Posted on Aug 5, 2011 in 2011, ale | 0 comments

ಗಣಕಯಂತ್ರ ಹಾಗೂ ಮಾಹಿತಿ ತಂತ್ರಜ್ನಾನದ ಅಲೆಗಳು ಎಲ್ಲಾ ವರ್ಗದ ಜನರ ತಲುಪಿದಂತೆ, ಅದರ ಸುರಕ್ಷೆಯ ಬಗೆಗಿನ ಅರಿವು ಎಲ್ಲರನ್ನು ತಲುಪಿಲ್ಲ. ಗಣಕಯಂತ್ರ ನಮ್ಮ ದಿನನಿತ್ಯದ ಬೇಕು ಬೇಡಗಳನ್ನು ಸುಲಭವಾಗಿ ಪೂರೈಸುವುದರ ಜೊತೆಗೆ, ಅದರ ಸುರಕ್ಷೆಯ ಕೊರತೆಯಿಂದಾಗಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಬೇರೆಯವರಿಗೆ ರವಾನಿಸುತ್ತಿದೆ. ತಂತ್ರಜ್ನಾನವು ಬೆಳೆದಂತೆ ಮುಖ್ಯಮಾಹಿತಿಗಳನ್ನು ಅಕ್ರಮವಾಗಿ ಸಂಪಾದಿಸುವ ಜನರು ಹಾಗು ಅದಕ್ಕೆ ಸಹಾಯಕಾರಿಯಾಗುವ ತಂತ್ರಾಂಶಗಳು ಮೂಡುತ್ತಿವೆ. ಇವೆಲ್ಲದಕ್ಕು ಕಡಿವಾಣ ಹಾಕಲು ಹಾಗು ನಿಮ್ಮ ವೈಯಕ್ತಿಕ ಗಣಕತಂತ್ರಗಳ ರಕ್ಷಿಸಲು ಸಹಾಯವಾಗುವ ಕೆಲವು ಮಾರ್ಗಗಳನ್ನು ಹಂಚಿಕ್ಕೊಳ್ಳುವುದು ಈ ಅಲೆಯ ಉದ್ದೇಶ.

ವೈಯಕ್ತಿಕ ಗಣಕತಂತ್ರಗಳನ್ನು (Personal Computer) ಉಪಯೋಗಿಸಲು ತಂತ್ರಜ್ನಾನ/ತಂತ್ರಾಂಶಗಳ ಗೊತ್ತಿಲ್ಲದ ಸಾಮಾನ್ಯ ವರ್ಗದ ಜನರಿಂದಲೂ ಸಾಧ್ಯವಾಗಿರುವ ಇತ್ತೀಚಿನ ದಿನಗಳಲ್ಲಿ ಸುರಕ್ಷೆಯ ಬಗೆಗಿನ ತಿಳುವಳಿಕೆ ಇಲ್ಲವಾಗಿದೆ. ಆದುದರಿಂದ ಮನೆಗಳಲ್ಲಿ ಬಳಸುವ ಗಣಕತಂತ್ರಗಳು ಸುಲಭವಾಗಿ attackerಗಳ ಗುರಿಯಾಗಿವೆ. ಜನ ಸಾಮಾನ್ಯರು ಎಲ್ಲವನ್ನು ನಂಬಿಕೆಯ ನೇರವಾದ ದೃಷ್ಟಿಕೋನದಲ್ಲಿ ನೋಡುತ್ತಾರೆ. ಆದರೆ attackerಗಳ ಮನೋಸ್ಥಿತಿ ಅದರ ತದ್ವಿರುದ್ಧವಾಗಿರುತ್ತದೆ. attackerಗಳು ಯಾವಾಗಲು ಯಾವುದಾದರು ತಂತ್ರಾಂಶಗಳ ಲೋಪ(vulnerability)ಗಳು, ಅಕ್ರಮ ಪ್ರವೇಶದ್ವಾರಗಳ ಇರುವಿಕೆಗೆ ಶೋಧಿಸುತ್ತಿರುತ್ತಾರೆ. ಈ ಕೆಲಸಗಳನ್ನು ಸುಲಭವಾಗಿಸಲು ಅನೇಕ attackerಗಳು ಈಗಾಗಲೇ ಸಿದ್ಧ ಪಡಿಸಿರುವ ತಂತ್ರಾಂಶಗಳ ಮೊರೆ ಹೋಗುತ್ತಾರೆ. ಇವೆಲ್ಲವನ್ನು ನಿಯಂತ್ರಿಸಲು ಸುರಕ್ಷೆಯ ಅರಿವಿನ ಅಗತ್ಯವಿದೆ. ಕಂಪ್ಯೂಟರ್ ಸುರಕ್ಷತೆಯ ಕೆಲವು ಸುಲಭ ರೀತಿಯ ಮಾರ್ಗಗಳೆಂದರೆ:
