ಪ್ರಕಟಿಸಿದ್ದು ದಿನಾಂಕ Aug 14, 2011 ವಿಭಾಗ 2011, ale | 0 ಪ್ರತಿಕ್ರಿಯೆಗಳು

ಅಂತರ್ಜಾಲ ಇಂದು ಸಂವಹನ-ಮಾಹಿತಿ-ಮನರಂಜನೆಗಷ್ಟೇ ಸೀಮಿತವಾಗದೆ ಕಾರ್ಯನಿರ್ವಹಣೆಗೂ ಬಳಕೆಯಾಗುತ್ತಿದೆ. ನೀವು ಬಳಸುವ ತಂತ್ರಾಂಶಗಳನ್ನು ಗಣಕದಲ್ಲಿ ಪ್ರತಿಷ್ಠಾಪಿಸುವ ಬದಲು ಅಂತರ್ಜಾಲದ ಮೂಲಕವೇ ನಿಮ್ಮ ಕೆಲಸಗಳನ್ನು ಮಾಡಿಕೊಡುವ ತಂತ್ರಾಂಶಗಳು ವೆಬ್ ಆಪ್(web app)ಗಳಾಗಿವೆ. ಇವುಗಳು ಸರ್ವರ್ ಗಳಲ್ಲೇ ಪ್ರತಿಷ್ಠಾಪಿಸಲ್ಪಟ್ಟು, ನಾವು ನಮ್ಮ ಬ್ರೌಸರ್‍ ಗಳ ಮೂಲಕ ನೀಡುವ ಸೂಚನೆಯನ್ನು ಆಧರಿಸಿ, ಸರ್ವರ್ ಗಳಲ್ಲೇ ಸಂಸ್ಕರಣೆ ನಡೆಸಿ ಅದರ ಫಲಿತಾಂಶವನ್ನು ನಿಮಗೆ ಮರಳಿಸುವ ಕೆಲಸವನ್ನು ಮಾಡುತ್ತವೆ. ಹೆಚ್ಚುತ್ತಿರುವ ಇಂಟರ್ನೆಟ್ ವೇಗ, ಕಡಿಮೆ ಸಂಸ್ಕರಣಾ ಸಾಮರ್ಥ್ಯವುಳ್ಳ ಮೊಬೈಲ್, ಟ್ಯಾಬ್ಲೆಟ್ ಗಳ ಮೂಲಕ ಅಂತರ್ಜಾಲ ಬಳಕೆ, ಬೆಳೆಯುತ್ತಿರುವ ತಂತ್ರಾಂಶಗಳ ಅಗತ್ಯತೆಗಳು ಇವುಗಳ ಬೇಡಿಕೆ ಹೆಚ್ಚುವಂತೆ ಮಾಡಿವೆ.

ತಂತ್ರಾಂಶಗಳನ್ನು ಗ್ರಾಹಕರು ಖರೀದಿಸಿ ಬಳಸುವ ಬದಲು ಅಂತರ್ಜಾಲದ ಮೂಲಕವೇ ಬಳಸಲು ಸಾಧ್ಯವಾಗುವ ಈ ಮಾದರಿಯನ್ನು ಸೇವಾ ತಂತ್ರಾಶ(Software as service – SaaS) ಎಂದು ಕರೆಯುತ್ತಾರೆ. ಮಾನವ ಸಂಪನ್ಮೂಲ ನಿರ್ವಹಣೆ, ಗ್ರಾಹಕ ಸಂಬಂಧ ನಿರ್ವಹಣೆ, ಶಾಲೆ, ಆಸ್ಪತ್ರೆಗಳ ನಿರ್ವಹಣೆ ಸೇರಿದಂತೆ ಹಲವಾರು ಕಾರ್ಯಗಳಿಗೆ ಸೇವಾ ತಂತ್ರಾಂಶಗಳು ಉಪಯುಕ್ತವಾಗಿವೆ. ನೀವೂ ಇಂತಹ ಯಾವುದೇ ಸೇವೆಯನ್ನು ನಿಮ್ಮ ಗ್ರಾಹಕರಿಗೆ ನೀಡಲು ಬಯಸುವುದಾದರೆ ಅದಕ್ಕೆ ಸಹಕಾರಿಯಾಗುವ ಸಾಕಷ್ಟು ತಂತ್ರಾಂಶಗಳು ಮುಕ್ತವಾಗಿ ಲಭ್ಯವಿವೆ. ಅವುಗಳನ್ನು ನಿಮ್ಮ ಸರ್ವರ್ ನಲ್ಲಿ ಪ್ರತಿಷ್ಠಾಪಿಸಿ ಬಳಸಬಹುದು.

