂಪೆನಿಗಳು ಭಾರತೀಯ ಭಾಷೆಗಳನ್ನು ಬೆಂಬಲಿಸುವುದಕ್ಕೆ ಹೆಚ್ಚಿನ ಮುತುವರ್ಜಿ ತೋರುತ್ತಿವೆ. ಇದೇ ಮನಸ್ಥಿತಿ ಮುಂದುವರೆದರೆ ಈ ವರ್ಷದ ಸ್ವಾತಂತ್ರ ದಿನಾಚರಣೆಯ ವೇಳೆಗೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ಗಳಲ್ಲಿ ಕನ್ನಡದ ಅಳವಡಿಕೆ ಬಹುಮಟ್ಟಿಗೆ ಯಶಸ್ವಿಯಾಗಬಹುದು.

(ಐಓಎಸ್, ವಿಂಡೋಸ್ ೮ ಕುರಿತು ಮಾಹಿತಿ ಒದಗಿಸಿದ ಸುನಿಲ್ ಜಯಪ್ರಕಾಶರಿಗೆ ಧನ್ಯವಾದಗಳು.)

ಬಾಹ್ಯಕೊಂಡಿಗಳು

1. ಒಪೆರಾ ಮಿನಿ ಬ್ರೌಸರ್ ನಲ್ಲಿ ಕನ್ನಡ
http://veerasundar.com/blog/2010/08/regional-font-support-in-opera-mini/

2. ಹಂಸನಾದ ಆಂಡ್ರಾಯ್ಡ್ ಅಪ್ಲಿಕೇಶನ್
(ಡಿಸ್ ಕ್ಲೇಮರ್:‌ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವಲ್ಲಿ ಈ ಪ್ರಬಂಧದ ಲೇಖಕ ಕೆಲಸ ಮಾಡಿರುತ್ತಾನೆ. ) https://play.google.com/store/apps/details?id=com.saaranga.hamsanaadatest&feature=search_result#?t=W251bGwsMSwyLDEsImNvbS5zYWFyYW5nYS5oYW1zYW5hYWRhdGVzdCJd

3. ಕನ್ನಡದಲ್ಲಿ ಭಗವದ್ಗೀತೆ
https://play.google.com/store/apps/details?id=com.utl.bhagavadgita&feature=search_result#?t=W251bGwsMSwxLDEsImNvbS51dGwuYmhhZ2F2YWRnaXRhIl0

4. Indic text renderer
https://code.google.com/p/indic-text-renderer/

5. ಎನಿ ಸಾಫ್ಟ್ ಕೀಬೋರ್ಡ್ ಕನ್ನಡ ಪ್ಲಗಿನ್
https://play.google.com/store/apps/details?id=com.anysoftkeyboard.sriandroid.kannada&feature=search_result

6. ಸ್ಪರ್ಶ್ ಕೀಬೋರ್ಡ್
https://play.google.com/store/apps/details?id=com.sparsh.inputmethod&feature=search_result

7. ಪಾಣಿನಿ ಕೀಬೋರ್ಡ್
https://play.google.com/store/apps/details?id=com.paninikeypad.kannada&feature=search_result

8. ಅಡಾಪ್ಟೆಕ್ಸ್ಟ್ ಟ್ಯಾಬ್ಲೆಟ್ ಕೀಬೋರ್ಡ್
https://play.google.com/store/apps/details?id=com.kpt.adaptxt.tablet.beta&feature=search_result#?t=W251bGwsMSwxLDEsImNvbS5rcHQuYWRhcHR4dC50YWJsZXQuYmV0YSJd

9. Kannada for iphone
https://itunes.apple.com/us/app/kannada-for-iphone/id419341024?mt=8

10. Transliterate for iphone
https://itunes.apple.com/in/app/itransliterate/id324679389?mt=8

ಲೇಖಕ: ಸುಪ್ರೀತ್.ಕೆ.ಎಸ್

ಬೆಂಗಳೂರಿನ ಕಂಪೆನಿಯೊಂದರಲ್ಲಿ ಮೊಬೈಲ್ ಅಪ್ಲಿಕೇಶನ್ ಡೆವಲಪರ್. ಕನ್ನಡ ಸಾಹಿತ್ಯ, ಜಾಗತಿಕ ಸಿನೆಮ, ವಿಜ್ಞಾನ ಬರವಣಿಗೆ, ಕನ್ನಡ ತಂತ್ರಾಂಶ ಅಭಿವೃದ್ಧಿ ಇವು ಆಸಕ್ತಿಯ ಕ್ಷೇತ್ರಗಳು. ಕಾಲೇಜಿನಲ್ಲಿರುವಾಗ ಮಾಸಪತ್ರಿಕೆಯೊಂದನ್ನು ಎರಡು ವರ್ಷಗಳವರೆಗೆ ಸಂಪಾದಿಸಿದ, ಕಿರು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡ ಅನುಭವಗಳಿವೆ.