ಆಂಟಿವೈರಸ್ ಬಳಸುವುದು
ಕಂಪ್ಯೂಟರ್ ಕೊಂಡ ತಕ್ಷಣ ನಮ್ಮಲ್ಲಿರುವ ಹಳೆಯ ಫ್ಲಾಪಿ, ಯುಎಸ್‌ಬಿ ಅಥವಾ ಸಿಡಿ, ಇತ್ಯಾದಿಗಳನ್ನು ಬಳಸುವುದು ಸಾಮಾನ್ಯ. ನಿಮ್ಮ ಕಂಪ್ಯೂಟರಿನಲ್ಲಿರುವ ತಂತ್ರಾಂಶಗಳು ಮತ್ತು ಕಡತಗಳು ಸುರಕ್ಷಿತವಾಗಿವೆಯೇ? ಈಗ ನೀವು ಬಳಸಲು ಹೊರಟಿರುವ ಈ ಹೊರಗಿನ ಡಿಸ್ಕ್ ಗಳು ವೈರಸ್, ಮಾಲ್ವೇರ್, ಟ್ರೋಜೋನ್ ಹೀಗೆ ಹತ್ತು ಹಲವು ಭಯಾನಕ ಹೆಸರಿನ ಹಾನಿಕಾರಕ ದಾತುಗಳನ್ನು ತಮ್ಮಲ್ಲಿ ಹೊಂದಿಲ್ಲವೆನ್ನುವುದನ್ನು ಖಚಿತ ಪಡಿಸಿಕೊಳ್ಳಲು ನಿಮ್ಮ ಕಂಪ್ಯೂಟರಿನಲ್ಲಿ ವ್ಯವಸ್ಥೆ ಇದೆಯೇ? ಹಾಗೆಯೇ ನಿಮ್ಮ ಕಂಪ್ಯೂಟರ್ಗಳು ಅಂತರ್ಜಾಲ ಸಂಪರ್ಕ ಹೊಂದಿದಾಗ ನೀವು ಸಂರಕ್ಷಿಸಿರುವ ಮಾಹಿತಿಗಳು ಸುರಕ್ಷಿತವಾಗಿವೆಯೇ?
ಆಂಟಿವೈರಸ್ಗಳು ಈ ಸಂದರ್ಭದಲ್ಲಿ ಬಳಕೆಗೆ ಬರುತ್ತವೆ. ಆಂಟಿವೈರಸ್ ತಂತ್ರಾಂಶಗಳು ಕಂಪ್ಯೂಟೆರ್ ವೈರಸ್ಗಳು, ಮಾಲ್ವೇರ್, ವರ್ಮ್, ಇತ್ಯಾದಿ ಹಾನಿಕಾರಕ ದತ್ತಾಂಶಗಳನ್ನು ನಿಮ್ಮ ಕಂಪ್ಯೂಟರ್ಗಳಿಗೆ ವರ್ಗಾಯಿಸುವದನ್ನು ತಡೆಯುವಲ್ಲಿ ಸಹಾಯ ಮಾಡುತ್ತವೆ. ಈ ತಂತ್ರಾಂಶಗಳು ಯಾವುದೇ ಕಡತಗಳನ್ನು ನಿಮ್ಮ ಕಂಪ್ಯೂಟರ್ನಿಂದ ಬೇರೊಂದು ಕಂಪ್ಯೂಟರ್ಗೆ ಅಥವಾ ಬೇರೊಂದು ಕಂಪ್ಯೂಟರ್ನಿಂದ ನಿಮ್ಮ ಕಂಪ್ಯೂಟರ್ಗಳಿಗೆ ರವಾನಿಸುವಾಗ, ಹಾನಿಕಾರಕ ಅಂಶಗಳಿವೆಯೇ ಎಂದು ಶೋಧಿಸಿ ತದ ನಂತರ ಕಡತಗಳ ರವಾನೆಗೆ ಅನುಮತಿ ನೀಡುತ್ತದೆ. ಯಾವುದೇ ಅಕ್ರಮ ಪ್ರವೇಶ ದ್ವಾರಗಳನ್ನು ಮುಚ್ಚುತ್ತದೆ. ಅಂತೆಯೇ ಅಂತರ್ಜಾಲವನ್ನು ಸಂಪರ್ಕಿಸಿದಾಗ ನಿಮ್ಮ ಕಂಪ್ಯೂಟರ್ನಿಂದ ಮುಖ್ಯ ಮಾಹಿತಿಗಳ ಸೋರಿಕೆಯಾಗದಂತೆ ನೋಡಿಕೊಳ್ಳುತ್ತದೆ.