ಇಂತಹ ಸಾಧ್ಯತೆಗಳ ಬಗ್ಗೆ ಆಸಕ್ತಿಯಿದ್ದರೆ ಸ್ವಲ್ಪ ಹುಡುಕಿ, ಬಹಳಷ್ಟು ಅವಕಾಶಗಳು ಕಾಣಸಿಗುತ್ತವೆ.

ನಾನಿಲ್ಲಿ ಹೇಳಹೊರಟಿರುವುದು ನಿಮ್ಮ ಜಾಲತಾಣವನ್ನು ನಿರ್ವಹಿಸಲು ನೆರವಾಗುವ ಮುಕ್ತ ವೆಬ್ ಆಪ್ ಗಳ ಬಗ್ಗೆ. ನಿಮ್ಮ ಖಾಸಗಿ ಜಾಲತಾಣವಾಗಿರಲಿ, ವ್ಯವಹಾರದ್ದಿರಲಿ, ಜಾಲ ಮಳಿಗೆಗಳಿರಲಿ, ಸಮುದಾಯ ತಾಣವಿರಲಿ, ಇವುಗಳನ್ನು ಅಭಿವೃದ್ಧಿ ಪಡಿಸಿ ನಿಮಗೆ ಅಗತ್ಯವಿರುವ ಗುಣ ಲಕ್ಷಣಗಳನ್ನು ವಿನ್ಯಾಸಗೊಳಿಸುವುದು ಬಹು ದೊಡ್ಡ ಕೆಲಸ. ಅದನ್ನು ಸರಳಗೊಳಿಸಲು ನಿಮಗೆ ಸಹಕಾರಿಯಾಗುವಂತಹ ಕೆಲವೊಂದು ಮುಕ್ತ ಮತ್ತು ಉಚಿತ ತಂತ್ರಾಂಶಗಳ ವಿವರ ಇಲ್ಲಿವೆ. ಇವನ್ನು ಬಳಸಿ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಜಾಲತಾಣಕ್ಕೆ ಬ್ಲಾಗ್ ಅಳವಡಿಸಬಹುದು, ಕೆಲವೇ ಗಂಟೆಗಳಲ್ಲಿ ಆನ್ ಲೈನ್ ಮಳಿಗೆ ತೆರೆಯಬಹುದು.

ಬ್ಲಾಗಿಂಗ್

ನೀವು ಉಚಿತವಾಗಿ ಬ್ಲಾಗ್ ತೆರೆಯಬಹುದಾದ ತಾಣಗಳಲ್ಲಿ ನಿಮ್ಮ ಬ್ಲಾಗ್ ಮಾಡಿರಬಹುದು. ನಿಮ್ಮ ತಾಣದಲ್ಲೇ ಅಂತಹ ಬ್ಲಾಗ್ ಅಳವಡಿಸಿಕೊಳ್ಳಬೇಕೆಂದು ನಿಮಗನಿಸಿದರೆ wordpress ಬಳಸಬಹುದು. ನಿಮ್ಮ ಬ್ಲಾಗಿಗೆ ಜತೆಯಾಗಬಲ್ಲ ಅನೇಕ ಪೂರಕ ತಂತ್ರಾಂಶಗಳು ಕೂಡ ಲಭ್ಯವಿವೆ. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಬಹುದು.