ಮಾರ್ಗದರ್ಶಿ ಸೂಚನೆಗಳು:
೧.ಪ್ರತಿಷ್ಠಿತ ಕಂಪೆನಿಯೊಂದರ ಆಂಟಿವೈರಸ್ ತಂತ್ರಾಂಶಗಳನ್ನು install ಮಾಡಿಕೊಳ್ಳಿ.

ಉದಾ: Kasperksy, Trend Micro, Symatec, Mcafee, AVG, ಮುಂತಾದವು
೨.ಎಲ್ಲಾ ಸಮಯದಲ್ಲೂ ಅದು ನಿಮ್ಮ ಕಂಪ್ಯೂಟರ್ನ್ನು ಗಮನಿಸುವಂತೆ configure ಮಾಡಿಕೊಳ್ಳಿ.
೩.ದಿನಂಪ್ರತಿ ಹೊಸ ಹೊಸ ವೈರಸ್ಗಳ ಇರುವಿಕೆಗಳನ್ನು ಗುರುತಿಸುವ ಧಾತುಗಳನ್ನು (Virus update)ಸ್ವಯಂಚಾಲಿತವಾಗಿ update ಆಗುವಂತೆ ನೋಡಿಕೊಳ್ಳಿ. ಪರವಾನಗಿಯಿರುವ ಆಂಟಿವೈರಸ್ ತಂತ್ರಾಂಶಗಳಲ್ಲಿ ಈ ರೀತಿಯ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು.
೪.ನೀವು ಬಳಸುವ ಪ್ರತಿಯೊಂದು ಡಿಸ್ಕ್, ಉ.ಎಸ್.ಬಿ ಡ್ರೈವ್ ಗಳನ್ನು, ಇನ್ನು ಮುಂತಾದುವುಗಳನ್ನು ಬಳಸುವ ಮೊದಲು ಆಂಟಿವೈರಸ್ ತಂತ್ರಾಂಶಗಳ ಸಹಾಯದಿಂದ ವೈರಸ್ ಇಲ್ಲದಿರುವಿಕೆಯನ್ನು ಖಾತ್ರಿ ಮಾಡಿಕೊಳ್ಳಿ.
೫.ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಿಮ್ಮ ಕಂಪ್ಯೂಟರ್ನ್ನು ಸಂಪೂರ್ಣವಾಗಿ scan ಆಗುವಂತೆ ಸಮಯ ನಿಗದಿಸಿಕೊಳ್ಳಿ. ಹಾಗು ಯಾವುದೇ ಹಾನಿಕಾರಕ ಕಡತಗಳು ದೊರೆತಾಗ ಅದರ ಸೋಂಕು ನಿವಾರಿಸಿಕೋಳ್ಳಿ. ಇಲ್ಲವಾದಲ್ಲಿ ಎಲ್ಲಾ ದೋಷಿತ ಕಡತಗಳನ್ನು ತೆಗೆದು ಹಾಕಿ.

ತಂತ್ರಾಂಶಗಳನ್ನು ಅಪ್ಡೇಟ್ ಮಾಡುವುದು
ಆಪರೇಟಿಂಗ್ ಸಿಸ್ಟೆಮ್ ಗಳು ಅಥವಾ ಅದರಲ್ಲಿ ಅನುಸ್ಥಾಪಿತವಾಗಿರುವ ವಿವಿಧ ತಂತ್ರಾಂಶಗಳಲ್ಲಿರುವ ಅನೇಕ ರೀತಿಯ ಲೋಪದೋಶಗಳಿಂದಾಗಿ attackerಗಳು ಬಳಕೆದಾರರ ಗಮನಕ್ಕೆ ಬಾರದಂತೆ ಅವರ ಕಂಪ್ಯೂಟರ್ ಗಳಿಗೆ ಅಕ್ರಮ ಪ್ರವೇಶ ಪಡೆಯುವ ಸಾಧ್ಯತೆಗಳಿವೆ. ಅಂತರ್ಜಾಲ ಸಂಪರ್ಕ ಹೊಂದಿದ ಕಂಪ್ಯೂಟರ್ ಗಳು ಈ ರೀತಿಯ ಆಕ್ರಮಣಕ್ಕೆ ಹೆಚ್ಚು ಪ್ರಕಟಿತವಾಗಿರುತ್ತವೆ. ಈ ಕಾರಣದಿಂದಾಗಿ ಆಪರೇಟಿಂಗ್ ಸಿಸ್ಟೆಮ್ ಗಳು ಹಾಗು ತಂತ್ರಾಂಶಗಳನ್ನು ಅಭಿವೃದ್ದಿಪಡಿಸುವವರು ನಿಗದಿತ ಸಮಯದಲ್ಲಿ ಅಥವಾ ವೈರಸ್, ವರ್ಮ್, ತಂತ್ರಾಂಶ ದೋಶಗಳು ಪ್ರಕಟಿತ ಸಮಯಗಳಲ್ಲಿ ಅಪ್ಡೇಟ್/ಪ್ಯಾಚ್(Patch)ಗಳನ್ನು ಹೊರಡಿಸುತ್ತಾರೆ. ಪ್ರತಿಷ್ಟಿತ ಕಂಪನಿಯವರಲ್ಲದೆ ಮುಕ್ತ ತಂತ್ರಾಂಶಗಳು ನಿಯಮಿತ ಅವಧಿಯಲ್ಲಿ ಪ್ಯಾಚ್ ಗಳನ್ನು ಹೊರಡಿಸುತ್ತಾರೆ.
ಅಪ್ಡೇಟ್/ಪ್ಯಾಚ್ ಗಳು ತಂತ್ರಾಂಶಗಲ್ಲಿರುವ ದೋಶಿತ ಪ್ರೊಗ್ರಾಮ್ ಗಳನ್ನು ಸರಿಪಡಿಸುವ ಚಿಕ್ಕ ಚಿಕ್ಕ ಕಡತಗಳು. ಈ ಪ್ಯಾಚ್ ಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ತಂತ್ರಾಂಶಗಳನ್ನು ಹಾನಿಗೊಳಗಾಗದಂತೆ ರಕ್ಷಿಸಬಹುದು. ಇವುಗಳಲ್ಲಿ ಬಹುಪಾಲು ಅಪ್ಡೇಟ್ ಗಳು ಬಳಕೆದಾರರ ಸಹಾಯವಿಲ್ಲದೆ install ಮಾಡಬಹುದು. ಕೆಲವೊಮ್ಮೆ ಇಡೀ ತಂತ್ರಾಂಶವನ್ನು ಮರು ಪ್ರಕಟಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ತಂತ್ರಾಂಶವನ್ನು ಮರುಸ್ಥಾಪಿಸಿವುದು ಒಳಿತು.
ಮಾರ್ಗದರ್ಶಿ ಸೂಚನೆಗಳು:
೧. ಆಪರೇಟಿಂಗ್ ಸಿಸ್ಟೆಮ್ ಗಳ ಅಪ್ಡೇಟ್ ಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿ install ಮಾಡಿಕೊಳ್ಳಿ.

ಉದಾ: Microsoft Windows ಹೊಂದಿದವರು ಪ್ರತಿ ತಿಂಗಳ ಎರಡನೆಯ ಬುಧವಾರದಂದು ಅಪ್ಡೇಟ್ ಮಾಡಿಕೊಳ್ಳಬಹುದು. ಏಕೆಂದರೆ Microsoft Windows ಕಂಪನಿಯು ಪ್ರತಿ ತಿಂಗಳ ಎರಡನೆಯ ಮಂಗಳವಾರದ (Patch Tuesday) ರಾತ್ರಿ ಅಪ್ಡೇಟ್ ಬಿಡುಗಡೆಮಾಡುತ್ತದೆ. ಈ ಅಪ್ಡೇಟ್ ಅನ್ನು ಸ್ವಯಂಚಾಲಿತ ಪ್ರೊಗ್ರಾಮ್ ಮುಖಾಂತರ ಅಪ್ಡೇಟ್ ಮಾಡಬಹುದು.