ಜಾಲ ಮಳಿಗೆ

Online shopಗಳಿಗಾಗಿ ಪ್ರೆಸ್ತಾ ಶಾಪ್ಝೆನ್ ಕಾರ್ಟ್ಓಎಸ್ ಇ-ಕಾಮರ್ಸ್ಗಳನ್ನು ಬಳಸಬಹುದು. ನೀವು ಪುಸ್ತಕ, ಟೀಶರ್ಟ್ ಸೇರಿದಂತೆ ಯಾವುದನ್ನೇ ಮಾರಾಟ ಮಾಡುವುದಾದರೂ ಸರಿ. ಒಮ್ಮೆ ಪ್ರಯತ್ನಿಸಿ ನೋಡಿ.

CMS

ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಗಳು ನಿಮ್ಮ ಮಾಹಿತಿ ಆಧರಿತ ತಾಣಗಳನ್ನು ನಿರ್ವಹಿಸಲು ಉಪಯುಕ್ತವಾಗಿರುವ ತಂತ್ರಾಂಶಗಳು. drupaljoomlaಬಹಳ ಬಳಕೆಯಲ್ಲಿರುವ ಮುಕ್ತ ಸಿಎಂಎಸ್ ಗಳು. ಇದೇ ರೀತಿಯ ಬಹಳಷ್ಟು ತಂತ್ರಾಂಶಗಳು ಲಭ್ಯವುದ್ದು, ನಿಮ್ಮ ಅಗತ್ಯಕ್ಕೆ ಸರಿಹೊಂದುವುದನ್ನು ಆರಿಸಿಕೊಳ್ಳಲು ಅವಕಾಶವಿದೆ. WordPress ಕೂಡ ಅನೇಕ ತಾಣಗಳಿಗೆ ಸಿಎಂಎಸ್ ಆಗಿ ಬಳಕೆಯಾಗುತ್ತಿದೆ.

ಚಿತ್ರಪುಟ

ನಿಮ್ಮ ಜಾಲತಾಣದಲ್ಲಿ ಚಿತ್ರಪುಟವೊಂದಿದ್ದರೆ ಅಥವಾ ಚಿತ್ರಗಳಿಗಾಗಿಯೇ ತಾಣವೊಂದನ್ನು ನೀವುಮಾಡುವುದಾದರೆ Gallery ಉಪಯುಕ್ತ. ಅನೇಕ ಚಿತ್ರಗಳನ್ನು ಒಂದೇ ಸಾರಿ ಅಪ್ಲೋಡ್ ಮಾಡಿ ಅವುಗಳಿಗೆ ವಿವರ ಸೇರಿಸುವುದು, ವಿಷಯಾನುಸಾರ ವಿಂಗಡಿಸುವುದು, ನೋಡುಗರ ಪ್ರತಿಕ್ರಿಯೆಗೆ ಅವಕಾಶ ನೀಡುವುದು, ಸ್ಲೈಡ್ ಶೋ ಇತ್ಯಾದಿಗಳು ಸಾಧ್ಯವಿದೆ.