೨. ಕಂಪ್ಯೂಟರ್ ನಲ್ಲಿರುವ ತಂತ್ರಾಂಶಗಳನ್ನು ಗಮನಿಸಿ ಹಾಗು ತಿಂಗಳಿಗೊಮ್ಮೆ ಅಪ್ಡೇಟ್ ಗಳ ಲಭ್ಯತೆಯನ್ನು ಪರೀಕ್ಷಿಸಿ.
ಉದಾ: Adobe ಪಾಚ್ ಗಳು Microsoft Windows ಪಾಚ್ ಗಳ ಆಸು ಪಾಸಿನಲ್ಲಿ ತಮ್ಮ ಅಪ್ಡೇಟ್ ಗಳನ್ನು ಪ್ರಕಟಿಸುತ್ತವೆ.
Mozilla Firefox ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಾಪ್ ಅಪ್ ಮುಖಾಂತರ ಬಳಕೆದಾರರಿಗೆ ಎಚ್ಚರಿಸುತ್ತವೆ.

ಇ-ಮೈಲ್ ಬಳಕೆಯ ವೇಳೆ ಎಚ್ಚರ ವಹಿಸಿ
ಇ-ಮೈಲ್ ಬಳಕೆ ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಅದರಿಂದಾಗುವ ದುಷ್ಪರಿಣಾಮಗಳನ್ನು ದೂರಮಾಡಲು ಈ ಕೆಳಗೆ ನೀಡಿರುವ ಅಂಶಗಳ ಬಗ್ಗೆ ಗಮನಿಸಿ.
ಮಾರ್ಗದರ್ಶಿ ಸೂಚನೆಗಳು:
೧. ಇ-ಮೈಲ್ಸ್ ನಲ್ಲಿ ಬರುವ ಸಂದೇಶ ಹಾಗು ಚಿತ್ರಗಳ ಮುನ್ನೋಟವನ್ನು disable ಮಾಡಿ.

೨. ಇ-ಮೈಲ್ಸ್ ನಲ್ಲಿ ಬರುವ attachment ಗಳನ್ನು ಡೌನ್ಲೋಡ್ ಮಾಡುವ ಮೊದಲು ಆಂಟಿವೈರಸ್ ತಂತ್ರಾಂಶಗಳು ಸ್ವಯಂಚಾಲಿತವಾಗಿ ಸ್ಕಾನ್ ಮಾಡುವಂತೆ configure ಮಾಡಿಕೊಳ್ಳಿ.
೩. ನಿಮಗೆ ತಿಳಿಯದ ವ್ಯಕ್ತಿಗಳಿಂದ ಬರುವ ಸಂದೇಶಗಳನ್ನು ನೋಡುವ ಮೊದಲು ಅದರ ‘ವಿಷಯ’ ವನ್ನೊಮ್ಮೆ ಗಮನಿಸಿ. ನಿಮಗಲ್ಲದ ಸಂದೇಶವೆನೆಸುವ ಸಂದೇಶಗಳಲ್ಲಿ ಕೊಟ್ಟಿರುವ ಯಾವುದೇ ಕುತೂಹಲ ಕೆರಳಿಸುವ ಹೊಸ ಲಿಂಕ್ ಗಳನ್ನು ನೋಡಬೇಡಿ ಹಾಗು ರೆಪ್ಲೆ ಮಾಡಬೇಡಿ.
೪. ಇ-ಮೈಲ್ ಪಾಸ್ವರ್ಡ್ ಗಳನ್ನು ತಿಂಗಳಿಗೊಮ್ಮೆ ಬದಲಾಯಿಸಿ ಹಾಗು ಯಾರೊಂದಿಗು ಹಂಚಿಕೊಳ್ಳಬೇಡಿ. ಪಾಸ್ವರ್ಡ್ ಗಳನ್ನು ಬ್ರೌಸರ್ ಗಳಲ್ಲಿ ಸ್ಟೋರ್ ಮಾಡಬೇಡಿ. ಕ್ಲಿಷ್ಟಕರ ಪಾಸ್ವರ್ಡ್ ಬಳಸುವುದು ಉತ್ತಮ.
೫. ಯಾವುದೇ ಮುಖ್ಯ ಮಾಹಿತಿಗಳನ್ನು ಇತರರಿಗೆ ಕಳುಹಿಸುವಾಗ ಎಚ್ಚರ ವಹಿಸಿ. ಬ್ಯಾಂಕ್ account no. ಇತ್ಯಾದಿ ವೈಯುಕ್ತಿಕ ಮಾಹಿತಿಗಳನ್ನು ಪರಿಚಯವಲ್ಲದವರಿಗೆ ಅಥವಾ ಬ್ಯಾಂಕ್ ಕಚೇರಿಗಳಿಗೆ ಕಳುಹಿಸಬೇಡಿ.
೬. ಫಿಶಿಂಗ್ ಇ-ಮೈಲ್ಸ್ ಗಳ ಬಗ್ಗೆ ತಿಳಿದುಕೊಳ್ಳಿ.

ಬ್ಯಾಕ್‌ಅಪ್ ತೆಗೆದಿಡುವುದು.
ಕಂಪ್ಯೂಟರ್ ಗಳನ್ನು ವೈಯುಕ್ತಿಕ ಮಾಹಿತಿ/ದಾಖಲೆಗಳನ್ನು ಸಂರಕ್ಷಿಡುವ ಸಾಧನವಾಗಿಯೂ ಬಳಕೆಯಲ್ಲಿದೆ. ಈ ಸಂದರ್ಭಗಳಲ್ಲಿ ಸುರಕ್ಷೆಯ ಮಾರ್ಗಗವೆಂದರೆ ಬ್ಯಾಕ್‌ಅಪ್ ತೆಗೆದಿಡುವುದು,
ಮಾರ್ಗದರ್ಶಿ ಸೂಚನೆಗಳು:
೧. ಮುಖ್ಯ ಮಾಹಿತಿಗಳಿರುವ ಎಲ್ಲಾ ಕಡತಗಳು ಹಾಗು ಫೋಲ್ಡರ್ ಗಳನ್ನು ಪಾಸ್ವರ್ಡ್ ಕೊಟ್ಟು ನಿಗದಿತ ಸಮಯಕ್ಕೆ ಬ್ಯಾಕ್‌ಅಪ್ ತೆಗೆದುಕೊಳ್ಳಿ.

೨. ಬ್ಯಾಕ್‌ಅಪ್ ಡಿಸ್ಕ್ ಗಳನ್ನು ಎನ್ಕ್ರಿಪ್ಟ್ ಮಾಡಿಟ್ಟುಕೊಳ್ಳಿ. ಹೊಸ ಮಾಹಿತಿಗಳನ್ನು ಬ್ಯಾಕ್‌ಅಪ್ ಡಿಸ್ಕ್ ಗಳಿಗೆ ರವಾನಿಸುವ ಮೊದಲು ಸ್ಕಾನ್ ಮಾಡಿ.
೩. ಅಂತರ್ಜಾಲ ತಾಣಗಳಲ್ಲೂ ನಿಮ್ಮ ಮಾಹಿತಿಗಳನ್ನು ಸಂಗ್ರಹ ಮಾಡಬಹುದು. ಇಂತಹ ಸೇವೆಯಲ್ಲಿರುವ ಸಂಸ್ಥೆಗಳು ನಿಮ್ಮ ಮಾಹಿತಿಗಳನ್ನು ಸುರಕ್ಷಿಸುವ ಮಾರ್ಗಗಳನ್ನು ಪರೀಕ್ಷಿಸಿ ನಂತರ ಅಯ್ಕೆ ಮಾಡಿ.

***

ಇಷ್ಟೆಲಾ ಮಾಹಿತಿಗಳಿಗೂ ಅರಿವಿನ ಅಲೆಗಳಿಗೂ ಏನು ಸಂಬಂದವೆಂದು ಯೋಚಿಸುತ್ತಿರುವಿರಾ? ಈ ಎಲ್ಲಾ ವಿಚಾರಗಳೂ ಸಾಮಾನ್ಯ ಕಂಪ್ಯೂಟರ್ ಬಳಕೆದಾರನಿಗೆ ಬಹುಮುಖ್ಯವಾಗಿ ಬೇಕಾದವುಗಳು. ಜೊತೆಗೆ ಈ ಕೆಳಗಿನ ವಿಷಯಗಳನ್ನು ಗಮನಿಸಿ.