ಚರ್ಚಾತಾಣಗಳು – Forums

ಸಾಮಾಜಿಕ ತಾಣಗಳಿಗೂ ಮೊದಲು ಜಾಲಿಗರನ್ನು ಬಹಳಷ್ಟು ಸೆಳೆದುಕೊಂಡಿದ್ದ ತಾಣಗಳು ಫೋರಂಗಳು. ಯಾವುದೇ ವಿಷಯಗಳ ಬಗ್ಗೆ ಫೋರಂಗಳನ್ನು ನೀವೂ ಆರಂಭಿಸಬಹುದು. Phpbb ಬಹಳಷ್ಟು ತಾಣಗಳಲ್ಲಿ ಬಳಕೆಯಾಗುತ್ತಿದೆ. ನೀವು ವರ್ಡ್-ಪ್ರೆಸ್ ಬಳಸುವುದಿದ್ದರೆ ಬಿಬಿಪ್ರೆಸ್ ಎಮ್ಬ ಪೂರಕ ತಂತ್ರಾಂಶ ಲಭ್ಯವಿದೆ. ದ್ರುಪಲ್, ಬಡ್ಡೀಪ್ರೆಸ್ ಗಳಲ್ಲೂ ಇದಕ್ಕೆ ಅವಕಾಶಗಳಿವೆ. ಇಂತಹುದೇ ಇನ್ನೊಂದು: ಮೈ ಬಿಬಿ

ಸಾಮಾಜಿಕ ಜಾಲತಾಣಗಳು

ಆರ್ಕುಟ್, ಫೇಸ್ ಬುಕ್, ಗೂಗಲ್ ಪ್ಲಸ್ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು(social networking sites) ನಡೆಸುವ ಆಸಕ್ತಿ ನಿಮಗಿದ್ದರೆ Elggಬಳಸಬಹುದು. ನಿಮ್ಮ ಸಂಸ್ಥೆ, ನಿಮ್ಮ ಆಸಕ್ತಿಯ ವಿಚಾರ, ನಿಮ್ಮ ಪ್ರದೇಶಗಳಿಗೆ ಸಂಬಂಧಿಸಿದ ಸಾಮಾಜಿಕ ತಾಣಗಳ ಮೂಲಕ ಪರಸ್ಪರ ಸಂವಹನ, ಸಂದೇಶಗಳ ರವಾನೆ, ಪ್ರೊಫೈಲ್ ರಚನೆ, ಮಹಿತಿ/ಚಿತ್ರಗಳ ವಿನಿಮಯ ಇತ್ಯಾದಿಗಳನ್ನು ನಡೆಸಬಹುದು. ವರ್ಡ್ ಪ್ರೆಸ್ ಗೆ buddypress ಎಂಬ ಪ್ಲಗ್-ಇನ್ ಬಳಸಿ ಸಾಮಾಜಿಕ ಪದರವನ್ನು ಸೇರಿಸಲೂ ಅವಕಾಶವಿದೆ.

Support Ticket

ನಿಮ್ಮ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿದಂತೆ ಬಳಕೆದಾರರ ದೂರು ಅಥವಾ ಸೇವಾ ವಿನಂತಿಗಳನ್ನು ದಾಖಲಿಸಿ, ಅವುಗಳ ಬಗ್ಗೆ ಗ್ರಾಹಕರೊಂದಿಗೆ ಸಮ್ವಹಿಸಲು ಆನ್ ಲೈನ್ ಟಿಕೆಟಿಂಗ್ ಬಳಸಲಾಗುತ್ತದೆ. ದೂರು ದಾಖಲಿಸಿದವರಿಗೆ ದೂರು ಸಂಖ್ಯೆಯನ್ನು ಈ ಮೂಲಕ ರವಾನಿಸಿ, ದೂರು ಸಂಖ್ಯೆಯ ಆಧಾರದ ಮೇಲೆ ಬೇಕಾದಾಗೆಲ್ಲ ಅವರ ದೂರಿನ ಸ್ಥಿತಿಯನ್ನು ತಿಳಿಸುವುದನ್ನು ಈ ತಂತ್ರಾಂಶ ಮಾಡುತ್ತದೆ. Osticket ಇದಕ್ಕಾಗಿಯೇ ಇರುವ ಮುಕ್ತ ತಂತ್ರಾಂಶ.

ಚಾಟ್

ನಿಮ್ಮ ತಾನಕ್ಕೆ ಭೇಟಿ ನೀಡುವ ಓದುಗರ/ಗ್ರಾಹಕರ ಜೊತೆ ಚಾಟಿಂಗ್ ನಡೆಸಲು ಉಪಯುಕ್ತವಾಗುವ ತಂತ್ರಾಂಶ miweb. ಪದೇ ಪದೇ ಬರುವ ಪ್ರಶ್ನೆಗಳಿಗೆ ಸಿದ್ಧ ಉತ್ತರಗಳನ್ನು ಇಟ್ಟುಕೊಳ್ಳುವುದು, ನೀವಿಲ್ಲದಿರುವಾಗ ನೀಡಬೇಕಾದ ಸಂದೇಶಗಳನ್ನು ನಮೂದಿಸುವುದು, ಒಂದೇ ಸಲಕ್ಕೆ ಹಲವು ಜನ ಚಾಟ್ ಮಾಡ ಬಯಸಿದರೆ ಸಾಲಿನಲ್ಲಿ ಕಾಯಿಸಿ ಒಬ್ಬೊಬ್ಬರನ್ನೇ ಆರಿಸುವುದು, ನಿಮ್ಮ ತಂಡದಲ್ಲಿ ಹಲವು ಜನರಿದ್ದರೆ ವಿಭಾಗಗಳಾಗಿ ವಿಂಗಡಿಸುವುದು ಇತ್ಯಾದಿ ಹಲವು ಅವಕಾಶಗಳು ಇದರಲ್ಲಿವೆ. ಇನ್ನೊಂದು ತಂತ್ರಾಂಶ ajax chat ಕೂಡಾ ಬಳಸಿ ನೋಡಬಹುದು.

ಅಧ್ಯಯನ

ಆನ್-ಲೈನ್ ಕಲಿಕೆಗಾಗಿ ಮೀಸಲಿರುವ ಒಂದು ತಂತ್ರಾಂಶ ಮೂಡಲ್. ಯಾವುದೇ ವಿಷಯಗಳ ಕಲಿಕಾ ಸಾಮಗ್ರಿಗಳನ್ನು ಇಂಟರ್ನೆಟ್ ಮೂಲಕ ನೀಡುವುದಿದ್ದರೆ ಇದನ್ನು ಬಳಸಬಹುದು. ಶಾಲೆ, ಕಾಲೇಜುಗಳಿಗೆ ತುಂಬ ಉಪಯುಕ್ತ.

ಸರ್ವೇ

ನಿಮ್ಮ ತಾಣದಲ್ಲಿ ವೀಕ್ಷಕರ ಅಭಿಪ್ರಾಯವನ್ನು ಕಲೆಹಾಕುವಂತಹ ಅವಕಾಶ ಬೇಕೆ? ಸರ್ವೇ ಹಾಗೂ ವೋಟಿಂಗ್ ನಡೆಸಲು ಲೈಮ್ ಸರ್ವೇ ಯನ್ನು ಬಳಸಬಹುದು. ಸಿಂಪಲ್ ಪೋಲ್ ಇನ್ನೊಂದು ಆಯ್ಕೆ.