ಯುನಿಕ್ಸ್ , ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳು ಮತ್ತು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಸುರಕ್ಷತೆಯ ಹೊಸ ಸೂತ್ರವನ್ನು ಕಂಪ್ಯೂಟರ್ ಬಳಕೆದಾರನ ಮುಂದಿಟ್ಟಿವೆ. ಖಾಸಗಿ ಸಂಸ್ಥೆಗಳ ತಂತ್ರಾಂಶಗಳಿಂದ ಸಾಮಾನ್ಯನ ಖಾಸಗಿ ಗುಟ್ಟುಗಳು ಮತ್ತು ಮಾಹಿತಿಗಳು ಪರರ ಪಾಲಾಗುವುದನ್ನು ಅರಿತ ಕೆಲವು ನುರಿತ ಕಂಪ್ಯೂಟರ್ ತಂತ್ರಜ್ಞರು, ಹಾರ್ಡ್ವೇರ್ ಕೊಳ್ಳುವುದರ ಜೊತೆಗೆ ಅದನ್ನು ಬಳಸಲು ಬೇಕಿರುವ ಸಾಫ್ಟ್ವೇರ್ ಕೂಡ ಮುಕ್ತವಾಗಿ ಹಾಗೂ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಬಳಕೆದಾರನಿಗೆ ಕೊಡಬೇಕು ಎಂದು ಪ್ರಾರಂಭಿಸಿದ ಯೋಜನೆ, ಇಂದು ಕಂಪ್ಯೂಟರ್ ಅನ್ನು ಸುರಕ್ಷಿತವಾಗಿ ಬಳಕೆದಾರ ತನ್ನಿಚ್ಚೆ ಬಂದಂತೆ ಬಳಸಲು ಅನುವಾಗಿಸಿದೆ.
ಈ ಮೇಲೆ ನಮೂದಿಸಿದ ಆಪರೇಟಿಂಗ್ ಸಿಸ್ಟಮ್‌ಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಆವೃತ್ತಿಗಳಾಗಿದ್ದಲ್ಲಿ ಅವುಗಳಲ್ಲಿನ ಸುರಕ್ಷತಾ ಸೋಂಕುಗಳು ಕಂಡೊಡನೆಯೇ ಪ್ರಪಂಚದ ಇನ್ಯಾವುದೋ ಮೂಲೆಯಲ್ಲಿರುವ ತಂತ್ರಜ್ಞ ಅದಕ್ಕೆ ಮುಲಾಮನ್ನು ಕಂಡುಕೊಂಡು ಇತರರೊಡನೆ ಕ್ಷಣಾರ್ಧದಲ್ಲಿ ಹಂಚಿಕೊಳ್ಳಬಲ್ಲ. ಈ ರೀತಿಯ ತತ್ತಕ್ಷಣದ ಅಪ್ದೇಟ್‌ಗಳನ್ನು ಪಡೆಯುವ ಆಂಟಿ‌ವೈರಸ್ ತಂತ್ರಾಂಶಗಳೂ ಮುಕ್ತ ತಂತ್ರಾಂಶದ ಭಂಡಾರದಲ್ಲಿ ನಿಮಗೆ ದೊರೆಯುತ್ತವೆ. clamav, clamwin ಇವುಗಳನ್ನೊಮ್ಮೆ ಬಳಸಿನೋಡಿ.
ಪ್ರಪಂಚದಾದ್ಯಂತ ನೆಟ್ವರ್ಕ್‌ನ ಸುರಕ್ಷತೆಗೆ ದೊಡ್ಡ‌ದೊಡ್ಡ ಕಂಪೆನಿಗಳೂ ಕೂಡ ಮೊರೆ ಹೋಗುವುದು ಗ್ನು/ಲಿನಕ್ಸ್ ಆವೃತ್ತಿಗಳಿಗೆ. ಡೆಬಿಯನ್ ‌ಅದರಲ್ಲಿ ಎಲ್ಲರ ಅಚ್ಚು ಮೆಚ್ಚು. ಆಪರೇಟಿಂಗ್ ಸಿಸ್ಟಮ್ ನ್ಯೂನ್ಯತೆಗಳು ಅದರ ಅಭಿವೃದ್ದಿಯ ಹಂತದಲ್ಲಿಯೇ ಮಾಯಬೇಕು, ನೂರಾರೂ ಸಮಾನ ಮನಸ್ಕ ಮುಕ್ತ ತಂತ್ರಾಂಶ ಬಳಕೆದಾರರೂ ಹಾಗೂ ತಂತ್ರಜ್ಞರು ಯಾವುದೇ ಒಂದು ಖಾಸಗಿ ಕಂಪೆನಿಯ ತಂತ್ರಾಂಶಗಳಿಗೂ ಕಮ್ಮಿಯಿಲ್ಲ ಹಾಗೂ ನ್ಯೂನ್ಯತೆಗಳಿಂದ ಅದು ಮುಕ್ತ ಎಂದು ವರ್ಷಾನುಗಟ್ಟಲೆ ಕಾಲದಿಂದ ನಿರೂಪಿಸಿಕೊಂಡು ಬಂದಿರುವುದೇ ಇದಕ್ಕೆ ಕಾರಣ.
ಕೊನೆಯದೊಂದು ಕಿವಿ ಮಾತು:- ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದೀರಾದರೆ ನಿಮ್ಮ ತಂತ್ರಾಂಶ ಮುಕ್ತ ಮತ್ತು ಸ್ವತಂತ್ರ ಎಂಬುದನ್ನು ಧೃಡಪಡಿಸಿಕೊಳ್ಳಿ.
ಪವಿತ್ರ. ಹೆಚ್ ಸಾಪ್ಟ್ವೇರ್ ಪ್ರಪಂಚದ ಮಾಹಿತಿ ಸುರಕ್ಷೆಯ ಬಗ್ಗೆ ರಿಸರ್ಚ್ ಸ್ಪೆಷಲಿಸ್ಟ್ ಆಗಿರುವ ಪವಿತ್ರ, ಪರಿಸರ ಪ್ರೇಮಿ. ಇವರು ಮಂಡ್ಯ ಜಿಲ್ಲೆಯ, ಮಳವಳ್ಳಿ ಎಂಬ ಹಳ್ಳಿಯಿಂದ ಬಂದವರು, ಬಿ.ಇ. ಕಂಪ್ಯೂಟರ್ ಸೈನ್ಸ್ ಪದವೀಧರೆ ಹಾಗೂ ಬಿಟ್ಸ್ ಪಿಲಾನಿ ಎಂ.ಎಸ್. ಸ್ನಾತಕೋತ್ತರ ಪದವಿಧರೆ. ಜೊತೆಗೆ ವೈದ್ಯಕೀಯ ನ್ಯಾಯಶಾಸ್ತ್ರ (Forensic Science)ದಲ್ಲಿ ಬಳಸುವ ಬರವಣಿಗೆಯ ವಿಶ್ಲೇಷಣೆಯಲ್ಲಿಯೂ (Handwriting Analyst) ಇವರು ಪದವಿಯನ್ನು ಹೊಂದಿದ್ದಾರೆ. ಪ್ರಕೃತಿಯ ಸಹಜ ಸೌಂದರ್ಯವನ್ನು ಕ್ಯಾಮೆರಾದ ಕಣ್ಣಿನಿಂದ ಸೆರೆಹಿಡಿಯುತ್ತಿರುವ ಉದಯೋನ್ಮುಕ ಛಾಯಾಗ್ರಾಹಕಿ. ಕನ್ನಡ ಬ್ಲಾಗ್ ಲೋಕಕ್ಕೆ ಇಣುಕು ಹಾಕುತ್ತಾ, ಅಲ್ಲಲ್ಲಿ ಕಂಡು ಬರುವ ಪಕ್ಷಿ, ಹೂವು, ಸಸ್ಯಗಳ ಹೆಸರುಗಳನ್ನು ಇತರರಿಗೆ ತಿಳಿಸುತ್ತಾ, ಅನೇಕ ಕಡೆಗಳಲ್ಲಿ ಇಂಗ್ಲೀಷ್ ಹಾಗೂ ಕನ್ನಡ ಹೆಸರನ್ನೂ ಸೂಚಿಸುತ್ತ ತಮ್ಮ ಗೆಳೆಯರ ಬಳಗವನ್ನು ಚಕಿತಗೊಳಿಸುತ್ತಾರೆ.