***

ಪೂರಕಗಳು: ಇಲ್ಲಿರುವ ಬಹುತೇಕ ಮುಕ್ತ ತಂತ್ರಾಂಶಗಳು ಅವುಗಳ ಉಪಯೋಗದ ಪರಿಧಿಯನ್ನು ನಾವೇ ವಿಸ್ತರಿಸಲು ಅವಕಾಶ ನೀಡುತ್ತವೆ. ಅದಕ್ಕಾಗಿ ಬಳಸುವ ಪೂರಕ ತಂತ್ರಾಂಶಗಳನ್ನು ವಿವಿಧ ತಂತ್ರಾಂಶಗಳು Addons ಅಥವಾ plugins ಅಥವಾ modules ಎಂಬುದಾಗಿ ಕರೆಯುತ್ತಾರೆ. ಮೂಲ ತಂತ್ರಾಂಶವನ್ನು ಸೋರ್ಸ್ ಕೋಡ್ ಮೂಲಕ ಮಾರ್ಪಡಿಸದೇ ಅದರ ಕಾರ್ಯವ್ಯಾಪ್ತಿಯನ್ನು ಬದಲಿಸುವ ಆ ವಿಧಾನ ತಂತ್ರಾಶಗಳ ಹೆಸ ಆವ್ರುತ್ತಿಗೆ ಅಪ್ಗ್ರೇಡ್ ಮಾಡುವ ಕೆಲಸವನ್ನು ಸರಳ ಗೊಳಿಸುತ್ತದೆ. ಇಲ್ಲಿರುವ ಬಹುತೇಕ ತಂತ್ರಾಂಶಗಳಿಗೆ ಈ ರೀತಿಯ ಪೂರಕಗಳು ಅಗಾಧ ಸಂಖ್ಯೆಯಲ್ಲಿ ದೊರೆಯುತ್ತಿದ್ದು, ನೀವೂ ಕೂಡ ನಿಮ್ಮದೇ ಪೂರಕಗಳನ್ನು ಸೇರಿಸಿ ತಂತ್ರಾಂಶದ ಸಮುದಾಯವನ್ನು ಬೆಳೆಸಬುದು.

ವಿನ್ಯಾಸಗಳು: ಈ ತಂತ್ರಾಂಶಗಳು ಮೂಲತಃ ತಮ್ಮದೇ ಆದ ವಿನ್ಯಾಸ ಮತ್ತು ವರ್ಣ ಸಂಯೋಜನೆಗಳನ್ನು ಹೊಂದಿರುತ್ತವೆ. ನಿಮ್ಮ ಸಂಸ್ಥೆಯ ಬ್ರಾಂಡ್, ಮೂಲ ತಾಣದ ವಿನ್ಯಾಸ, ನಿಮ್ಮ ಆಸಕ್ತಿಗನುಗುಣವಾಗಿ ಇದನ್ನು ಬದಲಿಸಲು ಅವಕಾಶಗಳಿರುತ್ತವೆ. ಇದಕ್ಕಾಗಿ ಈ ತಂತ್ರಾಂಶಗಳು ಥೀಮ್/ಟೆಂಪ್ಲೇಟ್/ಸ್ಕಿನ್ ಬದಲಿಸಲು ವ್ಯವಸ್ಥೆ ಕಲ್ಪಿಸಿರುತ್ತವೆ. ಅಂತರ್ಜಾಲದಲ್ಲಿ ಲಭ್ಯವಿರುವ ವಿನ್ಯಾಸಗಳಲ್ಲಿ ನಿಮಗೆ ಸರಿಹೊಂದುವುದನ್ನು ನೀವು ಆರಿಸಿಕೊಳ್ಳಬಹುದು ಅಥವಾ ನಿಮ್ಮದೇ ಆದ ವಿನ್ಯಾಸಗಳನ್ನು ತಯಾರಿಸಬಹುದು.

 

ಹರ್ಷ ಪೆರ್ಲ ಕೇರಳದ ಕಾಸರಗೋಡಿನ ಪೇರಲದವನು. ಎಂ.ಎಸ್.ಸಿ ಎಲೆಕ್ಟ್ರಾನಿಕ್ಸ್ ಬಳಿಕ ಸೆಮಿಕಂಡಕ್ಟರ್ ಕಂಪೆನಿಯಲ್ಲಿ ಉದ್ಯೋಗ. ನಂತರ ಸಾಫ್ಟ್ವೇರ್ ಕಂಪೆನಿಯೊಂದರ ನಿರ್ದೆಶಕನಾಗಿದ್ದೇನೆ. ವರ್ಡ್‌ಪ್ರೆಸ್ ಮತ್ತು ಇತರ ಸಿ.ಎಮ್.ಎಸ್ ಗಳಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ಇಂಟರ್ನೆಟ್, ಮೀಡಿಯಾ ಆಸಕ್ತಿಯ ವಿಷಯಗಳು.